Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, August 28, 2011

Bhagavad geeta Kannada Chapter-10 Shloka 10-11


ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ ೧೦

ತೇಷಾಮ್  ಸತತ ಯುಕ್ತಾನಾಮ್  ಭಜತಾಮ್  ಪ್ರೀತಿ ಪೂರ್ವಕಮ್
ದದಾಮಿ ಬುದ್ಧಿಯೋಗಮ್  ತಮ್  ಯೇನ ಮಾಮ್ ಉಯಾಂತಿ ತೇ –ನನ್ನಲ್ಲೆ ಅನುಗಾಲ ಬಗೆಯಿಟ್ಟು ಪ್ರೀತಿಯಿಂದ ಸೇವಿಸುವವರಿಗೆ ಆ ತಿಳಿವಿನ ದಾರಿಯನ್ನು ಕರುಣಿಸುತ್ತೇನೆ. ಅದರಿಂದ ಅವರು ನನ್ನನ್ನೆ ಸೇರುತ್ತಾರೆ.

ಈ ಶ್ಲೋಕದಲ್ಲಿ  “ಸತತಯುಕ್ತಾನಾಂ” ಎನ್ನುವಲ್ಲಿ ಬರುವ ‘ಯುಕ್ತಿ’ ಎನ್ನುವ ಶಬ್ದಕ್ಕೆ ಸಂಸ್ಕೃತದಲ್ಲಿ ಅನೇಕ ಅರ್ಥಗಳಿವೆ. ಬಹಳ ಯೋಗ್ಯವಾದ ಆಚಾರನಿಷ್ಠೆ ಹೊಂದಿ, ದಾರಿತಪ್ಪದೆ, ಜಾರದೆ ಬದುಕುವುದು ಯುಕ್ತಿ. ಭಗವಂತನ ಅನುಸಂಧಾನಕ್ಕೆ ಪೂರಕವಾದ ವೇದಾಧ್ಯಯನವನ್ನು ಗ್ರಹಿಸುವುದು ಯುಕ್ತಿ. ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಯುಕ್ತಿ. ಇಲ್ಲಿ ಕೃಷ್ಣ ಹೇಳುತ್ತಾನೆ: “ಯಾವ ಬುದ್ಧಿಯೋಗದಿಂದ ಭಗವಂತನನ್ನು ಸೇರುವುದು ಸಾಧ್ಯವೋ ಅಂತಹ  ವಿಷಯ ಚಿಂತನೆ ಮಾಡುವ ಮನಸ್ಸು, ಭಕ್ತಿಯಿಂದ ಚಿಂತನೆ ಮಾಡಬೇಕು ಎನ್ನುವ ಬುದ್ಧಿ, ನಿಶ್ಚಯವಾದ ಜ್ಞಾನವನ್ನು-ನಾನೇ ಕೊಡುತ್ತೇನೆ” ಎಂದು. ಭಗವಂತನಲ್ಲಿ ಶರಣಾಗಿ ಪ್ರೀತಿಯಿಂದ ಅವನನ್ನು ಸೇವಿಸಿದಾಗ-ಭಗವಂತನನ್ನು ಸೇರುವ ಮಾರ್ಗವನ್ನು ಭಗವಂತನೇ ತೋರಿಸುತ್ತಾನೆ.

ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ
ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ       ೧೧

ತೇಷಾಮ್ ಏವ ಅನುಕಂಪಾರ್ಥಮ್ ಅಮ್ ಅಜ್ಞಾನ ಮ್  ತಮಃ
ನಾಶಯಾಮಿ ಆತ್ಮ ಭಾವ ಸ್ಥ  ಜ್ಞಾನ ದೀಪೇನ ಭಾಸ್ವತಾ –ನಾನು ಅವರ ಮೇಲಣ ಕನಿಕರದಿಂದಲೆ, ಅವರ ಬಗೆಯಲ್ಲಿ ನೆಲೆನಿಂತು, ಬೆಳಗುವ ಅರಿವಿನ ಪಂಜಿನಿಂದ ಅಜ್ಞಾನದಿಂದ ಕವಿದ ಕತ್ತಲನ್ನು ಹೋಗಲಾಡಿಸುತ್ತೇನೆ.

ಭಗವಂತ ನಮ್ಮನ್ನು ಉದ್ಧರಿಸುವುದು ಯಾವುದೋ ಸ್ವಾರ್ಥಕ್ಕಾಗಿ ಅಲ್ಲ. ಬದಲಿಗೆ ನಮ್ಮ ಮೇಲಿನ ಕರುಣೆಯಿಂದ. ತನ್ನನ್ನು ಅನನ್ಯ ಭಕ್ತಿಯಿಂದ ಭಜಿಸಿ ಆರಾಧನೆ ಮಾಡುವ ಭಕ್ತನ ಮೇಲಿನ ಅನುಕಂಪದಿಂದ ಆತ ನಮ್ಮನ್ನು ಉದ್ಧರಿಸುತ್ತಾನೆ. ಆತ ನಮಗೆ ಕೇವಲ ಬುದ್ಧಿ ಕೊಡುವುದಷ್ಟೇ ಅಲ್ಲ, ನಮ್ಮ ಬುದ್ಧಿಯನ್ನು ಸದಾ ಕವಿದಿರುವ ತಮಸ್ಸಿನ(ಅಜ್ಞಾನದ) ಪೊರೆಯನ್ನು ಕಳಚುವವನೂ ಅವನೆ. ಭಗವಂತನ ಸಹಾಯವಿಲ್ಲದೆ ನಮ್ಮ ಮನಸ್ಸು-ಬುದ್ಧಿಗೆ ಕವಿದಿರುವ ಅಜ್ಞಾನದ ಪೊರೆಯನ್ನು ನಾವೇ ನೀಗಿಸಿಕೊಳ್ಳಲು ಸಾಧ್ಯವಿಲ್ಲ. ತ್ರಿಗುಣಾತೀತ ಭಗವಂತನೊಬ್ಬನೆ ಈ ಕತ್ತಲನ್ನು ಕಳೆಯಬಲ್ಲ. ಇದರಿಂದ ನಾವು ಯಥಾರ್ಥವನ್ನು ಯಥಾರ್ಥವಾಗಿ ಗ್ರಹಣ ಮಾಡಬಹುದು. ಭಗವಂತ ನಮ್ಮ ಭಾವದಲ್ಲಿ-ಭಕ್ತಿಯಲ್ಲಿ ತುಂಬಿ, ನಮ್ಮ  ಸ್ವರೂಪ ಜಾಗೃತಗೊಳಿಸಿ, ಕೃಪೆಯ ದೃಷ್ಟಿ ಬೀರಿ, ಎಲ್ಲ ವಿಧದಿಂದ ಬೆಳಕು ನೀಡಿ, ಯಥಾರ್ಥವನ್ನು ಕಾಣುವಂತೆ ಮಾಡುತ್ತಾನೆ. ಇದಕ್ಕಾಗಿ  ‘ನನ್ನೊಳಗಿನ ಕತ್ತಲನ್ನು ನೀಗು ಭಗವಂತ’ ಎಂದು ನಾವು ಆತನಲ್ಲಿ ಶರಣಾಗಬೇಕು. ಒಳಗೆ ಕತ್ತಲನ್ನು ಇಟ್ಟುಕೊಂಡು ಎಷ್ಟು ಅಧ್ಯಯನ ಮಾಡಿದರೂ ಉಪಯೋಗವಿಲ್ಲ. ಶಾಸ್ತ ಓದಿದಾಗ ಯಥಾರ್ಥ ತಿಳಿಯಬೇಕಾದರೆ ಭಗವಂತನಲ್ಲಿ ಶರಣಾಗತಿ ಮುಖ್ಯ.

ಈ ಹಂತದಲ್ಲಿ ಅರ್ಜುನ ಕೃಷ್ಣನ ಉಪದೇಶ ಕೇಳಿ ಮೈಮರೆತು ಹೋದ. ಆತನಿಗೆ ತಾನು ಯುದ್ಧರಂಗದಲ್ಲಿ ನಿಂತಿದ್ದೇನೆ ಎನ್ನುವ ವಿಚಾರವೇ ಮರೆತು ಹೋಗಿ, ಕೇವಲ ಕೃಷ್ಣನೊಬ್ಬನೆ ಕಾಣಲಾರಂಭಿಸುತ್ತಾನೆ. ಮುಂದಿನ ನಾಲ್ಕು ಶ್ಲೋಕದಲ್ಲಿ ಅರ್ಜುನ ಭಗವಂತನ ಅನಂತ ಶಕ್ತಿಯ ಪಾರಮ್ಯದ ಅನುಸಂಧಾನವನ್ನು ವ್ಯಕ್ತಪಡಿಸುವುದನ್ನು ಕಾಣುತ್ತೇವೆ.    

No comments:

Post a Comment