Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, May 8, 2011

Bhagavad Gita Kannada Chapter-05 Shloka 20-21

ಹಿಂದಿನ ಶ್ಲೋಕದಲ್ಲಿ ಕೃಷ್ಣ ಅಧ್ಯಾತ್ಮಿಕವಾಗಿ ಭಗವಂತನ ರೂಪದ ಸಮದೃಷ್ಟಿ ಬಗ್ಗೆ ವಿವರಿಸಿದ. ಮುಂದಿನ ಶ್ಲೋಕದಲ್ಲಿ ಅದಕ್ಕೆ ಪೂರಕವಾಗಿ ಸಾಮಾಜಿಕವಾಗಿ ನಮ್ಮ ಬದುಕಿನಲ್ಲಿ  ಹೇಗೆ ಸಮದೃಷ್ಟಿ ಬೆಳೆಸಿಕೊಳ್ಳಬೇಕು ಎನ್ನುವುದನ್ನು ವಿವರಿಸುತ್ತಾನೆ.  

ನ ಪ್ರಹೃಷ್ಯೇತ್ ಪ್ರಿಯಂ ಪ್ರಾಪ್ಯ ನೋದ್ವಿಜೇತ್ ಪ್ರಾಪ್ಯ ಚಾಪ್ರಿಯಮ್
ಸ್ಥಿರಬುದ್ಧಿರಸಮ್ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ೨೦

ನ ಪ್ರಹೃಷ್ಯೇತ್ ಪ್ರಿಯಮ್ ಪ್ರಾಪ್ಯ ನ ಉದ್ವಿಜೇತ್ ಪ್ರಾಪ್ಯ ಚ ಅಪ್ರಿಯಮ್
ಸ್ಥಿರ ಬುದ್ಧಿಃ  ಅಸಮ್ಮೂಢಃ ಬ್ರಹ್ಮವಿತ್  ಬ್ರಹ್ಮಣಿ ಸ್ಥಿತಃ –ಸುಖ ಬಂದಾಗ ಹಿಗ್ಗಬಾರದು; ದುಃಖ ಬಂದಾಗ ಕುಗ್ಗಬಾರದು. ಇಂಥವನು ಬಗೆಗಟ್ಟಿಗೊಂಡವನು. ಎಚ್ಚರ ತಪ್ಪದವನು. ಭಗವಂತನನ್ನರಿತವನು.ಭಗವಂತನಲ್ಲೇ ನೆಲೆ ನಿಂತವನು.

ನಮ್ಮ ಜೀವನ ಎನ್ನುವುದು ಸುಖ-ದುಃಖದ ಚಕ್ರಭ್ರಮಣ. ಯಾರಿಗೂ ಕೇವಲ ಸುಖ ಎಂದಾಗಲಿ, ಕೇವಲ ದುಃಖ ಎಂದಾಗಲಿ ಇಲ್ಲ. ಎಂತಹ ಸಂಪತ್ತಿನ ಸುಪ್ಪತ್ತಿಗೆಯಲ್ಲಿದ್ದರೂ ಜೀವನದಲ್ಲಿ ಕಷ್ಟದ ಕ್ಷಣಗಳು ಇದ್ದೇ ಇರುತ್ತವೆ. ಅದೇ ರೀತಿ ಕಷ್ಟದಲ್ಲಿರುವವನಿಗೂ ಸುಖದ ಕ್ಷಣಗಳು ಇದ್ದೇ ಇದೆ. ಬದುಕು ಎನ್ನುವುದು ಸುಖ ದುಃಖಗಳ ಪ್ರವಾಹ. ಈ ಶ್ಲೋಕದಲ್ಲಿ ಕೃಷ್ಣ ಹೇಳುತ್ತಾನೆ “ನಮಗೆ ಸುಖ-ದುಃಖವೆಂಬ ದ್ವಂದ್ವದಲ್ಲಿ ಸಮದೃಷ್ಟಿ ಇರಬೇಕು” ಎಂದು. ಸಾಮಾನ್ಯವಾಗಿ ನಮಗೆ ಇಷ್ಟವಾದದ್ದು ಫಲಿಸಿದಾಗ ನಾವು ಹಿಗ್ಗುತ್ತೇವೆ, ನಮಗೆ ಅಪ್ರೀಯವಾದದ್ದು, ನಾವು ಬಯಸದಂತಹ ಘಟನೆಗಳು ಸಂಭವಿಸಿದಾಗ ಉದ್ವೆಗಕ್ಕೊಳಗಾಗಿ ಕುಸಿದುಬಿಡುತ್ತೇವೆ, ತಳಮಳಿಸುತ್ತೇವೆ. ಇದು ಸಹಜವಾಗಿ ನಮ್ಮ ಬದುಕಿನಲ್ಲಿ ನಾವು ನೋಡತಕ್ಕಂತಹ ಸ್ಥಿತಿ. ಕೃಷ್ಣ ಹೇಳುತ್ತಾನೆ “ಇವೆರಡೂ ಆಗದಂತೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕು” ಎಂದು. ಯಾವುದು ಅನಿವಾರ್ಯವೋ ಅದನ್ನು ಸಹಜವಾಗಿ ಸ್ವೀಕರಿಸಬೇಕು. ಅದನ್ನು ಬಿಟ್ಟು ‘ಹೀಗಾಗಬಾರದು, ಹಾಗಾಗಬಾರದು’ ಎಂದು ಕುಳಿತರೆ  ಮನಸ್ಸು ಗೊಂದಲಕ್ಕೊಳಗಾಗುತ್ತದೆ. ಇದು ಮನಃಶಾಸ್ತ್ರ. ಇದರ ಅರ್ಥ ಸುಖ ಬಂದಾಗ ಅದನ್ನು ಅನುಭವಿಸಬಾರದು ಎಂದಲ್ಲ. ಯಾವುದು ಬಂತೋ ಅದನ್ನು ಹಾಗೇ ಸ್ವೀಕರಿಸು, ಆದರೆ ಅತಿಯಾದ ಹಾರಾಟ ಬೇಡ. ಬದುಕಿನಲ್ಲಿ ಎಲ್ಲವೂ ಬರುತ್ತದೆ ಹೋಗುತ್ತದೆ ಯಾವುದೂ ಶಾಶ್ವತವಲ್ಲ ಎನ್ನುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಯಾವುದೋ ಒಂದನ್ನು ಅತಿಯಾಗಿ ಹಚ್ಚಿಕೊಂಡರೆ ಒಂದು ವೇಳೆ ಅದು ನಮ್ಮಿಂದ ದೂರವಾದರೆ ತಡೆದುಕೊಳ್ಳಲಾಗುವುದಿಲ್ಲ. ಇದರಿಂದ ನಾವು ಮಾನಸಿಕವಾಗಿ ವ್ಯಾಕುಲತೆಗೊಳಗಾಗುತ್ತೇವೆ. ಅದರಿಂದ ಚಿಕ್ಕ ಚಿಕ್ಕ ವಿಷಯಕ್ಕೆ ಆತ್ಮಹತ್ಯೆಯಂತಹ ಘೋರ ಪಾಪವನ್ನು ಮಾಡಲು ನಮ್ಮ ಮನಸ್ಸು ಮುಂದಾಗುತ್ತದೆ. ಆದ್ದರಿಂದ ಬದುಕಿನ ಯಶಸ್ವೀ ಸೂತ್ರ ಎಂದರೆ ಯಾವುದನ್ನೂ ತಲೆಕೆಡಿಸಿಕೊಳ್ಳದೆ ಬಂದಿದ್ದನ್ನು ಬಂದಂತೆ ಅನುಭವಿಸುವುದು. ನಾವು ಬಯಸಿದಂತೆ ಪ್ರಪಂಚವಿಲ್ಲ-ಪ್ರಪಂಚವಿದ್ದಂತೆ ನಾವು. ಅದನ್ನು ಸ್ವಾಗತಿಸಿ ಯಾವ ಉದ್ವೇಗ ಇಲ್ಲದೆ ಬದುಕುವುದನ್ನು ಕಲಿತಾಗ  ಮನಸ್ಸು ಗಟ್ಟಿಯಾಗುತ್ತದೆ.
ಆಧ್ಯಾತ್ಮಿಕವಾಗಿ ನೋಡಿದಾಗ ನಮಗೆ ಪ್ರಿಯವಾದದ್ದು-ಅಪ್ರೀಯವಾದದ್ದು ಎಂದು ನಾವು ಯಾವುದಕ್ಕೆ ಹೇಳುತ್ತೇವೆ- ಅದು ನಿಜವಾಗಿಯೂ ಒಳ್ಳೆಯದು ಎಂದು ಹೇಳಲು ಬರುವುದಿಲ್ಲ. ಇಷ್ಟವಾದದ್ದು ಒಳ್ಳೆಯದು ಎಂದು ಹೇಳಲು ಬರುವುದಿಲ್ಲ. ಕೆಲವೊಮ್ಮೆ ನಮಗೆ ಅಪ್ರೀಯವಾದದ್ದು ನಮಗೆ ಹಿತವನ್ನು ಕೊಡುತ್ತದೆ. ಆದರೆ ಅದು ನಮಗೆ ತಿಳಿಯುವುದು ಮಾತ್ರ ತಡವಾಗಿ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಘಟನೆ ನಮ್ಮ ಮುಂದಿನ ಬೆಳವಣಿಗೆಗೆ ಪೂರಕವಾಗಿರುತ್ತದೆ. ಒಬ್ಬ ಮನುಷ್ಯ ಅಧಃಪಾತ ಹೊಂದುವ ಪ್ರಾರಾಬ್ಧಕರ್ಮ ಹೊಂದಿದ್ದರೆ ಆತನಿಗೆ ಬೇಕಾದಷ್ಟು ಸುಖ ಬರಬಹುದು! ಅವನು ಆ ಸುಖದಲ್ಲಿ ಮೈಮರೆತು ಮಾಡಬಾರದ್ದನ್ನು ಮಾಡಿ ಅಧಃಪಾತ ಹೊಂದಬಹುದು; ಕಷ್ಟದಲ್ಲಿ ಜೀವ ಪಕ್ವವಾಗಬಹುದು. ಉಪನಿಷತ್ತಿನಲ್ಲಿ ಈ ವಿಚಾರವನ್ನು ವ್ಯಂಗ್ಯವಾಗಿ ಹೀಗೆ ಹೇಳಿದ್ದಾರೆ: “ಹಿತವಾದದ್ದು ಮತ್ತು ಇಷ್ಟವಾದದ್ದು ಎರಡೂ ಮುಂದೆ ಬಂದಾಗ ಇಷ್ಟವಾದುದ್ದನ್ನು ಆಯ್ಕೆ ಮಾಡುತ್ತಾರೆ-ಅವರು ತಿಳಿಗೇಡಿಗಳು” ಎಂದು.
ನಮಗೆ ಇಷ್ಟವಾದದ್ದು ಹಿತವಾಗಿರಬೇಕೆಂದಿಲ್ಲ, ಅದಕ್ಕಾಗಿ ಹಾರಾಡುವುದು ಅರ್ಥಶೂನ್ಯ. ಅದೇ ರೀತಿ ಜೀವನದಲ್ಲಿ ಯಾವುದೋ ಒಂದು ಅನಿಷ್ಠ ಘಟನೆ ನೆಡೆದಾಗ ಅದಕ್ಕಾಗಿ ಎಂದೂ ಗೊಂದಲಕ್ಕೊಳಗಾಗಬೇಕಿಲ್ಲ. ಅದರಿಂದಲೇ ಮುಂದೆ ನಮಗೆ ಹಿತವಾಗಬಹುದು. ಈ ವಿಚಾರ ಹೆಚ್ಚಿನವರಿಗೆ ಅನುಭವಕ್ಕೆ ಬಂದಿರುತ್ತದೆ. ‘ಹೀಗೇಕೆ-ಹೀಗಾಗಬಾರದಿತ್ತು’ ಎಂದು ಯೋಚಿಸುತ್ತಿರುತ್ತೇವೆ ಆದರೆ ಮುಂದೆ ಹಾಗೆ ಆದುದರಿಂದಲೇ  ನಮ್ಮ ಸಮಸ್ಯೆಗೊಂದು ದಾರಿ ಕಾಣುತ್ತದೆ. ಆದರೆ ಅದು ತಿಳಿಯುವುದು ಮಾತ್ರ ತಡವಾಗಿ.ಈ ಎಲ್ಲಾ ಕಾರಣದಿಂದ ಸುಖಬಂದಾಗ ಸುಖದ ಭ್ರಮೆ ಬೇಡ, ದುಃಖ ಬಂದಾಗ ವ್ಯಾಕುಲತೆ ಬೇಡ. ಎರಡರ ಬಗ್ಗೆಯೂ ಸಮದೃಷ್ಟಿ ಇರಲಿ. ಭಗವಂತ ಕೊಟ್ಟಿದ್ದನ್ನು ಪ್ರಾಮಾಣಿಕವಾಗಿ ಅನುಭವಿಸುತ್ತೇನೆ ಎನ್ನುವ ಅನುಸಂಧಾನವಿರಲಿ. ಮಾನಸಿಕ ಗೊಂದಲ ಬೇಡ.ಬದುಕಿನಲ್ಲಿ ಯಾವುದು ಹಿತ-ಯಾವುದು ಅಹಿತ ಎನ್ನುವುದು ಭಗವಂತನಿಗೆ ಗೊತ್ತಿದೆ ಎನ್ನುವ ಎಚ್ಚರ ಉಳ್ಳವನು ತನ್ನ ಮನಸ್ಸನ್ನು ಸುಖ-ದುಃಖದಲ್ಲಿ ನೆಟ್ಟಿರುವುದಿಲ್ಲ ಬದಲಾಗಿ ಅವನ ಮನಸ್ಸು ಭಗವಂತನಲ್ಲಿ ನೆಟ್ಟಿರುತ್ತದೆ. ಭಗವಂತ ನಮ್ಮನ್ನು  ತಾಯಿ ಮಗುವನ್ನು ನೋಡಿಕೊಂಡಂತೆ ನೋಡಿಕೊಳ್ಳುತ್ತಾನೆ. ತಾಯಿಯಿಂದ ಬರುವ ಎಲ್ಲಾ ವಿಚಾರ ಮಗುವಿಗೆ ಇಷ್ಟವಾಗುವುದಿಲ್ಲ. ಆದರೆ ತಾಯಿ ಮಗುವಿನ ಉದ್ಧಾರಕ್ಕೋಸ್ಕರ ಮಗುವಿನಲ್ಲಿ ಆ ಕೆಲಸವನ್ನು  ಮಾಡಿಸುತ್ತಾಳೆ. ಅಲ್ಲಿ ಇಷ್ಟ ಮುಖ್ಯವಲ್ಲಿ, ಯಾವುದು ಹಿತ ಅದು ಮುಖ್ಯ.                                             

ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ ವಿಂದತ್ಯಾತ್ಮನಿ ಯತ್ ಸುಖಮ್
ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ ೨೧

ಬಾಹ್ಯಸ್ಪರ್ಶೇಷು  ಅಸಕ್ತ ಆತ್ಮಾ ವಿಂದತಿ ಆತ್ಮನಿ ಯತ್ ಸುಖಮ್
ಸಃ  ಬ್ರಹ್ಮಯೋಗ ಯುಕ್ತ ಆತ್ಮಾ ಸುಖಮ್ ಅಕ್ಷಯಮ್ ಅಶ್ನುತೇ- ಹೊರಗಣ ಭೋಗಗಳಲ್ಲಿ ನಂಟು ಇರದವನು ಬಗೆಯೊಳಗೆ [ಭಗವಂತನನ್ನು ನೆನೆದಾಗೊಮ್ಮೆ] ಎಂಥ ಸುಖವನ್ನು ಪಡೆಯುತ್ತಾನೆ ಅದೇ ಸುಖವನ್ನು ಸದಾ ಭಗವಂತನಲ್ಲಿ ಬಗೆನೆಟ್ಟ  ಸಾಧಕ ನಿರಂತರ ಸವಿಯುತ್ತಾನೆ.

ಪ್ರಪಂಚದಲ್ಲಿ ಸುಖಕ್ಕೆ ಇರುವ ಸಾಧನ ಐದು-ರೂಪ,ರಸ,ಗಂಧ,ಸ್ಪರ್ಶ, ಶಬ್ದ. ಇದರ ಮುಖೇನ  ಅನುಭವಿಸುವುದು ತಪ್ಪಲ್ಲ. ಬೇಕು ಅನ್ನುವ ವಸ್ತುವನ್ನು ಪಡೆಯುವುದರಲ್ಲಿ ಆನಂದವಿದೆ, ಆದರೆ ಅದಕ್ಕಿಂತ ಮುಖ್ಯವಾಗಿ ಅದನ್ನು ತೊರೆಯುವುದರಲ್ಲಿ ಹೆಚ್ಚಿನ ಆನಂದವಿದೆ. ಇದು ತಿಳಿದಾಗ ಬದುಕಿನ ಒಂದು ಮುಖ್ಯ ಸೂತ್ರ ತಿಳಿದಂತೆ. ನಾವು ಬದುಕುವ ರೀತಿ ಎಂದರೆ ‘ನಾಳಿನ ಸುಖಕ್ಕಾಗಿ ಇಂದು ಕಷ್ಟಪಡುವುದು’. ಅಂದರೆ ಆ ನಾಳೆ ಎಂದೂ ಬರುವುದಿಲ್ಲ. ಸಾಯುವ ತನಕ ನಾಳೆಗಾಗಿ ಕಷ್ಟಪಡುವುದು ನಮ್ಮ ಜೀವನವಾಗಬಾರದು. ಭಗವಂತನನ್ನು ಪಡೆಯುವುದರಲ್ಲಿ ಮಹದಾನಂದವಿದೆ ಹಾಗು ಅದು ನಮ್ಮನ್ನು ಸದಾ ಸುಖವಾಗಿಡುತ್ತದೆ ಎನ್ನುವ ಸತ್ಯವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಒಮ್ಮೆ ನಾವು ನಮ್ಮ ಅಂತರಂಗದ ಆತ್ಮಸ್ವರೂಪದ ಸುಖವನ್ನು ಅನುಭವಿಸಲು ಪ್ರಾರಂಭಿಸಿದರೆ, ಬಾಹ್ಯ ಸುಖದಲ್ಲಿ ಏನೂ ಇಲ್ಲ ಎನ್ನುವ ವಿಚಾರ ತಿಳಿಯುತ್ತದೆ. ನಮ್ಮೊಳಗೇ ಆನಂದ ಅಡಗಿದೆ, ಅದು ಬಾಹ್ಯ ಸುಖದ ತ್ಯಾಗದಿಂದ ಕಾಣಬಹುದಾದ ಆನಂದ.
ನಮಗೆ ನಮ್ಮ ಒಳಗಿರುವ ಆನಂದ ಕೆಲವೊಮ್ಮೆ ಅನುಭವಕ್ಕೆ ಬರುತ್ತದೆ. ಒಮ್ಮೊಮ್ಮೆ  ‘ಅದೇಕೋ ಗೊತ್ತಿಲ್ಲ ಆದರೆ ಬಹಳ ಖುಷಿ’ ಎನ್ನುವ ಅನುಭವ ಪ್ರತಿಯೊಬ್ಬರೂ ಅನುಭವಿಸಿರುತ್ತಾರೆ. ಇದು ನಮ್ಮ ಅಂತರಂಗದ ಆನಂದ ಉಕ್ಕಿ ಬರುವುದು. ಈ ಆನಂದವನ್ನು ಗುರುತಿಸಿ ಅದನ್ನು ಅನುಭವಿಸಲು ಕಲಿತಾಗ ಬಾಹ್ಯ ಸುಖ ಕನಿಷ್ಠವಾಗಿ ಕಾಣಿಸುತ್ತದೆ. ಹೇಗೆ ನಿದ್ದೆಯಲ್ಲಿ ನಾವು ಬಾಹ್ಯ ಸುಖದ ಸ್ಪರ್ಶವಿಲ್ಲದೆ ನಮಗರಿವಿಲ್ಲದಂತೆ ಆನಂದದಲ್ಲಿರುತ್ತೇವೋ ಹಾಗೆ ಎಚ್ಚರದಲ್ಲಿ ಅಂತರಂಗದ ಆನಂದವನ್ನು ಅನುಭವಿಸಲು ಕಲಿತುಕೊಳ್ಳಬೇಕು. ಇದರಿಂದ  ಬಾಹ್ಯ ಸುಖದ ಪ್ರಜ್ಞೆ ದೂರವಾಗುತ್ತದೆ.
ಉಪನಿಷತ್ತಿನಲ್ಲಿ ಹೇಳುವಂತೆ “ಬಾಹ್ಯ ಸುಖವನ್ನು ತ್ಯಾಗ ಮಾಡುವುದರಿಂದ, ಒಳಗಿನ ಆನಂದದ ಅರಿವು ಮೂಡುತ್ತದೆ ಹಾಗು ಇದರಲ್ಲಿ ಅಮೃತತ್ವವಿದೆ”. ನಾವು ‘ಬೇಡ’ ಎನ್ನುವುದರಲ್ಲಿ ಇರುವ ಆನಂದ ‘ಬೇಕು’ ಅನ್ನುವುದರಲ್ಲಿಲ್ಲ. ಬೇಕು ಎನ್ನುವುದು ಸದಾ ನಮಗೆ 'ಬೇಡಿ(ಸಂಕೋಲೆ)'. ಬೇಕು ಅನ್ನುವುದು ನಮ್ಮ ಮುಂದೆ ಸಮಸ್ಯೆಗಳ ಸರಮಾಲೆಯನ್ನು ತಂದು ನಿಲ್ಲಿಸುತ್ತದೆ.  “ಎಲ್ಲ ಬಾಹ್ಯ ಬಯಕೆಗಳನ್ನು ಕಳೆದುಕೊಳ್ಳುವುದರಲ್ಲೇ ಮನುಷ್ಯನ ಆನಂದದ ಸೆಲೆ ಅಡಗಿದೆ” ಎನ್ನುತ್ತಾನೆ ಕೃಷ್ಣ. ಬೇಕುಗಳು ಕಮ್ಮಿ ಆದಂತೆ ಮನುಷ್ಯ ಆನಂದದಿಂದ ಬದುಕುತ್ತಾನೆ.
ಕೇವಲ ಬಾಹ್ಯ ಸುಖವನ್ನು ಬಿಡುವುದಷ್ಟೇ ಅಲ್ಲ, ಅದರ ಜೊತೆಗೆ ಒಳಗಿನ ಆನಂದವನ್ನು ಹಿಡಿಯಬೇಕು, ಅದು ಅನಂತವಾದ ಆನಂದ. ಕೃಷ್ಣ ಹೇಳುತ್ತಾನೆ “ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ” ಎಂದು. ಭಗವಂತನ ಧ್ಯಾನದಲ್ಲಿ ಒಳಗಿನಿಂದ ಆನಂದದ ಅನುಭವವಾಗುತ್ತದಲ್ಲ- ಅದನ್ನು ಒಬ್ಬ ಸಾಧಕ ಪಡೆಯುತ್ತಾನೆ. ಅಂತರಂಗದಲ್ಲಿ ಭಗವದ್ ಸ್ಪರ್ಶವಾಗಿ ಅದರಿಂದ  ಅನಂತ ಸುಖವನ್ನು ಸಾಧಕ ನಿರಂತರ ಸವಿಯುತ್ತಾನೆ.
ಸುಖ ಎನ್ನುವುದು ನಮ್ಮೊಳಗೇ ಇದೆ. ಇದೊಂದು ಮಾನಸಿಕ ಸ್ಥಿತಿ. ನಾವು ನಮ್ಮೊಳಗಿನ ಸುಖವನ್ನು ಗುರುತಿಸದೆ ಬಾಹ್ಯ ಸುಖದ ಬೆನ್ನು ಹತ್ತಿ ಕಷ್ಟ ಪಡುತ್ತೇವೆ.  ಜಾನಪದ ಕಥೆಯೊಂದು ಹೀಗೆ ಹೇಳುತ್ತದೆ. ಒಬ್ಬ ಮುದುಕಿ ತನ್ನ ಮನೆಯಲ್ಲಿ ರಾತ್ರಿ ಹೊತ್ತು ಸ್ವಲ್ಪ ಹಣವನ್ನು ಕೆಳಗೆ ಬೀಳಿಸಿಕೊಳ್ಳುತ್ತಾಳೆ. ಆದರೆ ಆಕೆಯ ಮನೆಯಲ್ಲಿ ದೀಪ ಹಚ್ಚಲು ಎಣ್ಣೆ ಇರುವುದಿಲ್ಲ. ಬೀದಿಯಲ್ಲಿ ಬೀದಿದೀಪದ ಬೆಳಕನ್ನು ಕಂಡ ಮುದುಕಿ ಬೀದಿಯಲ್ಲಿ ಬಂದು ತಾನು ಮನೆಯಲ್ಲಿ ಬೀಳಿಸಿಕೊಂಡ ಹಣವನ್ನು ಹುಡುಕುತ್ತಿರುತ್ತಾಳೆ. ಏಕೆ ಹೀಗೆ ಎಂದು ಕೇಳಿದಾಗ “ಮನೆಯಲ್ಲಿ ಬೆಳಕಿಲ್ಲ ಆದರೆ ಇಲ್ಲಿ  ಬೆಳಕಿದೆ ಅದಕಾಗಿ ಇಲ್ಲಿ ಹುಡುಕುತ್ತಿದ್ದೇನೆ” ಎನ್ನುವುದು ಆ ಮುದುಕಿಯ ಉತ್ತರ! ನಾವೆಲ್ಲರೂ ಹೀಗೆ. ನಿಜವಾದ ಆನಂದ ಇರುವುದು ಅಂತರಂಗದಲ್ಲಿ, ಆದರೆ ನಾವು ಸುಖವನ್ನು ಅರಸುವುದು ಹೊರಪ್ರಪಂಚದಲ್ಲಿ!                             

No comments:

Post a Comment