Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Monday, October 31, 2011

Bhagavad Gita Chapter-13 Shloka 8-11


ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ
ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಮ್                    

ಇಂದ್ರಿಯ ಅರ್ಥೇಷು ವೈರಾಗ್ಯಮ್ ಅನಹಂಕಾರಃ  ಏವ ಚ
ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷನುದರ್ಶನಮ್ -- ಇಂದ್ರಿಯ ವಿಷಯಗಳಲ್ಲಿ ಮೈಮರೆಯದಿರುವುದು, ಸೊಕ್ಕು ಇರದಿರುವುದು, ಹುಟ್ಟು-ಸಾವು-ಮುಪ್ಪು-ಬೇನೆಗಳಿಂದ ದುಗುಡತುಂಬಿದ ಬಾಳಿನ ದೋಷಗಳ ಎಚ್ಚರ,-

(೧೦) ಇಂದ್ರಿಯಾರ್ಥೇಷು ವೈರಾಗ್ಯ : ಇಂದ್ರಿಯಗಳನ್ನು ಹೊರಪ್ರಪಂಚದತ್ತ ಹರಿಯದಂತೆ ತಡೆದು ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು. ಇದನ್ನು ಶಮ-ಧಮ ಎನ್ನುತ್ತಾರೆ. ಇಂದ್ರಿಯಗಳು ಲೌಕಿಕ ವಿಚಾರದತ್ತ ಹರಿಯದಂತೆ ಮಾಡುವುದು ಧಮ ಮತ್ತು ಅದನ್ನು ಭಗವಂತನತ್ತ ಹರಿಯುವಂತೆ ಮಾಡುವುದು ಶಮ. ಭಗವಂತನ ಬಗ್ಗೆ ತಿಳಿದಾಗ ಇಂದ್ರಿಯ ಇನ್ಯಾವುದರ ಕಡೆಗೂ ಹರಿಯುವುದಿಲ್ಲ. ಪ್ರಾಪಂಚಿಕವಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧದ ಬಗ್ಗೆ ವಿರಕ್ತಿ ತಾಳು. ಉದಾಹರಣೆಗೆ ನಾಲಿಗೆ ಚಪಲ. ನಮ್ಮಲ್ಲಿ ಕೆಲವರು ಮನೆಯಲ್ಲಿ ಯಾವ ರೀತಿ ಅಡಿಗೆ ಮಾಡಿದರೂ ಅಲ್ಲಿ ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಇತ್ಯಾದಿಯಾಗಿ ತಗಾದೆ ಎತ್ತುತ್ತಾರೆ. ಈ ರೀತಿಯ ಚಪಲವನ್ನು ಬಿಟ್ಟುಬಿಡು.  ಇಲ್ಲಿ ಬೇಕು ಬೇಡಗಳ ಆಯ್ಕೆ ಇಲ್ಲದೆ ಏನನ್ನು ಹಾಕಿದರೂ ಭಗವಂತನ ಪ್ರಸಾದ ಎಂದು ಸ್ವೀಕರಿಸುವುದನ್ನು ಕಲಿ. ಈ ರೀತಿ ಶಮ-ಧಮ ಸಾಧಿಸು.  
(೧೧) ಅನಹಂಕಾರ: ಇದು ಎಲ್ಲ ಗುಣಗಳಿಗಿಂತ ಶ್ರೇಷ್ಠ ಗುಣ. ನಮ್ಮಲ್ಲಿ ಯಾವ ಗುಣವಿದ್ದರೂ ಅದು ನಮ್ಮ ಅಹಂಕಾರದ ಮುಂದೆ ವ್ಯರ್ಥ. ಅಹಂಕಾರ(Ego) ನಮ್ಮಲ್ಲಿನ ಎಲ್ಲ ಗುಣವನ್ನು ನಾಶ ಮಾಡುತ್ತದೆ. ಅಹಂಕಾರವಿದ್ದೆಡೆ  ಉಳಿದ ಗುಣಗಳಿಗೆ ಅಸ್ತಿತ್ವವೇ ಇಲ್ಲ. ಆದ್ದರಿಂದ ಕೃಷ್ಣ ಅದನ್ನು ಇಲ್ಲಿ “ಏವ-” ಎಂದು ಒತ್ತಿ ಹೇಳಿದ್ದಾನೆ. ‘ನಾನು ವಿದ್ವಾಂಸ, ನಾನು ಅನುಷ್ಠಾನವಂತ, ನಾನು ಮಡಿ’ ಹೀಗೆ ನಮ್ಮನ್ನು ಅಹಂಕಾರ ಪ್ರತಿಯೊಂದು ವಿಚಾರದಲ್ಲೂ ಕಾಡುತ್ತದೆ. ಹೀಗೆ ನಾವು ಅಹಂಕಾರಪಟ್ಟರೆ ನಮ್ಮ ಅನುಷ್ಠಾನ-ಅನುಷ್ಠಾನವೇ ಆಗುವುದಿಲ್ಲ. ಎಲ್ಲಿ ಅಹಂಕಾರ ಕಾಡಿತೋ ಅಲ್ಲಿ ಸಾಧನೆ ವ್ಯರ್ಥವಾಗುತ್ತದೆ. ಎಲ್ಲಿ ಅಹಂಕಾರವಿದೆ ಅಲ್ಲಿ ದೇವರಿರುವುದಿಲ್ಲ-ಅಂದರೆ ಅಹಂಕಾರದಿಂದಾಗಿ ನಾವು ದೇವರಿಂದ ದೂರ ಸರಿಯುತ್ತೇವೆ. ಈ ಕಾರಣದಿಂದ ‘ನಾನು ಮಾಡಿದೆ, ನನ್ನಿಂದಾಯ್ತು’ ಎಂದು ಬೀಗುವುದನ್ನು ಬಿಡು. ಭಗವಂತ ನನ್ನ ಕೈಯಿಂದ ಮಾಡಿಸಿದ ಎಂದು ಆತನಿಗೆ ಕೃತಜ್ಞತೆಯನ್ನು ತೋರು.
(೧೨) ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷನುದರ್ಶನಮ್:  ಜೀವನವನ್ನು ಒಳನೋಟದಿಂದ ನೋಡು. ಈ ಜೀವನ ಎನ್ನುವುದು ಹುಟ್ಟು ಸಾವು ಎನ್ನುವ ಎರಡು ದಡದ ನಡುವೆ ಹರಿಯುವ ಒಂದು ಪ್ರವಾಹ. ಈ ಪ್ರವಾಹದಲ್ಲಿ ವ್ಯಾಧಿ, ಮುಪ್ಪು, ದುಃಖ, ಶೋಕ ಎನ್ನುವ ಅಲೆಗಳ ಸರಮಾಲೆ. ಈ ನಮ್ಮ ಬದುಕಿನ ಉದ್ದೇಶವೇನು,  ಭಗವಂತ ನಮ್ಮನ್ನು ಏಕೆ ಹುಟ್ಟಿಸಿದ, ಮಾನವ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವ ಅನುದರ್ಶನ ಮಾಡು. ಆಹಾರ ನಿದ್ರಾ ಭಯ ಮೈಥುನ ಇಷ್ಟೇ ಜೀವನವಲ್ಲ. ಇದನ್ನು ಪ್ರಾಣಿಗಳೂ ಅನುಭವಿಸುತ್ತವೆ. ಆದ್ದರಿಂದ ಶಾಸ್ತ್ರವನ್ನು ಓದಿ ಸತ್ಯಕ್ಕೆ ಅನುಗುಣವಾದ ಯಥಾರ್ಥ ದರ್ಶನವನ್ನು ಮಾಡಿಕೊ. ಕೇವಲ ಲೌಕಿಕ ಸುಖದ ನಿರೀಕ್ಷೆಯಲ್ಲಿ ಬದುಕುವುದನ್ನು ಬಿಟ್ಟು-ಸತ್ಯದ ಸಾಕ್ಷಾತ್ಕಾರಕ್ಕಾಗಿ, ಭಗವಂತನನ್ನು ಸೇರುವುದಕ್ಕಾಗಿ ಬದುಕು. ಎಲ್ಲ ಲೌಕಿಕ ಸುಖ, ಸಂಪತ್ತು ನಿಸ್ಸಾರ. ಇದರಿಂದಾಚೆಗಿನ ಸಾರವಾದ ಭಗವಂತನನ್ನು ತಿಳಿದು ಅದರತ್ತ ಹೆಜ್ಜೆಹಾಕು.

ಅಸಕ್ತಿರನ ಭಿಷ್ವಂಗಃ ಪುತ್ರದಾರಗೃಹಾದಿಷು
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು                              

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ
ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ                                        ೧೦

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್
ಏತಜ್ ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋSನ್ಯಥಾ                 ೧೧

ಅಸಕ್ತಿಃ ಅನಭಿಷ್ವಂಗಃ ಪುತ್ರ ದಾರ ಗೃಹದಿಷು
ನಿತ್ಯಮ್ ಚ ಸಮಚಿತ್ತತ್ವಮ್ ಇಷ್ಟನಿಷ್ಟ ಉಪಪತ್ತಿಷು
ಮಯಿ ಚನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ
ವಿವಿಕ್ತ ದೇಶ ಸೇವಿತ್ವಮ್ ಅತಿಃ ಜನ ಸಂಸದಿ
ಅಧ್ಯಾತ್ಮ ಜ್ಞಾನ ನಿತ್ಯತ್ವಮ್ ತತ್ತ್ವಜ್ಞಾನರ್ಥ ದರ್ಶನಮ್
ಏತತ್  ಜ್ಞಾಮ್ ಇತಿ ಪ್ರೋಕ್ತಮ್ ಅಜ್ಞಾನಮ್  ಯತ್ ಅತಃ ಅನ್ಯಥಾ -- ಅಂಟಿಸಿಕೊಳ್ಳದಿರುವುದು, ಮಕ್ಕಳು ಮಡದಿ ಮನೆ ಮುಂತಾದುವನ್ನು ಅತಿಯಾಗಿ ಹಚ್ಚಿಕೊಳ್ಳದಿರುವುದು, ಇಷ್ಟ-ಅನಿಷ್ಟಗಳು ಬಂದೊದಗಿದಾಗ ಎಂದೆಂದೂ ಬಗೆಗೆಡಡಿರುವುದು, ಬೇರೆಡೆ ಕದಲದೆ ನನ್ನಲ್ಲೆ ಅಚಲವಾದ ಭಕ್ತಿ, ಏಕಾಂತವಾಸ, ಜನಜಂಗುಳಿಯಲ್ಲಿ ಬೆರೆಯದಿರುವುದು, ಅಧ್ಯಾತ್ಮದ ಅರಿವಿನಲ್ಲೇ ನಿರಂತರ ಸ್ಥಿತಿ, ಅಪರೋಕ್ಷ ಜ್ಞಾನಕ್ಕಾಗಿ ಶಾಸ್ತದ ಅಧ್ಯಯನ,[ತತ್ವಜ್ಞಾನಕ್ಕೆ ಗೋಚರನಾದ ಭಗವಂತನ ಸಾಕ್ಷಾತ್ಕಾರ] ಇವೇ ಜ್ಞಾನ ಮತ್ತು ಜ್ಞಾನ ಸಾಧನಗಳು. ಅದಕ್ಕಿಂತ ಬೇರೆಯಾದದ್ದು ಅಜ್ಞಾನ ಮತ್ತು ಅಜ್ಞಾನದ ದಾರಿ.

(೧೩) ಅಸಕ್ತಿಃ : ‘ಸಕ್ತಿ’ ಎಂದರೆ ಹಚ್ಚಿಕೊಳ್ಳುವುದು ಅಥವಾ ಅಂಟಿಸಿಕೊಳ್ಳುವುದು(Attachment).  ಈ ವಿಚಾರವಾಗಿ ನಾವು ಹಿಂದೆ ಅನೇಕ ಬಾರಿ ಚರ್ಚಿಸಿದ್ದೇವೆ. ನಮ್ಮೆಲ್ಲ ದುಃಖಕ್ಕೂ ಮೂಲಕಾರಣ ‘ಸಕ್ತಿ’. ಆದ್ದರಿಂದ ಯಾವುದನ್ನೂ ಅಂಟಿಸಿಕೊಳ್ಳಬೇಡ. ಹುಟ್ಟುವಾಗ ನಾವು ಏನನ್ನೂ ತಂದಿಲ್ಲ, ಸಾಯುವಾಗ ಯಾವುದನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಲೌಕಿಕವಾದ ಈ ಸಕ್ತಿಯಿಂದ ದೂರ ನಿಲ್ಲು. ಬಂದದ್ದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸು, ಹೋದಾಗ ಭಗವಂತನ ಇಚ್ಛೆ ಎಂದು ಸಂತೋಷದಿಂದಿರು.      
(೧೪) ಅನಭಿಷ್ವಂಗಃ ಪುತ್ರ ದಾರ ಗೃಹದಿಷು : ಅಭಿಷ್ವಂಗ ಎಂದರೆ ಅತಿಯಾಗಿ ಹಚ್ಚಿಕೊಳ್ಳುವುದು(Over attachment). ಮನೆ, ಹೆಂಡತಿ(ಗಂಡ/ಹೆಂಡತಿ) ಮಕ್ಕಳು ಇತ್ಯಾದಿಯನ್ನು ಅತಿಯಾಗಿ ಹಚ್ಚಿಕೊಳ್ಳಬೇಡ ಎನ್ನುತ್ತಾನೆ  ಕೃಷ್ಣ.  ಇಲ್ಲಿ ಮನೆ ಸಂಸಾರವನ್ನು ಹಚ್ಚಿಕೊಳ್ಳದೆ ಇರುವುದು ಎಂದರೆ ಎಲ್ಲವನ್ನು ತೊರೆದು ಕಾಡಿಗೆ ಹೋಗುವುದಲ್ಲ. ‘ಇದನ್ನು ಬಿಟ್ಟು ನಾನು ಇರಲಾರೆ’ ಎನ್ನುವ ಅಭಿಷ್ವಂಗ ಬಿಟ್ಟುಬಿಡುವುದು ಅಷ್ಟೆ. ಜೀವನದಲ್ಲಿ ಏನು ಬರುತ್ತದೆ ಅದನ್ನು ಸಾಕ್ಷಿಭೂತನಾಗಿ ನೋಡು. ಜೀವನವೇ ಒಂದು ನಾಟಕ, ಅದರಲ್ಲಿ ನೀನೇ ಪಾತ್ರಧಾರಿ , ನೀನೇ  ಪ್ರೇಕ್ಷಕ. ಭಗವಂತ ನಿರ್ದೇಶಕ. ಇಲ್ಲಿ ನನ್ನ ಮಕ್ಕಳೇ ನನ್ನ ಬದುಕು, ನನ್ನ ಪತಿ/ಪತ್ನಿ ನನ್ನ ಬದುಕು, ನನ್ನ ಸಂಪಾದನೆಯೇ ನನ್ನ ಬದುಕು, ಇದನ್ನು ಬಿಟ್ಟು ನನ್ನ ಅಸ್ತಿತ್ವವಿಲ್ಲ ಎನ್ನುವ ಅತಿಯಾದ ಅಭಿಷ್ವಂಗ ಬೇಡ. ಪ್ರೀತಿಸು-ಆದರೆ ಹಚ್ಚಿಕೊಂಡು ಕೊರಗಬೇಡ, ನಿರಾಶನಾಗಬೇಡ. ಈ ರೀತಿ ಬದುಕಲು ಕಲಿತಾಗ ಜೀವನ ಸುಂದರವಾಗಿರುತ್ತದೆ. ನಮ್ಮಿಂದ ನಮ್ಮ ಮಕ್ಕಳು ದೂರವಾದರೆ, ಹೆಂಡತಿ/ಗಂಡ ದೂರವಾದರೆ, ನಾವು ನಮ್ಮ ಸಂಪತ್ತನ್ನು(ಮನೆ, ಆಸ್ತಿ ಇತ್ಯಾದಿ) ಕಳೆದುಕೊಂಡರೆ ದುಃಖ-ನಿರಾಶೆಯಾಗುವುದಿಲ್ಲ. ಈ ರೀತಿ ಬದುಕಿದಾಗ  ಜೀವನದಲ್ಲಿ ಏನು ದುರಂತ ಬಂದರೂ ಅದು ನಮ್ಮ ಪಾಲಿನ ಪಾತ್ರಾಭಿನಯ ಎನ್ನುವ ಭಾವನೆಯಿಂದ ನಾವು ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ-ಆಘಾತವಾಗುವುದಿಲ್ಲ.      
(೧೫) ನಿತ್ಯಮ್ ಚ ಸಮಚಿತ್ತತ್ವಮ್ ಇಷ್ಟನಿಷ್ಟ ಉಪಪತ್ತಿಷು : ಜೀವನದಲ್ಲಿ ಇಷ್ಟವಾದ ಘಟನೆ ನಡೆಯಬಹುದು, ಅನಿಷ್ಟವಾದ ಘಟನೆ ನಡೆಯಬಹುದು. ಇಷ್ಟ ಅನಿಷ್ಟಗಳು ಬಂದೊದಗಿದಾಗ ಮನಸ್ಸಿನ ಸಮತೊಲನವನ್ನು ಕಳೆದುಕೊಳ್ಳದೆ ಎಲ್ಲ ಸಮಯದಲ್ಲೂ ಸಮಚಿತ್ತತ್ವದಿಂದಿರಲು ಕಲಿ.  ನಾವು ಅನಿಷ್ಟ ಅಂದುಕೊಂಡಿದ್ದು ಅನಿಷ್ಟವಾಗಿರಬೇಕೆಂದಿಲ್ಲ ಅಥವಾ ನಾವು ಇಷ್ಟಪಟ್ಟಿದ್ದು ಒಳ್ಳೆಯದಾಗಿರಬೇಕೆಂದಿಲ್ಲ. ಆದ್ದರಿಂದ ಇಷ್ಟ-ಅನಿಷ್ಟ ಎಂದು ಲೇಪ ಹಚ್ಚದೆ ಬಂದಿದ್ದನ್ನು ‘ನಾಹಂ ಕರ್ತಾ ಹರಿಃ ಕರ್ತಾ’ ಎಂದು ಸ್ವೀಕರಿಸಲು ಕಲಿ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆ ಭಗವಂತ ನಮ್ಮ ತರಬೇತಿಗಾಗಿ ಸೃಷ್ಟಿಸಿರುವ ಪ್ರಾಯೋಗಿಕ(Practical)ಶಿಕ್ಷಣ. ಭಗವಂತ ನಮಗೆ ದುಃಖವನ್ನು ಕೊಟ್ಟು ನಮ್ಮನ್ನು ಜಾಣರನ್ನಾಗಿ ಮಾಡುತ್ತಾನೆ ಎನ್ನುವ ಸತ್ಯವನ್ನು ಅರಿತು ಬದುಕು.
(೧೬) ಮಯಿ ಚನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ: ಭಗವಂತನಲ್ಲಿ ನಿರಂತರ ಪರಿಶುದ್ಧ ಭಕ್ತಿ  ಇರಲಿ. ಭಗವಂತ ಒಬ್ಬನೆ, ಆತನ ನಾಮ ಹಲವು. ಆತನಲ್ಲಿ ಅನನ್ಯವಾದ ಭಕ್ತಿಯನ್ನಿಡು. ಇಲ್ಲಿ ಏಕಭಕ್ತಿ ಬಹಳ ಮುಖ್ಯ. ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವುದು, ಒಂದು ದೇವತೆಯನ್ನು ಪೂಜಿಸಿದಾಗ ಇನ್ನೊಂದು ದೇವತೆ ಕೋಪಗೊಳ್ಳಬಹುದು ಎನ್ನುವ ಭಯದಿಂದ ಅನೇಕ ದೇವತಾ ಆರಾಧನೆ ಮಾಡುವುದು ಮಾಡಿದರೆ ಅದು ವ್ಯಭಿಚಾರವಾಗುತ್ತದೆ. ಆದ್ದರಿಂದ ಕೃಷ್ಣ ಇಲ್ಲಿ “ನಿನ್ನ ಭಕ್ತಿ ಅನನ್ಯವಾಗಿದ್ದು ಅವ್ಯಭಿಚಾರಿಣಿಯಾಗಿರಬೇಕು” ಎಂದು ಒತ್ತಿ ಹೇಳಿದ್ದಾನೆ. ಭಗವಂತ ಸರ್ವಸಮರ್ಥ, ಸರ್ವಶಕ್ತ, ಜಗತ್ಜನ್ಮಾದಿ ಕಾರಣ ಎನ್ನುವ ನಿಷ್ಠೆ ನಿನ್ನಲ್ಲಿರಲಿ. ದೇವರ ಮೇಲೆ ನಂಬಿಕೆ ಇಲ್ಲದೆ ಯಾವ ಶಾಸ್ತ್ರ ಓದಿ ಏನೂ ಉಪಯೋಗವಿಲ್ಲ. ಭಗವಂತನ ಮೇಲಿನ ಪೂರ್ಣ ನಂಬಿಕೆಯಿಂದ ಮಾತ್ರ ಜ್ಞಾನ ಸಾಧನ ಸಾಧ್ಯ.   
(೧೭) ವಿವಿಕ್ತ ದೇಶ ಸೇವಿತ್ವಮ್: ಸಾಧ್ಯವಾದಷ್ಟು ಅತಿ ಹೆಚ್ಚು ಸಾತ್ವಿಕ ಕಂಪನವಿರುವ ಕಡೆ, ಸಾತ್ವಿಕ ಜನರ ಜೊತೆಗೆ ವಾಸ ಮಾಡಲು ಪ್ರಯತ್ನಿಸು. ಪೂರ್ಣಪ್ರಮಾಣದಲ್ಲಿ ಅಖಂಡವಾದ ಸಾತ್ವಿಕ ಕಂಪನವಿರುವ ಸ್ಥಳ  ಪುಣ್ಯಕ್ಷೇತ್ರವೆನಿಸುತ್ತದೆ. ಅಂತಹ ಸ್ಥಳದಲ್ಲಿ ಒಳ್ಳೆಯದನ್ನು ಮಾತನಾಡುವ, ಒಳ್ಳೆಯ ಚಿಂತನೆ ಮಾಡುವ ಸಜ್ಜನರೊಂದಿಗೆ ವಾಸಮಾಡು. ಇದು ಸಾಧ್ಯವಾಗದೇ ಇದ್ದಲ್ಲಿ ಆದಷ್ಟು ಏಕಾಂತವಾಸವನ್ನು ಅಭ್ಯಾಸ ಮಾಡು. ನಾಲ್ಕು ಜನರೊಂದಿಗೆ ಸೇರಿ ಹಾಳು ಹರಟೆಯಲ್ಲಿ ನಿನ್ನ ಅಮೂಲ್ಯವಾದ ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬೇಡ.    
(೧೮) ಅತಿಃ ಜನ ಸಂಸದಿ: ಎಲ್ಲಿ ಬೇಡವಾದ ವಿಚಾರಕ್ಕಾಗಿ ಜನಜಂಗುಳಿ ಸೇರುತ್ತದೋ, ಅಂಥಹ ಜನಜಂಗುಳಿಯಿಂದ ದೂರವಿರು.
(೧೯) ಅಧ್ಯಾತ್ಮ ಜ್ಞಾನ ನಿತ್ಯತ್ವಮ್ : ಅಧ್ಯಾತ್ಮದ ಅರಿವಿನಲ್ಲಿ ನಿರಂತರವಾಗಿರು. ಮೊದಲು ಪಿಂಡಾಂಡ-ಬ್ರಹ್ಮಾಂಡವನ್ನು ತಿಳಿ,  ಆನಂತರ ಇದನ್ನು ತಿಳಿಯುವ ಅಪೂರ್ವ ಮನಸ್ಸಿನ ವಿಸ್ಮಯದ ಬಗ್ಗೆ ತಿಳಿ,  ನಂತರ ‘ನಾನು’ ಎಂದರೆ ಏನು(Awareness of self) ಎನ್ನುವುದನ್ನು ತಿಳಿ. ಇದು ತಿಳಿದಮೇಲೆ ಈ ಆತ್ಮವನ್ನು ನಿಯಂತ್ರಿಸುವ ಪರಮಾತ್ಮನನ್ನು ತಿಳಿ. ಇದು ಅಧ್ಯಾತ್ಮಜ್ಞಾನ. ನಿನ್ನ ಅಧ್ಯಯನದ ಗುರಿ ಅಧ್ಯಾತ್ಮ ಜ್ಞಾನವಾಗಿರಲಿ.   
(೨೦) ತತ್ತ್ವಜ್ಞಾನರ್ಥ ದರ್ಶನಮ್: ಜಗತ್ತಿನ ಮೂಲಭೂತ ಸತ್ಯ ತಿಳಿಯುವುದಕ್ಕೆ ನಿನ್ನ ಅಧ್ಯಯನ ಮೀಸಲಿರಲಿ. ಮೇಲಿನ ಎಲ್ಲ ಗುಣಗಳಿಂದ ಎಲ್ಲ ಶಾಸ್ತ್ರಗಳಿಗೆ ವಿಷಯಭೂತನಾದ, ಎಲ್ಲ ಶಾಸ್ತ್ರಗಳಿಂದ ಪ್ರತಿಪಾಧ್ಯನಾದ ಭಗವಂತನ ಸಾಕ್ಷಾತ್ಕಾರ ಪಡೆ.
ಇಲ್ಲಿ ಹೇಳಿರುವ ಗುಣಗಳೇ ಜ್ಞಾನ ಮತ್ತು ಜ್ಞಾನ ಸಾಧನಗಳು. ಇದಕ್ಕಿಂತ ಬೇರೆಯಾಗಿರುವುದು ಅಜ್ಞಾನ ಮತ್ತು ಅಜ್ಞಾನದ ಗುರಿ. 

No comments:

Post a Comment