Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Monday, October 3, 2011

Bhagavad Gita Kannada Chapter-11 Shloka 32-35


ಭಗವಾನುವಾಚ
ಕಾಲೋSಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ
ಋತೇSಪಿ  ತ್ವಾಂ ನ ಭವಿಷ್ಯಂತಿ ಸರ್ವೇ ಯೇSವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ೩೨

ಭಗವಾನುವಾಚ-ಭಗವಂತ ಹೇಳಿದನು:
ಕಾಲಃ ಅಸ್ಮಿ ಲೋಕಕ್ಷಯಕೃತ್ ಪ್ರವೃದ್ಧಃ ಲೋಕಾನ್ ಸಮಾಹರ್ತುಮ್ ಇಹ ಪ್ರವೃತ್ತಃ
ಋತೇಪಿ  ತ್ವಾಮ್  ನ ಭವಿಷ್ಯಂತಿ ಸರ್ವೇ ಯೇ ವಸ್ಥಿತಾಃ ಪ್ರತಿ ಅನೀಕೇಷು ಯೋಧಾಃ –ಲೋಕಗಳನ್ನು ಕಬಳಿಸಲು ಬೆಳೆದು ನಿಂತಿರುವ ಕಾಲ ಪುರುಷ ನಾನು. ಈಗಿಲ್ಲಿ, ಲೋಕಗಳನ್ನು ಮುಗಿಸಿಬಿಡಲೆಂದು ಹೊರಟವನು. ನೀನಿರದಿದ್ದರೂ [ನಿನ್ನನ್ನು, ನಿನ್ನ ಸೋದರರನ್ನು ಮತ್ತೆ ಕೆಲವರನ್ನು ಬಿಟ್ಟು] ಎರಡೂ ಕಡೆಯ ಪಡೆಗಳಲ್ಲಿ ನಿಂತ ಯಾವ ಕಾದಾಳುಗಳೂ ಉಳಿಯುವುದಿಲ್ಲ.

ಕೃಷ್ಣ ಹೇಳುತ್ತಾನೆ “ನಾನು ಕಾಲಪುರುಷನಾಗಿ ನಿಂತಿದ್ದೇನೆ” ಎಂದು. ‘ಕಲ’ ಧಾತುವಿನಿಂದ ಬಂದಿರುವ ‘ಕಾಲ’ ಅನ್ನುವ ಪದ ಅನೇಕ ಅರ್ಥವನ್ನು ಕೊಡುತ್ತದೆ. ಸರ್ವಸಂಹಾರಕ, ಸರ್ವಗುಣಪೂರ್ಣ, ಸರ್ವಜ್ಞ ಇತ್ಯಾದಿ. ಇಲ್ಲಿ ವಿಶೇಷವಾಗಿ ಕೃಷ್ಣ ಸಂಹಾರ ಶಕ್ತಿಯಾಗಿ ನಿಂತಿದ್ದಾನೆ. ನಾನು ನಿನಗೆ ಸಾರಥಿಯಾಗಿ ನಿಂತು ಭೂಮಿಗೆ ಭಾರವಾಗಿರುವ ಇವರನ್ನು ಮುಗಿಸಲೆಂದೇ ನಿಂತಿರುವುದು ಎನ್ನುತ್ತಾನೆ ಕೃಷ್ಣ. ಮಹಾಭಾರತ ಯುದ್ಧವನ್ನು ನೋಡಿದರೆ ಅದು ಒಂದು ಮಹಾಯುದ್ಧ. ಅಲ್ಲಿ ಸುಮಾರು ಐವತ್ತು ಲಕ್ಷ ಮಂದಿ ಸತ್ತಿದ್ದಾರೆ. ಅಂದಿನ ದೇಶದ ಜನಸಂಖ್ಯೆಯನ್ನು ನೋಡಿದರೆ ಅದು ಒಟ್ಟು ಜನಸಂಖ್ಯೆಯ ಸುಮಾರು ಹತ್ತನೇ ಒಂದು ಭಾಗ. ಭಾಗವತದಲ್ಲಿ ಹೇಳುವಂತೆ- ಕಾಲಪುರುಷನಾಗಿ ನಿಂತು ಕೃಷ್ಣ ಯಾವುದೇ ಆಯುಧ ಹಿಡಿಯದೆ ಎಲ್ಲರ ಆಯಸ್ಸನ್ನು ತನ್ನ ಕಣ್ಣಿನಿಂದ ಹೀರಿದ. ಅದಕ್ಕಾಗಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ- “ನೀನಿಲ್ಲದಿದ್ದರೂ ಇವರೆಲ್ಲರೂ(ಎರಡೂ ಕಡೆಯವರು) ಸಾಯುತ್ತಾರೆ. ಅವರ ಸಾವು ತೀರ್ಮಾನವಾಗಿ ಬಿಟ್ಟಿದೆ” ಎಂದು.          

ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್
ಮಯೈವೈತೇ ನಿಹತಾಃ ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್ ೩೩

ತಸ್ಮಾತ್ ತ್ವಮ್ ಉತ್ತಿಷ್ಠ ಯಶಃ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಮ್  ಸಮೃದ್ಧಮ್
ಯಾ ಏವ ಏತೇ ನಿಹತಾಃ ಪೂರ್ವಮ್ ಏವ ನಿಮಿತ್ತ ಮಾತ್ರಮ್  ಭವ ಸವ್ಯಸಾಚಿನ್ –ಆದ್ದರಿಂದ ನೀನೆದ್ದು ನಿಲ್ಲು.ಹಗೆಗಳನ್ನು ಗೆದ್ದು ಹೆಸರು ಗಳಿಸು. ಅರಸೊತ್ತಿಗೆಯ ತುಂಬು ಸಿರಿಯನುಣ್ಣು. ನಾನೆ ಇವರನ್ನು ಈ ಮೊದಲೆ ಕೊಂದಾಗಿದೆ. ಓ ಸವ್ಯಸಾಚಿ(ಎಡದಿಂದಲೂ ಬಾಣ ಪ್ರಯೋಗಿಸಬಲ್ಲ ನಿಪುಣ ಯೋಧ) , ನೀನು ಬರಿಯ ನೆಪಮಾತ್ರನಾಗು

ಅರ್ಜುನನನ್ನು ಕೃಷ್ಣ ಹುರಿದುಂಬಿಸುತ್ತಿದ್ದಾನೆ. ಎದ್ದೇಳು, ಯುದ್ಧಕ್ಕೆ ಸಿದ್ಧನಾಗು. ಈ ಯುದ್ಧದಲ್ಲಿ ನೀನು ಗೆಲ್ಲುತ್ತೀಯ. ಈ ಶತ್ರುಗಳನ್ನು ಸಂಹಾರ ಮಾಡು. ಏಕೆಂದರೆ ನಾನು ಇವರನ್ನು ಈಗಾಗಲೇ ಕೊಂದಾಗಿದೆ. ಇಲ್ಲಿ ನೀನು ಕೇವಲ ನಿಮಿತ್ತ ಮಾತ್ರ. ನಿನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿರ್ವಹಿಸಿ, ನಿನ್ನ ಪಾಲಿನ ಸುಖ ಪ್ರರಾಬ್ಧವನ್ನು ಅನುಭವಿಸು.       

ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾSನ್ಯಾನಪಿ ಯೋಧವೀರಾನ್
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುದ್ಧ್ಯಸ್ವ ಜೇತಾಸಿ ರಣೇ ಸಪತ್ನಾನ್   ೩೪

ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾ ನ್ಯಾನ್ ಅಪಿ ಯೋಧ ವೀರಾನ್
ಮಯಾ ಹತಾನ್ ತ್ವಮ್   ಜಹಿ ಮಾ ವ್ಯಥಿಷ್ಠಾಃ  ಯುದ್ಧ್ಯಸ್ವ  ಜೇತಾಸಿ ರಣೇ ಸಪತ್ನಾನ್ – ನಾನೆ ಕೊಂದ ಇವರನ್ನು ನೀನು ಮುಗಿಸಿಬಿಡು: ದ್ರೋಣನನ್ನು, ಭೀಷ್ಮನನ್ನು, ಜಯದ್ರಥನನ್ನು ಮತ್ತು ಕರ್ಣನನ್ನು; ಹಾಗೆಯೆ ಬೇರೆ ವೀರ ಹೊರಾಳುಗಳನ್ನು ಕೂಡ. ಕಂಗೆಡಬೇಡ, ಹೋರಾಡು. ಕಾಳಗದಲ್ಲಿ ಹಗೆಗಳನ್ನು ಗೆಲ್ಲಲಿರುವೆ.

ಇಲ್ಲಿ ನೆರೆದಿರುವ ದ್ರೋಣ, ಭೀಷ್ಮ, ಜಯದ್ರಥ, ಕರ್ಣ, ಇವರೆಲ್ಲರ ಆಯಸ್ಸನ್ನು ನಾನು ಹೀರಿದ್ದೇನೆ. ಆದ್ದರಿಂದ ನೀನು ಅದಕ್ಕಾಗಿ ದುಃಖಪಡುವ ಅಗತ್ಯವಿಲ್ಲ. ಈ ಜೀವನ ತರಂಗ ಅನಿವಾರ್ಯ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಎದ್ದು ಹೋರಾಡು. ನೀನು ಈ ಧರ್ಮ ಯುದ್ಧದಲ್ಲಿ ಗೆಲ್ಲುವೆ. ನನ್ನ ರಕ್ಷೆಯ ಪೂರ್ಣ ಪ್ರಸಾದ ನಿನ್ನೊಂದಿಗಿದೆ-ಎಂದು ಕೃಷ್ಣ ಆಶೀರ್ವದಿಸುತ್ತಾನೆ.

ಮೊದಲು “ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ” ಎಂದು ಅಹಂಕಾರದಿಂದ ಮಾತನಾಡಿದ್ದ ಅರ್ಜುನ, ನಂತರ  ತನ್ನ ಮುಂದೆ ನಿಂತಿರುವ ಹಿರಿಯರನ್ನು ಕಂಡು ಕುಗ್ಗಿ ಯುದ್ಧ ಬೇಡ ಎಂದು ನಿಂತು ಬಿಟ್ಟಿದ್ದ. ಈ ಎರಡೂ ಸ್ಥಿತಿ ಯಾವುದೇ ವಸ್ತುಸ್ಥಿತಿ ಇಲ್ಲದ ನಿರ್ಧಾರವಾಗಿತ್ತು. ಈ ಕಾರಣಕ್ಕಾಗಿ ಕೃಷ್ಣ ಈ ಹತ್ತು ಅಧ್ಯಾಯಗಳಲ್ಲಿ ಅರ್ಜುನನಿಗೆ ಉಪದೇಶ ಮಾಡಿ, ಯುದ್ಧ ಎನ್ನುವುದು ಧರ್ಮ ಎನ್ನುವುದನ್ನು ಮನವರಿಕೆ ಮಾಡಿ ಕೊಟ್ಟ. ಈಗ ತನ್ನ ವಿಶ್ವರೂಪ ದರ್ಶನ ಕೊಟ್ಟು-“ನೀನು ಕೇವಲ ನಿಮಿತ್ತ ಮಾತ್ರ” ಎಂದು ಹೇಳಿದ. ಕೃಷ್ಣನ ಆ ಭಯಂಕರ ರೂಪ, ಮತ್ತು ಆತನ ಮಾತನ್ನು ಕೇಳಿ ಅರ್ಜುನ ಏನು ಮಾಡಿದ ಎನ್ನುವುದನ್ನು ಸಂಜಯ ಮುಂದಿನ ಶ್ಲೋಕದಲ್ಲಿ  ವರ್ಣಿಸುತ್ತಾನೆ:       

ಸಂಜಯ ಉವಾಚ
ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ
ನಮಸ್ಕೃತ್ವಾ ಭೂಯ ಏವಾSಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ೩೫

ಸಂಜಯ ಉವಾಚ- ಸಂಜಯ ಹೇಳಿದನು:
ಏತತ್ ಶ್ರುತ್ವಾ ವಚನಮ್  ಕೇಶವಸ್ಯ ಕೃತಾಂಜಲಿ ವೇಪಮಾನಃ ಕಿರೀಟೀ
ನಮಸ್ಕೃತ್ವಾ ಭೂಯಃ  ಏವ ಹ ಕೃಷ್ಣಮ್  ಸ ಗದ್ಗದಮ್  ಭೀತ ಭೀತಃ ಪ್ರಣಮ್ಯ—ಕೃಷ್ಣನ ಈ ಮಾತನ್ನಾಲಿಸಿದ ಅರ್ಜುನ ಕೈಮುಗಿದು ನಡುಗುತ್ತ ಪೊಡಮಟ್ಟು, ಗದ್ಗದಿಸುತ್ತ, ಅಳುಕುತ್ತ, ಮತ್ತೊಮ್ಮೆ ಮಣಿದು ಮತ್ತೆ ಕೃಷ್ಣನ ಮುಂದೆ ನುಡಿದನು.

ಕೃಷ್ಣನ ಮಾತನ್ನು ಕೇಳಿದ ಅರ್ಜುನ ಭಕ್ತಿಯಿಂದ ಭಗವಂತನಿಗೆ ಕೈ ಮುಗಿದ. ಈ ಸ್ಥಿತಿಯಲ್ಲಿ ಆತ ತತ್ತರಿಸಿ ನಡುಗುತ್ತಿದ್ದಾನೆ. ತನ್ನ ಸರ್ವಾಂಗದಿಂದ ಭಗವಂತನಿಗೆ ನಮಸ್ಕರಿಸಿ, ಗದ್ಗಿತನಾಗಿ ಮಾತನಾಡಿದ.

ಇಲ್ಲಿ ಸಂಜಯ ಭಗವಂತನನ್ನು ‘ಕೇಶವ’ ಮತ್ತು ‘ಕೃಷ್ಣ’ ಎಂದು ಸಂಬೋಧಿಸಿದ್ದಾನೆ. ಕೇಶವ ಎಂದರೆ ಜಗತ್ತಿನ ಸೃಷ್ಟಿ ಮತ್ತು ಸಂಹಾರದ ಮೂಲದಲ್ಲಿರುವ ಶಕ್ತಿಗಳಾದ ಬ್ರಹ್ಮ-ರುದ್ರರನ್ನು ಸೃಷ್ಟಿ-ಸಂಹಾರದಲ್ಲಿ ತೊಡಗಿಸಿ ನಿಯಂತ್ರಿಸುವವ. ಸಮಸ್ತ ಜೀವಜಾತದೊಳಗಿದ್ದು, ಅವರನ್ನು ನಿಯಂತ್ರಿಸುವ ಸರ್ವಾಂತರ್ಯಾಮಿ ಭಗವಂತ ಕೇಶವ. ಇನ್ನು ‘ಕೃಷ್ಣ’ ಎನ್ನುವುದು ಭಗವಂತನ ಮೂಲ ನಾಮ ಕೂಡ ಹೌದು. ನಮ್ಮ ಅಹಂಕಾರವನ್ನು, ಅಜ್ಞಾನವನ್ನು ಕರ್ಷಣೆ ಮಾಡುವ, ಇಡೀ ಲೋಕವನ್ನು ಆಕರ್ಷಣೆ ಮಾಡುವ ಭಗವಂತ, ಸಂಸಾರದಿಂದ ನಮ್ಮನ್ನು ಕರ್ಷಣೆ ಮಾಡುವ ‘ಕೃಷ್ಣ’.        

No comments:

Post a Comment