Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, January 22, 2011

Bhagavad Gita Kannada Chapter-01_Shloka-43-47

ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ   
ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ   ೪೩

ದೋಷೈ ಏತೈಃ ಕುಲಘ್ನಾನಾಮ್  ವರ್ಣಸಂಕರ ಕಾರಕೈಃ   
ಉತ್ಸಾದ್ಯನ್ತೇ ಜಾತಿಧರ್ಮಾಃ ಕುಲಧರ್ಮಾಃ ಚ  ಶಾಶ್ವತಾಃ -ಸಮಾಜದ  ಬಣ್ಣಗೇಡಿಗೆ ಕಾರಣರಾದ ಕುಲಗೇಡಿಗಳ ಇಂಥ ತಪ್ಪುಗಳಿಂದ ಸಹಜ ಧರ್ಮಗಳು ಮತ್ತು ಅಳಿವಿರದ ಕುಲಧರ್ಮಗಳು ನೆಲೆಗೆಡುತ್ತವೆ.

ಯುದ್ಧದಿಂದ ಸಮಾಜದ ಮೇಲೆ ಆಗುವ ನೇರ ಪರಿಣಾಮ ಎಂದರೆ, ನಾಯಕರಿಲ್ಲದ, ಯುವಕರಿಲ್ಲದ ಸಮಾಜ.  ಗಂಡು-ಹೆಣ್ಣಿನ ಅನುಪಾತ ವೆತ್ಯಾಸ. ಇದು ಸರಿ ಹೊಂದಬೇಕಾದರೆ ಅದೆಷ್ಟು ವರ್ಷಗಳು ಬೇಕು? ನಾವು ಮಹಾಭಾರತ ಯುದ್ಧವನ್ನು ನೋಡಿದರೆ ಅಲ್ಲಿ ಕನಿಷ್ಠ ಐವತ್ತು ಲಕ್ಷ ಮಂದಿ ಜನ ಸತ್ತಿದ್ದಾರೆ. ಇಂತಹ ಮಹಾಯುದ್ಧದಿಂದ ಇಡೀ ಸಮಾಜ ನಾಶಮಾಡಿದ ಕುಲಕಂಟಕರು ನಾವಾಗುತ್ತೇವೆ ಎನ್ನುವುದು ಅರ್ಜುನನ ಕಳಕಳಿ. “ಸಮಾಜದ ವ್ಯವಸ್ಥೆ  ನಾಶವಾಗುವುದರಿಂದ ಸ್ವಭಾವ ನಾಶವಾಗುತ್ತದೆ. ಇದರಿಂದ ಆಯಾ ಜೀವದ ಸ್ವಭಾವದ ಅಭಿವೃದ್ಧಿ ಆಗದೆ, ವ್ಯಕ್ತಿತ್ವ ವಿಕಸನ ನಾಶವಾಗುತ್ತದೆ. ಶಾಶ್ವತ ಮೌಲ್ಯದ ಸಮಾಜಧರ್ಮ ನಾಶವಾಗುತ್ತದೆ. ಅನಾದಿ ಕಾಲದಿಂದ ಸಮಾಜ ಒಪ್ಪಿಕೊಂಡು ಬಂದ ಸ್ಥಿರಧರ್ಮ ಕೊಚ್ಚಿಕೊಂಡು ಹೋಗುತ್ತದೆ” ಎಂದು ಅರ್ಜುನ ಕೃಷ್ಣನ ಮುಂದೆ ತನ್ನ ವಾದವನ್ನು ಮಂಡಿಸುತ್ತಾನೆ. 
ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ  
ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ   ೪೪

ಉತ್ಸನ್ನ ಕುಲಧರ್ಮಾಣಾಮ್ ಮನುಷ್ಯಾಣಾಮ್  ಜನಾರ್ದನ 
ನರಕೇ ನಿಯತಮ್  ವಾಸಃ ಭವತಿ ಇತಿ ಅನುಶುಶ್ರುಮ- ಓ ಜನಾರ್ಧನ, ಕುಲ ಧರ್ಮದ ನೆಲೆದಪ್ಪಿದವರಿಗೆ ನರಕವೇ ಮುಗಿಯದ ನೆಲೆ ಎಂದು ಕೇಳಿ ಬಲ್ಲೆವು.

ಇಹದಲ್ಲೂ ನರಕ, ಪರದಲ್ಲೂ ನರಕ, ಹೀಗೆ ಜನ್ಮವೆಲ್ಲಾ ನರಕದಲ್ಲಿ. ಎಂದೆಂದೂ ನರಕದಲ್ಲೇ ಕೊಳೆಯುವ ಪರಿಸ್ಥಿತಿ ಬರುತ್ತದೆ ಎಂದು ತಿಳಿದವರು ಹೇಳುವುದನ್ನು ಕೇಳಿ ತಿಳಿದಿದ್ದೇನೆ. ಹೀಗೆ ಇಹವೂ ನರಕ, ಪರವೂ ನರಕವಾಗಲು ನಾವೇ ಕಾರಣವಾಗುತ್ತೇವೆ.
ಅಹೋ ಬತ ಮಹತ್ ಪಾಪಂ ಕರ್ತುಂ ವ್ಯವಸಿತಾ ವಯಮ್           
ಯದ್ ರಾಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ     ೪೫

ಅಹೋ ಬತ ಮಹತ್ ಪಾಪಮ್ ಕರ್ತುಮ್  ವ್ಯವಸಿತಾ ವಯಮ್ 
ಯತ್  ರಾಜ್ಯಸುಖಲೋಭೇನ ಹಂತುಮ್ ಸ್ವಜನಮ್ ಉದ್ಯತಾಃ  -ಅಯ್ಯೋ....! ಎಂಥ ಹಿರಿಯ ತಪ್ಪನ್ನು ಮಾಡತೊಡಗಿದ್ದೆವು ನಾವು ! ದೊರೆತನದ ಸುಖದ ದುರಾಸೆಯಿಂದ ನಮ್ಮ ಮಂದಿಯನ್ನೇ ಕೊಲ್ಲ ಹೊರಟಿದ್ದೇವಲ್ಲ !

ಇಲ್ಲಿ ಅರ್ಜುನ ಕುಸಿದು ಬೀಳುವ ದ್ವನಿಯಲ್ಲಿ ಹೇಳುತ್ತಾನೆ- “ಅಯ್ಯೋ.. ಎಂಥ ದೊಡ್ಡ ದುರಂತ, ಎಂಥ ದೊಡ್ಡ ಪಾಪ ಕಾರ್ಯ ನಮ್ಮ ಮುಂದೆ ನಡೆಯುತ್ತಿತ್ತು? ಎಂಥ ಪ್ರಮಾದ ಆಗಿ ಹೋಗುತ್ತಿತ್ತು? ನಾವು ದೊಡ್ಡ ತಪ್ಪನ್ನು ಮಾಡಲು ಕೈ ಹಾಕುತ್ತಿದ್ದೆವು. ರಾಜ್ಯ ಸುಖದ ಲೋಭದಿಂದ  ನಮ್ಮ ಜನರನ್ನೇ ನಾವು ಕೊಂದು ಇಡೀ ಜನಾಂಗವನ್ನು ಅಧಃಪಾತಕ್ಕೆ ತಳ್ಳುವ ಕೆಲಸ ನಮ್ಮಿಂದಾಗುತ್ತಿತ್ತು” ಎಂದು.

ಯದಿ ಮಾಮ್ ಅಪ್ರತೀಕಾರಮ್ ಅಶಸ್ತ್ರಮ್  ಶಸ್ತ್ರಪಾಣಯಃ
ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್  ೪೬

ಯದಿ ಮಾಮ್ ಅಪ್ರತೀಕಾರಮ್ ಅಶಸ್ತ್ರಮ್  ಶಸ್ತ್ರಪಾಣಯಃ
ಧಾರ್ತರಾಷ್ಟ್ರಾಃ ರಣೇ ಹನ್ಯುಃ ತತ್ ಮೇ  ಕ್ಷೇಮ ತರಮ್ ಭವೇತ್-- ಒಂದೊಮ್ಮೆ ಎದುರು ನಿಂತು ಹೋರಾಡದ, ಆಯುಧ ಹಿಡಿಯದ ನನ್ನನ್ನು ಧಾರ್ತರಾಷ್ಟ್ರರು ಆಯುಧ ಹಿಡಿದು ಕೊಲ್ಲುವುದಾದರೆ ಅದು ನನ್ನ ಭಾಗ್ಯವಾದೀತು.

ನಾನು ಪ್ರತಿಕಾರ ಮಾಡುವುದೇ ಇಲ್ಲ. ಒಂದು ವೇಳೆ ಅವರು ನನ್ನನ್ನು ಹೊಡೆಯಲು ಬಂದರೆ ನಾನು ಪ್ರತಿಯಾಗಿ ಹೊಡೆಯುವುದೂ ಇಲ್ಲ. ಕತ್ತಿ ಹಿಡಿದು ನನ್ನನ್ನು ಕೊಂದರೆ ಅದು ನನ್ನ ಭಾಗ್ಯವೆಂದು ನಾನು ಸಾಯುತ್ತೇನೆ. ಏಕೆ ಇಂತಹ ದುರಂತ ನೋಡಿ ಬದುಕಬೇಕು? ಏನಾದರೂ ಸರಿ, ನನಗೆ ಯುದ್ಧ ಬೇಡ. ಎಂದು ಅರ್ಜುನ ಕೈಚಲ್ಲುತ್ತಾನೆ.
ಯುದ್ಧ ಪ್ರಾರಂಭದಲ್ಲಿ "ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ" ಎಂದು ದರ್ಪದಿಂದ ಹೇಳಿದ ಅರ್ಜುನ- ಕ್ಷಣ ಮಾತ್ರದಲ್ಲಿ ಕರಗಿ ಹೋದ. ಇದು ಆತನ ಸುಪ್ತಪ್ರಜ್ಞೆಯಲ್ಲಿ ಅವನಿಗೆ ತಿಳಿಯದಂತೆ ಅಡಗಿ ಕುಳಿತಿದ್ದ ಭಾವನೆ. ಕೃಷ್ಣ ತನ್ನ ಮನಃಶಾಸ್ತ್ರೀಯ ಚಿಕಿತ್ಸೆ(Psychotherapy)ಯಿಂದ ಅದನ್ನು ಸಂಪೂರ್ಣ ಹೊರ ಬೀಳುವಂತೆ ಮಾಡಿದ. ಇದು ಮಾನಸಿಕ ಸಂಘರ್ಷಕ್ಕೊಳಗಾದವನಿಗೆ ಮೊದಲು ಮಾಡುವ ಚಿಕಿತ್ಸೆ. ಮನುಷ್ಯನ ಮನೋರೋಗವನ್ನು ಹೇಗೆ ಗುಣಪಡಿಸಬಹುದು ಎಂದು ಜಗತ್ತಿಗೆ ತೋರಿಸಿದ ಮೊದಲ ಮಹಾ ಮನೋವಿಜ್ಞಾನಿ ಕೃಷ್ಣ. ಒಂದು ವೇಳೆ ಕೃಷ್ಣ  ಅರ್ಜುನನ ಆತ್ಮೀಯರ ಮುಂದೆ ರಥವನ್ನು ನಿಲ್ಲಿಸದೇ ಇದ್ದಿದ್ದರೆ, ಈ ಎಲ್ಲಾ ವಿಚಾರಗಳು ಆತನ ಮನಸ್ಸಿನಿಂದ ಹೊರ ಬರುತ್ತಿರಲಿಲ್ಲ. ಶ್ರೀಕೃಷ್ಣನ ಈ ಮಾನಸಿಕ ಚಿಕೆತ್ಸೆ, ತತ್ವಶಾಸ್ತ್ರದೊಂದಿಗೆ ಮನಃಶಾಸ್ತ್ರವನ್ನು ಅರಿತು ವಿಶ್ಲೇಷಿಸಿದಾಗ ಮಾತ್ರ ನಮಗೆ ಅರ್ಥವಾಗುತ್ತದೆ.  

ಸಂಜಯ ಉವಾಚ
ಏವಮುಕ್ತ್ವಾsರ್ಜುನಃ ಸಂಖೇ ರಥೋಪಸ್ಥ ಉಪಾವಿಶತ್  
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ          ೪೭

ಸಂಜಯ ಉವಾಚ -ಸಂಜಯ ಹೇಳಿದನು:
ಏವಮ್ ಉಕ್ತ್ವಾ ಅರ್ಜುನಃ ಸಂಖೇ ರಥ ಉಪಸ್ಥೇ ಉಪಾವಿಶತ್ 
ವಿಸೃಜ್ಯ ಸಶರಮ್  ಚಾಪಮ್ ಶೋಕ ಸಂವಿಗ್ನ ಮಾನಸಃ- ಕಾಳಗದ ಕಣದಲ್ಲಿ ಅರ್ಜುನ ಬಿಲ್ಲು ಬಾಣಗಳನ್ನು ಬಿಸುಟು, ಅಳಲಿನಿಂದ ತಳಮಳಿಸುತ್ತ ತೇರ ಮಡಿಲಲ್ಲಿ ಕುಳಿತುಬಿಟ್ಟ..

ರಥದಲ್ಲೇ ನಿಂತು  ಇಷ್ಟು ಮಾತನಾಡಿದ ಅರ್ಜುನ,ರಥದ ಮಧ್ಯದಲ್ಲಿ ಕುಸಿದು ಕುಳಿತುಬಿಟ್ಟ. ತನ್ನೆಲ್ಲಾ ಶಸ್ತ್ರಾಸ್ತ್ರಗಳನ್ನು ಕೆಳಗೆ ಬಿಟ್ಟು ಕೈಚಲ್ಲಿ ಕುಳಿತು ಬಿಟ್ಟ.

ಈ ಅಧ್ಯಾಯದಲ್ಲಿ ಅರ್ಜುನ ತನ್ನೆಲ್ಲ ಭಾವನೆಗಳನ್ನು ಕೃಷ್ಣನ ಮುಂದೆ ಬಿಚ್ಚಿಟ್ಟಿದ್ದಾನೆ.  ಅರ್ಜುನ ಮಾತನಾಡಿದ ಪ್ರತಿಯೊಂದು ವಿಷಯ ನಮಗೆ ತಿಳಿದ ವಿಷಯ. ಆದರೆ ಮುಂದೆ ಕೃಷ್ಣ ಹೇಳುವುದು ನಮಗೆ ತಿಳಿಯದ್ದು. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಭಗವಂತನ ಉತ್ತರವನ್ನು ಮುಂದಿನ ಅಧ್ಯಾಯಗಳಲ್ಲಿ ನೋಡೋಣ.

ಮುಂದಿನ ಅಧ್ಯಾಯಕ್ಕೆ ಹೋಗುವ ಮುನ್ನ ಒಂದು ಪುಟ್ಟ ವಿಶ್ಲೇಷಣೆ. ನಮ್ಮಲ್ಲಿ ಹೆಚ್ಚಿನವರಿಗೆ ಒಂದು ಅನುಮಾನವಿದೆ. “ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣ ಮತ್ತು ಅರ್ಜುನ ಹೇಗೆ ಈ ಏಳುನೂರು ಶ್ಲೋಕಗಳ ಸಂಭಾಷಣೆ ಮಾಡಿದರು? ಅವರಿಗೆ ಅಷ್ಟು ಸಮಯ ಇತ್ತೇ?” ಎಂದು.  ಈ ಪ್ರಶ್ನೆಗೆ ಉತ್ತರ ದೊರೆಯಬೇಕಾದರೆ ಮೊದಲು ನಾವು ಮಹಾಭಾರತ ಕಾಲದ ಯುದ್ಧ ಪದ್ಧತಿಯನ್ನು ತಿಳಿದಿರಬೇಕು. ಆಗಿನ ಕಾಲದ ಯುದ್ಧ ನಿಯಮದ ಪ್ರಕಾರ ಯುದ್ಧದಲ್ಲಿ ಎದುರಾಳಿ ಸಿದ್ಧವಿಲ್ಲದಿದ್ದರೆ ಅವನ ಮೇಲೆ ಆಕ್ರಮಣ ಮಾಡುವಂತಿರಲಿಲ್ಲ. ಒಬ್ಬ ಸಜ್ಜಾಗಿ ನಿಲ್ಲದೆ ಯುದ್ಧ ಪ್ರಾರಂಭವಾಗುತ್ತಿರಲಿಲ್ಲ. ಇನ್ನು ಎಷ್ಟು ಹೊತ್ತು ಅವರ ಸಂಭಾಷಣೆ ನಡೆಯಿತು ಎನ್ನುವ ಪ್ರಶ್ನೆ. ಅರ್ಜುನ ಆ ಕಾಲದ ಮಹಾಮೇಧಾವಿಗಳಲ್ಲಿ ಒಬ್ಬ. ಇಲ್ಲಿ ಸಂಭಾಷಣೆ ನೆಡೆಯುತ್ತಿರುವುದು ಇಬ್ಬರು ಮೇಧಾವಿಗಳ ನಡುವೆ. ಆ ಮಟ್ಟದ ಜ್ಞಾನವನ್ನು ಇದು ನಾವು ಊಹಿಸುವುದೂ ಕಷ್ಟ. ಅವರ ಸಂಪೂರ್ಣ ಸಂಭಾಷಣೆ ನಡೆದಿದ್ದು ಇಂದಿನ ಈ ಏಳುನೂರು ಶ್ಲೋಕ ರೂಪದಲ್ಲಿ ಅಲ್ಲ.  ವೇದವ್ಯಾಸರು ಅವರ ಸಂಭಾಷಣೆಯನ್ನು ನಮಗೆ ಅರ್ಥವಾಗುವಂತೆ ಏಳುನೂರು ಶ್ಲೋಕ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾರೆ ಅಷ್ಟೆ. ಇಂದು ನಮಗೆ ಈ ಶ್ಲೋಕ ಕೂಡಾ ಅರ್ಥವಾಗುವುದಿಲ್ಲ. ಅದಕ್ಕಾಗಿ ನಾವು ಗೀತೆಯ ಭಾಷ್ಯವನ್ನು  ಸಾವಿರಾರು ಪುಟಗಳಲ್ಲಿ ಕಾಣುತ್ತೇವೆ. ಆದರೆ ಮಹಾ ಮೇಧಾವಿಗಳು ಇದನ್ನು ಅತೀ ಸಂಕ್ಷಿಪ್ತವಾಗಿ ಅತೀ ಕಡಿಮೆ ಸಮಯದಲ್ಲಿ ಹೇಳಬಲ್ಲರು ಹಾಗು ಅರ್ಥ ಮಾಡಿಕೊಳ್ಳಬಲ್ಲರು. ಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂಭಾಷಣೆ ಕೂಡಾ ಇಂತಹ ವಿಷಯಭರಿತ ಸಂಕ್ಷಿಪ್ತ ಸಂಭಾಷಣೆ.
ಇನ್ನೊಂದು   ಮುಖ್ಯ ವಿಷಯ ಎಂದರೆ ಗೀತೆಯನ್ನು ಕೃಷ್ಣ ಅರ್ಜುನನಿಗೇ ಏಕೆ ಹೇಳಿದ? ಆತನ ಅಣ್ಣ ಭೀಮನಿಗೆ ಅಥವಾ ಇತರರಿಗೆ ಏಕೆ ಹೇಳಲಿಲ್ಲ? ಎನ್ನುವ ಪ್ರಶ್ನೆ.  ಈ ಪ್ರಶ್ನೆಗೆ ಉತ್ತರ ಅತಿ ಸುಲಭ. ರೋಗ ಬಂದವನಿಗೆ ಮದ್ದೇ ಹೊರತು ಇತರರಿಗಲ್ಲ. ಅಲ್ಲಿ ಮಾನಸಿಕವಾಗಿ ಆಂತರಿಕ ತುಮುಲದಲ್ಲಿದ್ದವನು ಅರ್ಜುನ ಮಾತ್ರ. ಅದಕ್ಕಾಗಿ ಶ್ರೀಕೃಷ್ಣ ಅರ್ಜುನನಿಗೆ(ಆತನ ಮುಖೇನ ನಮಗೆ) ಗೀತೋಪದೇಶ ಮಾಡಿದ.

ಇತಿ ಪ್ರಥಮೋsಧ್ಯಾಯಃ
ಮೊದಲನೇ ಅಧ್ಯಾಯ ಮುಗಿಯಿತು.

*******

Thursday, January 20, 2011

Bhagavad Gita Kannada Chapter-01_Shloka-42

ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ    
ಪತಂತಿ  ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ     ೪೨

ಸಂಕರಃ ನರಕಾಯ ಏವ  ಕುಲಘ್ನಾನಾಮ್  ಕುಲಸ್ಯ ಚ
ಪತಂತಿ  ಪಿತರಃ ಹಿ ಏಷಾಮ್  ಲುಪ್ತ ಪಿಂಡ ಉದಕ ಕ್ರಿಯಾಃ -ಬಣ್ಣಗೇಡು ಕುಲಗೇಡಿಗಳನ್ನೂ, ಕುಲವನ್ನೂ ನರಕಕ್ಕೆ ತಳ್ಳುತ್ತದೆ. ಇಂಥವರ ಪೂರ್ವಜರು ಪಿಂಡ-ತರ್ಪಣಗಳಿಲ್ಲದೆ ನರಳುತ್ತಾರೆ.

ವಿಕ್ಷಿಪ್ತ ಮನಸ್ಸಿನ ಮಕ್ಕಳು ಹುಟ್ಟುವುದರಿಂದ, ಇಡೀ ಸಮಾಜ ನರಕಕ್ಕೆ ಹೋಗಬೇಕಾಗುತ್ತದೆ. ಹಾಗು ಅದಕ್ಕೆ ಕಾರಣರಾದ ನಾವೂ ಕೂಡಾ ನರಕಕ್ಕೆ ಹೋಗಬೇಕಾಗುತ್ತದೆ. ಸಮಾಜ ಈ ರೀತಿ ಸಂಕೀರ್ಣವಾದಾಗ, ಎಲ್ಲಾ ನಂಬಿಕಯನ್ನು ಕಳೆದುಕೊಂಡಾಗ, ಪಿತೃಗಳು ಪಿಂಡ ಇಲ್ಲದೆ ನರಕದಲ್ಲಿ ಬೀಳುತ್ತಾರೆ ಎನ್ನುವುದು ಅರ್ಜುನನ ಯುದ್ಧೋತ್ತರ ಪರಿಣಾಮದ ಭೀಕರತೆಯ ಪರಿಕಲ್ಪನೆ.
ಇಲ್ಲಿ ಪಿಂಡ ಅಂದರೆ ಏನು? ಅದರ ಮಹತ್ವ ಏನು? ಅದು ಯಾರಿಗೆ ಹೋಗಿ ಹೇಗೆ ಸೇರುತ್ತದೆ ಎನ್ನುವುದನ್ನು ನಾವು ಅರ್ಥ  ಮಾಡಿಕೊಳ್ಳೋಣ.  ನಾವು ಹಾಕುವ ಸ್ಥೂಲವಾದ ಪಿಂಡ ಸತ್ತ ಜೀವಕ್ಕೆ ನೇರವಾಗಿ ಹೋಗಿ ಸೇರುವುದಿಲ್ಲ. ಸತ್ತ ನಂತರ ಸ್ಥೂಲ ಜೀವದಲ್ಲಿ ಇರುವ ಜೀವಕ್ಕೆ ಸ್ಥೂಲವಾದ ಪಿಂಡ ಬೇಕಿಲ್ಲ. ಜೀವ ತನ್ನ ಕರ್ಮಾನುಸಾರ ತಾನು ಹೋಗಬೇಕಾದಲ್ಲಿಗೆ ಹೋಗುತ್ತದೆ. ನಾವು ಪಿಂಡ ಹಾಕುವುದು ಪಿತೃದೇವತೆಗಳಿಗೆ. ಇದೊಂದು ದೇವತಾಗಣ. ಅದರಲ್ಲಿ ಒಟ್ಟು ನೂರು ದೇವತೆಗಳು. ಅವರಲ್ಲಿ  ಮೂರು ಪ್ರಧಾನ`ಪಿತೃಗಳು . ಜೀವಿತ ಕಾಲದಲ್ಲಿ ತತ್ವಾಭಿಮಾನಿ ದೇವತೆಗಳನ್ನು ಹೇಗೆ  ಪೂಜಿಸುತ್ತೆವೋ ಹಾಗೆ ಸತ್ತ ನಂತರ, ಈ ಸ್ಥೂಲಶರೀರದಿಂದ ಈಚೆ ಬಂದ ಮೇಲೆ, ಜೀವವನ್ನು ರಕ್ಷಿಸುವ ದೇವತಾಗಣ-ಪಿತೃಗಣ. ಈ ಪಿತೃಗಳನ್ನು ನಿಯಂತ್ರಿಸುವವರು ವಸು-ರುದ್ರ-ಆದಿತ್ಯರು. ಈ ಪಿತೃ ದೇವತೆಗಳನ್ನು ನಮ್ಮ ಪೂರ್ವಜರು ತೀರಿಕೊಂಡ ದಿನದಂದು ಆರಾಧಿಸುವುದು ಸಂಪ್ರದಾಯ. ಇಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವ ಕಾರಣ ಏನೆಂದರೆ, ಒಂದು ವೇಳೆ ಕಾರಣ ವಿಶೇಷದಿಂದ ನಮ್ಮ ಹಿರಿಯರಿಗೆ ಅವರ ದಾರಿಯಲ್ಲಿ  ಬಾಧಕವಾಗಿದ್ದರೆ, ಅದನ್ನು ಪರಿಹರಿಸಿ ಎನ್ನುವ ಪ್ರಾರ್ಥನೆಯೇ ಪಿಂಡ ಪ್ರಧಾನ. “ಪ್ರಾರಾಬ್ದ ಕರ್ಮದಿಂದ ಅವರನ್ನು ಕಾಪಾಡಿ” ಎನ್ನುವ ಪಿತೃ-ದೇವತೆಗಳ ಪೂಜೆ. ಇನ್ನು ಕಾಗೆ ಮುಟ್ಟುವುದು ಎಂದರೆ ಪಿತೃ ದೇವತೆಗಳು ನಮ್ಮ ಪೂಜೆಯನ್ನು ಸ್ವೀಕರಿಸಿದ ಶಕುನ ಸಂಕೇತ.

Bhagavad Gita Kannada Chapter-01_ Shloka-41

ಅಧರ್ಮಾಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ  ೪೧

ಅಧರ್ಮ ಅಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ  
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ -ಓ ವಾರ್ಷ್ಣೇಯ, ಅಧರ್ಮದ ಆಕ್ರಮಣದಿಂದ ಸಮಾಜದಲ್ಲಿ  ಹೆಣ್ಣು ಮಕ್ಕಳು ದಾರಿಗೆಡುತ್ತಾರೆ. ಅದರಿಂದ ಸಮಾಜ ವರ್ಣಸಂಕರಕ್ಕೀಡಾಗುತ್ತದೆ.

ಯುದ್ಧವಾದರೆ ಅದರಿಂದ ಯುವಕರೆಲ್ಲರೂ ಸಾಯುತ್ತಾರೆ. ಅಧರ್ಮ ಸಮಾಜವನ್ನು ಆಕ್ರಮಿಸುತ್ತದೆ. ಯುವಕರಿಲ್ಲದ ಸಮಾಜ ಸೃಷ್ಟಿಯಾಗುತ್ತದೆ. ಸಾಮಾಜಿಕವಾಗಿ ಸ್ತ್ರೀಗೆ ಭಧ್ರತೆ ಇಲ್ಲದಂತಾಗುತ್ತದೆ. ಅದರ ಪರಿಣಾಮ ಆಕೆಯ ಮುಗ್ಧತೆಯ ದುರುಪಯೋಗ. ಅದರಿಂದ ಸಮಾಜದಲ್ಲಿ ವರ್ಣಸಂಕರ ಉಂಟಾಗುತ್ತದೆ ಎನ್ನುತ್ತಾನೆ ಅರ್ಜುನ.
ಇಲ್ಲಿ ವರ್ಣಸಂಕರ ಎಂದರೆ ಜೀವದ ಬಣ್ಣ ಅಥವಾ ಸ್ವಭಾವ ಹಾಳಾಗುವುದು. ಹೆಣ್ಣಿಗೆ ಬಲವಂತವಾಗಿ ಆಕೆಯ ಮನಸ್ಸಿಗೆ ವಿರುದ್ಧವಾಗಿ ಉಚ್ಚ ಶಿಕ್ಷಣ ಕೊಡಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಕಾರಣ ಅದರಿಂದ ಆಕೆಯ ಗರ್ಭಕೋಶದ ಮೇಲೆ ಪರಿಣಾಮವಾಗುತ್ತದೆ. ಅದರ ಪರಿಣಾಮ ಹುಟ್ಟುವ ಮಗುವಿನ ಮೇಲೆ ಆಗುತ್ತದೆ. ಹೆಣ್ಣು ತನಗಿಷ್ಟವಿಲ್ಲದೆ ತನ್ನನ್ನು ತೊಡಗಿಸಿಕೊಂಡಾಗ; ಅನೇಕ ಪುರುಷರ ಸಂಗ ಮಾಡುವುದರಿಂದ; ಮುಂದಿನ ಸಂತಾನದ ಮೇಲೆ ಘೋರ ಪರಿಣಾಮವುಂಟಾಗುತ್ತದೆ. ಯಾರ ಮಾತನ್ನೂ ಕೇಳದ, ಯಾರ ನಿಯಮಕ್ಕೂ ಬಗ್ಗದ ವಿಕ್ಷಿಪ್ತ ಸಂತತಿ ಹುಟ್ಟುವ ಸಾಧ್ಯತೆ ಇದೆ. ಇದು ಇಲ್ಲಿ ಅರ್ಜುನ ಹೇಳುತ್ತಿರುವ  ವರ್ಣಸಂಕರ.
ಇಲ್ಲಿ ಅರ್ಜುನ ಕೃಷ್ಣನನ್ನು 'ವಾರ್ಷ್ಣೇಯ' ಎಂದು ಸಂಬೋಧಿಸಿದ್ದಾನೆ. ಯಾದವ ಮನೆತನದ ಹಿರಿಯ ರಾಜ ವೃಷ್ಣಿ.  ಆ ವಂಶದಲ್ಲಿ ಅವತರಿಸಿದ ಕೃಷ್ಣ ವಾರ್ಷ್ಣೇಯ. ಈ ಹೆಸರಿನ ಬಗ್ಗೆ ವೇದದಲ್ಲಿ ಉಲ್ಲೇಖವಿದೆ. ಬಯಸಿದ  ಅಭೀಷ್ಟವನ್ನು ಕೊಡುವ ಹಿರಿಯ ಶಕ್ತಿಗಳಾದ ದೇವತೆಗಳ ಒಡೆಯ ಭಗವಂತ ವಾರ್ಷ್ಣೇಯ. “ಎಲ್ಲರ ಅಭೀಷ್ಟವನ್ನು ಈಡೇರಿಸುವ, ಧರ್ಮ ಸಂಸ್ಥಾಪನೆಗಾಗಿ ಇಳಿದುಬಂದ ನೀನು, ಏಕೆ ಈ ಯುದ್ಧವನ್ನು ತಡೆಯುತ್ತಿಲ್ಲ” ಎನ್ನುವ ಧ್ವನಿ ಅರ್ಜುನನ ಈ ಸಂಬೋಧನೆಯಲ್ಲಿದೆ.

Tuesday, January 18, 2011

Bhagavad Gita Kannada Chapter-01_Shloka-40

ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ
ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋsಭಿಭವತ್ಯುತ      ೪೦


ಕುಲಕ್ಷಯೇ ಪ್ರಣಶ್ಯಂತಿ ಕುಲ ಧರ್ಮಾಃ ಸನಾತನಾಃ
ಧರ್ಮೇ ನಷ್ಟೇ ಕುಲಮ್  ಕೃತ್ಸ್ನಮ್ ಅಧರ್ಮಃ ಅಭಿಭವತಿ ಉತ- -ಕುಲ ಕುಸಿದಾಗ ಅಳಿವಿರದ ಕುಲ ಧರ್ಮಗಳು ಕಣ್ಮರೆಯಾಗುತ್ತವೆ. ಧರ್ಮ ಮರೆಯಾದರೆ ಇಡಿಯ ಕುಲವನ್ನು ಅಧರ್ಮ ಆಕ್ರಮಿಸಿಬಿಡುತ್ತದೆ.

ಯುದ್ಧದಿಂದಾಗುವ ದೊಡ್ಡ ಸಮಸ್ಯೆ ಎಂದರೆ "ಕುಲಧರ್ಮ" ನಾಶ.  ಈ ಶ್ಲೋಕದಲ್ಲಿ ಅರ್ಜುನ ಧರ್ಮದ ಕುರಿತಾದ ಕೆಲವು ಪದಗಳನ್ನು ಬಳಸುತ್ತಾನೆ. ಜಾತಿಧರ್ಮ, ಕುಲಧರ್ಮ, ಸನಾತನಧರ್ಮ ಇತ್ಯಾದಿ ಶಬ್ದಗಳು ಅರ್ಥವಾಗಬೇಕಾದರೆ ಮೊದಲು ನಾವು ಧರ್ಮ ಅಂದರೆ ಏನು? ಅದರಲ್ಲಿ ಎಷ್ಟು ವಿಧ? ಎನ್ನುವುದನ್ನು ತಿಳಿದುಕೊಳ್ಳಬೇಕು.
ಸಾಮಾನ್ಯವಾಗಿ ಜಾತಿಧರ್ಮ ಎಂದಾಗ ನಮಗೆ ಕಾಣುವುದು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಎನ್ನುವ ಜಾತಿ. ಇನ್ನು ಕುಲಧರ್ಮ ಎಂದಾಗ ಒಂದು ಮನೆತನದ ಮೂಲ ಕೆಲಸ-ಬಡಗಿ, ಕಮ್ಮಾರ ಚಮ್ಮಾರ ಇತ್ಯಾದಿ. ಆದರೆ ಇಲ್ಲಿ ಹೇಳುವುದು ಇದನ್ನಲ್ಲ. ಕುಲಧರ್ಮ ಎಂದರೆ ಸಮಾಜಧರ್ಮ(Religion of Society); ಜಾತಿಧರ್ಮ ಎಂದರೆ ಹುಟ್ಟುಗುಣದಿಂದ ಬಂದ ಮನುಷ್ಯನ ಸಹಜ ವೈಯಕ್ತಿಕ ಧರ್ಮ. ಈ ಎರಡು ಧರ್ಮದ ಆಚೆಗೆ ಸನಾತನಧರ್ಮ. ಅದು ಶಾಶ್ವತಧರ್ಮ. ಎಲ್ಲಾ ಕಾಲದಲ್ಲೂ, ಎಲ್ಲಾ ದೇಶದಲ್ಲೂ ಸನಾತನಧರ್ಮ ಬದಲಾಗದು. ವ್ಯಕ್ತಿಧರ್ಮ ವ್ಯಕ್ತಿಗಳ ನಡುವೆ ಬದಲಾಗುತ್ತದೆ. ಸಮಾಜಧರ್ಮ ಕಾಲಕ್ಕನುಗುಣವಾಗಿ, ದೇಶಕ್ಕನುಗುಣವಾಗಿ ಬದಲಾಗುತ್ತದೆ.
ಜಾತಿಧರ್ಮ ಎಂದರೆ ನಮ್ಮ ಸಹಜವಾದ ಹುಟ್ಟುಗುಣ (ಸ್ವಭಾವ). ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವವಿದೆ, ಆದರೆ ಪತ್ತೆ ಹಚ್ಚುವುದು ಕಷ್ಟ. ಏಕೆಂದರೆ ಅದರ ಮೇಲಿರುವ ಎರಡು ಆವರಣ. ಒಂದು ಅನುವಂಶೀಯ ಹಾಗು ಇನ್ನೊಂದು ಬೆಳೆದ ವಾತಾವರಣದ ಪ್ರಭಾವ. ಪರಿಸರದ ಶಿಶುವಾದ ಮಾನವ ಅನುವಂಶೀಯವಾಗಿ ಹರಿದುಬರುವ ಗುಣಗಳು ಹಾಗು ಪರಿಸರದ ಪ್ರಭಾವದಲ್ಲಿ ಬದುಕುತ್ತಾನೆ. ಇವು ನೈಜ ಸ್ವಭಾವವನ್ನು ಮುಚ್ಚಿಬಿಡುತ್ತವೆ.       
ಸಮಾಜಧರ್ಮ:  ನಾವು ಇನ್ನೊಬ್ಬರ ನೆರವಿಲ್ಲದೆ ಏಕಾಂಗಿಯಾಗಿ ಬದುಕುವವರಲ್ಲ. ಆದ್ದರಿಂದ ಸಂಘಟನೆಗೆ ಒಂದು ಪ್ರತ್ಯೇಕಧರ್ಮ. ವ್ಯಕ್ತಿ ಧರ್ಮವನ್ನು(ವೈಯಕ್ತಿಕ ಅಭಿರುಚಿಯನ್ನು) ಸಮಾಜಧರ್ಮಕ್ಕೊಸ್ಕರ ಬದಲಿಸಿಕೊಳ್ಳಬೇಕಾಗುತ್ತದೆ(ಉದಾಹರಣೆಗೆ: ಜೋರಾಗಿ ಮಾತನಾಡುವುದು ನನ್ನ ವೈಯಕ್ತಿಕಧರ್ಮ. ಆದರೆ ಆಸ್ಪತ್ರೆಯಲ್ಲಿ ನಿಶ್ಯಬ್ಧ ಕಾಪಾಡುವುದು ಸಮಾಜಧರ್ಮ). ಸಮಾಜಧರ್ಮ ಸಮಾಜ ಬದಲಾದಂತೆ, ಸಮಾಜಕ್ಕನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ ವಿವಾಹಧರ್ಮ. ಇಂತಹ ವಯಸ್ಸಿಗೆ ಮದುವೆಯಾಗಬೇಕು ಎನ್ನುವುದು ಕಾಲಕ್ಕನುಗುಣವಾಗಿ ಬದಲಾಗುತ್ತದೆ. ವೇದಕಾಲದಲ್ಲಿ ಹೆಣ್ಣು ಮಕ್ಕಳ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿತ್ತು. ಕಾರಣವೇನೆಂದರೆ ಆಗ ಗುರುಕುಲ ಪದ್ಧತಿ ಇದ್ದು ಗಂಡುಮಕ್ಕಳು ತಮ್ಮ ಎಂಟನೆ ವಯಸ್ಸಿನಿಂದ ಇಪ್ಪತ್ತನೆ ವಯಸ್ಸಿನ ತನಕ ಗುರುಕುಲದಲ್ಲಿ ವಿಧ್ಯಾಭ್ಯಾಸ ಮಾಡಿ ನಂತರ ಮನೆಗೆ ಹಿಂತಿರುಗುತ್ತಿದ್ದರು(ಇದನ್ನು ಸಮಾವರ್ತನ ಎನ್ನುತ್ತಾರೆ). ಹಾಗೆ ಕಲಿತು ಬಂದ ಹುಡುಗನಿಗೆ ಎಂಟು ವರ್ಷದ ಹೆಣ್ಣನ್ನು ಮದುವೆ ಮಾಡಿಸುತ್ತಿದ್ದರು. ಆಕೆ ಆತನ ಶಿಷ್ಯೆಯಾಗಿ ವಿಧ್ಯಾಭಾಸ ಕಲಿತು ವಯಸ್ಸಿಗೆ ಬಂದನಂತರ ಸಂಸಾರ ಮಾಡುತ್ತಿದ್ದಳು. ಇದರಿಂದ ಆಕೆಗೆ ಗಂಡನನ್ನು ಅರಿಯುವ, ಗಂಡನ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಬರುತ್ತಿತ್ತು. ಕ್ರಮೇಣ ಗುರುಕುಲ ಪದ್ಧತಿ ಕೊನೆಗೊಂಡಾಗ, ಈ ಬಾಲ್ಯ ವಿವಾಹ ಕೂಡಾ ಕೊನೆಗೊಂಡಿತು. ರಾಮಾಯಣ ಮಹಾಭಾರತ ಕಾಲದಲ್ಲಿ ಬಾಲ್ಯವಿವಾಹ ಇರಲಿಲ್ಲ. ನಂತರ ಇತ್ತೀಚೆಗೆ ಸುಮಾರು ಒಂದು ಸಾವಿರ ವರ್ಷದ ಹಿಂದೆ ವಿದೇಶಿ ಆಕ್ರಮಣವಾದಾಗ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದೇ ಬೇಗ ಮದುವೆ ಮಾಡಿಸಲಾರಂಭಿಸಿದರು. ಇದು ಸಾಮಾಜಿಕ ಒತ್ತಡದಿಂದ ಆದ ಬದಲಾವಣೆ. ಹೀಗೆ ಸಮಾಜಧರ್ಮ ಸಮಯಕ್ಕನುಗುಣವಾಗಿ, ಸಮಾಜಕ್ಕನುಗುಣವಾಗಿ ಬದಲಾಗುತ್ತದೆ.
ಸನಾತನಧರ್ಮ: ಇದು ಎಲ್ಲಾ ಕಾಲದಲ್ಲೂ, ಎಲ್ಲಾ ಸ್ಥಿತಿಯಲ್ಲೂ ಎಂದೂ ಬದಲಾಗದ ಧರ್ಮ. ವೇದ ಹೇಳುವುದು ಸನಾತನ ಧರ್ಮವನ್ನು.  ಉದಾಹರಣೆಗೆ: ಪ್ರಾಮಾಣಿಕವಾಗಿ ಬದುಕಬೇಕು, ಇನ್ನೊಬ್ಬರ ಸೊತ್ತನ್ನು ಕದಿಯಬಾರದು, ಸತ್ಯವನ್ನು ಹೇಳಬೇಕು, ದೇವರನ್ನು ನಂಬಿ ನಡೆಯಬೇಕು, ಇತ್ಯಾದಿ. ಇದು ಶಾಶ್ವತ ಧರ್ಮ. ಎಲ್ಲ ದೇಶ-ಕಾಲದಲ್ಲೂ ಬದಲಾಗದ ಧರ್ಮ.
ಸನಾತನ ಧರ್ಮಕ್ಕನುಗುಣವಾಗಿ ಸಾಮಾಜಿಕ ಧರ್ಮವನ್ನು ಹೊಂದಿಸಿಕೊಳ್ಳಬೇಕು. ಜಾತಿಧರ್ಮವನ್ನು  ಸಮಾಜಧರ್ಮಕ್ಕನುಗುಣವಾಗಿ ಹೊಂದಿಸಿಕೊಳ್ಳಬೇಕು. ಒಂದು ವಸ್ತುವಿನ ಅಸಾಧಾರಣ ಗುಣ(Quality) ಅದರ ಧರ್ಮ. ಉದಾಹರಣೆಗೆ: ನೋಡುವುದು ಕಣ್ಣಿನ ಧರ್ಮ, ಕೇಳುವುದು ಕಿವಿಯ ಧರ್ಮ. ಆದರೆ ಯಾವುದು ಧರ್ಮವೋ ಅದೇ ಅಧರ್ಮವಾಗಬಹುದು. ನೋಡಬಾರದ್ದನ್ನು ನೋಡುವುದು ಅಧರ್ಮ! ನೋಡುವುದಕ್ಕೆ ಒಂದು ಸೀಮೆ ಇದೆ. ಅದನ್ನು ದಾಟಿದಾಗ ಧರ್ಮವೇ ಅಧರ್ಮವಾಗುತ್ತದೆ.

ಇಲ್ಲಿ ಅರ್ಜುನ ಹೇಳುತ್ತಾನೆ: “ಕುಲಕ್ಷಯವಾದಾಗ ಸಮಾಜ ಧರ್ಮವನ್ನು ನಡೆಸಬೇಕಾದ ನ್ಯಾಯಾಂಗ ವ್ಯವಸ್ಥೆ ನಾಶವಾಗಿ ಸಮಾಜ ಧರ್ಮ ನಾಶವಾಗುತ್ತದೆ. ಸಾಮಾಜಿಕ ವ್ಯವಸ್ತೆ ಕುಸಿದು ಬೀಳುತ್ತದೆ. ಇಡೀ ಸಮಾಜ ಅಧರ್ಮದಲ್ಲಿ ಮುಳುಗುತ್ತದೆ. ಇದು ಯುದ್ಧ ಮಾಡುವುದರಿಂದ ಸಮಾಜಕ್ಕೆ ನಾವು ಕೊಡುವ ಕಾಣಿಕೆ” ಎಂದು. ಇದು ಅರ್ಜುನನ ವಾದ.