Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, February 28, 2011

Bhagavad Gita Kannada Chapter-02_Shloka_39-41

ಏಷಾ ತೇSಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮ ಬಂಧಂ ಪ್ರಹಾಸ್ಯಸಿ  ೩೯

ಏಷಾ ತೇ ಅಭಿಹಿತಾ ಸಾಂಖ್ಯೇ ಬುದ್ಧಿಃ ಯೋಗೇ ತು ಇಮಾಮ್ ಶೃಣು
 ಬುದ್ಧ್ಯಾ ಯುಕ್ತಃ  ಯಯಾ ಪಾರ್ಥ ಕರ್ಮ ಬಂಧಮ್   ಪ್ರಹಾಸ್ಯಸಿ--ಈ ಆತ್ಮ ವಿಜ್ಞಾನದ ತಿಳಿನುಡಿ ನಿನಗೆ ತಿಳಿಸಿದ್ದಾಯ್ತು, ಅದನ್ನು ಗಳಿಸುವ ಬಗೆಯನ್ನು ಇದೀಗ ಕೇಳು.  ಪಾರ್ಥ, ಈ ತಿಳಿನುಡಿಯಿಂದ ನೀನು ತಿಳಿಯಾದಾಗ ಕರ್ಮದ ಕಟ್ಟನ್ನು ಕಳೆದುಕೊಳ್ಳುವೆ.

ಕೃಷ್ಣ ಹೇಳುತ್ತಾನೆ: " ಇಲ್ಲಿಯವರೆಗೆ ಸಾಂಖ್ಯದ ಬಗ್ಗೆ ಹೇಳಿದ್ದಾಯ್ತು. ಇನ್ನು ಯೋಗದ ಬಗ್ಗೆ ಹೇಳುತ್ತೇನೆ ಕೇಳು" ಎಂದು. ಇಲ್ಲಿ ಕೃಷ್ಣ ಹೇಳುತ್ತಿರುವ  ಸಾಂಖ್ಯಾ -  'ವೈದಿಕ ಸಾಂಖ್ಯ'. ವೈದಿಕ  ಸಾಂಖ್ಯವನ್ನು ಪ್ರಚಾರಕ್ಕೆ ತಂದವ ಕಪಿಲವಾಸುದೇವ.   ಸಂಖ್ಯಾ ಅಂದರೆ ಸಮ್ಯಕ್ ಖ್ಯಾತಿ ಅಥವಾ ಸರಿಯಾದ ಅರಿವು. ಇದು ಆತ್ಮದ ಅರಿವನ್ನು ಕೊಡುವ ಮೂಲತತ್ವ. ಈ ಕಾರಣದಿಂದ ಪ್ರಾಚೀನರು ಜ್ಞಾನವನ್ನು ಸಾಂಖ್ಯ ಎಂದು ಕರೆದರು. ಇಲ್ಲಿ ಸಾಂಖ್ಯ ಎಂದರೆ ಖಚಿತವಾದ ಆತ್ಮ ಜ್ಞಾನ.
ಇಲ್ಲಿ  ಹೇಳುತ್ತಿರುವ ಯೋಗ ಪತಂಜಲಿಯ ಯೋಗವಲ್ಲ, ವೈದಿಕ ಯೋಗ. ಸಾಮಾನ್ಯ ಯೋಗಕ್ಕೆ ದೇವರ ಅಸ್ತಿತ್ವದ ಧೃಡ ನಂಬಿಕೆ ಬೇಕಿಲ್ಲ. ಮನಸ್ಸನ್ನು ಯಾವುದೋ ಒಂದರ ಮೇಲೆ ನಿರಂತರ  ಏಕಾಗ್ರತೆ ಮಾಡುವುದರಿಂದ ಅನೇಕ ಪವಾಡಗಳನ್ನು ಮಾಡಬಹುದು. ಆದರೆ ಇದು ನಿಜವಾದ ಆತ್ಮ ಸಾಕ್ಷಾತ್ಕಾರವಲ್ಲ. ಹತ್ತು ವರ್ಷ ಯೋಗ ಸಾಧನೆ ಮಾಡಿ ನೀರಿನ ಮೇಲೆ ನಡೆಯಲು ಕಲಿತವನ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಈ ರೀತಿ ಯೋಗದಿಂದ ಪವಾಡಗಳನ್ನು ಕಲಿತು ಪ್ರದರ್ಶಿಸುವುದನ್ನು ವೈದಿಕ ಯೋಗ ನಿಷೇಧಿಸುತ್ತದೆ. ಎಂತಹ ಅಂತಃಶಕ್ತಿ ಪಡೆದರೂ ಅದನ್ನು ಪ್ರದರ್ಶಿಸಕೂಡದು. ನೀರಿನ ಮೇಲೆ ನಡೆಯಲು ಕಲಿತ ತಕ್ಷಣ ನಮಗೆ ಆತ್ಮ ಸಾಕ್ಷಾತ್ಕಾರವಾಗದು. ಇಂತಹ ಇಂದ್ರಜಾಲವನ್ನು ಯಾರು ಬೇಕಾದರೂ ಗಳಿಸಬಹುದು. ಇಲ್ಲಿ ಕೃಷ್ಣ ಹೇಳುತ್ತಿರುವುದು ಆತ್ಮ ತತ್ವವನ್ನು ಪಡೆಯುವುದಕ್ಕೆ ಜೀವನದಲ್ಲಿ ಮಾಡಬೇಕಾದ ಸಾಧನೆ ಏನು ಎನ್ನುವ ವಿಷಯ.
ಸಾಂಖ್ಯವನ್ನು ತಿಳಿಯುವ ಮಾತನ್ನು ಹೇಳಿದೆ, ಇನ್ನು ಜ್ಞಾನದ ದಾರಿಯಲ್ಲಿ ಸಾಗಿ ಸಿದ್ಧಿ ಪಡೆಯಬೇಕಾದರೆ ಬೇಕಾದ ಉಪಾಯವನ್ನು(ಯೋಗವನ್ನು) ಹೇಳುತ್ತೇನೆ ಕೇಳು ಎನ್ನುತ್ತಾನೆ ಕೃಷ್ಣ. ಯಾವ ಅರಿವನ್ನು ಪಡೆದರೆ ಸಾಧನೆಯ ದಾರಿಯಲ್ಲಿ ಕರ್ಮ ಬಂಧನವನ್ನು  ದಾಟಿ ಮುನ್ನೆಡೆಯಬಹುದು ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ. ಅಧ್ಯಾತ್ಮದ ಸಾಧನೆ ಅಂದರೇನು, ನಮ್ಮ ಜೀವನದಲ್ಲಿ ಅಧ್ಯಾತ್ಮದ ಸಾಧನೆ ಹೇಗಿರಬೇಕು, ಅದನ್ನು ಸಾಧಿಸುವುದು ಹೇಗೆ ಎನ್ನುವುದು ನಾವು ತಿಳಿಯಬೇಕಾದ ಮುಖ್ಯವಾದ ವಿಷಯ.
ಅನೇಕ ಮಂದಿ ಹೊರಗಿನಿಂದ ಹೇಗಿರಬೇಕು ಎಂದು ಅನೇಕ ರೀತಿ ಹೇಳುತ್ತಾರೆ. ಆದರೆ ಒಳಗಿನಿಂದ ಹೇಗಿರಬೇಕು ಎನ್ನುವುದನ್ನು ಯಾರೂ ಹೇಳುವುದಿಲ್ಲ. ಇಷ್ಟು ಹೊತ್ತು ಜಪ ಮಾಡಬೇಕು, ಈ ರೀತಿ ಮಡಿಯಾಗಿರಬೇಕು, ಇಷ್ಟು ಮಂತ್ರ ಹೇಳಬೇಕು ಇತ್ಯಾದಿ ವಿಚಾರವನ್ನು ಎಲ್ಲರೂ ಹೇಳುತ್ತಾರೆ. ಆದರೆ ಅಂತರಂಗ ಹೇಗಿರಬೇಕು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅಂತರಂಗದ ಸಾಧನೆ ಇಲ್ಲದೆ ಕೇವಲ ಬಾಹ್ಯ ವೇಷದಿಂದ, ಜಪ-ತಪದಿಂದ, ಎನನ್ನೂ ಸಾಧಿಸಲು ಸಾಧ್ಯವಿಲ್ಲ. ಯೋಗ ಸಾಧನೆ ಎಂದರೆ ನಾವು ಯಾವ ಬಟ್ಟೆ ತೊಡುತ್ತೇವೆ, ಮೈಗೆ ಏನು ಹಚ್ಚಿಕೊಳ್ಳುತ್ತೇವೆ ಎನ್ನುವುದಲ್ಲ. ಅದು ನಮ್ಮ ಅಂತರಂಗದ ನಡೆ. ಅಂತರಂಗ ಮತ್ತು ಬಹಿರಂಗ ಏಕವಾಗಿರುವ ಸ್ಥಿತಿ. ನಮ್ಮ ನಡೆ, ನಮ್ಮ ನಂಬಿಕೆ, ನಮ್ಮ ಪ್ರಾಮಾಣಿಕತೆಯೇ ನಮ್ಮ ನಿಜವಾದ ಧರ್ಮ. ಅಂತಹ ಅಂತರಂಗದ ಸಾಧನೆ ಅತಿ ಮುಖ್ಯ. ಅದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ.

ಜ್ಞಾನ   ಬೇಕು ನಿಜ, ಆದರೆ ಆತ್ಮ ಜ್ಞಾನವನ್ನು ಪಡೆಯಲು ನಮ್ಮ ಸಾಧನೆ ಏನಿರಬೇಕು, ಈ ಸಂಸಾರ ಬಂಧವನ್ನು ಕಳಚಿಕೊಳ್ಳುವ ಸಾಧನೆ ಯಾವುದು, ಎನ್ನುವುದನ್ನು  ಮುಂದಿನ ಶ್ಲೋಕಗಳಲ್ಲಿ  ಸುವಿವರವಾಗಿ ಕಾಣುತ್ತೇವೆ.

ನೇಹಾಭಿಕ್ರಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್  ೪೦

ನ ಇಹ ಅಭಿಕ್ರಮ ನಾಶಃ ಅಸ್ತಿ ಪ್ರತ್ಯವಾಯುಃ ನ ವಿದ್ಯತೇ
ಸು ಅಲ್ಪಮ್ ಅಪಿ ಅಸ್ಯ  ಧರ್ಮಸ್ಯ ತ್ರಾಯತೇ ಮಹತಃ  ಭಯಾತ್- -ಇಲ್ಲಿ ತೊದಲು ಹೆಜ್ಜೆ ಕೂಡಾ ಹಾಳಾಗದು. ಇಲ್ಲಿ ತೊಡರುಗಳಿಲ್ಲಈ ಧರ್ಮದ ತುಣುಕು ಕೂಡಾ ದೊಡ್ಡ  ಬೆದರಿನಿಂದ ಪಾರುಮಾಡಬಲ್ಲುದು.

ಸಾಧನೆಯ ಬಗ್ಗೆ ಹೇಳುವ ಮೊದಲು ಕೃಷ್ಣ ನಮಗೆ ಬರಬಹುದಾದ ಒಂದು ಸಂಶಯವನ್ನು ಈ ಶ್ಲೋಕದಲ್ಲಿ ಪರಿಹರಿಸಿದ್ದಾನೆ. ಎಲ್ಲರನ್ನೂ  ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ನಮ್ಮ ಹುಟ್ಟು, ಆನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರು ಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು!  ಇದರಿಂದ ಏನು ಉಪಯೋಗ ಎಂದು. ಒಂದು ಜನ್ಮದಲ್ಲಿ ಬ್ರಹ್ಮಸಾಕ್ಷಾತ್ಕಾರವಾಗದೆ ಇದ್ದರೆ ಆ ಎಲ್ಲಾ ಸಾಧನೆ ವ್ಯರ್ಥವೇ? ಖಂಡಿತವಾಗಿ ಇಲ್ಲ ಎನ್ನುತ್ತಾನೆ ಕೃಷ್ಣ. ನಮ್ಮ ಜೀವನದಲ್ಲಿ ಗಳಿಸಿದ  ಐಹಿಕ ಸಂಪತ್ತು(ಧನ, ಒಡವೆ, ಕೀರ್ತಿ, ಆಸ್ತಿ ಇತ್ಯಾದಿ) ಸತ್ತ ನಂತರ ನಮ್ಮೊಂದಿಗೆ ಬಾರದು ನಿಜ. ಆದರೆ ಅಧ್ಯಾತ್ಮ ಸಾಧನೆ  ಹಾಗಲ್ಲ. ಒಂದು ಜನ್ಮದಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಾಶವಾಗದು. ಈ ಜನ್ಮದಲ್ಲಿ ಅಧ್ಯಾತ್ಮದ ಒಂದು ಮೆಟ್ಟಿಲನ್ನು ಹತ್ತಿದರೆ ಮುಂದಿನ ಜನ್ಮದಲ್ಲಿ ಹುಟ್ಟುವಾಗಲೇ ನಾವು ಎರಡನೇ ಮೆಟ್ಟಲಲ್ಲಿ ಇರುತ್ತೇವೆ. ಹಿಂದಿನ ಜನ್ಮದಲ್ಲಿ ಏಲ್ಲಿ ನಿಂತಿದ್ದೆವೋ ಅಲ್ಲಿಂದ ಮುಂದುವರಿಯುವ ಪರಿಸರದಲ್ಲಿ ನಮ್ಮ ಜನನವಾಗುತ್ತದೆ. ಸಾಮಾಜಿಕವಾಗಿ ನೀವು ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳು ಜನಿಸುವುದನ್ನು, ಹಾಗು ಅತ್ಯಂತ ಕಡಿಮೆ ಸಮಯದಲ್ಲಿ ಮಹಾನ್ ಸಾಧನೆ ಮಾಡುವುದನ್ನು ಕಾಣುತ್ತೀರಿ. ಇದು ಅವರು ಹಿಂದಿನ ಜನ್ಮದಿಂದ ಪಡೆದು ಬಂದ ಜ್ಞಾನ.  ಹಿಂದಿನ ಜನ್ಮದ ಅಧ್ಯಾತ್ಮದ ಸಾಧನೆಯ ಮುಂದುವರಿದ ಭಾಗವೇ ಈ ಜನ್ಮ. ನಾವು ಆ ಜನ್ಮದಲ್ಲಿ ಎಲ್ಲಿ ನಿಲ್ಲಿಸಿದ್ದೆವೋ ಅಲ್ಲಿಂದಲೇ ಈ ಜನ್ಮದ ಸಾಧನೆ ಪ್ರಾರಂಭ.
ಒಂದು ವೇಳೆ ನಮಗೆ ಅಧ್ಯಾತ್ಮ ಸಾಧನೆ ಮಾಡಬೇಕು ಎನ್ನುವ ಅಂತರಂಗದ ತುಡಿತವಿದ್ದು, ಅದನ್ನು ಈ ಜನ್ಮದಲ್ಲಿ ಸಾಧಿಸಲಾಗದಿದ್ದಲ್ಲಿ ಮುಂದಿನ ಜನ್ಮದಲ್ಲಿ ಸಾಧನೆಗೆ ಬೇಕಾದ ವಾತಾವರಣದಲ್ಲಿ, ವಿದ್ವಾಂಸರ ಸಂಗವಿರುವ ಕಡೆ ನಮ್ಮ ಜನ್ಮವಾಗುತ್ತದೆ. ಆದ್ದರಿಂದ ನಮ್ಮ ಅಧ್ಯಾತ್ಮ ಚಿಂತನೆಯಲ್ಲಿ ನಮ್ಮ ಒಂದೊಂದು ಜನ್ಮ ಒಂದೊಂದು ತರಗತಿ ಇದ್ದಂತೆ. ಒಂದು ಗ್ರಂಥವನ್ನು ಸಂಪೂರ್ಣ ತಿಳಿಯಲು ನಾವು ಅನೇಕ  ಜನ್ಮ ಸಾಧನೆ  ಮಾಡಬೇಕು. ಈ ಕಾರಣದಿಂದ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಲ್ಲ. ಇಂದು ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿದ್ದರೂ ಸರಿ, ಆಧ್ಯಾತ್ಮ ಸಾಧನೆಗೆ ಇದು ಸಕಾಲ. ಇಂದೇ ನಿಮ್ಮ ಸಾಧನೆಯನ್ನು  ಆರಂಭಿಸಿ. ಅದು ನಿಮ್ಮನ್ನು  ಮೋಕ್ಷ ಮಾರ್ಗದತ್ತ ಕೊಂಡೊಯ್ಯುತ್ತದೆ ಎನ್ನುವುದು ಕಟುಸತ್ಯ. ಅಧ್ಯಾತ್ಮ ಪ್ರದರ್ಶನದ ವಸ್ತುವಲ್ಲ, ಅದು ಅಂತರಂಗದ ಸಾಧನೆ. ನಮ್ಮ ಜನ್ಮದಲ್ಲಿ ನಾವು ಅಧ್ಯಾತ್ಮದ ಕಿಂಚಿತ್ ಸಾಧನೆ ಮಾಡಿದರೂ ಕೂಡಾ, ಅದು ನಮ್ಮನ್ನು ಭಯದಿಂದ ಪಾರು ಮಾಡುತ್ತದೆ. ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಅಧ್ಯಾತ್ಮ.
ಸಾಧಕರಲ್ಲಿ ಮೂರು ವಿಧ. ಉತ್ತಮ ಸಾಧಕ, ಮಧ್ಯಮ ಸಾಧಕ, ಅಧಮ ಸಾಧಕ.  ಉತ್ತಮ ಸಾಧಕ ದೇವರು ಒಬ್ಬನೇ ಎಂದು ನಂಬಿರುತ್ತಾನೆ. ಇಂತಹ ಭಕ್ತರನ್ನು  ಭಾಗವತರು ಎನ್ನುತ್ತಾರೆ. ಆತನಿಗೆ ಭಗವಂತನಲ್ಲಿ ಏಕನಿಷ್ಠೆ ಇರುತ್ತದೆ. ಭಗವಂತನನ್ನು ಯಾವ ಶಬ್ದದಿಂದ ಕರೆದರೂ ಅದು ಆ ಆದಿಶಕ್ತಿಯಾದ ಪರಶಕ್ತಿಯನ್ನು ಹೇಳುತ್ತದೆ ಎನ್ನುವ ಸತ್ಯವನ್ನು ಆತ ತಿಳಿದಿರುತ್ತಾನೆ. ಈತ ನಿಜವಾದ ಸಾಧಕ, ಹಾಗು ಇದು ಸಾಧನೆಯ ನಿಜವಾದ ದಾರಿ. ಇನ್ನು ಮಧ್ಯಮ ಸಾಧಕರು: ಇವರು  ಪ್ರತಿಯೊಂದು ದೇವತೆಯನ್ನು ಪರಿ ಪರಿಯಾಗಿ ಪೂಜಿಸಿ ಕೊನೆಗೆ "ಕೃಷ್ಣಾರ್ಪಣ  ಮಸ್ತು" ಎಂದು ಭಗವಂತನಿಗೆ ಅರ್ಪಿಸುತ್ತಾರೆ. ಇವರನ್ನು ತ್ರೈವಿಧ್ಯರು ಎನ್ನುತ್ತಾರೆ.  ಇನ್ನು ಅಧಮ ಸಾಧಕ; ಈತ ದೇವರು  ನೂರಾರು ಎಂದು ನಂಬಿ ಪೂಜಿಸುತ್ತಿರುತ್ತಾನೆ. ಭಗವಂತ ಸರ್ವಾಂತರ್ಯಾಮಿ ಎನ್ನುವ ಭಾವನೆ ಈತನಿಗಿರುವುದಿಲ್ಲ. ಈತನಿಗೆ  ಅಧ್ಯಾತ್ಮದ ನಿಜವಾದ ಕಲ್ಪನೆ ಇರುವುದಿಲ್ಲ. ಆದ್ದರಿಂದ ಇದು ನಿಜವಾದ ಅಧ್ಯಾತ್ಮ ಸಾಧನೆ ಆಗದು.
ನಾವು  ಏಕನಿಷ್ಠೆಯಿಂದ ಮಾಡುವ ಸಾಧನೆ ಎಂದೂ ವ್ಯರ್ಥವಾಗದು. ಇಲ್ಲಿ ತೋರ್ಪಡಿಕೆಯ ಅಗತ್ಯವಿಲ್ಲ. ಆದರೆ  ಪ್ರಾಮಾಣಿಕ ನಿಷ್ಠೆ ಅಗತ್ಯ. ಗಣಪತಿಯನ್ನು ಪೂಜಿಸು, ವಾಯುವನ್ನು ಪೂಜಿಸು, ಸೂರ್ಯನನ್ನು ಪೂಜಿಸು, ಅಲ್ಲಾ ಎಂದು, ಯೇಸು ಎಂದು, ಶಿವನೆಂದು, ವಿಷ್ಣುವೆಂದು, ಏನೇ ಅಂದು ಪೂಜಿಸಿದರೂ ಕೂಡಾ, ಎಲ್ಲಾ ಶಬ್ದಗಳೂ ಆದಿಶಕ್ತಿಯಾದ ಪರಶಕ್ತಿ ಎನ್ನುವ ಸತ್ಯ ತಿಳಿದು, ಏಕನಿಷ್ಠೆ ಇಟ್ಟು, ಪರಿಶುದ್ಧ  ಪ್ರಾಮಾಣಿಕ ಚಿಂತನೆ ಮಾಡಿದಾಗ ಅದು ನಿಜವಾದ ಅಧ್ಯಾತ್ಮ ಸಾಧನೆಯಾಗುತ್ತದೆ ಹಾಗು ವ್ಯರ್ಥವಾಗದೆ ನಮ್ಮೊಂದಿಗೆ ಬರುತ್ತದೆ. ಇಂತಹ ಸಾಧನೆಯಲ್ಲಿ ದ್ವೇಷ, ಸ್ವಾರ್ಥ, ಅಹಂಕಾರ, ದುಃಖ ಎಂದೂ ಇರುವುದಿಲ್ಲ. ಎಲ್ಲವೂ ಭಗವಂತನ ಪ್ರಸಾದ ಎನ್ನುವ ಭಾವನೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.
ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನಂದನ
ಬಹುಶಾಖಾ ಹ್ಯನನಂತಾಶ್ಚ ಬುದ್ಧಯೋSವ್ಯವಸಾಯಿನಾಮ್    ॥೪೧॥

ವ್ಯವಸಾಯ ಆತ್ಮಿಕಾ ಬುದ್ಧಿಃ ಏಕಾ ಇಹ ಕುರುನಂದನ
ಬಹುಶಾಖಾಃ ಹಿ  ಅನಂತಾಃ ಚ ಬುದ್ಧಯಃ  ಅವ್ಯವಸಾಯಿನಾಮ್--ಕುರುಕುಮಾರ, ಈ ದಾರಿಯಲ್ಲಿ ಮನನದಿಂದ ಹದಗೊಂಡ ಮಾತು ಒಂದೇ ತರ.   ಹದವಿರದವರ ತುದಿಯಿರದ ಹರಟೆಗಳಿಗೆ ಹತ್ತು ಹಲವು ಟಿಸಿಲುಗಳು.

ಏಕನಿಷ್ಠೆಯಿಂದ ನಾವು ಮಾಡುವ ಸಾಧನೆ ವ್ಯರ್ಥವಲ್ಲ ಎನ್ನುವ ವಿಷಯ ನಮಗೆ ತಿಳಿಯಿತು, ಆದರೆ ಯಾವುದು ಸರಿ ಹಾಗು ಯಾವುದು ತಪ್ಪು ಎನ್ನುವುದನ್ನು ತಿಳಿಯುವ ಬಗೆ ಹೇಗೆ?  ಕೃಷ್ಣ ಈ ಶ್ಲೋಕದಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾನೆ.
ಎಲ್ಲಾ ಕಾಲದಲ್ಲೂ  ನಿರ್ಣಾಯಕವಾದ ಮಾತು ಏಕರೂಪವಾಗಿರುತ್ತದೆ. ನಿರ್ಣಯ ಇಲ್ಲದೆ ಆಡುವ ಮಾತು ಒಂದೊಂದು ಒಂದೊಂದು ತರ. ಗೊತ್ತಿಲ್ಲದೆ ಅಜ್ಞಾನದಿಂದ ಆಡುವ ಮಾತುಗಳಿಗೆ ತಲೆಬುಡವಿಲ್ಲದ ಅನಂತ ಶಾಖೆ. ಆದರೆ ನಿಜವಾಗಿ ತಿಳಿದವರ  ನಿರ್ಣಯಾತ್ಮಕವಾದ ಮಾತು ಸದಾ ಒಂದೇ ಆಗಿರುತ್ತದೆ. ಆದ್ದರಿಂದ ಸತ್ಯವನ್ನು ಅರಿತವರ ಮಾರ್ಗದರ್ಶನದಂತೆ ನಡೆ ಎನ್ನುತ್ತಾನೆ ಕೃಷ್ಣ.

Sunday, February 27, 2011

Bhagavad Gita Kannada Chapter-02-Shloka 33-38

ಅಥ ಚೇತ್ ತ್ವಂ ಧರ್ಮ್ಯಮಿಮಂ  ಸಂಗ್ರಾಮಂ ನ ಕರಿಷ್ಯಸಿ
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ  ೩೩

ಅಥ ಚೇತ್  ತ್ವಮ್ ಧರ್ಮ್ಯಮ್  ಇಮಮ್   ಸಂಗ್ರಾಮಮ್  ನ ಕರಿಷ್ಯಸಿ
ತತಃ ಸ್ವಧರ್ಮಮ್  ಕೀರ್ತಿಮ್  ಚ ಹಿತ್ವಾ ಪಾಪಮ್ ಅವಾಪ್ಸ್ಯಸಿ-- ಒಂದೊಮ್ಮೆ, ನ್ಯಾಯದಿಂದ ಒದಗಿ ಬಂದ ಈ ಕಾಳಗವನ್ನು ನೀನು ಕೈಗೊಳ್ಳದಿದ್ದರೆ,  ಆಗ , ನಿನ್ನ ಧರ್ಮವನ್ನೂ ಹೆಸರನ್ನೂ ಕಳೆದುಕೊಂಡು ಪಾಪವನ್ನು ಗಳಿಸುವೆ.

ಮುಂದುವರಿದು ಕೃಷ್ಣ  ಅರ್ಜುನನಲ್ಲಿ ಹೇಳುತ್ತಾನೆ:  "ನೀನು ಪಾಪದ ಭಯದಿಂದ ಯುದ್ಧ ಬೇಡ ಎಂದು ಹೇಳುತ್ತಿರುವೆ. ಆದರೆ ಯುದ್ಧ ಮಾಡಿದರೆ ಮಾತ್ರ ಧರ್ಮ ಉಳಿಯುತ್ತದೆ, ಹಾಗು ನಿನಗೆ ಸ್ವರ್ಗದ ಬಾಗಿಲು ತೆರೆಯುತ್ತದೆ. ಇಲ್ಲದೆ  ಇದ್ದಲ್ಲಿ  ನರಕದ ಬಾಗಿಲು ನಿನ್ನನ್ನು ಸ್ವಾಗತಿಸಲಿದೆ" ಎಂದು.
ಇಲ್ಲಿ ನೆಡೆಯುತ್ತಿರುವುದು ಒಂದು ಧರ್ಮ ಸಂಗ್ರಾಮ. ಅರ್ಜುನ ಧರ್ಮದ ಪರ ನಿಂತ ಮಹಾರಥಿ. ಆತ ಇಂತಹ ಧರ್ಮ ಸಂಗ್ರಾಮದಲ್ಲಿ ಧರ್ಮದ ಪರ ಹೋರಾಡದಿದ್ದರೆ ಸಹಜ ಧರ್ಮಕ್ಕೆ ವಿರುದ್ಧವಾಗಿ ಹಾಗು  ಸಾಮಾಜಿಕ ಧರ್ಮವನ್ನು ಬಿಟ್ಟು ನೆಡೆದುಕೊಂಡಂತೆ. ಇದೊಂದು ಕಳಂಕ ಮತ್ತು ಮಹಾ ಪಾಪವಾಗುತ್ತದೆ. ಈ ರೀತಿ ಪಾಪದ ಭಯದಿಂದ ಬಳಲುತ್ತಿರುವ ಅರ್ಜುನನಿಗೆ ಕೃಷ್ಣ ಯಾವುದು ನಿಜವಾದ ಪಾಪ ಎನ್ನುವುದನ್ನು ಮನವರಿಕೆ ಮಾಡಿಸುತ್ತಿದ್ದಾನೆ.
ಪಾಪ   ಕೃತ್ಯ  ಯಾವುದು ಎನ್ನುವುದನ್ನು ಸಂದರ್ಭ ನಿರ್ಧರಿಸುತ್ತದೆ. ಉದಾಹರಣೆಗೆ  'ಸತ್ಯ ನುಡಿಯುವುದು ಪುಣ್ಯದ ಕೆಲಸ' ಎಂದು ಹೇಳಲಾಗದು. ಅದು ಪಾಪವೋ ಪುಣ್ಯವೋ ಎನ್ನುವುದನ್ನು ಸಂದರ್ಭ ನಿರ್ಣಯಿಸುತ್ತದೆ. ದರೋಡೆಕೋರರಿಂದ ತಪ್ಪಿಸಿಕೊಳ್ಳಲು ಆಶ್ರಯ ಕೇಳಿ ಬಂದ ವ್ಯಕ್ತಿಯನ್ನು ಅಡಗಿಸಿಟ್ಟು, ದರೋಡೆಕೋರರು ಬಂದು ಪ್ರಶ್ನಿಸಿದಾಗ ಸತ್ಯ ನುಡಿಯುವುದು ಪಾಪದ ಕೆಲಸ.   ಅಡಗಿಸಿಟ್ಟ ವ್ಯಕ್ತಿಯ ರಕ್ಷಣೆಗೋಸ್ಕರ ಸುಳ್ಳನ್ನು ಹೇಳುವುದು ಪುಣ್ಯದ ಕೆಲಸ. ಇದೇ ರೀತಿ ಇಲ್ಲಿ ಅರ್ಜುನನಿಗೆ ಧರ್ಮದ ರಕ್ಷಣೆಗೋಸ್ಕರ  ಗುರು-ಪಿತಾಮಹರನ್ನು ಎದುರಿಸಿ ಹೋರಾಡುವುದೊಂದೇ  ಮಹಾ ಪುಣ್ಯದ ಕೆಲಸ ಎನ್ನುವುದನ್ನು ಕೃಷ್ಣ ಮನವರಿಕೆ ಮಾಡಿಸುತ್ತಿದ್ದಾನೆ.

ಅಕೀರ್ತಿಂ ಚಾಪಿ ಭೂತಾನಿ  ಕಥಯಿಷ್ಯಂತಿ ತೇSವ್ಯಯಾಮ್          
ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ   ೩೪

ಅಕೀರ್ತಿಮ್  ಚ ಅಪಿ  ಚಾಪಿ ಭೂತಾನಿ ಕಥಯಿಷ್ಯಂತಿ ತೇ ಅವ್ಯಯಾಮ್
ಸಂಭಾವಿತಸ್ಯ ಚ ಅಕೀರ್ತಿ  ಮರಣಾತ್ ಅತಿರಿಚ್ಯತೇ--ಜನರು ನಿನ್ನ ಕೊನೆಯಿರದ ಕಳಂಕದ ಕಥೆಯನ್ನು ಆಡಿಕೊಳ್ಳುತ್ತಾರೆ.  ಮರ್ಯಾದೆಯ ಮನುಷ್ಯನಿಗೆ ಕೆಟ್ಟ ಹೆಸರು ಸಾವಿಗಿಂತ ದಾರುಣ.

ಸಾಮಾಜಿಕ ಪರಿಣಾಮದ ಬಗ್ಗೆ ವಿವರಿಸುತ್ತಾ ಕೃಷ್ಣ ಹೇಳುತ್ತಾನೆ: ಒಬ್ಬ ಮರ್ಯಾದಸ್ತ ಮಾನವನಿಗೆ ಆತನ ಕೀರ್ತಿ ನಾಶವಾದರೆ ಆತ ಅವಮಾನಕ್ಕೊಳಗಾಗುತ್ತಾನೆ. ಅದರಿಂದ ಆತ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳಬಹುದು. ಜಗತ್ತಿನಲ್ಲಿ ಮಹಾನ್ ಬಿಲ್ಲೋಜ ಎನ್ನುವ ಕೀರ್ತಿ ಪಡೆದ ಅರ್ಜುನ ಈ ಧರ್ಮಯುದ್ಧದಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿ, ಜನರು ಆತನನ್ನು ಹೇಡಿ ಎಂದು ಆಡಿಕೊಳ್ಳುತ್ತಾರೆ. ಇತಿಹಾಸದ ಪುಟಗಳಲ್ಲಿ ಆತನ ಹೇಡಿತನ ಮುಂದಿನ ಪೀಳಿಗೆಗೆ ಕೆಟ್ಟ ಉದಾಹರಣೆಯಾಗಿ ನಿಲ್ಲುತ್ತದೆ. 'ಬಂಧು ಸ್ನೇಹಕ್ಕಾಗಿ ಯುದ್ಧದಿಂದ ಹಿಂದೆ ಸರಿದ'  ಎಂದು ಯಾರೂ ಹೇಳಲಾರರು. ಯುದ್ಧಕ್ಕೆ ಹೆದರಿ ಓಡಿಹೋದ ಹೇಡಿ ಎಂದು ನೀಚವಾಗಿ ಬಯ್ಯುತ್ತಾರೆ. ಒಬ್ಬ ಮರ್ಯಾದಸ್ತ ಮನುಷ್ಯನಿಗೆ ಅಕೀರ್ತಿ ಎನ್ನುವುದು ಸಾವಿಗಿಂತ ಕೀಳು. ಒಬ್ಬ ಕ್ಷತ್ರಿಯ ಇದನ್ನು ಸಹಿಸಲಾರ.

ಭಯಾದ್ ರಣಾದುಪರತಂ   ಮಂಸ್ಯಂತೇ ತ್ವಾಂ ಮಹಾರಥಾಃ         
ಯೇಷಾಂ ಚ ತ್ವಂ ಬಹುಮತೋ ಭೂತ್ವಾ ಯಾಸ್ಯಸಿ ಲಾಘವಮ್    ೩೫

ಭಯಾತ್  ರಣಾತ್ ಉಪರತಮ್  ಮಂಸ್ಯಂತೇ ತ್ವಾಮ್ ಮಹಾರಥಾಃ
ಯೇಷಾಮ್ ಚ ತ್ವಮ್ ಬಹುಮತಃ  ಭೂತ್ವಾ ಯಾಸ್ಯಸಿ ಲಾಘವಮ್--ಯಾರಿಗೆ ನೀನು ಘನತೆಯ ವ್ಯಕ್ತಿಯಾಗಿದ್ದೆಯೋ ಅಂಥ ಹಿರಿಯ ತೇರಾಳುಗಳೆದುರು ಹಗುರಾಗುವೆ;  ಅವರು ನಿನ್ನನ್ನು ಹೆದರಿ ಹೋರಾಡಲು ಹಿಂಜರಿದ ಹೇಡಿ ಎಂದು ಭಾವಿಸುತ್ತಾರೆ.
ಅವಾಚ್ಯವಾದಾಂಶ್ಚ ಬಹೂನ್ ವದಿಷ್ಯಂತಿ  ತವಾಹಿತಾಃ
ನಿಂದಂತಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಮ್     ೩೬

ಅವಾಚ್ಯ ವಾದಾನ್ ಚ  ಬಹೂನ್ ವದಿಷ್ಯಂತಿ  ತವ ಅಹಿತಾಃ  ನಿಂದಂತಃ
  ತವ ಸಾಮರ್ಥ್ಯಮ್  ತತಃ  ದುಃಖತರಮ್  ನು ಕಿಮ್ --ನಿನಗಾಗದವರು ನಿನ್ನ ಕೆಚ್ಚನ್ನು ಹೀಗಳೆಯುತ್ತ, ಬಾಯಿ ತುಂಬ ಆಡಬಾರದ ಮಾತುಗಳನ್ನಾಡುತ್ತಾರೆ.  ಅದಕ್ಕು ಮಿಗಿಲಾದ ಸಂಕಟ ಏನುಂಟು ?

"ಯಾರು ನಿನ್ನನ್ನು ದೊಡ್ಡ ವೀರ ಎಂದು ಕೈ ಮುಗಿದು ತಲೆಬಾಗಿ ನಿಲ್ಲುತ್ತಿದ್ದರೋ, ಅವರು ನಿನ್ನನ್ನು ಹುಲ್ಲಿಗಿಂತ ಕಡೆಯಾಗಿ ನೋಡುತ್ತಾರೆ. ಸಮಾಜದಲ್ಲಿ ಉನ್ನತ ಪುರುಷನಾಗಿರುವ ನೀನು ಅವಮಾನಿತನಾಗಿ ಬದುಕಬೇಕಾಗುತ್ತದೆ. ಆಡಬಾರದ ಅಸಭ್ಯ ಮಾತುಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಈ ಹಿಂದಿನ ಸರ್ವ ಸಾಧನೆಯೂ ಸುಳ್ಳು ಎಂದು ಹೀಗಳೆದು ಆಡಿಕೊಳ್ಳುತ್ತಾರೆ".
ಒಬ್ಬ 'ಉತ್ತಮ ನ್ಯಾಯಾಧೀಶ ' ಎಂದು ಹೆಸರು ಪಡೆದ ವ್ಯಕ್ತಿ, ಯಾವುದೋ ಒಂದು ಸಂದರ್ಭದಲ್ಲಿ  ತನ್ನ ಆತ್ಮೀಯ ಬಂಧುವಿಗೋಸ್ಕರ ಕೆಟ್ಟ ತೀರ್ಪನ್ನು ಕೊಟ್ಟರೆ, ಆತ ತನ್ನ ಸಂಪೂರ್ಣ ವ್ಯಕ್ತಿತ್ವವನ್ನು  ಕಳೆದುಕೊಳ್ಳುತ್ತಾನೆ. ಆತನ ಹಿಂದಿನ ಎಲ್ಲಾ ಸಾಧನೆಗಳು ಒಂದೇ ಕ್ಷಣದಲ್ಲಿ ಮಣ್ಣುಪಾಲಾಗುತ್ತದೆ. ಆತನಿಂದ ಶಿಕ್ಷೆಗೊಳಗಾದ ಅಪರಾಧಿಗಳು ಅಸಭ್ಯವಾಗಿ ಆತನನ್ನು ನಿಂದಿಸುತ್ತಾರೆ. ಇಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಈ ಸಾಮಾಜಿಕ ಅರಿವನ್ನು ಕೊಡುತ್ತಿದ್ದಾನೆ.

ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್         
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ   ೩೭

ಹತಃ  ವಾ ಪ್ರಾಪ್ಸ್ಯಸಿ ಸ್ವರ್ಗಮ್  ಜಿತ್ವಾ ವಾ ಭೋಕ್ಷ್ಯಸೇ ಮಹೀಮ್
ತಸ್ಮಾತ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯಃ-- ಸತ್ತರೆ ಸ್ವರ್ಗ ಸೇರುವೆ. ಗೆದ್ದರೆ ನೆಲವನ್ನಾಳುವೆ.     ಆದ್ದರಿಂದ,  ಕೌಂತೇಯ, ಹೋರಾಡುವ ತೀರ್ಮಾನ ತಳೆದು ಎದ್ದು ನಿಲ್ಲು.

"ಯುದ್ಧ ಮಾಡುವುದರಿಂದ ನಾವು ಗೆಲ್ಲುತ್ತೇವೆ ಎನ್ನುವುದು ತಿಳಿಯದು. ಧರ್ಮ ಯುದ್ಧದಲ್ಲಿ ಸತ್ತರೂ ಮೋಕ್ಷ, ಗೆದ್ದರೂ ಮೋಕ್ಷ. ಯಾವುದೋ ಸ್ವಾರ್ಥಕ್ಕಾಗಿ ಮಾಡುತ್ತಿರುವ ಯುದ್ಧವಿದಲ್ಲ. ಅನ್ಯಾಯದ ವಿರುದ್ಧ ಹೋರಾಡುವೆ ಎನ್ನುವ ಸಂಕಲ್ಪದಿಂದ ಎದ್ದು ನಿಂತು ಹೋರಾಡು" ಎನ್ನುತ್ತಾನೆ ಕೃಷ್ಣ.
ನಾವು ಮಾಡುವ ಕಾರ್ಯದಲ್ಲಿ ಧರ್ಮದ ಪರಿಜ್ಞಾನ ಮುಖ್ಯ. ಯಾವುದೇ ಸ್ವಾರ್ಥವಿಲ್ಲದೆ, ಧರ್ಮದ ಮಾರ್ಗವನ್ನು ಅನುಸರಿಸುವವನು ಎಂದೂ ಯಾವುದಕ್ಕೂ ಅಂಜುವ ಅಗತ್ಯವಿಲ್ಲ. ಧರ್ಮ ಮಾರ್ಗದಲ್ಲಿ ನಡೆದರೆ ನನಗೇನಾಗುತ್ತದೋ ಎನ್ನುವ ಭಯ ಬೇಡ. ಏಕೆಂದರೆ ಧರ್ಮದ ನಡೆಯಲ್ಲಿ ಪಲಿತಾಂಶ ಯಾವುದೇ ಇರಲಿ, ಅದು ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯುವ ಸಾಧನವಾಗಿರುತ್ತದೆ.
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ        
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ         ೩೮

ಸುಖ ದುಃಖೇ ಸಮೇ ಕೃತ್ವಾ ಲಾಭ ಅಲಾಭೌ ಜಯ ಅಜಯೌ
ತತಃ  ಯುದ್ಧಾಯ ಯುಜ್ಯಸ್ವ ನ ಏವಮ್  ಪಾಪಮ್ ಅವಾಪ್ಸ್ಯಸಿ--ಸುಖ-ದುಃಖಗಳನ್ನು, ಗಳಿಕೆ-ಇಳಿಕೆಗಳನ್ನು, ಸೋಲು-ಗೆಲುವನ್ನು ಒಂದೇ ನಿಟ್ಟಿನಿಂದ ಕಂಡು ಮತ್ತೆ ಹೋರಾಡತೊಡಗು. ಆಗ ನಿನಗೆ ಯಾವ  ಪಾಪವೂ ತಟ್ಟದು.

ಜೀವನದಲ್ಲಿ ಸುಖ-ದುಃಖ ಎನ್ನುವುದು ಅನಿವಾರ್ಯ. ಸುಖ-ದುಃಖ, ಗಳಿಕೆ-ಇಳಿಕೆ, ಸೋಲು-ಗೆಲುವು ಎಲ್ಲವನ್ನು ಸಮನಾಗಿ ಕಾಣುವವನಿಗೆ ಯಾವ ಪಾಪವೂ ಅಂಟದು. ಎಲ್ಲವನ್ನು ಸಮದೃಷ್ಟಿಯಿಂದ ಕಾಣುತ್ತ, ಕೇವಲ ಕರ್ತವ್ಯ ಪ್ರಜ್ಞೆಯಿಂದ ಹೋರಾಟ ಮಾಡುವುದು ಬದುಕಿನ ಯಶಸ್ವಿನ ಸೂತ್ರ. ಜಯಿಸಬೇಕು ಎನ್ನುವ ಸ್ವಾರ್ಥವಿಲ್ಲದೆ; ನಾವೇ ಲಾಭ ಗಳಿಸಬೇಕು-ಅವರು ಮಣ್ಣು ಮುಕ್ಕಲಿ ಎನ್ನುವ ದ್ವೇಷವಿಲ್ಲದೆ, ಎಲ್ಲವೂ ಭಗವಂತನ ಪ್ರಸಾದ ಎನ್ನುವ ಮನೋಭಾವನೆಯಿಂದ ಹೋರಾಡು ಎನ್ನುತ್ತಾನೆ ಕೃಷ್ಣ.
ಭಗವಂತನ ಈ ನುಡಿಯನ್ನು ಮನುಷ್ಯ ತನ್ನ  ಜೀವನದಲ್ಲಿ ಅಳವಡಿಸಿಕೊಂಡರೆ ಆತ ಎಂದೂ ದುಃಖಿ ಆಗಲಾರ. "ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ" ಎಂದು ಧರ್ಮ ಮಾರ್ಗದಲ್ಲಿ ಮುನ್ನುಗ್ಗುವವನಿಗೆ ಸದಾ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಆತನಿಗೆ ದುಃಖ-ದುಃಖವಾಗಿ ಕಾಣಲಾರದು, ಸೋಲು-ಸೋಲಾಗಿ ಕಾಣಲಾರದು. ಆತನಿಗೆ ಇಹವೂ-ಸ್ವರ್ಗ ಪರವೂ-ಸ್ವರ್ಗ.
ಇಲ್ಲಿಯವರೆಗೆ ಕೃಷ್ಣ ಆತ್ಮ ತತ್ವದ ಬಗೆಗೆ ಸಾಕಷ್ಟು ವಿವರಣೆಯನ್ನು ಅರ್ಜುನನಿಗೆ ಹೇಳಿದ. ಬದುಕು ಅಂದರೇನುಸಾವು ಅಂದರೇನು? ಆತ್ಮ-ಪರಮಾತ್ಮ, ಆ ತತ್ವಗಳ ಅಂತರಂಗದ ರಹಸ್ಯವೇನು? ಇವು ಹೇಗೆ ಯಾವ ಬದಲಾವಣೆ ಇಲ್ಲದೆ ಅನಾದಿನಿತ್ಯ ಎನ್ನುವುದನ್ನು ವಿವರಿಸಿ, ಯುದ್ಧದ ಅವಶ್ಯಕತೆಯನ್ನು ಹೇಳಿದ.  ಇಲ್ಲಿಂದ ಮುಂದೆ ಕೃಷ್ಣ  ಸಾಂಖ್ಯದಿಂದ ಕರ್ಮದ ಕಡೆ ತಿರುಗುತ್ತಾನೆ.
ನಾವು ಮನಸ್ಸಿನಲ್ಲಿ ವೇದಾಂತವನ್ನು ಎಷ್ಟು  ರೂಢಿಸಿಕೊಂಡರೂ, ತತ್ಕಾಲದ ಮನುಷ್ಯನ ದುಃಖ ಅದಮ್ಯವಾಗಿರುತ್ತದೆ-ಎನ್ನುವುದನ್ನು ಗೀತೆ ಸ್ಪಷ್ಟವಾಗಿ ತಿಳಿಸುತ್ತದೆ. ಭಗವಂತನಿಂದ ಗೀತೆಯ ಉಪದೇಶವನ್ನು ಪಡೆದ ಅರ್ಜುನ, ತನ್ನ ಮಗ ಅಭಿಮನ್ಯು ಯುದ್ಧದಲ್ಲಿ ಸತ್ತಾಗ ಪುನಃ ವಿಚಲಿತನಾಗುವುದನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ. ಪೂರ್ಣವಾದ ಆತ್ಮಸಾಕ್ಷಾತ್ಕಾರ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ. ಆತ್ಮ ಅಜರ-ಅಮರ ಎಂದು ತಿಳಿದರಷ್ಟೇ ಸಾಲದು, ಪೂರ್ಣವಾಗಿ ತಿಳಿಯಬೇಕು. ಅಂತಹ  ಸ್ಥಿತಿಯಲ್ಲಿ ಎಲ್ಲಾ ದುಃಖವನ್ನು ಮರೆತು ಇರಬಹುದು. ಆದರೆ ಈ ಆತ್ಮ ತತ್ವವನ್ನು ತಿಳಿಯುವ ಬಗೆ ಹೇಗೆಆತ್ಮದ ಜ್ಞಾನವನ್ನು ಪಡೆಯುವ ಸಾಧನವೇನು? ಕೇಳಿದ ತಕ್ಷಣ ಸಾಕ್ಷಾತ್ಕಾರವಾಗಿ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುವ ವಿಷಯ ಇದಲ್ಲ. ಅಂದಮೇಲೆ ಮಾನಸಿಕವಾಗಿ ಈ ಉತ್ತುಂಗದ ಸ್ಥಿತಿಯನ್ನು ತಲುಪುವುದು ಹೇಗೆ ಎಂದು ಕೃಷ್ಣ ಮುಂದೆ ವಿವರಿಸುತ್ತಾನೆ.

Saturday, February 26, 2011

Bhagavad Gita Kannada Chapter-02_Shloka-29-32

ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ ಆಶ್ಚರ್ಯವದ್ ವದತಿ ತಥೈವ ಚಾನ್ಯಃ        
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾSಪ್ಯೇನಂ ವೇದ ನಚೈವ ಕಶ್ಚಿತ್ ೨೯

ಆಶ್ಚರ್ಯವತ್ ಪಶ್ಯತಿ ಕಶ್ಚಿತ್ ಏನಮ್ ಆಶ್ಚರ್ಯವತ್ ವದತಿ ತಥಾ ಏವ ಚ ಅನ್ಯಃ
ಆಶ್ಚರ್ಯವತ್ ಚ ಏನಮ್ ಅನ್ಯಃ ಶೃಣೋತಿ ಶ್ರುತ್ವಾ ಅಪಿ ಏನಮ್ ವೇದ ನ ಚ ಏವ ಕಶ್ಚಿತ್-- ಯಾರಾದರೂ ಈ ಜೀವತತ್ವವನ್ನು ಅಥವಾ ಭಗವಂತನನ್ನು ಕಂಡುಕೊಂಡರೆ ಅದೊಂದು ಅಚ್ಚರಿಯಂತೆ. ಇನ್ನೊಬ್ಬ ಅಂದು ತೋರಿಸಿದರೆ ಅದೊಂದು ಅಚ್ಚರಿಯಂತೆ. ಮಗದೊಬ್ಬ ಅದನ್ನು ಕೇಳಿ ತಿಳಿದರೆ ಅದೂ ಒಂದಚ್ಚರಿಯಂತೆ.[ಯಾರೋ ಒಬ್ಬ ಭಗವಂತನನ್ನು ಅಚ್ಚರಿಗೊಂಡು ನೋಡುತ್ತಾನೆ. ಯಾರೋ ಒಬ್ಬ ಅಚ್ಚರಿಗೊಂಡು ಆಡುತ್ತಾನೆ. ಯಾರೋ ಒಬ್ಬ ಅವನನ್ನು ಅಚ್ಚರಿಗೊಂಡು ಕೇಳುತ್ತಾನೆ] ಎಷ್ಟು ಕೇಳಿದರೂ ಜೀವವನ್ನಾಗಲಿ, ಭಗವಂತನನ್ನಾಗಲಿ ಸರಿಯಾಗಿ ಅರಿತವನು ಯಾರೂ ಇಲ್ಲ.

ಇದು ಜೀವ ಹಾಗು ಭಗವಂತನ ಬಗ್ಗೆ ಇರುವ ಶ್ಲೋಕ. ಭಗವಂತನನ್ನು ಕಂಡವರು ವಿರಳ. ಒಂದು ವೇಳೆ ಬಹಳ ಸಾಧನೆಯಿಂದ ಆತನನ್ನು ಕಂಡುಕೊಂಡರೆ, ಕಂಡವರ ಉದ್ಗಾರ ಕೇವಲ ಅಚ್ಚರಿ. ಅದೊಂದು ವಿಸ್ಮಯ. ಈ ವಿಶ್ವವೇ ಒಂದು ಅದ್ಬುತ, ಹಾಗಿರುವಾಗ ವಿಶ್ವವನ್ನು ನಿರ್ಮಿಸಿದ ಆ ಭಗವಂತ ಅದೆಷ್ಟು ಅದ್ಬುತವಿರಬಹುದು? ಆದ್ದರಿಂದ ಆತನನ್ನು ಕಂಡವರು ಆತನ ಬಗ್ಗೆ ವರ್ಣಿಸಲಾರರು. ಒಂದು ವೇಳೆ ವರ್ಣಿಸಿದರೆ ಕೇಳುವವನಿಗೆ ಅದೊಂದು ಅಚ್ಚರಿ. ಯಾರು ಎಷ್ಟೇ ಕೇಳಲಿ ಕೊನೆಗೆ ಭಗವಂತ ಕೇವಲ ಅಚ್ಚರಿಯಾಗೇ ಉಳಿಯುತ್ತಾನೆ. ಏಕೆಂದರೆ ಭಗವಂತನನ್ನು ತಿಳಿಯುವುದು ಅಸಾಧ್ಯ.

ಇದೇ ರೀತಿ ಜೀವ. ಆತ್ಮ ಸಾಕ್ಷಾತ್ಕಾರ ಆದಾಗ ನಮಗಾಗುವುದು ಕೇವಲ ವಿಸ್ಮಯ. ಅದನ್ನು ವರ್ಣಿಸುವುದು ಅಸಾಧ್ಯ. ಜೀವ ಒಂದು ಬೆಳಕಿನ ಪುಂಜ. ಅದೊಂದು ಮಹಾನ್ ಅಚ್ಚರಿ. ಅದು ಸೂರ್ಯನಿಗಿಂತ ಪ್ರಖರ, ಚಂದ್ರನಿಗಿಂತ ತಂಪಾದ ಬೆಳಕು. ಜೀವ ತತ್ವದ ಬಗ್ಗೆ ಕೇಳಿ ಅದರ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರುವುದು ಅಸಾಧ್ಯ.

ದೇಹೀ ನಿತ್ಯಮವಧ್ಯೋSಯಂ ದೇಹೇ ಸರ್ವಸ್ಯ ಭಾರತ   
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ    ॥೩೦॥

ದೇಹೀ ನಿತ್ಯಮ್ ಅವಧ್ಯಃ ಅಯಮ್ ದೇಹೇ ಸರ್ವಸ್ಯ ಭಾರತ
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಮ್  ಶೋಚಿತುಮ್ ಅರ್ಹಸಿ - -ಓ ಭಾರತ, ಎಲ್ಲರ ದೇಹದಲ್ಲೂ ಇರುವ ಈ ಜೀವ ಎಂದೂ ಕೊಲ್ಲಲಾಗದ್ದು.[ಈ ಜೀವವನ್ನು ಕೊಲ್ಲುವುದು ಎಂದೂ ಸಾಧ್ಯವಿಲ್ಲ. ಏಕೆಂದರೆ ಎಲ್ಲರ ದೇಹದಲ್ಲೂ ಭಗವಂತ ಜೀವಕ್ಕೆ ಕಾವಲಿದ್ದಾನೆ] ಆದ್ದರಿಂದ ಎಲ್ಲ ಜೀವಿಗಳಿಗಾಗಿ ನೀನು ಅಳುವುದು ತರವಲ್ಲ.

ಮೂಲಭೂತವಾಗಿ ಯಾರ ದೇಹದಲ್ಲಿರುವ ಜೀವವನ್ನೂ  ಸಾಯಿಸುವುದು  ಸಾಧ್ಯವಿಲ್ಲ.  ದೇಹ ಸಾಯಬೇಕು ಎನ್ನುವುದು ವಿಧಿ ನಿಯಮ, ಹಾಗು ಅದಕ್ಕಾಗಿ ದುಃಖಪಡಬೇಕಾಗಿಲ್ಲ. ತನ್ನ ಸ್ವಂತ ಇಚ್ಛೆಯಿಂದ ದೇಹ ತ್ಯಜಿಸಲು ಸಾಧ್ಯವಿಲ್ಲ, ಹಾಗು ತ್ಯಜಿಸದೆ ಇರಲೂ ಸಾಧ್ಯವಿಲ್ಲ. "ಅಯಮ್  ದೇಹೇ ಸರ್ವಸ್ಯ ಭಾರತ" - "ರಕ್ಷಣೆ ಮಾಡುವ ಭಗವಂತ ಒಳಗೆ ಕುಳಿತಿರುವಾಗ ಹುಟ್ಟು ಸಾವಿಗೆ ನೀನು ಹೊಣೆಗಾರನಾಗಲಾರೆ. ಭರತ ವಂಶದಲ್ಲಿ ಹುಟ್ಟಿ ಬಂದ ನೀನು ಈ ಸತ್ಯವನ್ನು ಅರಿತುಕೊ" ಎನ್ನುತ್ತಾನೆ ಕೃಷ್ಣ.  ಜೀವವೆಂಬ ಬೆಳಕಿನ ಕಿಡಿಯನ್ನು ತಿಳಿದಾಗ, ಅದರ ಅರಿವು ಬಂದಾಗ ಹುಟ್ಟು ಸಾವಿನ ಮರ್ಮ ತಿಳಿಯುತ್ತದೆ. ಆಗ ಸಾವು ಒಂದು ಆನಂದದ ಅನುಭವವಾಗುತ್ತದೆ.
ಕೃಷ್ಣನ ಈ ಎಲ್ಲಾ ವಿಶ್ಲೇಷಣೆಯನ್ನು ಕೇಳಿದಾಗ ನಮ್ಮಲ್ಲಿ ಒಂದು ಅಭಿಪ್ರಾಯ ಮೂಡಬಹುದು . "ಕೊಲ್ಲುವುದು ತಪ್ಪಲ್ಲ, ಏಕೆಂದರೆ ಜೀವಕ್ಕೆ ಸಾವಿಲ್ಲ. ಎಲ್ಲವೂ ದೈವೇಚ್ಛೆ. ಯಾರು  ಯಾರನ್ನು  ಬೇಕಾದರೂ  ಕೊಲ್ಲಬಹುದು" ಎಂದು. ಆದರೆ ಅದು ಸರಿಯಲ್ಲ. ಏಕೆಂದರೆ ಈವರೆಗೆ ನಾವು ನೋಡಿದ ವಿಷಯ ಕೇವಲ ಬದುಕಿನ ಒಳನೋಟ.  ಸಮಾಜ ಜೀವಿಗಳಾದ ನಾವು ಒಳಗಿನ ಅರಿವನ್ನು ಸಮಾಜದ ವಿರುದ್ಧ ಬಳಸುವುದು ಅಧರ್ಮ. ಶಾಸ್ತ್ರಕ್ಕೆ ಅನುಗುಣವಾಗಿರುವ ಸಮಾಜ ಧರ್ಮವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಮುಂದಿನ ಶ್ಲೋಕದಲ್ಲಿ ಕೃಷ್ಣ ಈ ವಿಚಾರವನ್ನು ಅರ್ಜುನನ ಮುಖೇನ ನಮಗೆ ಸ್ಪಷ್ಟಪಡಿಸುತ್ತಾನೆ.
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ ।
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋSನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ    ॥೩೧॥

ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್ ಅರ್ಹಸಿ
ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ  ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ -- ನಿನ್ನ ಧರ್ಮವನ್ನು ಕಂಡಾದರೂ ನೀನು ಎದೆಗೆಡಬಾರದು  ಕ್ಷತ್ರಿಯನಾದವನಿಗೆ ನ್ಯಾಯದಿಂದ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.

ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಹಾಗು ಸ್ವಧರ್ಮ ಯಾವುದು ಸನಾತನ ಧರ್ಮ ಹೇಳುತ್ತದೆ: ‘ಅನ್ಯಾಯದ ವಿರುದ್ಧ ಹೋರಡಲೇ ಬೇಕು’ ಎಂದು; ಸಮಾಜ ಧರ್ಮ ಹೇಳುತ್ತದೆ: ಕ್ಷತ್ರಿಯನಾದವನು ಅಧರ್ಮದ ವಿರುದ್ಧ ಹೋರಾಡಬೇಕು, ಸಮಾಜದ ರಕ್ಷಣೆ ಮಾಡಬೇಕು ಹಾಗು ಈ ಪುಣ್ಯ ಕಾರ್ಯದಲ್ಲಿ 'ತನ್ನವರು' ಎಂದು ನೋಡಬಾರದು ಎಂದು. ಇನ್ನು ಅರ್ಜುನ ಮೂಲತಃ ಕ್ಷತ್ರಿಯನಾದ್ದರಿಂದ ಆತನ ಸ್ವಧರ್ಮ ‘ಅನ್ಯಾಯದ ವಿರುದ್ಧ ಹೋರಾಟ’. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ ಹಾಗು ಸನಾತನಧರ್ಮ  ಏಕವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧ ಹೋರಾಡುವುದು ಮಹಾ ಪುಣ್ಯದ ಕೆಲಸ. ಸಮಾಜ ಸುರಕ್ಷತೆಗಾಗಿ ಹೋರಾಡುವುದು ಕ್ಷತ್ರಿಯನ ಮಹಾ ತಪಸ್ಸು. ಇದಕ್ಕಿಂತ ಪುಣ್ಯಕಾರ್ಯ ಇನ್ನೊಂದಿಲ್ಲ.

ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್   
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್    ॥೩೨॥

ಯದೃಚ್ಛಯಾ ಚ ಉಪಪನ್ನಮ್  ಸ್ವರ್ಗ ದ್ವಾರಮ್ ಅಪಾವೃತಮ್
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮ್ ಈದೃಶಮ್--ಇಂಥ ಕಾಳಗವೆಂದರೆ ದೈವೇಚ್ಛೆಯಿಂದ ಕೂಡಿಬಂದ, ತೆರೆದಿಟ್ಟ ಸ್ವರ್ಗದ ಬಾಗಿಲು. ಪಾರ್ಥ, ಭಾಗ್ಯವಂತರಾದ ಕ್ಷತ್ರಿಯರು ಮಾತ್ರವೇ ಇಂಥ ಅವಕಾಶ ಪಡೆಯುತ್ತಾರೆ.

ಕಾಲು ಕೆದಕಿ ಯುದ್ಧ ಮಾಡುವುದು ತಪ್ಪು. ಆದರೆ ಇಲ್ಲಿ ಸಮಷ್ಟಿಯಾಗಿ ಬಂದ ಯುದ್ಧದ ಹೊಣೆಗಾರಿಕೆ ಪಾಂಡವರದ್ದಲ್ಲ. ತನ್ನಷ್ಟಕ್ಕೆ ಬಂದು ಎರಗಿದ ಈ ಯುದ್ಧ ದೈವೇಚ್ಛೆ. ಈಶ್ವರನ ಇಚ್ಚೆಯಂತೆ ಎಲ್ಲವೂ ಆಗುವಾಗ, ಏನು ಬಂತೋ ಅದನ್ನು ಹಾಗೇ ಸ್ವೀಕರಿಸಬೇಕು. ಅನ್ಯಾಯದ ವಿರುದ್ಧ ಧರ್ಮಯುದ್ಧ ಮಾಡಿದವನಿಗೆ ಸ್ವರ್ಗದ ಬಾಗಿಲು ಸದಾ ತೆರೆದಿರುತ್ತದೆ. ಇಂತಹ ಯುದ್ಧದ ಅವಕಾಶ ಒಬ್ಬ ಕ್ಷತ್ರಿಯನಿಗೆ ಬರಬೇಕಾದರೆ ಆತ ಪುಣ್ಯ ಮಾಡಿರಬೇಕು.  ಇಂತಹ ಸಮಯದಲ್ಲಿ ಕ್ಷತ್ರಿಯನಾದವನು ಕಣ್ಮುಚ್ಚಿ ಕುಳಿತುಕೊಳ್ಳುವುದು ಮಹಾಪಾಪ.
ಇಲ್ಲಿ ನಮಗೆ ಕೃಷ್ಣ ಅರ್ಜುನನಲ್ಲಿ ಯುದ್ಧಮಾಡು ಎಂದು ಏಕೆ ಹೇಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರತಿಯೊಬ್ಬ ಮಾನವನೂ  ಸನಾತನಧರ್ಮ, ಅದಕ್ಕನುಗುಣವಾಗಿ ಸಮಾಜಧರ್ಮ ಹಾಗು ಸಮಾಜ ಮತ್ತು ಸನಾತನ ಧರ್ಮಕ್ಕನುಗುಣವಾಗಿ ಸ್ವಧರ್ಮ-ಈ ನೆಲೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕು. ಈ ನೆಲೆಯಲ್ಲಿ ಮಾಡಿದ ಯಾವ ಕಾರ್ಯವೂ ಪಾಪ ಕಾರ್ಯವಾಗದು. ಮುಂದಿನ ಶ್ಲೋಕದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ಕೃಷ್ಣ ಕೊಡುತ್ತಾನೆ.  ಸನಾತನಧರ್ಮ, ಸಮಾಜಧರ್ಮ ಮತ್ತು ಸ್ವಧರ್ಮ ಅಂದರೆ ಏನು ಎನ್ನುವುದನ್ನು ಈಗಾಗಲೇ ಅಧ್ಯಾಯ ಒಂದರಲ್ಲಿ (ಶ್ಲೋಕ-೪೦) ವಿವರವಾಗಿ ವಿಶ್ಲೇಷಿಸಲಾಗಿದೆ.