Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, February 18, 2011

Bhagavad Gita Kannada Chapter-02_Shloka-17

ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್
ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ ೧೭

ಅವಿನಾಶಿ ತು ತತ್ ವಿದ್ಧಿ ಯೇನ ಸರ್ವಮ್ ಇದಮ್ ತತಮ್
ವಿನಾಶಮ್ ಅವ್ಯಯಸ್ಯ ಆಸ್ಯ ನ ಕಶ್ಚಿತ್ ಕರ್ತುಮ್ ಅರ್ಹತಿ--ಯಾವುದು ಈ ಎಲ್ಲವನ್ನು ವ್ಯಾಪಿಸಿದೆ ಅದು ಅಳಿವಿಲ್ಲದ್ದು ಎಂದು ತಿಳಿ. ಬದಲಾಗದ ‘ಅವನ’ ಅಳಿವು ಯಾರ ಅಳಿವಿಗೂ ಎಟಕುವುದಲ್ಲ.

ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದಕ್ಕೆ ನಾಶವಿಲ್ಲ. ರೂಪಾತ್ಮಕ ಪ್ರಪಂಚದಂತೆ ನಾಮಾತ್ಮಕ ಪ್ರಪಂಚವಿದೆ. ಅದು ನಿತ್ಯ. ಇಲ್ಲಿ ನಾಮಾತ್ಮಕ ಎಂದರೆ 'ಅಕ್ಷರ' ; ಅ ದಿಂದ ಕ್ಷ ತನಕ ಇರುವ ಐವತ್ತೊಂದು ವರ್ಣಗಳು. ಈ ಐವತ್ತೊಂದು ಅಕ್ಷರಗಳೇ ಮೂಲಭೂತವಾಗಿರುವ ಇಡೀ ಶಬ್ದ ಪ್ರಪಂಚ. ಅದು ನಾಶ ಮಾಡಲಾಗದ ತತ್ವ. ಆದ್ದರಿಂದ ಭಗವಂತ, ಪ್ರಕೃತಿ, ಜೀವ ಹಾಗು ಈ ಎಲ್ಲಾ ತತ್ವಗಳನ್ನು ಪ್ರತಿಪಾದಿಸುವ ಶಬ್ದ ಅನಾದಿನಿತ್ಯ. ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಈ ನಾಮಾತ್ಮಕ ಪ್ರಪಂಚದಲ್ಲಿನ ವೇದ ವಾಙ್ಮಯನಾದ ಭಗವಂತ ಅವಿನಾಶಿ ಆತನಿಗೆ ಯಾವುದೇ ರೀತಿಯ ನಾಶವಿಲ್ಲ. ಸ್ವರೂಪ ನಾಶ, ದೇಹ ನಾಶ, ದುಃಖಪ್ರಾಪ್ತಿ, ಅಪೂರ್ಣತ್ವ ಇದು ಭಗವಂತನಿಗಿಲ್ಲ. ಆತ ಕಾಲತಃ, ದೇಶತಃ, ಗುಣತಃ ವ್ಯಾಪ್ತನಾಗಿರುವ ಅನಂತ ಸ್ವರೂಪ. ಆತ ಅವ್ಯಯ, ಯಾವ ವಿಕಾರ ಬದಲಾವಣೆಗೆ ಒಳಗಾಗದ, ಅನಾದಿನಿತ್ಯ ಸ್ವರೂಪ.

Thursday, February 17, 2011

Bhagavad Gita Kannada Chapter-02_Shloka-16

ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ
ಉಭಯೋರಪಿ ದೃಷ್ಟೋನ್ತಸ್ತ್ವನಯೋಸ್ತತ್ತ್ವದರ್ಶಿಭಿಃ     ೧೬

ನ ಅಸತಃ ವಿದ್ಯತೇ ಭಾವಃ ನ ಅಭಾವಃ ವಿದ್ಯತೇ ಸತಃ
ಉಭಯೋ ಅಪಿ ದೃಷ್ಟಃ ಅನ್ತಃ ತು ಅನಯೋ ತತ್ವ ದರ್ಶಿಭಿಃ -- ಪ್ರಕೃತಿಗೂ ಅಳಿವಿಲ್ಲ; ಭಗವಂತನಿಗೂ ಅಳಿವಿಲ್ಲ. [ಕೆಡುಕು ಮಾಡಿ ಒಳಿತಾಗದು, ಒಳಿತಿನಿಂದ ಕೆಡುಕಾಗದು].  ನಿಜವ ಕಂಡವರು ಈ ಎರಡರ ತೀರ್ಮಾನವನ್ನು ಬಲ್ಲರು.
ಸುಖ-ದುಃಖವನ್ನು ಮೀರಿ ನಿಲ್ಲಬಹುದು. ಅದೊಂದು ಮಾನಸಿಕ ಸ್ಥಿತಿ. ಆದರೆ ತನ್ನ ಗುರು-ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ? ಈ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲ ಅಂದರೆ ಒಳ್ಳೆಯ ಕೆಲಸ ಮಾಡುವುದರಿಂದ ಎಂದೂ ದುಃಖವಿಲ್ಲ, ಕೆಟ್ಟ ಕೆಲಸ ಮಾಡಿದರೆ ಸುಖವಿಲ್ಲ. ಕೆಲವೊಮ್ಮೆ ಕೆಟ್ಟ ಕೆಲಸ ಮಾಡುವವರು ಸುಖಪಡುತ್ತಿರುವಂತೆ ಭಾಸವಾದರೂ ಕೂಡಾ,  ಅದು ತಾತ್ಕಾಲಿಕ. ಅಧರ್ಮದ ಹಾದಿಯನ್ನು ತುಳಿದವ ಎಂದೂ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವನ್ನು ವಿಶ್ಲೇಷಣೆ ಮಾಡಿದರೆ ಅಲ್ಲಿ ಯುದ್ಧಕ್ಕೆ ಕಾರಣರಾದವರು ಪಾಂಡವರಲ್ಲ. ಪಾಂಡವರು ಧರ್ಮ ರಕ್ಷಣೆಯ ಹೊಣೆಗಾರಿಕೆಯಿಂದ ಯುದ್ಧಕ್ಕೆ ಸಜ್ಜಾಗಿರುವುದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: “ಒಳ್ಳೆಯ ಕೆಲಸ ಮಾಡುವಾಗ ಯಾರ ಭಯವೂ ಬೇಡ ಹಾಗು ಅದರಿಂದ ದುಃಖವಿಲ್ಲ” ಎಂದು. ಧರ್ಮ ರಕ್ಷಣೆಯ ಹಾದಿಯಲ್ಲಿ  'ನನ್ನವರು' ಎನ್ನುವುದು ಸಲ್ಲದು. ಜಗತ್ತಿನ ತತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಕಂಡುಕೊಂಡ ಕೊನೆಯ ಸತ್ಯವಿದು.
ಮಹಾಭಾರತದ ಪ್ರತಿಯೊಂದು ಶ್ಲೋಕಕ್ಕೂ ಹತ್ತು ಅರ್ಥಗಳಿವೆಯಂತೆ. ಇನ್ನೊಂದು ಆಯಾಮದಲ್ಲಿ ಈ ಶ್ಲೋಕವನ್ನು ನೋಡಿದರೆ- "ನ ಅಸತಃ  ಅಭಾವಃ ಸತಃ ಅಭಾವಃ ನ ವಿದ್ಯತಿ" ಅಂದರೆ ಸತ್ತಿಗೂ ಅಭಾವವಿಲ್ಲ ಅಸತ್ತಿಗೂ ಅಭಾವವಿಲ್ಲ ಎಂದರ್ಥ. ಅಸತ್ ಎಂದರೆ ಸ್ಥೂಲ ಪ್ರಪಂಚಕ್ಕೆ ಕಾರಣವಾಗಿರುವ, ಸೂಕ್ಷ್ಮವಾಗಿರುವ ಮೂಲಪ್ರಕೃತಿ. ಪ್ರಕೃತಿ ಅನಾದಿನಿತ್ಯ.  ಈ ಪ್ರಕೃತಿಯನ್ನು ಸೃಷ್ಟಿಮಾಡಿದ ಭಗವಂತ(ಪುರುಷ) ಅನಾದಿನಿತ್ಯ. ಪ್ರಕೃತಿ ಮತ್ತು ಪುರುಷನಿಗೆ ಅಧೀನವಾಗಿರುವ ಜೀವ ಕೂಡಾ ಅನಾದಿನಿತ್ಯ. ಜೀವಕ್ಕೆಈ ಸ್ಥೂಲ ದೇಹ ಬರುವ ಮೊದಲೂ ಜೀವ ಇತ್ತು. ಹಾಗು ಮುಂದೆ ಕೂಡಾ ಇರುತ್ತದೆ. ಪಾಂಚಭೌತಿಕ ಶರೀರದಲ್ಲಿ ಜೀವ ಕೇವಲ ಅತಿಥಿ. ಹೀಗಿರುವಾಗ ದೇಹಾಭಿಮಾನ ಸಲ್ಲದು.

Sunday, February 13, 2011

Bhagavad Gita Kannada Chapter-02_Shloka-15

ಯಂ ಹಿ ನ ವ್ಯಥಯನ್ತ್ಯೇತೇ ಪುರುಷಂ ಪುರುಷರ್ಷಭ
ಸಮದುಃಖಸುಖಂ ಧೀರಂ ಸೋಮೃತತ್ವಾಯ ಕಲ್ಪತೇ ೧೫

ಯಂ ಹಿ ನ ವ್ಯಥಯಂತಿ  ಏತೇ ಪುರುಷಂ ಪುರುಷ ಋಷಭ
ಸಮ ದುಃಖ ಸುಖಮ್  ಧೀರಮ್ ಸಃ ಅಮೃತತ್ವಾಯ ಕಲ್ಪತೇ--ಓ ಗಂಡುಗಲಿಯೇ, ಯಾವ ಶರೀರವನ್ನು[ಜ್ಞಾನಿಯನ್ನು] ಇವು ಕಾಡಲಾರವೋ, ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರ. ಅಂತವನು ಸಾವಿಲ್ಲದ ತಾಣವನ್ನು ಸೇರಲು ತಕ್ಕವನಾಗುತ್ತಾನೆ.

ಕೃಷ್ಣ ಮುಂದುವರಿದು ಹೇಳುತ್ತಾನೆ, “ಯಾವ ಪುರುಷನಿಗೆ ‘ಮಾತ್ರಾ ಸ್ಪರ್ಶ’ ಕಾಡುವುದಿಲ್ಲವೋ ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರ” ಎಂದು. ಇಲ್ಲಿ "ಪುರುಷ" ಎನ್ನುವ ಪದ ಬಂದಿದೆ. ‘ಪುರುಷ ಎಂದರೆ ಗಂಡಸು, ಗಂಡಸರಿಗೆ ಮಾತ್ರ ಸಾಧನೆ-ಮೋಕ್ಷ’-ಎನ್ನುವ ಮೂಢನಂಬಿಕೆ ನಮ್ಮಲ್ಲಿದೆ. ಆದರೆ ಪುರುಷ ಎಂದರೆ "ಪುರದಲ್ಲಿ ಇರುವ ಜೀವ". ಪುರ ಎಂದರೆ ಪೂರ್ಣವಾದ ದೇಹ. ಅಂದರೆ ಮಾನವ ದೇಹ. ಆದ್ದರಿಂದ ಪುರುಷ ಎಂದರೆ ಮಾನವರು(Human being) ಅಥವಾ ಸಾಧಕ ಜೀವ. ಸ್ಥೂಲ ಶರೀರದಲ್ಲಿದ್ದೂ ಕೂಡಾ  ಯಾರಿಗೆ  ಮಾತ್ರಾಸ್ಪರ್ಶದಿಂದ ಬರುವ ಸುಖ-ದುಃಖ ಬೇರೆ-ಬೇರೆಯಾಗಿ ಕಾಣುವುದಿಲ್ಲವೋ, ಆತ ಸುಖ ದುಃಖವನ್ನು ಸಮನಾಗಿ ಕಾಣಬಲ್ಲ ಧೀರನೆನಿಸುತ್ತಾನೆ.
ಪುರುಷಃ   ಎಂದರೆ ಎಲ್ಲಕ್ಕಿಂತ ದೊಡ್ಡವನಾದ ದೇವರನ್ನು ತಿಳಿದವ. ನಮಗೆ ಸುಖ-ದುಃಖ ಏಕೆ ಬರುತ್ತದೆ ಎನ್ನುವ ಜ್ಞಾನವಿದ್ದಾಗ, ನಾವು ಸುಖ ಬಂದಾಗ ಹಿಗ್ಗುವುದಿಲ್ಲ, ದುಃಖ  ಬಂದಾಗ ಕುಗ್ಗುವುದಿಲ್ಲ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸುಖ-ದುಃಖಕ್ಕೂ ಒಂದು ಕಾರಣವಿದೆ. ಸುಖ-ದುಃಖ ಜೀವನದಲ್ಲಿ ಬರುವ ಅಲೆಗಳು. ಇದರಲ್ಲಿ ಒಂದು ಬೇಕು, ಇನ್ನೊಂದು ಬೇಡ ಎನ್ನುವ ಆಯ್ಕೆ ಸರಿಯಲ್ಲ. ಯಾವುದು ಬಂತೋ ಅದಿರಲಿ ಎಂದು ಬದುಕಬೇಕು. ನಮಗೆ ಸುಖ-ದುಃಖವನ್ನು ಇನ್ನೊಬ್ಬರು ದ್ವೇಷದಿಂದ ಕೊಡುವುದಲ್ಲ. ಅದು ನಮ್ಮ ಕರ್ಮ ಫಲ. ಸುಖ-ದುಃಖವನ್ನು ನಮಗೆ ಕೊಡುವವನು ಭಗವಂತ. ತಾಯಿ ತನ್ನ ಮಗುವಿನ ಉದ್ಧಾರಕ್ಕಾಗಿ ಹೇಗೆ ಶಿಕ್ಷೆ ಕೊಡುತ್ತಾಳೋ, ಹಾಗೇ ಭಗವಂತ ನಮ್ಮ ಉದ್ಧಾರಕ್ಕಾಗಿ ನಮಗೆ ದುಃಖವನ್ನು ಕೊಡುತ್ತಾನೆ. ಇದು ಶಿಕ್ಷೆ ಅಲ್ಲ-ಶಿಕ್ಷಣ. ಮನುಷ್ಯ ದುಃಖದಲ್ಲಿ ಬೆಳೆದಾಗ ಗಳಿಸುವ ಅನುಭವ ಎಂದೂ ಸುಖದಲ್ಲಿ ಗಳಿಸಲಾರ. ದುಃಖ ಜೀವನದ ನಿಜವಾದ ಅನುಭವ. ಇದು ನಮಗೆ ಕೊಡುವ ದುಃಖದ ಹಿಂದೆ ಭಗವಂತನಿಟ್ಟ  ಮಹಾ ಕಾರುಣ್ಯ. ಈ ಜ್ಞಾನವಿದ್ದಾಗ ಮಾತ್ರ ನಮಗೆ ಸುಖ-ದುಃಖವನ್ನು ಏಕರೂಪದಲ್ಲಿ ಕಾಣುವ ಮನಃಸ್ಥಿತಿ ಬರುತ್ತದೆ. ಇಂತಹ ಜ್ಞಾನವಿರುವವನು ಧೀರನಾಗುತ್ತಾನೆ. ತಿಳುವಳಿಕೆಯಿಂದ ಧೈರ್ಯ ಬರುತ್ತದೆ. ಯಾರು ಒಂದು ಜನ್ಮದಲ್ಲಿ ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ತಿಳುವಳಿಕೆ ಹಾಗು ಧೈರ್ಯವನ್ನು ಗಳಿಸುತ್ತಾರೋ, ಅವರು ಮುಂದೆಂದೂ ಈ ಸಂಸಾರ ಬಂಧದಲ್ಲಿ ಮರಳಿ ಹುಟ್ಟುವುದಿಲ್ಲ. ಇಂತಹ ಮಾನಸಿಕ ಸಮತೋಲನದ ಮೂಲಕ ಭಗವಂತನನ್ನು ತಿಳಿದು ಮೋಕ್ಷವನ್ನು ಪಡೆಯತ್ತಾರೆ.

Friday, February 4, 2011

Bhagavad Gita Kannada Chapter-02-Shloka-14

ಮಾತ್ರಾಸ್ಪರ್ಶಾಸ್ತು ಕೌಂತೇಯ  ಶೀತೋಷ್ಣಸುಖದುಃಖದಾಃ 
ಆಗಮಾಪಾಯಿನೋನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ  ೧೪

ಮಾತ್ರಾ ಸ್ಪರ್ಶಾಃ ತು ಕೌಂತೇಯ  ಶೀತ ಉಷ್ಣ ಸುಖ ದುಃಖ ದಾಃ
ಆಗಮ ಅಪಾಯಿನಃ ಅನಿತ್ಯಾಃ  ತಾನ್ ತಿತಿಕ್ಷಸ್ವ ಭಾರತ -- ಕೌಂತೇಯ, ವಿಷಯ ಸಂಪರ್ಕಗಳೆ ತಂಪು-ಬಿಸಿಗಳ, ಸುಖ-ದುಃಖಗಳ ಅನುಭವ ನೀಡುವಂಥವು. ಇವು ಬಂದು ಹೋಗುವಂಥವು. ನಿರಂತರವಾಗಿ ಇರುವಂಥವಲ್ಲ. ಓ ಭಾರತ, ಅವುಗಳನ್ನು ಸಹಿಸಿಕೋ.

ನಾವು ಬಾಲ್ಯದ ದೇಹವನ್ನು ಕಳೆದುಕೊಂಡು ಯೌವನದ ದೇಹವನ್ನು ಪಡೆಯುತ್ತೇವೆ. ಯೌವನದ ದೇಹವನ್ನು ಕಳೆದುಕೊಂಡು ಮುಪ್ಪಿನ ದೇಹವನ್ನು ಪಡೆಯುತ್ತೇವೆ. ಆದರೆ ಈ ಕಾರಣಕ್ಕಾಗಿ ಯಾರೂ ದುಃಖಿಸುವುದಿಲ್ಲ. ಆದರೆ ಸಾವಿನಲ್ಲಿ 'ಕಾಣುವ’ ಇನ್ನೊಂದು ದೇಹ ಇಲ್ಲವಾಗುತ್ತದೆ-ಆಗ ದುಃಖ. ಯಾವ ದೇಹದ ಮೂಲಕ ಭಾಂದವ್ಯದ ನಂಟನ್ನು ಬೆಳೆಸಿಕೊಂಡಿರುತ್ತೇವೋ , ಅದು ಇಲ್ಲವಾಗುತ್ತದಲ್ಲಾ ಎನ್ನುವ  ದುಃಖ ಸಾಮಾನ್ಯವಾಗಿ ನಮ್ಮನ್ನು ಕಾಡುತ್ತದೆ.
ಜೀವನದಲ್ಲಿ ನಾವು ಅನುಭವಿಸುವ ಸುಖ ಮತ್ತು ದುಃಖದ ಮೂಲ “ಮಾತ್ರಾ ಸ್ಪರ್ಶಾ". ಇದು ಎಲ್ಲವುದರ ಮೂಲ. ನಾವು ಯಾವುದನ್ನು ನಮ್ಮ ಇಂದ್ರಿಯಗಳ ಮೂಲಕ ಗ್ರಹಿಸುತ್ತೇವೋ ಅದು  ಮಾತ್ರೆ. ಶಬ್ದ, ಸ್ಪರ್ಶ, ರೂಪ, ರಸ ಗಂಧ ಇವೇ ನಮ್ಮ ಸುಖ-ದುಃಖಗಳಿಗೆ ಕಾರಣವಾದ ಐದು ಮಾತ್ರೆಗಳು.
ಸುಖ-ದುಃಖಗಳಿಗೆ ಒಂದು ವ್ಯವಸ್ಥೆ ಇಲ್ಲ. ಒಬ್ಬರಿಗೆ ಸುಖವಾದದ್ದು ಇನ್ನೊಬ್ಬರಿಗೆ ದುಃಖವಾಗಬಹುದು. ವಿಷಯಗಳ ಸ್ಪರ್ಶದಿಂದ ಸುಖ-ದುಃಖ ಬರುತ್ತದೆ. ಅದು ಶೀತೊಷ್ಣದಂತೆ. ಮೊದಲು ಸುಖಕೊಟ್ಟ ವಸ್ತುವೇ ಮುಂದೆ ದುಃಖವಾಗಿ ಪರಿಣಮಿಸಬಹುದು. ಸುಖ-ದುಃಖ ಜೀವದ ಧರ್ಮವಲ್ಲ. ಅದು ಬಂದು ಹೋಗುವಂತದ್ದು. ಅದು ನಮ್ಮ ಮಾನಸಿಕ ಕಲ್ಪನೆಯ ಫಲ. "ನನ್ನ" ಎನ್ನುವುದು ದುಃಖಕ್ಕೆ ಮೂಲ ಕಾರಣ. ನಿದ್ದೆಯಲ್ಲಿ ನಮಗೆ "ನನ್ನ" ಎನ್ನುವುದು ಇಲ್ಲ. ಆದ್ದರಿಂದ ಎಂದೂ ನಿದ್ದೆಯಲ್ಲಿ ದುಃಖವಿಲ್ಲ. ಎಚ್ಚರ ಮತ್ತು ಕನಸಿನಲ್ಲಿ ಮಾತ್ರ ಈ ಸಮಸ್ಯೆ. ನಿದ್ದೆಯಲ್ಲಿ ಎಲ್ಲವೂ ನಿರ್ಮಲ.
ನಾವೇ ನಮ್ಮ ಮಾನಸಿಕ ಭಾವನೆಗಳಿಂದ ಮತ್ತು ಅನುಭವಗಳಿಂದ ನಿರ್ಮಿಸಿಕೊಂಡಿರುವುದು ಈ ಸುಖ-ದುಃಖ. ಇದರಿಂದ ಪಾರಾಗುವ ಉಪಾಯವನ್ನು ನಾವೇ ಕಲಿತುಕೊಳ್ಳಬೇಕು. ದುಃಖದ ಮೂಲದ ಅನ್ವೇಷಣೆ ಮಾಡಿದಾಗ ದುಃಖ ಸಹ್ಯವಾಗುತ್ತದೆ. ನಾವು ನಮ್ಮ ಭಾವನೆಗಳನ್ನು ಸಹನೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಯಾವುದು ಬಂತೋ ಅದನ್ನು ಸ್ವೀಕರಿಸುವುದನ್ನು ಕಲಿತುಕೊಳ್ಳಬೇಕು. ನನಗೆ 'ಅದೇ ಬೇಕು', 'ಹೀಗೆ ಆಗಬೇಕು' ಎನ್ನುವ ಚಿಂತನೆ ದುಃಖಕ್ಕೆ ಮೂಲ ಕಾರಣ. ಬಂದಿದ್ದನ್ನು ಬಂದಂತೆ ಎದುರಿಸುತ್ತೇನೆ ಎನ್ನುವ ಆತ್ಮ ಸ್ಥೈರ್ಯವಿದ್ದರೆ ದುಃಖವಿಲ್ಲ.

Thursday, February 3, 2011

Bhagavad Gita Kannada Chapter-02_Shloka-12-13

ನತ್ವೇವಾಹಂ ಜಾತು ನಾSಸಂ ನ ತ್ವಂ ನೇಮೇ ಜನಾಧಿಪಾಃ   
ನಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್    ॥೧೨॥

ನ ತು ಏವ ಅಹಮ್ ಜಾತು ನ ಅಸಮ್  ನ ತ್ವಮ್ ನ ಇಮೇ ಜನ  ಅಧಿಪಾಃ
ನ ಚ ಏವ ನ ಭವಿಷ್ಯಾಮಃ ಸರ್ವೇ  ವಯಮ್ ಅತಃ ಪರಮ್-- ನಾನು ಹಿಂದೆ ಎಂದೂ ಇರದಿದ್ದವನಲ್ಲ. ಅಲ್ಲ ನೀನೂ. ಅಲ್ಲ ಈ ಅರಸರೂ. ಇನ್ನು ಮುಂದೂ ನಾವೆಂದೂ ಇಲ್ಲವಾಗುವವರಲ್ಲ.

ಕೃಷ್ಣ ಇಲ್ಲಿ ಸಾವಿನ ಬಗ್ಗೆ ನಾವು ಏಕೆ ಚಿಂತಿಸಬೇಕಿಲ್ಲ ಎನ್ನುವ ಮಾತಿಗೆ ಪೂರಕವಾಗಿ, ಅದನ್ನು ಸಮರ್ಥಿಸುವ ಮಾತನ್ನು ಹೇಳುತ್ತಾನೆ. ಆತ ಹೇಳುತ್ತಾನೆ: "ನಾನು-ನೀನು ಈ ಎಲ್ಲಾ ರಾಜರು, ಹಿಂದೆ ಇದ್ದೆವು, ಇಂದು ಇದ್ದೇವೆ ಹಾಗು ಮುಂದೆ ಕೂಡಾ ಇರುತ್ತೇವೆ. ದೇಹ ನಾಶವಾದಾಗ ಜೀವ ನಾಶವಾಗುವುದಿಲ್ಲ. ನಾನು ಹೇಗೆ ಅನಾದಿನಿತ್ಯವೋ ಹಾಗೇ ಪ್ರತಿಯೊಂದು ಜೀವರು ಕೂಡಾ ಅನಾದಿನಿತ್ಯ. ಆತ್ಮವನ್ನು ಕೊಲ್ಲುವುದು ಅಸಾಧ್ಯ" ಎಂದು. ಅನಂತ ಜೀವದ ಹರವು ಅನಂತ ಕಾಲದ ತನಕ ನಿರಂತರವಾಗಿರುತ್ತದೆ. ಆತ್ಮ ಎಂದೆಂದಿಗೂ ಅಜರಾಮರ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಜೀವ ಒಂದು ಬೀಜದಂತೆ. ಭಗವಂತ ಒಬ್ಬ ತೋಟಗಾರನಂತೆ. ಆತ ಈ ಪ್ರಪಂಚವೆಂಬ ತೋಟದ ಸೃಷ್ಟಿ ಮಾಡಿ, ಈ ಜೀವವನ್ನು ಆ ತೋಟದಲ್ಲಿ ಬಿತ್ತಿ ಅದಕ್ಕೊಂದು ಅಸ್ತಿತ್ವವನ್ನು ಕೊಟ್ಟ. ಪ್ರತಿಯೊಂದು ಜೀವ ಅದರ ಸ್ವಭಾವಕ್ಕನುಗುಣವಾಗಿ ಈ ಪ್ರಪಂಚದಲ್ಲಿ ಬೆಳೆಯುತ್ತವೆ. ಒಂದು ಜೀವದ ಸ್ವಭಾವ ಇನ್ನೊಂದು ಜೀವದ ಸ್ವಭಾವಕ್ಕಿಂತ ಭಿನ್ನ. ಈ ಕಾರಣದಿಂದಾಗಿ ಈ ಪ್ರಪಂಚ ಇಷ್ಟೊಂದು ವೈವಿದ್ಯಪೂರ್ಣ.

ದೇಹಿನೋSಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ      ॥೧೩॥

ದೇಹಿನಃ ಅಸ್ಮಿನ್ ಯಥಾ ದೇಹೇ ಕೌಮಾರಮ್ ಯೌವನಮ್ ಜರಾ
ತಥಾ ದೇಹಾಂತರ ಪ್ರಾಪ್ತಿ ಧೀರಃ ತತ್ರ ನ ಮುಹ್ಯತಿ—ದೇಹದಲ್ಲಿರುವ ಜೀವಕ್ಕೆ ಈ ದೇಹದಲ್ಲೆ ಎಳೆತನ, ಹರಯ, ಮುಪ್ಪು ಹೇಗೆ-ಹಾಗೇ ದೇಹದ ಬದಲಾವಣೆ ಕೂಡಾ. ಇಂಥಲ್ಲಿ ಧೀರನಾದವನು ಕಂಗೆಡುವುದಿಲ್ಲ.

ದೇಹ ನಾಶವೆಂದರೆ ಸ್ವರೂಪ ನಾಶವಲ್ಲ. ಈ ದೇಹದಲ್ಲಿರುವ ಜೀವ ಪ್ರತಿ ಕ್ಷಣದಲ್ಲಿ ತನ್ನ ದೇಹ ಪರಿವರ್ತನೆಯನ್ನು ಅನುಭವಿಸುತ್ತಿರುತ್ತದೆ. ಬಾಲ್ಯದಲ್ಲಿನ ದೇಹ ಯೌವನದಲ್ಲಿಲ್ಲ, ಯೌವನದಲ್ಲಿನ ದೇಹ ಮುಪ್ಪಿನಲ್ಲಿಲ್ಲ. ಸತ್ತ ಬಳಿಕ ಮತ್ತೆ ಮರುಹುಟ್ಟಿನೊಂದಿಗೆ ಹೊಸ ದೇಹ. ಆದರೆ ನಮಗೆ ನಾವು ಎಲ್ಲಿಂದ ಬಂದೆವು ಹಾಗು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವ ಅರಿವು ಮಾತ್ರ ಇಲ್ಲ. ನಮಗೆ ತಿಳಿದಿರುವುದು ನಮ್ಮ ಈಗಿನ ಅಸ್ತಿತ್ವ ಮಾತ್ರ. ದೇಹ ನಾಶವಾಗಿ ಹೊಸ ದೇಹ ಬರಬಹುದು. ಆದರೆ ಎಂದೂ ನಾಶವಾಗದ ಚೈತನ್ಯ ಈ 'ಜೀವ'. ಒಂದು ದಿನ ನಾಶವಾಗುವ ಈ ದೇಹದ ಬಗ್ಗೆ ಧೀರನಾದವನು ಎಂದೂ ಅಳುವುದಿಲ್ಲ ಎನ್ನುತ್ತಾನೆ ಕೃಷ್ಣ. ಇಲ್ಲಿ ಧೀರ ಎಂದರೆ ಅರಿವಿನ ಆನಂದವನ್ನು ಅನುಭವಿಸುವ ಜ್ಞಾನಿ(ಧೀ+ರಃ). ಎಲ್ಲಿ ಜ್ಞಾನವಿದೆಯೋ ಅಲ್ಲಿ ದುಃಖವಿಲ್ಲ.