Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, January 15, 2011

Bhagavad Gita Kannada Chapter-01_Shloka-31-32

ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ    
ನಚ ಶ್ರೇಯೋssನುಪಶ್ಯಾಮಿ ಹತ್ವಾ ಸ್ವಜನಮಾಹವೇ      ೩೧

ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ
ನಚ ಶ್ರೇಯಃ ಅನುಪಶ್ಯಾಮಿ ಹತ್ವಾ ಸ್ವಜನಮ್ ಆಹವೇ- ಕೇಶವ, ಕೆಟ್ಟ ಶಕುನಗಳನ್ನೇ ಕಾಣುತ್ತಿದ್ದೇನೆ. ಕದನದಲ್ಲಿ ನಮ್ಮ  ಮಂದಿಯನ್ನೆ ಕೊಂದು ಏನು ಒಳಿತೋ ತಿಳಿಯದು.

'ನಿಮಿತ್ತಗಳು' ಎಂದರೆ ಶಕುನಗಳು. ಇಲ್ಲಿ ಅರ್ಜುನ ಹಿಂದೆ ನಡೆದ ಕೆಲವು ಕೆಟ್ಟ ಶಕುನಗಳನ್ನು ನೆನಪಿಸಿಕೊಳ್ಳುತ್ತಾನೆ. ಈ ಶಕುನಗಳನ್ನು ಆತ ಯುದ್ಧ ಭೂಮಿಗೆ ಬರುವ ಮೊದಲೇ ಗಮನಿಸಿದ್ದ. ಆದರೆ ಆತನಿಗೆ ಅದು ಈಗ ನೆನಪಿಗೆ ಬರುತ್ತದೆ.
ಹಿಂದಿನವರು ಶಕುನಗಳಿಗೆ ಬಹಳ ಮಹತ್ವ ಕೊಡುತ್ತಿದ್ದರು. ಈ ಪ್ರಪಂಚದಲ್ಲಿ ಎಲ್ಲವೂ ಒಂದೊಕ್ಕೊಂದು ಬೆಸೆದುಕೊಂಡಿದೆ. ಒಂದು ಪರಮಾಣುವಿನಿಂದ ಹಿಡಿದು ಬ್ರಹ್ಮಾಂಡದ ತನಕ ಒಂದಕ್ಕೊಂದು ಸುಸಂಬದ್ಧವಾಗಿ ಎಲ್ಲವೂ ಗಣಿತಬದ್ಧ. ಈ ಕಾರಣದಿಂದ ಯಾವುದನ್ನು ಬೇಕಾದರೂ ಗಣಿತಬದ್ಧವಾಗಿ ಕಂಡುಕೊಳ್ಳಬಹುದು. ಇದೇ ಜ್ಯೋತಿಷ್ಯ, ಶಕುನ, ಪಂಚಾಗ ಇತ್ಯಾದಿ. ಇಲ್ಲಿ ಯಾವುದೂ ಆಕಸ್ಮಿಕವಲ್ಲ. ನಮಗೆ ತಿಳಿಯದಿದ್ದಾಗ ಮಾತ್ರ ಅದು ನಮಗೆ ಆಕಸ್ಮಿಕ.
ಮಹಾಭಾರತ ಕಾಲದಲ್ಲಿ ಕಂಡ ಕೆಲವು ಶಕುನಗಳನ್ನು ಇಲ್ಲಿ ನೋಡೋಣ: ಆನೆಗಳು, ಕುದುರೆಗಳು ಯುದ್ಧಕ್ಕೆ ಮೊದಲು ಕಣ್ಣೀರು ಸುರಿಸುತ್ತಿದ್ದವು. ನರಿಗಳು ಸೇನಾಪಡೆಯ ಸುತ್ತ ಊಳಿಡುತ್ತಿದ್ದವು. ಪ್ರಾಣಿಗಳಿಗೆ ರಕ್ತಪಾತದ ಹಾಗು ಸಾವಿನ ಮುನ್ಸೂಚನೆ ಇರುತ್ತದೆ. ಮುಂದೆ ನಡೆಯುವುದನ್ನು ಅವು ನಿಖರವಾಗಿ ಗ್ರಹಿಸಬಲ್ಲವು. ಇದು ಮಹಾಭಾರತ ಯುದ್ಧಕ್ಕೆ ಮೊದಲು ಕಂಡ ಒಂದು ಶಕುನ. ಇನ್ನು ಬ್ರಹ್ಮಾಂಡದಲ್ಲಿ ಹದಿಮೂರು ದಿನಗಳ ಅಂತರದಲ್ಲಿ ಎರಡು ಗ್ರಹಣ ಮಹಾಭಾರತ ಯುದ್ಧಕಾಲದಲ್ಲಿ ಘಟಿಸಿದೆ. ಯುದ್ಧ ಪ್ರಾರಂಭವಾಗಿ ಐದನೇ ದಿನಕ್ಕೆ ಒಂದು ಗ್ರಹಣ, ಪುನಃ ಹದಿಮೂರು ದಿನಗಳ ಅಂತರದಲ್ಲಿ ಇನ್ನೊಂದು ಗ್ರಹಣ. ಇದು ಮೃತ್ಯು  ಸೂಚಕ ಭೀಕರ ಶಕುನ. ಇದನ್ನು ವ್ಯಾಸರು ಮೊದಲೇ ಧೃತರಾಷ್ಟ್ರನಿಗೆ ತಿಳಿಸಿದ್ದರು. 'ಲೋಕಕಂಟಕನಾದ ನಿನ್ನ ಮಗನಿಂದ-ಲೋಕ ನಾಶವಾಗುತ್ತದೆ' ಎಂದು.
ಹೀಗೆ ಹಿಂದೆ ನಡೆದ ಶಕುನಗಳನ್ನು ನೆನಪಿಸಿದ ಅರ್ಜುನ, ಕೃಷ್ಣನನ್ನು 'ಕೇಶವ' ಎಂದು ಸಂಬೋಧಿಸುತ್ತಾನೆ. ಪ್ರಾರಂಭದಲ್ಲಿ 'ಕೃಷ್ಣ' ಎಂದು ಆತ ಸಂಬೋಧಿಸಿರುವುದನ್ನು ನಾವು ನೋಡಿದ್ದೇವೆ. ಕೃಷ್ಣ ಎಂದರೆ ಕೃಷಿ+ಣಃ -ಅಂದರೆ ಭೂಮಿಗೆ ಆನಂದವನ್ನು ಕೊಡಲು, ಬಲತುಂಬಲು ಬಂದವ ಎಂದರ್ಥ. ಕೇಶವ ಎಂದರೆ ಕಾ+ಈಶ+ವ. ಇಲ್ಲಿ 'ಕಾ' ಎಂದರೆ ಸೃಷ್ಟಿಗೆ ಕಾರಣವಾಗಿರುವ ಚತುರ್ಮುಖ ಬ್ರಹ್ಮ; 'ಈಶ' ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ; ಕೇಶವ ಎಂದರೆ  ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಪರಶಕ್ತಿ.
ಇಲ್ಲಿ ಅರ್ಜುನ ಕೃಷ್ಣನನ್ನು 'ಕೇಶವ' ಎಂದು ಸಂಬೋಧಿಸುತ್ತಿರುವುದಕ್ಕೆ ವಿಶೇಷ ಕಾರಣವಿದೆ. "ಭೂಮಿಗೆ ಆನಂದವನ್ನು, ತ್ರಾಣವನ್ನು ಕೊಡಲು ಇಳಿದುಬಂದ ಸೃಷ್ಟಿಕರ್ತನಾದ ನೀನೇ ಸಂಹಾರಕಾರಕನಾಗಿ, ಈ ಯುಗಾಂತದ ಮಹಾಯುದ್ಧದ ಸೂತ್ರದಾರಿಯಾಗಿ ಏಕೆ ನಿಂತೆ? ಏನು ನಿನ್ನ ಉದ್ದೇಶ?" ಎನ್ನುವುದು ಈ ವಿಶೇಷಣದ ಹಿಂದಿರುವ ಧ್ವನಿ. ಮಹಾಭಾರತ ಯುದ್ಧದ ಹದಿನೆಂಟನೆ ದಿನ ದ್ವಾಪರಯುಗ ಅಂತ್ಯವಾಗಿ ಕಲಿಯುಗ ಪ್ರಾರಂಭವಾದದ್ದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು. 
ಇಲ್ಲಿಂದ ಮುದುವರಿದು ಅರ್ಜುನ ತಾನು ಏಕೆ ಯುದ್ಧ ಮಾಡಬಾರದು ಎನ್ನಲು ಕೆಲವು ಕಾರಣಗಳನ್ನು ಕೊಡಲಾರಂಭಿಸುತ್ತಾನೆ. "ನಚ ಶ್ರೇಯಃ ಅನುಪಶ್ಯಾಮಿ ಹತ್ವಾ ಸ್ವಜನಮ್ ಆಹವೇ"-'ನಮ್ಮ ಬಂಧುಗಳನ್ನು ಕೊಲ್ಲುವುದರಿಂದ ನಮ್ಮ ಹೆಸರು ಇತಿಹಾಸದಲ್ಲಿ, ಮುಂದಿನ ಯುಗಗಳಲ್ಲಿ ಪ್ರಶಂಸನೀಯವಾಗಿ ಉಳಿಯುತ್ತದೆ ಎಂದು ನನಗೆ ಯಾವ ನೆಲೆಯಲ್ಲೂ ಅನಿಸುವುದಿಲ್ಲ' ಎನ್ನುತ್ತಾನೆ ಅರ್ಜುನ.

ನ ಕಾಂಕ್ಷೇ ವಿಜಯಂ ಕೃಷ್ಣ ನಚ ರಾಜ್ಯಂ ಸುಖಾನಿ ಚ    
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ  ೩೨

ನ ಕಾಂಕ್ಷೇ ವಿಜಯಮ್  ಕೃಷ್ಣ ನಚ ರಾಜ್ಯಮ್ ಸುಖಾನಿ ಚ
ಕಿಮ್  ನೋ ರಾಜ್ಯೇನ ಗೋವಿಂದ ಕಿಮ್  ಭೋಗೈ ಜೀವಿತೇನ ವಾ- ಕೃಷ್ಣ, ನಾನು ಗೆಲುವನ್ನು ಬಯಸುವುದಿಲ್ಲ; ಇಲ್ಲ ಅರಸೊತ್ತಿಗೆಯನ್ನು; ಸುಖಗಳನ್ನು ಕೂಡಾ. ಗೋವಿಂದ, ನಮಗೆ ದೊರೆತನದಿಂದೇನು?  ಐಷಾರಾಮಗಳಿಂದೇನು ? ಬದುಕಿಯಾದರೂ ಏನು ? 

ಅರ್ಜುನ ಧರ್ಮರಾಯನ ಪರ ಹೋರಾಟಕ್ಕೆ ನಿಂತವ. ಯುದ್ಧವನ್ನು ನಿಲ್ಲಿಸುವುದಾಗಲಿ ಅಥವಾ ನಿರ್ಣಯ  ತೆಗೆದುಕೊಳ್ಳುವುದಾಗಲಿ ಅದು ಕೊನೆಯದಾಗಿ ಧರ್ಮರಾಯನ ವಿವೇಚನೆಯಂತೇ ನಡೆಯಬೇಕು. ಇಲ್ಲಿ ಅರ್ಜುನ ತಾನೇ ನಿರ್ಣಾಯಕ ಎನ್ನುವಂತೆ ಮಾತನಾಡುತ್ತಾನೆ.  "ಯಾರಿಗೆ ಬೇಕಾಗಿದೆ ಈ ಗೆಲುವು ಕೃಷ್ಣ, ನನಗೆ ವಿಜಯ ಬೇಕಾಗಿಲ್ಲ, ನಾನು ಗುರುಹಿರಿಯರನ್ನು ಕೊಂದು, ಗೆಲುವನ್ನು ಬಯಸುವುದಿಲ್ಲ" ಎನ್ನುತ್ತಾನೆ. ಈ ಶ್ಲೋಕದಲ್ಲಿ ಆತ ಪುನಃ "ಕೃಷ್ಣ" ಎಂದು ಸಂಬೋಧಿಸುತ್ತಾನೆ. ಇಲ್ಲಿ "ಕೃಷ್ಣಃ" ಎಂದರೆ ಕರ್ಷಣೆ ಮಾಡುವವ. ತನ್ನ ಸೌಂದರ್ಯದಿಂದ  ಆಕರ್ಷಿಸಿ ಉತ್ಕರ್ಷಣೆ ಮಾಡುವವ ಎಂದರ್ಥ. "ಲೋಕದ ಆಕರ್ಷಣ ಶಕ್ತಿಯಾದ ನೀನು ನಮ್ಮನ್ನು, ಈ ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ಏಕೆ ಎಳೆದುತಂದೆ?" ಎನ್ನುವ ಭಾವಾರ್ಥದಲ್ಲಿ ಅರ್ಜುನ ಮಾತನಾಡುತ್ತಾನೆ.

ಇಲ್ಲಿಂದ ಮುಂದುವರೆದು ಹೇಳುತ್ತಾನೆ "ನಮಗೆ ಈ ರಾಜ್ಯ ಪಡೆದು ಏನಾಗಬೇಕಾಗಿದೆ. ಈ ರಾಜ್ಯವನ್ನು ಪಡೆದು, ಭೋಗವನ್ನು ಪಡೆದು ಏನು ಪ್ರಯೋಜನ ಗೋವಿಂದಾ?" ಎಂದು.  ಇಲ್ಲಿ ಅರ್ಜುನ ಭಗವಂತನನ್ನು "ಗೋವಿಂದಃ" ಎಂದು ಸಂಬೋಧಿಸುತ್ತಾನೆ. ಗೋವಿಂದ ಎಂದರೆ ವೇದವನ್ನು ಪಡೆದವನು, ವೇದಗಳಿಂದ ವಾಚ್ಯನಾದವನು, ವೇದಗಳ ಸಮಗ್ರ ಅರ್ಥ ತಿಳಿದವನು, ಭೂಮಿಗಿಳಿದು ಬಂದವನು, ಗೋವುಗಳನ್ನು ಕಾಯ್ದವನು ಇತ್ಯಾದಿ.  ಕೃಷ್ಣ ಎಷ್ಟೋ ದುಷ್ಟ ರಾಕ್ಷಸರ ಹಾಗು ರಾಜರ ಸಂಹಾರ ಮಾಡಿದವ. ಆದರೆ ಎಲ್ಲಿಯೂ ಸಿಂಹಾಸನವೇರಿ ಅರಸೊತ್ತಿಗೆ ಮಾಡಿರಲಿಲ್ಲ. ಗೋಪಾಲಕರ ಜೊತೆಗೆ ಸೇರಿ ಗೋವುಗಳನ್ನು ಕಾಯ್ದವ ಆತ. ಇಲ್ಲಿ ಅರ್ಜುನ "ನಿನ್ನಂತೆ ನನಗೆ ಯಾವುದೇ ಸಿಂಹಾಸನವೇರುವ ಆಸೆ ಇಲ್ಲ" ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾನೆ.  "ಭೂಮಿಗಿಳಿದು ಬಂದ ನೀನು ನನ್ನನ್ನೇಕೆ ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಿ? " ಎನ್ನುವ ಭಾವದಲ್ಲಿ ಆತ ಭಗವಂತನನ್ನು 'ಗೋವಿಂದ' ಎಂದು ಸಂಬೋಧಿಸಿದ್ದಾನೆ.

No comments:

Post a Comment