Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, December 5, 2011

Bhagavad GitA Kannada Chapter-15 Shloka-12-14


ಯದಾದಿತ್ಯಗತಂ ತೇಜೋ ಜಗದ್ ಭಾಸಯತೇsಖಿಲಮ್
ಯಚ್ಚಂದ್ರಮಸಿ ಯಚ್ಚಾಗ್ನೌ ತತ್  ತೇಜೋ ವಿದ್ಧಿ ಮಾಮಕಮ್           ೧೨

ತ್ ಆದಿತ್ಯಗತಮ್  ತೇಜಃ  ಜಗತ್  ಭಾಸಯತೇಖಿಲಮ್
ಯತ್ ಚಂದ್ರಮ್ ಅಸಿ ಯತ್ ಚ ಅಗ್ನೌ ತತ್  ತೇಜಃ  ವಿದ್ಧಿ ಮಾಮಕಮ್ –ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನದೆ ಬೆಳಕೆಂದು ತಿಳಿ.

ಹಿಂದೆ-ಸೂರ್ಯನಾಗಲಿ, ಚಂದ್ರನಾಗಲಿ, ಅಗ್ನಿಯಾಗಲಿ ನನ್ನನ್ನು ಬೆಳಗಿಸುವುದಿಲ್ಲ ಎಂದಿದ್ದ ಕೃಷ್ಣ, ಇಲ್ಲಿ ಸೂರ್ಯ ಬೆಳಗುವುದು, ಚಂದ್ರ ಬೆಳಗುವುದು, ಅಗ್ನಿ ಬೆಳಗುವುದು -ಎಲ್ಲವೂ ನನ್ನಿಂದ ಎನ್ನುತ್ತಾನೆ. ಎಲ್ಲಾ ಬೆಳಕಿನ ಮೂಲ ಬೆಳಕು ಭಗವಂತ. ಬೆಳಕಿನ ಮೂಲಗಳೆಂದರೆ ಸೂರ್ಯ, ಚಂದ್ರ, ನಕ್ಷತ್ರ, ಮಿಂಚು, ವಿದ್ಯುತ್  ಹಾಗು ಅಗ್ನಿ. ಈ ಎಲ್ಲಾ ಬೆಳಕಿನ ಪುಂಜಗಳಿಗೆ ಬೆಳಕನ್ನು ಕೊಡುವನು ಆ ಭಗವಂತ. ಅಂದರೆ "ಸೂರ್ಯನಿಂದ ಹಿಡಿದು, ಚಂದ್ರ ತಾರೆಗಳಾಗಲಿ, ಆಕಾಶದಲ್ಲಿ ಬೆಳಗುವ ಮಿಂಚಿರಲಿ, ಅಥವಾ ಉರಿಯುವ  ಅಗ್ನಿಯಾಗಲಿ, ಈ ಎಲ್ಲಾ ಬೆಳಕಿನ ಪುಂಜಗಳು ಬೆಳಗುವುದು ಭಗವಂತನೆಂಬ ಮೂಲ ಬೆಳಕಿನಿಂದ. ಯಾವ ಬೆಳಕು ನಮ್ಮ ಸ್ವರೂಪದೊಳಗೆ ಅಣೋರಣೀಯವಾಗಿ ನಿಂತು ನಮ್ಮನ್ನು ನಡೆಸುತ್ತಿದೆಯೋ, ಅದೇ ಬೆಳಕು ಮಹತೋಮಹಿಯಾಗಿ ಇಡೀ ಬ್ರಹ್ಮಾಂಡವನ್ನು ಬೆಳಗಿಸುತ್ತಿದೆ. ಒಟ್ಟಿನಲ್ಲಿ ಎಲ್ಲ ಬೆಳಕುಗಳ ಮೂಲ ತೇಜಸ್ಸು ಆ ಭಗವಂತ. ಉಪನಿಷತ್ಕಾರರು ಇಂಥಹ ಮಹಾ ಬೆಳಕಿನ ಬಗ್ಗೆ ವಿವರಿಸುತ್ತ ಹೇಳುತ್ತಾರೆ: “..ಯದೇತದ್ ವಿದ್ಯುತೋ  ವ್ಯದ್ಯುತದಾ ಇತಿ..” ಎಂದು (ಕೇನ-೪.೪).  ಅವರು ಇಲ್ಲಿ ಈ ಬೆಳಕನ್ನು ‘ಆ-ಇತಿ’ ಎನ್ನುತ್ತಾರೆ. ಅಂದರೆ ಇದೊಂದು 'ವಿಸ್ಮಯ' ಎಂದರ್ಥ. ತಿಳಿಯುವ ತನಕ ಆಶ್ಚರ್ಯ, ತಿಳಿದ ಮೇಲೆ ಆನಂದ.
ಉಪಾಸನೆಯ ದೃಷ್ಟಿಯಲ್ಲಿ ಈ ಶ್ಲೋಕವನ್ನು ನೋಡಿದರೆ: ಸೂರ್ಯನಲ್ಲಿರುವ ತೇಜಸ್ಸು-ನಾರಾಯಣನ ತೇಜಸ್ಸು, ಚಂದ್ರನಲ್ಲಿರುವ ತೇಜಸ್ಸು-ಧನ್ವಂತರಿಯ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು-ಪರಶುರಾಮನ ತೇಜಸ್ಸು. ಹೀಗೆ ಪ್ರತಿಯೊಂದು ಬೆಳಕಿನ ಮೂಲ ಬೆಳಕು ಭಗವಂತ ಎಂದು ನಾವು  ಈ ಶ್ಲೋಕದಿಂದ ಉಪಾಸನೆ ಮಾಡಬಹುದು.

ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ
ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ               ೧೩

ಗಾಮ್ ಆವಿಶ್ಯ ಚ ಭೂತಾನಿ ಧಾರಯಾಮಿ ಅಮ್ ಓಜಸಾ
ಪುಷ್ಣಾಮಿ ಚ ಓಷಧೀಃ ಸರ್ವಾಃ ಸೋಮಃ  ಭೂತ್ವಾ ರಸತ್ಮಕಃ –ಭೂಮಿಯೊಳಹೊಕ್ಕು ಜೀವಿಗಳನ್ನು ನಾನೆ ನನ್ನಳವಿನಿಂದ ಹೊತ್ತಿದ್ದೇನೆ. ಅಮೃತ ರಸಮಯನಾದ ಚಂದ್ರನಾಗಿ [ಸೌಮ್ಯರೂಪನಾದ್ದರಿಂದ ‘ಸೋಮ’ ನಾಮಕನಾಗಿ ಚಂದ್ರನೊಳಗಿದ್ದು] ಎಲ್ಲ ಸಸ್ಯಗಳನ್ನು ಬೆಳೆಸುತ್ತೇನೆ.

ಇಲ್ಲಿ ಗಾಮ್ ಅಂದರೆ ‘ಪ್ರಥಿವಿ’. ಈ ಭೂಮಿ ಆಕಾಶದಲ್ಲಿ ನಿರಾಲಂಭವಾಗಿ ನಿಲ್ಲುವಂತೆ ಸಂಕರ್ಷಣ ಶಕ್ತಿ (ಶೇಷಶಕ್ತಿ-ಆಕರ್ಷಣಶಕ್ತಿ- Gravitational force) ರೂಪದಲ್ಲಿ ಭೂಮಿಯನ್ನು ಹೊತ್ತವನು ಭಗವಂತ. ಇದು ಭಗವಂತನ ವರಾಹ ಅವತಾರವನ್ನು ವಿವರಿಸುತ್ತದೆ. ಕೆಳಕ್ಕೆ ಕುಸಿದು ನಾಶವಾಗಲಿದ್ದ ಭೂಮಿಯನ್ನು ಭಗವಂತ ವರಾಹ ರೂಪದಲ್ಲಿ  ಎತ್ತಿ ಹಿಡಿದ-ಎನ್ನುವುದು ಕಥೆ.  ಇಲ್ಲಿ ಭೂಮಿ ಕೆಳಕ್ಕೆ ಕುಸಿಯುವುದು ಅಂದರೆ ಅದು ತನ್ನ ಕಕ್ಷೆಯಿಂದ ಕಳಚುವುದು. ಭೂಮಿ ಕಕ್ಷೆಯನ್ನು ಬಿಟ್ಟರೆ ಅದು ಕ್ಷಣಾರ್ಧದಲ್ಲಿ ನಾಶವಾಗುತ್ತದೆ. ತಾಮಸ ಲೋಕದ ದೈತ್ಯ ಹಿರಣ್ಯಾಕ್ಷ ಭೂಮಿಯನ್ನು ಕಕ್ಷೆಯಿಂದ ತಪ್ಪಿಸಿದವ. “ನನಗೆ ನಿಲ್ಲಲು ಒಂದು ಜಾಗ ಮತ್ತು ಒಂದು ಕೋಲನ್ನು ಕೊಟ್ಟರೆ ನಾನು ಭೂಮಿಯನ್ನು ಕಕ್ಷೆಯಿಂದ ಕಳಚಬಲ್ಲೆ” ಎಂದು ನ್ಯೂಟನ್ ಹೇಳಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಈ ರೀತಿ ತಾಮಸ ಲೋಕದ ಈ ದೈತ್ಯ ಭೂಮಿಯನ್ನು ಕಕ್ಷೆಯಿಂದ ತಪ್ಪಿಸಿದಾಗ, ಭಗವಂತ ಅದನ್ನು ಮರಳಿ ಕಕ್ಷೆಯಲ್ಲಿಟ್ಟು ರಕ್ಷಿಸಿದ. ವೇದಕಾಲದ ಋಷಿಗಳಿಗೆ 'ಭೂಮಿಯನ್ನು ಧಾರಣೆ ಮಾಡಿದ ಭಗವಂತ ವರಾಹ ರೂಪನಾಗಿ ಕಂಡ'. ಈ ಕಾರಣದಿಂದ ಭೂಮಿಯನ್ನು ಧಾರಣೆ ಮಾಡಿರುವ ಭಗವಂತನ ರೂಪವನ್ನು ವರಾಹ ರೂಪದಲ್ಲಿ ಕಾಣುತ್ತೇವೆ. ವರ=ಶ್ರೇಷ್ಠ. ಗಾಯತ್ರಿಯಲ್ಲಿ ‘ವರೇಣ್ಯಂ’ ಎನ್ನುವಲ್ಲಿ ಭೂಮಿಯನ್ನು ಧಾರಣೆ ಮಾಡಿರುವ ಭಗವಂತನ ವರಾಹ ರೂಪದ ಚಿಂತನೆ ಇದೆ. ರಷ್ಯನ್ ವಿಜ್ಞಾನಿ ವಿಲಿಕೋವಸ್ಕಿ(Velikovsky) ತನ್ನ “Worlds in collision”  ಎನ್ನುವ ಪುಸ್ತಕದಲ್ಲಿ ಹೇಳುತ್ತಾನೆ : “ವೈಜ್ಞಾನಿಕವಾಗಿ ಎರಡು ಬಾರಿ ಭೂಮಿ ತನ್ನ ಕಕ್ಷೆಯಿಂದ ತಪ್ಪಿದ್ದು ನಿಜ, ಆದರೆ ನಮಗೆ ಇದು ಏಕೆ ಎನ್ನುವುದು ತಿಳಿದಿಲ್ಲ” ಎಂದು. ಆತ ಅಲ್ಲಿ ಭಾಗವತವನ್ನು ಉಲ್ಲೇಖಿಸಿ ಹೇಳುತ್ತಾನೆ: “ಭಾರತದ ಋಷಿಗಳು ಈ ವಿಚಾರವನ್ನು ತಿಳಿದಿದ್ದರು, ಒಂದು ದುಷ್ಟ ಶಕ್ತಿ ಭೂಮಿಯನ್ನು ಕಕ್ಷೆಯಿಂದ ಕಳಚಿತು, ಹಾಗು ಇನ್ನೊಂದು ದೈವೀ ಶಕ್ತಿ ಅದನ್ನು ಮರಳಿ ಕಕ್ಷೆಯಲ್ಲಿಟ್ಟಿತು” ಎಂದು. ಇದನ್ನೇ ಈ ಶ್ಲೋಕದಲ್ಲಿ ಕೃಷ್ಣ “ಗ್ರಾಮ್ ಧಾರಯಾಮಿ” ಎಂದಿದ್ದಾನೆ.
ಭೂಮಿಯನ್ನು ಧಾರಣೆ ಮಾಡಿರುವ ಭಗವಂತ ಭೂಮಿಯೊಳಗಿದ್ದು, ಪ್ರತಿಯೊಂದು ಜೀವಜಾತದೊಳಗಿದ್ದು ನಮ್ಮನ್ನು ರಕ್ಷಿಸುತ್ತಿದ್ದಾನೆ. ಉಪನಿಷತ್ತಿನಲ್ಲಿ ಹೇಳುವಂತೆ: “ಯ ಪ್ರಥಿವಿ ಅಂತರೋ ಯಮಯತಿ ಏಷತ ಆತ್ಮಾ ಅಂತರ್ಯಾಮಿ ಅಮೃತಃ”. ಅಂದರೆ  "ಪ್ರಥಿವಿಯ ಒಳಗಿದ್ದು ಭಗವಂತ ನಮ್ಮನ್ನು ರಕ್ಷಿಸುತ್ತಿದ್ದರೂ ಕೂಡ, ಅದು ನಮಗೆ ತಿಳಿದಿಲ್ಲ". ಈ ರೀತಿ ಭೂಮಿಯನ್ನು ಧಾರಣೆ ಮಾಡಿ ರಕ್ಷಿಸುವ ಭಗವಂತನ ಶಕ್ತಿಯನ್ನು ಇಲ್ಲಿ  ‘ಓಜಸ್ಸು’ ಎಂದಿದ್ದಾರೆ. ಅಂದರೆ ಎಲ್ಲ ಅಡೆ-ತಡೆಗಳನ್ನು ನಿಗ್ರಹ ಮಾಡುವ ಶಕ್ತಿ.
ನಮ್ಮಲ್ಲಿ ಸಂಧ್ಯಾವಂದನೆ ಮಾಡುವಾಗ ಮನಸ್ಸಿನ ಸ್ನಾನದ ಒಂದು ಕ್ರಮವಿದೆ. ನಮ್ಮ ಸಹಸ್ರಾರದಲ್ಲಿನ ಚಂದ್ರ ಮಂಡಲದಲ್ಲಿ ಕುಳಿತಿರುವ  ಧನ್ವಂತರಿಯ ಕೈಯಲ್ಲಿರುವ ಅಮೃತಕಲಶದಿಂದ ಅಮೃತಧಾರೆ ಕೆಳಕ್ಕೆ ಹರಿದು ಬರುತ್ತಿರುವುದನ್ನು ನಾವು ಮಾನಸಿಕವಾಗಿ ಅನುಭವಿಸಿ ಸ್ನಾನ ಮಾಡುವುದು. ಇಲ್ಲಿ ಇಪ್ಪತ್ನಾಲ್ಕು ಬಾರಿ ‘ಓಂ-ವಂ’ ಎಂದು ಹೇಳುವುದರಿಂದ ಆ ಚಂದ್ರಮಂಡಲದ ಅಮೃತ ದ್ರವ ಹರಿದು ನಾವು ಒಳಗಿನಿಂದ ಶುದ್ಧರಾಗುತ್ತೇವೆ. ಇದನ್ನು ಭಗವಂತನಲ್ಲಿ ಮನಸ್ಸನ್ನು ಏಕಾಂತಗೊಳಿಸಿ, ಮಾನಸಿಕವಾಗಿ ಅನುಭವಿಸಿಕೊಂಡು ಮಾಡಿದಾಗ ಮನಸ್ಸು ಶುದ್ಧಯಾಗುತ್ತದೆ.  ನಮ್ಮಲ್ಲಿರುವ  ಎಲ್ಲಕ್ಕಿಂತ ದೊಡ್ಡ ಕೊಳೆ ನಮ್ಮ ಮನಸ್ಸಿನಲ್ಲಿರುವ ಪಾಪಪುರುಷ. ಕೆಟ್ಟ ಭಾವನೆ, ಕೆಟ್ಟ ಯೋಚನೆ, ಅಸೂಯೆ, ಹೀಗೆ ಎಲ್ಲವೂ ತುಂಬಿರುವುದು ನಮ್ಮ ಮನಸ್ಸಿನಲ್ಲಿ. ಅದು ಹೋಗಬೇಕಾದರೆ ಈ ಚಂದ್ರ ಮಂಡಲದ ಅಮೃತ ಕಲಶದಿಂದ ಬರುವ ಅಮೃತ ದ್ರವದಿಂದ  ಸ್ನಾನಮಾಡಬೇಕು. ಇದನ್ನೇ ಕೃಷ್ಣ ಇಲ್ಲಿ “ಸೋಮೋ ಭೂತ್ವಾ ರಸಾತ್ಮಕಃ” ಎಂದ.  ಭಗವಂತ ಸೋಮ ರೂಪದಲ್ಲಿ ಚಂದ್ರನಲ್ಲಿ ತುಂಬಿದ್ದಾನೆ. ಆತ ನೀರಿನ ನಿಯಾಮಕ ಚಂದ್ರನಲ್ಲಿ ಸೋಮನಾಗಿ, ವನಸ್ಪತಿಗಳಲ್ಲಿ ಜೀವರಸ ತುಂಬಿದ. ನಾವು ಯಾವುದನ್ನು ತಿಂದು ಬದುಕುತ್ತೇವೆ ಆ ಗಿಡವನ್ನು ರಕ್ಷಿಸಿ ಬೆಳೆಸುವವ-ಚಂದ್ರನಲ್ಲಿ ತುಂಬಿರುವ ಸೋಮ ರೂಪಿ ಭಗವಂತ.

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್                 ೧೪

ಅಹಮ್  ವೈಶ್ವಾನರಃ  ಭೂತ್ವಾ ಪ್ರಾಣಿನಾಮ್  ದೇಹಮ್ ಆಶ್ರಿತಃ
ಪ್ರಾಣಪಾನ ಸಮಾಯುಕ್ತಃ ಪಚಾಮಿ ಅನ್ನಮ್  ಚತುರ್ವಿಧಮ್ –ನಾನು ‘ವೈಶ್ವಾನರ’ನಾಗಿ ಜೀವಿಗಳ ದೇಹದೊಳಗಿದ್ದು ಪ್ರಾಣ-ಅಪಾನರಿಂದೊಡಗೋಡಿ [ತಿನ್ನುವ, ಚೀಪುವ, ನೆಕ್ಕುವ, ಕುಡಿಯುವ] ನಾಲ್ಕು ಬಗೆಯ ಆಹಾರವನ್ನು ಕರಗಿಸುತ್ತೇನೆ.

ಇಲ್ಲಿ 'ಪಚಾಮ್ಯನ್ನಂ ಚರ್ತುವಿಧಮ್' ಎಂದರೆ ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ" ಎಂದರ್ಥ. ಅನ್ನವೆಂದರೆ ಎಲ್ಲ ರೀತಿಯ 'ಆಹಾರ’. "ಪ್ರಾಣಿನಾಂ ದೇಹಮಾಶ್ರಿತಃ" ಎಂದರೆ 'ಪ್ರಾಣಿಗಳು ತಿನ್ನಬಲ್ಲ ಆಹಾರ ಎಂದರ್ಥ. ಪ್ರಾಣಿಗಳ ಅಹಾರವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು- ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ. ಭಕ್ಷ್ಯ ಅಂದರೆ ಅಗಿದು, ಕಡಿದು ತಿನ್ನಲು ಯೋಗ್ಯವಾದುದು (ತಿನ್ನುವುದು);  ಭೋಜ್ಯ ಅಂದರೆ  ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು (ಉಣ್ಣುವುದು). ಲೇಹ್ಯ ಅಂದರೆ  ನೆಕ್ಕಿ ತಿನ್ನಲು ಯೋಗ್ಯವಾದುದು; ಚೋಷ್ಯ  ಅಂದರೆ  ಕುಡಿಯಲು ಯೋಗ್ಯವಾದುದು. ಈ ನಾಲ್ಕು ವಿಧದ ಅನ್ನವನ್ನು ಸೇವಿಸುವ ಎಲ್ಲ ಜೀವಿಗಳ ಜಠರದಲ್ಲಿ ಅಗ್ನಿಯ ರೂಪದಲ್ಲಿದ್ದು, ನಾಲ್ಕು ಬಗೆಯ ಅನ್ನವನ್ನು ಮೂರು ಬಗೆ(ಸೂಕ್ಷ್ಮ-ಮಧ್ಯ-ಸ್ಥೂಲ)ಯಲ್ಲಿ ವಿಭಾಗಮಾಡಿ, ದೇಹಕ್ಕೆ ಉಣಬಡಿಸಿ ನಮಗೆ ಬದುಕಲು ವ್ಯವಸ್ಥೆ ಮಾಡಿಸುವವ ವೈಶ್ವಾನರ ರೂಪಿ ಭಗವಂತ.
ನಾವು ಸೇವಿಸುವ ಆಹಾರ ಮಣ್ಣು-ನೀರು-ಬೆಂಕಿಯ ಮಿಶ್ರಣ. ಆಹಾರದಲ್ಲಿನ ಮಣ್ಣಿನ ಸೂಕ್ಷ್ಮ ಭಾಗ ಮೆದುಳಿಗೆ, ಮಧ್ಯ ಭಾಗ ಮಾಂಸ-ಚರ್ಮಕ್ಕೆ, ಹಾಗು ಸ್ಥೂಲ ಭಾಗ ಮಲವಾಗಿ ವಿಸರ್ಜನೆಯಾಗುತ್ತದೆ. ಅದೇ ರೀತಿ ನೀರಿನ ಸೂಕ್ಷ್ಮ ಭಾಗ ಉಸಿರಾಗಿ, ಮಧ್ಯ ಭಾಗ ನೆತ್ತರಾಗಿ, ಹಾಗು ಸ್ಥೂಲ ಭಾಗ ಮೂತ್ರವಾಗಿ ವಿನಿಯೋಗವಾಗುತ್ತದೆ. ಇನ್ನು ಬೆಂಕಿಯ ಸೂಕ್ಷ್ಮ ಭಾಗ ವಾಕ್ ಶಕ್ತಿಯಾಗಿ, ಮಧ್ಯ ಭಾಗ ಅಸ್ಥಿಮಜ್ಜೆಯಾಗಿ , ಸ್ಥೂಲ ಭಾಗ ಹಲ್ಲು ಮತ್ತು ಅಸ್ಥಿಯಾಗಿ ವಿನಿಯೋಗವಾಗುತ್ತದೆ. ಈ ರೀತಿ ಚಿನ್ನದ ಗಣಿಯಿಂದ ಚಿನ್ನವನ್ನು ಬೇರ್ಪಡಿಸುವುದಕ್ಕಿಂತ ಕಠಿಣವಾದ ಈ ಕಾರ್ಯವನ್ನು ನಮ್ಮೊಳಗಿದ್ದು ವ್ಯವಸ್ಥಿತ ರೀತಿಯಲ್ಲಿ ಮಾಡಿ, ನಮಗೆ ಜೀವನವನ್ನು ಕೊಡುವವನು ಆ ಭಗವಂತ. ಭಗವಂತನ ಈ ಕಾರ್ಯಕ್ಕೆ ಸೇವಕ ಪ್ರಾಣ-ಅಪಾನ ಎನ್ನುವ ಪ್ರಾಣದೇವರ ಎರಡು ರೂಪಗಳು. ಕಠೋಪನಿಷತ್ತಿನಲ್ಲಿ  ಹೇಳುವಂತೆ:
ಊರ್ಧ್ವಂ ಪ್ರಾಣಮುನ್ನಯತಿ ಅಪಾನಂ ಪ್ರತ್ಯಗಸ್ಯತಿ .
ಮಧ್ಯೇ ವಾಮನಮಾಸೀನಂ ವಿಶ್ವೇ ದೇವಾ ಉಪಾಸತೇ       ||೨-೨-೩||
ಇಲ್ಲಿ ಪ್ರಾಣ-ಅಪಾನ ಎನ್ನುವ ಪ್ರಾಣದೇವರ ಎರಡು ರೂಪ, ಮಧ್ಯದಲ್ಲಿ(ಹೃದಯದಲ್ಲಿ) ಭಗವಂತನ ವಾಮನ ರೂಪ. ಇದು ಪಂಚರೂಪಿ ಭಗವಂತನ ಉಪಾಸನೆಗಿಂತ ಭಿನ್ನವಾದ ಉಪಾಸನೆ. ಹೃದಯದ ಮಧ್ಯದಲ್ಲಿದ್ದು, ನಾವು ಉಂಡ ಆಹಾರವನ್ನು ಜೀರ್ಣಿಸಿ ಬದುಕು ಕೊಡುವವನು-ವಾಮನ ರೂಪಿ ಭಗವಂತ. ಈ ಮನ್ವಂತರದಲ್ಲಿ ವಾಮನ ದೇವೇಂದ್ರನ ರಕ್ಷನಾಗಿರುವ 'ಉಪೇಂದ್ರ'. ಆದ್ದರಿಂದ ನಮ್ಮ ಹೃದಯದಲ್ಲಿರುವ ವಾಮನ ರೂಪಿ ಭಗವಂತನ ಉಪಾಸನೆ ಈ ಮನ್ವಂತರದಲ್ಲಿ ಬಹಳ ಮುಖ್ಯವಾಗುತ್ತದೆ. ನಮ್ಮೊಳಗೆ ವಾಮನ ರೂಪಿಯಾಗಿರುವ ಈ  ಭಗವಂತನೇ ತ್ರಿವಿಕ್ರಮನಾಗಿ ಭೂಮಿ-ವ್ಯೋಮದಲ್ಲಿ ತುಂಬಿರುವವನು.

No comments:

Post a Comment