Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Friday, June 17, 2011

Bhagavad Gita Kannada Chapter-07 Shloka 10


ಕೃಷ್ಣ ಪಿಂಡಾಂಡ-ಬ್ರಹ್ಮಾಂಡದಲ್ಲಿ ನಿಂತು ಹೇಗೆ ವಿಭೂತಿಯಾಗಿ ಬೇರೆ ಬೇರೆ ವಸ್ತುವಿನಲ್ಲಿ ವಿಶಿಷ್ಟ ಶಕ್ತಿಯನ್ನು ತುಂಬುತ್ತಾನೆ ಎನ್ನುವ ಮಾತಿನ ಸಂಕ್ಷಿಪ್ತ ಉಪಾಸನೆ ನೋಡಿದೆವು. ಈ ವಿಭೂತಿಯ ವಿಸ್ತಾರ ಮುಂದೆ ಪುನಃ ಬರುತ್ತದೆ. ಇಲ್ಲಿ ಕೃಷ್ಣ ಅದನ್ನು ಕ್ರೂಡೀಕರಣ ಮಾಡಿ ಸಮಷ್ಟಿಯಾಗಿ ವಿಭೂತಿಯ ಅನುಸಂಧಾನ ಹೇಗಿರಬೇಕು ಎಂದು ವಿವರಿಸಿದ್ದಾನೆ.   
ಬೀಜಂ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್
ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ೧೦

ಬೀಜಮ್  ಮಾಮ್  ಸರ್ವಭೂತಾನಾಮ್  ವಿದ್ಧಿ ಪಾರ್ಥ ಸನಾತನಮ್
ಬುದ್ಧಿ ಬುದ್ಧಿಮತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್- ಓ ಪಾರ್ಥ, ಎಲ್ಲ ಜೀವಿಗಳ ಅಳಿವಿರದ ಬೀಜ [ಸ್ವಭಾವದ ಅಭಿವ್ಯಕ್ತಿಗೆ ಕಾರಣನಾಗಿ ‘ಬೀಜ’ ನಾಮಕ] ನಾನೆಂದು ತಿಳಿ. ತಿಳಿದವರ ತಿಳಿವು ನನ್ನಿಂದ. [ತಿಳಿದವರೊಳಗಿದ್ದು ತಿಳಿವು ನೀಡುವುದರಿಂದ ‘ಬುದ್ಧಿ’ನಾಮಕ ]. ಪರಾಕ್ರಮಿಗಳ ಸೋಲರಿಯದ ಶಕ್ತಿ ನನ್ನಿಂದ. [ಪರಾಕ್ರಮಿಗಳೊಳಗಿದ್ದು ಸೋಲರಿಯದ ಶಕ್ತಿ ನೀಡುವುದರಿಂದ ‘ತೇಜಸ್’ ನಾಮಕ].

ಕೃಷ್ಣ ಹೇಳುತ್ತಾನೆ “ಬೀಜಮ್  ಮಾಮ್  ಸರ್ವಭೂತಾನಾಮ್  “ ಎಂದು. ಅಂದರೆ ‘ಎಲ್ಲಾ ಜೀವಗಳ ಬೀಜ’ ನಾನು ಎಂದು. ಬೀಜ ಎಂದಾಗ ನಮಗೆ ಸಾಮಾನ್ಯವಾಗಿ ನೆನಪಿಗೆ ಬರುವುದು ಮರಗಿಡದ ಬೀಜ. ಈ ಬೀಜವನ್ನು ಬಿತ್ತಿದಾಗ ಅದು ಮರವಾಗಿ ಬೆಳೆಯುತ್ತದೆ. ಅಂದರೆ ಮರಕ್ಕೆ ಬೀಜ ಉಪಾದಾನ ಕಾರಣ. ಹಾಗೇ ಭಗವಂತ ಕೂಡಾ ಈ ಜಗತ್ತಿಗೆ ಉಪಾದಾನ ಕಾರಣವೆ? ಇದು ನಮ್ಮ ಮುಂದೆ ಬರುವ ಮೊದಲ ಪ್ರಶ್ನೆ. ಇದನ್ನು ತಿಳಿಯಬೇಕಾದರೆ ಮೊದಲು ನಾವು ‘ಬೀಜ’ ಅನ್ನುವ ಪದದ ಅಧ್ಯಾತ್ಮಿಕ ಅರ್ಥವಿಶೇಷವನ್ನು(etymological meaning) ಅರಿಯಬೇಕು. ಬೀಜ ಎನ್ನುವುದು ‘ಅಂಜು’ ಧಾತುವಿನಿಂದ ಬಂದಿರುವುದು. ಇಲ್ಲಿ ‘ವಿ’ ವಿಸರ್ಗ. ಯಾವುದು ವ್ಯಂಜನ (ವ್ಯಂಜನಾತ್) ಅದು ಅಭಿವ್ಯಂಜನ. ಅಂದರೆ ಯಾರಿಂದ ಅಭಿವ್ಯಕ್ತವಾಯಿತೋ ಅದು ಬೀಜ. ಯಾವುದು(ಮೂಲವಸ್ತು) ಇದ್ದೂ ಕಾಣಿಸುತ್ತಿರಲಿಲ್ಲವೋ ಅದಕ್ಕೆ ಕಾಣುವಂತಹ ಆಕಾರಕೊಟ್ಟವನು ಆ ಭಗವಂತ. ಅಂದರೆ ಸೂಕ್ಷ್ಮ ರೂಪದಲ್ಲಿ ತುಂಬಿದ್ದ ಈ ಅವ್ಯಕ್ತ ಪ್ರಪಂಚಕ್ಕೆ ವ್ಯಕ್ತವಾದ ರೂಪ ಕೊಟ್ಟವ. ಆದ್ದರಿಂದ ಇಡೀ ಪ್ರಪಂಚದಲ್ಲಿರುವ ಜೀವಜಾತಕ್ಕೆ ಅಭಿವ್ಯಕ್ತವನ್ನು ಕೊಟ್ಟವನು ಯಾರೋ ಅವನು ಸರ್ವಭೂತಗಳಿಗೆ ಬೀಜ. ಈ ಜಗತ್ತಿಗೆ ತಂದೆಯೂ ತಾಯಿಯೂ ಆದ ಆ  ಭಗವಂತ ಬೀಜ. ಪ್ರಳಯ ಕಾಲದಲ್ಲಿ ಕಣ್ಣಿಗೆ ಕಾಣದ(ಅವ್ಯಕ್ತ), ಸೂಕ್ಷ್ಮರೂಪದಲ್ಲಿ ಇದ್ದ ಈ ಪ್ರಪಂಚಕ್ಕೆ-ವ್ಯಕ್ತವಾದ ರೂಪವನ್ನು ಕೊಟ್ಟವ ‘ಸರ್ವಭೂತಾನಾಂ ಬೀಜ’.
ಜಗತ್ತಿನ ಸಮಸ್ತ ಜೀವಜಾತಕ್ಕೆ ಅಂದರೆ- ಚತುರ್ಮುಖ-ಪ್ರಾಣ-ಗರುಡ-ಶೇಷ-ರುದ್ರ-ಇಂದ್ರ-ಕಾಮ-ಸರ್ವ ದೇವತೆಗಳು, ಮಾನವರು, ವನಸ್ಪತಿಗಳು, ಇತ್ಯಾದಿ. ಹೀಗೆ ಸಮಸ್ತ ಜೀವಕೋಟಿಗೆ ದೇಹಕೊಟ್ಟು, ಆಕಾರ ಕೊಟ್ಟು, ಅಭಿವ್ಯಕ್ತಿಕೊಟ್ಟು, ಇಡೀ ಜೀವಜಾತದ ಹಿಂದೆ ತಂದೆಯಾಗಿ ನಿಂತವ ಆ ಭಗವಂತ. ಈ ಪ್ರಪಂಚದಲ್ಲಿ ಯಾವ-ಯಾವ ಜೀವಜಾತವಿದೆ, ಆ ಜೀವಜಾತದಲ್ಲಿರುವ ವಿಶೇಷ ಶಕ್ತಿ(exclusive quality) ಹಿಂದೆ ಕಾರಣ ಪುರುಷನಾಗಿ, ವ್ಯಕ್ತಿತ್ವ ವಿಕಸನಕ್ಕೆ (ಅಭಿವ್ಯಕ್ತಿಗೆ) ಮೂಲಕಾರಣನಾಗಿ ಆ ಭಗವಂತ ನಿಂತಿದ್ದಾನೆ.
ನಮಗಿರುವ ಬೀಜದ ಇನ್ನೊಂದು ಕಲ್ಪನೆ –ಅದು ಮರವಾಗಿ ಬೆಳೆದಾಗ ತನ್ನ ಆಕಾರವನ್ನು ಕಳೆದುಕೊಳ್ಳುತ್ತದೆ ಎನ್ನುವುದು. ಆದರೆ ಭಗವಂತ ‘ಸನಾತನ’. ಇಲ್ಲಿ ಕೃಷ್ಣ ಹೇಳುತ್ತಾನೆ “ನಾನು ನಾನಾಗಿಯೇ ಇದ್ದು ಪ್ರಪಂಚಕ್ಕೆ ಆಕಾರ ಕೊಡುತ್ತೇನೆ” ಎಂದು. ಅಂದರೆ ಭಗವಂತ ಎಂದೂ ಬದಲಾಗುವುದಿಲ್ಲ-ಆದರೆ ಪ್ರಪಂಚ ಬದಲಾಗುತ್ತದೆ. ಭಗವಂತ ಪ್ರಪಂಚಕ್ಕೆ ಬೇರೆ ಬೇರೆ ಆಕಾರದ ಅಭಿವ್ಯಕ್ತ ಕೊಡುತ್ತಾನೆ. ಹೊಸ ಶಕ್ತಿ ಕೊಡುತ್ತಾನೆ. ಇದರಿಂದ ಅದು ಬದಲಾಗುತ್ತಾ, ಹೊಸ ರೂಪ ಪಡೆಯುತ್ತಾ ಇರುತ್ತದೆ. ಇದಕ್ಕೆ ಕಾರಣಪುರುಷನಾದ ಭಗವಂತ ಮಾತ್ರ ಎಲ್ಲಾ ಕಾಲದಲ್ಲೂ ಏಕರೂಪದಲ್ಲಿರುತ್ತಾನೆ. ಹೀಗೆ ಭಗವಂತ ಸಮಸ್ತ ಭೂತಗಳಿಗೆ(ಜಡ, ಚೇತನ, ಮುಕ್ತರು)ಬೀಜ ಮತ್ತು ಆತ ಸನಾತನ.
ಕೃಷ್ಣ ಹೇಳುತ್ತಾನೆ “ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್” ಎಂದು. ಅಂದರೆ “ಬುದ್ಧಿವಂತರ ಬುದ್ಧಿಮತ್ತೆ ಏನಿದೆ ಅದು ನನ್ನ ಕೊಡುಗೆ; ಹಾಗೇ ತೇಜಸ್ವಿಗಳಿಗೆ ತೇಜಸ್ವಿ ನಾನು”. ಜ್ಞಾನಪ್ರದ ಜೀವರಲ್ಲಿ ಜ್ಞಾನಶಕ್ತಿಯನ್ನು  ಭಗವಂತ ಅಭಿವ್ಯಕ್ತ ಗೊಳಿಸಿದ. ಇದರಿಂದ ಅವರು ಜ್ಞಾನ ಯೋಗಿಗಳಾದರು ಮತ್ತು ಸಂಸಾರದಲ್ಲಿ ಜ್ಞಾನ ಪರಂಪರೆಯನ್ನು ಬೆಳೆಸಿ ಮುಕ್ತಿಯನ್ನು ಪಡೆದರು. ಅದೇ ರೀತಿ ಕರ್ಮಪ್ರಧಾನವಾಗಿರುವ ಕರ್ಮಯೋಗಿಗಳಿಗೆ ತೇಜಸ್ಸಾಗಿ ನಿಂತು ಮುನ್ನೆಡೆಸಿದ ಭಗವಂತ, ಅವರಿಗೆ ‘ತೇಜಸ್ಸಾಗಿ’ ಮುಕ್ತಿ ಕರುಣಿಸುವವ. ಬುದ್ಧಿಃ ಮತ್ತು ತೇಜಃ ಎನ್ನುವುದು ಭಗವಂತನ ಹೆಸರು. ಜ್ಞಾನದ ಅಪಾರ ಮತ್ತು ಅನಂತ ಕಡಲಾಗಿರುವ ಭಗವಂತ ‘ಬುದ್ಧಿಃ’. ದೇಹಬಲ, ಆತ್ಮಬಲ ಎಲ್ಲವೂ ಪೂರ್ಣಪ್ರಮಾಣದಲ್ಲಿರುವ ಸರ್ವಸಮರ್ಥ ಭಗವಂತ ತೇಜಃ.                              

No comments:

Post a Comment