Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, March 25, 2011

Bhagavad Gita Kannada Ch-03 Shloka 06-07


ಕರ್ಮೇಂದ್ರಿಯಾಣಿ  ಸಂಯಮ್ಯ ಯ ಆಸ್ತೇ ಮನಸಾ ಚರನ್ ।
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥೬॥

ಕರ್ಮೇಂದ್ರಿಯಾಣಿ  ಸಂಯಮ್ಯ ಯಃ ಆಸ್ತೇ ಮನಸಾ ಚರನ್
ಇಂದ್ರಿಯ ಅರ್ಥಾನ್ ವಿಮೂಢ ಆತ್ಮಾ ಮಿಥ್ಯಾ ಆಚಾರಃ ಸಃ ಉಚ್ಯತೇ- ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಮನಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ  ಡಂಭಾಚಾರಿ ಎನಿಸುತ್ತಾನೆ.

ಈ ಶ್ಲೋಕದಲ್ಲಿ ಕೃಷ್ಣ ಒಂದು ಮುಖ್ಯವಾದ ವಿಚಾರವನ್ನು ಹೇಳಿದ್ದಾನೆ. ಸಾಮಾನ್ಯವಾಗಿ ಇಂದಿನ ಪ್ರಪಂಚದಲ್ಲಿ ಹೊರಗಿನ ವೇಷಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರುವುದನ್ನು ನಾವು ಕಾಣುತ್ತೇವೆ. ಮನಸ್ಸಿನಲ್ಲಿ ಎಲ್ಲಾ ಆಸೆ ಇಟ್ಟುಕೊಂಡು, ಯಾವುದೋ ಭಯದಿಂದ ಹೊರ ನೋಟಕ್ಕೆ ಸದಾಚಾರಸಂಪನ್ನರಂತೆ ಬದುಕುವವರಿದ್ದಾರೆ. ಕೃಷ್ಣ ಇದನ್ನು ಕಪಟ ಧಾರ್ಮಿಕತೆ ಎನ್ನುತ್ತಾನೆ. ನಾವು ಮೊದಲು ನಮ್ಮ ಆತ್ಮ ಸಾಕ್ಷಿಗೆ ವಂಚನೆ ಮಾಡದೆ ಬದುಕಬೇಕು. ಹೊರಗಿನ  ಆಚಾರಕ್ಕಿಂತ ಮೊದಲು ಒಳಗಿನ ಆಚಾರಶುದ್ಧಿ ಮುಖ್ಯ. ಇದಿಲ್ಲದಿದ್ದರೆ ಎಂದೂ ಉದ್ಧಾರವಿಲ್ಲ. ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಮನಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ  ಡಂಭಾಚಾರಿ ಎನಿಸುತ್ತಾನೆ ಎಂದಿದ್ದಾನೆ ಕೃಷ್ಣ.  

ಯಸ್ತ್ವಿಂದ್ರಿಯಾಣಿ   ಮನಸಾ ನಿಯಮ್ಯಾsರಭತೇsರ್ಜುನ ।
ಕರ್ಮೇಂದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇ ॥೭॥

ಯಃ ತು ಇಂದ್ರಿಯಾಣಿ  ಮನಸಾ ನಿಯಮ್ಯ ಆರಭತೇ ಅರ್ಜುನ
ಕರ್ಮ ಇಂದ್ರಿಯೈಃ ಕರ್ಮಯೋಗಮ್ ಅಸಕ್ತಃ ಸ ವಿಶಿಷ್ಯತೇ-ಓ ಅರ್ಜುನ, ಇಂದ್ರಿಯಗಳನ್ನು ಮನೋಬಲದಿಂದ ಗೆದ್ದು, ಫಲದ ನಂಟು ತೊರೆದು, ಇಂದ್ರಿಯಗಳ ಮೂಲಕ ಸಾಧನೆಯಲ್ಲಿ ತೊಡಗುವವನು ಮಿಗಿಲಾದವನು.

ಮನಸ್ಸು ಸ್ವಚ್ಛವಾಗಿದ್ದು, ಇಂದ್ರಿಯಗಳ ಮೇಲೆ ಮಾನಸಿಕ ಕಡಿವಾಣ ಗಟ್ಟಿಯಿದ್ದಾಗ- ಕರ್ಮೆಂದ್ರಿಯದಿಂದ ಮಾಡುವ ಸಾಧನೆ  ಕರ್ಮಯೋಗವಾಗುತ್ತದೆ. ಇದು ಶುದ್ಧ ಅಧ್ಯಾತ್ಮ ಸಾಧನೆ. ಈ ಸ್ಥಿತಿಯಲ್ಲಿ ಇಂದ್ರಿಯಗಳು ದಾರಿ ತಪ್ಪುವುದಿಲ್ಲ. ತನ್ನ ಜೀವ ಸ್ವರೂಪದ ಸ್ವಭಾವಕ್ಕನುಗುಣವಾಗಿ ಚತ್ತ ಶುದ್ಧಿಯಿಂದ ಮಾಡುವ ಕರ್ಮ ನಿಜವಾದ ಅಧ್ಯಾತ್ಮ ಸಾಧನೆ. ಈ ರೀತಿಯ ಸಾಧನೆಯಲ್ಲಿ ತೊಡಗುವವನು ಶ್ರೇಷ್ಠನೆನಿಸುತ್ತಾನೆ. ಇಂತವರು ಒಳಗೊಂದು-ಹೊರಗೊಂದು ಆಗಿರದೆ, ಮನೋಬಲದಿಂದ ಇಂದ್ರಿಯಗಳನ್ನು ಗೆದ್ದು, ಫಲದ ನಂಟನ್ನು ತೊರೆದು, ಎತ್ತರಕ್ಕೇರುತ್ತಾರೆ.

Tuesday, March 22, 2011

Bhagavad Gita Kannada Chapter-03_Shloka_3-5


ಭಗವಾನುವಾಚ ।
ಲೋಕೇsಸ್ಮಿನ್  ದ್ವಿವಿದಾ ನಿಷ್ಠಾ ಪುರಾ ಪ್ರೋಕ್ತಾ ಮಯಾsನಘ          
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್         ॥೩॥

ಭಗವಾನುವಾಚ-ಭಗವಂತ ನುಡಿದನು:
ಲೋಕೇ ಅಸ್ಮಿನ್  ದ್ವಿ ವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾ ಅನಘ
ಜ್ಞಾನಯೋಗೇನ ಸಾಂಖ್ಯಾನಾಮ್   ಕರ್ಮಯೋಗೇನ ಯೋಗಿನಾಮ್--ಓ ಪಾಪದೂರನೆ, ಈ ಲೋಕದಲ್ಲಿ ಎರಡು ಬಗೆಯ ಇರವನ್ನು (ಮುಕ್ತಿಯನ್ನು) ನಾನು ಹಿಂದೆ ಹೇಳಿರುವೆ: ಜ್ಞಾನಮಾರ್ಗಿಗಳಿಗೆ ಜ್ಞಾನ ಪ್ರಧಾನವಾದ ಸಾಧನೆಯಿಂದ; ಕರ್ಮಮಾರ್ಗಿಗಳಿಗೆ ಕರ್ಮಪ್ರಧಾನವಾದ ಸಾಧನೆಯಿಂದ.

ಈ ಹಿಂದೆ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಹೇಳಿದ್ದ ಕೃಷ್ಣ,  ಯಾವ ನೆಲೆಯಲ್ಲಿ ಯಾವ  ಸ್ತರದಲ್ಲಿ ಯಾವುದು ಮುಖ್ಯ ಎನ್ನುವ ವಿಚಾರವನ್ನು ಇಲ್ಲಿ ವಿವರಿಸುತ್ತಾನೆ. ಕರ್ಮಯೋಗದ ಬಗ್ಗೆ ವಿಶೇಷ ವಿವರಣೆ ಇಲ್ಲಿಂದ ಆರಂಭವಾಗುತ್ತದೆ.
ಈ ಶ್ಲೋಕದಲ್ಲಿ 'ನಿಷ್ಠಾ' ಎನ್ನುವ ಪದ ಬಳಕೆಯಾಗಿದೆ. ಇಲ್ಲಿ 'ನಿಷ್ಠಾ' ಎಂದರೆ ಜೀವನದ ನಡೆ ಅಥವಾ ಕೊನೇಯ ಸ್ಥಿತಿ-ಅದೇ 'ಮೋಕ್ಷ'. ಕೃಷ್ಣ ಹೇಳುತ್ತಾನೆ: “ಸಾಧಕರಲ್ಲಿ ಎರಡು ವಿಧ -ಸಾಂಖ್ಯರು ಮತ್ತು ಯೋಗಿಗಳು" ಎಂದು. ಇಲ್ಲಿ ಸಾಂಖ್ಯರು ಎಂದರೆ ಜ್ಞಾನಮಾರ್ಗದಲ್ಲಿ ಸಾಧನೆ ಮಾಡುವವರು. ಯೋಗಿಗಳು ಎಂದರೆ ಕರ್ಮಸಾಧನೆಯ ಮೂಲಕ ಸಾಧನೆ ಮಾಡುವವರು.
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ: “ಜ್ಞಾನದ ಸಾಧಕರು ಜ್ಞಾನ ಮಾರ್ಗದಲ್ಲಿ ಹೋಗಬೇಕು, ಕರ್ಮದ ಮೂಲಕ ಸಾಧನೆ ಮಾಡುವವರು  ಕರ್ಮದ ದಾರಿಯಲ್ಲಿ ಹೋಗಬೇಕು” ಎಂದು ಹೇಳಿದಂತೆ ಕಾಣಿಸುತ್ತದೆ. ಇಲ್ಲಿ ಅರ್ಜುನ ಕರ್ಮದ ಮೂಲಕ ಸಾಧನೆ ಮಾಡಬೇಕಾದವ, ಆದ್ದರಿಂದ ಕೃಷ್ಣ ಆತನಲ್ಲಿ ಯುದ್ಧ ಮಾಡು ಎಂದು ಹೇಳಿದ ಎನ್ನುವಂತೆ ಕಾಣುತ್ತದೆ. ಆದರೆ ಅದು ನಿಜವಾದ ಅರ್ಥವಲ್ಲ. ನಿಮಗೆ ತಿಳಿದಂತೆ ಅರ್ಜುನ ಆ ಕಾಲದ ಮಹಾ ಜ್ಞಾನಿಗಳಲ್ಲಿ ಒಬ್ಬ. ಹಾಗಿರುವಾಗ ನಾವು ಈ ರೀತಿ ಮೇಲ್ನೋಟದ ಅರ್ಥವನ್ನು ಈ ಶ್ಲೋಕಕ್ಕೆ ಅರ್ಥೈಸಬಾರದು. ಇಲ್ಲಿ ಆಳವಾದ ಚಿಂತನೆ ಅಗತ್ಯ.
ಶಾಸ್ತ್ರಗಳಲ್ಲಿ ಹೇಳುವಂತೆ ಜ್ಞಾನದಿಂದ ಮಾತ್ರ ಮೋಕ್ಷಕ್ಕೆ ಹೋಗಲು ಸಾಧ್ಯ. ಮೋಕ್ಷಕ್ಕೆ ಬೇರೆ ಮಾರ್ಗವೇ ಇಲ್ಲ.  ಅಂದಮೇಲೆ ಮೋಕ್ಷ ಸಾಧನೆಗೆ ಜ್ಞಾನ ಬೇಕೇಬೇಕು. ಕರ್ಮವಿರುವುದು ಜ್ಞಾನಕ್ಕಾಗಿ. ಜ್ಞಾನಕ್ಕೆ ಪೂರಕವಲ್ಲದ ಕರ್ಮ ಕರ್ಮವಲ್ಲ. ಬೆಳಗಿನಿಂದ ಸಂಜೆಯ ತನಕ ಜಪ ಮಣಿ ಹಿಡಿದು ಮಡಿ-ಮಡಿ ಎಂದು ಕುಳಿತರೆ ಅದು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಾರದು. ನಾವು ಏನೇ ಕರ್ಮ ಮಾಡುವುದಿದ್ದರೂ ಅದನ್ನು ತಿಳಿದು ಮಾಡಬೇಕು. ಮಾಡುವ ಕರ್ಮ ಜ್ಞಾನಕ್ಕೆ ಪೂರಕವಾಗಿರಬೇಕು. ಆದ್ದರಿಂದ ಬರೀ ಜ್ಞಾನಯೋಗವೆಂದಾಗಲಿ, ಬರೀ ಕರ್ಮಯೋಗವೆಂದಾಗಲಿ ಇಲ್ಲ. ಕರ್ಮವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದೆ ಕರ್ಮವಿಲ್ಲ. ಛಾ೦ಧೋಕ್ಯ  ಉಪನಿಷತ್ತಿನಲ್ಲಿ  ಹೇಳುವಂತೆ: "ಯದೇವ ವಿದ್ಯಯಾ ಕರೋತಿ ಶ್ರದ್ಧೆಯ ಉಪನಿಷದಾ, ತದೇವ ವೀರ್ಯವತ್ತರ೦ ಭವತಿ , ವಿಜ್ಞಾನ೦ ಯಜ್ಞಾ೦ ತನುತೇ". ಅಂದರೆ “ನೀನು ಏನನ್ನೂ ಮಾಡಿದರೂ ತಿಳಿದು ಮಾಡು. ಜ್ಞಾನ ಪೂರ್ವಕವಾಗಿ ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ”. ಮಾಡುವ ಕರ್ಮವನ್ನು ಏತಕ್ಕಾಗಿ ಮಾಡುತ್ತಿದ್ದೇವೆ, ಮಾಡುವುದರ ಫಲವೇನು, ಮಾಡುವುದು ಹೇಗೆ-ಎನ್ನುವುದು ಗೊತ್ತಿರಬೇಕು. ಅಜ್ಞಾನದಿಂದ ಮಾಡುವ ಕರ್ಮ ವ್ಯರ್ಥವಾಗುತ್ತದೆ.  ಇಲ್ಲಿ ಕೃಷ್ಣ ಹೇಳಿರುವುದು ಒಂದು ಕರ್ಮಪ್ರದವಾದ ಮಾರ್ಗ(ಜನಕಾದಿಗಳಂತೆ) ಹಾಗು ಇನ್ನೊಂದು  ಜ್ಞಾನಪ್ರದವಾದ ಮಾರ್ಗ(ಸನಕಾದಿಗಳಂತೆ).

ನ ಕರ್ಮಣಾಮನಾರಂಭಾನ್ನೈಷ್ಕರ್ಮ್ಯಂ ಪುರುಷೋsಶ್ನುತೇ ।
ನಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ  ॥೪॥

ನ ಕರ್ಮಣಾಮ್ ಅನಾರಂಭಾತ್  ನೈಷ್ಕರ್ಮ್ಯಂ ಪುರುಷಃ ಅಶ್ನುತೇ
ನ ಚ ಸಂನ್ಯಸನಾತ್  ಏವ ಸಿದ್ಧಿಮ್  ಸಮಧಿಗಚ್ಛತಿ--ಕರ್ಮಗಳಲ್ಲಿ ತೊಡಗದೆ ಇರುವುದರಿಂದ ಸಾಧಕ ಕರ್ಮಗಳಿಂದ ಬಿಡುಗಡೆ ಹೊಂದುವುದಿಲ್ಲ. ಕರ್ಮ ಫಲವನ್ನು ತೊರೆದ ಮಾತ್ರಕ್ಕೆ ಸಿದ್ಧಿ ಪಡೆಯುವುದಿಲ್ಲ.

ಶಾಸ್ತ್ರಗಳಲ್ಲಿ  ಹೇಳುವಂತೆ 'ಕರ್ಮ ಬಂಧನದ ದಾರಿ ಹಾಗು ಜ್ಞಾನ ಬಿಡುಗಡೆಯ ದಾರಿ'. ಆದರೆ ಕೃಷ್ಣ ಹೇಳಿದ -ಮೋಕ್ಷಕ್ಕೆ ಜ್ಞಾನಪ್ರದವಾದ ಮತ್ತು ಕರ್ಮಪ್ರದವಾದ ಎರಡು ಮಾರ್ಗಗಳಿವೆ ಎಂದು. ಇಲ್ಲಿ ಅದರ ವಿವರಣೆ ಕೊಡುತ್ತಾನೆ ಕೃಷ್ಣ. “ಮೋಕ್ಷ ನಿಷ್ಕರ್ಮದಿಂದ ಪಡೆಯುವಂತದ್ದು-ಕರ್ಮ ಬಂಧಕ” ಅನ್ನುವುದಾದರೆ, ಒಂದು ಶರೀರದಲ್ಲಿ ಜೀವ ಏನೂ ಕರ್ಮ ಮಾಡದೆ ಇರಲು ಸಾಧ್ಯವೇ ಇಲ್ಲ. ದೇಹ ಬಂದ ಮೇಲೆ ಕರ್ಮ ಕ್ರಿಯೆ ನಡೆದೇ ನಡೆಯುತ್ತದೆ. ಕರ್ಮ ಮಾಡುವುದನ್ನು ಬಿಟ್ಟ ತಕ್ಷಣ ಮೋಕ್ಷ ದೊರೆಯದು. ಮೂಲತಃ ಕರ್ಮವನ್ನು ತೊರೆಯುವುದೂ ಸಾಧ್ಯವಿಲ್ಲ. ಜ್ಞಾನಕ್ಕೆ ಪೂರಕವಲ್ಲದ ಯಾಂತ್ರಿಕ ಕರ್ಮ ಬಂಧಕ.  ಜ್ಞಾನಕ್ಕೆ ಪೂರಕವಾದ ಕರ್ಮ ಎಂದೂ ಬಂಧಕವಲ್ಲ. ಕರ್ಮದ ಫಲವನ್ನು ಬಯಸದೇ ಇದ್ದ ತಕ್ಷಣ ಯಾವ ಸಿದ್ಧಿಯೂ  ಆಗದು. ಕೇವಲ ಕರ್ಮತ್ಯಾಗ ಮಾಡುವುದರಿಂದ ಎಂದೂ ಸಿದ್ಧಿ ಪಡೆಯಲು ಸಾಧ್ಯವಿಲ್ಲ.

ನಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ    ॥೫॥

ನ ಹಿ ಕಶ್ಚಿತ್ ಕ್ಷಣಮ್ ಅಪಿ ಜಾತು ತಿಷ್ಠತಿ ಅಕರ್ಮ ಕೃತ್
ಕಾರ್ಯತೇ ಹಿ ಅವಶಃ ಕರ್ಮ ಸರ್ವಃ ಪ್ರಕೃತಿಜೈಃ ಗುಣೈಃ--ಯಾವನೂ ಒಂದು ಕ್ಷಣ ಕೂಡಾ ಏನೂ ಮಾಡದೆ ತೆಪ್ಪಗಿರುವುದು ಸಾಧ್ಯವಿಲ್ಲ. ಪ್ರತಿಯೊಬ್ಬನೂ ಪ್ರಕೃತಿಯ ಗುಣಗಳಿಂದ ಅರಿವಿಲ್ಲದೆಯೇ (ಭಗವಂತನ ಅಧೀನವಾಗಿ) ಕರ್ಮ ಮಾಡುತ್ತಾನೆ.

ಕರ್ಮತ್ಯಾಗದಿಂದ ಸಿದ್ಧಿ ಸಿಗದು. ಅಷ್ಟೇ ಅಲ್ಲ, ಕರ್ಮ ತ್ಯಾಗ ಮಾಡುವುದು ಸಾಧ್ಯವಿಲ್ಲ!  ನಮ್ಮ ಅನ್ನಮಯ ಮತ್ತು ಪ್ರಾಣಮಯ ಕೋಶ ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತವೆ. ಬದುಕಿರುವಾಗ ನಿಷ್ಕ್ರೀಯರಾಗಿರುವುದು ಅಸಾಧ್ಯ. ಯಾವ ಕಾಲದಲ್ಲೂ ಕೂಡಾ ಒಂದು ಕ್ಷಣ ನಿಷ್ಕ್ರೀಯನಾಗಿ ಇರುವುದು ಸಾಧ್ಯವಿಲ್ಲ. "ಕಾರ್ಯತೇ ಹಿ ಅವಶಃ"-ದೇಹದ ಒಳಗಿರುವ ಜೀವ ದೇಹದ ಮೂಲಕ ಮನಸ್ಸಿನ ಮೂಲಕ, ಮಾತಿನ ಮೂಲಕ-ಕೆಲಸ ಮಾಡಿಸಲ್ಪಡುತ್ತದೆ. ಅದು ನಮ್ಮ ಸ್ವಾಧೀನದಲ್ಲಿರುವುದಿಲ್ಲ, ಅದು ಭಗವಂತನ ವಶ.
ಇಡೀ ವಿಶ್ವವೇ ಪ್ರಕೃತಿಯಿಂದ ಸೃಷ್ಠಿಯಾಗಿದೆ. ಅದರ ಮೂಲ ದ್ರವ್ಯ ಸತ್ವ-ರಜಸ್ಸು-ತಮಸ್ಸು. ಜೀವಕ್ಕೆ ಅದರದ್ದೇ ಆದ ಸ್ವಭಾವವಿರುತ್ತದೆ, ಅದಕ್ಕನುಗುಣವಾಗಿ ಪ್ರಕೃತಿಯ ಈ ತ್ರಿಗುಣಗಳ ಪ್ರಭಾವ ನಮ್ಮ ಮೇಲಾಗುತ್ತಿರುತ್ತದೆ. ಆದ್ದರಿಂದ  ನಿಷ್ಕ್ರೀಯತೆ ಎನ್ನುವುದು ಅರ್ಥ ಶೂನ್ಯ. ನಾವು ಜೀವನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕರ್ತವ್ಯ ಶೀಲರಾಗಬೇಕು. ಅದರೊಂದಿಗೆ ಮಾನಸಿಕವಾಗಿ ಐಹಿಕ ಪ್ರಪಂಚದಿಂದ ಆಚೆಗಿನ ಸತ್ಯದ ಕಡೆ ನಮ್ಮ ಮನಸ್ಸು ಜಾಗೃತವಾಗಿರಬೇಕು. ಈ ಎಚ್ಚರದಿಂದ ಎಲ್ಲಾ ಕರ್ತವ್ಯ ಕರ್ಮಗಳನ್ನು ಮಾಡಬೇಕು. ನಿಷ್ಕ್ರೀಯತೆ  ವೇದಾಂತವಲ್ಲ-ಕರ್ತವ್ಯಚ್ಯುತಿ ಅಧ್ಯಾತ್ಮವಲ್ಲ. ಭಗವಂತನ ಪ್ರಜ್ಞೆಯೊಂದಿಗೆ ನಿನ್ನ ಪಾಲಿನ ಕರ್ಮ ನೀನು ಮಾಡು. ಹೀಗೆ ಮಾಡಿದಾಗ ಕರ್ಮ ಮತ್ತು ಜ್ಞಾನ ಮಾರ್ಗಗಳು ಒಂದಕ್ಕೊಂದು ಪೂರಕವಾಗುತ್ತವೆ.

Sunday, March 20, 2011

Bhagavad Gita Kannada Chapter-03_Shloka_1-2

ಅಧ್ಯಾಯ ಮೂರು

ಎರಡನೆ ಅಧ್ಯಾಯದಲ್ಲಿ ಭಗವಂತನ ಅರಿವು, ಆ ಅರಿವನ್ನು ಪಡೆಯುವ ಉಪಾಯವನ್ನು ಕೃಷ್ಣ ವಿವರಿಸಿದ.  ಈ ಉಪದೇಶದಲ್ಲಿ ಒಂದು ಕಡೆ ಜ್ಞಾನ ಎಲ್ಲವುದಕ್ಕಿಂತ ಶ್ರೇಷ್ಠ, ಜ್ಞಾನದ ಮುಂದೆ ಕರ್ಮ ಏನೂ ಅಲ್ಲ ಎನ್ನುತ್ತಾನೆ ಕೃಷ್ಣ. ಇನ್ನೊಂದು ಕಡೆ ಅರ್ಜುನನಲ್ಲಿ ತಾಮಸಿಕವಾದ ಯುದ್ಧವನ್ನು ಮಾಡು ಎನ್ನುತ್ತಾನೆ! ಜ್ಞಾನವೇ ಅತ್ಯಂತ ಶ್ರೇಷ್ಟವಾದರೆ ಏಕೆ ಬೇಕು ಈ ತಾಮಸಿಕವಾದ ರಾಗ-ದ್ವೇಷವಿರುವ  ಯುದ್ಧ? ಮೂರನೇ ಅಧ್ಯಾಯ ಅರ್ಜುನನ ಈ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ.
ಅರ್ಜುನ ಉವಾಚ ।
ಜ್ಯಾಯಸೀ  ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ  
ತತ್  ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ           ॥೧॥

ಅರ್ಜುನ ಉವಾಚ- ಅರ್ಜುನ ಹೇಳಿದನು:
ಜ್ಯಾಯಸೀ  ಚೇತ್ ಕರ್ಮಣಃ ತೇ  ಮತಾ ಬುದ್ಧಿಃ ಜನಾರ್ದನ
ತತ್  ಕಿಂ ಕರ್ಮಣಿ ಘೋರೇ ಮಾಮ್  ನಿಯೋಜಯಸಿ ಕೇಶವ - ಓ ಜನಾರ್ದನ, ಕಾಯಕಕ್ಕಿಂತ ಅರಿವೇ ಹಿರಿದು ಎಂದು ನಿನ್ನ ಆಶಯವಾದರೆ, ಮತ್ತೇಕೆ ನನ್ನನ್ನು ಈ ಕೊಲ್ಲುವ ಕಾಯಕದಲ್ಲಿ ತೊಡಗಿಸುತ್ತಿರುವೆ ಕೇಶವ?

ಕೃಷ್ಣ ಜ್ಞಾನ ಮತ್ತು ಕರ್ಮದ ಬಗ್ಗೆ ಕೊಟ್ಟ ವಿವರಣೆಯಿಂದ ಅರ್ಜುನನಿಗೆ ಗೊಂದಲವಾಗುತ್ತದೆ.  ತನಗೆ ಯಾವ ಮಾರ್ಗ ಉಚಿತ ಎನ್ನುವ ಪ್ರಶ್ನೆ ಆತನನ್ನು ಕಾಡುತ್ತದೆ.  ಕೃಷ್ಣ ಒಮ್ಮೆ ಜ್ಞಾನ ಮಾರ್ಗದಲ್ಲಿ ಸಾಗು-ಅದು ಶ್ರೇಷ್ಠ ಎನ್ನುತ್ತಾನೆ, ಇನ್ನೊಮ್ಮೆ  ಯುದ್ಧ ಮಾಡು ಅನ್ನುತ್ತಾನೆ! ತಾನೇಕೆ ಶ್ರೇಷ್ಠವಾದ ಜ್ಞಾನ ಮಾರ್ಗದಲ್ಲಿ ಸಾಗಬಾರದು, ಯುದ್ಧವನ್ನೇಕೆ ಮಾಡಬೇಕು ಎನ್ನುವ ಗೊಂದಲ ಅರ್ಜುನನದು. ಈ ಗೊಂದಲದಲ್ಲಿ  ಅರ್ಜುನ  ಕೃಷ್ಣನಲ್ಲಿ ಕೇಳುತ್ತಾನೆ: ಓ ಜನಾರ್ದನ, ಕರ್ಮಕ್ಕಿಂತ ಜ್ಞಾನ ಮಾರ್ಗ ಶ್ರೇಷ್ಠ ಎನ್ನುವುದು ನಿನ್ನ ಅಭಿಮತವಾದರೆ, ನನ್ನ ಹತ್ತಿರ ಕರ್ಮ ಮಾಡು ಎಂದು ಏಕೆ ಹೇಳುತ್ತಿದ್ದೀಯ? ಯುದ್ಧ ಎನ್ನುವುದು ಘೋರ ರಾಗ-ದ್ವೇಷಗಳಿಂದ ತುಂಬಿದ ತಾಮಸಕಾರ್ಯ. ಅದು ಅಧ್ಯಾತ್ಮ ಸಾಧನೆಗೆ ತೀರ ವಿರುದ್ಧವಾದ ಕರ್ಮ. ಹೀಗಿರುವಾಗ ನನ್ನನ್ನೇಕೆ  ಈ ಕಾರ್ಯದಲ್ಲಿ ತೊಡಗಿಸುತ್ತಿರುವೆ ಕೇಶವ? ಎಂದು.
ಈ ಶ್ಲೋಕದಲ್ಲಿ ‘ಜನಾರ್ದನ’ ಮತ್ತು ‘ಕೇಶವ’ ಎನ್ನುವ ಎರಡು ನಾಮ ವಿಶೇಷಣವನ್ನು ಬಳಸಿದ್ದಾರೆ. ಈ ವಿಶೇಷಣದಲ್ಲಿ-ಪ್ರಶ್ನೆ ಮಾಡುತ್ತಿರುವ ಅರ್ಜುನನ ಭಾವ ಅಡಗಿದೆ.  ಜನ+ಅರ್ಧನ ಅಂದರೆ ಜನರನ್ನು ನಾಶ ಮಾಡುವವ!  ಇಲ್ಲಿ ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ. “ದುಷ್ಟ ನಿಗ್ರಹಕ್ಕಾಗಿ ಅವತರಿಸಿದ ನೀನು, ನನ್ನಿಂದ ಈ ಕಾರ್ಯವನ್ನು ಮಾಡಿಸುತ್ತಿದ್ದೀಯ. ಆದರೆ ಇಲ್ಲಿ ಸೇರಿರುವರೆಲ್ಲ ದುರ್ಜನರಲ್ಲ. ಹೀಗಿರುವಾಗ ಅವರನ್ನು ಕೊಲ್ಲುವ ಕರ್ಮ ಶ್ರೇಷ್ಠ ಹೇಗಾದೀತು? ಜನನ ಮುಕ್ತಗೊಳಿಸಿ ಮೋಕ್ಷವನ್ನು ಕರುಣಿಸುವ ನೀನು, ನನ್ನಿಂದ ಗುರು ಹಿರಿಯರನ್ನು ಕೊಲ್ಲುವ ಈ ಘೋರ ಕರ್ಮವನ್ನು ಏಕೆ ಮಾಡಿಸುತ್ತಿರುವೆ?”. ಎನ್ನುವುದು ಅರ್ಜುನನ ಪ್ರಶ್ನೆ. ಶ್ಲೋಕದ ಕೊನೆಯಲ್ಲಿ ‘ಕೇಶವ’ ಎನ್ನುವ ನಾಮವಿಶೇಷಣ ಅರ್ಜುನನ ಶರಣಾಗತಿಯನ್ನು ಸೂಚಿಸುತ್ತದೆ. ಕಾ+ಈಶ+ವ-ಕೇಶವ; ಇಲ್ಲಿ ’ಕಾ’ ಎಂದರೆ ಸೃಷ್ಟಿಗೆ ಕಾರಣವಾಗಿರುವ ಚತುರ್ಮುಖ ಬ್ರಹ್ಮ ; ಈಶ ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ. ಕೇಶವ ಅಂದರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯನ್ನೊಳಗೊಂಡ ಪರಶಕ್ತಿ. “ಸೃಷ್ಠಿ-ಸ್ಥಿತಿ-ಸಂಹಾರ-ಮೊಕ್ಷಗಳಿಗೆ ಕಾರಣನಾದ ನೀನು ನನ್ನನ್ನು ಈ ಗೊಂದಲದಿಂದ ಪಾರು ಮಾಡು” ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಶರಣಾಗಿ ಬೇಡುತ್ತಾನೆ.

ವ್ಯಾಮಿಶ್ರೇಣ್ಯೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ          ।
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋsಹಮಾಪ್ನುಯಾಮ್           ॥೨॥

ವ್ಯಾಮಿಶ್ರೇಣ ಇವ  ವಾಕ್ಯೇನ ಬುದ್ಧಿಮ್  ಮೋಹಯಸಿ ಇವ ಮೇ
ತತ್  ಏಕಮ್ ವದ ನಿಶ್ಚಿತ್ಯ ಯೇನ ಶ್ರೇಯಃ ಅಹಮ್ ಅಪ್ನುಯಾಮ್-ಇಬ್ಬಗೆಯ ಮಾತಿನಿಂದ ನನ್ನ ನಿರ್ಧಾರಶಕ್ತಿಯನ್ನು ಗೊಂದಲಕ್ಕೀಡುಮಾಡುವಂತಿದೆ. ಆದ್ದರಿಂದ, ಒಂದನ್ನು ನಿರ್ಧರಿಸಿ ಹೇಳು: ಯಾವುದರಿಂದ ನಾನು ಒಳಿತನ್ನು ಪಡೆದೇನು?

ಇಲ್ಲಿ 'ವ್ಯಾಮಿಶ್ರೇಣ' ಎಂದರೆ ಸಂದಿಗ್ದಾರ್ಥ (Contradicting, Confusing). “ಈ  ರೀತಿ ಇಬ್ಬಗೆಯ ಮಾತಿನಿಂದ ನನಗೆ ಯಾವುದು ಸರಿ-ಯಾವುದು ತಪ್ಪು ಎನ್ನುವ ತೀರ್ಮಾನ ಬರುತ್ತಿಲ್ಲ, ಹಾಗು ಆ ಶಕ್ತಿ  ನನ್ನಲ್ಲಿಲ್ಲ. ನಿನ್ನ ಅಭಿಪ್ರಾಯವನ್ನು ನಾನು ಗ್ರಹಿಸಲಾರೆ. ಯಾವ ದಾರಿಯಲ್ಲಿ ನಡೆದರೆ ನಾನು ಶ್ರೇಯಸ್ಸನ್ನು ಪಡೆದೇನು? ನನ್ನ ಬದುಕು ಸಾರ್ಥಕವಾಗುವ ನಿಶ್ಚಿತ ದಾರಿಯನ್ನು ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ.

Thursday, March 17, 2011

Bhagavad Gita Kannada Chapter-02 Shloka 69-72

ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ।
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ ॥೬೯॥

ಯಾ ನಿಶಾ ಸರ್ವ ಭೂತಾನಾಂ ತಸ್ಯಾಮ್  ಜಾಗರ್ತಿ ಸಂಯಮೀ
ಯಸ್ಯಾಮ್  ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತಃ  ಮುನೇಃ -- ಯಾವುದು ಎಲ್ಲಾ ಜೀವಿಗಳಿಗೆ ಕತ್ತಲ ಕಗ್ಗಂಟೋ ಅಂಥಲ್ಲಿ ಇಂದ್ರಿಯಗಳನ್ನು ಗೆದ್ದ  ಯೋಗಿ ಎಚ್ಚರವಿರುತ್ತಾನೆ. ಎಲ್ಲಾ ಜೀವಿಗಳು ಏಲ್ಲಿ ಎಚ್ಚರವಿರುವರೋ-ಅದು ಬಲ್ಲ ಚಿಂತಕನಿಗೆ ನಟ್ಟಿರುಳು.

ಸಾಮಾನ್ಯ ಮನುಷ್ಯನಿಗೆ ಯಾವುದು ಹಗಲೋ ಅದು ಸತ್ಯದ ಸಾಕ್ಷಾತ್ಕಾರವಾದವನಿಗೆ ರಾತ್ರಿ.  ಜಗತ್ತಿನ ಎಲ್ಲಾ ಜೀವ ಜಾತಕ್ಕೆ ಯಾವುದು ರಾತ್ರಿಯೋ ಅದು ಸಾಧಕನಿಗೆ  ಹಗಲು. ಅಂದರೆ ನಿಜವಾದ ಸಾಧಕ ನಮ್ಮ ರಾತ್ರಿಯಲ್ಲಿ ಎಚ್ಚರವಿರುತ್ತಾನೆ, ಹಾಗು ಲೌಕಿಕ ವ್ಯವಹಾರವೆಂಬ ನಮ್ಮ ಹಗಲು ಅವನಿಗೆ ರಾತ್ರಿ. ಲೌಕಿಕ ಪ್ರಪಂಚದಲ್ಲಿ ಅವನಿಗೆ ಪ್ರವೃತ್ತಿಯೇ ಇರುವುದಿಲ್ಲ. ಆತ ನಮಗೆ ಒಬ್ಬ ಮುಗ್ಧನಂತೆ, ಮಗುವಂತೆ ಕಾಣಬಹುದು. ಆತನ ಜ್ಞಾನದ  ಬಗ್ಗೆ  ಅರಿವಿಲ್ಲದವನಿಗೆ ಆತನೊಬ್ಬ ಹುಚ್ಚನಂತೆ ಕಂಡರೆ ಆಶ್ಚರ್ಯವಿಲ್ಲ!  ಏಕೆಂದರೆ ಆತ ಲೌಕಿಕ ಪ್ರಪಂಚದೊಂದಿಗಿದ್ದು, ಅದರೊಂದಿಗೆ ಬೆರೆಯದೆ ತನ್ನ ಅಂತರಂಗದ ಆನಂದವನ್ನು ಸದಾ ಸವಿಯುತ್ತಿರುತ್ತಾನೆ. ಒಬ್ಬ ಜ್ಞಾನಿ ಭಗವಂತನನ್ನು ಕಂಡಾಗ ಆತನಿಗೆ ಉಳಿದಿದ್ದೆಲ್ಲಾ ಕತ್ತಲು. ಅದ್ಭುತವಾದ ಸಂಗತಿಯನ್ನು ಕಂಡ ವಿಸ್ಮಯದಲ್ಲಿ ತದೇಕಚಿತ್ತನಾಗಿ ಅದನ್ನೇ ನೋಡುತ್ತಿರುತ್ತಾನೆ. ಭಗವಂತನನ್ನು ಕಾಣಬೇಕಾದರೆ ನಾವು ಸದಾ ಶಾಸ್ತ್ರದ  ಶ್ರವಣ ಮಾಡಬೇಕು. ಕೇವಲ ಶ್ರವಣ ಮಾಡಿದರೆ ಸಾಲದು, ಶ್ರವಣದ ನಂತರ ಮನನ-ನಿದಿಧ್ಯಾಸನ ಅತಿ ಮುಖ್ಯ. ಇದನ್ನೇ "ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿದಿಧ್ಯಾಸಿತವ್ಯಃ ಚ" ಎಂದಿದ್ದಾರೆ. ಮನನ ಶೀಲನಾದವ  'ಮುನಿ' ; ಅವನೇ 'ಪಶ್ಯ' ಅಂದರೆ ಭಗವಂತನನ್ನು ಕಾಣಬಲ್ಲವ ಅಥವಾ ಕಂಡವ.

ಇಂದಿನ ಸಮಾಜದಲ್ಲಿ ಸತ್ಯದ ಸಾಕ್ಷಾತ್ಕಾರನಾದವನನ್ನು ಗುರುತಿಸುವುದು ಬಹಳ ಕಷ್ಟ. ಸಿದ್ಧ ಪುರುಷರೆಲ್ಲಾ ಸತ್ಯವನ್ನು ಕಂಡವರಲ್ಲ! ಪವಾಡ ಮಾಡುವವರು ಭಗವಂತನನ್ನು ಕಂಡವರು ಎಂದು ಹೇಳಲಾಗುವುದಿಲ್ಲ. ಏಕೆಂದರೆ ನಿಜವಾದ ಸಾಧಕ ಸಾಮಾನ್ಯವಾಗಿ ಪವಾಡ ಮಾಡುವುದಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಆತ ಪ್ರಪಂಚದ ಒಳಿತಿಗಾಗಿ ಪವಾಡ ಮಾಡಬಹುದು. ನಿರಂತರ ಸತ್ಯದ ಬಗ್ಗೆ ಅನ್ವೇಷಣೆ ಮಾಡಿ, ಸಿದ್ಧಿ ಗಳಿಸಿದರೆ ಮಾತ್ರ ಸ್ಥಿತಪ್ರಜ್ಞರಾಗಲು ಸಾಧ್ಯ.

ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ ।
ತದ್ವತ್ ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ ॥೭೦॥

ಆಪೂರ್ಯಮಾಣಮ್ ಅಚಲಪ್ರತಿಷ್ಠಮ್  ಸಮುದ್ರಮ್ ಅಪಃ ಪ್ರವಿಶಂತಿ ಯದ್ವತ್
ತದ್ವತ್ ಕಾಮಾಃ  ಯಮ್  ಪ್ರವಿಶಂತಿ ಸರ್ವೇ ಸಃ  ಶಾಂತಿಮ್ ಅಪ್ನೋತಿ ನ ಕಾಮಕಾಮೀ--ತುಂಬಿದರೂ ತುಳುಕದೆ ನಿಂತ ಕಡಲನ್ನು ಎಲ್ಲ ನೀರುಗಳು ಬಂದು ಸೇರುವಂತೆ, ಯಾರನ್ನು ಎಲ್ಲ ವಿಷಯಗಳು ತುಂಬಿಯೂ ತುಳುಕದಂತೆ ಬಂದು ಸೇರುವವೋ ಅವನು ಮುಕ್ತಿ ಪಡೆಯುತ್ತಾನೆ. ಹೊರತು  ಕೆಟ್ಟ ಬಯಕೆಗಳ ಬೆನ್ನು ಹತ್ತಿದವನಲ್ಲ.
ಭಗವಂತನನ್ನು ಕಂಡವನು, ಸತ್ಯದ ಸಾಕ್ಷಾತ್ಕಾರವಾದವನು. ಭಗವಂತನನ್ನು ಕಾಣುವ ಸರಿ ದಾರಿಯಲ್ಲಿ ನಡೆಯುವವನು ಹೇಗಿರುತ್ತಾನೆ ಎನ್ನುವ ವಿಷಯದ ಮೇಲೆ ಕೃಷ್ಣ ಇಲ್ಲಿ ಇನ್ನಷ್ಟು ವಿವರಣೆಯನ್ನು ಕೊಟ್ಟಿದ್ದಾನೆ: ಆತನ ಮನಸ್ಸು ಸದಾ ಆನಂದವಾಗಿರುತ್ತದೆ. ಅದು ಭಗವಂತನಲ್ಲಿ ನೆಲೆಗೊಂಡಿರುತ್ತದೆ.  ಆತ ಕಿರು ತೊರೆಗಳಂತೆ ಇರದೆ ಕಡಲಿನಂತಿರುತ್ತಾನೆ. ಸಮುದ್ರಕ್ಕೆ ಎಲ್ಲಾ ನದಿಗಳು ಬಂದು ಸೇರಿದರೂ ಅದು ಉಕ್ಕೇರುವುದಿಲ್ಲ. ಕಡಲು ಮಳೆ ಬಂದಾಗ ಉಕ್ಕಿ ಹರಿದು- ಬೇಸಿಗೆ ಬಂದಾಗ ಬತ್ತಿ ಹೋಗುವುದಿಲ್ಲ. ಅದೇ ರೀತಿ ಸಾಧಕ ಪ್ರಪಂಚದ ಎಲ್ಲಾ  ಭೋಗಗಳು ಅವನನ್ನು ಪ್ರವೇಶಿಸಿದರೂ ಕೂಡಾ, ವಿಚಲಿತನಾಗದೆ ಸುಖ-ದುಃಖವನ್ನು ಮೀರಿ ನಿಲ್ಲುತ್ತಾನೆ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಆತ ಭಗವಂತನಲ್ಲಿ ನಿಷ್ಠೆಯನ್ನಿಟ್ಟು ಮೋಕ್ಷವನ್ನು ಪಡೆಯುತ್ತಾನೆ. ಆದರೆ ಬಯಕೆಗಳ ಬೆನ್ನು ಹತ್ತಿದವನು ಅದರಿಂದ ಈಚೆ ಬಾರದೆ ಎಂದೂ ನಿಜವಾದ ಸುಖ ಕಾಣಲಾರ.

ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಸ್ಪೃಹಃ   
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ ॥೭೧॥

ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾನ್ ಚರತಿ  ನಿಸ್ಪೃಹಃ
ನಿರ್ಮಮಃ ನಿರಹಂಕಾರಃ ಸಃ  ಶಾಂತಿಮ್ ಅಧಿಗಚ್ಛತಿ--ಯಾರು ಎಲ್ಲ ವಿಷಯಗಳನ್ನು ಮನಸೋಲದೆ, ಕೆಟ್ಟ ಆಸೆಗೆ ಬಲಿ ಬೀಳದೆ, ನಾನು ನನ್ನದು ಎಂಬ ಹಮ್ಮು ತೊರೆದು ಅನುಭವಿಸುತ್ತಾನೆ-ಅವನು ಮುಕ್ತಿ ಪಡೆಯುತ್ತಾನೆ.

ಯಾರು ಭೋಗದ ಬಯಕೆಯನ್ನು ಬಿಟ್ಟು ಬಂದದ್ದನ್ನು ಸಂತೋಷವಾಗಿ ಅನುಭವಿಸುತ್ತಾರೆ, ಅವನು ನಿಜವಾದ ಸಾಧಕನೆನೆಸುತ್ತಾನೆ. ಸೀಮಿತವಾದ ಆಹಾರ, ನಿದ್ದೆ ಮತ್ತು  ಮೈಥುನವನ್ನು ಅಭ್ಯಾಸ ಮಾಡಿಕೊಂಡು, ನಿರ್ಭಯವಾಗಿ ಸಂಪೂರ್ಣ ಭಗವಂತನ ರಕ್ಷಾ ಕವಚದ ಜ್ಞಾನದಲ್ಲಿದ್ದು, ಆಸೆ ಆಕಾಂಕ್ಷೆಗಳಿಗೆ ಬಲಿ ಬೀಳದೆ, ಯಾವುದೇ ಏರು-ಪೇರುಗಳಿಗೆ ವಿಚಲಿತನಾಗದೆ ಬದುಕುತ್ತಾನೆ. ಅವನು ನಿಜವಾದ 'ಮನುಷ್ಯ'ನೆನಿಸುತ್ತಾನೆ. ಇಂತವನಿಗೆ ನಾನು-ನನ್ನದು ಎನ್ನುವ ಅಹಮ್ ಎಂದೂ ಇರುವುದಿಲ್ಲ ಹಾಗು ಆತ ಮುಕ್ತಿಯನ್ನು ಪಡೆಯುತ್ತಾನೆ.

ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ   
ಸ್ಥಿತ್ವಾSಸ್ಯಾಮಂತಕಾಲೇSಪಿ ಬ್ರಹ್ಮ ನಿರ್ಬಾಣಮೃಚ್ಛತಿ ॥೭೨॥

ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನ ಏನಾಮ್  ಪ್ರಾಪ್ಯ ವಿಮುಹ್ಯತಿ
ಸ್ಥಿತ್ವಾ ಅಸ್ಯಾಮ್ ಅಂತಕಾಲೇ ಅಪಿ ಬ್ರಹ್ಮನಿರ್ಬಾಣಮ್  ಋಚ್ಛತಿ- - ಪಾರ್ಥ, ಇದು ಬ್ರಹ್ಮ ಜ್ಞಾನಿಯ ಗುರುತು. ಇದನ್ನು ಪಡೆದು ಮತ್ತೆ ಮೈಮರೆಯುವುದಿಲ್ಲ. ಕೊನೆಯ ಕಾಲದಲ್ಲೂ ಈ ನೆಲೆಯಲ್ಲಿ ನಿಂತವನು ಕಾಯದಿಂದಲು ಸಾಯದ ಪರತತ್ವವನ್ನು ಸೇರುತ್ತಾನೆ.

ಭಗವಂತನಲ್ಲಿ ನೆಲೆಗೊಳ್ಳತಕ್ಕಂತವನ ಲಕ್ಷಣ ಬ್ರಾಹ್ಮೀ ಸ್ಥಿತಿ. ಈವರೆಗೆ ಹೇಳಿರುವುದು ಒಬ್ಬ ಬ್ರಹ್ಮ ಜ್ಞಾನಿಯ ಲಕ್ಷಣ. ಬ್ರಹ್ಮನಲ್ಲಿ ಸ್ಥಿತನಾದ ಬ್ರಹ್ಮ ಪ್ರಜ್ಞೆ ಜಾಗೃತನಾದವನ ಲಕ್ಷಣ. ಇಂತಹ ಬ್ರಹ್ಮಜ್ಞಾನಿಯನ್ನು ಆತನ ಬಾಹ್ಯ ಕ್ರಿಯೆಯಿಂದಾಗಲಿ, ವೇಷ ಭೂಷಣದಿಂದಾಗಲಿ ಗುರುತಿಸಲಾಗದು. ಆತನ ಮಾನಸಿಕ ಸ್ಥಿತಿ ಆತನ ಸ್ಥಾನವನ್ನು ತಿಳಿಸುತ್ತದೆ.
ತನ್ನ ಸಾವಿನ ಕೊನೆ ಕ್ಷಣದಲ್ಲಿ ಕೂಡಾ ಭಗವಂತನ ಪ್ರಜ್ಞೆ ಜಾಗೃತವಾಗಿದ್ದರೆ ಆತ ನೇರ ಮರು ಹುಟ್ಟಿಲ್ಲದ  ಮೋಕ್ಷವನ್ನು ಸೇರುತ್ತಾನೆ.

ಇತಿ ದ್ವಿತೀಯೋSಧ್ಯಾಯಃ

ಎರಡನೆಯ ಅಧ್ಯಾಯ ಮುಗಿಯಿತು
*******