Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, August 7, 2011

Bhagavad Gita Kannada Chapter-09 Shloka 28-31


ಭಾಗವತ ಧರ್ಮ ಅನುಷ್ಠಾನದಿಂದ ಎನು ಫಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
        
ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈಃ
ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ೨೮

ಶುಭಶುಭ ಭಲೈಃ ಏವಮ್  ಮೋಕ್ಷ್ಯಸೇ ಕರ್ಮ ಬಂಧನೈಃ
ಸಂನ್ಯಾಸ ಯೋಗ ಯುಕ್ತತ್ಮಾ ವಿಮುಕ್ತಃ  ಮಾಮ್ ಉಪೈಷ್ಯಸಿ-ಹೀಗೆ ಬದುಕಿದಾಗ, ಒಳಿತು-ಕೆಡುಕುಗಳ ಕಡೆಗೆಳೆವ ಕರ್ಮದ ಸೆರೆಯಿಂದ ಪಾರಾಗುವೆ. ಫಲದ ಹಂಗು ತೊರೆದು ಕರ್ತವ್ಯದಲ್ಲಿ ಬಗೆ ತೊಡಗಿಸುತ್ತ ಸೆರೆ ಕಳಚಿಕೊಂಡು ನನ್ನ ಬಳಿ ಸೇರುವೆ.

ನಾವು ಯಾವುದೇ ಕರ್ಮವನ್ನು ‘ನನಗೆ  ಇಂತಹ ಫಲ ಬರಬೇಕು’ ಎನ್ನುವ ಫಲದ ನಂಟಿನಿಂದ ಮತ್ತು ‘ನಾನು ಈ ಕರ್ಮವನ್ನು ಮಾಡಿದೆ’ ಎನ್ನುವ ಅಹಮ್ ಇದ್ದು ಮಾಡಿದಾಗ ಆ ಕರ್ಮ ನಮಗೆ ಅಂಟುತ್ತದೆ. ಅದಕ್ಕೋಸ್ಕರ ಹಿಂದಿನ ಕಾಲದಲ್ಲಿ  ‘ಕರ್ಮಕರಿಷ್ಯೇ’ ಎಂದು ಸಂಕಲ್ಪ ಮಾಡುವಾಗ ಈ ರೀತಿ ಹೇಳುತ್ತಿದ್ದರು:
ಭಗವತೋ ಬಲೇನ ಭಗವತೋ ವೀರ್ಯೇನ ಭಗವದಃ ತೇಜಸಾ |
ಭಗವತಾ ಕರ್ಮಣಾ ಕರ್ಮಕರಿಷ್ಯಾಮಿ ಭಗವತೋ ವಾಸುದೇವಸ್ಯಃ ||
“ನಾನು ಮಾಡುವ ಕರ್ಮ ನನ್ನ ಕರ್ಮವಲ್ಲ, ನನ್ನೊಳಗಿರುವ ಭಗವಂತ ಮಾಡುವ ಕರ್ಮ. ಅದರ ಹಿಂದಿರುವ ಶಕ್ತಿ ಸಾಮರ್ಥ್ಯ ಎಲ್ಲವೂ ಭಗವಂತನದ್ದು, ನನ್ನದೇನೂ ಇಲ್ಲ” ಎಂದು. ಇದು ಭಾಗವತಧರ್ಮದ ಸಂಕಲ್ಪ. ಭಗವತ್ ಪ್ರೀತ್ಯರ್ಥ ಮಾಡಿದ ಯಾವ ಕರ್ಮವೂ ನಮಗೆ ಬಂಧನವಾಗುವುದಿಲ್ಲ. ಬ್ರಹ್ಮಸೂತ್ರದಲ್ಲಿ ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ: “ಭಗವಂತನ ಜ್ಞಾನ ನಮ್ಮೊಳಗೆ ದೃಢವಾಗಿ ಅಪರೋಕ್ಷವಾದಾಗ, ಹಿಂದೆ ಫಲಕಾಮನೆಯಿಂದ ಮಾಡಿದ ಎಲ್ಲಾ ಪಾಪಗಳನ್ನು ಆ ಜ್ಞಾನಾಗ್ನಿ ಸುಟ್ಟುಬಿಡುತ್ತದೆ” ಎಂದು.  ಆದ್ದರಿಂದ ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ. ಇದನ್ನು ನಾವು ಕಠೋಪನಿಷತ್ತಿನಲ್ಲಿ ಬರುವ ಯಮ ಮತ್ತು ನಚಿಕೇತನ ಸಂಭಾಷಣೆಯಲ್ಲಿ ಕಾಣುತ್ತೇವೆ.  ಅಲ್ಲಿ ನಚಿಕೇತ ಯಮನಲ್ಲಿ ಜ್ಞಾನವನ್ನು ವರವಾಗಿ ಬೇಡಿದಾಗ ಯಮ ಆತನಿಗೆ “ನಿನಗೆ ಎಷ್ಟು ಸಂಪತ್ತು ಬೇಕು ಅದನ್ನು ಕೇಳು, ನಿನ್ನನ್ನು ಬೇಕಿದ್ದರೆ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡುತ್ತೇನೆ” ಎನ್ನುತ್ತಾನೆ. ಇದಕ್ಕೆ ನಚಿಕೇತ ಹೇಳುತ್ತಾನೆ “ ಇದೆಲ್ಲವೂ ನರಕಕ್ಕೆ ಹೋಗುವ ಸಾಧನಗಳು, ಇದ್ಯಾವುದೂ ನನಗೆ ಬೇಡ. ನನಗೆ ಭಗವಂತನ ಬಗ್ಗೆ ತಿಳಿಯಬೇಕು” ಎಂದು. ಹೀಗೆ ನಮ್ಮ ಪಾಪ ಕರ್ಮವನ್ನು ಸಂಪೂರ್ಣ ತೊಳೆದುಕೊಂಡು ಮೋಕ್ಷಕ್ಕೆ ಹೋಗುವ ಏಕಮಾತ್ರ ಮಾರ್ಗ ಭಗವಂತನ ಬಗೆಗಿನ ಜ್ಞಾನ. ಭಗವದರ್ಪಣ ಬುದ್ಧಿಯಿಂದ ಕರ್ಮ ಅನುಷ್ಠಾನ ಮಾಡಿದಾಗ ಶುಭಾಶುಭ ಕರ್ಮದ ಕಟ್ಟಿನಿಂದ ಬಿಡುಗಡೆ ಸಾಧ್ಯ.  ಕೃಷ್ಣ ಹೇಳುತ್ತಾನೆ “ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ” ಎಂದು. ಇಲ್ಲಿ ಹೇಳುವ ಸಂನ್ಯಾಸ ಒಂದು ಯೋಗ(ಉಪಾಯ). ಎಲ್ಲವನ್ನೂ ಭಗವಂತನಿಗೆ ಅರ್ಪಣೆ ಮಾಡಿ ಫಲಕಾಮನೆ ಇಲ್ಲದೆ ಭಗವತ್ ಪೂಜಾ ದೃಷ್ಟಿಯಿಂದ ಮಾಡುವಂತಹ ಸಾತ್ವಿಕರ ಸಾಧನೆ. ಸಂನ್ಯಾಸ ಎಂದರೆ ಕಾಮ-ಸಂಕಲ್ಪವನ್ನು ಭಗವಂತನಲ್ಲಿ ಅರ್ಪಿಸುವುದು. ಕಾಮ ಅಂದರೆ ಮಾಡಬೇಕುಎಂದು ಬಯಸುವುದು, ಸಂಕಲ್ಪ ಎಂದರೆ  ಮಾಡುತ್ತೇನೆಎಂದು ನಿರ್ಧರಿಸುವುದು. ಕಾಮಸಂಕಲ್ಪ ವರ್ಜಿತ-ಸಂನ್ಯಾಸ. ಹೀಗೆ ಭಾಗವತ ಧರ್ಮ ಪಾಲನೆ ಮಾಡಿದರೆ ಸುಲಭವಾಗಿ ಭಗವಂತನನ್ನು ಸೇರಬಹುದು-“ನಿಶ್ಚಿತವಾಗಿಯೂ ನನ್ನನ್ನು ಸೇರುತ್ತಾರೆ” ಎನ್ನುವುದು ಕೃಷ್ಣನ ಭರವಸೆ.  

ಸಮೋSಹಂ ಸರ್ವಭೂತೇಷು ನ ಮೇ ದ್ವೇಷ್ಯೋSಸ್ತಿ ನ ಪ್ರಿಯಃ
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ೨೯

ಮಃ ಅಮ್  ಸರ್ವಭೂತೇಷು ನ ಮೇ ದ್ವೇಷ್ಯಃ ಅಸ್ತಿ ನ ಪ್ರಿಯಃ
ಯೇ ಭಜಂತಿ ತು ಮಾಮ್  ಭಕ್ತ್ಯಾ ಮಯಿ ತೇ ತೇಷು ಚ ಅಪಿ ಅಹಮ್-ಎಲ್ಲ ಜೀವಿಗಳೂ ನನಗೆ ಒಂದೆ. ನನಗೆ ಹಗೆಯನೂ ಇಲ್ಲ, ಗೆಳೆಯನೂ ಇಲ್ಲ. ಆದರೆ ಯಾರು ನನ್ನನ್ನು ಭಕ್ತಿಯಿಂದ ಒಲಿಸುತ್ತಾರೆ ಅವರು ನನ್ನ ವಶ; ನಾನು ಅವರ ವಶ.

ಭಗವಂತನಿಗೆ ಯಾರ ಮೇಲೂ ಹಗೆಯಾಗಲೀ ಅಥವಾ ಗೆಳೆತನವಾಗಲೀ ಇಲ್ಲ. ಆತ ಪ್ರೀತಿಸುವುದು ವ್ಯಕ್ತಿಯನ್ನಲ್ಲ ಬದಲಿಗೆ ವ್ಯಕ್ತಿಯಲ್ಲಿರುವ ಜ್ಞಾನವನ್ನು ಮತ್ತು ಭಕ್ತಿಯನ್ನು. ಅರ್ಹತೆ ಇದ್ದವರು ಭಗವಂತನನ್ನು ಭಕ್ತಿಯಿಂದ ಒಲಿಸುತ್ತಾರೆ. ನಿಜವಾದ ಭಕ್ತರಿಗೆ ಭಗವಂತ ವಶನಾಗುತ್ತಾನೆ.
ಅಪಿ ಚೇತ್ ಸುದುರಾಚಾರೋ ಭಜತೇ ಮಾಮನನ್ಯಭಾಕ್
ಸಾಧುರೇವ ಸ ಮಂತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ ೩೦

ಅಪಿ ಚೇತ್ ಸು ದುರಾಚಾರಃ  ಭಜತೇ ಮಾಮ್ ಅನನ್ಯ ಭಾಕ್
ಸಾಧುಃ ಏಸಃ  ಮಂತವ್ಯಃ ಸಮ್ಯಗ್ ವ್ಯವಸಿತಃ  ಹಿ ಸಃ –ಬೇರೆಡೆಗೆ ಬಗೆಗೊಡದೆ ನನ್ನಲ್ಲೇ ಭಕ್ತಿಯಿಡುವವನು ಎಂಥ ನಡತೆಗೇಡಿಯಾದರೂ ಮೂಲತಃ ಒಳ್ಳೆಯವನೆಂದೇ ತಿಳಿಯಬೇಕು. ಏಕೆಂದರೆ ಅವನು ಖಚಿತವಾಗಿ ನಿಜವನರಿತವನು.

ನಿಜವಾದ ಭಕ್ತರು ಸಾಮಾನ್ಯವಾಗಿ ಎಂದೂ ದುರಾಚಾರಿಗಳಾಗಿರುವುದಿಲ್ಲ. ಆಕಸ್ಮಾತ್ ಒಬ್ಬ ಸಾತ್ವಿಕ ಯಾವುದೋ ಪ್ರಾರಬ್ಧ ಕರ್ಮದಿಂದ ಒಂದು ಜನ್ಮದಲ್ಲಿ ನಡತೆಗೇಡಿಯಾಗಿದ್ದರೂ ಸಹ ಆತ ಮೂಲತಃ ಉತ್ತಮನೇ ಆಗಿರುತ್ತಾನೆ. ಏಕೆಂದರೆ ಆತ ತನ್ನ ಅನೇಕ ಜನ್ಮದಲ್ಲಿ ಭಗವತ್ ಸಾಧನೆ ಮಾಡಿರುತ್ತಾನೆ. ಇದು ಸಾಮಾನ್ಯರಾದ ನಮಗೆ ಕಾಣದಿದ್ದರೂ ಕೂಡಾ ಭಗವಂತನಿಗೆ ಕಾಣುತ್ತದೆ. ಭಗವಂತನ ದೃಷ್ಟಿಯಲ್ಲಿ ಆತ ಉತ್ತಮನೆನಿಸಿರುತ್ತಾನೆ. ಈ ಕಾರಣಕ್ಕಾಗಿ ನಾವು ಯಾರನ್ನೂ ಹಗುರವಾಗಿ ಕಾಣಬಾರದು. ಒಬ್ಬ ಕೆಟ್ಟ ದಾರಿಯಲ್ಲಿ ನಡೆಯುತ್ತಿದ್ದರೆ ಅದಕ್ಕೆ ಅನೇಕ ಕಾರಣಗಳಿರಬಹುದು. ಆತ ಸಾತ್ವಿಕನೂ ಇರಬಹುದು. ಆದರೆ ಆತನ ಪ್ರರಾಬ್ಧ ಕರ್ಮ ಆತನನ್ನು ಆ ಮಾರ್ಗದಲ್ಲಿ ನಡೆಯುವಂತೆ ಮಾಡಿರಬಹುದು. ಉತ್ತಮನೆನಿಸಿದವನು ಶಾಶ್ವತವಾಗಿ ಆ ದಾರಿಯಲ್ಲಿ ಸಾಗುವುದಿಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.   

ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾನ್ತಿಂ ನಿಗಚ್ಛತಿ
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ೩೧

ಕ್ಷಿಪ್ರಮ್  ಭವತಿ ಧರ್ಮ ಆತ್ಮಾ ಶಶ್ವತ್ ಶಾಂತಿಮ್  ನಿಗಚ್ಛತಿ
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ –ಅವನು ಒಡನೆಯೆ ಸರಿದಾರಿ ಹಿಡಿಯುತ್ತಾನೆ; ಅಳಿವಿರದ ಸುಖದ ಸೆಲೆಯನ್ನು ಪಡೆಯುತ್ತಾನೆ. ಕೌಂತೇಯ, ಇದನ್ನು ಆಣೆಯಿಟ್ಟಾಡು: ‘ನನ್ನ ಭಕ್ತನೆಂದೂ ಕೆಡುವುದಿಲ್ಲ’.

ಹೀಗೆ ಪ್ರರಾಬ್ಧ ಕರ್ಮದಿಂದ ದಾರಿತಪ್ಪಿದವರು ಯಾವುದೋ ಒಂದು ಸಂದರ್ಭದಲ್ಲಿ ಒಡನೆಯೇ ತಾವು ಮಾಡುತ್ತಿರುವ ತಪ್ಪಿನ ಅರಿವಾಗಿ ಸರಿದಾರಿಯನ್ನು ಹಿಡಿಯುತ್ತಾನೆ, ಮತ್ತು ಅಳಿವಿರದ ಮೋಕ್ಷವನ್ನು ಸೇರುತ್ತಾನೆ. ಇದು ನಿಶ್ಚಿತ. ಇದನ್ನು ನೀನು ಆಣೆಮಾಡಿ ಹೇಳು ಎನ್ನುತ್ತಾನೆ ಕೃಷ್ಣ. ಇದಕ್ಕೆ ಉತ್ತಮ ಉದಾಹರಣೆ ಅಜಾಮಿಳನ ಕಥೆ. ತನ್ನ ಜೀವನದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿದ ಅಜಾಮಿಳ ಮೂಲತಃ ಒಬ್ಬ ಶ್ರೇಷ್ಠ ಜೀವ. ಇಂತಹ ಅಜಾಮಿಳನಿಗೆ ಭಗವಂತ ಜೀವನದ ಕೊನೆಗಾಲದಲ್ಲಿ ಸತ್ಯದ ದಾರಿ ತೋರಿಸಿ ಉದ್ಧಾರ ಮಾಡುತ್ತಾನೆ. ಆತ ತನ್ನ ಕೊನೆಗಾಲದಲ್ಲಿ ಸಾಧನೆ ಮಾಡಿ ಮೋಕ್ಷವನ್ನು ಸೇರುತ್ತಾನೆ.
ಇಲ್ಲಿ ಕೃಷ್ಣ ಅರ್ಜುನನಲ್ಲಿ ಏಕೆ “ನೀನು ಪ್ರತಿಜ್ಞೆ ಮಾಡು” ಎಂದು ಹೇಳುತ್ತಾನೆ ಎಂದರೆ-ಭಗವಂತ ಭಕ್ತರಿಗಾಗಿ ತನ್ನ ಪ್ರತಿಜ್ಞೆಯನ್ನು ಮುರಿದಾನು ಆದರೆ ಎಂದೂ ಭಕ್ತರ ಪ್ರತಿಜ್ಞೆಯನ್ನಲ್ಲ. ಇದಕ್ಕೆ ಉದಾಹರಣೆ ಮಹಾಭಾರತ ಯುದ್ಧದಲ್ಲಿ ನಡೆದ ಒಂದು ಘಟನೆ:
ಮಹಾಭಾರತ ಯುದ್ಧದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಯುದ್ಧದ ನಡುವೆ ಅರ್ಜುನ ಭೀಷ್ಮನ ಎದುರು ಯುದ್ಧ ಮಾಡುವುದಕ್ಕೆ ಹಿಂಜರಿದಾಗ, ಕೋಪಾವೇಶದಿಂದ  ಭೀಷ್ಮನನ್ನು ಸಾಯಿಸಲೆಂಬಂತೆ ರಥದಚಕ್ರವೊಂದನ್ನು ಹಿಡಿದು ಮುಂದೊತ್ತಿ ಬರುತ್ತಾನೆ! ಇದನ್ನು ನೋಡಿದ ಬೀಷ್ಮ  ತನ್ನ ಎರಡೂ ಕೈಗಳನ್ನು ಜೋಡಿಸಿ  ಹೀಗೆ ಹೇಳುತ್ತಾನೆ: " ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ.  ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ನೀನು ಮರೆತಿರುವೆ, ಆದರೆ  ನಿನ್ನ ಭಕ್ತನ ಪ್ರತಿಜ್ಞೆಯನ್ನಲ್ಲ; ನೀನಲ್ಲದೆ  ನಮಗೆ  ಗತಿ ಇನ್ಯಾರು?" ಎಂದು.  ಈ ಘಟನೆಯಲ್ಲಿ ಭಗವಂತ ಎಂತಹ ಭಕ್ತವತ್ಸಲ ಎನ್ನುವುದು ತಿಳಿಯುತ್ತದೆ.

Saturday, August 6, 2011

Bhagavad Geeta Kannada Chapter-09 Shloka 26-27


ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಇಲ್ಲಿ ನಾವು ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಯಬೇಕು. ನಾವು ನಮ್ಮ ದೈನಂದಿನ ಜೀವನದಲ್ಲಿ ಗಣಹೋಮ, ನವಗ್ರಹಹೋಮ, ದೈವಾರಾಧನೆ, ಸಂಕಷ್ಟಿ, ಇತ್ಯಾದಿ ರೂಪದಲ್ಲಿ ಉಪಾಸನೆ ಮಾಡುತ್ತೇವೆ. ಇದು ತಪ್ಪೇ? ನಾವು ಗಣಪತಿ ಅಥವಾ ಇನ್ಯಾವುದೋ ಪ್ರತೀಕದಲ್ಲಿ ಭಗವಂತನ ಆರಾಧನೆ ಮಾಡಿದರೆ ನಮಗೆ ಮೋಕ್ಷ ಪ್ರಾಪ್ತಿ ಇಲ್ಲವೇ? ಯಾವುದು ಸರಿ, ಯಾವುದು ತಪ್ಪು? ಯಾವುದು ತ್ರೈವಿಧ್ಯಧರ್ಮ, ಯಾವುದು ಭಾಗವತ ಧರ್ಮ  ?
ನಮ್ಮಲ್ಲಿ ಇಂದು ಭಾಗವತ ಧರ್ಮ ಕಣ್ಮರೆಯಾಗುತ್ತಿದೆ. ಯಾವುದೇ ಪ್ರತೀಕದ ಅಂತರ್ಯಾಮಿ ಭಗವಂತನ ಪೂಜೆ ತಪ್ಪಲ್ಲ. ಆದರೆ ಅದರ ಹಿಂದಿರುವ ನಮ್ಮ ಸಂಕಲ್ಪ ತಪ್ಪು. ಉದಾಹರಣೆಗೆ ನವಗ್ರಹ ಹೋಮ. ಒಂದು ವೇಳೆ ನಾವು ಯಾವ ಫಲ ಕಾಮನೆ ಇಲ್ಲದೆ, ಕೇವಲ ಮೋಕ್ಷ ಪ್ರಾಪ್ತಿಗಾಗಿ,  ಸಕಲ ದೇವತಾಪರಿವಾರನಾದ, ನವಗ್ರಹ ಅಂತರ್ಗತ ನಾರಾಯಣ ಪ್ರೀತ್ಯರ್ಥ  ನವಗ್ರಹ ಹೋಮ ಮಾಡಿದರೆ ಏನೂ ತಪ್ಪಿಲ್ಲ. ಆದರೆ   ಅಲ್ಲಿ ನಾವು  ‘ನವಗ್ರಹ ಅಂತರ್ಗತ ನಾರಾಯಣ ಪ್ರಸನ್ನನಾಗಿ ಆ ಮೂಲಕ ನವಗ್ರಹ ದೋಷ ಪರಿಹಾರ ಮಾಡಲಿ’ ಎಂದು ಸಂಕಲ್ಪ ಮಾಡಿದಾಗ   ಅದು ತ್ರೈವಿಧ್ಯ ಧರ್ಮವಾಗುತ್ತದೆ. ಸಂಕಲ್ಪ ಮಾಡುವಾಗ ಯಾವುದೇ ಕಾಮನೆ ಸೇರಿಸದೆ ಕೇವಲ ಭಗವದ್ ಪ್ರೀತ್ಯರ್ಥ ಎಂದು ಯಾವ ಕಾಮ್ಯ ಕರ್ಮ ಮಾಡಿದರೂ ಅದು ಭಾಗವತ ಧರ್ಮ. ಭಗವಂತ ಸುಪ್ರೀತನಾದರೆ ಎಲ್ಲವೂ ಸಿದ್ಧಿ. ಅವನು ಕೊಟ್ಟಿದ್ದನ್ನು ಸಂತೋಷವಾಗಿ ಭೋಗಿಸು, ಕೊಡದಿದ್ದನ್ನು ಬಯಸಬೇಡ. ನಿನಗೆ ಬಂದ ಕಷ್ಟ ನಿವಾರಣೆ ಮಾಡು ಎಂದು ಭಗವಂತನನ್ನು ಪೂಜಿಸಬೇಡ, ಬದಲಿಗೆ ಬಂದದ್ದನ್ನು ಪ್ರಸಾದವಾಗಿ ಸ್ವೀಕರಿಸು ಮತ್ತು ಜ್ಞಾನ ವೈರಾಗ್ಯ ಭಕ್ತಿ-ಮೋಕ್ಷ ಕೊಡು ಎಂದು ನಿರಂತರ ಭಗವಂತನನ್ನು ಪ್ರಾರ್ಥಿಸು. ನಿನ್ನ ರಕ್ಷಣೆಯ ಭಾರ ಆ ಭಗವಂತನದ್ದು. ಅದಕ್ಕಾಗಿ ನೀನು ತಲೆ ಕೆಡಿಸಿಕೊಳ್ಳಬೇಡ. ನಿನ್ನ ಜೀವನದಲ್ಲಿ ಏನು ನಡೆಯುತ್ತಿದೆ ಅದು ಆಕಸ್ಮಿಕವಲ್ಲ. ಅದು ಭಗವಂತನ ಇಚ್ಛೆ, ಅದರ ನಿವಾರಣೆಗಾಗಿ ನೀನು ಭಗವಂತನನ್ನು ಪೂಜಿಸುವುದಲ್ಲ ಬದಲಿಗೆ ಭಗವಂತನನ್ನು ಸೇರಲು ಭಗವಂತನನ್ನು ಪೂಜಿಸುವುದು. ಈ ರೀತಿ ನಾವು ನಮ್ಮ ಸಂಕಲ್ಪದ ಹಿಂದಿನ ಅನುಸಂಧಾನವನ್ನು ಬದಲಿಸಿಕೊಂಡಾಗ ಅದು ಭಾಗವತ ಧರ್ಮವಾಗುತ್ತದೆ. ಒಬ್ಬ ತ್ರೈವಿಧ್ಯ ತನ್ನ ಗುರುವಿಗೆ ‘ನನ್ನ ಗುರು’ ಎಂದು ನಮಸ್ಕಾರ ಮಾಡಿದರೆ ಭಾಗವತ ‘ಆ ಗುರುಗಳ ಒಳಗೆ ಭಗವಂತ  ಕೂತು ನನಗೆ ಪಾಠ ಹೇಳುತ್ತಿದ್ದಾನೆ’ ಎಂದು ತಿಳಿದು ನಮಸ್ಕಾರ ಮಾಡುತ್ತಾನೆ. ಭಾಗವತ ತನ್ನೆಲ್ಲಾ ಕ್ರಿಯೆಯಲ್ಲಿ ಭಗವಂತನನ್ನು ಕಾಣುತ್ತಾನೆ. ಆತ ತನ್ನೆಲ್ಲಾ ಕ್ರಿಯಾ ಕರ್ಮದಲ್ಲಿ ಮೋಕ್ಷ ಮತ್ತು ಭಗವಂತನನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಆತನ ಪೂಜಾ ಸಂಕಲ್ಪದಲ್ಲಿ  ಮೋಕ್ಷದ ಬಯಕೆಯನ್ನು ಬಿಟ್ಟು ಇನ್ಯಾವುದೇ ಬಯಕೆ ಇರುವುದಿಲ್ಲ.  ನಾವು ಈ ಎತ್ತರಕ್ಕೇರುವುದು ಅಸಾಧ್ಯವಲ್ಲ. ಇದನ್ನು ಸಾಧ್ಯ ಮಾಡಲು ಪ್ರಯತ್ನ ಬೇಕು ಅಷ್ಟೇ. ನಾವು ಎಷ್ಟುಎಷ್ಟು ಭಗವತ್ ಪ್ರೀತ್ಯರ್ಥ ಕರ್ಮ ಮಾಡುತ್ತೇವೋ ಅಷ್ಟುಅಷ್ಟು ಹೆಚ್ಚು ಮೋಕ್ಷಕ್ಕೆ ಹತ್ತಿರವಾಗುತ್ತೇವೆ. ಭಗವಂತನಲ್ಲಿ ‘ನನಗೆ ಇದನ್ನು ಕೊಡು’ ಎಂದಾಗಾಲಿ ಅಥವಾ  ‘ಇದನ್ನು ನಿವಾರಿಸು’ ಎಂದಾಗಲಿ  ಎಂದೂ  ಕೇಳಬೇಡ. ನಿನಗೆ ಏನು ಬೇಕು ಎನ್ನುವುದು ಭಗವಂತನಿಗೆ ಗೊತ್ತಿದೆ, ಅದನ್ನು ಭಗವಂತನಿಗೆ ಬಿಡು. ಕೇವಲ ಭಗವತ್ ಪ್ರೀತಿಗಾಗಿ, ಮೋಕ್ಷ ಸಾಧನೆಗಾಗಿ  ಕರ್ಮ ಮಾಡು”. “ಇದು ಕೇವಲ ಭೀಮಸೇನ/ವಾಯುದೇವರಿಗೆ ಮಾತ್ರ” ಎಂದು ಪಲಾಯನ ವಾದ ಮಾಡದೆ ಯಾವುದೇ ಫಲ ಕಾಮನೆ ಇಲ್ಲದೆ ಪೂರ್ಣ ಭಕ್ತಿಯಿಂದ ಭಗವಂತನ ಪೂಜೆ ಮಾಡು. ಪೂಜೆಯಲ್ಲಿ ನಿನಗೆ ಬೇಡಲು ಇರುವ ಅಧಿಕಾರ ಕೇವಲ ‘ಮೋಕ್ಷ ಮತ್ತು ಭಗವಂತ’. ಅದನ್ನು ಪಡೆಯಲು ನಿನ್ನ ಸಾಧನೆಯನ್ನು ಮೀಸಲಿಡು. ಜೀವನದಲ್ಲಿ ಬರುವ ಏಳು ಬೀಳು ಎಲ್ಲವೂ ನಶ್ವರ, ಆ ಬಗ್ಗೆ ಯೋಚಿಸದೆ, ಸಂಸಾರದಿಂದ ಕಳಚಿಕೊಂಡು ಸಾವಿಲ್ಲದ ಮೋಕ್ಷವನ್ನು ಸೇರುವುದಕ್ಕಾಗಿ ಸಾಧನೆ ಮಾಡು.  ಇದು ಇಲ್ಲಿರುವ ಮೂಲ ಸಂದೇಶ.
ಭಗವಂತನ ಪೂಜೆಗೆ ಬೇಕಾಗಿರುವುದು ಧನ-ಕನಕವಲ್ಲ. ಕೇವಲ ನಿಷ್ಕಾಮ ಭಕ್ತಿ. ಭಗವಂತನ ಪೂಜೆ ಎಷ್ಟು ಸುಲಭ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ:         

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ೨೬

ಪತ್ರಮ್  ಪುಷ್ಪಮ್  ಫಲಮ್  ತೋಯಮ್  ಯಃ  ಮೇ ಭಕ್ತ್ಯಾ ಪ್ರಯಚ್ಛತಿ
ತ್ ಅಮ್  ಭಕ್ತಿ ಉಪಹೃತಮ್ ಅಶ್ನಾಮಿ ಪ್ರಯತತ್ಮನಃ –ಯಾರು ಎಲೆಯನ್ನೋ, ಹೂವನ್ನೋ, ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾನೆ ನನ್ನಲ್ಲೇ ಬಗೆಯಿಟ್ಟ ಅವನ ಭಕ್ತಿಯ ಆ ಕೊಡುಗೆಯನ್ನು ನಾನು ನಲ್ಮೆಯಿಂದ ಕೊಳ್ಳುತ್ತೇನೆ.

  ಮಹೋನ್ನತನಾದ ಭಗವಂತನ ಪೂಜೆಗೆ ಮೂಲವಾಗಿ ಬೇಕಾಗಿರುವುದು ‘ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಳ್ಳುವುದು(involvement)’, ಮತ್ತು ‘ಮನಸ್ಸು ತುಂಬಿ ಆರಾಧನೆ’ ಮಾಡುವುದು. ಮನಸ್ಸಿನಲ್ಲಿ ಭಕ್ತಿ ತುಂಬಿ ತುಳಸಿ ಪತ್ರೆಯನ್ನೋ, ಹೂವನ್ನೋ ಅರ್ಪಿಸಿದರೆ ಅದನ್ನು ಭಗವಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಇಲ್ಲಿ ಬಂಗಾರದ ಪೀಠವಾಗಲೀ, ಬೆಳ್ಳಿಯ ಹರಿವಾಣವಾಗಲಿ, ಪಂಚಪಾತ್ರೆಯಾಗಲಿ ಏನೂ ಬೇಡ. ಮನೆಯಲ್ಲಿ, ಮನೆ ತೋಟದಲ್ಲಿ ಏನಿದೆ ಅದನ್ನೇ ಅರ್ಪಿಸು. ಮನೆಯಲ್ಲಿ ಹಾಲಿಲ್ಲದಿದ್ದರೆ ಒಂದು ಲೋಟ ನೀರನ್ನು ಭಕ್ತಿಯಿಂದ ಅರ್ಪಿಸು. ಆದರೆ ಅದರ ಹಿಂದೆ ಭಾವ ಶುದ್ಧಿ ಇರಲಿ ಅಷ್ಟೇ.  ಕೃಷ್ಣ ಹೇಳುತ್ತಾನೆ “ಯೋ ಮೇ ಭಕ್ತ್ಯಾ ಪ್ರಯಚ್ಛತಿ” ಎಂದು. ಭಗವಂತ ಬಯಸುವುದು ನಮ್ಮ ಅಂತರಂಗದ ಪ್ರೀತಿಯನ್ನು ಮತ್ತು ಹೃದಯವಂತಿಕೆಯನ್ನು ಹೊರತು ಹೊರಗಿನ ವೈಭವವನ್ನಲ್ಲ. “ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ”-“ನೀನು ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸಿ, ಭಕ್ತಿಯಿಂದ ಏನು ಕೊಟ್ಟರೂ ಅದನ್ನು ನಾನು ಸ್ವೀಕರಿಸುತ್ತೇನೆ” ಎನ್ನುತ್ತಾನೆ ಕೃಷ್ಣ. ರಾಮಾಯಣದಲ್ಲಿ ಬರುವ ಶಬರಿಯ ಕಥೆ ಭಗವಂತನ ಈ ನುಡಿಗೆ ಒಂದು ದೃಷ್ಟಾಂತ.  

ತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್  
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ೨೭

ತ್ ಕರೋಷಿ ಯತ್ ಅಶ್ನಾಸಿ ಯತ್ ಜುಹೋಷಿ ದದಾಸಿ ಯತ್     
ತ್ ತಪಸ್ಯಸಿ ಕೌಂತೇಯ ತತ್ ಕುರುಷ್ವ ಮತ್ ಅರ್ಪಣಮ್-ಕೌಂತೇಯ, ಏನು ಮಾಡುವೆ, ಏನು ತಿನ್ನುವೆ, ಏನು ಹೋಮಿಸುವೆ, ಏನು ನೀಡುವೆ, ಏನು ತಪಗೈವೆ ಅದನು ನನಗೆ ಒಪ್ಪಿಸು.

ಕೃಷ್ಣ ಹೇಳುತ್ತಾನೆ “ನನಗಾಗಿ ನೀನು ಏನನ್ನೂ ಮಾಡುವುದು ಬೇಡ ಆದರೆ ನಿನಗೋಸ್ಕರ ಏನು ಮಾಡುತ್ತೀಯೋ ಅದನ್ನು ನನಗೆ ಅರ್ಪಿಸು” ಎಂದು. ನಮ್ಮ ನಿತ್ಯ ಜೀವನದಲ್ಲಿ ಮಾಡಬೇಕಾದ ಅನೇಕ ಅನಿವಾರ್ಯ ವೃತ್ತಿ ಕಾರ್ಯಗಳಿರುತ್ತವೆ. ಜೀವನ ನಿರ್ವಹಣೆಯ ಕಾಯಕವಿರುತ್ತದೆ. ನಾವು ಅದನ್ನೇ ಭಗವಂತನ ಪೂಜೆ ಎಂದು ತಿಳಿದು ಮಾಡಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಧರ್ಮವ್ಯಾಧನ ಕಥೆ. ಮಾಂಸ ವಿಕ್ರಯ ಮಾಡಿ ಜೀವನ ಸಾಗಿಸುತ್ತಿದ್ದ ಆತನಲ್ಲಿ ಒಂದು ಸಂಕಲ್ಪ ಇತ್ತು. “ಮಾಂಸ ತಿನ್ನುವುದು ನನಗೆ ಆನುವಂಶೀಯವಾಗಿ ಬಂದ ಅಭ್ಯಾಸ. ಆದ್ದರಿಂದ ನಾನು ಮಾಂಸ ತಿನ್ನುತ್ತೇನೆ, ನನಗೆ ಬದುಕುವುದಕ್ಕೋಸ್ಕರ ಮತ್ತು ನನ್ನ ತಂದೆತಾಯಿಯನ್ನು ಸಾಕುವುದಕ್ಕೊಸ್ಕರ ನನ್ನ ಪಾಲಿಗೆ ಬಂದ ಈ ವೃತ್ತಿಯನ್ನು ನಾನು ಮಾಡುತ್ತೇನೆ. ಇದರಿಂದ ನನ್ನ ಬದುಕಿಗೆ ಬೇಕಾದಷ್ಟನ್ನು ಮಾತ್ರ ನಾನು ಗಳಿಸುತ್ತೇನೆ. ಎಂದೂ ವ್ಯವಹಾರದಲ್ಲಿ ಜನರ ಶೋಷಣೆ ಮಾಡುವುದಿಲ್ಲ” ಎಂದುಕೊಂಡು ಮಾಂಸ ವಿಕ್ರಯ ಮಾಡುತ್ತಿದ್ದ ಆತ. ಇದರಿಂದ ಆತನಿಗೆ ದೊಡ್ಡ ಜ್ಞಾನಿ ಧರ್ಮವ್ಯಾಧ ಎನ್ನುವ ಹೆಸರು ಬಂತು. ಋಷಿ ಮುನಿಗಳು ಆತನಿಂದ ಪಾಠ ಕಲಿಯುವ ಪ್ರಸಂಗ ಬಂತು. ಇದಕ್ಕೆ ಮೂಲ ಕಾರಣ ಆತ ತಾನು ಏನು ಮಾಡುತ್ತಿದ್ದನೋ ಅದನ್ನು ದೇವರ ಪೂಜೆ ಎಂದು ಮಾಡಿದ ಅಷ್ಟೇ. ಹೀಗೆ ಎಂದೂ ನಾವು ಮಾಡುವ ವೃತ್ತಿ  ಮುಖ್ಯವಾಗುವುದಿಲ್ಲ,  ಬದಲಿಗೆ ಅದನ್ನು ಭಗವಂತನ ಪೂಜೆ ಎಂದು ಮಾಡುವ ಅನುಸಂಧಾನ ಮುಖ್ಯವಾಗುತ್ತದೆ.
ನಿನ್ನ ನಿತ್ಯ ಕರ್ತವ್ಯ ಏನಿದೆ ಅದನ್ನು ಭಗವಂತನಿಗೆ ಅರ್ಪಿಸು. ಅದನ್ನು ಭಗವಂತನ ಪೂಜೆ ಎಂದು ಮಾಡು. ಭಗವಂತನಿಗಾಗಿ ಭಕ್ಷ್ಯ ಭೋಜ್ಯವನ್ನು ಮಾಡುವ ಅಗತ್ಯವಿಲ್ಲ. ನೀನು ಏನನ್ನು ತಿನ್ನುತ್ತೀಯೋ ಅದನ್ನು ಭಗವಂತನಿಗೆ ಅರ್ಪಿಸು. ಹೀಗೆ ಮಾಡಿದಾಗ ಭಗವಂತನ ಆರಾಧನೆ ಪ್ರತ್ಯೇಕವಾಗುವುದಿಲ್ಲ ಮತ್ತು ಕಷ್ಟವಾಗುವುದಿಲ್ಲ. ಭಗವಂತನಿಗಾಗಿ ಯಾವುದೋ ವಿಶೇಷ ಹೋಮ ಹವನ ಮಾಡುವ ಅಗತ್ಯವಿಲ್ಲ. ನೀನು ಏನು ಹೋಮ ಮಾಡುತ್ತೀಯೋ ಅದನ್ನೇ ‘ಅಗ್ನಿ ಅಂತರ್ಗತ ನಾರಾಯಣಾಯ ಇದಮ್ ನ ಮಮ’ ಎಂದು ಅರ್ಪಿಸು.  ಒಬ್ಬ ಹಸಿದ ವ್ಯಕ್ತಿ ಆತನ ಹೊಟ್ಟೆಯಲ್ಲಿ ವೈಶ್ವಾನರ ರೂಪಿ ಭಗವಂತನನ್ನು ಹೊತ್ತು ಬಂದಿದ್ದಾನೆ ಎಂದು ತಿಳಿದು  ಆತನೊಳಗಿರುವ  ವೈಶ್ವಾನರ ಪ್ರಸನ್ನನಾಗಲಿ ಎಂದು ಆ ವ್ಯಕ್ತಿಯನ್ನು ಸತ್ಕಾರ ಮಾಡು. ಇದೇ ಭಗವಂತನ ಮಹಾ ಪೂಜೆ ಎನಿಸುತ್ತದೆ.
ಕೃಷ್ಣ ಹೇಳುತ್ತಾನೆ “ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್” ಎಂದು. ಇಲ್ಲಿ ತಪಸ್ಸು ಎಂದರೆ ‘ಚಿಂತನೆ’ ಅಥವಾ ವೃತಾನುಷ್ಟಾನ. ಉದಾಹರಣೆಗೆ ‘ಸಂಕಷ್ಟಿ’- ಅದನ್ನು ಆಚರಿಸುವಾಗ ಗಣಪತಿ ಅಂತರ್ಗತನಾದ ಭಗವಂತನಿಗೆ ಅರ್ಪಿತವಾಗಲಿ ಎಂದು ಮಾಡು. ಅಲ್ಲಿ ಯಾವುದೇ ಫಲಾಪೇಕ್ಷೆ ಅಹಂಕಾರ ಇಟ್ಟುಕೊಳ್ಳಬೇಡ. ಹೀಗೆ ಯಾವ ಆಚರಣೆಯೂ ಕೂಡಾ ಅಂತತಃ ಪರಮ ಪುರುಷನಾದ ಭಗವಂತನಿಗೆ ಅರ್ಪಿತ ಎಂದು ತಿಳಿದು ಮಾಡಿದಾಗ ಅದು ನಿಜವಾದ ತಪಸ್ಸಾಗುತ್ತದೆ.  ಇಲ್ಲಿ ಅರ್ಜುನನಿಗೆ “ನಿನ್ನ ಕರ್ತವ್ಯ ಕರ್ಮವಾಗಿ ಬಂದಿರುವ ಈ  ಯುದ್ಧವನ್ನೂ ಕೂಡಾ ಭಗವಂತನ ಪೂಜೆಯಾಗಿ ಮಾಡು” ಎನ್ನುವ ಸಂದೇಶವನ್ನು ಈ ಶ್ಲೋಕದ ಮೂಲಕ  ಕೃಷ್ಣ ನೀಡಿದ್ದಾನೆ.

Bhagavad Geeta Kannada Chapter-09 Shloka 23-25


ಯೇSಪ್ಯನ್ಯದೇವತಾ ಭಕ್ತಾ ಯಜಂತೇ  ಶ್ರದ್ಧಯಾSನ್ವಿತಾಃ
ತೇSಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್  ೨೩

ಯೇ ಅಪಿ ಅನ್ಯ ದೇವತಾ ಭಕ್ತಾಃಜಂತೇ  ಶ್ರದ್ಧಯಾನ್ವಿತಾಃ
ತೇಪಿ ಮಾಮ್ ಏವ ಕೌಂತೇಯ ಯಜಂತಿ ಅವಿಧಿ ಪೂರ್ವಕಮ್-ಕೌಂತೇಯ, ಯಾರು ಬೇರೆ ದೇವತೆಗಳ ಭಕ್ತರಾಗಿ ಶ್ರದ್ಧೆಯಿಂದ ಅವರನ್ನು ಆರಾಧಿಸುತ್ತಾರೆ ಅಂಥವರು ಕೂಡ ತಪ್ಪುದಾರಿಯಿಂದ ನನ್ನನ್ನೆ ಆರಾಧಿಸುತ್ತಾರೆ.

ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ        
ನತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ೨೪

ಅಹಮ್  ಹಿ ಸರ್ವಯಜ್ಞಾನಾಮ್  ಭೋಕ್ತಾ ಚ ಪ್ರಭುಃ ಏವ  ಚ          
ತು ಮಾಮ್ ಅಭಿಜಾನಂತಿ ತತ್ತ್ವೇನ ಅತಃ ಚ್ಯವಂತಿ ತೇ-ನಾನೆ ಅಲ್ಲವೆ ಎಲ್ಲ ಪೂಜೆಗಳನ್ನು ಕೊಳ್ಳುವವನು ಮತ್ತು ನಡೆಸುವವನು. ನಿಜವಾಗಿ ಅವರು ನನ್ನನ್ನು ಚನ್ನಾಗಿ ತಿಳಿದಿಲ್ಲ. ಅದರಿಂದ ಜಾರಿ ಬೀಳುತ್ತಾರೆ.

ಹಿಂದೆ ವಿಶ್ಲೇಶಿಸಿದಂತೆ ಕೆಲವರು ತಮ್ಮ ಬಯಕೆಗಳನ್ನು ಈಡೇರಿಸುವಂತೆ ಕೋರಿ ದೇವತೆಗಳನ್ನು  ಪ್ರಮುಖವಾಗಿ (ಭಗವಂತನಿಗಿಂತ ಬಿನ್ನವಾಗಿ) ಪೂಜಿಸುತ್ತಾರೆ. ಹೀಗೆ ಮಾಡಿದಾಗ ಏನಾಗುತ್ತದೆ ಎನ್ನುವ ಪ್ರಶ್ನೆ ನಮಗೆ ಮೂಡಬಹುದು. ಹಿಂದೆ ಕೃಷ್ಣ ಹೇಳಿದ್ದ “ಎಲ್ಲವುದರಲ್ಲೂ ಇರುವವನು ನಾನು” ಎಂದು. ಯಾರನ್ನು ಪ್ರಮುಖವಾಗಿ ಪೂಜಿಸಿದರೂ ಕೂಡಾ ಅದು ಸಲ್ಲುವುದು ಭಗವಂತನನ್ನೇ. ಇಲ್ಲಿ ಸಮಸ್ಯೆ ಎಂದರೆ ಪೂಜೆ ಮಾಡುವವರಿಗೆ ಆ ಅರಿವು ಇಲ್ಲದಿರುವುದು. ಇದರಿಂದ ತಪ್ಪು ಅನುಸಂಧಾನ. ಅರಿವಿಲ್ಲದೇ ಮಾಡುವ ಭಕ್ತಿ ಪೂರ್ಣ ಭಕ್ತಿಯಾಗಲಾರದು. ಪರತತ್ವದ ಎಚ್ಚರ ಇಲ್ಲದೆ ಮಾಡುವ ಪೂಜೆ ಎಂದೂ ನಮ್ಮನ್ನು ಉನ್ನತಿಗೇರಿಸಲಾರದು. ಕೃಷ್ಣ ಹೇಳುತ್ತಾನೆ “ಈ ರೀತಿಯ ಪೂಜೆಯಿಂದ ಪುಣ್ಯ ಗಳಿಸುವ ಬದಲು, ಪುಣ್ಯ ಕರ್ಮ ಮಾಡಿಯೂ ಜಾರಿ ಬಿದ್ದಂತೆ” ಎಂದು. ಆದ್ದರಿಂದ ಯಾವ ಪೂಜೆಯನ್ನೇ ಆಗಲಿ ಪರತತ್ವದ ಎಚ್ಚರದಿಂದ ಮಾಡಿದಾಗ ಮಾತ್ರ ಅದು ಸಾರ್ಥಕ. ಯಾರನ್ನೇ ಪೂಜಿಸಿದರೂ ಆ ಪೂಜೆ ಅಂತತಃ ಸಲ್ಲುವುದು ಭಗವಂತನನ್ನೇ. ಏಕೆಂದರೆ ಸರ್ವ ಯಜ್ಞಗಳ ಭೊಕ್ತಾರ ಭಗವಂತ.  ಇದು ಯಜ್ಞದ ಹಿಂದಿರುವ ಯಜ್ಞಪುರುಷನ ರಹಸ್ಯ. ಪುರುಷಸೂಕ್ತದಲ್ಲಿ ಹೇಳುವಂತೆ "ಯಜ್ಞೇನ ಯಜ್ಞ ಮಯಜಂತ ದೇವಾಃ"-ಯಜ್ಞದಿಂದ ಯಜ್ಞ ನಾಮಕ ಭಗವಂತನ ಆರಾಧನೆ. ಯಜ್ಞಗಳ ಭೊಕ್ತ, ಯಜ್ಞಗಳ ಸ್ವಾಮಿ, ಯಜ್ಞ ಶಬ್ದವಾಚ್ಯನಾದ ಭಗವಂತನ ಆರಾಧನೆಯಿಂದ ನಾವು ಭಗವಂತನನ್ನು ಸೇರಬಹುದು.    
ಹೀಗಿದ್ದರೂ ಕೂಡಾ ಸಮಾಜದಲ್ಲಿ ನಾವು ಅನೇಕ ರೀತಿಯಲ್ಲಿ ದೇವತಾ ಆರಾದನೆ ಮಾಡುವವರನ್ನು ನೋಡುತ್ತೇವೆ. ಅಂತವರು  ಆ ದೇವತೆಯನ್ನು ಪೂಜಿಸುವುದರಲ್ಲೇ ಶ್ರದ್ಧೆ ಇಟ್ಟಿರುತ್ತಾರೆ. ಆ ರೀತಿ ಪೂಜೆ ಮಾಡುವವರ ಗತಿ ಏನು?  ಇದಕ್ಕೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.  

ಯಾಂತಿ  ದೇವವ್ರತಾ ದೇವಾನ್ ಪಿತ ನ್ ಯಾಂತಿ  ಪಿತೃವ್ರತಾಃ
ಭೂತಾನಿ ಯಾಂತಿ  ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಮ್            ೨೫

ಯಾಂತಿ  ದೇವವ್ರತಾಃ  ದೇವಾನ್ ಪಿತ ನ್ ಯಾಂತಿ  ಪಿತೃವ್ರತಾಃ
ಭೂತಾನಿ ಯಾಂತಿ  ಭೂತೇಜ್ಯಾ ಯಾಂತಿತ್ ಯಾಜಿನಃ ಅಪಿ ಮಾಮ್-ದೇವತೆಗಳ ನೇಮ ಹಿಡಿದವರು ದೇವತೆಗಳನ್ನು ಸೇರುತ್ತಾರೆ. ಪಿತೃಗಳ ನೇಮ ಹಿಡಿದವರು ಪಿತೃಗಳನ್ನು ಸೇರುತ್ತಾರೆ. ದೆವ್ವಗಳನ್ನು ಪೂಜಿಸುವವರು ದೆವ್ವಗಳನ್ನು ಸೇರುತ್ತಾರೆ. ನನ್ನನ್ನು ಪೂಜಿಸುವವರು ನನ್ನನ್ನೇ ಸೇರುತ್ತಾರೆ.

ಕೃಷ್ಣ ಹೇಳುತ್ತಾನೆ “ನೀವು ಯಾರನ್ನು ಪೂಜಿಸುತ್ತೀರೋ ಅವರನ್ನೇ  ಪಡೆಯುತ್ತೀರಿ” ಎಂದು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನೂ, ಪಿತೃಗಳನ್ನು ಪೂಜಿಸುವವರು ಪಿತೃಗಳನ್ನೂ, ಭೂತ ಪ್ರೇತವನ್ನು(ದೇವತಾ ಗಣ) ಪೂಜಿಸುವವರು ಭೂತ ಪ್ರೇತಗಳನ್ನೂ ಪಡೆಯುತ್ತಾರೆ. ಆದರೆ ಯಾರು ಏಕಭಕ್ತಿಯಿಂದ ಎಲ್ಲವುದರಲ್ಲೂ ಭಗವಂತನನ್ನು ಕಂಡು ಶ್ರದ್ಧೆಯಿಂದ ಆತನನ್ನು ಪೂಜಿಸುತ್ತಾರೋ- “ಅವರು ನನ್ನನ್ನು ಸೇರುತ್ತಾರೆ” ಎನ್ನುವ ಭರವಸೆಯನ್ನು ಇಲ್ಲಿ  ಕೃಷ್ಣ ಕೊಡುತ್ತಾನೆ. ದೇವತೆಗಳನ್ನು ಪೂಜಿಸಿ ಸ್ವರ್ಗವನ್ನು ಪಡೆಯಬಹುದು, ಆದರೆ ಮರಳಿ ಹುಟ್ಟದ ಮೋಕ್ಷವನ್ನಲ್ಲ. ಯಾವ ಪೂಜೆ ಮಾಡಿದರೂ ಸರಿಯೇ, ಪ್ರತಿಯೊಂದು ಕ್ರಿಯೆಯ ಹಿಂದೆ ಭಗವಂತನ ಅರಿವಿದ್ದು ಅದರಿಂದ ಅವನನ್ನು ಆರಾಧಿಸುವುದೇ ನಿಜವಾದ ಪೂಜೆ. ಅರಿವಿಲ್ಲದ ಪೂಜೆ ಎಂದೂ ನಮ್ಮನ್ನು ಮೋಕ್ಷದತ್ತ ಕೊಂಡೊಯ್ಯುವುದಿಲ್ಲ.ಬ್ರಹ್ಮಾದಿ ಸಮಸ್ತ ದೇವತಾ ಪರಿವಾರ ಸಮೆತನಾಗಿರತಕ್ಕಂತಹ ಭಗವಂತನ ಆರಾಧನೆ ಮಾಡಿದರೆ ಆಗ ಭಗವಂತನನ್ನು ಸೇರುತ್ತಾರೆ. ಇದು ಶಾಸ್ತ್ರದ ವ್ಯವಸ್ಥೆ.

Thursday, August 4, 2011

Bhagavad Gita Kannada Chapter-09 Shloka 19-22


ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ        
ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ೧೯

ತಪಾಮಿ ಅಮ್ ಅಮ್  ವರ್ಷಮ್  ನಿಗೃಹ್ಣಾಮಿ ಉತ್ಸೃಜಾಮಿ ಚ 
ಅಮೃತಮ್  ಚ ಏವ  ಮೃತ್ಯುಃ ಚ ತ್ ಅತ್ ಚ ಅಹಮ್ ಅರ್ಜುನ-ನಾನು ಸುಡುತ್ತೇನೆ. ನಾನು ಮಳೆ ಬರದಂತೆ ತಡೆಯುತ್ತೇನೆ; ಮಳೆಗರೆಸುತ್ತೇನೆ. ಸಾವು ಬರದಂತೆ ಮಾಡುತ್ತೇನೆ; ಸಾಯಿಸುತ್ತೇನೆ. ಓ ಅರ್ಜುನ, ಕಾಣುವ ಕಾರ್ಯ, ಕಾಣದ ಕಾರಣ ಎಲ್ಲವೂ ನನ್ನಿಂದ.[ಸದ್ಗುಣಗಳ ಸೆಲೆಯಾದ್ದರಿಂದ ನಾನು ‘ಸತ್’. ನನ್ನಂಥವ ಇನ್ನೊಬ್ಬ ಇರದ್ದರಿಂದ ನಾನು ‘ಅಸತ್’]

ಸೂರ್ಯನಲ್ಲಿ ಸನ್ನಿಹಿತನಾಗಿ,  ಭೂಮಿಗೆ ಸೌರಶಕ್ತಿಯನ್ನು ಹರಿಸಿ, ಬದುಕು ಕೊಟ್ಟವ ಭಗವಂತ. ಕಾಲ ಕಾಲಕ್ಕೆ ಮಳೆ ಬರುವಂತೆ ಮಾಡುವವನೂ ಅವನೆ, ಅಕಾಲದಲ್ಲಿ ಮಳೆ ಬಾರದಂತೆ ತಡೆಯುವವನೂ ಅವನೆ. ಮಳೆ ಬರಬೇಕಾದಾಗ ಬಾರದೇ ಇರುವುದು, ಮಳೆ ಬರಬಾರದಾಗ ಬರುವುದೂ ಭಗವಂತನನಿಂದಲೆ.  ಕಾಣುವ ಕ್ರಿಯೆಯ ಹಿಂದಿನ ಕಾರಣಶಕ್ತಿ ಭಗವಂತ.
ಭಗವಂತ ನಮ್ಮ ಬದುಕಿನಲ್ಲಿ ಉಸಿರು ಕೊಟ್ಟು ಬದುಕಿಸುವ ಅಮೃತ. ಆಯಸ್ಸು ಮುಗಿದಾಗ ಉಸಿರು ನಿಲ್ಲಿಸಿ ಕರೆಸಿ ಕೊಳ್ಳುವವನೂ ಅವನೆ. ಒಟ್ಟಿನಲ್ಲಿ ಕೃಷ್ಣ ಹೇಳುತ್ತಾನೆ “ಕಣ್ಣಿಗೆ ಕಾಣುವ (ಸತ್), ಕಣ್ಣಿಗೆ ಕಾಣದ (ಅಸತ್) ಸಮಸ್ತ ಪ್ರಪಂಚವನ್ನು ನಿರ್ವಹಿಸುವ ಶಕ್ತಿ ನಾನು” ಎಂದು. ಇದು ಕೃಷ್ಣ ಸೂಕ್ಷ್ಮವಾಗಿ ಭಗವಂತನ ಅನುಸಂಧಾನಕ್ಕೆ ಕೊಟ್ಟಿರುವ ಸಮಗ್ರ ಚಿತ್ರಣ. ಇಲ್ಲಿ ಪೂರ್ಣ ಪ್ರಮಾಣದಲ್ಲಿ ಭಗವಂತನ ಅನುಸಂಧಾನಕ್ಕೆ ಬೇಕಾದ ಸಮಗ್ರ ಸಂಗತಿ ಅಡಗಿದೆ.

ಮುಂದೆ ಕೃಷ್ಣ ತನ್ನ ಭಕ್ತರಲ್ಲಿ(ಜ್ಞಾನಿಗಳಲ್ಲೇ) ಪ್ರಮುಖವಾಗಿ ಎರಡು ವಿಧದ ಭಕ್ತರ ಬಗ್ಗೆ ವಿವರಿಸುತ್ತಾನೆ. ಅವರೆಂದರೆ ತ್ರೈವಿದ್ಯರು ಮತ್ತು ಭಾಗವತರು.   

ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾಃ ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ
ತೇ ಪುಣ್ಯಮಾಸಾದ್ಯ ಸುರೇಂದ್ರ ಲೋಕಮಶ್ನಂತಿ ದಿವ್ಯಾನ್ ದಿವಿ ದೇವಭೋಗಾನ್ ೨೦

ತ್ರೈ ವಿದ್ಯಾಃ ಮಾಮ್  ಸೋಮಪಾಃ ಪೂತ ಪಾಪಾಃ ಯಜ್ಞೈಃ ಇಷ್ಟ್ವಾ ಸ್ವಃ ಗತಿಮ್ ಪ್ರಾರ್ಥಯಂತೇ
ತೇ ಪುಣ್ಯಮ್ ಆಸಾದ್ಯ ಸುರ ಇಂದ್ರ ಲೋಕಮ್ ಅಶ್ನಂತಿ ದಿವ್ಯಾನ್ ದಿವಿ ದೇವ ಭೋಗಾನ್ – ತ್ರೈವಿದ್ಯರು ಮೂರು ವೇದಗಳ ಮೊರೆಹೊಕ್ಕ ಹಂಬಲಿಗರು. ಹೊಮಿಸುತ್ತ ನನ್ನನಾರಾಧಿಸಿ, ಸೋಮರಸ ಕುಡಿದು, ಪಾಪ ತೊಡೆದು, ಸಗ್ಗದ ದಾರಿಯನ್ನು ಬೇಡುತ್ತಾರೆ. ಅವರು ಪುಣ್ಯದ ಫಲವಾಗಿ ದೇವೇಂದ್ರನ ನಾಡು ಸೇರಿ, ಆ ಸಗ್ಗದಲ್ಲಿ ವೆಗ್ಗಳದ ದೇವಭೂಗಗಳನ್ನು ಉಣ್ಣುತ್ತಾರೆ.

ತ್ರೈವಿದ್ಯರು ಎಂದರೆ ತ್ರಿಪಥಗಾಮಿಗಳು! ಇವರು ಭಗವಂತನ ಜೊತೆಗೆ ಅನೇಕವನ್ನು ಹಂಚಿಕೊಂಡವರು. ಇವರು ಸ್ವರ್ಗದ ಬಯಕೆ, ಲೌಕಿಕ ಬಯಕೆಯನ್ನು ಮುಂದಿಟ್ಟು ಭಗವಂತನಲ್ಲಿ ಭಕ್ತಿ ಮಾಡುತ್ತಾರೆ. ಇವರಿಗೆ ವೇದದಲ್ಲಿ ಹೇಳಿದ ಕರ್ಮಖಂಡವೇ ಮುಖ್ಯವಾಗುತ್ತದೆ. ಜ್ಯೋತಿಷ್ಟೋಮಯ ಯಾಗಗದಂತಹ ಯಾಗವನ್ನು ಕೇವಲ ಸ್ವರ್ಗದ ಬಯಕೆಯಿಂದ ಮಾಡಿ, ಭಗವಂತನನ್ನು ಬಯಸದೆ ಸ್ವರ್ಗವನ್ನು ಬಯಸುತ್ತಾರೆ. ಹೀಗೆ ಭಕ್ತಿ ಮಾಡುವುದರ ಫಲವಾಗಿ ಅವರು ಇಂದ್ರನ ನಾಡಾದ ಸ್ವರ್ಗವನ್ನು ಸೇರಿ ಅಲ್ಲಿ ಭೋಗವನ್ನು ಅನುಭವಿಸುತ್ತಾರೆ.     

ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ       
ಏವಂ ತ್ರಯೀಧರ್ಮಮನುಪ್ರಪನ್ನಾಃ  ಗತಾಗತಂ ಕಾಮಕಾಮಾ ಲಭಂತೇ ೨೧

ತೇ ತಮ್  ಭುಕ್ತ್ವಾ ಸ್ವರ್ಗ ಲೋಕಮ್  ವಿಶಾಲಮ್  ಕ್ಷೀಣೇ ಪುಣ್ಯೇ ಮರ್ತ್ಯ ಲೋಕಮ್  ವಿಶಂತಿ 
ಏವಮ್  ತ್ರಯೀ ಧರ್ಮಮ್ ಅನುಪ್ರಪನ್ನಾಃ  ಗತಗತಮ್  ಕಾಮ ಕಾಮಾಃ  ಲಭಂತೇ – ಅವರು ಹಿರಿದಾದ ಸಗ್ಗಿಗರ ನಾಡನ್ನು ಕಂಡುಂಡು, ಪುಣ್ಯ ಮುಗಿದಾಗ ಭೂಮಿಗೆ ಮರಳುತ್ತಾರೆ. ಹೀಗೆ ವೈದಿಕ ಕರ್ಮಗಳ ಮೊರೆ ಹೊಕ್ಕು, ಬಯಕೆಗಳ ಬೆನ್ನುಹತ್ತಿ ಅತ್ತಿಂದಿತ್ತ ಅಲೆದಾಡುತ್ತಿರುತ್ತಾರೆ.

ಸ್ವರ್ಗದ ಬಯಕೆಯಿಂದ ಪುಣ್ಯಕರ್ಮ ಮಾಡುವ ತ್ರೈವಿದ್ಯರು ಸ್ವರ್ಗವನ್ನು ಸೇರಿ ಅಲ್ಲಿ ಬಗೆ ಬಗೆಯ ಭೋಗವನ್ನು ಅನುಭವಿಸಿ ತಮ್ಮ ಸತ್ಕರ್ಮದ ಫಲ ಮುಗಿದ ತಕ್ಷಣ ಪುನಃ ಭೂಲೋಕದಲ್ಲಿ ಹುಟ್ಟುತ್ತಾರೆ. ಈ ಕಾರಣದಿಂದ ಇವರು ಅತ್ಯಂತ ಹಿರಿದಾದ ಮೋಕ್ಷದಿಂದ, ಭಗವಂತನಿಂದ   ವಂಚಿತರಾಗುತ್ತಾರೆ. ಇವರು ಸದಾ ಬಯಕೆಗಳ ಬೆನ್ನು ಹತ್ತಿ  ಚಕ್ರಭ್ರಮಣದಲ್ಲಿ ಸಿಲುಕಿ ಕೊಳ್ಳುತ್ತಾರೆ.

ಇವರಿಗಿಂತ ತೀರ ಭಿನ್ನ ನಡೆ ಭಾಗವತರದ್ದು:   

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ೨೨

ಅನನ್ಯಾಃ ಚಿಂತಯಂತಃ ಮಾಮ್  ಯೇ ಜನಾಃ ಪರ್ಯುಪಾಸತೇ
ತೇಷಾಮ್  ನಿತ್ಯಭಿಯುಕ್ತಾನಾಮ್  ಯೋಗ ಕ್ಷೇಮಮ್  ವಹಾಮಿ ಅಹಮ್- ಬೇರೆಲ್ಲಾ ತೊರೆದು ನನ್ನನ್ನೆ ನೆನೆಯುತ್ತ ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲು ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು.

ಭಾಗವತರು ಯಾವುದನ್ನೂ ಬೇಕು ಎಂದು ಬಯಸುವುದಿಲ್ಲ. ಅವರಿಗೆ ಭಗವಂತನ ಚಿಂತನೆಯೊಂದನ್ನು ಬಿಟ್ಟರೆ ಬೇರೆ ಚಿಂತನೆಯೇ ಇಲ್ಲ. ಇವರು ಅನನ್ಯವಾಗಿ ಭಗವಂತನನ್ನು ಮಾತ್ರ ಬಯಸುತ್ತಾರೆ. ಯಾವುದೋ ಬಯಕೆಗೆ ಕಟ್ಟು ಬಿದ್ದು ಅವರು ಪೂಜೆ ಮಾಡುವುದಿಲ್ಲ. ಇವರು ಭಗವಂತನಲ್ಲದೆ ಇನ್ನ್ಯಾವುದೇ ದೇವತೆಯನ್ನು ಪ್ರಧಾನವಾಗಿಟ್ಟುಕೊಂಡು ಆಹುತಿ ಕೊಟ್ಟು ಆರಾಧನೆ ಮಾಡುವುದಿಲ್ಲ. ಎಲ್ಲ ದೇವತೆಯ ಒಳಗೂ ಇವರು ಕೇವಲ ಭಗವಂತನನ್ನು ಕಾಣುತ್ತಾರೆ. ಇದು ಏಕಭಕ್ತಿ-ಪರಮಾತ್ಮನನ್ನು, ಮೋಕ್ಷವನ್ನು ಸೇರಲು ಅನುಸರಿಸಬೇಕಾದ ಮಾರ್ಗ.
ನಾವು ಪೂಜೆ ಮಾಡಿಸಿದಾಗ ಸಂಕಲ್ಪ ಮಾಡಿಸುತ್ತಾರೆ. ಇಲ್ಲಿ ನಾವು ಎಂದೂ ನಮ್ಮ ಐಹಿಕ ಬಯಕೆಗಳನ್ನು ಭಗವಂತನ ಮುಂದಿಡಬಾರದು. ಕೇವಲ ಜ್ಞಾನ, ಭಕ್ತಿ, ಮೋಕ್ಷ- ಇದು ನಮ್ಮ ಸಂಕಲ್ಪವಾಗಿರಬೇಕು. ನಶ್ವರವಾದ ಬಯಕೆಗಳನ್ನು ಮುಂದಿಟ್ಟು ಪೂಜೆ ಮಾಡಿಸಿದಾಗ ನಾವು ಮಹತ್ತಾದ ಫಲವನ್ನು ಕಳೆದುಕೊಳ್ಳುತ್ತೇವೆ. ನಮಗೆ ಏನು ಬೇಕು ಏನು ಬೇಡ ಎನ್ನುವುದು  ಆ ಭಗವಂತನಿಗೆ ನಮಗಿಂತ ಚನ್ನಾಗಿ ಗೊತ್ತು ಮತ್ತು ಆತ ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ. ಪೂಜೆ ಕೇವಲ ಭಗವಂತನ ಪ್ರೀತ್ಯಾರ್ಥವಾಗಿ ಮಾಡಿ ಆತನಲ್ಲಿ ಅನನ್ಯ ಭಕ್ತಿ ನೆಟ್ಟಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಕೃಷ್ಣ ಹೇಳುತ್ತಾನೆ “ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್” ಇಂತಹ ಭಕ್ತರ ಯೋಗಕ್ಷೇಮದ ಹೊಣೆ ನನ್ನದು ಎಂದು. ಇದಕ್ಕಿಂತ ಹೆಚ್ಚಿನ ಭರವಸೆ ಏನು ಬೇಕು?  
ನಾವು ಗಾಢವಾಗಿ “ಭಗವಂತ ನಮ್ಮನ್ನು ರಕ್ಷಿಸಿಯೇ ರಕ್ಷಿಸುತ್ತಾನೆ” ಎಂದು ಗಟ್ಟಿಯಾಗಿ ನಂಬಿದರೆ ಆತ ರಕ್ಷಿಸಿಯೇ ರಕ್ಷಿಸುತ್ತಾನೆ. ಭಗವಂತನ ಮೇಲಿನ ನಮ್ಮ  ನಂಬಿಕೆಯಲ್ಲಿ ನಾವು ಎಂದೂ ವಿಚಲಿತರಾಗಬಾರದು. ಅದು ದೃಢವಾಗಿರಬೇಕು. ಗುರಿ ಕೇವಲ ಭಗವಂತನನ್ನು ಸೇರುವತ್ತ ಇರಬೇಕು. ಭಗವಂತ ಏನು ಕೊಟ್ಟನೋ ಅದೇ ಮಹಾ ಪ್ರಸಾದವೆಂದು ಸ್ವೀಕರಿಸಿ ಸಂಪೂರ್ಣ ಆತನಲ್ಲಿ ಶರಣಾಗಬೇಕು. ಇಂತಹ ಸ್ಥಿತಿಯಲ್ಲಿ ನಮಗೆ ಎಂದೂ ದುಃಖವಾಗುವುದಿಲ್ಲ. ಬದುಕು ಆನಂದಮಯವಾಗಿರುತ್ತದೆ. ಜೀವನದಲ್ಲಿ ಏನೇ ಘಟನೆ ನಡೆದರೂ “ಭಗವಂತನ ಚಿತ್ತದಂತೆ ಆಯಿತು” ಎಂದು ತಿಳಿದು ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿ ನಮ್ಮದಾಗಬೇಕು. ಇದು ಮೋಕ್ಷದ ಹೆಬ್ಬಾಗಿಲು.  

Monday, August 1, 2011

Bhagavad Geeta Kannada Chapter-09 Shloka 18


ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್       
ಪ್ರಭವಃ ಪ್ರಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್       ೧೮

ತಿಃ ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಮ್  ಸುಹೃತ್   
ಪ್ರಭವಃ ಪ್ರಯಃ ಸ್ಥಾನಮ್  ನಿಧಾನಮ್  ಬೀಜಮ್ ಅವ್ಯಯಮ್-ಮುಕ್ತಿಗಾಗಿ ತಿಳಿಯಬೇಕಾದವನು. ಎಲ್ಲ ಹೊಣೆಯನ್ನು ಹೊತ್ತವನು. ಎಲ್ಲದರ ಒಡೆಯ. ಎಲ್ಲವನ್ನು ನೇರ ಕಾಣಬಲ್ಲವನು. ಎಲ್ಲರ ನೆಲೆ. ಮುಕ್ತರಿಗು ಆಸರೆ. ಅನಿಮಿತ್ತ ಬಂಧು. ಸೃಷ್ಟಿ-ಸ್ಥಿತಿ-ಪ್ರಳಯಗಳಿಗೆ ಕಾರಣ. ಪ್ರಳಯದಲ್ಲಿ ಜಗವನ್ನು ಬಸಿರಲ್ಲಿ ಹೊತ್ತವನು. ಮತ್ತೆ ಜಗದ ಅಭಿವ್ಯಕ್ತಿಗೆ ಕಾರಣನಾದವನು. ಅಳಿವಿರದವನು.

ಸಂಬಂಧಗಳ ಬಗ್ಗೆ ಹಿಂದೆ ಹೇಳಿದ್ದ ಕೃಷ್ಣ ಇಲ್ಲಿ ನಾನಾ ವಿಧದ ಅನುಬಂಧಗಳನ್ನು ಹೇಳುತ್ತಾನೆ. ಬೇರೆಬೇರೆ ರೀತಿಯಾಗಿ ಸಮಾಜದಲ್ಲಿ ಒಬ್ಬರಿಂದ ಒಬ್ಬರು ನೆರವು ಪಡೆಯುತ್ತಾರೆ. ರಾಜನಿಂದ ರಕ್ಷಣೆ, ಆಪತ್ಕಾಲದಲ್ಲಿ ಆಶ್ರಯ, ಕಷ್ಟದಲ್ಲಿರುವವನನ್ನು ಸಂತೈಸುವುದು, ಗೆಳೆತನ ಇತ್ಯಾದಿ ಅನುಬಂಧಗಳು. ಇವೆಲ್ಲವೂ ಭಗವಂತನ ಧರ್ಮ ಎನ್ನುತ್ತಾನೆ ಕೃಷ್ಣ.
ಯಾರೂ ನೆಲೆಯೇ ಇಲ್ಲ, ಬದುಕುವುದಕ್ಕೆ ಅವಕಾಶವೇ ಇಲ್ಲ ಅನ್ನುವಾಗ ‘ನಾನಿದ್ದೇನೆ’ ಎಂದು ರಕ್ಷಣೆ ಮಾಡುವವರನ್ನು ‘ಗತಿ’ ಎನ್ನುತ್ತಾರೆ. ವಾಸ್ತವವಾಗಿ ಗತಿ ಎಂದರೆ ಕೊನೆಯ ಗತಿ. ಸಂಸಾರದಲ್ಲಿ ಮಾತ್ರ ಅಲ್ಲ ಮೊಕ್ಷದಲ್ಲೂ ಆಶ್ರಯವಾಗಿರುವ ಭಗವಂತ ಗತಿಃ. ಆತನೇ ಸದ್ಗತಿ, ತಪ್ಪು ಮಾಡಿದಾಗ ಆತನೇ ದುರ್ಗತಿ ಕೂಡಾ. ಎಲ್ಲ ಹೊಣೆಯನ್ನು ಹೊತ್ತು, ಪ್ರಪಂಚದಲ್ಲಿ ಪ್ರತಿಯೊಬ್ಬರು ಏನು ಮಾಡುತ್ತಾರೆ, ಅವರ ಒಳಿತು ಕೆಡುಕುಗಳೇನು ಎಂದು ನೋಡಬಲ್ಲ ಪ್ರಭು ಭಗವಂತ. ಆತ ನಮ್ಮ ಅಂತರಂಗ ಬಹಿರಂಗ ಎಲ್ಲವನ್ನೂ ಬಲ್ಲವ. ಆತ ಎಲ್ಲೆಡೆ ತುಂಬಿ ಎಲ್ಲವನ್ನೂ ಕಾಣಬಲ್ಲ ನಿಜವಾದ ಸಾಕ್ಷಿ.
ಮುಂದುವರಿದು ಕೃಷ್ಣ ಹೇಳುತ್ತಾನೆ “ಅಹಮ್ ನಿವಾಸಃ” ಎಂದು. ಈಶಾವಾಸ್ಯೋಪನಿಷತ್ತಿನಲ್ಲಿ ಹೇಳುವಂತೆ:
ಈಶಾವಾಸ್ಯಂ ಇದಂ ಸರ್ವಂ ಯತ್ ಕಿಂ ಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭೂಂಜಿಥಾಃ ಮಾ ಗೃಧಃ ಕಸ್ಯ ಸ್ವಿದ್ ಧನಮ್|
ನಾವು ವಾಸ ಮಾಡುತ್ತಿರುವುದೇ ಭಗವಂತನ ಮನೆಯಲ್ಲಿ. ಈ ವಿಶ್ವವೆಂಬ ಮನೆಯನ್ನು ನಿರ್ಮಿಸಿ, ಅದರಲ್ಲಿ ನಮಗೆ ಆಶ್ರಯ ಕೊಟ್ಟು, ನಮಗೆ ಬದುಕಲು ಬೇಕಾದ ವ್ಯವಸ್ಥೆ ಮಾಡಿದ ಭಗವಂತ ನಿವಾಸಃ. ಆತ ಎಲ್ಲರಿಗೂ ಆಸರೆ. ಇಂತಹ ಭಗವಂತ ನಮಗೆ ಆಪತ್ಕಾಲದಲ್ಲಿ ರಕ್ಷಣೆ(ಶರಣ) ಕೊಡುವ ಆತ್ಮೀಯ ಗೆಳೆಯ(ಸುಹೃತ್). 
ಗೆಳೆಯರಲ್ಲಿ ಎರಡು ವಿಧ. ಸಖ ಮತ್ತು ಸುಹೃತ್. ‘ಸಖ’ ಎಂದರೆ ಒಡನಾಡಿ. ಯಾವಾಗಲೂ ಜೊತೆಗಿರುವವ. ಸುಹೃತ್ ಎಂದರೆ ದೂರದಲ್ಲಿರಲಿ ಹತ್ತಿರವಿರಲಿ ನಮ್ಮ ಹೃದಯಕ್ಕೆ ಸ್ಪಂದಿಸಿ ನಮ್ಮ ಹಿತಚಿಂತಕನಾಗಿರುವವ. ಭಗವಂತ ನಮ್ಮ ಹೃತ್ಕಮಲ ಮಧ್ಯ ನಿವಾಸಿಯಾಗಿರುವ ಸಖ ಮತ್ತು ನಮ್ಮ  ಹೃದಯದ ಕೂಗಿಗೆ ಸದಾ ಸ್ಪಂದಿಸುವ ಸುಹೃತ್.
ಅನುಬಂಧವನ್ನು ಹೇಳಿದ ಕೃಷ್ಣ ಮುಂದೆ ಮನುಷ್ಯ ಶಕ್ತಿಯನ್ನು ಬಿಟ್ಟು ದೇವತಾ ಶಕ್ತಿಯನ್ನು ವಿವರಿಸುತ್ತಾನೆ. ಹೇಳುತ್ತಾನೆ “ಪ್ರಭವಃ ಪ್ರಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್” ಎಂದು.  ನಮ್ಮಲ್ಲಿ ಕೆಲವರು ತಿಳಿದಿದ್ದಾರೆ ಸೃಷ್ಟಿಕರ್ತ -ಬ್ರಹ್ಮ, ಸ್ತಿತಿ-ವಿಷ್ಣು ಮತ್ತು ಸಂಹಾರ-ಶಿವ ಎಂದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: “ನಾನೇ ಪ್ರಭವಃ- ಪ್ರಯಃ-ಸ್ಥಾನಂ” ಎಂದು. ಜಗತ್ತಿನ ಸೃಷ್ಟಿಗೆ ಮೂಲ ಕಾರಣ, ಸೃಷ್ಟಿಯ ಕೊನೆಯಲ್ಲಿ ಈ ಜಗತ್ತು ನಾಶವಾಗಲು, ಮತ್ತು ಸೃಷ್ಟಿಯಿಂದ ಸಂಹಾರ ತನಕದ ಅವದಿಯಲ್ಲಿ ಸ್ಥಿತಿಗೆ ಮೂಲತಃ ಭಗವಂತನೇ ಕಾರಣ.
ಪ್ರಳಯ ಕಾಲದಲ್ಲಿ ಸಮಸ್ತ ಜೀವಜಾತವನ್ನು  ಸೂಕ್ಷ್ಮ ಸ್ಥಿತಿಯಲ್ಲಿ ತನ್ನ ಹೊಟ್ಟೆಯಲ್ಲಿಟ್ಟು ಸಾಕುವವ ಆ ಭಗವಂತ. ಆ ಸೂಕ್ಷ್ಮ ವಸ್ತು ಮತ್ತೆ ಚಿಗುರಿ ಅರಳಿ ಹೆಮ್ಮರವಾಗಿ ಬೆಳೆಯುವಂತೆ ಬೀಜಕ್ಷೇಪ ಮಾಡುವ, ಎಂದೂ ಅಳಿವಿಲ್ಲದ  ಅವ್ಯಯ-ಭಗವಂತ.

ಹೀಗೆ ಜಗತ್ತಿನ ಸಮಸ್ತ ಕ್ರಿಯೆಯನ್ನು, ಲೌಕಿಕ , ಪ್ರಾಪಂಚಿಕ, ಪಾರಲೌಕಿಕವಾದ ಸಂಬಂಧಗಳು,ಅನುಬಂಧಗಳು ಎಲ್ಲವನ್ನು ವಿವರಿಸಿದ ಕೃಷ್ಣ  ಮುಂದೆ ಕಾಲಕಾಲದಲ್ಲಿ ಆಗತಕ್ಕಂತಹ ಸಂಗತಿಗಳನ್ನು ವಿವರಿಸುತ್ತಾನೆ.