Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Monday, February 21, 2011

Bhagavad Gita Kannada Chapter-02 Shloka 19-24

ಯ ಏನಂ ವೇತ್ತಿ ಹಂತಾರಂ  ಯಶ್ಚೈನಂ ಮನ್ಯತೇ ಹತಮ್         
ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ           ೧೯

ಯಃ ಏನಮ್  ವೇತ್ತಿ ಹಂತಾರಮ್ ಯಃ ಚ ಏನಮ್ ಮನ್ಯತೇ ಹತಮ್
ಉಭೌ ತೌ ನ ವಿಜಾನೀತಃ ನ ಅಯಮ್  ಹಂತಿ ನ ಹನ್ಯತೇ --ಯಾರು ಇವನನ್ನು 'ಕೊಲ್ಲುವವನು' ಎಂದು ತಿಳಿದಿದ್ದಾನೆ ಮತ್ತು ಯಾರು ಇವನನ್ನು 'ಸತ್ತವನು' ಎಂದು ತಿಳಿದಿದ್ದಾನೆ-ಆ ಇಬ್ಬರೂ ತಿಳಿದವರಲ್ಲ. ಇವನು ಕೊಲ್ಲುವುದಿಲ್ಲ ಮತ್ತು ಸಾಯುವುದಿಲ್ಲ.

ಜೀವವನ್ನು ಕೊಲ್ಲಬಹುದು(ಕೊಲ್ಲುತ್ತೇನೆ) ಎಂದು ಭಾವಿಸುವವರಿಗೆ ಹಾಗು ಅದು ನಾಶವಾಯಿತು (ಕೊಲ್ಲಲ್ಪಟ್ಟಿತು) ಎನ್ನುವವರಿಗೆ ತಿಳುವಳಿಕೆ ಇಲ್ಲ. ಏಕೆಂದರೆ ಜೀವ ಕೊಲ್ಲುವುದೂ ಇಲ್ಲ, ಕೊಲ್ಲಲ್ಪಡುವುದೂ ಇಲ್ಲ. ಆತ್ಮವನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ನಮಗೆ ಸಾಯುವುದು ಅಥವಾ ಸತ್ತಿತು ಎಂದು ಕಾಣುವುದು ಭೌತಿಕ ಶರೀರ ಮಾತ್ರ. ಜೀವನಿಗೆ ದೇಹದ ಮೂಲಕ ಕೂಡಾ ಕೊಲ್ಲುವ ಅಥವಾ ಸಾಯುವ ಸ್ವಾತಂತ್ರ್ಯ ಇಲ್ಲ. ಇಲ್ಲಿ ಅರ್ಜುನನಿಗೆ 'ಕೌರವರು ನನ್ನ ಕೈಯಿಂದ ಸಾಯುತ್ತಾರೆ' ಎನ್ನುವುದು ಕೇವಲ ಭ್ರಮೆ. ಸೃಷ್ಟಿ-ಸಂಹಾರ ಕರ್ತನಾದ ಭಗವಂತನ ಇಚ್ಚೆ ಇಲ್ಲದೆ ಯಾವುದೂ ನಡೆಯುವುದಿಲ್ಲ. ಆತನ ಇಚ್ಛೆಗೆ ವಿರುದ್ಧವಾಗಿ ನಾವು ಏನೂ ಮಾಡಲು ಸಾಧ್ಯವಿಲ್ಲ.

ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾ[S]ಯಂ ಭೂತ್ವಾ ಭವಿತಾ ವಾ ನ ಭೂಯಃ ।
ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ    ॥೨೦॥

ನ ಜಾಯತೇ ಮ್ರಿಯತೇ ವಾ ಕದಾಚಿತ್ ನ ಅಯಮ್  ಭೂತ್ವಾ ಭವಿತಾ ವಾ ನ ಭೂಯಃ
ಅಜಃ  ನಿತ್ಯಃ ಶಾಶ್ವತಃ ಅಯಮ್  ಪುರಾಣಃ  ನ ಹನ್ಯತೇ ಹನ್ಯಮಾನೇ ಶರೀರೇ-- ಈ ಜೀವ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಭಗವಂತನ ಅರಿವಿನಂತೆ ಹುದುಗಿದ್ದು ಮತ್ತಾಗುವವನೂ ಅಲ್ಲ. ಇವನು ಹುಟ್ಟಿರದ, ಸಾವಿರದಮಾರ್ಪಡದ-ಭಗವಂತನ ಪಡಿಯಚ್ಚು.[ಈ ಪರಮ ಪುರುಷ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಸ್ವರೂಪದಿಂದಿದ್ದು ದೇಹದಿಂದ ಹುಟ್ಟುತ್ತಾನೆ ಎನ್ನುವುದೂ ಸಲ್ಲ. ಈ ಜೀವ ಕೂಡ ಹುಟ್ಟದ, ಸಾಯದ, ಬದಲಾಗದ ತತ್ವ.] ದೇಹದಿಂದ ದೇಹಕ್ಕೆ ಅಲೆವ ಈ ಜೀವ ದೇಹ ಅಳಿದರೂ ತಾನಳಿಯುವುದಿಲ್ಲ.

ಇಲ್ಲಿ ಕೃಷ್ಣ 'ಜೀವ ಸ್ವರೂಪ' ಅಂದರೆ  ಏನೆಂದು ವಿವರಿಸಿದ್ದಾನೆ. ಈ ಜೀವ ಸ್ವರೂಪತಃ  ಎಂದೂ ಹುಟ್ಟುವುದಿಲ್ಲ ಮತ್ತು ಎಂದೂ ನಾಶವಾಗುವುದಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಏಕೆಂದರೆ ಜೀವಸ್ವರೂಪ ಭಗವಂತನ ಪ್ರತಿಬಿಂಬ. ಭಗವಂತನಿಗೆ ಹುಟ್ಟಿಲ್ಲ. ಅವನು ನಿತ್ಯ ಹಾಗು ಶಾಶ್ವತ. ಜೀವ ಸದಾ ಶರೀರದಿಂದ ಶರೀರಕ್ಕೆ ಸಂಚರಿಸುತ್ತಿರುತ್ತದೆ(ಪುರ-ಅಣ). ಆದರೆ ದೇಹ ಬದಲಾದಂತೆ ಜೀವಸ್ವರೂಪ ಬದಲಾಗುವುದಿಲ್ಲ. ಭೌತಿಕ ಶರೀರಕ್ಕೆ ಮುದಿತನವಿದ್ದಂತೆ ಜೀವ ಸ್ವರೂಪಕ್ಕೆ ಮುದಿತನವಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಆದರೆ ಪ್ರಭಾವದಿಂದ ಬಂದ ನಂಬಿಕೆ  ಬದಲಾಗಬಹುದು. ಉದಾಹರಣೆಗೆ ಒಂದು ಜನ್ಮದಲ್ಲಿ ನಾಸ್ತಿಕನಾಗಿರುವವ ಇನ್ನೊಂದು ಜನ್ಮದಲ್ಲಿ ಪೂರ್ಣ ಆಸ್ತಿಕನಾಗಬಹುದು. ಸ್ವಭಾವ ವಿಶಿಷ್ಟನಾದ ಜೀವ ಎಂದೂ ಬದಲಾಗದೆ, ನಾಶವಾಗದೆ ಉಳಿಯುತ್ತಾನೆ.

ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್   
ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್    ॥೨೧॥

ವೇದ ಅವಿನಾಶಿನಮ್  ನಿತ್ಯಮ್  ಯಃ ಏನಮ್ ಅಜಮ್ ಅವ್ಯಯಮ್
ಕಥಮ್ ಸಃ  ಪುರುಷಃ ಪಾರ್ಥ ಕಮ್  ಘಾತಯತಿ ಹಂತಿ ಕಮ್—ಓ ಪಾರ್ಥ, ಹುಟ್ಟು-ಸಾವುಗಳಿರದ, ಮಾರ್ಪಡದ, ಏತರಿಂದಲೂ ಅಳಿಯದ ಈ ಜೀವನನ್ನು[ಶರೀರದಿಂದಲೂ ಅಳಿವಿರದ ಭಗವಂತನನ್ನು] ಬಲ್ಲ ಜೀವಿ,  ಯಾರನ್ನು ಹೇಗೆ ಕೊಲ್ಲಿಸುವುದು ? ಯಾರನ್ನು ಹೇಗೆ ಕೊಲ್ಲುವುದು?

ದೋಷ ಸಂಬಂಧವಿಲ್ಲದ, ನಿತ್ಯವಾದ, ಎಂದೂ ಬದಲಾಗದ ಜೀವ ಸ್ವರೂಪವನ್ನು ಯಾರು ತಿಳಿಯುತ್ತಾರೋ ಅಂತಹ ಮಾನವನು ಯಾರನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು ಹೇಗೆ ಸಾಧ್ಯಸ್ವರೂಪತಃ ಜೀವನಿಗೆ ನಾಶವಿಲ್ಲ ಎಂದು ತಿಳಿದಾಗ, ಸ್ಥೂಲ ಪ್ರಪಂಚದಲ್ಲಿ ಹುಟ್ಟು-ಸಾವು ಭಗವಂತನ ಇಚ್ಚೆಯಂತೆ ನಡೆಯುತ್ತಿದೆ ಎಂದು ತಿಳಿದ ಮೇಲೆ, ಯಾರು ಯಾರನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು? ಹುಟ್ಟು-ಸಾವಿನ ಹಿಂದಿರುವ ಭಗವತ್ ಶಕ್ತಿಯನ್ನು ನಾವು ಅರಿತುಕೊಳ್ಳಬೇಕು ಅಷ್ಟೆ.

ಜೀವಕ್ಕೆ ಅಳಿವಿಲ್ಲ, ಅದಕ್ಕೆ ಹುಟ್ಟು-ಸಾವು ಎನ್ನುವುದಿಲ್ಲ. ಹಾಗಿದ್ದರೆ ನಾವು ಪ್ರಾಪಂಚಿಕವಾಗಿ ಕಾಣುವ ಹುಟ್ಟು-ಸಾವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾನೆ.

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ   
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ॥೨೨॥

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ-- ಮನುಷ್ಯ ಹಳೆಯ ಬಟ್ಟೆಬರೆಗಳನ್ನು ಬಿಸುಟು ಬೇರೆ ಹೊಸತಾದುದ್ದನ್ನು ಉಡುತ್ತಾನೆ ಹೇಗೆಯೋ ಹಾಗೇ-ಜೀವ ಒಂದು  ದೇಹವನ್ನು ಬಿಟ್ಟು ಬೇರೆ ಹೊಸ ದೇಹವನ್ನು ಪಡೆಯುತ್ತಾನೆ.

ನಾವು ಉಟ್ಟ ಬಟ್ಟೆ ಹಳೆಯದಾದಾಗ ಹೇಗೆ ಅದನ್ನು ಬದಲಿಸುತ್ತೆವೋ-ಹಾಗೇ, ಜೀವ ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪಡೆಯುತ್ತದೆ. ಇಲ್ಲಿ ಒಂದು ವಿಶೇಷವೆಂದರೆ ಹೇಗೆ ತಾಯಿ ತನ್ನ ಮಗುವಿಗೆ ತನ್ನಿಚ್ಚೆಯಂತೆ ಬಟ್ಟೆ ಬದಲಿಸುತ್ತಾಳೊ ಹಾಗೆ ಭಗವಂತ ಜೀವದ ದೇಹ ಬದಲಿಸುತ್ತಾನೆ. ಜೀವನಿಗೆ ಸ್ವತಃ ದೇಹ ಬದಲಿಸುವ ಸ್ವಾತಂತ್ರ್ಯ ಇರುವುದಿಲ್ಲ. ಇದಕ್ಕೆ ಒಂದು ಅಪವಾದ ಎಂದರೆ ಆತ್ಮ ಸಾಕ್ಷಾತ್ಕಾರವಾದ ಯೋಗಿಗಳು.  ಅವರು ಭಗವಂತನ ಅನುಗ್ರಹದಿಂದ ಸ್ವ-ಇಚ್ಚೆಯಂತೆ ದೇಹ ಬದಲಿಸುವ ಶಕ್ತಿಯನ್ನು ಪಡೆದಿರುತ್ತಾರೆ. [ಈ ಬಗ್ಗೆ ಸ್ವಾಮಿರಾಮ್ ಅವರು ಬರೆದಿರುವ "Living with Himalayan Masters" ಎನ್ನುವ ಪುಸ್ತಕದಲ್ಲಿ ಅನೇಕ ನೈಜ ದೃಷ್ಟಾಂತಗಳನ್ನು ಕಾಣಬಹುದು.] ಇಂತಹ ಮಹಾನ್ ಯೋಗಿಗಳನ್ನು ಬಿಟ್ಟರೆ ಇತರರಿಗೆ ಸ್ವಇಚ್ಛೆಯಂತೆ  ದೇಹ ಬದಲಿಸುವ ಸ್ವಾತಂತ್ರ್ಯ ಇಲ್ಲ. ಆದ್ದರಿಂದ ಭೌತಿಕವಾಗಿ ಹುಟ್ಟು-ಸಾವು ಎಂದರೆ ಉಟ್ಟ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡಿಸಿದಂತೆ. ಸ್ವರೂಪತಃ  ಜೀವಕ್ಕೆ ಎಂದೂ ಹುಟ್ಟು-ಸಾವು ಅನ್ನುವುದಿಲ್ಲ ಹಾಗು ಹೊಸ ಶರೀರದಿಂದ ಅದರ ಮೂಲಸ್ವಭಾವ ಬದಲಾಗುವುದಿಲ್ಲ.

ಹಾಗಾದರೆ ಆತ್ಮವನ್ನು ನಾಶ ಮಾಡಲು ಸಾದ್ಯವೇ ಇಲ್ಲವೋ?  ಎಂದೆಂದಿಗೂ ಇಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.
 ನೈನಂ ಛಂದಂತಿ  ಶಸ್ತ್ರಾಣಿ ನೈನಂ ದಹತಿ ಪಾವಕಃ
ನಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ    ॥೨೩॥

ನ ಏನಮ್ ಛಂದಂತಿ  ಶಸ್ತ್ರಾಣಿ ನ ಏನಮ್ ದಹತಿ ಪಾವಕಃ
ನ ಚ ಏನಮ್  ಕ್ಲೇದಯಂತಿ ಅಪಃ ನ ಶೋಷಯತಿ ಮಾರುತಃ –ಈ ಜೀವನನ್ನು (ಭಗವಂತನನ್ನು) ಆಯುಧಗಳು ತುಂಡರಿಸವು. ಇವನನ್ನು ಬೆಂಕಿ ಸುಡದು.  ಇವನನ್ನು ನೀರು ನೆನೆಸದು, ಗಾಳಿ ಒಣಗಿಸದು.

ಯಾವುದೇ ಒಂದು ವಸ್ತುವನ್ನು ನಾಶಮಾಡಲು ಇರುವ ಮುಖ್ಯ ಅಸ್ತ್ರ ನಾಲ್ಕು. ಮಣ್ಣು(ಘನ ಆಯುಧ), ನೀರು, ಬೆಂಕಿ ಹಾಗು ಗಾಳಿ.  ಜೀವ ಸೂಕ್ಷ್ಮರಲ್ಲಿ ಸೂಕ್ಷ್ಮ. ಶಾಸ್ತ್ರಕಾರರು ಹೇಳುವಂತೆ ಕುದುರೆಯ ಬಾಲದ ಒಂದು ಕೂದಲಿನ ತುತ್ತ ತುದಿಯನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಿದರೆ ಸಿಗುವ ಒಂದು ಭಾಗ ಎಷ್ಟು ಗಾತ್ರದ್ದೋ ಅಷ್ಟು ಗಾತ್ರದಲ್ಲಿರುತ್ತದೆ ಜೀವ. ಇಂತಹ ಜೀವವನ್ನು ಯಾವುದೇ ಆಯುಧ ತುಂಡರಿಸಲು ಸಾಧ್ಯವಿಲ್ಲ.  ಬೆಂಕಿ ಜೀವನನ್ನು ಸುಡಲಾರದು. ನೀರಿನಿಂದ ಜೀವ ಒದ್ದೆಯಾಗದು. ಗಾಳಿ ಜೀವನನ್ನು ಒಣಗಿಸದು.  ಸೂಕ್ಷ್ಮಾತಿ ಸೂಕ್ಷ್ಮವಾದ ಜೀವನನ್ನು ಯಾವ ಆಯುಧವೂ ನಾಶ ಮಾಡಲಾರವು.

ಇಲ್ಲಿ   ನಮಗೆ ಇನ್ನೊಂದು ಪ್ರಶ್ನೆ ಮೂಡುತ್ತದೆ. “ಇಂದು ನಾಶ ಮಾಡಲು ಅಸಾಧ್ಯವಾದ ಜೀವ ಎಂದೆಂದೂ ನಾಶವಾಗದೇ ಇರುತ್ತದೆಯೇ?” ಎಂದು.  ಹೌದು ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.

ಅಚ್ಛೇದ್ಯೋSಯಮದಾಹ್ಯೋSಯಮಕ್ಲೇದ್ಯೋSಶೋಷ್ಯ ಏವ ಚ ।
ನಿತ್ಯಃ ಸರ್ವಗತಃ ಸ್ಥಾಣುರಚಲೋಯಂ ಸನಾತನಃ ॥೨೪॥

ಅಚ್ಛೇದ್ಯಃ ಅಯಮ್ ಅದಾಹ್ಯಃ ಅಯಮ್ ಅಕ್ಲೇದ್ಯಃ ಅಶೋಷ್ಯಃ  ಏವ ಚ
ನಿತ್ಯಃ ಸರ್ವಗತಃ ಸ್ಥಾಣು ಆಚಲಃ  ಅಯಮ್  ಸನಾತನಃ --ಈ ಜೀವನನ್ನು ಕಡಿಯಲಾಗದು. ಇವನನ್ನು ಸುಡಲಾಗದು. ನೆನೆಸಲಾಗದು; ಒಣಗಿಸಲೂ ಆಗದು. ಎಂದೆಂದೂ ಎಲ್ಲೆಡೆ ಹಬ್ಬಿರುವ, ಏತರಿಂದಲೂ ಮಾರ್ಪಡದ, ಅವಿಚಲನಾದ, ಪುರಾಣಪುರುಷನ ಪಡಿಯಚ್ಚು ಇವನು.[ಎಲ್ಲೆಡೆ ಹಬ್ಬಿರುವ ಭಗವಂತನನ್ನೆ ಎಂದೆಂದೂ ಹೊಂದಿರುವ ಅಣುರೂಪಿ. ಇವನು ಏತರಿಂದಲೂ ಮಾರ್ಪಡದ ನಿಯತಿಗೆ ಬದ್ಧ ; ವೇದದ ವಿಧಿ-ನಿಷೇಧಗಳಿಗೆ ಕೂಡ].

ಜೀವನನ್ನು ಇಂದಲ್ಲ, ಮುಂದೆಂದೂ ಯಾರಿಂದಲೂ ನಾಶಮಾಡಲು ಸಾದ್ಯವಿಲ್ಲ. ಏಕೆಂದರೆ ಆತ  ತನ್ನ ಗುಣಧರ್ಮದಿಂದ ಎಂದೂ ಬದಲಾಗದ, ಸರ್ವಗತನಾದ,  ವಿಚಲಿತನಾಗದ-ಭಗವಂತನ ಪಡಿಯಚ್ಚು. ಯಾವ ಆಯುಧಕ್ಕೂ ನಿಲುಕದೆ ಎಲ್ಲ ಕಾಲದಲ್ಲೂ ಏಕರೂಪನಾಗಿರುವ, ಎಲ್ಲ ಕಡೆ ಸ್ಥಿರವಾದ, ಬದಲಾವಣೆ ಇಲ್ಲದೆ ಇರುವ ಗುಣಧರ್ಮ ಜೀವನಿಗಿದೆ. ಜೀವ ಸನಾತನ. ಅಂದರೆ ನಾತನದಿಂದ ಸಹಿತನಾದವ. ಇಲ್ಲಿ 'ನಾತನ' ಎಂದರೆ 'ನಾದನ'. ಅಂದರೆ ವೇದನಾದ. ಜೀವ ವೇದನಾದದಿಂದ ಸಹಿತನಾಗಿ, ಸಮಸ್ತ ವೇದ ಪ್ರತಿಪಾದ್ಯನಾದ ಭಗವಂತನ ಮಡಿಲಲ್ಲಿ ವೇದದ ವಿಧಿ-ನಿಷೇಧಗಳಿಗೆ ಬದ್ಧನಾಗಿರುತ್ತಾನೆ. ಅದು ಸರ್ವಗತನಾದ ಭಗವಂತನನ್ನು ಆಶ್ರಯಿಸಿರುವ ಮಹತ್ತಾದ ಅಣು.

No comments:

Post a Comment