Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Tuesday, June 14, 2011

Bhagavad Gita Kannada Chapter-07 Shloka-09

ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ ।
ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು ॥೯॥


ಪುಣ್ಯಃ ಗಂಧಃ ಪೃಥಿವ್ಯಾಮ್  ಚ ತೇಜಃ ಚ ಅಸ್ಮಿ  ವಿಭಾವಸೌ ।
ಜೀವನಮ್  ಸರ್ವ ಭೂತೇಷು ತಪಃ ಚ ಅಸ್ಮಿ  ತಪಸ್ವಿಷು ಮಣ್ಣಿನಲ್ಲಿ ನರುಗಂಪೂ ನನ್ನಿಂದ. [ಪವಿತ್ರನಾಗಿ ಮಣ್ಣಿನಲ್ಲಿದ್ದು ಗಂಧದ ಅರಿವು ನೀಡುವುದರಿಂದ ಪುಣ್ಯಮತ್ತು ಗಂಧನಾಮಕ]. ಬೆಂಕಿಯಲ್ಲಿ ಸುಡುವ ಶಕ್ತಿಯೂ ನನ್ನಿಂದ.[ಬೆಂಕಿಯಲ್ಲಿದ್ದು ಸುಡುವವನಾದ್ದರಿಂದ ತೇಜಸ್ನಾಮಕ]. ಎಲ್ಲ ಜೀವಿಗಳಲ್ಲಿ ಬದುಕು ನನ್ನಿಂದ. [ಎಲ್ಲ ಜೀವಿಗಳಲ್ಲಿದ್ದು ಬದುಕಿಸುವುದರಿಂದ ಜೀವನನಾಮಕ]. ತಾಪಸರಲ್ಲಿ ತಪಃಶಕ್ತಿ ನನ್ನಿಂದ. [ತಾಪಸರಲ್ಲಿದ್ದು ತಪದ ಶಕ್ತಿ ನೀಡುವುದರಿಂದ ತಪಸ್ನಾಮಕ].

ಕೃಷ್ಣ ಹೇಳುತ್ತಾನೆ ಪುಣ್ಯೋ ಗಂಧಃ ಪೃಥಿವ್ಯಾಂ”- ನೆಲದಲ್ಲಿ ಸುಗಂಧ ನನ್ನಿಂದ ಎಂದು.  ಯಾವ ಗಂಧ ನಮ್ಮ ಮೂಗಿಗೆ ಅಹ್ಲಾದವನ್ನು ಕೊಡುತ್ತದೋ ಅದು ಪುಣ್ಯ ಗಂಧ’. ಇಲ್ಲಿ ಪುಣ್ಯ ಎಂದರೆ ಪವಿತ್ರ ಅಥವಾ ಸುಂದರ ಎನ್ನುವ ಅರ್ಥವನ್ನು ಕೊಡುತ್ತದೆ. ಈ ಭೂಮಿಯಲ್ಲಿ, ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ವಸ್ತುವಿಗೆ ಸುಗಂಧ ಕೊಟ್ಟವನು ಪುಣ್ಯನಾಮಕ ಭಗವಂತ. ಆತ ತನ್ನ ವಿಶೇಷ ರೂಪದಲ್ಲಿ ಗಂಧನಾಮಕನಾಗಿ ಆ ವಸ್ತುವಿನಲ್ಲಿ ಸೇರಿಕೊಂಡಿರುವುದರಿಂದ ವಸ್ತುವಿಗೆ ಒಂದು ವಿಶೇಷ  ಗುಣ ಬಂತು. ಈ ಭೂಮಿಯಲ್ಲಿ ಹುಟ್ಟುವ ಗಿಡಬಳ್ಳಿಗಳು , ವನಸ್ಪತಿಗಳು, ಅನಂತ ಬಗೆಯ ಹೂಗಳು, ಹಣ್ಣುಗಳು, ಎಲ್ಲವುದರಲ್ಲೂ ಆ ವಿವಿಧತೆ-ಕಂಪು ಆ ಭಗವಂತನಿಂದ. ಭೂಮಿಯ ಅಭಿಮಾನಿ ದೇವತೆ(ಪ್ರಥ್ವೀ ದೇವತೆ)ಯೊಳಗಿದ್ದು, ಪ್ರಥ್ವಿಯಲ್ಲಿ ಗಂಧ ಶಬ್ದ ವಾಚ್ಯನಾಗಿ ಗಂಧದಲ್ಲಿ ನೆಲೆಸಿದ್ದಾನೆ ಭಗವಂತ.  ನೆಲ ಎಲ್ಲವುದಕ್ಕೂ ನೆಲೆ, ಭಗವಂತ ನೆಲದಲ್ಲಿ ನೆಲೆ ನಿಂತುದರಿಂದ ನೆಲದಲ್ಲಿ ಮೂಡಿಬರುವ ಪ್ರತಿಯೊಂದು ವಸ್ತುವೂ ಕೂಡಾ ಒಂದೊಂದು ಬಗೆಯ ವಿಶಿಷ್ಟ ಸುಗಂಧವನ್ನು ಹೊತ್ತು ತರುತ್ತದೆ. ಹೀಗೆ ಭಗವಂತ ತನ್ನ ಸೃಷ್ಟಿಯಲ್ಲಿ ಸೌಂದರ್ಯಭರಿತ ವಿಶಿಷ್ಟ ಗಂಧದ ಪ್ರಪಂಚವನ್ನೇ ನಮ್ಮ ಮೂಗಿನ ಮುಂದೆ ತೆರೆದಿಟ್ಟ.
ಹಿಮಾಲಯದ ಹೂಗಳ ಕಣಿವೆಯಲ್ಲಿ(Valley of Flower) ಅನಂತ ಪ್ರಕಾರದ ಹೂವಿನ ಪ್ರಪಂಚವಿದೆ. ಒಂದು ಹೂವಿನ ಪರಿಮಳ ಇನ್ನೊಂದಕ್ಕಿಂತ ಭಿನ್ನ. ಎಲ್ಲಾ ಗಿಡಗಳೂ ಕೂಡಾ ಒಂದೇ ಮಣ್ಣಿನಿಂದ ಬೆಳೆಯುವುದಾದರೂ ಕೂಡಾ, ಭಗವಂತ ಒಂದೊಂದು ಗಿಡದಲ್ಲಿ ಒಂದೊಂದು ವಿಶಿಷ್ಟಗುಣವನ್ನು(exclusive quality) ತುಂಬಿದ. ಕೆಲವು ಹೂವಿನಲ್ಲಿ ನಾವು ಗುರುತಿಸಲು ಸಾಧ್ಯವಾಗುವ ಸುವಾಸನೆ ಇರುವುದಿಲ್ಲ. ಸಾಮಾನ್ಯವಾಗಿ ಇಂತಹ ಹೂವನ್ನು  ದೇವರಿಗೆ ಅರ್ಪಿಸುವುದಿಲ್ಲ. ಇದಕ್ಕೆ ಕಾರಣ ದೇವರ ಪೂಜೆಯ ಪ್ರತಿಯೊಂದು ಕ್ರಿಯೆಯೂ ಕೂಡಾ ಆನಂದಮಯವಾಗಿರಬೇಕು ಎನ್ನುವ ಅನುಸಂಧಾನ. ಪೂಜೆ ಮಾಡುವಾಗ ಆ ಹೂವಿನ ಅಹ್ಲಾದಕರ ಕಂಪು ಮೂಗಿಗೆ ಬಡಿದಾಗ ನಮಗೆ ಪುಣ್ಯಅಥವಾ ಗಂಧನಾಮಕ ಭಗವಂತನ ಅರಿವು ಮೂಡಬೇಕು.
ನೀರು, ಸೂರ್ಯ, ಚಂದ್ರ, ಆಕಾಶ ಹಾಗು ಭೂಮಿಯ ಬಗ್ಗೆ ಹೇಳಿದ ಭಗವಂತ ಮುಂದುವರಿದು  ಭೂಮಿಯಲ್ಲಿ ಭಗವಂತನ ಆರಾಧನೆಗೆ ಮುಖ್ಯ ಪ್ರತಿಷ್ಠಾನವಾದ ಅಗ್ನಿ(ವಿಭಾವಸು)ಯಲ್ಲಿ ತನ್ನ ವಿಭೂತಿ ವಿಜ್ಞಾನವನ್ನು ವಿವರಿಸುತ್ತಾನೆ.  ವಿಭಾವಸು ಭೂಮಿಯಲ್ಲಿ ಅಗ್ನಿಯ ಅಭಿಮಾನಿ ದೇವತೆ. ಈತ ಅಷ್ಟವಸುಗಳಲ್ಲಿ[ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ(ವಿಭಾವಸು), ದೋಷ, ವಸ್ತು, ದ್ಯುವಸು] ಐದನೆಯವ. ಈತನಿಗೆ ಅನೇಕ ನಾಮಗಳು: ವೈಶ್ವಾನರ, ವಹ್ನಿ, ಜಾತವೇದ, ಹುತಾಶನ, ಪಾವಕ, ಅನಲ, ದಹನ ಇತ್ಯಾದಿ. ನಮಗೆ ಭೂಮಿಯಲ್ಲಿ ಅಗ್ನಿ ಎನ್ನುವುದು ಬಹಳ ಮುಖ್ಯವಾದ ಭಗವಂತನ ಪ್ರತೀಕ. ವೇದ ಪ್ರಾರಂಭವಾಗುವುದೂ ಕೂಡಾ ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂಎಂದು ಅಗ್ನಿ ನಾಮದಿಂದ. ನೆಲದಲ್ಲಿ ಭಗವಂತನನ್ನು ಪೂಜಿಸಲು ಅಗ್ನಿಗಿಂತ ಉತ್ತಮ ಪ್ರತೀಕ ಇನ್ನೊಂದಿಲ್ಲ. ಅಗ್ನಿ ಬೆಳಕಿನ ರೂಪ, ಅಗ್ನಿ ಪವಿತ್ರ. ಕೊಟ್ಟಿದ್ದನ್ನು ಸ್ವೀಕರಿಸುವ ಭಗವಂತನ ಏಕೈಕ ಪ್ರತೀಕ ಅಗ್ನಿ. ಇಲ್ಲಿ ಕೃಷ್ಣ ಹೇಳುತ್ತಾನೆ ತೇಜಶ್ಚಾಸ್ಮಿ ವಿಭಾವಸೌಎಂದು. ಅಂದರೆ ಇಂತಹ ಅಗ್ನಿದೇವತೆಯೊಳಗೆ ದಾಹಕ, ಪಾಚಕ, ಪ್ರಕಾಶಕ ಶಕ್ತಿಯಾಗಿ, ತೇಜಸ್ಸಾಗಿ-ನಾನಿದ್ದೇನೆಎಂದು.
ಹೊರ ಪ್ರಪಂಚದಲ್ಲಿ ಉರಿಯುವ ಬೆಂಕಿಯಲ್ಲಿ ಭಗವಂತನಿದ್ದರೆ ನಮ್ಮ ನಾಲಿಗೆಯಲ್ಲಿ ಕುಳಿತ ಅಗ್ನಿ ನಾಮಕ ಭಗವಂತ(ಅಗ್ನಿನಾರಾಯಣ) ನಮಗೆ ಮಾತು ಎನ್ನುವ ಬೆಳಕನ್ನು ಕೊಟ್ಟು ನಮ್ಮೊಳಗೆ ವಾಙ್ಮಯನಾಗಿರುವ ದೊಡ್ಡ ಬೆಳಕು. ಹಾಗೇ ವೈಶ್ವಾನರನಾಗಿ ನಮ್ಮ ಪಚನ ಕ್ರಿಯೆಯನ್ನು ನಿಯಂತ್ರಿಸುವವನೂ ಆತನೇ. [ಈ ಬಗ್ಗೆ ಮುಂದೆ ವಿಶೇಷವಾಗಿ ಭಗವಂತನ ವಿಭೂತಿಯ ಬಗ್ಗೆ ಹೇಳುವ  ಅಧ್ಯಾಯದಲ್ಲಿ ಹೆಚ್ಚಿನ ವಿವರವನ್ನು ಕಾಣಬಹುದು].
ಮುಂದುವರಿದು ಕೃಷ್ಣ ಹೇಳುತ್ತಾನೆ ವಾಯುವಿನಲ್ಲಿ ತುಂಬಿ ಪ್ರತಿಯೊಂದು ಜೀವಜಾತದ ಉಸಿರಾಗಿ, ಜೀವಕ್ಕೆ ಉಸಿರಿನ ಶಕ್ತಿ ಕೊಟ್ಟು ನಾನು ನಿಂತಿದ್ದೇನೆಎಂದು. ಜೀವನಪ್ರದ ಅಭಿಮಾನಿ ದೇವತೆ ಪ್ರಾಣದೇವರು”. ನಾವು ಇತರ ಇಂದ್ರಿಯ ಕೆಲಸ ಮಾಡದೇ ಇದ್ದರೆ ಬದುಕಬಹುದು. ಆದರೆ ಪ್ರಾಣಶಕ್ತಿ(ಉಸಿರಾಟ) ಕೆಲಸ ಮಾಡದೇ ಇದ್ದರೆ ಬದುಕಲು ಸಾಧ್ಯವಿಲ್ಲ. ನಿದ್ದೆಯಲ್ಲಿ ನಮ್ಮ ಇತರ ತತ್ವಾಭಿಮಾನಿ ದೇವತೆಗಳು ನಿದ್ರಿಸಬಹುದು ಆದರೆ ಪ್ರಾಣದೇವರು ನಿದ್ರಿಸಿದರೆ ನಾವು ಪುನಃ ಎಚ್ಚರವಾಗಲು ಸಾಧ್ಯವಿಲ್ಲ!   ಭಗವಂತ ಅಹೋರಾತ್ರಿ  ಜೀವನಪ್ರದನಾದ ಪ್ರಾಣಶಕ್ತಿ ಒಳಗೆ  ಪ್ರಾಣನಾಗಿ ನಿಂತು ನಮ್ಮನ್ನು ಬದುಕಿಸುತ್ತಾನೆ.
ಪಂಚಭೂತಗಳ ಬಗ್ಗೆ ವಿವರಿಸಿದ ಕೃಷ್ಣ ಮುಂದೆ ಮಾನಸ ಪ್ರಪಂಚದ ಬಗ್ಗೆ ವಿವರಿಸುತ್ತಾನೆ. ಮನೋಮಯ ಪ್ರಪಂಚದಲ್ಲಿ ಬದುಕುವವರು ತಪಸ್ವಿಗಳು(ತಪ-ಆಲೋಚನೆ –Great thinkers).ಮನಸ್ಸಿನ ಆಳವಾದ ಚಿಂತನೆಗೆ ತಪಸ್ಸು ಎನ್ನುತ್ತಾರೆ. ಇದರ ಅಭಿಮಾನಿ ಶಿವ. ನಾವು ಮಾತನಾಡುವುದು ನಮ್ಮ ಮನಸ್ಸಿಗೆ ಹೊಳೆಯುವ ವಿಚಾರಗಳನ್ನು. ನಮ್ಮ ಮನಸ್ಸಿಗೆ ಅಂತಹ ಅದ್ಭುತ ಆಲೋಚನಾಶಕ್ತಿ ಕೊಟ್ಟು ಮನೋಮಯಕೊಶದಲ್ಲಿ ನಿಂತು ನಮಗೆ ಆನಂದದ ಅನುಭವವನ್ನು ಕೊಡುವವ ಆ ಭಗವಂತ. ಹೀಗೆ ಪಂಚಭೂತಗಳಲ್ಲಿ; ಅನ್ನಮಯಕೋಶದಿಂದ ಹಿಡಿದು ಆನಂದಮಯಕೋಶದ ತನಕ ಹೇಗೆ ಭಗವಂತ ವಿಭೂತಿರೂಪದಲ್ಲಿ ನಿಂತಿದ್ದಾನೆ ಎನ್ನುವ ಅದ್ಭುತ  ಅಧ್ಯಾತ್ಮ ವಿಜ್ಞಾನ(divine science)ವನ್ನು ಈ ಎರಡು  ಶ್ಲೋಕ(೮ ಮತ್ತು ೯)ದಲ್ಲಿ ಕೃಷ್ಣ  ವಿವರಿಸಿದ.
ಕೃಷ್ಣ ಪಿಂಡಾಂಡ-ಬ್ರಹ್ಮಾಂಡದಲ್ಲಿ ನಿಂತು ಹೇಗೆ ವಿಭೂತಿಯಾಗಿ ಬೇರೆ ಬೇರೆ ವಸ್ತುವಿನಲ್ಲಿ ವಿಶಿಷ್ಟ ಶಕ್ತಿಯನ್ನು ತುಂಬುತ್ತಾನೆ ಎನ್ನುವ ಮಾತಿನ ಸಂಕ್ಷಿಪ್ತ ಉಪಾಸನೆಯನ್ನು ನೋಡಿದೆವು. ಈ ವಿಭೂತಿಯ ವಿಸ್ತಾರ ಮುಂದಿನ ಅಧ್ಯಾಯದಲ್ಲಿ ಪುನಃ ಬರುತ್ತದೆ. ಇಲ್ಲಿ ಕೃಷ್ಣ ಅದನ್ನು ಕ್ರೂಡೀಕರಣ ಮಾಡಿ ಸಮಷ್ಟಿಯಾಗಿ ವಿಭೂತಿಯ ಅನುಸಂಧಾನ ಹೇಗಿರಬೇಕು ಎಂದು ವಿವರಿಸಿದ್ದಾನೆ.

3 comments:

 1. ಭಗವದ್ಗೀತೆಯಲ್ಲಿನ ಉತ್ತಮ ವಿಚಾರಗಳನ್ನು ಸರಳವಾಗಿ, ಮನಮುಟ್ಟುವ೦ತೆ ತಿಳಿಸುತ್ತಿರುವುದಕ್ಕಾಗಿ ಧನ್ಯವಾದಗಳು. ನಿಮ್ಮ ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು.. ನನ್ನ ಬ್ಲಾಗ್ ಗೆ ಭೇಟಿಕೊಡಿ.

  ReplyDelete
 2. ಭಗವ೦ತನ ಅರಿವು ಮತ್ತು ಅನುಸ೦ಧಾನದ ಬಗ್ಗೆ ವಿಶ್ಲೇಷಣೆ ಮನ ಮುಟ್ಟುವ೦ತಿದೆ, ಪ್ರಕಾಶ್ ಸರ್, ಅಭಿನ೦ದನೆಗಳು.

  ಅನ೦ತ್

  ReplyDelete
 3. ಪ್ರಭಾಮಣಿ ನಾಗರಾಜ್ ಅವರಿಗೆ ಮತ್ತು ಅನಂತ್ ರಾಜ್ ಅವರಿಗೆ ನನ್ನ ಧನ್ಯವಾದಗಳು. ಪ್ರಭಾಮಣಿ ನಾಗರಾಜ್- ನಿಮ್ಮ ಬ್ಲಾಗ್ ಪ್ರತೀಕ್ಷೆ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು, ಹಲವಾರು ವಿಚಾರಗಳನ್ನು ಅಲ್ಲಿ ಬರೆಯುತ್ತಿದ್ದೀರ. (ಇನ್ನೂ ಓದಬೇಕಷ್ಟೆ)ವರ್ಚಸ್ವೀ ಜೀವನದ ಹತ್ತು ಪ್ರಾಚೀನ ತಂತ್ರಗಳನ್ನು ಓದಿ ಖುಷಿಯಾಯಿತು. ಅರ್ಥಗರ್ಭಿತ ವಿಚಾರ.
  ಶ್ರೀಯುತ ಅನಂತ್ ರಾಜ್ -ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು-ನಿಮ್ಮ ಹರಿಕಥಾಮೃತಸಾರ ಉತ್ತಮ ಆರಂಭ ಪಡೆದಿದೆ.ವಿಷಯಗಳನ್ನು ಆರಿಸಿ ಮನದಟ್ಟಾಗುವಂತೆ ಬರೆಯುತ್ತಿದ್ದೀರ-ಧನ್ಯವಾದಗಳು.

  ReplyDelete