Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, June 24, 2011

Bhagavad Geeta Kannada Chapter-07 shloka-15


ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯನ್ತೇ ನರಾಧಮಾಃ ।
ಮಾಯಯಾSಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ     ॥೧೫॥

ನ ಮಾಂ ದುಷ್ಕೃತಿನಃ ಮೂಡಾಃ ಪ್ರಪದ್ಯನ್ತೇ ನರ ಅಧಮಾಃ ।
ಮಾಯಯಾ ಅಪಹೃತ ಜ್ಞಾನಾಃ ಆಸುರಮ್  ಭಾವಮ್ ಆಶ್ರಿತಾಃ – ಕೆಡು ನಡೆಯ ತಿಳಿಗೇಡಿ ಹುಲು ಮನುಜರು, ಮೈಯ ಸುಖದಲ್ಲೆ ಮೈಮರೆತು ಮಾಯೆಯಿಂದ ತಿಳಿವು ಮಂಕಾದವರು. ಇವರು ನನಗೆ ಶರಣಾಗುವುದಿಲ್ಲ.

ಕೃಷ್ಣ ಈ ಶ್ಲೋಕದಲ್ಲಿ ದುಷ್ಕೃತಿಗಳ ಬಗ್ಗೆ ಹೇಳುತ್ತಾನೆ. ಇವರಲ್ಲಿ ಎರಡು ವಿಧ. ಯಾವುದೋ ಪ್ರಾರಬ್ಧ ಕರ್ಮಕ್ಕೊಳಗಾಗಿ-ಪರಿಸರದ ಪ್ರಭಾವದಿಂದ  ಪಾಪದ ದಾರಿಯಲ್ಲಿ ಸಾಗುವವರು(ಉದಾ: ಕರ್ಣ , ಅಜಾಮಿಳ) ಹಾಗು ಸ್ವಭಾತಃ ಪಾತಕಿಗಳು(ಉದಾ: ದುರ್ಯೋಧನ). ಕೃಷ್ಣ ಹೇಳುತ್ತಾನೆ “ನಾನೇ ನಾನು ನನಗೆ ಶರಣಾದವರನ್ನು ಮಾಯೆಯಿಂದ ಬಿಡಿಸುತ್ತೇನೆ. ಆದರೂ ಕೂಡಾ ಎಲ್ಲರೂ ನನಗೆ ಶರಣಾಗುವುದಿಲ್ಲ” ಎಂದು. ಸ್ವಭಾವತಃ ದುಷ್ಕೃತಿಗಳಾದವರು ಎಂದೂ ಭಗವಂತನನ್ನು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಅರ್ಥವಾಗುವುದಿಲ್ಲ. ಇಂತವರು ಮಾಯೆಯ ಬಲೆಯಲ್ಲಿ ಬಿದ್ದು  ಇಂದ್ರಿಯದಲ್ಲೇ  ಎಲ್ಲಾ ಸುಖವಿದೆ ಎಂದು ತಿಳಿದು ಬದುಕುತ್ತಾರೆ. ಪ್ರಭಾವದಿಂದ ಮಾಯೆಯ ಬಲೆಗೆ ಬೀಳುವ ಸಜ್ಜನರಿಗೆ ಮರಳಿ ಸರಿದಾರಿಗೆ ಬರುವ ವ್ಯವಸ್ಥೆ  ಸೃಷ್ಟಿಯಲ್ಲಿದೆ. ಜೀವ ಸ್ವಭಾವವೇ ನೀಚವಾಗಿದ್ದರೆ ಅಂತವರನ್ನು ಎಂದೂ ತಿದ್ದಲು ಸಾಧ್ಯವಿಲ್ಲ. ಅವರು ಎಂದೂ ಭಗವಂತನನ್ನು ತಿಳಿಯಲು ಪ್ರಯತ್ನಿಸುವುದಿಲ್ಲ. ಇವರು ದುಷ್ಕೃತ್ಯವೇ ತಮ್ಮ  ಕರ್ತವ್ಯ ಎಂದು ತಿಳಿದ ತಿಳಿಗೇಡಿಗಳೆನಿಸುತ್ತಾರೆ. ಇಂಥವರನ್ನು ಇಲ್ಲಿ ಕೃಷ್ಣ ‘ನರಾಧಮಃ’ ಎಂದು ಸಂಬೋಧಿಸಿದ್ದಾನೆ. ಇವರನ್ನು ಸದಾ ಮಾಯೆ ಆವರಿಸಿರುತ್ತದೆ. ಅವರಿಗೆ ತಮಗೆ ಬುದ್ಧಿ ಇಲ್ಲ ಎಂದೂ ತಿಳಿದಿರುವುದಿಲ್ಲ! ಅವರು ಎಂದೂ ಭಗವಂತನಲ್ಲಿ ಶರಣಾಗುವುದಿಲ್ಲ ಮತ್ತು ಭಗವಂತನನ್ನು ಸೇರುವುದಿಲ್ಲ.
 ಪ್ರಭಾವದಿಂದ ದುಷ್ಕೃತ್ಯಕ್ಕಿಳಿದವರ ಬುದ್ಧಿಯನ್ನು ಮಾಯೆ ಆವರಿಸಿರುತ್ತದೆ. ಕಾಲ ಪಕ್ವವಾದಾಗ ಅವರು ಪರಿಸರ ಪ್ರಭಾವದಿಂದ ಕಳಚಿಕೊಂಡು ಮರಳಿ ಭಗವಂತನಿಗೆ ಶರಣಾಗುತ್ತಾರೆ. ಇದಕ್ಕೆ ಉತ್ತಮ ದೃಷ್ಟಾಂತ ಅಜಾಮಿಳನ ಜೀವನ ಕಥನ.
ಭಗವಂತ ಅವರವರ ಸ್ವಭಾವಕ್ಕೆ ತಕ್ಕಂತೆ ಅವರವರ ವ್ಯಕ್ತಿತ್ವ ವಿಕಾಸಗೊಳಿಸುತ್ತಾನೆ. ಜೀವ ಸ್ವಭಾವವನ್ನು ಆತ ಎಂದೂ ಬದಲಿಸುವುದಿಲ್ಲ. ಪಾಪಿಗಳಾದವರಿಗೆ ಪಾಪದ ಫಲ, ಪುಣ್ಯವಂತರಿಗೆ ಪುಣ್ಯದ ಫಲ. ಈ ವ್ಯವಸ್ಥೆ ಎಂದೂ ಬದಲಾಗುವುದಿಲ್ಲ. ಈ ಕಾರಣದಿಂದ ಪ್ರಪಂಚದಲ್ಲಿ ನಾವು ಎಲ್ಲಾ ವಿಧದ ಜನರನ್ನು ಕಾಣುತ್ತೇವೆ. ಸಾಮಾನ್ಯವಾಗಿ ಪ್ರಪಂಚದಲ್ಲಿ ಭಗವದ್ಭಕ್ತರು ಮತ್ತು ಜ್ಞಾನಿಗಳು ಅಲ್ಪಸಂಖ್ಯಾತರು. ಯಾವ ಕಾಲದಲ್ಲೂ ಕೂಡಾ ಇವರು ಬಹು ಸಂಖ್ಯೆಯಲ್ಲಿ ಇರುವುದಿಲ್ಲ.

ಹರಿಕಥಾಮೃತಸಾರದಲ್ಲಿ ದಾಸರು ಸತ್ವರು, ತಾಮಸರು ಮತ್ತು ರಾಜಸರ ಬಗ್ಗೆ ಈ ರೀತಿ ಸೊಗಸಾಗಿ ಹಾಡಿದ್ದಾರೆ:
ಸತ್ವಸತ್ವರು ಸತ್ವರಾಜಸ ಸತ್ವತಾಮಸ ಮೂವರೂ-
ರಜ ಸತ್ವಾಧಿಕಾರಿಗಳು ಭಗವದ್ಭಕ್ತರೆನಿಸುವರು |
ನಿತ್ಯಬದ್ಧರು ರಜೋರಜರುತ್ಪತ್ತಿ ಭೂಸ್ವರ್ಗದೊಳು-
ನರಕದಿ ಪ್ರಥ್ವಿಯೊಳು ಸಂಚರಿಸುತಿಪ್ಪರು ರಾಜಸ್ತಾಮಸರು||

ತಮಸ್ಸಾತ್ವಿಕರೆನಿಸಿಕೊಂಬರು ಅಮಿತನಾಖ್ಯಾತಾಸುರರಗಣ-
ತಮೋರಾಜಸರೆನಿಸಿಕೊಂಬರು ದೈತ್ಯ ಸಮುದಾಯ |
ತಮಸ್ತಾಮಸ ಕಲಿ ಪುರಂಧ್ರಿಯು ಅಮಿತ ದುರ್ಗುಣಪೂರ್ಣ-
ಸರ್ವಧರ್ಮರೊಳಧಮಾಧಮದುರಾತ್ಮನು ಕಲಿಯೆನಿಸಿಕೊಂಬ ||

ಮಾಯೆಯ ಪ್ರಭಾವ ನಮ್ಮ ಮೇಲೆ ಕಾಲಕ್ಕನುಗುಣವಾಗಿರುತ್ತದೆ. ಸಾತ್ವಿಕ ಯುಗದಲ್ಲಿ ಸಾತ್ವಿಕ ಸ್ವಭಾವ ಎಷ್ಟು ಬಲಿಷ್ಟ ಎಂದರೆ ಅದು ಸಾತ್ವಿಕರು ತಾಮಸ ಪ್ರಭಾವಕ್ಕೆ ಒಳಗಾಗದೆ ಶುದ್ಧವಾಗಿರುವಂತೆ ಮಾಡುತ್ತದೆ. ಆದರೆ ಕಲಿಯುಗದಲ್ಲಿ ಎಲ್ಲರೂ  ಬಹಳ ಸುಲಭವಾಗಿ ತಾಮಸ ಪ್ರಭಾವಕ್ಕೊಳಗಾಗುತ್ತಾರೆ. ಒಂದು ವೇಳೆ ಅದನ್ನು ಮೀರಿ ಭಗವಂತನತ್ತ ಮನಸ್ಸು ಹರಿದರೆ ಅದು ಪರಮ ಶ್ರೇಷ್ಠ. ಇದಕ್ಕಾಗಿ ‘ಕಲಿಯುಗದಲ್ಲಿ ಹರಿನಾಮ ನೆನೆದರೆ ಕುಲಕೋಟಿ ಉದ್ಧಾರವಾಗುವುದು’ ಎನ್ನುತ್ತಾರೆ. ಕಲಿಯುಗದಲ್ಲಿ ತಾಮಸ ಪ್ರಭಾವಕ್ಕೊಳಗಾಗಿ ಮಾಡುವ ತಪ್ಪಿಗೆ ಶಿಕ್ಷೆ ಕಡಿಮೆ. ಹಾಗೇ ಪುಣ್ಯಕ್ಕೆ ಮಹಾ ಫಲ.
ದುಷ್ಕೃತಿಗಳ ಬಗ್ಗೆ ವಿವರಿಸಿದ ಕೃಷ್ಣ, ಪುಣ್ಯವಂತ ಸಜ್ಜನರ ವಿಧವನ್ನು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

No comments:

Post a Comment