Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, August 27, 2011

Bhagavad Geeta Kannada Chapter-10 Shloka 6-9


ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ
ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ

ಮಹರ್ಷಯಃ ಸಪ್ತ ಪೂರ್ವೇ ಚತ್ವಾರಃ  ಮನವಃ ತಥಾ
ತ್ ಭಾವಾಃ  ಮಾನಸಾಃ  ಜಾತಾಃ  ಯೇಷಾಮ್  ಲೋಕೇ ಇಮಾಃ ಪ್ರಜಾಃ –-ಮೊದಲ ಮನ್ವಂತರದ ಏಳು ಮಂದಿ ಮಹರ್ಷಿಗಳು [ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ ], ಮೊದಲ ನಾಲ್ವರು ಮನುಗಳು [ಸ್ವಾಯಂಭುವ, ಸ್ವಾರೋಚಿಷ, ಉತ್ತಮ ಮತ್ತು ರೈವತ], ಚತುರ್ಮುಖನ ಮಾನಸ ಪುತ್ರರಾದ ಇವರು ನನ್ನಿಂದಲೆ ಆದವರು.[ನಾಲ್ಕು ವರ್ಣಗಳ ನಿಯಾಮಕರಾಗಿ ನಾಲ್ಕು ಪಂಗಡದಲ್ಲಿ ಸೇರಿದ, ವಿಶೇಷ ಅರಿವಿನ ಕಾರಣ ‘ಮನು’ಗಳೆನಿಸಿದ ಎಲ್ಲ ದೇವತೆಗಳು ನನ್ನಿಂದಲೆ ಆದವರು; ನನ್ನ ಇಚ್ಛೆಯಿಂದಲೆ ಹುಟ್ಟಿ ಬಂದವರು.] ವಿಶ್ವದ ಈ ಜನರೆಲ್ಲ ಅವರದೇ ಸಂತತಿ.

ಇಡೀ ಬ್ರಹ್ಮಾಂಡ ಸೃಷ್ಟಿ ಭಗವಂತನಿಂದಾಯಿತು ಎನ್ನುವುದು ನಮಗೆ ತಿಳಿದಿದೆ. ಇಲ್ಲಿ ಕೃಷ್ಣ ನಾವು ಉಪಾಸನೆಯಲ್ಲಿ ತಿಳಿದಿರಬೇಕಾದ ಮುಖ್ಯ ಅಂಶವನ್ನು ವಿವರಿಸುತ್ತಾನೆ. ಮೊದಲ ಮನ್ವಂತರದ ಸಪ್ತರ್ಷಿಗಳು ಮತ್ತು ಮೊದಲ ನಾಲ್ಕು ಮನುಗಳನ್ನು ಕೃಷ್ಣ ಇಲ್ಲಿ ಪ್ರಸ್ತಾಪಿಸಿದ್ದಾನೆ. ಪ್ರತಿಯೊಂದು ಮನ್ವಂತರಕ್ಕೂ ಬೇರೆ ಬೇರೆ ಸಪ್ತರ್ಷಿಗಳಿದ್ದಾರೆ. ದೇವತಾ ತಾರತಮ್ಯದಲ್ಲಿ ಹದಿನಾರನೇ ಕಕ್ಷೆಯಲ್ಲಿ ಬರುವ ಮೊದಲ ಮನ್ವಂತರದ ಈ ಸಪ್ತರ್ಷಿಗಳು ಋಷಿಮಂಡಲದಲ್ಲೇ ಬಹಳ ಶ್ರೇಷ್ಠರು. ಪುರಾಣ ಮತ್ತು ಮಹಾಭಾರತದ ಮೋಕ್ಷಧರ್ಮ ಪರ್ವವನ್ನು ನೋಡಿದಾಗ-ಇಲ್ಲಿ “ಮಹರ್ಷಯಃ ಸಪ್ತ ಪೂರ್ವೇ” ಎನ್ನುವುದು ಸೃಷ್ಟಿಕಾರಣನಾದ ಚತುರ್ಮುಖನಿಗೆ ಸಹಾಯಕರಾದ ಸಪ್ತಬ್ರಹ್ಮರನ್ನೂ ಸೂಚಿಸುತ್ತದೆ ಎಂದು ತಿಳಿಯುತ್ತದೆ. [ಇಲ್ಲಿ ಉಪಲಕ್ಷಣವಾಗಿ ಭೃಗು ಮತ್ತು ದಕ್ಷರನ್ನೂ ಸೇರಿಸಿಕೊಳ್ಳಬೇಕು. ಹತ್ತನೆಯವನಾದ ಮಾನಸ ಪುತ್ರ ನಾರದ ಬ್ರಹ್ಮಚಾರಿ ಆದ್ದರಿಂದ ಸೃಷ್ಟಿ ವಿಸ್ತಾರದಲ್ಲಿ ಆತನ ಹೆಸರನ್ನು ಸೇರಿಸಿಲ್ಲ]. ಈ ಏಳುಮಂದಿ ಋಷಿಗಳು ಮತ್ತು ಭೃಗು-ದಕ್ಷರನ್ನು ಪ್ರಜಾಪತಿಗಳೆಂದು ಕರೆಯುತ್ತಾರೆ. ಭಗವಂತ ಚತುರ್ಮುಖನ ಸೃಷ್ಟಿ ಮಾಡಿ, ಅವನ ಮೂಲಕ ಸಪ್ತರ್ಷಿಗಳ ಸೃಷ್ಟಿ ಮಾಡಿದ. ಸೃಷ್ಟಿಯಲ್ಲಿ ಮಾನವರ ವಂಶವಿಸ್ತಾರ ಮೊದಲು ಸ್ವಾಯಂಭುವ ಮನುವಿನ ಮೂಲಕವಾಯಿತು. ಈತನಿಂದ ಮನು ವಂಶ ಬೆಳೆದುಬಂತು. ಈ ಎಲ್ಲಾ ಕಾರಣದಿಂದ ಮೊದಲ ನಾಲ್ಕು ಮನ್ವಂತರದ ಅಧಿಪತಿಗಳು ಮತ್ತು ಸಪ್ತರ್ಷಿಗಳು ಪ್ರಧಾನವಾಗಿ ಉಪಾಸನೆಯಾಗಬೇಕಾದ ಹಿಂದಿನವರು. ವಿಶ್ವದ ಈ ಜನರೆಲ್ಲ ಅವರದೇ ಸಂತತಿ.
‘ಮನು’ ಎನ್ನುವುದಕ್ಕೆ ಇನ್ನೊಂದು ಅರ್ಥವಿದೆ. ಭಗವಂತನ ಪರಿವಾರವಾದ ದೇವತೆಗಳನ್ನೂ ‘ಮನುಗಳು’ ಎನ್ನುತ್ತಾರೆ. ತತ್ವಾಭಿಮಾನಿ ದೇವತೆಗಳಲ್ಲಿ ಮುಖ್ಯವಾಗಿ ನಾಲ್ಕು ವಿಧ. ಇವರು ಮನುಷ್ಯನ ನಾಲ್ಕು ಸ್ವಭಾವವನ್ನು(ಬ್ರಾಹ್ಮಣ್ಯ, ಕ್ಷಾತ್ರ, ವೈಶ್ಯ, ಶೂದ್ರ) ನಿಯಂತ್ರಿಸುವ ದೇವತೆಗಳು. ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಈ ನಾಲ್ಕು ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಿದೆ ನಾವು ಆ ವರ್ಗದಿಂದ ಕರೆಸಿಕೊಳ್ಳುತ್ತೇವೆ. ಇದಲ್ಲದೆ ‘ಮನು’ ಶಬ್ದವಾಚ್ಯ  ಜೀವವರ್ಗ ನಾಲ್ಕು: ಸಮಸ್ತ ದೇವತೆಗಳು, ದೇವತೆಗಳಿಂದ ಸೃಷ್ಟಿಯಾದ ಋಷಿಗಳು(ಮಾನವರು), ಋಷಿಪರಂಪರೆಯಿಂದ ಬಂದ ‘ಮಾನವಮಾನವರು’, ಈ ಪರಂಪರೆಯಿಂದ ಬಂದ ಮನುಷ್ಯರು. ಇದು ಉಪಾಸನೆಯಲ್ಲಿ ತಿಳಿದಿರಬೇಕಾದ ಅಂಶ.       

ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ
ಸೋSವಿಕಲ್ಪೇನ   ಯೋಗೇನ ಯುಜ್ಯತೇ ನಾತ್ರ ಸಂಶಯಃ  

ಏತಾಮ್  ವಿಭೂತಿಮ್  ಯೋಗಮ್  ಚ ಮಮ ಯಃ  ವೇತ್ತಿ ತತ್ತ್ವತಃ
ಸಃ ಅವಿಕಲ್ಪೇನ  ಯೋಗೇನ ಯುಜ್ಯತೇ ನ ಅತ್ರ ಸಂಶಯಃ -ನನ್ನ ಈ ಹಿರಿಮೆಯನ್ನು [ಸನ್ನಿಧಾನದಿಂದ ಹಿರಿಮೆಯನ್ನೀಯುವ ನನ್ನ ರೂಪಗಳ ಬಗೆಯನ್ನು] ಮತ್ತು ಆಳವನ್ನು ಸರಿಯಾಗಿ ತಿಳಿದವನು ಪರಿಶುದ್ಧವಾದ ಧ್ಯಾನಯೋಗದಲ್ಲಿ ನೆಲೆಗೊಳ್ಳುತ್ತಾನೆ. ಇದರಲ್ಲಿ ಸಂದೇಹವಿಲ್ಲ.

ಭಗವಂತನ ಹಿರಿಮೆಯನ್ನು, ಆತನ ವಿವಿಧ ರೂಪವನ್ನು, ಅದರ ಆಳವನ್ನು-ಯಥಾರ್ಥವಾಗಿ ತಿಳಿದರೆ ನಮಗೆ  ಸಹಜವಾಗಿ ಶರಣಾಗತಿ ಬರುತ್ತದೆ. ಭಗವಂತನ ಬಗೆಗಿನ ಜ್ಞಾನ ನಮ್ಮಲ್ಲಿ  ದೃಢನಂಬಿಕೆಯನ್ನು ಹುಟ್ಟಿಸುತ್ತದೆ. ಶ್ರದ್ಧೆ  ಮತ್ತು ಭಕ್ತಿಯಿಂದ ತುಂಬಿದ ಮನಸ್ಸು ಭಗವಂತನಲ್ಲಿ ನೆಲೆನಿಲ್ಲುತ್ತದೆ.     

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ
ಇತಿ ಮತ್ವಾ ಭಜಂತೇ  ಮಾಂ ಬುಧಾ ಭಾವಸಮನ್ವಿತಾಃ     

ಅಹಮ್  ಸರ್ವಸ್ಯ ಪ್ರಭವಃ  ಮತ್ತಃ ಸರ್ವಮ್  ಪ್ರವರ್ತತೇ
ಇತಿ ಮತ್ವಾ ಭಜಂತೇ  ಮಾಮ್  ಬುಧಾಃ  ಭಾವ ಸಮನ್ವಿತಾಃ –-ತಿಳಿದವರು ‘ನಾನು ಎಲ್ಲದರ ಮೂಲಕಾರಣ, ನನ್ನಿಂದಲೆ ಎಲ್ಲವೂ ನಡೆಯುತ್ತಿದೆ’ ಎಂದರಿತು ಭಕ್ತಿಯಿಂದ ನನ್ನನ್ನು ಸೇವಿಸುತ್ತಾರೆ.

 ಜ್ಞಾನಿಗಳು ‘ಎಲ್ಲದರ ನಿಯಾಮಕ ಭಗವಂತ, ಎಲ್ಲವೂ ಭಗವಂತನಿಂದ ಸೃಷ್ಟಿಯಾಗಿದೆ, ಎಲ್ಲವೂ ಭಗವಂತನಿಂದ ನಿಯತವಾಗಿದೆ’ ಎನ್ನುವ  ಸತ್ಯವನ್ನು ಅರಿತು ಭಕ್ತಿಯಿಂದ  ಉಪಾಸನೆ ಮಾಡುತ್ತಾರೆ.  “ಈ ರೀತಿ ಭಗವಂತನ ಬಗೆಗೆ ಅನನ್ಯ ಭಕ್ತಿ ಮತ್ತು ಸರ್ವೋತ್ತಮ ಜ್ಞಾನವುಳ್ಳವರು: ತಮ್ಮೆಲ್ಲ  ಮನ್ಸಸ್ಸಿನ ಪ್ರಪಂಚ ನನ್ನ ಅಧೀನ, ಎಲ್ಲಕ್ಕೂ ಕಾರಣ ನಾನು, ಎಲ್ಲವೂ ಹುಟ್ಟಿದ್ದು ನನ್ನಿಂದ, ಎಲ್ಲವೂ ನಿಯಂತ್ರಿತವಾಗುವುದು ನನ್ನಿಂದ, ಎಲ್ಲವೂ ನನ್ನ ಅಧೀನ ಎಂದು ತಿಳಿದು ಉಪಾಸನೆ ಮಾಡುತ್ತಾರೆ” ಎನ್ನುತ್ತಾನೆ ಕೃಷ್ಣ.  

ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ  ಪರಸ್ಪರಮ್
ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ

ತ್ ಚಿತ್ತಾಃ  ಮತ್ ಗತ ಪ್ರಾಣಾಃ ಬೋಧಯಂತಃ  ಪರಸ್ಪರಮ್
ಕಥಯಂತಃ ಚ  ಮಾಮ್  ನಿತ್ಯಮ್  ತುಷ್ಯಂತಿ ಚ ರಮಂತಿ –-ಅನುಗಾಲ ನನ್ನಲ್ಲೆ ಬಗೆಯಿಟ್ಟವರು , ನನಗಾಗಿ ಬದುಕುವವರು, ನನ್ನನ್ನೇ ಒಬ್ಬರಿಗೊಬ್ಬರು ತಿಳಿಹೇಳುತ್ತ,  ತಿಳಿಯುತ್ತ ತಣಿಯುತ್ತಾರೆ; ಸಂತಸಪಡುತ್ತಾರೆ.

ಹೀಗೆ ನಿಜವಾದ ಜ್ಞಾನ ಭಕ್ತಿ ಉಳ್ಳವರ ಚಿತ್ತದಲ್ಲಿ ಸದಾ ಭಗವಂತನ ಚಿಂತನವೇ ತುಂಬಿರುತ್ತದೆ. ಅವರ ಮನಸ್ಸು ಭಗವನ್ಮಯವಾಗಿ ಬಿಡುತ್ತದೆ. ಅವರಿಗೆ ಎಲ್ಲವುದರಲ್ಲೂ ಭಗವಂತನೇ ಕಾಣುತ್ತಾನೆ. ಇವರು ಪ್ರತೀ ಘಟನೆಯ ಹಿಂದೆ ಭಗವಂತನಿದ್ದಾನೆ, ಅವನ ಇಚ್ಛೆಯಂತೆ ಎಲ್ಲವೂ  ನೆಡೆಯತ್ತಿದೆ ಎನ್ನುವ ಅರಿವಿನಲ್ಲಿ ಬದುಕುತ್ತಾರೆ. ಇವರ ಮನಸ್ಸು ಭಗವಂತನಲ್ಲಿ ಶ್ರುತಿಗೂಡಿರುತ್ತದೆ. ಇವರು ಸದಾ ಭಗವಂತನ ಬಗೆಗೆ ಮಾತನಾಡುತ್ತಿರುತ್ತಾರೆ. ಒಂದೊಂದು ಸಂಗತಿಯಲ್ಲೂ  ‘ಭಗವಂತನ ಸೃಷ್ಟಿ ಎಷ್ಟು ಅದ್ಭುತ’ ಎನ್ನುವಂತೆ ಇವರು ವಿಶ್ಲೇಷಣೆ  ಮಾಡುತ್ತಾರೆ. ತಮ್ಮ ಜೀವನದ ಪ್ರತಿಯೊಂದು ಘಟನೆಯನ್ನೂ ಇವರು ಭಗವಂತನ ಪ್ರಸಾದ ಎನ್ನುವಂತೆ ಸ್ವೀಕರಿಸುತ್ತಾರೆ. ಇಂತವರ ಜೀವನ ಆನಂದಮಯವಾಗಿರುತ್ತದೆ. ಇವರಲ್ಲಿ ಕೆಟ್ಟ ಯೋಚನೆ ಸುಳಿಯುವುದಿಲ್ಲ. ಇವರ ಮನಸ್ಸು ಸದಾ ನಿರ್ಮಲವಾಗಿರುತ್ತದೆ. ಇವರು ಲೋಕ ವ್ಯವಹಾರದ ಮಾತನ್ನು  ಬಿಟ್ಟು, ಭಗವಂತನ ವಿಚಾರ ಮಾತನಾಡುತ್ತಾ ಸದಾ ಆನಂದಪಡುತ್ತಿರುತ್ತಾರೆ.

No comments:

Post a Comment