Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, November 16, 2014

Bhagavad Gita Kannada Chapter-01_Shloka-28-30


ಅರ್ಜುನ ಉವಾಚ
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್   ೨೮
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ 
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ                       ೨೯

ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ
ನಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ                       ೩೦

ಅರ್ಜುನ ಹೇಳುತ್ತಾನೆ: "ಇಲ್ಲಿ ನೆರೆದ ನನ್ನ ಹಿರಿಯ ಬಂಧುಗಳನ್ನು ನೋಡಿದಾಗ ನನ್ನ ಅಂಗಾಂಗಗಳು ಮುದುಡುತ್ತಿವೆ. ನಾವು ಪರಸ್ಪರ ಸ್ನೇಹಪೂರ್ವಕವಾಗಿ ಬದುಕಬೇಕಾದವರು ಇಂದು ಈ ರಣರಂಗದಲ್ಲಿ ಎದುರುಬದುರಾಗಿ ಹೊಡೆದಾಡಿಕೊಳ್ಳಲು ನಿಂತಿರುವುದನ್ನು ಕಂಡು ನನ್ನ ಮುಖ ನಾಚಿಕೆಯಿಂದ ಬಾಡುತ್ತಿದೆ. ತಿಳುವಳಿಕೆಯುಳ್ಳ ನಾವೇ ಇಂತಹ ಅಸಹ್ಯ ಕೆಲಸಕ್ಕೆ ಇಳಿದುಬಿಟ್ಟೆವಲ್ಲಾ. ಈ ತೀರ್ಮಾನವನ್ನು ನಾವೇ ಮಾಡಿ ಅದಕ್ಕೆ ನಾವೇ ಬದ್ಧರಾಗಿ ರಣರಂಗದಲ್ಲಿ ನಿಂತಿದ್ದೇವಲ್ಲ. ನಮ್ಮವರನ್ನು ನೋಡಿ ಮೈ ಮುದುಡುತ್ತಿದೆ. ಮುಖ ಒಣಗಿ ಮಾತನಾಡಲು ಆಗುತ್ತಿಲ್ಲ, ಮೈಯ ರೋಮಗಳೆಲ್ಲವೂ ನಿಮಿರಿ ನಿಂತಿವೆ. ಎಷ್ಟು ಕೆಳಮಟ್ಟಕ್ಕಿಳಿದೆವು ನಾವು? ಇವೆಲ್ಲವನ್ನು ಯೋಚಿಸಿದರೆ ನಡುಕ ಬರುತ್ತದೆ" ಎನ್ನುತ್ತಾನೆ. ಇಲ್ಲಿ ಅರ್ಜುನನ ಮಾತಿನಲ್ಲಿ  ಮೊದಲು ಅನುಕಂಪ, ಅದರಿಂದ ಲಜ್ಜೆ, ಅದರಿಂದ ಭಯ, ಅದರಿಂದ ವಿಸ್ಮಯ ವ್ಯಕ್ತವಾಗಿರುವುದನ್ನು ನಾವು ಕಾಣುತ್ತೇವೆ.

ಒಬ್ಬ ವ್ಯಕ್ತಿ ತನ್ನ ಆತ್ಮ ವಿಶ್ವಾಸವನ್ನು ಕಳೆದುಕೊಂಡಾಗ ಆತನ ಅಂತರಂಗದ ಅನುಭವ ದೈಹಿಕವಾಗಿ ಹೇಗೆ ಹೊರಹೊಮ್ಮುತ್ತದೆ ಎನ್ನುವುದನ್ನು ನಾವಿಲ್ಲಿ ಕಾಣಬಹುದು. ಆತ್ಮವಿಶ್ವಾಸವಿರದ ವ್ಯಕ್ತಿ ತನ್ನ ಮುಷ್ಠಿ ಬಿಗಿ ಹಿಡಿಯಲಾರ. ಇಲ್ಲಿ ಅರ್ಜುನನ ಸ್ಥಿತಿ ಕೂಡಾ ಹಾಗೇ ಆಗಿದೆ. ಆತ ಹೇಳುತ್ತಾನೆ: "ಗಾಂಡೀವ ನನ್ನ ಕೈಯಿಂದ ಜಾರುತ್ತಿದೆ, ಇಡೀ ಮೈ ಉರಿ ಎದ್ದ ಹಾಗೆ ಸಂಕಟವಾಗುತ್ತಿದೆ" ಎಂದು.  ಇದು ಒಳಗಿನ ಭಾವದ, ತುಮುಲದ ಅಭಿವ್ಯಕ್ತಿ. ಒಮ್ಮೆ ಮನಸ್ಸು ಸ್ಥಿರವಿಲ್ಲದಿದ್ದರೆ ದೇಹಕೂಡಾ ಸ್ಥಿರವಿರಲಾರದು. ಅದೇ ರೀತಿ ದೇಹ ಸ್ಥಿರವಿಲ್ಲದಿದ್ದರೆ ಮನಸ್ಸನ್ನು ಸ್ಥಿರಗೊಳಿಸುವುದು ಸಾಧ್ಯವಿಲ್ಲ. ಇಲ್ಲಿ ಗೊಂದಲಮಯ ಮನಸ್ಸಿನಿಂದ ಕೂಡಿದ ಅರ್ಜುನನ ಸ್ಥಿತಿ ಕೂಡಾ ಹೀಗೇ ಆಗಿದೆ.  "ಈ ರಥದಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ಮನಸ್ಸು ಗೊಂದಲಮಯವಾಗಿದೆ" ಎಂದು ಕೃಷ್ಣನಲ್ಲಿ ಅರ್ಜುನ ಪರಿತಪಿಸುತ್ತಾನೆ.

Sunday, November 9, 2014

Bhagavad Gita Kannada Chapter-01_Shloka-26-27

ತತ್ರಾಪಶ್ಯತ್ ಸ್ಥಿತಾನ್ ಪಾರ್ಥಃ ಪಿತೄನಥ ಪಿತಾಮಹಾನ್
ಆಚಾರ್ಯಾನ್ಮಾತುಲಾನ್ ಭ್ರಾತೄನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ೨೬
ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ

ಶ್ರೀಕೃಷ್ಣ ರಥವನ್ನು ಅರ್ಜುನನ ಆತ್ಮೀಯ ಬಂಧುಗಳ ಎದುರು ನಿಲ್ಲಿಸಿದ್ದರಿಂದ ಅಲ್ಲಿ ನೆರೆದ ಎಲ್ಲರನ್ನೂ, ಮುಖ್ಯವಾಗಿ ಬಂಧುಗಳನ್ನು ಅರ್ಜುನ ನೋಡುವಂತಾತ್ತದೆ.  ಇಷ್ಟು ಹೊತ್ತು ಜಂಭದ ಮಾತನಾಡಿದ ಆತನಿಗೆ ಈಗ ತನ್ನೆದುರಿಗೆ ನಿಂತ ತಂದೆ ಸಮಾನರು, ಅಜ್ಜಂದಿರು, ವಿದ್ಯೆ ಕೊಟ್ಟ ಆಚಾರ್ಯರು, ಸೋದರಮಾವಂದಿರು, ಅಣ್ಣತಮ್ಮಂದಿರು, ಮಕ್ಕಳು, ಮೊಮ್ಮೊಕ್ಕಳು, ಸ್ನೇಹ ಸಂಗಾತಿಗಳು, ಮಾವಂದಿರು, ಹಿತೈಷಿಗಳು, ಹೀಗೆ ಎಲ್ಲರೂ ಎರಡೂ ಕಡೆಗಳಲ್ಲಿ ಕಾಣಿಸಿದಾಗ ದುಃಖವಾಗುತ್ತದೆ.
ಇಲ್ಲಿ ‘ಪಿತೄನ್’  ಎಂದರೆ ತೀರ್ಥರೂಪ ಸಮಾನರಾದವರು ಅಥವಾ ದೊಡ್ಡಪ್ಪ-ಚಿಕ್ಕಪ್ಪಂದಿರರು ಎಂದರ್ಥ. ಈ ಸ್ಥಾನದಲ್ಲಿರುವ ಹತ್ತಿರದದ ಸಂಬಂಧಿಗಳು ಎಂದರೆ ಧೃತರಾಷ್ಟ್ರ ಮತ್ತು ವಿದುರ. ಆದರೆ ಅವರು ಯುದ್ಧದಲ್ಲಿ ಭಾಗವಹಿಸಿರಲಿಲ್ಲ. ಈ ಸ್ಥಾನದಲ್ಲಿದ್ದು ಯುದ್ಧದಲ್ಲಿ ಭಾಗವಹಿಸಿದ ಇತರ ಮೂರು ಜನರನ್ನು ನಾವು ಮಹಾಭಾರತದಲ್ಲಿ ಕಾಣಬಹುದು.  ಅವರೆಂದರೆ: ಸೋಮದತ್ತನ ಮಕ್ಕಳಾದ ಭೂರಿ, ಭೂರಿಶ್ರವಸ್ಸು ಮತ್ತು ಶಲ. ಅದೇ ರೀತಿ ಅಜ್ಜ ಮುತ್ತಜ್ಜರ ಸ್ಥಾನದಲ್ಲಿದ್ದು ಯುದ್ದದಲ್ಲಿ ಭಾಗವಹಿಸಿದವರು:  ಭೀಷ್ಮ, ಸೋಮದತ್ತ ಮತ್ತು  ಶಂತನುವಿನ ಸಹೋದರ ಬಾಹ್ಲಿಕ. ಇದಲ್ಲದೆ ಈ ಹಿಂದೆ ಹೇಳಿದಂತೆ ಮೂರು ಮಂದಿ ಆಚಾರ್ಯರು(ದ್ರೋಣ, ಅಶ್ವತ್ಥಾಮ, ಕೃಪಾ) ಕೌರವರ ಕಡೆಯಿಂದ ಯುದ್ಧಭೂಮಿಯಲ್ಲಿದ್ದರು. ಇವರನ್ನೇ ಇಲ್ಲಿ  ‘ಪಿತೄನ್’, ಪಿತಾಮಹಾನ್, ಆಚಾರ್ಯಾನ್’ ಎಂದು ಅರ್ಜುನ ಸಂಬೋಧಿಸಿರಬೇಕು.
ಮಾತುಲಾನ್’ ಎಂದರೆ ಸೋದರಮಾವಂದಿರರು. ಕುಂತಿಯ ಸೋದರರಾದ ಪುರುಜಿತ್ ಮತ್ತು ಕುಂತಿಭೋಜ,  ಮಾದ್ರಿಯ ಸೋದರ ಶಲ್ಯ, ಗಾಂಧಾರಿಯ ಸೋದರ ಶಕುನಿ ಮತ್ತವನ ತಮ್ಮಂದಿರರು ಯುದ್ಧಭೂಮಿಯಲ್ಲಿದ್ದ ಅರ್ಜುನನ ಸೋದರಮಾವಂದಿರರಾಗಿದ್ದರು.  ‘ಭ್ರಾತೄನ್ ‘ ಎಂದರೆ  ಸೋದರರು.  ನಾಲ್ಕು ಮಂದಿ ಪಾಂಡವರ ಜೊತೆಗೆ  ನೂರುಮಂದಿ  ಕೌರವರೂ ಅರ್ಜುನನಿಗೆ ಸೋದರರು.
ಪುತ್ರರು(ಪುತ್ರಾನ್): ಧರ್ಮರಾಜನಿಗೆ ದ್ರೌಪದಿಯಿಂದ ಹುಟ್ಟಿದ ‘ಪ್ರತಿವಿಂಧ್ಯ’ ಮತ್ತು ಚೇದಿರಾಜ ಶಿಶುಪಾಲನ ಮಗಳು ಚೈದ್ಯಾ ದೇವಕಿಯಿಂದ ಹುಟ್ಟಿದ ‘ಸುಹೋತ್ರ’ ಎನ್ನುವ ಇಬ್ಬರು ಮಕ್ಕಳಿದ್ದರು. ಭೀಮನಿಗೆ ದ್ರೌಪದಿಯಿಂದ ‘ಸುತಸೋಮ’; ಕಾಶಿರಾಜನ ಮಗಳು ಕಾಳಿಯಿಂದ ‘ಶರ್ವತ್ರಾತ’; ಬಲರಾಮನ ತಂಗಿ ದೇವಿಯಿಂದ ‘ಸರ್ವೋತ್ತುಂಗ’ ಮತ್ತು ಹಿಡಿಂಬೆಯಿಂದ ‘ಘಟೋತ್ಕಚ’ ಎನ್ನುವ ನಾಲ್ಕು ಮಂದಿ ಮಕ್ಕಳಿದ್ದರು. ಅರ್ಜುನನಿಗೆ ದ್ರೌಪದಿಯಿಂದ ‘ಶ್ರುತಕೀರ್ತಿ’; ಸುಭದ್ರೆಯಿಂದ ‘ಅಭಿಮನ್ಯು’; ಉಲೂಪಿಯಿಂದ ‘ಇರಾವಂತ’ ಎನ್ನುವ ಮೂರು ಮಂದಿ ಮಕ್ಕಳಿದ್ದರು. ಇದಲ್ಲದೆ ಚಿತ್ರಾಂಗದೆಯಿಂದ ‘ಬಭ್ರುವಾಹನ’ನೆನ್ನುವ ಇನ್ನೊಬ್ಬ ಮಗನಿದ್ದ. ಆದರೆ ಪ್ರಾಯಪ್ರಭುದ್ದನಲ್ಲದ ಆತ ಯುದ್ಧದಲ್ಲಿ ಪಾಲ್ಗೊಂಡಿರಲಿಲ್ಲ.  ನಕುಲನಿಗೆ ದ್ರೌಪದಿಯಿಂದ ‘ಶತಾನೀಕ’ ಮತ್ತು ಶಲ್ಯನ ಮಗಳು ಮಾದ್ರಿಯಿಂದ  ‘ನಿರಮಿತ್ರ’ ಎನ್ನುವ ಇಬ್ಬರು ಮಕ್ಕಳಿದ್ದರು. ಸಹದೇವನಿಗೆ ದ್ರೌಪದಿಯಿಂದ ‘ಶ್ರುತಕರ್ಮ’ ಮತ್ತು ಮಗಧರಾಜನ ಮಗಳು ಮಾಗಧಿಯಿಂದ ‘ಯೌಧೇಯ’ ಎನ್ನುವ ಇಬ್ಬರು ಮಕ್ಕಳಿದ್ದರು. ಇದೇ ರೀತಿ ದುರ್ಯೋಧನನ ಮಗ ‘ಲಕ್ಷಣ’ ಮತ್ತು ದುಃಶಾಸನನ ಮಗನ (ಈತನನ್ನು ಗ್ರಂಥಗಳಲ್ಲಿ  ‘ದೌಃಶಾಸನಿ’ ಎಂದಷ್ಟೇ ಹೇಳಲಾಗಿದೆ ) ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖ ಕಾಣಬಹುದು. ಇವರಲ್ಲದೇ ಇತರ ಪುತ್ರರೂ ಯುದ್ಧದಲ್ಲಿ ಪಾಲ್ಗೊಂಡಿದ್ದಿರಬಹುದು. ಅವರೆಲ್ಲರನ್ನೂ ಇಲ್ಲಿ ‘ಪುತ್ರಾನ್’ ಎಂದು ಸಂಬೋಧಿಸಲಾಗಿದೆ.
ಇಲ್ಲಿ ಮೊಮ್ಮಕ್ಕಳ ಬಗ್ಗೆಯೂ ಅರ್ಜುನ ಮರಗುವುದನ್ನು ನಾವು ಕಾಣುತ್ತೇವೆ.  ಭೀಮನ ಮಗ ಘಟೋತ್ಕಚನ ಪುತ್ರ ‘ನಿಷ್ಟ್ಯ’ನನ್ನು ಬಿಟ್ಟರೆ ಇನ್ನ್ಯಾವ ಮೊಮ್ಮೊಕ್ಕಳ ಉಲ್ಲೇಖ ಗ್ರಂಥಗಳಲ್ಲಿ ಸಿಗುವುದಿಲ್ಲವಾದರೂ ಕೂಡಾ ನೂರು ಮಂದಿ ಕೌರವರಲ್ಲಿ ಅನೇಕರಿಗೆ ಮೊಮ್ಮಕ್ಕಳಿದ್ದಿರಬಹುದು. [ಮಹಾಭಾರತ ಯುದ್ಧ ನಡೆದಾಗ ಧರ್ಮರಾಯನಿಗೆ ೭೨ ವರ್ಷ, ಭೀಮನಿಗೆ ೭೧ ವರ್ಷ, ಅರ್ಜುನನಿಗೆ ೭೦ ಮತ್ತು ನಕುಲ-ಸಹದೇವರಿಗೆ ಸುಮಾರು ೬೯ ವರ್ಷ ವಯಸ್ಸಾಗಿತ್ತು. ದುರ್ಯೋಧನ ಭೀಮನಿಗಿಂತ ಒಂದು ದಿನ ಅಂತರದಲ್ಲಿ ಹುಟ್ಟಿದವ. ಹೀಗಾಗಿ ಕೌರವರಲ್ಲಿ ಅನೇಕರಿಗೆ ಮೊಮ್ಮಕ್ಕಳು ಇರುವ ಸಾಧ್ಯತೆ ಇದೆ].
ಶ್ವಶುರಾನ್’ ಎಂದರೆ ಹೆಣ್ಣುಕೊಟ್ಟ ಮಾವಂದಿರರು. ಯುದ್ಧದಲ್ಲಿ ಪಾಲ್ಗೊಂಡವರಲ್ಲಿ ಪಾಂಡವರ ಮಾವ ದ್ರುಪದ,  ಭೀಮನ ಮಾವ ಕಾಶಿರಾಜ, ದುಃಶಾಸನನ ಮಾವ ಕಳಿಂಗರಾಜ ಈ ಮೂವರ ಉಲ್ಲೇಖ ಗ್ರಂಥಗಳಲ್ಲಿ ಕಾಣುತ್ತೇವೆ. ಇದಲ್ಲದೆ ಸಖಿಗಳು(ಒಡನಾಡಿಗಳು) ಮತ್ತು ಸುಹೃತ್ತುಗಳು(ಸ್ನೇಹಿತರು,ಸಹೃದಯರು, ಸಮಾನಭಿಪ್ರಾಯ ಉಳ್ಳವರು) ಅನೇಕ ಮಂದಿ ಯುದ್ಧದಲ್ಲಿ ಪಾಲ್ಗೊಂಡಿದ್ದರು.
ಎಚ್ಚರದಿಂದ ಈ ಶ್ಲೋಕವನ್ನು ಗಮನಿಸಿದರೆ: ಅರ್ಜುನನಿಗೆ ಯುದ್ಧರಂಗದಲ್ಲಿ ಸೇರಿದ ಹದಿನೆಂಟು ಅಕ್ಷೋಹಿಣಿ ಸೇನೆಯಲ್ಲಿ ಅನೇಕ ಮಂದಿ ಪ್ರಮುಖರಿದ್ದರೂ ಕೂಡಾ ಅಲ್ಲಿ ಕಾಣಿಸಿದ್ದು ಕೇವಲ ಗುರು ಹಿರಿಯರು, ಬಂಧುಗಳು ಮತ್ತು ಆತ್ಮೀಯರು ಮಾತ್ರ. ಅಥವಾ ಆತನಿಗೆ ಎಲ್ಲೆಲ್ಲೂ ತನ್ನ ಆತ್ಮೀಯರೇ ಕಾಣಿಸಿದ್ದಾರೆ. ಹೀಗಾಗಿ ಇಲ್ಲಿ ಆತನಿಗೆ ಬಂಧು ಪ್ರೇಮ ಎಚ್ಚರವಾಗಿದೆ  ಎನ್ನುವುದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಕರ್ತವ್ಯನಿರತ ಜನಪಾಲಕ ರಾಜನಿಗೆ ಬಂಧು ಪ್ರೇಮ ತರವಲ್ಲ. ಪ್ರಜಾಪಾಲಕನಾದವನಿಗೆ ಪ್ರಜಾಪಾಲನೆ ಮೂಲಧರ್ಮ. ಅದನ್ನು ಆತ ಎಂದೂ ಚ್ಯುತಿ ಬರದಂತೆ ನಿರ್ವಹಿಸಬೇಕು. ಈ ರೀತಿ ಕಾರ್ಯ ನಿರ್ವಹಿಸುತ್ತಿರುವಾಗ ‘ನನ್ನ ಬಂಧುಗಳು, ನನ್ನ ಪರಿವಾರ’ ಎಂದು ಯಾವುದೇ ತಾರತಮ್ಯ ಮಾಡುವಂತಿಲ್ಲ. ಇದಕ್ಕಾಗಿ ಬಂಧುಗಳೇ ನೇರವಾಗಿ ಕಾಣುವಲ್ಲಿ ರಥವನ್ನು ತಂದು ನಿಲ್ಲಿಸಿ, ಅರ್ಜುನನ ಅಂತರಂಗದಲ್ಲಿ ಅಡಗಿದ್ದ ಬಂಧುಪ್ರೇಮವನ್ನು ಯುದ್ಧ ಪ್ರಾರಂಭವಾಗುವ ಮೊದಲೇ ಬಡಿದೆಬ್ಬಿಸಿ ಗೀತೆಗೆ ಪಂಚಾಂಗ ಕಟ್ಟಿದ ಶ್ರೀಕೃಷ್ಣ.

ತಾನ್ ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ ಬಂಧೂನವಸ್ಥಿತಾನ್       ೨೭
ಕೃಪಯಾ ಪರಯಾssವಿಷ್ಟೋ ವಿಷೀದನ್ನಿದಮಬ್ರವೀತ್

ಆ ಎಲ್ಲಾ ಬಂಧುಗಳು ಒಂದುಗೂಡಿರುವುದನ್ನು ಕಂಡ ಅರ್ಜುನ  ಕರುಣೆಗೊಳಗಾಗಿ, ಕಾರುಣ್ಯದಿಂದ, ದುಃಖದಿಂದ  ತನ್ನ ತುಮುಲವನ್ನು ಶ್ರೀಕೃಷ್ಣನಲ್ಲಿ ತೋಡಿಕೊಳ್ಳುತ್ತಾನೆ.
ಇಲ್ಲಿಂದ ಮುಂದೆ ಅರ್ಜುನ ಅನೇಕ ರೀತಿಯಲ್ಲಿ ತನ್ನ ಅಳಲನ್ನು ಶ್ರೀಕೃಷ್ಣನ ಮುಂದೆ ತೋಡಿಕೊಳ್ಳುವುದನ್ನು ಕಾಣುತ್ತೇವೆ. ಮುಂದಿನ ಶ್ಲೋಕಗಳನ್ನು ನೋಡುವ ಮೊದಲು ಇಲ್ಲಿ ಒಂದು ಪುಟ್ಟ ವಿಶ್ಲೇಷಣೆ ಮಾಡೋಣ. ಗೀತೆಯನ್ನು ಓದುವಾಗ ಕೆಲವರಿಗೆ ಶ್ರೀಕೃಷ್ಣನ ನಡೆ ಅರ್ಥವಾಗುವುದಿಲ್ಲ.  "ಅಯ್ಯೋ- ಹೇಗೆ ನನ್ನ ಬಂಧುಗಳ ವಿರುದ್ಧ ಹೋರಾಡಲಿ? ಹೇಗೆ ಗುರು ಹಿರಿಯರನ್ನು ಕೊಲ್ಲಲಿ? ನಮಗೆ ಈ ಜಗಳ ಬೇಡ" ಎಂದು ಅರ್ಜುನ ಹೇಳಿದರೆ, ಕೃಷ್ಣ "ಯುದ್ಧ ಮಾಡು" ಎಂದು ಹೇಳುತ್ತಾನೆ. ಇದು ನ್ಯಾಯವೇ ಎನ್ನುವ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತದೆ. ಸಾಮಾಜಿಕವಾಗಿ ಒಂದು ಮನೆಯಲ್ಲಿ ಅಣ್ಣ-ತಮ್ಮಂದಿರರ ನಡುವೆ ಜಗಳವಾದಾಗ ನಾವು ಸಮಾಧಾನ ಮಾಡಿ ರಾಜಿ ಮಾಡಿಸಬೇಕೇ ವಿನಃ ಹೊಡೆದಾಡಿಕೊಳ್ಳಿ ಎಂದು ಹೇಳಬಾರಲ್ಲವೇ?  ಹೀಗಿರುವಾಗ ಶ್ರೀಕೃಷ್ಣ ಏಕೆ ಯುದ್ಧ ಮಾಡು ಎಂದು ಅರ್ಜುನನನ್ನು ಹುರಿದುಂಬಿಸಿದ ಎನ್ನುವುದು ಹಲವರ ಪ್ರಶ್ನೆ. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಅರ್ಜುನ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಈ ಮಾತನ್ನು ಹೇಳಿದ್ದರೆ ಖಂಡಿತವಾಗಿ ನಾವು ಒಪ್ಪಬೇಕಾದ ವಿಷಯವಿದು. ಆದರೆ ಇಲ್ಲಿ ಆತ ಭರತಖಂಡದ ರಕ್ಷಕನಾಗಿ ಧರ್ಮದ ಪರ ಹೋರಾಟಮಾಡಲು ಧರ್ಮರಾಯನ ಪರ ನಿಂತ ಅರಸನಾಗಿದ್ದ. ಆತ ಒಂದು ವೇಳೆ "ನಮಗೋಸ್ಕರ ಭರತ ಖಂಡದ ಜನರು ಸಾಯುವುದು ಬೇಡ" ಎಂದಿದ್ದರೆ ಒಪ್ಪಬಹುದಿತ್ತು. ಆದರೆ ಆತ ಹಾಗೆ ಹೇಳಲಿಲ್ಲ. ಆತನಿಗೆ ಅಲ್ಲಿ ಕಾಣಿಸಿದ್ದು ಕೇವಲ ಆತನ ಬಂಧುಗಳು. ಶ್ರೀಕೃಷ್ಣ ಸಂಧಾನಕ್ಕೆ ಹೋಗುವ ಮುನ್ನ “ಯುದ್ಧ ಬೇಕೋ ಬೇಡವೋ? ನಿನ್ನ ಅಭಿಪ್ರಾಯವೇನು?” ಎಂದು ಭೀಮನನ್ನು ಕೇಳಿದ್ದಕ್ಕೆ ಆತ  ಕೊಟ್ಟ ಉತ್ತರ ಅಮೋಘವಾದುದು. ಅಪಿ ದುರ್ಯೋಧನಂ ಕೃಷ್ಣ ಸರ್ವೇ ವಯಮಧಶ್ಚರಾಃ | ನೀಚೈರ್ಭೂತ್ವಾನುಯಾಸ್ಯಾಮೋ ಮಾ ಸ್ಮ ನೋ ಭರತಾ ನಶನ್ || ೫-೭೨-೨೦||  “ಸಂಧಾನ ಮಾಡು ಕೃಷ್ಣಾ.  ಬೇಕಿದ್ದರೆ ಅರಮನೆಯಲ್ಲಿ ದುರ್ಯೋಧನನ ಕೈಕೆಳಗೆ ಕೆಲಸ ಮಾಡಿಕೊಂಡು ಬದುಕುತ್ತೇನೆ. ನಮಗಾಗಿ ಭಾರತ ದೇಶದ ಜನ ಸಾಯುವುದು ಬೇಡ” ಎಂದಿದ್ದ ಭೀಮ. ಆದರೆ ಇಲ್ಲಿ ಅರ್ಜುನ ಹೀಗೆ ಹೇಳದೇ ಕೇವಲ ನನ್ನ ಬಂಧು-ಬಾಂಧವರು ಸಾಯುತ್ತಾರಲ್ಲಾ ಎಂದು ಮರುಗಿದ್ದಾನೆ. ಆತನಿಗೆ ತನ್ನ ಬಂಧುಗಳಲ್ಲದ ಜನರೂ ಸಾಯಬಾರದು, ಅವರೂ ಕೂಡಾ ಇನ್ನೊಬ್ಬರ ಬಂಧುವಾಗಿರುತ್ತಾರೆ ಎನ್ನುವ ವಿಚಾರ  ಮರೆತು ಹೋಗಿತ್ತು!  ಈ ಹಿಂದೆ ಹೇಳಿದಂತೆ  ರಾಜನಾದವನಿಗೆ ಧರ್ಮದ ಕಡೆ ನಿಂತವನು ಮಾತ್ರ ಬಂಧು. ಧರ್ಮದ ವಿರುದ್ಧ ಯಾರೇ ನಿಂತಿರಲಿ ಆತ ಕೇವಲ ಅಪರಾಧಿ. ಅವರನ್ನು ಶಿಕ್ಷಿಸುವುದು ಆತನ ಪರಮ ಧರ್ಮ. ನ್ಯಾಯಾಸ್ಥಾನದಲ್ಲಿ ನಿಂತ ನ್ಯಾಯಾಧೀಶ ಅನ್ಯಾಯ ಮಾಡಿ ಬಂದ ತನ್ನ ಬಂಧುವನ್ನು 'ನನ್ನ ಕಡೆಯವನು' ಎಂದು ಹೇಗೆ ಕ್ಷಮಿಸುವಂತಿಲ್ಲವೋ  ಹಾಗೇ ರಾಜನಾದವನೂ ಕೂಡಾ ಇಲ್ಲಿ ನೋಡಬೇಕಾದದ್ದು ಧರ್ಮವನ್ನೇ ಹೊರತು ಬಂಧುತ್ವವನ್ನಲ್ಲ.

ಮುಂದೆ ಅರ್ಜುನ ಅನೇಕ ರೀತಿಯಲ್ಲಿ  ಶ್ರೀಕೃಷ್ಣನನ್ನು ಸಮಜಾಯಿಸಲು (Convince) ನೋಡುತ್ತಾನೆ. ಆದರೆ ಶ್ರೀಕೃಷ್ಣ ಅರ್ಜುನನ ವಾದಕ್ಕೆ ಎಲ್ಲಿಯೂ ನೇರ ಉತ್ತರ ಕೊಡುವುದಿಲ್ಲ. ಏಕೆಂದರೆ ಒಂದು ವೇಳೆ ಹಾಗೆ ಮಾಡಿದ್ದರೆ ಆತ ವ್ಯರ್ಥ ವಾದಕ್ಕೆ ಮಣೆ ಹಾಕಿದಂತಾಗುತ್ತಿತ್ತು. ಮಾನಸಿಕ ತುಮುಲದಲ್ಲಿರುವ ಅರ್ಜುನ ಆಡುವ ಪ್ರತಿಯೊಂದು ಮಾತನ್ನೂ ಒಬ್ಬ ಉತ್ತಮ ಕೇಳುಗನಂತೆ ಕೇಳಿ, ಆನಂತರ ಒಬ್ಬ ಮಾನಸಿಕ ರೋಗಿಗೆ ಚಿಕಿತ್ಸೆ ಕೊಡುವ ರೀತಿಯಲ್ಲಿ ಶ್ರೀಕೃಷ್ಣ ನಡೆದಿರುವುದನ್ನು ನಾವು ಕಾಣುತ್ತೇವೆ. ಬನ್ನಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶ್ಲೋಕಗಳನ್ನು ನೋಡೋಣ.