Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, October 8, 2011

Bhagavad Gita Kannada Chapter-12 Shloka 2-8


ಭಗವಾನುವಾಚ
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ
ಶ್ರದ್ಧಯಾ ಪರಯೋಪೇತಾಸ್ತೇ ಮೇ ಯುಕ್ತತಮಾ ಮತಾಃ    

ಭಗವಾನ್ ಉವಾಚ-ಭಗವಂತ ಹೇಳಿದನು:
ಯಿ ಆವೇಶ್ಯ ಮನಃ ಯೇ ಮಾಮ್  ನಿತ್ಯ ಯುಕ್ತಾಃ ಉಪಾಸತೇ
ಶ್ರದ್ಧಯಾ ಪರಯಾ ಉಪೇತಾಃ ತೇ ಮೇ ಯುಕ್ತಃ ಮಾಃ ಮತಾಃ –ನನ್ನಲ್ಲಿ ಬಗೆಯಿಟ್ಟವರು, ತುಂಬು ನಂಬಿಕೆಯಿಂದ ಕೂಡಿ ನನ್ನನ್ನೆ ಸೇವಿಸುವ ನಿರಂತರ ಸಾಧಕರು-ಅತ್ಯಂತ ಪರಿಪೂರ್ಣರೆಂದು ಪರಿಗಣಿತರಾಗುತ್ತಾರೆ.

ಕೃಷ್ಣ ಅರ್ಜುನನ ಪ್ರಶ್ನೆಗೆ ಉತ್ತರ ಕೊಡುತ್ತ ಹೇಳುತ್ತಾನೆ: “ಶ್ರದ್ಧೆಯಿಂದ ಯಾರು ನನ್ನನ್ನು ಉಪಾಸನೆ ಮಾಡುತ್ತಾರೋ  ಅವರು ಭಗವಂತನ ಸಾಧಕರಲ್ಲಿ ಶ್ರೇಷ್ಠರು” ಎಂದು. ಇಲ್ಲಿ ಶ್ರದ್ಧೆ ಎಂದರೆ ನಂಬಿಕೆ. ಸಾಧನೆಯಲ್ಲಿ ಬಹಳ ಮುಖ್ಯವಾದದ್ದು ಶ್ರದ್ಧೆ. ಶ್ರದ್ಧೆ ಇಲ್ಲದೆ ಉಪಾಸನೆ ಮಾಡಿ ಉಪಯೋಗವಿಲ್ಲ. ಇದು ಮನಃಶಾಸ್ತ್ರ. ಇದಕ್ಕೆ ಲೌಕಿಕವಾದ ಉದಾಹರಣೆ: ರೋಗಿ ಮತ್ತು ವೈದ್ಯರು. ಒಂದು ವೇಳೆ ರೋಗಿಗೆ ತನ್ನನ್ನು ಪರೀಕ್ಷಿಸಿ ಔಷಧ ಕೊಡುವ ವೈದ್ಯನ ಮೇಲೆ ನಂಬಿಕೆ ಇಲ್ಲದಿದ್ದರೆ, ತೆಗೆದುಕೊಳ್ಳುವ ಔಷಧ ಆತನಲ್ಲಿ ಕೆಲಸ ಮಾಡುವುದಿಲ್ಲ. ಗಾಢವಾದ ನಂಬಿಕೆ ಇದ್ದರೆ-ವೈದ್ಯ ಯಾವ ಕಾಯಿಲೆಗೆ ಯಾವ ಮದ್ದು ಕೊಟ್ಟರೂ ರೋಗ ಗುಣವಾಗುತ್ತದೆ! ಇದು ಸಂಶೋಧನೆಯಿಂದ ಸಾಬೀತಾಗಿರುವ ವಿಷಯ. ಆದ್ದರಿಂದ ಕೇವಲ ಕಣ್ಮುಚ್ಚಿ-ನಂಬಿಕೆ ಇಲ್ಲದೆ ಉಪಾಸನೆ ಮಾಡಿದರೆ ಉಪಯೋಗವಿಲ್ಲ. ದೃಢವಾದ ಶ್ರದ್ಧೆಯಿಂದ, ತಿಳಿದು, ಭಗವಂತನ ಗುಣರೂಪವನ್ನು ಧ್ಯಾನ ಮಾಡುವುದು ಶ್ರೇಷ್ಠ ಭಕ್ತಿ ಎನಿಸುತ್ತದೆ. ಪೂರ್ಣ ಶ್ರದ್ಧೆಯಿಂದ ಯಾವ ರೂಪದಿಂದಲೂ, ಯಾವ ನಾಮದಿಂದಲೂ ಭಗವಂತನನ್ನು ಉಪಾಸನೆ ಮಾಡಬಹುದು. ಭಗವಂತನ ರೂಪವಲ್ಲದ ರೂಪವೊಂದಿಲ್ಲ, ಭಗವಂತನ ನಾಮವಲ್ಲದ ನಾಮವೊಂದಿಲ್ಲ. ಪೂರ್ಣ ಶ್ರದ್ಧೆ ಇದ್ದಾಗ ನಾಮ-ರೂಪ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಭಗವಂತ ಹೇಳುತ್ತಾನೆ: “ನನ್ನ ರೂಪ ಮತ್ತು ಗುಣ ವಿಶೇಷವನ್ನು ಯಾರು ಶ್ರದ್ಧೆಯಿಂದ ಉಪಾಸನೆ ಮಾಡುತ್ತಾರೆ ಅವರು ಸಾಧಕರಲ್ಲಿ ಶ್ರೇಷ್ಠರು” ಎಂದು.

ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ
ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್

ಸನ್ನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ
ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ        

ಯೇತು ಅಕ್ಷರಮ್ ಅನಿರ್ದೇಶ್ಯಮ್ ಅವ್ಯಕ್ತಮ್  ಪರ್ಯುಪಾಸತೇ
ಸರ್ವತ್ರಗಮ್ ಆಚಿಂತ್ಯಮ್  ಚ ಕೂಟಸ್ಥಮ್ ಅಚಲಮ್  ಧ್ರುವಮ್
ಸನ್ನಿಯಮ್ಯಇಂದ್ರಿಯ ಗ್ರಾಮಮ್  ಸರ್ವತ್ರ ಸಮ ಬುದ್ಧಯಃ
ತೇ ಪ್ರಾಪ್ನುವಂತಿ ಮಾಮ್ ಏವ  ಸರ್ವ ಭೂತ ಹಿತೇ ರತಾಃ --ಅವ್ಯಕ್ತವೂ ಅಳಿವಿರದ ತತ್ವ. ಮಾತಿಗೆ ನಿಲುಕದ,  ಚಿಂತನೆಗೆ ಎಟುಕದ ತತ್ವ. ಆಗಸದಲ್ಲಿ ನೆಲೆಸಿ ಎಲ್ಲೆಡೆಯು ತುಂಬಿರುವಂಥದು. ನೆಲೆಗೆಡದ ನಿರ್ವಿಕಾರವಾದ ತತ್ವ. ಇಂದ್ರಿಯಗಳ ಗಡಣವನ್ನು ಬಿಗಿಹಿಡಿದು ಎಲ್ಲೆಡೆಯು ಸಮದೃಷ್ಟಿಯಿಂದ ಎಲ್ಲ ಪ್ರಾಣಿಗಳಿಗೆ ಒಳಿತನ್ನು ಬಯಸುತ್ತ ಇಂಥ ಅವ್ಯಕ್ತತತ್ವವನ್ನು ಸೇವಿಸುವವರೂ ಕೂಡ ನನ್ನನ್ನೆ ಸೇರುತ್ತಾರೆ.

ಅವ್ಯಕ್ತತತ್ವ ಲಕ್ಷ್ಮಿಯ ಉಪಾಸನೆಯ ಬಗ್ಗೆ ಇಲ್ಲಿ ಕೃಷ್ಣ ವಿವರಿಸುತ್ತಾನೆ. ಲೋಕನೀತಿಗೂ ಭಗವಂತನ ಉಪಾಸನೆಯಲ್ಲೂ ಒಂದು ವೆತ್ಯಾಸವಿದೆ. ಲೋಕದಲ್ಲಿ ಸಾಮಾನ್ಯವಾಗಿ ತಾಯಿ ಯಾವಾಗಲೂ ತನ್ನ ಮಕ್ಕಳ ತಪ್ಪನ್ನು ಕ್ಷಮಿಸುತ್ತಾಳೆ  ಮತ್ತು ತಂದೆ ಶಿಕ್ಷಿಸುತ್ತಾನೆ. ಆದರೆ ತಾಯಿ ಶ್ರೀಲಕ್ಷ್ಮಿ  ಉಪಾಸನೆ ಮತ್ತು ಭಗವಂತನ ಉಪಾಸನೆಯಲ್ಲಿ ಇದು ವ್ಯತಿರಿಕ್ತ. ಉಪಾಸನೆಯಲ್ಲಿ ಏನಾದರೂ ಲೋಪ ದೋಷಗಳಾದರೆ ಮಾತೆ ಕ್ಷಮಿಸಲಾರಳು, ಆದರೆ ಭಗವಂತ ಕ್ಷಮಿಸುತ್ತಾನೆ. ಈ ಕಾರಣಕ್ಕಾಗಿ ಅವ್ಯಕ್ತಳಾದ ಅಕ್ಷರಳ ಉಪಾಸನೆ ಕಷ್ಟ. ಇಲ್ಲಿ ಕೃಷ್ಣ ಮಾತೆ ಲಕ್ಷ್ಮಿಯನ್ನು ಉಪಾಸನೆ ಮಾಡುವವರು ತಿಳಿದಿರಬೇಕಾದ ಅಂಶಗಳನ್ನು ವಿವರಿಸುತ್ತಾನೆ. ಈ ವಿವರಣೆಯನ್ನು ಅನೇಕ ವಿಶೇಷಣಗಳನ್ನು ಬಳಸಿ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಅಳಿವಿರದ ದೇಹವುಳ್ಳ ಆಕೆ ಅಕ್ಷರಳು; ನಮ್ಮ ಬುದ್ಧಿಗೆ ಗೋಚರವಾಗದ ಪ್ರಕೃತಿ ಅನಿರ್ದೇಶ್ಯಳು; ಎಂದೂ ವ್ಯಕ್ತವಾಗದ ಲಕ್ಷ್ಮಿ ಅವ್ಯಕ್ತಳು. ಈ ಎಲ್ಲಾ ಗುಣಗಳು ಭಗವಂತನಿಗೂ ಅನ್ವಯವಾಗುತ್ತದೆ. ಜಗತ್ತಿನ ಸೃಷ್ಟಿಗೆ ಮೂಲ ತತ್ವವಾದ ಆಕಾಶದಲ್ಲಿ ನೆಲಸಿ, ಇಡೀ ವಿಶ್ವದ ವಿಸ್ತಾರಕ್ಕೆ ಕಾರಣಳಾದವಳು ಲಕ್ಷ್ಮಿ. ಸ್ಥಿರ ಮತ್ತು ಶಾಶ್ವತವಾಗಿರುವ ಆಕೆ ಸದಾ ಭಗವಂತನ ಪಾದವನ್ನು ಸೇವಿಸುತ್ತಿರುತ್ತಾಳೆ. ಇಂಥಹ ಶಕ್ತಿ ದೇವತೆಯನ್ನು ಉಪಾಸನೆ ಮಾಡಲು ಕಠೋರವಾದ ಇಂದ್ರಿಯ ನಿಗ್ರಹ ಅಗತ್ಯ. ಎಲ್ಲವನ್ನೂ ಸಮಬುದ್ಧಿಯಿಂದ ಕಾಣುತ್ತ, ಯಾವುದೇ ನ್ಯೂನತೆ ಇಲ್ಲದೆ ಉಪಾಸನೆ ಮಾಡುವುದು ಇಲ್ಲಿ ಅತ್ಯಗತ್ಯ. [ಉದಾಹರಣೆಗೆ ಲಲಿತ ಸಹಸ್ರನಾಮ ಪಾರಾಯಣ. ಇಲ್ಲಿ ಸ್ವಲ್ಪ ಲೋಪದೋಷವಾದರೂ ಕೂಡ ಅದರಿಂದ ಅನರ್ಥವಾಗುತ್ತದೆ.]    ಈ ರೀತಿ ಅತ್ಯಂತ ನಿಯಮಬದ್ಧವಾಗಿ ಅವ್ಯಕ್ತತತ್ವದ ಉಪಾಸನೆಯಿಂದ ಭಗವಂತನನ್ನು ಸೇರಲು ಸಾಧ್ಯ. ಆದರೆ ಇದು ಸುಲಭ ದಾರಿ ಅಲ್ಲ ಎನ್ನುತ್ತಾನೆ ಕೃಷ್ಣ.

ಕ್ಲೇಶೋSಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಮ್
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ

ಕ್ಲೇಶಃ ಅಧಿಕ ತರಃ ತೇಷಾಮ್ ಅವ್ಯಕ್ತಸಕ್ತ ಚೇತಸಾಮ್
ಅವ್ಯಕ್ತಾ ಹಿ ಗತಿಃ ದುಃಮ್  ದೇಹವದ್ಭಿಃ ಅವಾಪ್ಯತೇ –-ಅವ್ಯಕ್ತತತ್ವದ ಉಪಾಸನೆಯನ್ನೇ ಮೆಚ್ಚುವವರಿಗೆ ದಣಿವು ಹೆಚ್ಚು. ಅವ್ಯಕ್ತದ ಮೂಲಕ ಬಿಡುಗಡೆಯ ದಾರಿ  ಸಾಧಕರಿಗೆ ಕಷ್ಟದ ಬಳಸುದಾರಿ.

ಶಕ್ತಿ ಉಪಾಸನೆ ಮಾಡುವವರಿಗೆ ಆಕೆ ಒಲಿದು ಮೋಕ್ಷ ಕರುಣಿಸುತ್ತಾಳೆ, ಆದರೆ ಅವ್ಯಕ್ತದ ಉಪಾಸನೆ ಮಾಡುವವರಿಗೆ ‘ಅಧಿಕ ತರ ಕ್ಲೇಶಃ’ –ಉಪಾಸನೆ ತುಂಬಾ ಕಷ್ಟ. ಇದು ನೇರ ದಾರಿಯನ್ನು ಬಿಟ್ಟು ಬಳಸುದಾರಿಯಲ್ಲಿ ಭಗವಂತನೆಡೆಗೆ ಪಯಣಿಸಿದಂತೆ. ಸಾಧಕರು ಇದನ್ನು ಬಹಳ ಕಷ್ಟದಿಂದ ಸಾಧಿಸಬೇಕು.

ಮುಂದಿನ ಶ್ಲೋಕಗಳಲ್ಲಿ ಕೃಷ್ಣ ನೇರ ಭಗವಂತನ ಉಪಾಸನೆ ಎಷ್ಟು ಸುಲಭ ಎನ್ನುವುದನ್ನು ವಿವರಿಸುತ್ತಾನೆ. ಇದು ಭಗವಂತ ನಮಗೆ ತೋರಿಸಿಕೊಟ್ಟ ಸುಲಭ ಭಕ್ತಿ ಮಾರ್ಗ.

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ
ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ   

ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್    
ಭವಾಮಿ ನಚಿರಾತ್ ಪಾರ್ಥ ಮಯ್ಯಾವೇಶಿತಚೇತಸಾಮ್   

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ ಪರಾಃ
ಅನನ್ಯೇನ ಏವ ಯೋಗೇನ ಮಾಮ್  ಧ್ಯಾಯಂತ ಉಪಾಸತೇ ||
ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್    
ಭವಾಮಿ ನಚಿರಾತ್ ಪಾರ್ಥ ಮಯ್ಯಾವೇಶಿತಚೇತಸಾಮ್  --ಕೆಲವರಿರುತ್ತಾರೆ: ಅವರು ಮಾಡಿದ್ದನ್ನೆಲ್ಲ ನನ್ನಲ್ಲಿ ಅರ್ಪಿಸಿಬಿಡುತ್ತಾರೆ. ಅವರು ನನ್ನಲ್ಲೆ ಬಗೆಯಿಟ್ಟವರು. ಅವರ ಸಾಧನೆಯ ಗುರಿ ನಾನಲ್ಲದೆ ಬೇರಿಲ್ಲ. ನನ್ನನ್ನೆ ನೆನೆಯುತ್ತ ಸೇವಿಸುತ್ತಾರೆ. ಓ ಪಾರ್ಥಾ, ನನ್ನನ್ನೆ ನೆಚ್ಚಿದ ಅಂಥವರನ್ನು ನಾನು ಬಹುಬೇಗ  ಸಾವಿನ ಬಾಳಿನ ಕಡಲಿನಿಂದ ಬಿಡುಗಡೆಗೊಳಿಸುತ್ತೇನೆ.

ಕೃಷ್ಣ ಹೇಳುತ್ತಾನೆ: “ನನ್ನನ್ನು ಸೇರುವ ಸುಲಭ ಸಾಧನವೆಂದರೆ-ನೀನು ಜೀವನ ನಿರ್ವಹಣೆಗಾಗಿ ಯಾವ ಕ್ರಿಯೆಯನ್ನು ಮಾಡುತ್ತೀಯೋ ಅದನ್ನು ನನಗೆ ಅರ್ಪಿಸುವುದು” ಎಂದು. ಇಲ್ಲಿ ಕೃಷ್ಣ ಹೇಳುತ್ತಿರುವುದು ನಮ್ಮ ಪ್ರತಿಯೊಂದು ಕ್ರಿಯೆಯ ಹಿಂದಿರಬೇಕಾದ ಅನುಸಂಧಾನವನ್ನು. ಈ ಕಾರ್ಯವನ್ನು ಭಗವಂತ ನನ್ನ ಕೈಯಿಂದ ಮಾಡಿಸಿದ-ಇದು ಅವನಿಗರ್ಪಿತವಾಗಲಿ ಎನ್ನುವ ಅನುಸಂಧಾನ. ಈ ರೀತಿ ಇದ್ದಾಗ ನಾವು ಭಗವಂತನ ಪೂರ್ಣಾನುಗ್ರಹಕ್ಕೆ ಪಾತ್ರರಾಗಬಹುದು. ಇಲ್ಲಿ ನಮ್ಮಲ್ಲಿರಬೇಕಾದ ಅತಿ ಮುಖ್ಯ ಅಂಶವೆಂದರೆ ಭಗವಂತನನ್ನು ಅನನ್ಯವಾಗಿ ಏಕನಿಷ್ಠೆಯಿಂದ ಉಪಾಸನೆ ಮಾಡುವುದು. ನಮ್ಮ ಸಾಧನೆಯಲ್ಲಿ ಕೊರತೆ ಇರಬಹುದು, ಇಂದ್ರಿಯ ನಿಗ್ರಹ ಕಷ್ಟವಾಗಬಹುದು, ಸರ್ವಭೂತ ಹಿತಚಿಂತನೆ ಆಗದೇ ಇರಬಹುದು, ಚಿಂತನೆಯಲ್ಲಿ ಲೋಪದೋಷಗಳಿರಬಹುದು, ಏಕಾಗ್ರತೆ ಬಾರದೇ ಇರಬಹುದು. ಆದರೆ ಇಲ್ಲಿ ಕೃಷ್ಣನ ಭರವಸೆ ಏನೆಂದರೆ “ನನ್ನಲ್ಲಿ ಶರಣಾಗು, ನಿನ್ನ ಮನಸ್ಸನ್ನು ನನ್ನಲ್ಲಿ ನೆಡು-ನಾನು ನಿನ್ನನ್ನು ಉದ್ಧರಿಸುತ್ತೇನೆ” ಎನ್ನುವುದು. ನಮ್ಮ ಚಿತ್ತದಲ್ಲಿ ಭಗವಂತನನ್ನು ನೆಲೆಗೊಳಿಸಿದಾಗ ಭಗವಂತ ನಮ್ಮನ್ನು ಈ ಹುಟ್ಟು ಸಾವಿನ ಸಂಸಾರ ಸಾಗರದಿಂದ ಪಾರು ಮಾಡುವ ಜವಾಬ್ಧಾರಿಯನ್ನು ವಹಿಸುತ್ತಾನೆ.

ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ

ಯಿ ಏವ ಮನಃ ಆಧತ್ಸ್ವ ಮಯಿ ಬುದ್ಧಿಮ್  ನಿವೇಶಯ
ನಿವಸಿಷ್ಯಸಿ ಮಯಿ ಏವ ಅತಃ ಊರ್ಧ್ವಮ್  ನ ಸಂಶಯಃ --ನನ್ನಲ್ಲೆ ಬಗೆಯಿಡು. ನನ್ನಲ್ಲಿ ತಿಳಿವನ್ನು ನಿಲಿಸು. ಅದರ ಫಲವಾಗಿ ಮುಂದೆ ನನ್ನಲ್ಲೆ ನೆಲೆಸುವೆ  ಇದಕೆ ಸಂಶಯವಿಲ್ಲ.

ಕೃಷ್ಣ ಹೇಳುತ್ತಾನೆ: ಮನಸ್ಸನ್ನು ನನ್ನಲ್ಲಿ ಆಧಾನ ಮಾಡು ಎಂದು. ‘ಆಧಾನ’ ಎಂದರೆ ಬೀಜ ಬಿತ್ತುವುದು ಅಥವಾ ಕಿಡಿ ಹಚ್ಚುವುದು. ಮನಸ್ಸಿಗೆ ಭಗವಂತನ ಭಕ್ತಿಯ ಕಿಡಿಯನ್ನು ಹಚ್ಚಿ ಅದು ಪ್ರಜ್ವಲಿಸುವಂತೆ ಮಾಡಬೇಕು. ಭಕ್ತಿಯ ಬೀಜ ಬೆಳೆಯುವಂತೆ ಪೋಷಿಸಬೇಕು. ನಿಶ್ಚಯಜ್ಞಾನ ಬುದ್ಧಿಯಲ್ಲಿ ಗಟ್ಟಿಗೊಳ್ಳಬೇಕು. ಈ ರೀತಿ ಸದಾ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿದಾಗ, ಯಾವುದೇ ಕ್ಲೇಶವಿಲ್ಲದೆ ಭಗವಂತನನ್ನು ಸೇರಬಹುದು. ಇದು ಶಕ್ತಿ ಉಪಾಸನೆಗಿಂತ ಭಗವಂತನ ಉಪಾಸನೆ ಎಷ್ಟು ಸುಲಭ ಎನ್ನುವುದರ ವಿವರಣೆ. ಭಗವಂತನ ಉಪಾಸನೆಗೆ ಕಟ್ಟುಪಾಡು ನಿರ್ಬಂಧ ಬಹಳ ಕಡಿಮೆ. ಉದಾಹರಣೆಗೆ ವಿಷ್ಣುಸಹಸ್ರನಾಮ ಪಾರಾಯಣ. ವಿಷ್ಣುಸಹಸ್ರನಾಮ ಚಿಂತನೆಗೆ ಯಾವುದೇ ನಿರ್ದಿಷ್ಟ ಸಮಯದ ನಿರ್ಬಂಧವಿಲ್ಲ. ಯಾರು ಬೇಕಾದರೂ ಯಾವ ಕಾಲದಲ್ಲಿ ಕೂಡ ವಿಷ್ಣುಸಹಸ್ರನಾಮ ಪಠಿಸಬಹುದು. ಸರ್ವ ರೋಗಕ್ಕೆ ಮದ್ದು ವಿಷ್ಣುಸಹಸ್ರನಾಮ. ಭಗವಂತನ ಚಿಂತನೆಯಲ್ಲಿ ತಿಳಿಯದೆ ಆಗುವ ಲೋಪದೋಷಗಳಿಗೆ ಕ್ಷಮೆಯಿದೆ. ನಾರಾಯಣನ ಉಪಾಸನೆ ಎಂದರೆ ಅದು ಲಕ್ಷ್ಮಿಸಮೇತ ನಾರಾಯಣನ ಉಪಾಸನೆ. ನಾರಾಯಣ ಉಪಾಸನೆ ಮಾಡುವವರು ಲಕ್ಷ್ಮಿಯನ್ನು, ಇತರ ದೇವತೆಗಳನ್ನು  ಪ್ರತ್ಯೇಕ ಉಪಾಸನೆ ಮಾಡುವ ಅಗತ್ಯವಿಲ್ಲ. ಲಕ್ಷ್ಮಿಗೆ, ಸರ್ವ ದೇವತೆಗಳಿಗೆ ಅತ್ಯಂತ ಪ್ರೀತಿಪೂರ್ವಕವಾದದ್ದು ಭಗವಂತನ ಉಪಾಸನೆ . ನಾರಾಯಣನ ಉಪಾಸನೆ ಮಾಡುವ ಸಾಧಕನಿಗೆ ಸಕಲ ದೇವತೆಗಳು ಸಹಾಯಮಾಡಿ, ಆತ ತನ್ನ ಸಾಧನಾ ಮಾರ್ಗದಲ್ಲಿ ಎತ್ತರಕ್ಕೇರುವಂತೆ ಮಾಡುತ್ತಾರೆ.  ಇದನ್ನು ತಿಳಿದಾಗ ನಮ್ಮ ಉಪಾಸನೆಯಲ್ಲಿ ನಾವು ಸುಲಭವಾಗಿ ಏಕಭಕ್ತಿಯನ್ನು ಸಾಧಿಸಬಹುದು.  ಭಕ್ತಿ ಮಾರ್ಗದಲ್ಲಿ ಗಟ್ಟಿಗೊಳ್ಳಬಹುದು.

No comments:

Post a Comment