Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, January 15, 2011

Bhagavad gita Kannada Chapter-01 Shloka- 33-36

ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ 
ತ ಇಮೇವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ  ೩೩

ಯೇಷಾಮ್ ಅರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ
ತೇ  ಇಮೇ ಅವಸ್ಥಿತಾ ಯುದ್ಧೇ ಪ್ರಾಣಾನ್ ತ್ಯಕ್ತ್ವಾ ಧನಾನಿ ಚ-ಯಾರಿಗಾಗಿ ಅರೆಸೋತ್ತಿಗೆ? ಸುಖ-ಭೋಗಕ್ಕಾಗಿ ಇವರು ಹರಣದ ಮತ್ತು ಹಣದ ಹಂಗು ತೊರೆದು ಕಾಳಗದ ಕಣದಲ್ಲಿ ನಿಂತಿದ್ದಾರೆ.

ಒಂದು ವೇಳೆ ಈ ರಾಜಭೋಗ ಬೇಕಿದ್ದರೆ ಅದು ಯಾರಿಗೋಸ್ಕರ? ನಮ್ಮೆಲ್ಲ ಗುರು ಹಿರಿಯರ ಮಧ್ಯ, ಸಂತೋಷದಿಂದ ನಾವಿರಬೇಕು. ಅವರನ್ನೆಲ್ಲಾ ಕೊಂದು ನಾವೇನು ಸಂತೋಷಪಡುವುದು? ಯಾರಿಗೋಸ್ಕರ ಈ ಜೀವನದ ಸುಖವನ್ನು ಸಾಮ್ರಾಜ್ಯವನ್ನು ಬಯಸುತ್ತಿದ್ದೆವೋ, ಅವರೆಲ್ಲರೂ ಪ್ರಾಣದ ಹಂಗನ್ನು ತೊರೆದು, ಸರ್ವಸ್ವವನ್ನೂ ಕಳೆದುಕೊಳ್ಳಲು ಸಿದ್ಧರಾಗಿ ನಮ್ಮೆದುರು ಯುದ್ಧಕ್ಕೆ ನಿಂತಿದ್ದಾರೆ.

ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ   
ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಸ್ತಥಾ ೩೪

 ಆಚಾರ್ಯಾಃ ಪಿತರಃ ಪುತ್ರಾಃ  ತಥಾ ಏವ  ಚ ಪಿತಾಮಹಾಃ
ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಃ ತಥಾ-ಗುರುಗಳು, ತಂದೆ ತಾಯಿಯಂತಿರುವವರು, ಮಕ್ಕಳು.  ಅಂತೆಯೇ ಅಜ್ಜಂದಿರು, ಮಾವಂದಿರು, ಸೋದರ ಮಾವಂದಿರು, ಮೊಮ್ಮಕ್ಕಳು, ಮೈದುನಂದಿರು ಮತ್ತು ನೆಂಟರಿಷ್ಟರು.

ಅರ್ಜುನ ತನ್ನ ಬಂಧುಗಳನ್ನು, ಕುಟುಂಬದ ಸದಸ್ಯರ ಪಟ್ಟಿಯನ್ನು ಕೃಷ್ಣನ ಮುಂದೆ ಹೇಳಿಕೊಳ್ಳುತ್ತಾನೆ. ಗುರುಗಳು, ಪಿತೃಸಮಾನರು, ಮಕ್ಕಳು, ಅಜ್ಜಂದಿರು, ಮಾವಂದಿರು, ಹೆಣ್ಣು ಕೊಟ್ಟ ಮಾವಂದಿರು, ಮೊಮ್ಮಕ್ಕಳು, ಹೆಂಡತಿಯ ಅಣ್ಣ-ತಮ್ಮಂದಿರು ಮತ್ತು ನೆಂಟರಿಷ್ಟರು. ಹೀಗೆ ಕೇವಲ ತನ್ನ ಸಂಬಂಧಿಗಳ ಪಟ್ಟಿ ಕೊಡುತ್ತಿರುವ ಅರ್ಜುನ ತನ್ನ ಸಾಮಾಜಿಕ ಕರ್ತವ್ಯ ಮರೆತು ವೈಯಕ್ತಿಕವಾಗಿ ಮಾತನಾಡುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.
ಏತಾನ್ ಹಂತುಮಿಚ್ಛಾಮಿ ಘ್ನತೋsಪಿ ಮಧುಸೂದನ
ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ    ೩೫

ಏತಾನ್ ನ  ಹಂತುಮ್ ಇಚ್ಛಾಮಿ ಘ್ನತಃ  ಅಪಿ ಮಧುಸೂದನ
ಅಪಿ ತ್ರೈಲೋಕ್ಯ ರಾಜ್ಯಸ್ಯ ಹೇತೋಃ ಕಿಮ್  ನು ಮಹೀ ಕೃತೇ- ಓ ಮಧುಸೂದನ, ನನ್ನನ್ನು ಕೊಲ್ಲಬಂದರೂ ನಾನಿವರನ್ನು ಕೊಲ್ಲಬಯಸೆ. ಮೂರು ಲೋಕದ ದೊರೆತನಕ್ಕಾಗಿ ಕೂಡಾ. ಇನ್ನು  ಭೂಮಿಯ ಮಾತೇನು?

ನನಗೆ ಇವರನ್ನು ಕೊಲ್ಲುವ ಬಯಕೆ ಇಲ್ಲ. ಒಂದು ವೇಳೆ ಅವರು ನನ್ನನ್ನು ಕೊಲ್ಲ ಬಂದರೂ ಕೂಡಾ ನಾನವರನ್ನು ಕೊಲ್ಲಲಾರೆ. ಇಡೀ ಬ್ರಹ್ಮಾಂಡದ ಒಡೆತನ ಸಿಗುತ್ತದೆ ಎಂದರೂ ಕೂಡಾ ನಾನು ಯುದ್ಧ ಮಾಡಲಾರೆ. ಅಂಥದ್ದರಲ್ಲಿ ಈ ತುಂಡು ಭೂಮಿಗಾಗಿ ಏಕೆ ಯುದ್ಧ?
ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು 'ಮಧುಸೂದನ' ಎಂದು ಸಂಬೋಧಿಸಿದ್ದಾನೆ. ಮಧು ಎಂದರೆ ಆನಂದ.  ಮಧುಸೂದನ ಎಂದರೆ ಆನಂದ ನಾಶಕ. ಧರ್ಮ ಮಾರ್ಗವನ್ನು ಬಿಟ್ಟು, ಅಧರ್ಮಿಯಾಗಿ, ಮದ(ಆಹಂಕಾರ)ದಿಂದ ಸಾಗುವವರ ಆನಂದವನ್ನು ನಾಶ ಮಾಡಿ, ಸಜ್ಜನರ ಉದ್ಧಾರ  ಮಾಡುವ ಆನಂದರೂಪಿ ಭಗವಂತ ಮಧುಸೂದನ. “ಸಾತ್ವಿಕರಿಗೆ  ಆನಂದವನ್ನು ಕೊಟ್ಟು ತಾಮಸಿಗಳ ಆನಂದ ಹರಣ ಮಾಡುವ ನೀನು ಏನು ಮಾಡಲು ಬಂದವ?” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. “ಯುದ್ಧ ಮಾಡಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ”  ಎಂದು ಅರ್ಜುನ ತನ್ನ  ತುಮುಲವನ್ನು ಕೃಷ್ಣನಲ್ಲಿ ವ್ಯಕ್ತಪಡಿಸುತ್ತಾನೆ.


ನಿಹತ್ಯ ಧಾರ್ತರಾಷ್ಟ್ರಾನ್ ನಃ  ಕಾ ಪ್ರೀತಿಃ ಸ್ಯಾಜ್ಜನಾರ್ದನ   
ಪಾಪಮೇವಾsಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ    ೩೬
 
ನಿಹತ್ಯ ಧಾರ್ತರಾಷ್ಟ್ರಾನ್ ನಃ  ಕಾ ಪ್ರೀತಿಃ ಸ್ಯಾತ್ ಜನಾರ್ದನ
ಪಾಪಮ್ ಏವ ಆಶ್ರಯೇತ್ ಅಸ್ಮಾನ್ ಹತ್ವಾ ಏತಾನ್  ಆತತಾಯಿನಃ -ಧಾರ್ತರಾಷ್ಟ್ರರನ್ನು ಕೊಂದು ನಮಗಾದರೂ ಏನು ಸುಖವುಂಟು ಜನಾರ್ದನ? ಈ ಕುಲಗೇಡಿಗಳನ್ನು ಕೊಂದರೆ ನಮಗೆ ಪಾಪವೇ ತಟ್ಟೀತು.

ಒಂದು ವೇಳೆ ಧಾರ್ತರಾಷ್ಟ್ರರನ್ನು ಕೊಂದರೆ ನಮಗೆ ಆನಂದವೇನು ? ಅದರಿಂದ ಸಾಯುವ ತನಕ ನಿರಂತರ ಪಾಪಪ್ರಜ್ಞೆ ನಮ್ಮನ್ನು ಕಾಡಬಹುದು. ಇವರನ್ನು ಕೊಂದು ಪಾಪಪ್ರಜ್ಞೆಯಿಂದ ಬದುಕಬೇಕೇ ಹೊರತು ಇನ್ನೇನೂ ಲಾಭವಿಲ್ಲ.

ಈ ಶ್ಲೋಕದಲ್ಲಿ ಅರ್ಜುನ "ಆತತಾಯಿ" ಎನ್ನುವ ಪದವನ್ನು ಬಳಸಿದ್ದಾನೆ. ಆತತಾಯಿ ಎಂದರೆ ಇನ್ನೊಬ್ಬರ ಮನೆಗೆ ಬೆಂಕಿ ಹಾಕುವವ, ಇನ್ನೊಬ್ಬರ ಆಹಾರಕ್ಕೆ ವಿಷ ಬೆರೆಸಿ ಕೊಡುವವ, ಇನ್ನೊಬ್ಬರ ಆಸ್ತಿಯನ್ನು ಲಪಟಾಯಿಸುವವ, ಪರ ಸ್ತ್ರೀಯರ ಮೇಲೆ ಕೈ ಹಾಕುವವ ಇತ್ಯಾದಿ. ಶಾಸ್ತ್ರ  'ಆತತಾಯಿನರನ್ನು' ಕಂಡಲ್ಲಿ ಹೊಡೆದು ಸಾಯಿಸು ಎನ್ನುತ್ತದೆ. ಇಲ್ಲಿ ದುರ್ಯೋಧನ ಮೇಲಿನ ಎಲ್ಲಾ ಕೆಟ್ಟ ಕೆಲಸವನ್ನೂ ಮಾಡಿದ್ದ. ಭೀಮನಿಗೆ ವಿಷ ಸೇರಿಸಿ ಕೊಟ್ಟಿದ್ದ, ದ್ರೌಪದಿ ವಸ್ತ್ರಾಪಹರಣ ಮಾಡಿದ್ದ, ಪಾಂಡವರಿದ್ದ ಅರಗಿನ ಮನೆಗೆ ಬೆಂಕಿ ಇಟ್ಟಿದ್ದ. ಆದರೆ ಇಲ್ಲಿ ಅರ್ಜುನನಿಗೆ ಬಂಧು ಪ್ರೇಮ ಎಲ್ಲಿಯವರೆಗೆ ಕಾಡುತ್ತಿದೆ ಎಂದರೆ: “ಇವರೆಲ್ಲರೂ ಆತತಾಯಿನರಾದರೂ ಕೂಡಾ, ನನ್ನ ದೊಡ್ಡಪ್ಪನ ಮಕ್ಕಳಲ್ಲವೇ? ಎಂದು ಕೃಷ್ಣನಲ್ಲಿ ಪರಿತಪಿಸುತ್ತಾನೆ.
ಈ ಶ್ಲೋಕದಲ್ಲಿ ಅರ್ಜುನ ಶ್ರೀಕೃಷ್ಣನನ್ನು ‘ಜನಾರ್ದನ’ ಎಂದು ಸಂಬೋಧಿಸಿದ್ದಾನೆ. ಜನಾರ್ದನ ಎಂದರೆ ದುರ್ಜನ ಸಂಹಾರಕ ಹಾಗು ಸಜ್ಜನರಿಗೆ ಮುಂದೆ ಹುಟ್ಟಿಲ್ಲದ ಮೊಕ್ಷಪ್ರದವಾದ ಸಾವನ್ನು ಕೊಡುವವ. "ಮೋಕ್ಷಪ್ರದನಾದ ನೀನು ಮತ್ತೆ ಪುನಃ ಈ ಹುಟ್ಟು-ಸಾವಿನ ಚಕ್ರದಲ್ಲಿ ಬರುವ ಈ ಯುದ್ಧದಲ್ಲಿ ನಮ್ಮನ್ನು ಏಕೆ ತೊಡಗಿಸುತ್ತಿರುವೆ?  ಯುದ್ಧ ಎಂದೂ ಮೊಕ್ಷಪ್ರದವಲ್ಲ, ಅದು ಸೇಡು-ದ್ವೇಷದಿಂದ ಕೂಡಿರುತ್ತದೆ. ಹಾಗಿರುವಾಗ ಈ ಯುದ್ಧ ಏಕೆ?” ಎನ್ನುವುದು ಈ ಸಂಬೋಧನೆಯ ಹಿಂದಿರುವ ಧ್ವನಿ.

No comments:

Post a Comment