Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, October 1, 2011

Bhagavad Gita Kannada Chapter-11 Shloka 9-14


ಸಂಜಯ ಉವಾಚ ।
ಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ॥೯॥

ಸಂಜಯ ಉವಾಚ-ಸಂಜಯ ಹೇಳಿದನು:
ಏವಮ್ ಉಕ್ತ್ವಾ ತತಃ  ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮ್ ಆಸ ಪಾರ್ಥಾಯ ಪರಮಮ್  ರೂಪಮ್ ಐಶ್ವರಮ್ –ಅರಸನೇ, ಹಿರಿಯ ಶಕ್ತಿಗಳ ಒಡೆಯನಾದ ಹರಿ ಹೀಗೆ ನುಡಿದು, ಅರ್ಜುನನಿಗೆ ತೋರಿಸಿದನು ಜಗವನಾಳುವ ಹಿರಿಯ ರೂಪವನ್ನು.

ವ್ಯಾಸರಿಂದ ದಿವ್ಯ ದೃಷ್ಟಿ ಪಡೆದು, ಯುದ್ಧರಂಗದಲ್ಲಿ ನಡೆಯುತ್ತಿರುವ ಘಟನೆಗಳ ವಿವರಣೆಯನ್ನು ಧೃತರಾಷ್ಟ್ರನಿಗೆ ಕೊಡುತ್ತಿರುವ ಸಂಜಯ ಕೂಡ ಭಗವಂತನ ವಿಶ್ವರೂಪವನ್ನು ಕಾಣುತ್ತಾನೆ. ಆತ ಧೃತರಾಷ್ಟ್ರನಲ್ಲಿ ಹೇಳುತ್ತಾನೆ: “ಓ ರಾಜನ್, ಈ ರೀತಿ ಹೇಳಿ  ಮಹಾಯೋಗೇಶ್ವರ ಹರಿಯು ತನ್ನ ಹಿರಿಯರೂಪವನ್ನು ತೋರಿದನು” ಎಂದು. ಇಲ್ಲಿ ಬಳಕೆಯಾಗಿರುವ ‘ತತಃ’ ಅನ್ನುವ ಪದ ಈ ಶ್ಲೋಕದಲ್ಲಿ ವಿಶೇಷ ಅರ್ಥವನ್ನು ಕೊಡುತ್ತದೆ. ಅರ್ಜುನನು ದಿವ್ಯ ದೃಷ್ಟಿ ಸಂಪನ್ನನಾದ್ದರಿಂದ, ದಿವ್ಯರೂಪ ದರ್ಶನ ನೋಡುವ ಅಧಿಕಾರ ಸಂಪನ್ನನಾದ್ದರಿಂದ, ಎಲ್ಲಾ ಕಡೆ ತುಂಬಿರುವ ಭಗವಂತ, ತನ್ನ ವಿಶ್ವರೂಪವನ್ನು ಆತನಿಗೆ ತೋರಿದ-ಎನ್ನುವ ಭಾವವನ್ನು ಈ ಪದ ಕೊಡುತ್ತದೆ. ಬ್ರಹ್ಮಾದಿ ಸರ್ವ ದೇವತೆಗಳಿಗೂ ಒಡೆಯನಾದ ಭಗವಂತನನ್ನು ಸಂಜಯ ಇಲ್ಲಿ ಮಹಾಯೋಗೇಶ್ವರಃ ಎಂದು ಸಂಬೋಧಿಸಿದ್ದಾನೆ. ಇಲ್ಲಿ ಬಳಸಿರುವ ‘ಹರಿಃ’ ಎನ್ನುವ ಪದ ಭಗವಂತನ ಸರ್ವಗತತ್ವವನ್ನು ವಿವರಿಸುವ ಪದ. ಯಾರು ಯಾವ ದೇವತಾ ಮುಖದಲ್ಲಿ ಆಹುತಿ ಕೊಟ್ಟರೂ ಅದನ್ನು ಮೊದಲು ಪಡೆಯುವ ಭಗವಂತ ಹರಿಃ.

ಮುಂದಿನ ಶ್ಲೋಕದಲ್ಲಿ ಸಂಜಯ ತಾನು ಕಂಡ ಭಗವಂತನ ವಿಶ್ವರೂಪದ ವರ್ಣನೆ ಮಾಡುತ್ತಾನೆ.       

ಅನೇಕವಕ್ತ್ರನಯನಮನೇಕಾದ್ಭುತದರ್ಶನಮ್        ।
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ॥೧೦॥

ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಮ್ ।
ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಮ್ ॥೧೧॥


ಅನೇಕ ವಕ್ತ್ರ ನಯನಮ್ ಅನೇಕ ಅದ್ಭುತ ದರ್ಶನಮ್          ।
ಅನೇಕ ದಿವ್ಯ ಆಭರಣಮ್  ದಿವ್ಯ ಅನೇಕ ಉದ್ಯತ ಆಯುಧಮ್  ||
ದಿವ್ಯ ಮಾಲ್ಯಾ ಅಂಬರ ಧರಮ್  ದಿವ್ಯ ಗಂಧ ಅನುಲೇಪನಮ್ ।
ಸರ್ವಾಶ್ಚರ್ಯಮಯಮ್  ದೇವಮನಂತಮ್  ವಿಶ್ವತೋಮುಖಮ್ –ಎಣಿಕೆಯಿರದ ಬಾಯಿ ಕಣ್ಣುಗಳ ರೂಪ. ಎಣಿಕೆಯಿರದ ಅಚ್ಚರಿಯ ನೋಟಗಳ ರೂಪ. ಎಣಿಕೆಯಿರದ ಚಲುವಾಭರಣಗಳ ರೂಪ. ಎಣಿಕೆಯಿರದ ಹೊಳೆಯುವಾಯುಧಗಳನ್ನು ಮೇಲೆತ್ತಿ ಹಿಡಿದ ರೂಪ. ಹೊಳೆವ ಹೂದಂಡೆಗಳನ್ನಿಟ್ಟ ಉಡಿಗೆಗಳ ತೊಟ್ಟ ರೂಪ. ಹೊಳೆವ ಗಂಧ ಬಳಿದ ರೂಪ. ಎಲ್ಲ ಅಚ್ಚರಿಗಳ ಸೆಲೆ.  ಎಲ್ಲೆಡೆಯು ತುಂಬಿ ತುದಿಯಿರದ ರೂಪ.

ಕೃಷ್ಣ ನಮ್ಮೆಲ್ಲರಂತೆ ಮನುಷ್ಯರ ಆಕಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ. ಆದರೆ  ಈ ಕ್ಷಣದಲ್ಲಿ ಎಲ್ಲಿ ನೋಡಿದರಲ್ಲಿ ಕೃಷ್ಣನ ಮುಖ, ಅಲ್ಲಿ ಸೇರಿರುವ ಪ್ರತಿಯೊಂದು ಜೀವಿಯ ಒಳಗೆ, ಹೊರಗೆ ಎಲ್ಲೆಲ್ಲೂ ಕೇವಲ ಕೃಷ್ಣನ ಮುಖ ಕಾಣುತ್ತಿದೆ.  ಸಂಜಯನಿಗೆ ಅಲ್ಲಿ ಆನೆ, ಕುದುರೆ, ಸೈನಿಕರು ಕಾಣಿಸಲಿಲ್ಲ. ಬದಲಿಗೆ ಎಲ್ಲೆಡೆ, ಎಲ್ಲರೊಳಗೆ ತುಂಬಿರುವ ಆ ಭಗವಂತ ಕಾಣಿಸಿಕೊಂಡ. ಭಗವಂತನ ಈ ರೂಪವನ್ನು ವರ್ಣಿಸುವುದು ಅಸಾಧ್ಯ. ಇದನ್ನು ಕೇವಲ ನೋಡಿ ಅನುಭವಿಸಬೇಕು. ಅದೊಂದು ಅಚ್ಚರಿ. ಸರ್ವಾಭರಣಗಳಿಂದ ಶೋಭಿಸುವ, ದಿವ್ಯವಾದ ಆಯುಧಗಳನ್ನು ಹಿಡಿದಿರುವ, ಹೂವಿನ ಮಾಲೆಗಳನ್ನಿಟ್ಟ ಉಡುಪನ್ನು ತೊಟ್ಟ, ಹೊಳೆವ ಗಂಧ ಬಳಿದ, ಸರ್ವಾಶ್ಚರ್ಯ ಸ್ವರೂಪ, ವಿಸ್ಮಯ ಮೂರ್ತಿ ಭಗವಂತ ಯುದ್ಧರಂಗದಲ್ಲಿ  ತನ್ನ ವಿಶ್ವರೂಪವನ್ನು ತೋರಿದ.         

ದಿವಿ ಸೂರ್ಯಸಹಸ್ರಸ್ಯ ಭವೇದ್ ಯುಗಪದುತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾದ್ ಭಾಸಸ್ತಸ್ಯ ಮಹಾತ್ಮನಃ ॥೧೨॥

ದಿವಿ ಸೂರ್ಯ ಸಹಸ್ರಸ್ಯ ಭವೇತ್  ಯುಗಪತ್ ಉತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾತ್  ಭಾಸ ತಸ್ಯ ಮಹಾತ್ಮನಃ – ಸಾವಿರ ಸಾವಿರ ಸೂರ್ಯರು ಒಮ್ಮೆಲೆ ಮುಗಿಲಲ್ಲಿ ಮೂಡಿಬಂದರೆ, ಅಂಥ ಬೆಳಕು ಆ ಮಹಾತ್ಮನ ಬೆಳಕಿಗೆ ಸರಿಗಟ್ಟಿತೇನೊ !

ಸಂಜಯ ಹೇಳುತ್ತಾನೆ: “ಸಾವಿರಾರು ಸೂರ್ಯರು ಆಕಾಶದಲ್ಲಿ ಒಮ್ಮೆಗೆ ಉದಿಸಿದರೆ ಎಷ್ಟು ಪ್ರಕಾಶಮಾನವಾಗಿರುತ್ತದೋ, ಅಂಥಹ ಪ್ರಕಾಶಮಾನನಾಗಿ ಭಗವಂತ ಕಾಣಿಸಿದ” ಎಂದು. ಯೋಗಿಗಳಿಗೆ ಭಗವಂತ ಒಳಗಣ್ಣಿನಲ್ಲಿ ಸಾವಿರ ಸೂರ್ಯರು ಏಕಕಾಲದಲ್ಲಿ ಉದಯಿಸಿದರೆ ಎಷ್ಟು ಪ್ರಖರವಾಗಿರುತ್ತದೋ ಅಷ್ಟು ಪ್ರಖರವಾಗಿ ಕಾಣಿಸುತ್ತಾನೆ. ಆದರೆ ‘ಚಂದ್ರಾಂಶು’ವಾದ ಭಗವಂತ ಅಷ್ಟೇ ತಂಪು ಮತ್ತು ಅಹ್ಲಾದಮಯ. ಭಗವಂತ ಸೂರ್ಯನಂತೆ ಪ್ರಖರ ಆದರೆ ಚಂದ್ರನಂತೆ ತಂಪು. ಇಷ್ಟು ಪ್ರಕಾಶಮಾನನಾಗಿರುವ ಭಗವಂತನ ರೂಪವನ್ನು ಯಾರೂ ಎಂದೆಂದೂ  ತಮ್ಮ ಹೊರಗಣ್ಣಿನಿಂದ ಕಾಣಲು ಸಾಧ್ಯವಿಲ್ಲ. 

ತತ್ರೈಕಸ್ಥಂ ಜಗತ್ ಕೃತ್ಸ್ನಂ ಪ್ರವಿಭಕ್ತಮನೇಕಧಾ     ।
ಅಪಶ್ಯದ್ ದೇವದೇವಸ್ಯ ಶರೀರೇ ಪಾಂಡವಸ್ತದಾ    ॥೧೩॥

ತತ್ರ ಏಕಸ್ಥಮ್  ಜಗತ್ ಕೃತ್ಸ್ನಮ್  ಪ್ರವಿಭಕ್ತಮ್ ಅನೇಕಧಾ ।
ಅಪಶ್ಯತ್  ದೇವದೇವಸ್ಯ ಶರೀರೇ ಪಾಂಡವಃ ತದಾ –ಅರ್ಜುನ ಕಂಡನಾಗ ಬಗೆಬಗೆಯಿಂದ ವಿಂಗಡಗೊಂಡ ಇಡಿಯ ಪೊಡವಿ ಅಲ್ಲಿ, ದೇವದೇವನ ಮೈಯಲ್ಲಿ ಒಂದುಗೂಡಿದ್ದನ್ನು.

ಭಗವಂತ ಅರ್ಜುನನಿಗೆ ರಣರಂಗದಲ್ಲಿ ತೋರಿದ ವಿಶ್ವರೂಪ ತುಂಬಾ ವಿಶಿಷ್ಟವಾದದ್ದು. ಮಧ್ವಾಚಾರ್ಯರು ಹೇಳುವಂತೆ ಅರ್ಜುನನಿಗೆ ವಿಶ್ವರೂಪ ದರ್ಶನವಾದಾಗ, ಪ್ರಪಂಚದಲ್ಲಿ ಭಗವಂತನ ವಿಶ್ವರೂಪ ದರ್ಶನ ಕಾಣುವ ಅರ್ಹತೆಯುಳ್ಳ ಎಲ್ಲರಿಗೂ ಈ ದರ್ಶನವಾಗಿತ್ತು. [ಮೂರು ಲೋಕದಲ್ಲಿರುವ, ಅರ್ಹತೆಯುಳ್ಳ  ಸಮಸ್ತ ಜೀವಿಗಳಿಗೂ ಭಗವಂತನ ಈ ವಿಶೇಷ  ದರ್ಶನವಾಗಿದೆ ಎನ್ನುವ ಮಾತು ಮುಂದೆ ಈ ಅಧ್ಯಾಯದಲ್ಲಿ ಬರುತ್ತದೆ]. ಅರ್ಜುನನಿಗೆ ಇಲ್ಲಿ ಕಾಣಿಸಿದ್ದು ಕೇವಲ ಎಲ್ಲೆಡೆ ತುಂಬಿರುವ ಭಗವಂತ ಮಾತ್ರವಲ್ಲ, ಆತನೊಳಗೆ ತುಂಬಿರುವ ಪ್ರಪಂಚ ಕೂಡ. [ಇಲ್ಲಿ ಭಗವಂತನೊಳಗೆ ವಿಶ್ವವನ್ನು ಕಾಣುವುದು ಅಂದರೆ ಧ್ಯಾನದಲ್ಲಿ ಪರಮಾತ್ಮನನ್ನು, ಆತನಿಂದ ಸೃಷ್ಟವಾದ ಸೃಷ್ಟಿಯನ್ನು ಕಂಡಂತೆ. ಸತ್ವದಿಂದ ಸ್ವಚ್ಛವಾದ ಮನಸ್ಸುಳ್ಳ ಅರ್ಜುನ(ಪಾಂಡವ), ತನ್ನ ದಿವ್ಯ ದೃಷ್ಟಿಯಿಂದ ಭಗವಂತನಲ್ಲಿ ತುಂಬಿರುವ ಇಡೀ ವಿಶ್ವವನ್ನು ಸ್ಪಷ್ಟವಾಗಿ ಕಂಡ.]       

ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ       ।
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ       ॥೧೪॥

ತತಃ ಸಃ  ವಿಸ್ಮಯ ಆವಿಷ್ಟಃ ಹೃಷ್ಟರೋಮಾ ಧನಂಜಯಃ      ।
ಪ್ರಣಮ್ಯ ಶಿರಸಾ ದೇವಮ್  ಕೃತಾಂಜಲಿಃ ಅಭಾಷತ –ಬಳಿಕ ಬೆರಗಲ್ಲಿ ಮುಳುಗಿ ಮೈನವಿರೆದ್ದ ಅರ್ಜುನ ಭಗವಂತನಿಗೆ ತಲೆಬಾಗಿ ಕೈಜೋಡಿಸಿ ನುಡಿದ.

ಭಗವಂತನ ಈ ಅದ್ಭುತ ರೂಪವನ್ನು ಕಂಡ ಅರ್ಜುನ, ಆನಂದ ಆಶ್ಚರ್ಯ ದಿಗ್ಭ್ರಮೆಯಿಂದ ರೋಮಾಂಚನಗೊಂಡು ನಿಂತ. ಭಗವಂತನ ಅಪೂರ್ವವಾದ  ಇಂತಹ ಅದ್ಭುತ ದರ್ಶನ ಸಂಪತ್ತನ್ನು(ಧನ) ಪಡೆದ ಆತ(ಧನಂಜಯಃ), ಭಕ್ತಿ ಪೂರ್ವಕವಾಗಿ ಉದ್ದಂಡ ನಮಸ್ಕಾರ ಮಾಡಿ, ತನ್ನೆರಡು ಕೈಯನ್ನು ಜೋಡಿಸಿ (ಕೈಮುಗಿದು) ನಿಂತು, ಭಗವಂತನನ್ನು ಸ್ತೋತ್ರ ಮಾಡಲಾರಂಭಿಸಿದ.      

No comments:

Post a Comment