Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, January 29, 2011

Bhagavad Gita Kannada Chapter-02_Shloka 4-10

ಅರ್ಜುನ ಉವಾಚ
ಕಥಂ ಭೀಷ್ಮಮಹಂ ಸಂಖೇ ದ್ರೋಣಂ ಚ ಮಧುಸೂದನ          
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ      

ಅರ್ಜುನ ಉವಾಚ-ಅರ್ಜುನ ಹೇಳಿದನು:
ಕಥಮ್  ಭೀಷ್ಮಮ್ ಅಹಮ್ ಸಂಖೇ ದ್ರೋಣಮ್  ಚ ಮಧುಸೂದನ
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾ ಅರಿಸೂದನ- ಅರಿಗಳನ್ನು ತರಿದ ಓ ಮಧುಸೂದನ, ಭೀಷ್ಮನನ್ನು, ದ್ರೋಣನನ್ನು, ಪೂಜಿಸಬೇಕಾದ ಮಂದಿಯನ್ನು ನಾನೆಂತು ರಣದಲ್ಲಿ ಬಾಣಗಳಿಂದ ಹೊಡೆದು ಹೋರಾಡಲಿ?

ಕೃಷ್ಣನ ತೀಕ್ಷ್ಣ ಉತ್ತರ ಹಾಗು ಆತನ ನಗುಮೊಗವನ್ನು ಗಮನಿಸಿದ ಅರ್ಜುನನ ಮಾತಿನ ದಾಟಿ ಈಗ ಬದಲಾಗುತ್ತದೆ. ಆತ ಭಾವಾವೇಶ ಬಿಟ್ಟು ಈಗ ಭಾವುಕತೆಯಿಂದ ಶರಣಾಗತಿಯತ್ತ ಹೊರಳುತ್ತಿದ್ದಾನೆ.
ಅರ್ಜುನ ಹೇಳುತ್ತಾನೆ "ನನ್ನ ಕಣ್ಣಮುಂದೆ ನಿಂತ ಭೀಷ್ಮಾಚಾರ್ಯರು, ದ್ರೋಣಾಚಾರ್ಯರನ್ನು ಹೇಗೆ ಎದುರಿಸಲಿ?  ಒಬ್ಬರು ನಮ್ಮ ವಂಶದ ಮೂಲಪುರುಷನಾದ ರಾಜರ್ಷಿ. ಇನ್ನೊಬ್ಬರು ಎಲ್ಲಾ ಕ್ಷತ್ರಿಯರಿಗೂ ವಿದ್ಯೆ ಕೊಟ್ಟ ಮಹರ್ಷಿ. ಇಂತಹ ಪೂಜಾರ್ಹರಾದ ಮಹಾನೀಯರತ್ತ ಹೇಗೆ ಬಾಣ ಹೂಡಲಿ ? ಸೃಷ್ಟಿಯ ಆದಿಯಲ್ಲಿ ಮದು-ಕೈತಪರನ್ನು ಸಂಹಾರ ಮಾಡಿದ ಓ ಮದುಸೂದನನೆ; ದುಷ್ಟ ಸಂಹಾರಕ್ಕೆಂದು  ಅವತರಿಸಿದ ಅರಿಸೂದನನೆ,  ಜ್ಞಾನಿಗಳ, ಆಚಾರ್ಯರ ಹತ್ಯೆ ನಿನ್ನ ಮೂಲ ಉದ್ದೇಶ ಅಲ್ಲ" ಎಂದು ಭಿನ್ನ ದಾಟಿಯಲ್ಲಿ ಅರ್ಜುನ ತನ್ನ ಮಾತನ್ನು ಮುಂದುವರಿಸುತ್ತಾನೆ.

ಗುರೂನಹತ್ವಾ ಹಿ ಮಹಾನುಭಾವಾನ್ ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ         
ಹತ್ವಾSರ್ಥಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್       

ಗುರೂನ್ ಅಹತ್ವಾ ಹಿ ಮಹಾನುಭಾವಾನ್ ಶ್ರೇಯಃ   ಭೋಕ್ತುಮ್  ಭೈಕ್ಷ್ಯಮ್ ಅಪಿ ಇಹ ಲೋಕೇ
ಹತ್ವಾ ಅರ್ಥ ಕಾಮಾನ್ ತು  ಗುರೂನ್ ಇಹ ಏವ ಭುಂಜೀಯ ಭೋಗಾನ್ ರುಧಿರ ಪ್ರದಿಗ್ಧಾನ್-- ಈ ಮಹಾನುಭಾವಿಗಳನ್ನು ಕೊಲ್ಲುವ ಬದಲು ಇಲ್ಲೆ, ಈ ನೆಲದಲ್ಲಿ  ಭಿಕ್ಷೆ ಬೇಡುವುದು ಮೇಲು. ಸಿರಿಯ ಬೆನ್ನು ಹತ್ತಿದ ಇವರನ್ನು ಕೊಂದು ಇಲ್ಲೆ ಅವರ ನೆತ್ತರಿನಿಂದ ನೆನೆದ ಐಸಿರಿಯನುಣ್ಣಬೇಕು!
ಗುರು ಹಿರಿಯರನ್ನು ಕೊಂದು, ಸಿರಿವಂತಿಕೆಯ ಭೋಗವನ್ನು ಅನುಭವಿಸುವುದಕ್ಕಿಂತ, ಭಿಕ್ಷೆ ಬೇಡಿ ಬದುಕುವುದು ಹಿರಿತನವಲ್ಲವೇ? ಯಾವ ಸಿಂಹಾಸನ ಅಂತರಂಗದ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಭೀಷ್ಮ-ದ್ರೋಣರಂತಹ ಮಹಾನುಭಾವರನ್ನು ಕೊಡಲಾರದೋಅಂತಹ ಸಿಂಹಾಸನ ನಮಗೇಕೆ ಬೇಕು? ದುರ್ಯೋಧನನ ಸಂಬಳದ ದಾಸರಾಗಿ, ಅರಮನೆಯ ಋಣಕ್ಕಾಗಿ ಹೋರಾಟಕ್ಕೆ ನಿಂತ ಇವರನ್ನು ಕೊಂದು ಸಿಂಹಾಸನವೇರಿದರೆ, ಗುರುಗಳ ನೆತ್ತರಿನಿಂದ ತೊಯ್ದ ಭೋಗವನ್ನು  ಅನುಭವಿಸಿದಂತೆ.

ನ ಚೈತದ್ ವಿದ್ಮಃ ಕತರನ್ನೋ ಗರೀಯೋ ಯದ್ ವಾ ಜಯೇಮ ಯದಿ ವಾ ನೋ ಜಯೇಯುಃ 
ಯಾನೇವ ಹತ್ವಾ ನ ಜಿಜೀವಿಷಾಮಸ್ತೇSವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ        

ನ ಚ ಏತತ್ ವಿದ್ಮಃ ಕತರತ್ ನಃ ಗರೀಯಃ ಯತ್ ವಾ  ಜಯೇಮ ಯದಿ ವಾ ನಃ ಜಯೇಯುಃ
ಯಾನ್ ಏವ  ಹತ್ವಾ ನ ಜಿಜೀವಿಷಾಮಃ ತೇ ಅವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ --ಇದೇ ತಿಳಿಯುತ್ತಿಲ್ಲ. ಯಾವುದು ನಮಗೆ ಹೆಚ್ಚು ಒಳಿತು-ನಾವು ಗೆಲ್ಲುವುದೇ? ಅಥವ ನಮ್ಮನ್ನು ಅವರು ಗೆಲ್ಲುವುದೇ ಯಾರನ್ನು   ಕೊಂದು ನಾವು ಬದುಕ ಬಯಸುವುದಿಲ್ಲವೋ, ಅವರು(ಕೌರವರು) ನಮ್ಮೆದುರು ನಿಂತಿದ್ದಾರೆ.

ಇಲ್ಲಿಯ ತನಕ ತನ್ನ ವಾದವನ್ನೇ ಮಂಡಿಸಿದ ಅರ್ಜುನ ಈಗ ಕೃಷ್ಣನಿಗೆ ಶರಣಾಗಿ ತನಗ್ಯಾವುದು ಒಳಿತು ಎಂದು ಪ್ರಶ್ನೆ ಮಾಡುತ್ತಾನೆ. “ನಾವು ಯುದ್ಧ ಮಾಡಿ ಗೆಲ್ಲುವುದರಲ್ಲಿ  ನಮಗೆ ಶ್ರೆಯಸ್ಸೋ ಅಥವಾ ಗುರುಹಿರಿಯರು ಗೆಲ್ಲುವುದರಲ್ಲಿ ನಮಗೆ ಶ್ರೆಯಸ್ಸೋ ತಿಳಿಯುತ್ತಿಲ್ಲ. ಯುದ್ಧದಲ್ಲಿ ಗೆಲ್ಲಬೇಕು ಎನ್ನುವ ಆಸೆಯೂ ಹೊರಟುಹೋಗಿದೆ” ಎಂದು ತನ್ನ ಮನಸ್ಸಿನ ಸಂಧಿಗ್ಧತೆಯನ್ನು ಅರ್ಜುನ ಕೃಷ್ಣನ ಮುಂದೆ ಬಿಚ್ಚಿಡುತ್ತಾನೆ. ತಂದೆ ಸಮಾನಾದ ಧೃತರಾಷ್ಟ್ರನ ಮಕ್ಕಳು ನಮ್ಮ ಮುಂದೆ ಯುದ್ಧಕ್ಕೆ ನಿಂತಿದ್ದಾರೆ. ಮಕ್ಕಳೆಂದರೆ ಪ್ರಾಣ ಬಿಡುವ  ನಮ್ಮ ದೊಡ್ಡಪ್ಪನ ವಿರುದ್ಧ ಹೋರಾಡಲು  ಇಷ್ಟವಿಲ್ಲ ಎನ್ನುತ್ತಾನೆ ಅರ್ಜುನ.

ಕಾರ್ಪಣ್ಯದೋಷೋಪಹತಸ್ವಭಾವಃ ಪೃಚ್ಛಾಮಿ ತ್ವಾ ಧರ್ಮಸಂಮೂಢಚೇತಾಃ  
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇSಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್     

ಕಾರ್ಪಣ್ಯ ದೋಷ ಉಪಹತ ಸ್ವಭಾವಃ ಪೃಚ್ಛಾಮಿ ತ್ವಾಮ್  ಧರ್ಮ ಸಮ್ಮೂಢ ಚೇತಾಃ
ಯತ್ ಶ್ರೇಯಃ  ಸ್ಯಾತ್ ನಿಶ್ಚಿತಮ್  ಬ್ರೂಹಿ ತತ್ ಮೇ ಶಿಷ್ಯಃ ತೇ ಅಹಮ್ ಶಾಧಿ ಮಾಮ್  ತ್ವಾಮ್  ಪ್ರಪನ್ನಮ್- -ದೌರ್ಬಲ್ಯದ ದೋಷದಿಂದ ನನ್ನ ಸಹಜ ಬೀರಕ್ಕೆ ಮಂಕು ಕವಿದಿದೆ. ಧರ್ಮದ ಬಗೆಗೆ ಬಗೆಗಾಣದವನಾಗಿ ನಿನ್ನನ್ನು ಕೇಳುತ್ತಿದ್ದೇನೆ;    ಹೇಳು ನನಗಿದನ್ನು: ಯಾವುದು ನಿಖರವಾದ ಒಳಿತಿನ ದಾರಿ? ನಾನು ನಿನ್ನ ಶಿಷ್ಯ. ನಿನಗೆ ಶರಣು ಬಂದ ನನಗೆ ದಾರಿ ತೋರು.

ನನಗೆ ಕಾರ್ಪಣ್ಯ ದೋಷ ಬಂದಿದೆ. ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನ ಮಾಡಲಾರದ ದಯನೀಯ ಸ್ಥಿತಿಯಲ್ಲಿದ್ದೇನೆ. ಧರ್ಮದ ಬಗ್ಗೆ ನನ್ನ ಚಿಂತನಶಕ್ತಿ ಗೊಂದಲದ ಗೂಡಾಗಿದೆ. ಯುದ್ಧ ಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ. ಯಾವುದು ನನಗೆ ಹಿತ ಎಂದು ತಿಳಿಯದಾಗಿದೆ. ನಾನು ನಿನ್ನ ಶಿಷ್ಯನಾಗಿ ನಿನ್ನಲ್ಲಿ ಶರಣಾಗಿದ್ದೇನೆ. ನನಗೆ ಮಾರ್ಗದರ್ಶನ ಮಾಡು ಎಂದು ಅರ್ಜುನ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ. ಇಲ್ಲಿಯ ತನಕ ಭಗವಂತನ ಮುಂದೆ ಪಂಡಿತನಂತೆ ಮಾತನಾಡಿದ ಅರ್ಜುನ, ಈಗ ಭಗವಂತನಲ್ಲಿ ಶರಣಾಗತಿಯನ್ನು ಬೇಡುತ್ತಿರುವುದು ಇಲ್ಲಿ ಸ್ಪಷ್ಟ.

ನಹಿ ಪ್ರಪಶ್ಯಾಮಿ ಮಮಾಪನುದ್ಯಾದ್ ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್      
ಅವಾಪ್ಯ ಭೂಮಾವಸಪತ್ನಮೃದ್ಧಂ ರಾಜ್ಯಂ ಸುರಾಣಾಮಪಿ ಚಾSಧಿಪತ್ಯಮ್           

ನ ಹಿ ಪ್ರಪಶ್ಯಾಮಿ ಮಮ ಅಪನುದ್ಯಾತ್ ಯತ್ ಶೋಕಮ್ ಉಚ್ಛೋಷಣಮ್ ಇಂದ್ರಿಯಾಣಾಮ್  
ಅವಾಪ್ಯ ಭೂಮೌ ಅಸಪತ್ನಮ್ ಋದ್ಧಮ್ ರಾಜ್ಯಮ್ ಸುರಾಣಾಮ್ ಅಪಿ ಚ ಆಧಿಪತ್ಯಮ್ - ಸತ್ಯ ಸಾರವನ್ನೆಲ್ಲ ಹೀರಿ ಬತ್ತಿಸಿಬಿಡಬಲ್ಲ ನನ್ನ ಈ ದುಗುಡವನ್ನು ದೂರೀಕರಿಸಬಲ್ಲ ದಾರಿಯನ್ನೆ ಕಾಣದವನಾಗಿದ್ದೇನೆ-ಹಗೆಗಳೇ ಇಲ್ಲದ, ಹುಲುಸಾದ ಇಡಿಯ ನೆಲದ ಒಡೆತನ ಪಡೆದರೂ, ಸಗ್ಗಿಗರ ಸಾಮ್ರಾಟನಾದರೂ ಕೂಡಾ.

“ನನ್ನ ಇಂದ್ರಿಯಗಳು ಸೊರಗಿ ಹೋಗುತ್ತಿವೆ. ನನ್ನ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ. ಭೂಮಿಯಲ್ಲಿ, ಸ್ವರ್ಗದಲ್ಲಿ ಪ್ರಭುತ್ವವನ್ನು ಪಡೆದರೂ ಕೂಡಾ ನಾನು ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ” ಎನ್ನುತ್ತಾನೆ ಅರ್ಜುನ.

ಸಂಜಯ ಉವಾಚ
ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪಃ 
ನ ಯೋತ್ಸ್ಯ ಇತಿ ಗೋವಿಂದಮುಕ್ತ್ವಾ ತೂಷ್ಣೀಂ ಬಭೂವ ಹ           

ಸಂಜಯ ಉವಾಚ -ಸಂಜಯ ಹೇಳಿದನು:
ಏವಮ್ ಉಕ್ತ್ವಾ ಹೃಷೀಕೇಶಮ್  ಗುಡಾಕೇಶಃ ಪರಂತಪಃ
ನ ಯೋತ್ಸ್ಯೇ ಇತಿ ಗೋವಿಂದಮ್ ಉಕ್ತ್ವಾ ತೂಷ್ಣೀಮ್  ಬಭೂವ ಹ- ಅರಿಗಳನ್ನು ತರಿದ, ನಿದ್ದೆಯನ್ನು ಗೆದ್ದ ಅರ್ಜುನ-ಇಂದ್ರಿಯಗಳ ಒಡೆಯನಾದ ಗೋವಿಂದನ ಬಳಿ ಹೀಗೆಂದು- ಮತ್ತೆ 'ನಾನು ಕಾದಲಾರೆ' ಎಂದು ಸುಮ್ಮನಾದನು!

ಸಂಜಯ ಯುದ್ಧಭೂಮಿಯಲ್ಲಿ ಅರ್ಜುನನನ ಸ್ಥಿತಿಯನ್ನು ಧೃತರಾಷ್ಟ್ರನಿಗೆ ವರ್ಣಿಸುತ್ತಾ, ಈ ರೀತಿ ಹೇಳುತ್ತಾನೆ:  "ಇಡೀ ಬ್ರಹ್ಮಾಂಡದಲ್ಲಿ ತುಂಬಿರುವ ನಮ್ಮ ಇಂದ್ರಿಯಗಳ ಸ್ವಾಮಿ  ಗೋವಿಂದನಲ್ಲಿ ನಿದ್ದೆಯನ್ನು ಗೆದ್ದ ಅರ್ಜುನ 'ನಾನು ಯುದ್ಧ ಮಾಡಲಾರೆ' ಎಂದು ಹೇಳಿ ಮೌನಿಯಾದ” ಎಂದು.

ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ    
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ      ೧೦

ತಮ್ ಉವಾಚ ಹೃಷೀಕೇಶಃ ಪ್ರಹಸನ್ ಇವ ಭಾರತ 
ಸೇನಯೋಃ ಉಭಯೋಃ  ಮಧ್ಯೇ ವಿಷೀದಂತಮ್ ಇದಮ್  ವಚಃ -ಓ ಭರತ ವಂಶದ ದೊರೆಯೆ, ಎರಡು ಪಡೆಗಳ ನಡುವೆ ತಳಮಳಗೊಂಡಿರುವ ಅವನನ್ನು ಕುರಿತು ಕೃಷ್ಣ ಮೆಲುನಗುತ್ತ ಈ ಮಾತು ನುಡಿದ.

ಅರ್ಜುನ ಸಂಪೂರ್ಣ ಶರಣಾಗಿ ತನ್ನಮುಂದೆ ಅಂಗಲಾಚಿ ನಿಂತಾಗ, ಶ್ರೀಕೃಷ್ಣ ನಸುನಗುತ್ತ ತನ್ನ ಮಾತನ್ನು ಆರಂಭಿಸುತ್ತಾನೆ.
ಇಲ್ಲಿ ಅರ್ಜುನ ಕೃಷ್ಣ ಹೇಳುವುದನ್ನು ಸ್ವೀಕರಿಸುವ ಹಂತವನ್ನು ತಲುಪಿದ್ದಾನೆ. ಆತನಲ್ಲಿ ಭಾವಾವೇಶ ಹೊರಟುಹೋಗಿ ಶರಾಣಗತಿ ಬಂದಿದೆ. ಭಗವಂತ ನಮಗೆ ಮಾರ್ಗದರ್ಶನ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತೊರೆದು, ಆತನಲ್ಲಿ ಸಂಪೂರ್ಣ ಶರಣಾಗಬೇಕು. ಆಗ ಖಂಡಿತ ನಮಗೆ ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಮಾಡುವ ಉಪದೇಶ ನಮ್ಮೆಲ್ಲರಿಗೆ ಆತ ಮಾಡಿದ ಉಪದೇಶ. ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ಕೃಷ್ಣನ ಉಪದೇಶವನ್ನು ಆಲಿಸೋಣ ಬನ್ನಿ.

No comments:

Post a Comment