Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, September 10, 2011

Bhagavad Geeta Kannada Chapter-10 Shloka 24


ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್
ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ ೨೪

ಪುರೋಧಸಾಮ್  ಚ ಮುಖ್ಯಮ್  ಮಾಮ್  ವಿದ್ಧಿ ಪಾರ್ಥ ಬೃಹಸ್ಪತಿಮ್
ಸೇನಾನೀನಾಮ್ ಅಮ್ ಸ್ಕಂದಃ ಸರಸಾಮ್ ಅಸ್ಮಿ ಸಾಗರಃ -- ಓ ಪಾರ್ಥಾ, ಪುರೋಹಿತರಲ್ಲಿ ಹಿರಿಯನಾದ ಬೃಹಸ್ಪತಿ ನಾನು.[ಬೃಹತ್=ಹಿರಿಯರಿಗು, ಪತಿ=ಒಡೆಯನಾಗಿ ‘ಬೃಹಸ್ಪತಿ’ಯಲ್ಲಿದ್ದೇನೆ.] ದಳವಾಯಿಗಳಲ್ಲಿ ಸ್ಕಂದ ನಾನು.[ಅರಿಗಳ ಬೀರವನ್ನು ಹೀರಿ ‘ಸ್ಕಂದ’ ಎನ್ನಿಸಿ ನಾನು ಸೇನಾಪತಿ ‘ಸ್ಕಂದ’ನಲ್ಲಿದ್ದೇನೆ.] ನೀರಾಸರೆಗಳಲ್ಲಿ ಕಡಲು ನಾನು. [ಸಾ=ಸಾರವನ್ನು ಗರ=ಉಣ್ಣುವುದರಿಂದ, ‘ಸಾಗರ’ ಎನ್ನಿಸಿ ಕಡಲಿನಲ್ಲಿದ್ದೇನೆ.]

ನಾವು ಪೂಜಿಸುವ ಭಗವಂತನ ಪ್ರತೀಕವನ್ನು ಹೇಳಿದಮೇಲೆ ಎಲ್ಲವುದಕ್ಕೂ ಮುಖ್ಯವಾಗಿ ಬೇಕಾಗಿರುವ ಪುರೋಹಿತರ ಬಗ್ಗೆ ಇಲ್ಲಿ ಹೇಳಲಾಗಿದೆ. ಕೃಷ್ಣ ಹೇಳುತ್ತಾನೆ “ಪುರೋಹಿತರಲ್ಲಿ ನನ್ನ ಸನ್ನಿಧಾನವಿದೆ” ಎಂದು. ಋಗ್ವೇದದ ಪ್ರಥಮ ಸೂಕ್ತದಲ್ಲಿ ಹೇಳುವಂತೆ:  " ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾರಂ ರತ್ನ ಧಾತಮಂ |” ಇಲ್ಲಿ ಹೇಳುವ ‘ಹೋತಾ’ ಋಗ್ವೇದದ ಪುರೋಹಿತ. ಹಿಂದೆ ಒಂದು ಯಾಗ ಮಾಡುವಾಗ ಅಲ್ಲಿ ಹದಿನಾರು ಮಂದಿ ಪುರೋಹಿತರಿರುತ್ತಿದ್ದರು. ಋಗ್ವೇದಕ್ಕೆ: ‘ಹೋತಾ’ ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಮೈತ್ರಾವರುಣ, ಅಚ್ಛಾವಾಕ, ಗ್ರಾಮಸ್ತುತ್) ಸಹಾಯಕರು. ಯಜುರ್ವೇದಕ್ಕೆ: ಅಧ್ವರ್ಯು ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಪ್ರತಿಪ್ರಸ್ಥುತಾ, ನೇಷ್ಟಾ, ಉನ್ನೇತಾ) ಸಹಾಯಕರು. ಸಾಮವೇದಕ್ಕೆ: ಉದ್ಗಾತಾ ಪ್ರಧಾನ ಮತ್ತು ಆತನಿಗೆ ಮೂರು ಮಂದಿ(ಪ್ರಸ್ತೋತಾ, ಪ್ರತಿಹರ್ತಾ, ಸುಬ್ರಹ್ಮಣ್ಯ) ಸಹಾಯಕರು. ಈ ಎಲ್ಲರ ಮೇಲ್ವಿಚಾರಕರಾಗಿ, ಯಜ್ಞದಲ್ಲಿ ಯಾವುದೇ ಲೋಪದೋಷ ಬರದಂತೆ ನೋಡಿಕೊಳ್ಳುವವರು ಸರ್ವವೇದ ಪಾರಂಗತ ಪ್ರಧಾನ ಪುರೋಹಿತರು. ಅವರಿಗೆ ‘ಬ್ರಹ್ಮಾ’ ಎಂದು ಹೆಸರು. ಇವರಿಗೂ ಮೂರು ಮಂದಿ(ಬ್ರಾಹ್ಮಾಣಾಇಚ್ಛಂಸಿ, ಅಗ್ನೀಧ್ರ, ಪೋತಾ) ಸಹಾಯಕರು. ಹೀಗೆ ಭಗವಂತನ ವಿಶೇಷ ಸನ್ನಿಧಾನವಿರುವ ಹದಿನಾರು ಮಂದಿ ಪುರೋಹಿತರು ಸೇರಿ ಯಜ್ಞ ನೆರವೇರಿಸುತ್ತಿದ್ದರು. ಪುರೋಹಿತರ ಸ್ಥಾನ ಸಮಾಜದಲ್ಲಿ ಅತ್ಯಂತ ಹಿರಿದು. ಆದರೆ ಇಂದಿನ ಪುರೋಹಿತರು ಹಿಂದಿನಷ್ಟು ಸ್ಥಾನಮಾನವನ್ನು ಸಮಾಜದಲ್ಲಿ ಗಳಿಸುತ್ತಿಲ್ಲ. ಪುರೋಹಿತರು ನಮಗೆ ಹಿತವಾದುದ್ದನ್ನು ನಮ್ಮಿಂದ ಮೊದಲೇ ತಿಳಿದು ನಮ್ಮನ್ನು ತಿದ್ದಿ ಆ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುವವರು. ನಮ್ಮ ಅಭಿವೃದ್ಧಿಗೆ ಪೂರಕವಾಗಿರತಕ್ಕಂತಹ ಕ್ರಿಯೆಗಳನ್ನು ಮಾಡಿ ನಾವು ಅಭಿವೃದ್ಧಿಹೊಂದುವಂತೆ ಮುಂಜಾಗ್ರತೆ ಕೊಡುವ ಗುರುಸ್ಥಾನದಲ್ಲಿರುವ ಸಲಹೆಗಾರರು. ಇಡೀ ಸಮಾಜಕ್ಕೆ ಇವರು ಮಾರ್ಗದರ್ಶಕರು. ಪೌರೋಹಿತ್ಯ ಬಹಳ ಜವಾಬ್ದಾರಿಯುತ ಕೆಲಸ. ಒಂದು ಧಾರ್ಮಿಕ ನಡೆಯಲ್ಲಿ ಸಂಶಯಬಂದಾಗ ಸಮಾಜಕ್ಕೆ ಮಾರ್ಗದರ್ಶಿಯಾಗಿ ಕೆಲಸ ಮಾಡುವ ಪುರೋಹಿತನ ಜವಾಬ್ದಾರಿ ಬಹಳ ದೊಡ್ಡದು. ಮಂತ್ರ ಹೇಳುವಾಗ ಯಾವುದಾದರು ಲೋಪವಾದರೆ, ತಪ್ಪು ಮಾಡಿದರೆ, ಅದಕ್ಕೆ ಪುರೋಹಿತ ಕಾರಣನಾಗುತ್ತಾನೆ. ಆದ್ದರಿಂದ ಭಗವಂತನ ವಿಶೇಷ ಸನ್ನಿಧಾನ ಅಲ್ಲಿದೆ. ಭೂಮಿಯ ಎಲ್ಲಾ ಪುರೋಹಿತರಿಗಿಂತ ದೊಡ್ಡ ಪುರೋಹಿತರು ಇಬ್ಬರು. ದೈತ್ಯ ಪುರೋಹಿತರಾದ ಶುಕ್ರಾಚಾರ್ಯರು ಮತ್ತು ದೇವತೆಗಳ ಪುರೋಹಿತರಾದ ಬೃಹಸ್ಪತಿಯಾಚಾರ್ಯರು. ಬೃಹಸ್ಪತಿ ದೇವತಾ ತಾರತಮ್ಯದಲ್ಲಿ ಹತ್ತನೇ ಕಕ್ಷೆಯಲ್ಲಿದ್ದಾರೆ. ಇವರು ದೇವಲೋಕದಲ್ಲಿ ದೇವತೆಗಳಿಗೆ ಮತ್ತು ದೇವೇಂದ್ರನಿಗೆ ಸಲಹೆಗಾರರು. ದೇವತೆಗಳಿಗೆ  ಪುರೋಹಿತರಾಗಿರುವ ಇವರಲ್ಲಿ ಭಗವಂತನ ವಿಶೇಷ ಸನ್ನಿಧಾನವಿದೆ. ದೇವತಾ ತಾರತಮ್ಯದಲ್ಲಿ ಎಂಟನೇ ಕಕ್ಷೆಯಲ್ಲಿರುವ ಇಂದ್ರ ಹತ್ತನೇ ಕಕ್ಷೆಯಲ್ಲಿರುವ ಬೃಹಸ್ಪತಿಯಾಚಾರ್ಯರಿಗೆ ನಮಸ್ಕರಿಸಿ ಅವರ ಮಾರ್ಗದರ್ಶನದಂತೆ ನಡೆಯಲು ಅವರಲ್ಲಿರುವ ಭಗವಂತನ ಸನ್ನಿಧಾನವೇ ಕಾರಣ. ಇದನ್ನು ನೆನಪಿಸುವಂತೆ ಕೃಷ್ಣ ದೇವೇಂದ್ರನ ಅವತಾರವಾದ ಅರ್ಜುನನನ್ನು ಇಲ್ಲಿ ‘ಪಾರ್ಥಾ’ ಎಂದು ಸಂಬೋಧಿಸಿದ್ದಾನೆ.
ಇನ್ನೊಂದು ಮುಖದಲ್ಲಿ ನೋಡಿದರೆ ವೇದಗಳಲ್ಲಿ ಬೃಹಸ್ಪತಿ ಎಂದರೆ ಪ್ರಾಣದೇವರು. ಸರಸ್ವತಿ ಭಾರತಿಯರ ಪತಿ-ಬೃಹಸ್ಪತಿಗಳು. ಇವರೇ ಬ್ರಹ್ಮ-ವಾಯು. ಇವರು ಸಮಸ್ತ ದೇವತೆಗಳಿಗೂ ಪುರೋಹಿತರು. ಭಗವಂತ ಪ್ರಾಣದೇವರಲ್ಲಿ ಗಾನದ(ಕಂಠಸಿರಿ) ವಿಶೇಷ ವಿಭೂತಿಯಾಗಿ ನೆಲೆಸಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ‘ಬೃಹಸ್ಪತಿ’. ಬೃಹತ್ ಅಂದರೆ ಹಿರಿಯರು, ಪತಿ ಅಂದರೆ ಒಡೆಯ. ಬ್ರಹ್ಮಾದಿ ಸಕಲ ದೇವತೆಗಳಿಗೂ ಒಡೆಯನಾದ, ಪುರೋಹಿತರಿಗೂ ಪುರೋಹಿತ ಭಗವಂತ  ‘ಬೃಹಸ್ಪತಿ’.
ಅಧ್ಯಾತ್ಮ ಯೋಧರಾದ  ಪುರೋಹಿತರ ಬಗ್ಗೆ ಹೇಳಿದ ಕೃಷ್ಣ, ಈಗ ಯುದ್ಧದಲ್ಲಿ ವಿಜಯ ತಂದುಕೊಟ್ಟು ರಕ್ಷಣೆ ಮಾಡುವ ಯೋಧರಲ್ಲಿ ತನ್ನ ವಿಶೇಷ ವಿಭೂತಿಯನ್ನು ವಿವರಿಸುತ್ತಾನೆ. ದೇವತೆಗಳು ಬೃಹಸ್ಪತಿಯಾಚಾರ್ಯರ ಮಾರ್ಗದರ್ಶನದಲ್ಲಿ ಸಂಪಾದಿಸಿದ ಸಂಪತ್ತನ್ನು ಅಸುರರು ಅಪಹರಿಸಿದಾಗ, ಅವರ ವಿರುದ್ಧ ಹೋರಾಡಿ ಅದನ್ನು ಹಿಂದಕ್ಕೆ ತಂದುಕೊಟ್ಟವ ಸ್ಕಂದಃ. ಭಗವಂತ ‘ಸ್ಕಂದಃ ನಾಮಕನಾಗಿ ಸೇನಾನಿಯಲ್ಲಿ ನಿಂತು ನಡೆಸುತ್ತಾನೆ. ಸ್ಕಂದನಿಗೆ ಸೇನಾಧಿಪತಿಯಾಗಿ ತಾರಕಾಸುರನನ್ನು ಸಂಹಾರ ಮಾಡುವಂತಹ ಶಕ್ತಿ ಕೊಟ್ಟಂತಹ, ಅಂತರಂಗದ ಒಳಗೆ ಕುಳಿತ ಅಂತರ್ಯಾಮಿ ತತ್ವ-ಭಗವಂತ. ಸೇನಾನಿಯ ಬಗ್ಗೆ ಹೇಳುವಾಗ ಇಲ್ಲಿ ಸೇನಾನಿಯಾಗಿ ಕೀರ್ತಿ ಪಡೆದ ಕರ್ನಾಟಕದ ಹೆಮ್ಮೆಯ ಪುತ್ರ  ‘ಕಾರ್ಯಪ್ಪ’ ಅವರನ್ನು ನೆನೆಸಿಕೊಳ್ಳಬಹುದು. ಭಗವಂತನ ವಿಶೇಷ ಸನ್ನಿದಾನದಿಂದಾಗಿ ಸೇನಾಧಿಪತಿಯಲ್ಲಿ ಅಂಥಹ ವಿಶೇಷ ಶಕ್ತಿ ಬರುತ್ತದೆ.
ಇಲ್ಲಿ ಬಂದಿರುವ ಭಗವಂತನ ನಾಮ ಸ್ಕಂದಃ. ‘ಸ್ಕಂದಃ’ ಎಂದರೆ ಇಡೀ ಜಗತ್ತನ್ನು ಸಂಹಾರ ಮಾಡುವ ಶಕ್ತಿ. “ಅರಿಗಳ ಬೀರವನ್ನು ಹೀರಿ ‘ಸ್ಕಂದ’ ಎನ್ನಿಸಿ ನಾನು ಸೇನಾಪತಿ ‘ಸ್ಕಂದ’ನಲ್ಲಿದ್ದೇನೆ” ಎಂದಿದ್ದಾನೆ ಕೃಷ್ಣ.
ಮುಂದುವರಿದು ಕೃಷ್ಣ ಹೇಳುತ್ತಾನೆ: “ಸರಸಾಮಸ್ಮಿ ಸಾಗರಃ” ಎಂದು. ಭೂಮಿಯ ಮೇಲಿನ ಅಪಾರ ಸಂಪತ್ತಿನ ತಾಣ ಮೇರು ಪರ್ವತವಾದರೆ, ರಸದಿಂದ ಸಹಿತವಾದ, ಜಲಾಶಯಗಳಲ್ಲಿ ಬಹಳ ದೊಡ್ಡದಾಗಿರುವುದು ಸಾಗರ. “ಅದರಲ್ಲಿ ವಿಭೂತಿಯಾಗಿ ನಾನಿದ್ದೇನೆ” ಎನ್ನುತ್ತಾನೆ ಕೃಷ್ಣ. ಭೂಮಿಯ ಯಾವಭಾಗದಲ್ಲಿ ಬಾವಿ ತೋಡಿದರೂ ಸಿಹಿ ನೀರು. ಆದರೆ ಅಪರಂಪಾರವಾದ ಸಾಗರದ ನೀರು ಉಪ್ಪು. ಇದು ಏಕೆ ಎಂದು ನಮಗೆ ಗೊತ್ತಿಲ್ಲ. ರಷ್ಯದ ವಿಖ್ಯಾತ ಮನಃಶಾಸ್ತ್ರಜ್ಞ ವಿಲಿಕೋ^ಸ್ಕಿ(Velikovsky) ತನ್ನ ‘Worlds in Collision’ ಎನ್ನುವ ಪುಸ್ತಕದಲ್ಲಿ ಹೇಳುತ್ತಾರೆ: “ನಾವು ವಿಶ್ವದ ವಿಸ್ಮಯವನ್ನೆಲ್ಲ ಭೇದಿಸಿದ ಭ್ರಮೆಯಲ್ಲಿದ್ದೇವೆ, ಆದರೆ ನಮಗೆ  ಏನೂ ಗೊತ್ತಿಲ್ಲ” ಎಂದು. ಇಂದು ಸಮುದ್ರದ ನೀರು ಉಪ್ಪು ಏಕೆ, ಬಾವಿಯ ನೀರು ಸಿಹಿ ಏಕೆ ಎನ್ನುವುದೂ ನಮಗೆ ಗೊತ್ತಿಲ್ಲ. ಭಗವಂತ ಇತರ ಎಲ್ಲಾ ರಸವನ್ನು ಹಣ್ಣಿನಲ್ಲಿಟ್ಟ. ಆದರೆ ರಸದ-ರಸ ಲವಣರಸ ಉಪ್ಪನ್ನು ಮಾತ್ರ ಯಾವ ಹಣ್ಣಿನಲ್ಲೂ ಇಡದೆ-ಸಮುದ್ರದ ನೀರಿನಲ್ಲಿಟ್ಟ. ಈ ಸಮುದ್ರ ಒಂದು ವಿಸ್ಮಯ. ಭೂಮಿ ಮೇಲಿನ ಪ್ರಾಣಿ ವೈವಿದ್ಯಕ್ಕಿಂತ ಹೆಚ್ಚು ವೈವಿದ್ಯ ಸಮುದ್ರದಲ್ಲಿದೆ. ಭಗವಂತ ಸಮುದ್ರವನ್ನು ಸೃಷ್ಟಿ ಮಾಡಿ ಅದರಲ್ಲಿ ಸಾಗರಃ ಶಬ್ದವಾಚ್ಯನಾಗಿ ತುಂಬಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ಸಾಗರಃ. ಸಾರ+ಗರ-ಸಾಗರ. ಸಾರವಾಗಿರುವುದನ್ನು ಸ್ವೀಕರಿಸುವ ಭಗವಂತ ಸಾರಃ. ಎಲ್ಲಕ್ಕಿಂತ ಮಹತ್ತಾದ ಸಾರ-ಲವಣ, ಅದರಲ್ಲಿ ತುಂಬಿರುವ ಭಗವಂತ ಸಾಗರಃ. ಸಾರಂ ಗರತಿ ದದಾತೀತಿ ಸಾಗರಃ. ಜಗತ್ತಿಗೆ ಜೀವನದ ಸಾರ ಸರ್ವಸ್ವವನ್ನು ಕೊಡುವ ಭಗವಂತ ಸಾಗರಃ.                            

Tuesday, September 6, 2011

Bhagavad Gita Kannada Chapter-10 Shloka 23


ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್      
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್     ೨೩

ರುದ್ರಾಣಾಮ್  ಶಂಕರಃ ಚ ಅಸ್ಮಿ ವಿತ್ತ ಈಶಃ ಯಕ್ಷರಕ್ಷಸಾಮ್
ವಸೂನಾಮ್ ಪಾವಕಃ ಚ ಅಸ್ಮಿ ಮೇರುಃ ಶಿಖರಿಣಾಮ್ ಅಹಮ್—ರುದ್ರರಲ್ಲಿ [ಹನ್ನೊಂದು ಮಂದಿ] ಪ್ರಧಾನ ರುದ್ರ ನಾನು. [ಶಂ=ಸುಖವನ್ನು, ಕರ=ಕರುಣಿಸುವುದರಿಂದ ‘ಶಂಕರ’ ಎನ್ನಿಸಿ ಶಂಕರನಲ್ಲಿದ್ದೇನೆ.] ಯಕ್ಷ-ರಾಕ್ಷಸರ ಪಡೆಯ ಒಡೆಯ ಕುಬೇರ [ವಿತ್ತ=ಸಿರಿಗೆ, ಈಶ=ಒಡೆಯನಾದ್ದರಿಂದ ‘ವಿತ್ತೇಶ’ ಎನ್ನಿಸಿ ಕುಬೇರನಲ್ಲಿದ್ದು ಅವನಿಗೆ ಯಕ್ಷ-ರಾಕ್ಷಸರ ಒಡೆತನವನ್ನಿತ್ತವನು] ನಾನು. [ಎಂಟು ಮಂದಿ] ವಸುಗಳಲ್ಲಿ ಅಗ್ನಿದೇವ ನಾನು. [ಪಾವನಗೊಳಿಸುವುದರಿಂದ ‘ಪಾವಕ’ ಎನ್ನಿಸಿ ಅಗ್ನಿಯಲ್ಲಿದ್ದೇನೆ.] ಚೆಲುಕೋಡಿನ ಬೆಟ್ಟಗಳಲ್ಲಿ ಮೇರು ನಾನು. [ಈರು=ಬೇರೊಬ್ಬ ಪ್ರೇರಕ, ಮಾ=ಇರದ್ದರಿಂದ ‘ಮೇರು’ ಎನ್ನಿಸಿ ಮೇರು ಗಿರಿಯಲ್ಲಿದ್ದೇನೆ.]

ಮನಸ್ಸಿನಲ್ಲಿನ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಇಲ್ಲಿ ಮನಸ್ಸಿನ ಅಭಿಮಾನಿಯಾದ ಶಿವನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ: “ರುದ್ರರಲ್ಲಿ ಶಂಕರ ನಾನು” ಎಂದು. ರುದ್ರರು ಹನ್ನೊಂದು ಮಂದಿ. ರೈವತ, ಓಜ, ಭವ, ಭೀಮ, ವಾಮದೇವ, ಉಗ್ರ, ವೃಷಾಕಪಿ, ಅಜೈಕಪಾತ್, ಅಹಿರ್ಬುದ್ನಿ, ವಿರೂಪಾಕ್ಷ, ಮತ್ತು ಗಣಪ್ರಧಾನನಾದ ಮಹಾದೇವ. (ಈ ಏಕಾದಶ ರುದ್ರರಿಗೆ ಒಬ್ಬೊಬ್ಬರಿಗೂ ಅನೇಕ ಹೆಸರುಗಳುಂಟು. ಬೇರೆಬೇರೆ ಕಡೆ ಬೇರೆಬೇರೆ ಹೆಸರು ಉಲ್ಲೇಖ ಮಾಡಿದ್ದಾರೆ). ನಮ್ಮ ಮನಸ್ಸನ್ನು ನಿಯಂತ್ರಿಸುವ ‘ರುದ್ರ’-ಮಹಾದೇವ ಅಥವಾ ಶಿವ. ಆತನಿಗೆ ‘ಶಂಕರ’  ಎಂದು ಹೆಸರು. ರುದ್ರ ಎಂದರೆ ರೋದಯತಿ ಇತಿ ರುದ್ರಃ-ದುಃಖ ಕೊಡುವವನು ಎನ್ನುವ ಒಂದು ಅರ್ಥ. ಭಗವಂತ ದುಃಖ ಕೊಡುವುದು ಕೇವಲ ದುಷ್ಟರಿಗೆ. ಇನ್ನೊಂದು ಅರ್ಥದಲ್ಲಿ ನೋಡಿದರೆ- ರುಜಂ ದ್ರಾವಯತಿ ಇತಿ ರುದ್ರಃ.  ಅಂದರೆ ನಮ್ಮಲ್ಲಿರುವ ರೋಗವನ್ನು ಪರಿಹಾರ ಮಾಡಿ ಸುಖಕೊಡುವವನು. ಮೂಲತಃ ರೋಗ ಮಾನಸಿಕ. ನಮ್ಮ ಮನಸ್ಸು ದೃಢವಾಗಿದ್ದರೆ ಕಾಯಿಲೆ ಬರುವುದಿಲ್ಲ. ಒಂದು ವೇಳೆ ಕಾಯಿಲೆ ಬಂದರೆ ಅದನ್ನು ಎದುರಿಸಬಲ್ಲೆ ಎನ್ನುವ ದೃಢಮನಸ್ಸು ಇದ್ದರೆ-ಮನಸ್ಸೇ ಆ ರೋಗವನ್ನು ಗುಣಪಡಿಸಬಲ್ಲದು.
‘ಶಂಕರ’ ಎಂದರೆ ಸುಖವನ್ನು, ಸಂತೋಷವನ್ನು  ಕೊಡುವವ. ಆರೋಗ್ಯವಂತ ದೇಹವೇ ಜೀವನದಲ್ಲಿ ಬಹಳ ದೊಡ್ಡ ಸುಖ. ಯಾವುದೇ ಪುಣ್ಯ ಕರ್ಮ ಸಾಧನೆ ಮಾಡಲು  ಆರೋಗ್ಯವಂತ ದೇಹ ಬೇಕು. ‘ರುದ್ರ’ ಶರೀರಪುರುಷ.  ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಕಾರಣ. ನಮ್ಮ ಮನಸ್ಸಿನಲ್ಲಿ ಕೂತು ಮಾನಸಿಕ ತುಮುಲವನ್ನು ಹೋಗಲಾಡಿಸಿ, ಆರೋಗ್ಯವಂತ ಶರೀರ ಕೊಟ್ಟು, ಆನಂದ ಕೊಡುವವ ರುದ್ರ. ಋಗ್ವೇದದ ಶಿವಸ್ತುತಿಯಲ್ಲಿ  ಶಿವನನ್ನು “ಭಿಶಕ್ತಮಾಂ  ತ್ವ ಭಿಶಜಮ್” ಎಂದು ಸ್ತುತಿಸಿದ್ದಾರೆ. ಅಂದರೆ “ನೀನು ವೈದ್ಯರ ವೈದ್ಯ” ಎಂದರ್ಥ. ಈ ಕಾರಣಕ್ಕಾಗಿ ಶಿವನನ್ನು ‘ವೈದ್ಯನಾಥ’ ಎಂದೂ ಕರೆಯುತ್ತಾರೆ.
ರುದ್ರನನ್ನು ಮಹಾದೇವ ಎಂದು ಕರೆಯಲು ಅನೇಕ ಕಾರಣವಿದೆ. ಇಲ್ಲಿ ‘ದೇವ’ ಅಂದರೆ ಇಂದ್ರಿಯ.(ದೇವತೀತಿ ದೇವಂ ಇಂದ್ರಿಯಂ). ಶಿವ ಇಂದ್ರಿಯಾಭಿಮಾನಿ ದೇವತೆಗಳಲ್ಲಿ  ಎಲ್ಲರಿಗಿಂತ ದೊಡ್ಡವ. ದೇವತಾ ತಾರತಮ್ಯದಲ್ಲಿ ನೋಡಿದರೆ-ಹನ್ನೊಂದು ಮಂದಿ ರುದ್ರರಲ್ಲಿ ಹತ್ತುಮಂದಿ ರುದ್ರರು ಹದಿನೆಂಟನೇ ಕಕ್ಷೆಯಲ್ಲಿದ್ದರೆ, ಶಿವ ಅದಕ್ಕಿಂತ ಬಹಳ ಎತ್ತರದಲ್ಲಿ ಐದನೇ ಕಕ್ಷೆಯಲ್ಲಿದ್ದಾನೆ. ಶಿವ ಭಗವಂತನ ಸಂಹಾರ ಕರ್ಮದಲ್ಲಿ ವಾಯುದೇವರೊಂದಿಗೆ ಅಂಗಭೂತನಾಗಿ ಸಹಾಯಕಾರಿಯಾಗಿರುವ ಬಹಳ ದೊಡ್ಡ ಶಕ್ತಿ. ಭಗವಂತ ‘ಶಂಕರ’ ನಾಮಕನಾಗಿ ಶಿವನಲ್ಲಿ ನಿಂತಿದ್ದಾನೆ. ನಮ್ಮನ್ನು ಭಗವಂತನ ಉಪಾಸನೆಯ ದಾರಿಯಲ್ಲಿ ಕರೆದೊಯ್ದು, ಭಗವತ್ ಸಾಕ್ಷಾತ್ಕಾರಕ್ಕೆ ಮನಸ್ಸನ್ನು ಅಣಿಮಾಡುವವರೇ ರುದ್ರದೇವರು. ಆದ್ದರಿಂದ ಇದು ಭಗವಂತನ ಬಹಳ ದೊಡ್ಡ ವಿಭೂತಿ.
ಇಲ್ಲಿ ಬಂದಿರುವ ಭಗವಂತನ ನಾಮ ‘ಶಂಕರಃ’. ‘ಶಂ’ ಎಂದರೆ ಸುಖ, ‘ಕರ’ ಎಂದರೆ ಕರುಣಿಸುವವ. ಸ್ವಯಂ ಆನಂದ ಸ್ವರೂಪನಾಗಿದ್ದು, ದುಃಖಮಯವಾದ ಸಂಸಾರವನ್ನು ಖಂಡಿಸಿ- ನಮಗೆ ಮುಕ್ತಿ ಕೊಡುವ ಭಗವಂತ ‘ಶಂಕರಃ’.
ನಮ್ಮ ಅಂತರಂಗದ ಸಂಪತ್ತಿನ ಅಭಿಮಾನಿಯಾದ ಶಿವನ ಬಗ್ಗೆ ಹೇಳಿದ ಕೃಷ್ಣ, ಮುಂದೆ ನಮಗೆ  ಬಾಹ್ಯವಿತ್ತವನ್ನು ಕೊಡುವ ಕುಬೇರನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ನಮ್ಮ ದೇಹದ ಅಭಿಮಾನಿ ಮತ್ತು ಬಾಹ್ಯವಿತ್ತದ ಅಭಿಮಾನಿ ಕುಬೇರ. ಆತನ ಆಡಳಿತದಲ್ಲಿರುವವರು ಯಕ್ಷರು ಮತ್ತು ರಾಕ್ಷಸರು. ಯಕ್ಷರು ಎಂದರೆ ನರ ಮಾಂಸವನ್ನು ನಿರ್ದಯವಾಗಿ ಭಕ್ಷಣೆ ಮಾಡುವವರು. ರಾಕ್ಷಸರು ಯಕ್ಷರಿಗಿಂತ ಉತ್ತಮರು. ಆದರೆ ಇವರೂ ಕ್ರೂರಿಗಳು. ಇವರಿಂದ ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು.
ಇಲ್ಲಿ ಬಂದಿರುವ ಭಗವಂತನ ನಾಮ ‘ವಿತ್ತೇಶಃ’. ವಿತ್ತ ಎಂದರೆ ಸಿರಿ, ಈಶ ಎಂದರೆ ಒಡೆಯ. ಭಗವಂತ ‘ವಿತ್ತೇಶ’ ಎನ್ನಿಸಿ ಕುಬೇರನಲ್ಲಿದ್ದು, ಅವನಿಗೆ ಯಕ್ಷ-ರಾಕ್ಷಸರ ಒಡೆತನವನ್ನು ಕೊಟ್ಟ ಮತ್ತು ಆತನನ್ನು ಬಾಹ್ಯ ಸಂಪತ್ತಿನ ಒಡೆಯನನ್ನಾಗಿ ಮಾಡಿದ. ಇದು ಕುಬೇರನಲ್ಲಿ ಭಗವಂತನ ವಿಶೇಷ ವಿಭೂತಿ.
ವೇದದಲ್ಲಿ ಬರುವ ದೇವತಾಗಣವನ್ನು ಪರಿಗಣನೆ ಮಾಡುವಾಗ, ಆದಿತ್ಯ-ವಸು-ರುದ್ರಗಣ ಮೂರು ಜೊತೆಜೊತೆಯಾಗಿ ಬರುತ್ತವೆ. ಮೂರು ಹೊತ್ತಿನ ಸವನದಲ್ಲಿ ಭಗವಂತನಿಗೆ ಆಹುತಿ ಕೊಡುವುದು ಕೂಡ ಈ ದೇವತಾಗಣದಲ್ಲಿರುವ ಭಗವಂತನಿಗೆ. ಅಷ್ಟವಸುಗಳಲ್ಲಿ ಇರತಕ್ಕ ಭಗವಂತನಿಗೆ ಪ್ರಾತಃಕಾಲದಲ್ಲಿ ಅಷ್ಟಾಕ್ಷರ ಮಂತ್ರ ಗಾಯತ್ರಿ ಮೂಲಕ ಆಹುತಿ ಕೊಡುತ್ತಾರೆ. ಮದ್ಯಾಹ್ನದ ಸವನ ಏಕಾದಶ ರುದ್ರರಿಗೆ ಸಂಬಂಧಪಟ್ಟಿದ್ದು. ಇದಕ್ಕಾಗಿ ಇಲ್ಲಿ ಹನ್ನೊಂದು ಅಕ್ಷರದ ‘ತ್ರಿಷ್ಟುಪ್’ ಬಳಸುತ್ತಾರೆ. ಸಂಜೆಯ ಸವನ ದ್ವಾದಶಾದಿತ್ಯರಿಗೆ ಸಂಬಂಧಪಟ್ಟಿದ್ದು. ಅದಕ್ಕಾಗಿ ಅಲ್ಲಿ ದ್ವಾದಶಾಕ್ಷರದ ‘ಜಗತಿ’ಯನ್ನು ಬಳಸುತ್ತಾರೆ. ಕೃಷ್ಣ ಆದಿತ್ಯ ಮತ್ತು ರುದ್ರರ ಬಗ್ಗೆ ಹೇಳಿದ. ಈಗ ಇಲ್ಲಿ ವಸುಗಳ ಬಗ್ಗೆ ಹೇಳುತ್ತಾ ಹೇಳುತ್ತಾನೆ:  “ವಸುಗಳಲ್ಲಿ ‘ಅಗ್ನಿ’ ನಾನು” ಎಂದು. ವಸುಗಳು ಎಂಟು ಮಂದಿ. ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ  ದೋಷ, ವಸ್ತು ಮತ್ತು ವಿಭಾವಸು. ಇವರಿಗೆ ಇನ್ನೂ ಅನೇಕ ಹೆಸರಿದೆ. ಐದನೆಯವನಾದ ಅಗ್ನಿಗೆ ವೈಶ್ವಾನರ, ವಹ್ನಿ, ಜಾತವೇದ, ಹುತಾಶನ, ಪಾವಕ, ಅನಲ, ದಹನ ಇತ್ಯಾದಿ ಹೆಸರಿದೆ. ಇತರ ವಸುಗಳೆಲ್ಲರೂ ದೇವತಾ ತಾರತಮ್ಯದಲ್ಲಿ ಹದಿನೆಂಟನೇ ಕಕ್ಷೆಯಲ್ಲಿದ್ದರೆ, ‘ಅಗ್ನಿ’ ಅವರಿಗಿಂತ ಎತ್ತರದಲ್ಲಿ ಹದಿನೈದನೆ ಕಕ್ಷೆಯಲ್ಲಿದ್ದಾನೆ. ಭೂ ಸ್ತರದಲ್ಲಿ ಭಗವಂತನನ್ನು ಆರಾಧನೆ ಮಾಡುವ ಶ್ರೇಷ್ಠ ಪ್ರತೀಕ ಅಗ್ನಿ. ಇಡೀ ಜಗತ್ತನ್ನು ಪಾವನಗೊಳಿಸುವ ಶಕ್ತಿಯಾದ ಭಗವಂತ ಅಗ್ನಿಯಲ್ಲಿ ‘ಪಾವಕಃ’ ನಾಮಕನಾಗಿ ಕೂತು ಆತನಿಗೆ ಈ ಶ್ರೇಷ್ಠ ಸ್ಥಾನವನ್ನು ಕೊಟ್ಟ.
ಅಗ್ನಿಯಲ್ಲಿ ಭಗವಂತನ ತೇಜಸ್ಸಿದೆ. ತೇಜಸ್ಸಿನಲ್ಲಿ ಬೆಳಕಿನ ಶಕ್ತಿಯಿದೆ, ಶಾಖ ಕೊಡುವ ಶಕ್ತಿಯಿದೆ  ಹಾಗು ಸುಡುವ ಶಕ್ತಿಯೂ ಇದೆ. ಇಷ್ಟೇ ಅಲ್ಲದೆ ಈ ತೇಜಸ್ಸಿನಲ್ಲಿ ಪಚನ ಶಕ್ತಿಯಿದೆ. ಅಗ್ನಿಯ ಸಂಪರ್ಕಕ್ಕೆ ಬರುವ ವಸ್ತು ಪಾವನವಾಗುತ್ತದೆ. ಅಗ್ನಿಯಲ್ಲಿದ್ದು ಅಗ್ನಿಗೆ ಇಂತಹ ತೇಜಸ್ಸನ್ನು ಕೊಟ್ಟ ಭಗವಂತ ಜಗತ್ತನ್ನು ಪಾವನಗೊಳಿಸುವ ಪಾವಕಃ. ಎಲ್ಲರನ್ನು ಪಾವನಗೊಳಿಸುವ ಭಗವಂತ ದೇವತೆಗಳಿಗೂ ಕೂಡಾ ಅವಕ(ರಕ್ಷಕ).
ವಿತ್ತೇಶ ಕುಬೇರನ ಬಗ್ಗೆ ಹೇಳಿದ ಕೃಷ್ಣ ಮುಂದೆ ಭೂಮಿಯಲ್ಲಿ ಸಂಪತ್ತಿನ ನೆಲೆಯಾದ ಮೇರು ಪರ್ವತದಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಮೇರು ಪರ್ವತವನ್ನು ಹೇಮಾದ್ರಿ(ಚಿನ್ನದ ಬೆಟ್ಟ) ಎಂದು ಕರೆಯುತ್ತಾರೆ. ಅದು ವಸುಗಳ ನೆಲೆ. ಕೃಷ್ಣ ಹೇಳುತ್ತಾನೆ: “ಬೆಟ್ಟಗಳಲ್ಲಿ ಮೇರು ನಾನು” ಎಂದು. ಹಿಮಾಲಯದಲ್ಲಿನ ಪರ್ವತ ಶ್ರೇಣಿಯಲ್ಲಿರುವ, ಮನುಷ್ಯ ಮಾತ್ರಕ್ಕೆ ಗೊತ್ತಿರದ ಸಂಪತ್ತಿನ ಬಗ್ಗೆ ಸ್ವಾಮಿರಾಮ್ ಅವರು “ಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್ “ ಎನ್ನುವ ಪುಸ್ತಕದಲ್ಲಿ ತಮ್ಮ ಸ್ವತಃ ಅನುಭವವನ್ನು ಹಂಚಿಕೊಂಡಿದ್ದಾರೆ. ಯುದ್ಧದಲ್ಲಿ ಪೂರ್ಣ ಸಂಪತ್ತು ನಾಶವಾದಾಗ ಧರ್ಮರಾಯ ಬೆಟ್ಟಗಳ ಸಾಲಿನಲ್ಲಿ ಹುದುಗಿಟ್ಟ ಸಂಪತ್ತನ್ನು ತರಿಸಿ ಯಜ್ಞ ಮಾಡಿದ ಎಂದು ಮಹಾಭಾರತದಲ್ಲಿ ಹೇಳುತ್ತಾರೆ. ಈ ವಿಚಾರ ಹಿಮಾಲಯದಲ್ಲಿ ತಪಸ್ಸು ಮಾಡುವ ಕೆಲವು ಯೋಗಿಗಳಿಗೂ ತಿಳಿದಿದೆ. ಇಂಥಹ ಸಂಪತ್ತಿನ ನೆಲೆ ಮೇರು.
ಇಲ್ಲಿ ಬಂದಿರುವ ಭಗವಂತನ ನಾಮ ‘ಮೇರುಃ’.  ಮಾ+ಈರು-ಮೇರು. ಸಮಸ್ತ ಚೈತನ್ಯದಲ್ಲಿ ಸರ್ವ ಶ್ರೇಷ್ಠಳಾದ ತಾಯಿ ಮಹಾಲಕ್ಷ್ಮಿಗೂ ಸಹ ಪ್ರೇರಕನಾಗಿ ನಿಂತಿರುವವ ಭಗವಂತ. ಇಂತಹ ಭಗವಂತನಿಗೆ ಇನ್ನೊಬ್ಬ ಪ್ರೆರಕನಿಲ್ಲ. ಆದ್ದರಿಂದ  “ಮೇರುಃ” ಭಗವಂತನ ಅನ್ವರ್ಥನಾಮ.                                 

Sunday, September 4, 2011

Bhagavad Gita Kannada Chapter-10 Shloka 22


ವೇದಾನಾಂ ಸಾಮವೇದೋSಸ್ಮಿ ದೇವಾನಾಮಸ್ಮಿ ವಾಸವಃ
ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ  ॥೨೨॥

ವೇದಾನಾಮ್  ಸಾಮ ವೇದಃ ಅಸ್ಮಿ ದೇವಾನಾಮ್ ಅಸ್ಮಿ ವಾಸವಃ
ಇಂದ್ರಿಯಾಣಾಮ್  ಮನಃ ಚ ಅಸ್ಮಿ ಭೂತಾನಾಮ್ ಅಸ್ಮಿ ಚೇತನಾ –ವೇದಗಳಲ್ಲಿ ಸಾಮವೇದ ನಾನು. [ಸಾಮ= ಎಲ್ಲೆಡೆಯು ಸಮನಾಗಿದ್ದು, ವೇದ= ಜ್ಞಾನರೂಪನಾದ್ದರಿಂದ ‘ಸಾಮವೇದ’ ಎನ್ನಿಸಿ ಸಾಮವೇದದಲ್ಲಿದ್ದೇನೆ.] ದೇವತೆಗಳಲ್ಲಿ ಇಂದ್ರ ನಾನು. [ವಾಸ= ಎಲ್ಲ ನೆಲೆಗಳಲ್ಲು, ವ=ಇರುವವನಾಗಿ- ‘ವಾಸವ’ ಎನ್ನಿಸಿ ದೇವೇಂದ್ರನಲ್ಲಿದ್ದೇನೆ.] ಇಂದ್ರಿಯಗಳಲ್ಲಿ ಮನಸ್ಸು ನಾನು. [ಅರಿವು ನೀಡುವುದರಿಂದ ‘ಮನಸ್’ ಎನ್ನಿಸಿ ಮನಸ್ಸಿನಲ್ಲಿದ್ದೇನೆ.] ಜೀವಿಗಳ ಚೈತನ್ಯ ನಾನು. [ಚೇತಸ್ =ಎಲ್ಲ ಜೀವಿಗಳ ನೆನಪಿನ ಗಂಟನ್ನು, ನಾ=ಬಿಡಿಸುವುದರಿಂದ ‘ಚೇತನಾ’ ಎನ್ನಿಸಿ ಚೇತನಾಶಕ್ತಿಯಲ್ಲಿದ್ದೇನೆ.]      

ಆಕಾಶದಲ್ಲಿ-ಸೂರ್ಯ, ಚಂದ್ರ, ನಕ್ಷತ್ರ, ಗಾಳಿಯಲ್ಲಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಇಲ್ಲಿ ಆಕಾಶದ ವಿಶೇಷ ಗುಣವಾದ ಶಬ್ದದ ಬಗ್ಗೆ ಹೇಳುತ್ತಾನೆ. ಶಬ್ದದ ವಿಭೂತಿ-ವೇದ. ವೇದದಲ್ಲಿ ವಿಶಿಷ್ಟ-ಸಾಮವೇದ. ವೇದಗಳೆಲ್ಲವೂ ಅಪೂರ್ವವಾಗಿದ್ದರೂ ಕೂಡಾ, ಸಾಮವನ್ನು ಏಕೆ ವಿಶೇಷವಾಗಿ ಹೇಳಿದ್ದಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ವೇದದಲ್ಲಿ ತಾರತಮ್ಯವಿಲ್ಲ. ಆದರೆ ವೇದಾಭಿಮಾನಿಗಳಲ್ಲಿ ತಾರತಮ್ಯವಿದೆ. ಸಾಮವೇದದ ಅಭಿಮಾನಿ ಪ್ರಾಣದೇವರು. ಶಾಸ್ತ್ರಕಾರರು ಹೇಳುವಂತೆ ಸಾಮಗಾನವನ್ನು ಅತ್ಯಂತ ಮಧುರವಾಗಿ ಹಾಡುವವರು ಪ್ರಾಣದೇವರು. ಪ್ರಾಣದೇವರ ಹಾಡು 'ಸಾಮಗಾನ' ಭಗವಂತನಿಗೆ ಅತೀ ಇಷ್ಟ. ಸಾಮವೇದದ ವೈಶಿಷ್ಟ್ಯ ‘ನಾದ’. ಒಂದು ಶಬ್ದವನ್ನು ಹೇಗೆ ಒಡೆದರೂ, ಅದನ್ನು ಹೇಗೆ ಪದಪಾಠ ಮಾಡಿದರೂ, ಅದರಲ್ಲಿ ಯಾವ ನಾದ ತುಂಬಿದರೂ, ಅದು ಭಗವಂತನ ನಾಮದೇಯವಾಗುತ್ತದೆ ಎನ್ನುವ ಪ್ರಯೋಗ ಸಾಮವೇದ. ಋಗ್ವೇದ ಮತ್ತು ಯಜುರ್ವೇದದಲ್ಲಿ ಮಂತ್ರಗಳ ಹಾಗು ಶಬ್ದಗಳ ಮುಖೇನ ಭಗವಂತನ ಸ್ತುತಿಯಾದರೆ, ಸಾಮವೇದದಲ್ಲಿ ಶಬ್ದದ ಜೊತೆಗೆ ನಾದವನ್ನು ಭಗವಂತನಲ್ಲಿ ಸಮನ್ವಯಗೊಳಿಸುವ ಅಪೂರ್ವ ಗುಣಧರ್ಮವಿದೆ(Exclusive quality). ಶಬ್ದಗಳ ಹಿಂದಿನ ನಾದದಿಂದ ಭಗವಂತನನ್ನು ಕಾಣುವ ನಾದೋಪಾಸನೆ ಇರುವ ವೇದ ಸಾಮವೇದವಾದ್ದರಿಂದ-ಭಗವಂತ ಸಾಮದಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಆದ್ದರಿಂದ 'ಸಾಮ' ಭಗವಂತನ ಅನ್ವರ್ಥ ನಾಮ.  ಎಲ್ಲ ಶಬ್ದಗಳು ಭಗವದ್ ಪರ ಎನ್ನುವುದನ್ನು ಋಗ್ವೇದ ತೋರಿಸಿದರೆ, ಶಬ್ದವಷ್ಟೇ ಅಲ್ಲ, ಎಲ್ಲ ಘೋಷಗಳೂ ಭಗವಂತನನ್ನು ಹೇಳುತ್ತವೆ ಎನ್ನುವುದನ್ನು ಸಾಮವೇದ ತೋರಿಸುತ್ತದೆ.     
ಭಗವಂತ ‘ಸಾಮಃ’  ಮತ್ತು ಆತ 'ವೇದಃ'. ಇಲ್ಲಿ ‘ಸಾಮಃ’ ಎಂದರೆ ಎಲ್ಲೆಡೆಯು ಸಮನಾಗಿರುವವ ಎಂದರ್ಥ. ‘ವೇದಃ’ ಎಂದರೆ ಜ್ಞಾನ ರೂಪ. ಭಗವಂತ ನಾದವಾಗಿ ಸಾಮವೇದದಲ್ಲಿ ತುಂಬಿ ಅದನ್ನು ವಿಭೂತಿಯಾಗಿ ಮಾಡಿದ.
ವೇದದ ನಂತರ ವೇದಪ್ರತಿಪಾದ್ಯ ದೇವತೆಗಳು. ದೇವತೆಗಳಲ್ಲಿ ಮುಖ್ಯವಾಗಿ ತತ್ವಾಭಿಮಾನಿ ದೇವತೆಗಳು. ಭಗವಂತನ ಅಧಿಷ್ಠಾನವಾಗಿ ಇಂದ್ರಿಯಯಗಳನ್ನು ನಿಯಮಿಸುವ ದೇವತೆಗಳಲ್ಲಿ ಮುಖ್ಯನಾದವ ‘ವಾಸವ’(ಇಂದ್ರ). ಈತ ಬಾಹ್ಯೇಂದ್ರಿಯಾಭಿಮಾನಿ ದೇವತೆಗಳಲ್ಲಿ ಶ್ರೇಷ್ಠ. ಈತ ಐದು ಜ್ಞಾನೇಂದ್ರಿಯ(ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ) ಮತ್ತು ಐದು ಕರ್ಮೇಂದ್ರಿಯ(ಕೈ, ಕಾಲು, ಬಾಯಿ, ಪಾಯು, ಉಪಸ್ಥ)ಗಳಲ್ಲಿ ಅತ್ಯಂತ ವಿಶಿಷ್ಟವಾದ ಕೈ(ಹಸ್ತ)ಯ ಅಭಿಮಾನಿ ದೇವತೆ. ಇತರ ಎಲ್ಲಾ ಇಂದ್ರಿಯಗಳು ಬೇರೆ ಪ್ರಾಣಿಗಳಿಗೂ ಇದೆ. ಆದರೆ ಕುಸುರಿ ಕೆಲಸ, ನಾಟ್ಯಭಂಗಿ, ಶಿಲ್ಪ ಇತ್ಯಾದಿ ಅತ್ಯದ್ಭುತ ಹಸ್ತಕೌಶಲ ಭಗವಂತ  ಕೇವಲ ಮಾನವರಿಗೆ ಮಾತ್ರ ಕೊಟ್ಟಿದ್ದಾನೆ. ಮಹಾಭಾರತದಲ್ಲಿ ನಮ್ಮ ಕೈಯ ವಿಶಿಷ್ಟತೆಯನ್ನು ಹೇಳುವ ಒಂದು ಕಥೆ ಇದೆ. ಒಬ್ಬ ನಿರುದ್ಯೋಗಿ ವಿದ್ವಾಂಸ ತನ್ನ ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಿ ನಿಂತಿರುವಾಗ, ಒಂದು ನರಿ ಆತನಲ್ಲಿ ಹೇಳುತ್ತದೆ: “ಅಲ್ಲಯ್ಯ, ನಿನಗೆ ದೇವರು ದುಡಿಯಲು ಎರಡು ಕೈ ಕೊಟ್ಟಿದ್ದಾನೆ. ಆದರೆ ನಮಗೆ ಸಿಕ್ಕಿದ ಆಹಾರವನ್ನು ತಿನ್ನಲು ಕೂಡ  ಕೈ ಇಲ್ಲ. ಮೈಯಲ್ಲಿ ಕುಳಿತು ರಕ್ತ ಹೀರುವ ನೊಣವನ್ನು ಓಡಿಸಲು ಕೈ ಇಲ್ಲ. ಆದರೂ ನಾವು ಬದುಕುತ್ತೇವೆ.  ನಿಮಗೆ ಇಂತಹ ಅಮೂಲ್ಯ ಕೈ ಇದ್ದರೂ ನೀವು ಸಾಯಲು ಮುಂದಾಗುತ್ತಿದ್ದೀರಲ್ಲ-ನೀವೆಂಥಾ ಬುದ್ಧಿಗೇಡಿಗಳು” ಎಂದು. ಈ ಮಾತನ್ನು ಕೇಳಿ ಆ ವಿದ್ವಾಂಸ ಮರಳಿ ಬರುತ್ತಾನೆ. ಈ ಕಥೆಯಲ್ಲಿ ಕೈಯ ಮಹತ್ವವನ್ನು ತಿಳಿ ಹೇಳಿದ್ದಾರೆ. ಕೈಯ ಅಭಿಮಾನಿಯಾದ ಆ ‘ವಾಸವ’ನಲ್ಲಿ ಭಗವಂತ ವಾಸ ಮಾಡಿ, ಇತರ ಎಲ್ಲಾ ತತ್ವಾಭಿಮಾನಿ ದೇವತೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ತುಂಬಿದ. ಇಂತಹ ‘ವಾಸವ’ ನಾಮಕ ಭಗವಂತ ವಿಭೂತಿಯಾಗಿ ಇಂದ್ರನಲ್ಲಿ ತುಂಬಿರುವುದರಿಂದ ಇಂದ್ರನನ್ನು ‘ವಾಸವ’ ಎಂದು ಕರೆಯುತ್ತಾರೆ.
ಇಲ್ಲಿ ಬಂದಿರುವ ಭಗವಂತನ ನಾಮ ‘ವಾಸವಃ’. ವಾಸವಎಂದರೆ ವಸುಗಳ ಸಮುದಾಯ. ವಸುಗಳೆಂದರೆ-"ದೇವತೆಗಳ ಸಮುದಾಯ". ಬ್ರಹ್ಮಾಂಡದಲ್ಲಿದ್ದು-ಬ್ರಹ್ಮಾಂಡವನ್ನು, ಪಿಂಡಾಂಡದಲ್ಲಿದ್ದು-ಪಿಂಡಾಂಡವನ್ನು ನಿಯಂತ್ರಿಸುವ ತತ್ವಾಭಿಮಾನಿ ದೇವತೆಗಳ ನಿಯಾಮಕನಾದ ಭಗವಂತ ವಾಸವಃ. ಎಲ್ಲ ನೆಲೆಗಳಲ್ಲು, ಇರುವವನಾಗಿ ಭಗವಂತ ‘ವಾಸವಃ’.
ಬಾಹ್ಯೇಂದ್ರಿಯದ ನಂತರ ಕೃಷ್ಣ ನಮ್ಮ ಅಂತರಂಗ ಪ್ರಪಂಚದಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಮನುಷ್ಯನ ಎಲ್ಲ ಕಾರುಬಾರಿಗೆ ಕಾರಣ ಮನಸ್ಸು. ಮನಸ್ಸಿಲ್ಲದಿದ್ದರೆ ಎಲ್ಲವೂ ಶೂನ್ಯ. ಇದು ಇಂದ್ರಿಯಗಳ ಚಟುವಟಿಕೆಗಳಿಗೆ ಮೂಲ ಪ್ರೇರಣೆ. ಹೊರಗಿನ ಎಲ್ಲ ವಸ್ತುವನ್ನು ಒಳಗಿನ ಆತ್ಮಕ್ಕೆ ಮುಟ್ಟಿಸುವ ಮಾಧ್ಯಮ ‘ಮನಸ್ಸು’. ಇಂದ್ರಿಯ ಇರುವುದು ಸಾರ್ಥಕವಾಗುವುದು ಮನಸ್ಸಿನ ಮೂಲಕ. ಶಾಸ್ತ್ರ ಓದಿದಾಗ ನಮಗೆ ವಿಷಯ ಹೊಳೆಯುವುದು ಮನಸ್ಸಿನ ಮೂಲಕ. ಭಗವಂತ ಮನನಕ್ಕೆ ಕಾರಣನಾಗಿ ‘ಮನಃ’ ಶಬ್ದ ವಾಚ್ಯನಾಗಿ ನಮ್ಮಲ್ಲಿ ಕೂತಿರುವುದರಿಂದ ನಮಗೆ ಈ ಶಕ್ತಿ ಬಂತು. ಮನುತೇ ಇತಿ ಮನಃ. ಜ್ಞಾನಸ್ವರೂಪನಾದವ, ಎಲ್ಲವನ್ನು ತಿಳಿಯುವವ, ಎಲ್ಲವನ್ನು ಬಲ್ಲವನು ‘ಮನಸ್’ ಶಬ್ದ ವಾಚ್ಯ  ಭಗವಂತ.
ಮನಸ್ಸಿನ ನಂತರ, ಮನಸ್ಸಿನ  ಮೂಲಕ ಬರುವ ವಿಷಯವನ್ನು ಗ್ರಹಣ ಮಾಡುವ ಶಕ್ತಿ- ಅರಿವು(Awareness). ಭಗವಂತ ನಮ್ಮೊಳಗಿದ್ದು,  ಮನಸ್ಸು ಕಂಡದ್ದನ್ನು ಅರಿವಾಗಿ-ವಿಷಯವನ್ನು ಸ್ವೀಕರಿಸುವ ಗ್ರಹಣ ಶಕ್ತಿಯಾಗಿ ಕೂತ. ಇದರಿಂದ ಪ್ರಪಂಚವನ್ನು ಗ್ರಹಣ ಮಾಡುವ ಶಕ್ತಿ ಜೀವಕ್ಕೆ ಬಂತು. ಇಡೀ ವಿಶ್ವವನ್ನು ತನ್ನ ಅರಿವಿನಿಂದ ಗ್ರಹಣ ಮಾಡಿ, ವ್ಯಾಪಿಸುವ ವಿಸ್ಮಯ ಭಗವಂತ ‘ಚೇತನಃ’. ‘ಚೇತಸ್’ ಎಂದರೆ ನಮ್ಮ ಸುಪ್ತಪ್ರಜ್ಞೆ. ನಮ್ಮ ಪ್ರತಿಯೊಂದು ಅನುಭವ ನಮ್ಮ ಸುಪ್ತಪ್ರಜ್ಞೆಯಲ್ಲಿ ಸಂಗ್ರಹವಾಗಿರುತ್ತದೆ. ಚಿತ್ತಕ್ಕೆ ಎಲ್ಲವನ್ನು ಗ್ರಹಿಸುವ ಶಕ್ತಿ ಕೊಟ್ಟವ ‘ಚೇತನಾ’ ನಾಮಕ  ಭಗವಂತ. ಇದು ಭಗವಂತನ ವಿಭೂತಿ.

Saturday, September 3, 2011

Bhagavad Gita Kannada Chapter-10 Shloka 21


ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ೨೧

ಆದಿತ್ಯಾನಾಮ್ ಅಮ್ ವಿಷ್ಣುಃ ಜ್ಯೋತಿಷಾಮ್  ರವಿಃ ಅಂಶುಮಾನ್
ಮರೀಚಿಃ ಮರುತಾಮ್ ಅಸ್ಮಿ ನಕ್ಷತ್ರಾಣಾಮ್ ಅಮ್  ಶಶೀ—ಹನ್ನೆರಡು ಮಂದಿ ಅದಿತಿಯ ಮಕ್ಕಳಲ್ಲಿ [ಎಲ್ಲೆಡೆ ಹಬ್ಬಿರುವುದರಿಂದ, ಎಲ್ಲದರೊಳಗೂ ತುಂಬಿರುವುದರಿಂದ] ವಿಷ್ಣುನಾಮಕ[ವಾಮನ]ನಾನು. ಬೆಳಗಿಸುವ ಶಕ್ತಿಗಳಲ್ಲಿ ಕಿರಣಗಳಿಂದ ಬೆಳಗುವ ಹಿರಿಯ ಬೆಳಕು ರವಿ ನಾನು.[ರವ=ನಾದಗಳಿಂದ, ಇ=ಜ್ಞೇಯನಾಗಿ ‘ರವಿ’ ಎಂಬ ಹೆಸರಿನಿಂದ ರವಿಯಲ್ಲಿದ್ದೇನೆ.] ಮರುತ್ತುಗಳ ಸಂತತಿಯಲ್ಲಿ ಮರೀಚಿ ನಾನು, [ಮರಿ=ನೀರು ತುಂಬಿದ ಮೊಡಗಳನ್ನು, ಚಿ=ಪ್ರಚೋದಿಸುವುದರಿಂದ ‘ಮರೀಚಿ’ ಎನ್ನಿಸಿ ಪ್ರವಹವಾಯುತನಯ ಮರೀಚಿಯಲ್ಲಿದ್ದೇನೆ.] ನಕ್ಷತ್ರಗಳ ಒಡೆಯ ಚಂದ್ರ [ಶ =ಎಲ್ಲ ಸುಖಗಳಿಗಿಂತ, ಶಿ=ಅಧಿಕ  ಸುಖರೂಪನಾಗಿ ‘ಶಶಿ’ಎನಿಸಿ ಚಂದ್ರನಲ್ಲಿದ್ದು ಅವನಿಗೆ ನಕ್ಷತ್ರಗಳ ಒಡೆತನವಿತ್ತವನು ನಾನು.

ತನ್ನ ವಿಭೂತಿಗಳ ಬಗ್ಗೆ ಹೇಳುತ್ತ ಕೃಷ್ಣ ಮೊಟ್ಟಮೊದಲು ನಿತ್ಯ ಉಪಾಸನೆಯಲ್ಲಿ ಬಹಳ ಮುಖ್ಯವಾದ ತನ್ನ ಸ್ವರೂಪ ವಿಭೂತಿಯನ್ನು ಹೇಳುತ್ತಾನೆ. ಅದಿತಿಯ ಹನ್ನೆರಡು ಮಂದಿ ಪುತ್ರರಲ್ಲಿ (ದ್ವಾದಶಾದಿತ್ಯರು-ವಿವಸ್ವಾನ್(ಸೂರ್ಯ), ಅರ್ಯಮಾ, ಪೂಷಾ, ತ್ವಷ್ಟಾ, ಸವಿತಾ, ಭಗ, ಧಾತಾ, ವಿಧಾತ, ವರುಣ, ಮಿತ್ರ, ಇಂದ್ರ, ಮತ್ತು ವಾಮನರೂಪಿ ವಿಷ್ಣು ) ಒಬ್ಬ ಭಗವಂತನ ಸಾಕ್ಷಾತ್ ವಿಭೂತಿ. ಆತನೇ ವಾಮನ ರೂಪಿ ವಿಷ್ಣು.  ಆದ್ದರಿಂದ ಕೃಷ್ಣ ಹೇಳುತ್ತಾನೆ “ದ್ವಾದಶಾದಿತ್ಯರಲ್ಲಿ ವಿಷ್ಣು ನಾನು” ಎಂದು. ಇನ್ನು ಆದಿತ್ಯರು ಎಂದರೆ ಸಮಸ್ತ ದೇವತೆಗಳು ಎನ್ನುವ ಅರ್ಥವಿದೆ. ಸರ್ವ ದೇವತೆಗಳಲ್ಲಿ ದೇವೋತ್ತಮ ‘ವಿಷ್ಣು’ ಆ ಭಗವಂತ.
ಇಲ್ಲಿ ಬರುವ ಪ್ರತಿಯೊಂದು ಭಗವಂತನ ಹೆಸರಿಗೆ ಒಂದು ಅರ್ಥನಿಷ್ಪತ್ತಿ(etymological meaning) ಇದೆ. ‘ವಿಷ್ಣು’ ಎನ್ನುವ ನಾಮ ಏನನ್ನು ಹೇಳುತ್ತದೆ ಎಂದು ಸಂಕ್ಷಿಪ್ತವಾಗಿ ನೋಡೋಣ: ಪುರಾಣದಲ್ಲಿ,  ಭಾರತದಲ್ಲಿ ಬಂದಿರತಕ್ಕಂತಹ ಪೌರಾಣಿಕ ಅರ್ಥ ನೋಡಿದರೆ ಮೂರು ಧಾತುವಿನಿಂದ ‘ವಿಷ್ಣುಃ’ ಶಬ್ದ ನಿಷ್ಪನ್ನವಾಗಿದೆ  ಎನ್ನುವುದು ತಿಳಿಯುತ್ತದೆ. (೧) ವಿಷಲ್-ವ್ಯಾಪ್ತೋ (೨) ವಿಷತಿ-ಪ್ರವೇಶೇ (೩) ವೇತಿ- ಪ್ರಜನಯತಿ, ಗತಿ, ಕಾಂತಿ, ಕಾದನೇಷು, ಗಚ್ಛತಿ. ಈ ಧಾತುವಿನ ಅರ್ಥದಲ್ಲಿ ನೋಡಿದಾಗ-ವಿಷ್ಣುಃ ಎಂದರೆ ಎಲ್ಲ ಕಡೆ ತುಂಬಿದವನು(ವ್ಯಾಪ್ತ). ಆತ ಎಲ್ಲದರ ಹೊರಗೂ ಮತ್ತು ಎಲ್ಲದರ ಒಳಗೂ(ಪ್ರವೇಶ) ತುಂಬಿರುವುದರಿಂದ ಆತ ವಿಷ್ಣುಃ. ಇದನ್ನು ನಾರಾಯಣ ಸೂಕ್ತದಲ್ಲಿ ಅಂತರ್ ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃಎಂದಿದ್ದಾರೆ. ಇನ್ನು ‘ವೇತೀತಿ-ವಿಷ್ಣುಃ’.  ಎಲ್ಲರು ಯಾರನ್ನು ಆಶ್ರಯಿಸಿಕೊಂಡಿದ್ದಾರೋ ಅವನು ವಿಷ್ಣು-ಸರ್ವಾಶ್ರಯಧಾತ ಭಗವಂತ. ‘ವೇತಿ-ಪ್ರಜನಯತಿ’-ಯಾರು ಇಡೀ ಪ್ರಪಂಚವನ್ನು ಸೃಷ್ಟಿ ಮಾಡಿದನೋ ಅವನು ವಿಷ್ಣು. ‘ವೇತಿ-ಗತಿ’- ಎಲ್ಲರನ್ನು ರಕ್ಷಣೆ ಮಾಡುವ ಸರ್ವ ರಕ್ಷಕ ಭಗವಂತ ವಿಷ್ಣು. ‘ವೇತಿ-ಕಾಂತಿ(ಇಚ್ಛೆ)’-ಇಡೀ ಜಗತ್ತನ್ನು ರಕ್ಷಿಸಿ ಉದ್ಧಾರ ಮಾಡಬೇಕು ಎನ್ನುವ ಸತ್ಯ ಸಂಕಲ್ಪ ಇರುವವ ವಿಷ್ಣು. ‘ವೇತಿ-ಕಾದನೇಶು’-ಸಮಸ್ತ ಜಗತ್ತನ್ನು ಯಾರು ಸಂಹಾರ ಮಾಡುತ್ತಾನೋ ಅವನು ವಿಷ್ಣು. ‘ವೇತಿ-ಗಚ್ಛತಿ’- ಮೂರು ಹೆಜ್ಜೆಯಿಂದ ತ್ರಿವಿಕ್ರಮನಾಗಿ ಮೂರು ಲೋಕವನ್ನು ಯಾರು ವ್ಯಾಪಿಸುತ್ತಾನೋ ಅವನು ವಿಷ್ಣು. ಸಮಷ್ಟಿಯಾಗಿ ವಿಷ್ಣು ಎಂದರೆ ‘ದೇವರು’ ಎನ್ನುವ ಅರ್ಥವನ್ನು ಕೊಡುತ್ತದೆ. ಇವು ನಾವು ವಿಷ್ಣುಃ ಶಬ್ದದಿಂದ ಅನುಸಂಧಾನ ಮಾಡಬೇಕಾದ ಕೆಲವು ಅರ್ಥಗಳು. ಇದನ್ನು ಮಹಾಭಾರತದಲ್ಲಿ ಒಂದು ಕಡೆ ನಾಮಗಳ ನಿರ್ವಚನದಲ್ಲಿ ಹೇಳಿದ್ದಾರೆ. ಈ ನಿರ್ವಚನ ಭಾರತದಲ್ಲಿ ಅರ್ಜುನನಿಗೆ ಕೃಷ್ಣನೇ ಹೇಳಿದ ನಿರ್ವಚನ. ಒಟ್ಟಿನಲ್ಲಿ “ಎಲ್ಲರಿಗೂ ಆಶ್ರಯನಾದ, ಎಲ್ಲರ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ, ಎಲ್ಲದರ ಒಳಗೂ-ಹೊರಗೂ ತುಂಬಿರುವ, ಮೂರು ಹೆಜ್ಜೆಯಿಂದ ಮೂರು ಲೋಕವನ್ನು ಅಳೆದ ವಿಷ್ಣು ನಾನು” ಎಂದು ತನ್ನ ಸ್ವರೂಪ ವಿಭೂತಿಯನ್ನು ಕೃಷ್ಣ ವಿವರಿಸಿದ್ದಾನೆ.
ಸ್ವರೂಪ ವಿಭೂತಿಯನ್ನು ಹೇಳಿದ ಕೃಷ್ಣ, ನಂತರ ವಿಷ್ಣುವಿನ ಉಪಾಸನೆಗೆ ಅತ್ಯಂತ ಹಿರಿದಾದ ಪ್ರತೀಕ ‘ಸೂರ್ಯ’ನಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ನಾವು ಗಾಯತ್ರಿ ಪ್ರತಿಪಾದ್ಯನಾದ ವಿಷ್ಣುವನ್ನು ಸೂರ್ಯನಲ್ಲಿ ಉಪಾಸನೆ ಮಾಡುತ್ತೇವೆ. ಇದು ಸೌರಶಕ್ತಿಯಲ್ಲಿ ಭಗವಂತನ ಉಪಾಸನೆ. ಇದು ಭಗವಂತನ ವಿಭೂತಿಯ ಎರಡನೇ ಮಜಲು. ಅದಕ್ಕಾಗಿ ವಿಷ್ಣುವಿನ ನಂತರ ‘ರವಿ’ಯನ್ನು ಕೃಷ್ಣ ಪ್ರಸ್ತಾಪಿಸುತ್ತಾನೆ. ಸೂರ್ಯ ನಮ್ಮ ಕಣ್ಣಿಗೆ ಕಾಣುವ ಜ್ಯೋತಿಗಳಲ್ಲೇ ಅತ್ಯಂತ ದೊಡ್ಡ ಜ್ಯೋತಿ.  ಸೂರ್ಯನಲ್ಲಿ ‘ರವಿ’ ನಾಮಕನಾಗಿ ತುಂಬಿರುವ ಭಗವಂತ ಸೌರಶಕ್ತಿಯಾಗಿ ವಿಶ್ವದಲ್ಲಿ ವ್ಯಾಪಿಸಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ‘ರವಿಃ’. ರವ+ಇ-ರವದಿಂದ ತಿಳಿಯಲ್ಪಡುವವನು-ರವಿ. ‘ರವ’ ಎಂದರೆ ನಾದ. ಯಾರು ಗಾಯತ್ರಿ ‘ರವ’ದಿಂದ ಜ್ಞೇಯನೊ ಅವನು ರವಿಃ. ಬೆಳಕುಗಳಿಗೆ ಬೆಳಕು ಕೊಡುವ ಭಗವಂತ, ಗಾಯತ್ರಿ ಪ್ರತಿಪಾದ್ಯನಾಗಿ, ‘ರವಿ’ ನಾಮಕನಾಗಿ ಸೂರ್ಯನಲ್ಲಿ, ಸೂರ್ಯ ಕಿರಣದಲ್ಲಿ  ಸನ್ನಿಹಿತನಾಗಿದ್ದಾನೆ.
ಕೃಷ್ಣ ಹೇಳುವ ಮುಂದಿನ ವಿಭೂತಿ ಆಕಾಶದಲ್ಲಿ ವಾತಾವರಣದ ಬೇರೆಬೇರೆ ಪದರನ್ನು ನಿಯಮಿಸುವ ಮರುತ್ತುಗಳ ಸಂತತಿಯ ಮರೀಚಿ. ಮೂಲಭೂತವಾಗಿ ಮರುತ್ತುಗಳು ನಲವತ್ತೊಂಬತ್ತು ಮಂದಿ. ಇವರಲ್ಲಿ ಹತ್ತು ಮಂದಿ ನಮ್ಮ ಪಿಂಡಾಂಡ ನಿಯಮನ ಮಾಡುವವರು. ಈ ಮರುತ್ತುಗಳ ನಿಯಮನ ಮಾಡುವವ ಪ್ರವಹವಾಯು. ಪುರಾಣಗಳಲ್ಲಿ ಎಲ್ಲಿಯೂ ಈ ನಲವತ್ತೊಂಬತ್ತು ಮರುತ್ತುಗಳಲ್ಲಿ ಮರೀಚಿ ಎನ್ನುವ ಹೆಸರು ಬಂದಿಲ್ಲ. ಆದ್ದರಿಂದ ಇಲ್ಲಿ ಮರೀಚಿ ಈ ನಲವತ್ತೊಂಬತ್ತು ಮರುತ್ತುಗಳಲ್ಲಿ ಒಬ್ಬ ಎಂದು ಹೇಳುವುದು ಕಷ್ಟ. ಆದರೆ ಆತ ಪ್ರವಹವಾಯುವಿನ ಪುತ್ರ ಎನ್ನುವುದು ಸ್ಪಷ್ಟ. ಮಧ್ವಾಚಾರ್ಯರ ಐತರೇಯ ಉಪನಿಷತ್ತಿನ ಭಾಷ್ಯ ಮತ್ತು ಗೀತಾ ತಾತ್ಪರ್ಯವನ್ನು ಸಮನ್ವಯ ಮಾಡಿ ನೋಡಿದರೆ-ಮರೀಚಿ ಹದಿನೆಂಟನೇ ಕಕ್ಷೆಯಲ್ಲಿರುವ ಭೂತವಾಯು ದೇವತೆ. ಆದ್ದರಿಂದ ಈತ ಆಕಾಶ ಅಭಿಮಾನಿ ದೇವತೆ(ಗಣಪತಿ)ಯ ಸಮಾನಸ್ಕಂದ. ಭಗವಂತ ಮರೀಚಿನಾಮಕನಾಗಿ ಭೂತವಾಯುವಿನ ಅಭಿಮಾನಿ ದೇವತೆಯೊಳಗೆ ವಿಭೂತಿಯಾಗಿ ನಿಂತಿದ್ದಾನೆ.
ಇಲ್ಲಿ ಬಂದಿರುವ ಭಗವಂತನ ನಾಮ ‘ಮರೀಚಿ’. ಮರ ಎಂದರೆ ನೀರು. ಮರಿ ಎಂದರೆ ನೀರು ತುಂಬಿರುವ ಮೋಡ. ಈ ಮೊಡವನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಸೇರಿಸುವ ವಾಯುವಿನಲ್ಲಿ ಸನ್ನಿಹಿತನಾಗಿ, ಮಳೆ ಬರಿಸುವ ಶಕ್ತಿಯನ್ನು  ಮರೀಚಿಗೆ ಕೊಟ್ಟು, ಅವನಲ್ಲಿ ವಿಭೂತಿ ರೂಪದಲ್ಲಿ ಕೂತ ಭಗವಂತ ‘ಮರೀಚಿ’.
ಆಕಾಶದಲ್ಲಿ ಸೂರ್ಯ ಮತ್ತು ವಾಯುವಿನಲ್ಲಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಮುಂದೆ ನಕ್ಷತ್ರಗಳ ರಾಜ ಚಂದ್ರನಲ್ಲಿ ತನ್ನ ವಿಭೂತಿಯನ್ನು ಹೇಳುತ್ತಾನೆ.  ಇದು ವಿಜಾತಿಯ ಸ್ರಷ್ಟಪ್ರಭ ವಿಭೂತಿ. ನಕ್ಷತ್ರಗಳ ಒಡೆಯ ಚಂದ್ರ. ಚಂದ್ರನಲ್ಲಿ ಎಲ್ಲ ನಕ್ಷತ್ರಗಳನ್ನು ನಿಯಮಿಸುವ ಶಕ್ತಿಯಾಗಿ ‘ಶಶಿ’ ಶಬ್ದವಾಚ್ಯ ಭಗವಂತ ಕೂತು ಅವನಿಗೆ ಆ ಶಕ್ತಿಯನ್ನು ಕೊಟ್ಟ.
ಇಲ್ಲಿ ಬಂದಿರುವ ಭಗವಂತನ ನಾಮ ‘ಶಶಿಃ’. ಶಶ ಉಳ್ಳವನು ಶಶಿ. ‘ಶ’ ಎಂದರೆ ಆನಂದ. ಶಶ ಎಂದರೆ ಆನಂದದಆನಂದ–ಪರಮಾನಂದ. ಇಂತಹ ಪರಮಾನಂದ ಉಳ್ಳ ಭಗವಂತ ಆನಂದ ಮೂರ್ತಿಯಾಗಿ ಚಂದ್ರನಲ್ಲಿ ಕೂತ. ಈ ಕಾರಣದಿಂದ ನಮಗೆ ಬೆಳದಿಂಗಳು ಆನಂದವನ್ನು ಕೊಡುತ್ತದೆ.    

Thursday, September 1, 2011

Bhagavad Geeta Kannada Chapter-10 Shloka 19-20


ಭಗವಾನುವಾಚ
ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ
ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ        ೧೯

ಭಗವಾನ್ ಉವಾಚ-ಭಗವಂತ ನುಡಿದನು:
ಹಂತ ತೇ ಕಥಯಿಷ್ಯಾಮಿ ದಿವ್ಯಾಃ ಹಿ ಆತ್ಮ ವಿಭೂತಯಃ
ಪ್ರಾಧಾನ್ಯತಃ ಕುರುಶ್ರೇಷ್ಠ ನ ಅಸ್ತಿ ಅಂತಃ  ವಿಸ್ತರಸ್ಯ ಮೇ—ಕುರುಗಳ ಮುಂದಾಳೆ, ಭಲೆ! ನನ್ನ ಅಲೌಕಿಕವಾದ ವಿಭೂತಿ ರೂಪಗಳಲ್ಲಿ ಕೆಲವನ್ನು ಆಯ್ದು ಹೇಳುತ್ತೇನೆ. ನನ್ನ ಬಿತ್ತರಕ್ಕೆ ಕೊನೆಯಿಲ್ಲ.

ಸಂಸ್ಕೃತದಲ್ಲಿ  ‘ಹಂತ’ ಎನ್ನುವ ಪದ ಸಂತೋಷ ಮತ್ತು ವಿಸ್ಮಯವನ್ನು ವ್ಯಕ್ತಪಡಿಸಲು ಬಳಸುವ ಪದ. ಕೃಷ್ಣ ಅರ್ಜುನನ ಆಸಕ್ತಿಯನ್ನು ಕಂಡು ಆತನನ್ನು ‘ಭಲೆ’ ಎಂದು ಹೊಗಳುತ್ತಾನೆ.
ಇಂದು ಯಾರಿಗೂ ವೇದಾಂತ ಕೇಳುವ ಇಚ್ಛೆ ಇಲ್ಲ. “ನಮಗೆ ಸಮಯವಿಲ್ಲ” ಎಂದು ಜಾರಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಮಾನಸಿಕವಾಗಿ ನೋಡಿದರೆ ‘ಸಮಯವಿಲ್ಲ’ ಎನ್ನುವುದು ತಮಗೆ ಇಷ್ಟವಿಲ್ಲ ಎನ್ನುವುದನ್ನು ಮುಚ್ಚಿಡಲು ಬಳಸುವ ಪದ! ನಮಗೆ ಇಷ್ಟವಿದ್ದರೆ ಸಮಯವಿರುತ್ತದೆ! ಇಲ್ಲಿ ಅರ್ಜುನನ ಕಾತರತೆಯನ್ನು ಕೃಷ್ಣ ಪ್ರಶಂಸಿಸುತ್ತಾನೆ ಮತ್ತು “ನೀನು ಕೇಳಬೇಕೆಂದು ಬಯಸಿದ್ದನ್ನು ಖಂಡಿತವಾಗಿಯೂ ಹೇಳುತ್ತೇನೆ” ಎನ್ನುತ್ತಾನೆ. ಭಗವಂತನ ವಿಭೂತಿ ದಿವ್ಯವಾದದ್ದು ಮತ್ತು ಅದು ಅನಂತ. ಅದನ್ನು ಪೂರ್ಣ ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿ ಕೃಷ್ಣ ನಾವು ಮುಖ್ಯವಾಗಿ ಉಪಾಸನೆ ಮಾಡಬೇಕಾದ ಭಗವಂತನ ವಿಭೂತಿಯನ್ನು ಸಂಕ್ಷಿಪ್ತವಾಗಿ ಸಂಗ್ರಹ ಮಾಡಿ ಹೇಳಿದ್ದಾನೆ.
ಇಲ್ಲಿ ‘ಕುರುಶ್ರೇಷ್ಠ’ ಎನ್ನುವ ವಿಶೇಷಣ ಬಳಕೆಯಾಗಿದೆ. ತಮ್ಮನ್ನು ತಾವು ಭಗವದುಪಾಸನೆ ದಾರಿಯಲ್ಲಿ ತೊಡಗಿಸಿಕೊಂಡ ಸಾಧಕರು ‘ಕುರುಗಳು’. ಇದು ಅಧ್ಯಾತ್ಮಕ್ಕೆ ಬೇಕಾದ ಕನಿಷ್ಠ ಅರ್ಹತೆ. “ನೀನು ಅಧ್ಯಾತ್ಮ ಸಾಧನೆಯಲ್ಲಿ ಎತ್ತರಕ್ಕೇರಿದವನು. ನಿನಗೆ ಈ ಸಾಧನೆಯಲ್ಲಿ ಕಳಕಳಿ ಇದೆ. ಅದಕ್ಕಾಗಿ ನಿನಗೆ ಖಂಡಿತವಾಗಿ ಹೇಳುತ್ತೇನೆ” ಎನ್ನುವ ಭಾವ ಈ ಸಂಬೋಧನೆಯ ಹಿಂದಿದೆ.        

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ
ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ೨೦

ಅಹಮ್ ಆತ್ಮಾ ಗುಡಾಕೇಶ ಸರ್ವಭೂತಶಯಸ್ಥಿತಃ
ಅಹಮ್ ಆದಿಃ ಚ ಮಧ್ಯಮ್  ಚ ಭೂತಾನಾಮ್ ಅಂತಃ ಏವ ಚ—ಓ ಗುಡಾಕೇಶ, ಎಲ್ಲ ಗುಣಗಳ ನೆಲೆಯಾದ ನಾನೆ ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುವ ಅಂತರ್ಯಾಮಿ. ನಾನೆ ಎಲ್ಲ ಜೀವಿಗಳ ಬುಡ, ನಡು ಮತ್ತು ಕೊನೆ.

ವಿಭೂತಿಯ ಒಟ್ಟು ಸಾರ(essence) ಏನೆಂದರೆ: ‘ಭಗವಂತ ಎಲ್ಲರ ಒಳಗೂ ತುಂಬಿದ್ದಾನೆ’ ಎನ್ನುವುದು. ಕೃಷ್ಣ ಹೇಳುತ್ತಾನೆ: “ನಾನು ಪ್ರತಿಯೊಂದು ಜೀವಿಯ ಒಳಗೆ ಆತ್ಮವಾಗಿ ತುಂಬಿದ್ದೇನೆ. ಎಲ್ಲ ಜೀವಗಳ ಆತ್ಮ ನಾನು” ಎಂದು. ಈ ಶ್ಲೋಕದಲ್ಲಿ ‘ಜೀವಾತ್ಮ-ಪರಮಾತ್ಮ ಒಂದೆ’ ಎಂದು ಹೇಳಲಾಗಿದೆ ಎಂದು ಕೆಲವರು ತಪ್ಪಾಗಿ  ತಿಳಿದುಕೊಳ್ಳುತ್ತಾರೆ. ಆದರೆ ಇಲ್ಲಿ ಕೃಷ್ಣ ಹೇಳಿರುವುದು 'ಜೀವಾತ್ಮರ ಆತ್ಮನಾಗಿ ನಾನು ತುಂಬಿದ್ದೇನೆ' ಎಂದೇ ಹೊರತು 'ನಾನೇ ಜೀವಾತ್ಮ' ಎಂದಲ್ಲ. ಇದು ಪ್ರತಿಯೊಂದು ಜೀವರ ಒಳಗೆ ಅಂತರ್ಯಾಮಿಯಾಗಿರುವ ಬಿಂಬರೂಪಿ ಭಗವಂತನನ್ನು ಹೇಳುತ್ತದೆ. ಭಗವಂತ ‘ಸರ್ವಭೂತಾಶಯಸ್ಥಿತಃ’. ಸಮಸ್ತ ಜೀವಜಾತದ ಹೃದಯಗುಹೆಯಲ್ಲಿ ಅಂತರ್ಯಾಮಿಯಾಗಿ ನಿಂತಿದ್ದಾನೆ ಆ ಹೃತ್ಕಮಲ ಮಧ್ಯ ನಿವಾಸಿ. ಇದು ಭಗವಂತನ ಅತಿ ದೊಡ್ಡ ವಿಭೂತಿ. ಅನಂತ ಜೀವರೊಳಗೆ ಅನಂತ ವಿಭೂತಿ ರೂಪದಲ್ಲಿ ಭಗವಂತ ವ್ಯಕ್ತನಾಗುತ್ತಾನೆ. ಈ ಕಾರಣದಿಂದ ನಾವು ಒಂದೊಂದು ಜೀವರಲ್ಲಿ ಒಂದೊಂದು ಶಕ್ತಿ ವೈಶಿಷ್ಟ್ಯವನ್ನು ಕಾಣುತ್ತೇವೆ.  ಸಮಸ್ತ ಜೀವಗಳು- ಹುಟ್ಟುವ ಮುಂಚೆ ಅವುಗಳ ಒಳಗೆ ನಿಯಾಮಕನಾಗಿ ನಿಂತು, ಅವುಗಳ ಸೃಷ್ಟಿಗೆ ಕಾರಣನಾಗಿ, ಅವುಗಳನ್ನು ರಕ್ಷಣೆ ಮಾಡಿ, ಪ್ರಳಯಕಾಲದಲ್ಲೂ ಕೂಡ ಎಲ್ಲವನ್ನು ಕಾಪಾಡುವ ಭಗವಂತ-ಎಲ್ಲ ಅವಸ್ಥೆಗಳಲ್ಲಿಯೂ ಒಳಗೆ ನಿಂತು ರಕ್ಷಿಸುವ ಶಕ್ತಿ.
ಇಲ್ಲಿ ಗುಡಾಕೇಶ ಎನ್ನುವ ವಿಶೇಷಣ ಬಳಸಲಾಗಿದೆ. ಇದು ಕೂಡಾ ಒಂದು ವಿಭೂತಿ ಗಮಕ. ‘ಗುಡಾಕ’ ಎಂದರೆ ನಿದ್ದೆ. ‘ಗುಡಾಕೇಶ’ ಎಂದರೆ ನಿದ್ದೆಯನ್ನು ಗೆದ್ದವ. ಅರ್ಜುನನಲ್ಲಿ ಈ ವಿಶೇಷ ಸಾಮರ್ಥ್ಯವಿತ್ತು. ಅದಕ್ಕಾಗಿ ಆತನನ್ನು ಈ ನಾಮದಿಂದ ಕರೆಯುತ್ತಿದ್ದರು. “ನಿನ್ನೊಳಗೆ ನಿದ್ದೆಯನ್ನು ಗೆಲ್ಲುವ ಶಕ್ತಿಯಾಗಿ ತುಂಬಿರುವವನೂ ನಾನೆ” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ  ತನ್ನ ವಿಶಿಷ್ಟವಾದ ವಿಭೂತಿಯನ್ನು ವಿವರಿಸುತ್ತಾನೆ.     

Bhagavad Geeta Kannada Chapter-10 Shloka 15-18

ಸ್ವಯಮೇವಾSತ್ಮನಾSSತ್ಮಾನಂ ವೇತ್ಥ ತ್ವಂ ಪುರುಷೋತ್ತಮ 
ಭೂತಭಾವನ ಭೂತೇಶ ದೇವದೇವ ಜಗತ್ ಪತೇ ೧೫
ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ
ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ೧೬

ಸ್ವಯಮ್ ಏವ ಆತ್ಮನಾತ್ಮಾನಮ್  ವೇತ್ಥ ತ್ವಮ್  ಪುರುಷೋತ್ತಮ 
ಭೂತಭಾವನ ಭೂತೇಶ ದೇವದೇವ ಜಗತ್ ಪತೇ ||
ವಕ್ತುಮ್ ಅರ್ಹಸಿ ಅಶೇಷೇಣ ದಿವ್ಯಾಃ ಹಿ ಆತ್ಮ ವಿಭೂತಯಃ
ಯಾಭಿಃ ವಿಭೂತಿಭಿಃ ಲೋಕಾನ್ ಇಮಾನ್ ತ್ವಮ್  ವ್ಯಾಪ್ಯ ತಿಷ್ಠಸಿ –ಓ ಪುರುಷೋತ್ತಮ, ನೀನೆ ಸ್ವತಃ ನಿನ್ನಳವಿನಿಂದ ನಿನ್ನನ್ನು ಅರಿತಿರುವೆ. ಓ ಎಲ್ಲಾ ಜೀವಿಗಳ ಸ್ರಷ್ಟಾರನೆ, ಎಲ್ಲ ಜೀವಿಗಳ ದೊರೆಯೆ, ದೇವತೆಗಳಿಗೂ ಹಿರಿಯ ದೈವತವೆ, ಜಗದೊಡೆಯನೆ, ಯಾವ ರೂಪಗಳಿಂದ ನೀನು ಈ ಲೋಕಗಳನ್ನೆಲ್ಲ ತುಂಬಿ ನಿಂತಿರುವೆಯೋ ಅಂಥ ಅಲೌಕಿಕವಾದ ನಿನ್ನ ಬಗೆಬಗೆಯ ರೂಪಗಳ ಹಿರಿಮೆಗಳನ್ನು ಬಿಡದೆ ತಿಳಿಹೇಳಬೇಕು ನೀನೆ.

ಅರ್ಜುನ ಹೇಳುತ್ತಾನೆ: “ನಿನ್ನ ಗುಣಪ್ರಮಾಣವನ್ನು ದೇವತೆಗಳಿಂದಲೂ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ನಿನ್ನ ಬಗೆಗೆ ತಿಳಿದಿರುವುದು ನೀನೊಬ್ಬನೆ. ಅದನ್ನು ನೀನು ನೀನಾಗಿಯೇ ಹೇಳಬೇಕು ಹೊರತು ಇನ್ನೊಬ್ಬರಿಂದ ಹೇಳಲು ಸಾಧ್ಯವಿಲ್ಲ. ಏಕೆಂದರೆ ನೀನು ಪುರುಷೋತ್ತಮ” ಎಂದು. ಇಲ್ಲಿ   ಪುರುಷೋತ್ತಮ ಎನ್ನುವ ವಿಶೇಷಣ ಬಳಕೆಯಾಗಿದೆ. ಪುರುಷೋತ್ತಮ  ಎಂದರೆ ಕ್ಷರ(ಜೀವ)ವನ್ನು ಮೀರಿನಿಂತವನು. ಅಕ್ಷರ(ಶ್ರೀತತ್ವ)ಕ್ಕಿಂತಲೂ ಹಿರಿಯನು. ಕ್ಷರ-ಅಕ್ಷರವನ್ನು ಮೀರಿ ನಿಂತ ನೀನಲ್ಲದೆ ನಿನ್ನಿಂದ ಹಿರಿದಾದ ತತ್ವ ಇನ್ನೊಂದಿಲ್ಲ. ಆದ್ದರಿಂದ ಇದರ ವಿವರಣೆಯನ್ನು ನಿನ್ನಿಂದ ತಿಳಿಯಬೇಕು”  ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ ಎನ್ನುವುದನ್ನು ಈ ವಿಶೇಷಣ ತಿಳಿಸುತ್ತದೆ.
ಇಲ್ಲಿ ಅರ್ಜುನ ಕೃಷ್ಣನನ್ನು- ಭೂತಭಾವನ, ಭೂತೇಶ, ದೇವದೇವ ಮತ್ತು  ಜಗತ್ ಪತೇ  ಎಂದು ಸಂಬೋಧಿಸಿದ್ದಾನೆ. ಭೂತಭಾವನ ಎಂದರೆ- ಪಂಚಭೂತಾತ್ಮಕ ಪ್ರಪಂಚವನ್ನು ಸೃಷ್ಟಿ ಮಾಡಿ,  ಸಮಸ್ತ ಜೀವ-ಜಾತದ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾಗಿರುವವ. ಭೂತೇಶ ಎಂದರೆ- ಎಲ್ಲರನ್ನು ನಿಯಂತ್ರಿಸುವ ಸರ್ವ ನಿಯಾಮಕ  ಸ್ವಾಮಿ. ದೇವದೇವ ಎಂದರೆ-ಎಲ್ಲಾ ದೇವತೆಗಳಿಗೂ ದೇವನಾಗಿರುವವ; ಸೂರ್ಯಾದಿಗಳಿಗೂ ಬೆಳಕನ್ನು ಕೊಡುವ ಮೂಲ ಜ್ಯೋತಿ. ಜಗತ್ ಪತಿ ಎನ್ನುವಲ್ಲಿ 'ಪತಿ' ಎಂದರೆ ಪಾಲಕ. ಹುಟ್ಟಿಸುವವನೂ ಭಗವಂತ, ಸಾಯಿಸುವವನೂ ಭಗವಂತ. ಹುಟ್ಟು ಸಾವಿಲ್ಲದ ಮೋಕ್ಷ  ಕೊಡುವವನೂ ಅವನೆ. ಆತ ಸಮಸ್ತ ಜಗತ್ತಿನ ಪಾಲಕ. ನಮಗೆ ಭಗವಂತ ‘ಸಂಸಾರಬಂಧ’ ಕೊಡುವುದು ಆತನ ಪಾಲನೆಯ, ಶಿಕ್ಷಣದ ಒಂದು ಮುಖ ಅಷ್ಟೆ. ಒಟ್ಟಿನಲ್ಲಿ “ನೀನಿಲ್ಲದೆ ನಾವಿಲ್ಲ, ನೀನೇ ಸರ್ವ ರಕ್ಷಕ” ಎನ್ನುವ ಭಾವವನ್ನು ಅರ್ಜುನ ಈ ಮೂಲಕ ವ್ಯಕ್ತಪಡಿಸಿದ್ದಾನೆ.

ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿಂತಯನ್ 
ಕೇಷು ಕೇಷು ಚ ಭಾವೇಷು ಚಿಂತ್ಯೋSಸಿ ಭಗವನ್ ಮಯಾ ೧೭

ಕಥಮ್  ವಿದ್ಯಾಮ್ ಅಮ್  ಯೋಗಿನ್ ತ್ವಾಮ್  ಸದಾ ಪರಿಚಿಂತಯನ್      
ಕೇಷು ಕೇಷು ಚ ಭಾವೇಷು ಚಿಂತ್ಯಃ ಅಸಿ ಭಗವನ್ ಮಯಾ—ಸರ್ವಸಮರ್ಥನೆ, ನಿನ್ನನ್ನು ಅನುಗಾಲ ಪರಿಪರಿ ನೆನೆಯುತ್ತ ನಾನು ಹೇಗೆ ತಿಳಿದೇನು? ಓ ಭಗವನ್, ಯಾವಯಾವ ವಸ್ತುಗಳಲ್ಲಿ ಹೇಗಿರುವೆಯೆಂದು ನಾನು ನೆನೆಯಬೇಕು?

ಈ ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲಿರುವ ಒಂದು ವಿಶಿಷ್ಟ ಗುಣದ ಹಿಂದೆ ಭಗವಂತನ ವಿಭೂತಿ ಅಡಗಿದೆ. ಇಲ್ಲಿ ಅರ್ಜುನ ಭಗವಂತನಲ್ಲಿ ಪ್ರಾರ್ಥಿಸುತ್ತಾನೆ: “ಸರ್ವ ಸಮರ್ಥನಾದ ನೀನು ಎಲ್ಲಿ ಏನಾಗಿದ್ದಿ ಎಂದು ನಿನಗೆ ಗೊತ್ತಿದೆ ಹೊರತು ನನಗಲ್ಲ. ನಾನು ಒಂದು ವಸ್ತುವನ್ನು ಕಂಡಾಗ ಅದರ ಹಿಂದಿರುವ ಭಗವತ್ ಶಕ್ತಿಯ ನೆನಪು ನನಗೆ ಬರಬೇಕು. ಯಾವಯಾವ ವಸ್ತುವಿನಲ್ಲಿ ನಿನ್ನ ಉಪಾಸನೆಯನ್ನು ನಾನು ಮಾಡಬೇಕು-ಅದನ್ನು ನಾನು ತಿಳಿಯಬೇಕು” ಎಂದು.    

ವಿಸ್ತರೇಣಾSತ್ಮನೋ ಯೋಗಂ ವಿಭೂತಿಂ ಚ ಜನಾರ್ದನ     
ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇSಮೃತಮ್ ೧೮

ವಿಸ್ತರೇಣಾ ತ್ಮನಃ  ಯೋಗಮ್  ವಿಭೂತಿಮ್  ಚ ಜನಾರ್ದನ         
ಭೂಯಃ ಕಥಯ ತೃಪ್ತಿಃ ಹಿ ಶೃಣ್ವತಃ ನ ಅಸ್ತಿ ಮೇ ಅಮೃತಮ್—ಓ ಜನಾರ್ದನ, ನಿನ್ನ ಆಳವನ್ನೂ ಬಗೆಬಗೆಯ ರೂಪಗಳ ಹಿರಿಮೆಯನ್ನೂ ಇನ್ನಷ್ಟು ಬಿತ್ತರಿಸಿ ಹೇಳು. ನನಗೆ ಈ ಸುಧೆಯನ್ನು ಎಷ್ಟು ಸವಿದರೂ ತಣಿವಿಲ್ಲ.

“ಉಪಾಸನೆಗೆ ಉಪಯೋಗವಾಗುವ ನಿನ್ನ ವಿಭೂತಿಯನ್ನು ಇನ್ನೂ ಹೇಳು”  ಎಂದು ಅರ್ಜುನ ಕೃಷ್ಣನನ್ನು ಕೇಳಿಕೊಳ್ಳುತ್ತಾನೆ. ಭಗವಂತನ ವಿಭೂತಿಯಲ್ಲಿ ಪ್ರಮುಖವಾಗಿ ನಾಲ್ಕು ವಿಧ. (೧) ಸಾಕ್ಷಾತ್ ವಿಭೂತಿ: ಇಲ್ಲಿ ಭಗವಂತ ವಿಶಿಷ್ಟ ರೂಪದಲ್ಲಿ ನಮಗೆ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೆ. ಉದಾಹರಣೆಗೆ: ಭಗವಂತನ ಅವತಾರಗಳು. (೨) ವಿಜಾತಿಯ ಸ್ರಷ್ಟಪ್ರಭ. ಉದಾಹರಣೆಗೆ: ನಕ್ಷತ್ರಗಳ ರಾಜ ಚಂದ್ರ. ಇಲ್ಲಿ ಚಂದ್ರ ನಕ್ಷತ್ರಗಳ ಜಾತಿಗೆ ಸೇರಿಲ್ಲ ಆದರೆ ಆತ ನಕ್ಷತ್ರಗಳ ರಾಜ. (೩)ಸ್ವಜಾತಿಯ ಸ್ರಷ್ಟಪ್ರಭ. ಉದಾಹರಣೆಗೆ: ದೇವತೆಗಳಲ್ಲಿ ಇಂದ್ರ, ಬೆಳಕಿನಲ್ಲಿ ಸೂರ್ಯ. (೪) ಸ್ವಜಾತಿಯ ಏಕದೇಶೀಯ ಸ್ರಷ್ಟಪ್ರಭ. ಉದಾಹರಣೆಗೆ: ಪಾಂಡವರಲ್ಲಿ ಅರ್ಜುನ.  ಹೀಗೆ ಈ ನಾಲ್ಕು ಬಗೆಯಲ್ಲಿ ಭಗವಂತನ ವಿಭೂತಿ ರೂಪಗಳು ಅನಂತ. ಇಲ್ಲಿ ಎಲ್ಲವನ್ನೂ ನಾವು ಉಪಾಸನೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅರ್ಜುನ  “ಉಪಾಸನೆ ಮಾಡುವುದಕ್ಕೆ ಅನುಕೂಲವಾದ ನಿನ್ನ ವಿಭೂತಿಯನ್ನು ವಿಸ್ತಾರವಾಗಿ ಹೇಳು” ಎಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ.
ಅರ್ಜುನ ಕೃಷ್ಣನ ಸಂದೇಶವನ್ನು ಕೇಳಿ ಆನಂದ ಸಾಗರದಲ್ಲಿ ತೇಲುತ್ತಿದ್ದಾನೆ. ಆತ ಹೇಳುತ್ತಾನೆ: “ನಾನು ಅಮೃತಪಾನ ಮಾಡುತ್ತಿದ್ದೇನೆ, ಇಲ್ಲಿ ಸಾಕು ಎನ್ನುವುದಿಲ್ಲ” ಎಂದು. ಇದು ಮೊಕ್ಷಪ್ರದವಾದ, ಕಿವಿ ಬೊಗಸೆಯಿಂದ ಮಾಡುವ ಅಮೃತಪಾನ. ಇದು ನಮ್ಮನ್ನು ಹುಟ್ಟು-ಸಾವಿನ ಸುಳಿಯಲ್ಲಿ ಸಿಗದಂತೆ ಮಾಡಿ,ಅಮೃತರನ್ನಾಗಿ ಮಾಡುವ ಜ್ಞಾನ. ಇದನ್ನು ಎಷ್ಟು ಸವಿದರೂ ತಣಿವಿಲ್ಲ. ಅದಕ್ಕಾಗಿ “ಇನ್ನೂ ಹೇಳು” ಎಂದು ಕೃಷ್ಣನಲ್ಲಿ ಅರ್ಜುನ ಕೇಳಿಕೊಳ್ಳುತ್ತಾನೆ.