Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Wednesday, October 5, 2011

Bhagavad Gita Kannada Chapter-11 Shloka 47-55


ಭಗವಾನುವಾಚ
ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್        
ತೇಜೋಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್         ೪೭

ಭಗವಾನ್ ಉವಾಚ-ಭಗವಂತ ಹೇಳಿದನು:
ಮಯಾ ಪ್ರಸನ್ನೇನ ತವರ್ಜುನ ಇದಮ್ ರೂಪಮ್  ಪರಮ್  ದರ್ಶಿತಮ್ ಆತ್ಮಯೋಗಾತ್  
ತೇಜಃ ಮಮ್  ವಿಶ್ವಮ್ ಅನಂತಮ್ ಆದ್ಯಮ್  ಯತ್ ಮೇ ತ್ವತ್ ಅನ್ಯೇನ ನ ದೃಷ್ಟ ಪೂರ್ವಮ್ –ಅರ್ಜುನ, ನಾನೆ ಮೆಚ್ಚಿ ಆತ್ಮ ಶಕ್ತಿಯಿಂದ ನಿನಗೆ ತೋರಿಸಿದೆ ಈ ಹಿರಿಯ ರೂಪವನ್ನು. ಇದು ಬೆಳಕಿನ ಮೊತ್ತ. ಗುಣಗಳ ಗುಂಪು. ಇದಕ್ಕೆ ಕೊನೆಯಿಲ್ಲ. ಇದು ಎಲ್ಲದಕ್ಕು ಮೊದಲು. ನನ್ನೀ ರೂಪವನ್ನು ಇನ್ನಾರೂ ಈ ಮೊದಲು ಹೀಗೆ ಕಂಡದ್ದಿಲ್ಲ.

ಭಗವಂತನ ಸಂಹಾರ ರೂಪವನ್ನು ಕಂಡು ಭಯಗ್ರಸ್ತನಾಗಿರುವ  ಅರ್ಜುನನ್ನು ಕೃಷ್ಣ ಸಂತೈಸುತ್ತಾನೆ. ಕೃಷ್ಣ ಹೇಳುತ್ತಾನೆ: “ನಾನು ನಿನಗೆ ವಿಶ್ವರೂಪ ತೋರಿದ್ದು ನಿನ್ನ ಭಕ್ತಿಗೆ ಪ್ರಸನ್ನನಾಗಿ ಹೊರತು, ನಿನ್ನನ್ನು ಹೆದರಿಸುವುದಕ್ಕೊಸ್ಕರ ಅಲ್ಲ” ಎಂದು.  ಕೃಷ್ಣ ತನ್ನ ಅವತಾರದಲ್ಲಿ ಅನೇಕ ಬಾರಿ ತನ್ನ ವಿಶ್ವರೂಪ ದರ್ಶನ ತೋರಿದ್ದ. ಯಶೋದೆ-ಮಣ್ಣು ತಿಂದ ಕೃಷ್ಣನ ಬಾಯಿಯನ್ನು ತೆರೆಯಲು ಹೇಳಿದಾಗ, ಅಲ್ಲಿ ಆಕೆಗೆ ತನ್ನ ಬಾಯಿಯಲ್ಲಿ ವಿಶ್ವರೂಪ ದರ್ಶನ ಮಾಡಿಸಿದ್ದ. ಇನ್ನೊಮ್ಮೆ ಹಾಲು ಕುಡಿದು ಆಕಳಿಸಿದ ಪುಟ್ಟ ಕೃಷ್ಣನ ಬಾಯಿಯಲ್ಲಿ ಯಶೋದೆ ಭಗವಂತನ ವಿಶ್ವರೂಪ ದರ್ಶನ ಪಡೆದಿದ್ದಳು. ಸಂಧಾನಕ್ಕೆದು ದೃತರಾಷ್ಟ್ರನ ಸಭೆಗೆ ಬಂದ ಕೃಷ್ಣನನ್ನು ದುರ್ಯೋಧನ ಬಂಧಿಸಲು ಪ್ರಯತ್ನಿಸಿದಾಗ, ಅಲ್ಲಿ ಕೃಷ್ಣ ತನ್ನ ವಿಶೇಷ ರೂಪವನ್ನು ತೋರಿದ್ದ. ಇಷ್ಟೇ ಅಲ್ಲದೆ ಗರ್ಗಾಚಾರ್ಯರಿಗೆ, ಉದಂಕ ಮುನಿಗೆ ಕೂಡ ಕೃಷ್ಣನ ವಿಶ್ವರೂಪ ದರ್ಶನವಾಗಿತ್ತು. ಆದರೆ ಇಲ್ಲಿ ಅರ್ಜುನನಿಗೆ ಕೃಷ್ಣ ತೋರಿದ ವಿಶ್ವರೂಪ ಎಲ್ಲಕ್ಕಿಂತ ಅಪರಿಮಿತವಾದುದು. “ಭೂಲೋಕದಲ್ಲಿ ಯಾರೂ ಈ ಮೊದಲು ಹೀಗೆ ಕಂಡದ್ದಿಲ್ಲ ಎನ್ನುತ್ತಾನೆ” ಕೃಷ್ಣ.  ಭಗವಂತನ ವಿಶ್ವರೂಪ-ಅದೊಂದು ಬೆಳಕಿನ ಪುಂಜ. ಅದು ಗುಣಗಳ ಸಾಗರ. ಅನಂತವಾದ ಈ ವಿಶ್ವರೂಪ ದರ್ಶನವನ್ನು ಅರ್ಜುನ ಪಡೆದ.        

ನ ವೇದಯಜ್ಞಾಧ್ಯಯನೈರ್ನ ದಾನೈಃ ನಚ ಕ್ರಿಯಾಭಿರ್ನ ತಪೋಭಿರುಗ್ರೈಃ
ಏವಂರೂಪಃ ಶಕ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ೪೮

ನ ವೇದ ಯಜ್ಞಧ್ಯಯನೈಃ ನ ದಾನೈಃ ನ ಚ ಕ್ರಿಯಾಭಿಃ ನ  ತಪೋಭಿಃ ಉಗ್ರೈಃ
ಏವಮ್ ರೂಪಃ ಶಕ್ಯಃ  ಅಹಮ್  ನೃಲೋಕೇ ದ್ರಷ್ಟುಮ್  ತ್ವತ್ ಅನ್ಯೇನ ಕುರು ಪ್ರವೀರ – ಕುರುವಂಶದ ಕಡುಗಲಿಯೆ, ಭೂಲೋಕದಲ್ಲಿ ನೀನಲ್ಲದೆ ಇನ್ನಾರೂ ಇಂಥ ಬಗೆಯ ನನ್ನನ್ನು ಕಾಣುವುದು ಸಾಧ್ಯವಿಲ್ಲ. ಸಾಧ್ಯವಿಲ್ಲ ವೇದಗಳಲ್ಲಿ ಕರ್ಮಕಾಂಡವನ್ನರಸುವ ಕಲಿಕೆಗಳಿಂದ. ಇಲ್ಲ ಕೊಡುಗೆಗಳಿಂದ. ಇಲ್ಲ ನೇಮ ನೋಂಪಿಗಳಿಂದ. ಇಲ್ಲ ಕಟ್ಟುನಿಟ್ಟಿನ ತಪಗಳಿಂದ.

ಭಗವಂತನ ಪ್ರೀತಿಗೆ ಪಾತ್ರರಾಗದ ಯಾರೂ ಆತನ ವಿಶ್ವ ರೂಪ ದರ್ಶನ ಪಡೆಯಲು ಸಾಧ್ಯವಿಲ್ಲ. ವೇದಾಧ್ಯಾಯದಿಂದ, ಯಜ್ಞದಿಂದ, ದಾನದಿಂದ ಇತ್ಯಾದಿ ಕರ್ಮದಿಂದ ಸರ್ವೋತ್ತಮನಾದ, ಸರ್ವ ವಿಲಕ್ಷನನಾದ ಭಗವಂತನ ವಿಶ್ವರೂಪ ದರ್ಶನ ಪಡೆಯುವುದು ಸಾಧ್ಯವಿಲ್ಲ. “ಅಂಥಹ ನನ್ನ ರೂಪವನ್ನು ಕರ್ಮ ನಿಷ್ಠನಾದ(ಕುರುಪ್ರವೀರ) ನೀನು ಕಂಡೆ” ಎನ್ನುತ್ತಾನೆ ಕೃಷ್ಣ.    

ಮಾ ತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಮ್         
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ ೪೯

ಮಾ ತೇ ವ್ಯಥಾ ಮಾ ಚ ವಿಮೂಢಭಾವಃ ದೃಷ್ಟ್ವಾ ರೂಪಮ್  ಘೋರಮ್ ಈದೃಕ್ ಮಮ ಇದಮ್
ವ್ಯಪೇತ ಭೀಃ ಪ್ರೀತ ಮನಾಃ ಪುನಃ ತ್ವಮ್ ತತ್ ಏವ ಮೇ ರೂಪಮ್ ಇಮ್  ಪ್ರಪಶ್ಯ –ನಡುಗಿಸುವ ನನ್ನ ಈ ಇಂಥ ರೂಪವನ್ನು ಕಂಡು ಕಳವಳಿಸಬೇಡ; ಕಂಗೆಡಬೇಡ. ಮತ್ತೆ ನೀನು ನನ್ನ ಆ ಮೊದಲ ರೂಪವನ್ನೆ ನೋಡು- ಅಂಜಿಕೆ ತೊರೆದು,ಬಗೆಯೊಳಕ್ಕರೆ ತುಂಬಿ.

ಶತ್ರು ಸಂಹಾರಕವಾದ ನನ್ನ ಈ ರೂಪವನ್ನು ಕಂಡು ಗಾಬರಿಯಾಗಬೇಡ. ನಿನ್ನೆಲ್ಲ ಭಯವನ್ನು ಬಿಟ್ಟು ನೋಡು ನಿನಗಿಷ್ಟವಾದ ನನ್ನ ಚತುರ್ಭುಜ ರೂಪವನ್ನು ಎನ್ನುತ್ತಾನೆ ಕೃಷ್ಣ.

ಸಂಜಯ ಉವಾಚ
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ        
ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ            ೫೦

ಸಂಜಯ ಉವಾಚ- ಸಂಜಯ ಹೇಳಿದನು:
ತಿ ಅರ್ಜುನಮ್  ವಾಸುದೇವಃ ತಥಾ ಉಕ್ತ್ವಾ ಸ್ವಕಮ್  ರೂಪಮ್  ದರ್ಶಯಾಮ್ ಆಸ ಭೂಯಃ        
ಆಶ್ವಾಸಯಾಮ್ ಆಸ ಚ ಭೀತಮ್ ಏನಮ್  ಭೂತ್ವಾ ಪುನಃ ಸೌಮ್ಯವಪುಃ  ಮಹಾತ್ಮಾ –ವಾಸುದೇವ ಹೀಗೆ ನುಡಿದು ಮರಳಿ ಅರ್ಜುನನಿಗೆ ತನ್ನ ಕೃಷ್ಣ ರೂಪವನ್ನೇ ತೋರಿದ. ಮಹಾತ್ಮನಾದ ಕೃಷ್ಣ ಹೀಗೆ ಮರಳಿ ಸೌಮ್ಯರೂಪ ತಾಳಿ ಅಂಜಿದ್ದ ಅರ್ಜುನನನ್ನು ಸಂತೈಸಿದ.

ಈ ಶ್ಲೋಕದಲ್ಲಿ ಸಂಜಯ ಭಗವಂತನನ್ನು ವಾಸುದೇವ ಎಂದು ಸಂಬೋಧಿಸಿದ್ದಾನೆ. ಭಗವಂತನ ಈ ನಾಮಕ್ಕೆ ಅನೇಕ ಅರ್ಥಗಳಿವೆ. ವಾಸು+ದೇವ-ವಾಸುದೇವ. ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಸಂಸಾರ ಬಂಧನದ ಹದಿನೈದು ಬೇಲಿಗಳನ್ನು ದಾಟಿ, ಸಮಾದಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೆವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ(ಅನ್ನಮಯ ಕೋಶ, ಪ್ರಾಣಮಯ ಕೋಶ , ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ)  ಪರದೆಯಲ್ಲಿದ್ದಾಗ ವಾಸುವಾಗಿ; ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ. 

ಅರ್ಜುನ ಉವಾಚ
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ ೫೧

ಅರ್ಜುನ ಉವಾಚ-ಅರ್ಜುನ ಹೇಳಿದನು:
ದೃಷ್ಟ್ವಾ ಇದಮ್ ಮಾನುಷಮ್  ರೂಪಮ್  ತವ ಸೌಮ್ಯಮ್  ಜನಾರ್ದನ
ಇದಾನೀಮ್ ಅಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಮ್  ಗತಃ –ಜನಾರ್ದನ, ಮನುಷ್ಯಾಕಾರದ ನಿನ್ನ ಈ ಸೌಮ್ಯರೂಪವನ್ನು ಕಂಡು ಜೀವ ಬಂತು. ಈಗ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಿದ್ದೇನೆ.

ಇಲ್ಲಿ ಅರ್ಜುನ ಭಗವಂತನನ್ನು ಜನಾರ್ದನ ಎಂದು ಸಂಬೋಧಿಸಿದ್ದಾನೆ. ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಅಂದರೆ ಕೊನೆಗೊಳಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ. 'ಜನ' ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ. ಜನ ಅಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು ಅಂದರೆ ಮುಕ್ತಿಪ್ರದಾಯಕ. "ದುರ್ಜನರ ಸಂಹಾರಕ್ಕೆಂದು ನಿಂತಿರುವ ನಿನ್ನ ಆ ರೂಪವನ್ನು ಕಂಡು ನಾನು ಭಯಗೊಂಡಿದ್ದೆ. ಭಕ್ತರ ಕರೆಗೆ ಓಗೊಟ್ಟು, ತನ್ನ ಭಕ್ತರಿಗೆ ಮೋಕ್ಷವನ್ನು ಕರುಣಿಸುವ ನಿನ್ನ ಈ ಸೌಮ್ಯ ರೂಪವನ್ನು ಕಂಡು ನಾನು ಚೇತರಿಸಿಕೊಂಡೆ”- ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.

ಭಗವಾನುವಾಚ
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣಃ ೫೨

ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ        
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ       ೫೩

ಭಗವಾನುವಾಚ-ಭಗವಂತ ಹೇಳಿದನು:
ಸುದುರ್ದರ್ಶಮ್ ಇದಮ್ ರೂಪಮ್  ದೃಷ್ಟವಾನ್ ಅಸಿ ಯತ್ ಮ
ದೇವಾಃ  ಅಪಿ ಅಸ್ಯ ರೂಪಸ್ಯ ನಿತ್ಯಮ್  ದರ್ಶನ ಕಾಂಕ್ಷಿಣಃ  ||
ಹಂ ವೇದೈಃ  ನ  ತಪಸಾ ನ ದಾನೇನ ನ ಚ ಇಜ್ಯಯಾ
ಕ್ಯಃ  ಏವಂ ವಿಧಃ  ದ್ರಷ್ಟುಮ್  ದೃಷ್ಟವಾನ್ ಅಸಿ ಮಾಮ್  ಯಥಾ ––ನೀನು ಕಂಡ ನನ್ನ ಈ ರೂಪ ಸುಲಭವಾಗಿ ಕಾಣಬರುವಂಥದಲ್ಲ. ದೇವತೆಗಳು ಕೂಡ ಈ ರೂಪವನ್ನು ಕಾಣಲೆಂದು ಅನುಗಾಲ ಕಾಯುತ್ತಿರುತ್ತಾರೆ.
ನೀನು ಕಂಡ ಹಾಗೆ ಈ ಬಗೆಯ ನನ್ನನ್ನು ಕಾಣಲು ಬರಿದೆ ವೇದಗಳನ್ನೋದುವುದರಿಂದ ಸಾಧ್ಯವಿಲ್ಲ. ಇಲ್ಲ ತಪಸ್ಸಿನಿಂದ, ಇಲ್ಲ ದಾನದಿಂದ, ಇಲ್ಲ ಯಜ್ಞದಿಂದಲೂ.

ಭಗವಂತ ಅರ್ಜುನನಿಗೆ ಕಾಣಿಸಿದ ತನ್ನ ಅಪೂರ್ವ ರೂಪ ಬಹಳ ದುರ್ಲಭರೂಪ. ಇಂಥಹ ಅಪೂರ್ವ ರೂಪವನ್ನು ಕಾಣಲು ದೇವತೆಗಳೂ ಕೂಡ ಆಸೆಯಿಂದ ಅನುಗಾಲ ಕಾಯುತ್ತಿರುತ್ತಾರೆ. ಕೃಷ್ಣ ಇಲ್ಲಿ ಮತ್ತೆ ಒತ್ತು ಕೊಟ್ಟು ಹಿಂದೆ ಹೇಳಿದ ವಿಚಾರವನ್ನು ಮರಳಿ ಹೇಳುತ್ತಾನೆ. “ಸ್ವಸಾಮರ್ಥ್ಯದಿಂದ(ವೇದಾಧ್ಯಾಯನ, ಯಜ್ಞ, ದಾನ, ತಪಸ್ಸು ಇತ್ಯಾದಿ ಕರ್ಮಗಳನ್ನು ಮಾಡುವ ಮುಖೇನ)  ನನ್ನ ಈ ವಿಶಿಷ್ಠ ರೂಪವನ್ನು ಕಾಣಲು ಸಾಧ್ಯವಿಲ್ಲ”ಎನ್ನುತ್ತಾನೆ ಕೃಷ್ಣ.

ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋSರ್ಜುನ
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ         ೫೪

ಭಕ್ತ್ಯಾ ತು ಅನನ್ಯಯಾ ಶಕ್ಯಃ  ಅಹಂ ಏಮ್ ವಿಧಃ ಅರ್ಜುನ
ಜ್ಞಾತುಮ್  ದ್ರಷ್ಟುಮ್  ಚ ತತ್ತ್ವೇನ ಪ್ರವೇಷ್ಟುಮ್  ಚ ಪರಂತಪ –ಅರಿಗಳನ್ನು ಸುಟ್ಟುರಿಯುವ ಅರ್ಜುನ, ನನ್ನನ್ನು ಈ ಪರಿ ಸರಿಯಾಗಿ ಅರಿಯಲು, ಅರಿತು ಕಾಣಲು, ಕಂಡು ಸೇರಲು ನನ್ನಲ್ಲೆ ನೆಲೆಗೊಂಡ ಭಕ್ತಿಯಿಂದ ಮಾತ್ರವೆ ಸಾಧ್ಯ.

ಭಗವಂತನನ್ನು ಕಾಣಲು ಇರುವ ಮೂಲ ಮಂತ್ರ ‘ಭಕ್ತಿ’. ಏಕನಿಷ್ಠೆಯಿಂದ ಭಗವಂತನನ್ನು ಅನನ್ಯವಾಗಿ ಭಕ್ತಿ ಮಾಡುವುದರಿಂದ ಆತನನ್ನು ಸೇರಲು ಸಾಧ್ಯ. ಎಲ್ಲರಿಗೂ ಮಿಗಿಲಾದ ಭಗವಂತ ಭಕ್ತ ಪರಾಧೀನ.    

ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ      ೫೫

ತ್ ಕರ್ಮ ಕೃತ್ ಮತ್ ಪರಮಃ ತ್ ಭಕ್ತಃ ಸಂಗವರ್ಜಿತಃ
ನಿರ್ವೈರಃ ಸರ್ವಭೂತೇಷು ಯಃ ಸ ಮಾಮ್ ಏತಿ ಪಾಂಡವ –ಓ ಪಾಂಡವ, ಎಲ್ಲವನ್ನು ನನಗಾಗಿ ಮಾಡುವವನು, ನನ್ನನ್ನೆ ಪರದೈವವೆಂದು ತಿಳಿದವನು, ವಿಷಯದ ನಂಟು ತೊರೆದು ನನ್ನಲ್ಲಿ ಭಕ್ತಿಯಿಟ್ಟವನು, ಯಾವ ಜೀವಿಗಳಲ್ಲು ಹಗೆಗೊಳ್ಳದವನು –ನನ್ನನ್ನು ಪಡೆಯುತ್ತಾನೆ.

ಭಗವಂತನನ್ನು ಕಾಣಲು ಭಕ್ತಿಯ ಜೊತೆಗೆ ಇರುವ ಅತಿ ಮುಖ್ಯವಾದ ಅಂಶವನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ನಾವು ಮಾಡುವ ಕಾರ್ಯವನ್ನು ‘ನಾನು ಮಾಡಿದೆ’ ಎಂದು ಅಹಂಕಾರ ಪಡದೆ, ಭಗವಂತ ನನ್ನ ಕೈಯಿಂದ  ಮಾಡಿಸಿದ ಎನ್ನುವ ಅನುಸಂಧಾನ; ಅರ್ಪಣ ಭಾವ, ಫಲದ ಅಪೇಕ್ಷೆ ಇಲ್ಲದ ಭಕ್ತಿ, ದ್ವೇಷ ಪ್ರತೀಕಾರವಿಲ್ಲದೆ ಭಗವಂತನಲ್ಲಿ ಶರಣಾಗತಿ, ನಿರ್ಲಿಪ್ತ ಭಾವದಿಂದ ಭಗವಂತ ಸರ್ವೋತ್ತಮ ಎನ್ನುವ ಸತ್ಯವನ್ನರಿತು ಆತನನ್ನು ಪ್ರೀತಿಸುವುದು-ಇದರಿಂದ ಭಗವಂತನನ್ನು ಕಾಣಲು ಸಾಧ್ಯ.     
                                                                                      
ಇತ್ಯೇಕಾದಶೋSಧ್ಯಾಯಃ
ಹನ್ನೊಂದನೆಯ ಅಧ್ಯಾಯ ಮುಗಿಯಿತು
*******

No comments:

Post a Comment