Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, October 26, 2014

Bhagavad Gita Kannada Chapter-01 Shloka 20-21


ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ                         ೨೦

ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ
ಅರ್ಜುನ ಉವಾಚ         ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇsಚ್ಯುತ   ೨೧


ಪಾಂಡವರ ಕಡೆಯಿಂದಲೂ ಶಂಖನಾದವಾದಾಗ ಕೌರವ ಸೇನೆ ಎಚ್ಚರದಿಂದ ಯುದ್ಧಕ್ಕೆ ಅಣಿಯಾಗಿ ನಿಲ್ಲುತ್ತದೆ. ಹೀಗೆ ಇನ್ನೇನು ಯುದ್ಧ ಪ್ರಾರಂಭವಾಗಬೇಕು ಎನ್ನುವಾಗ ತನ್ನ ರಥದಲ್ಲಿ ಹನುಮಂತನ ವಿಶೇಷ ಸನ್ನಿಧಾನವುಳ್ಳ ಅರ್ಜುನನು ಇಂದ್ರಿಯಗಳ ಒಡೆಯನಾದ ಶ್ರೀಕೃಷ್ಣ(ಹೃಷೀಕೇಶ)ನನ್ನುದ್ದೇಶಿಸಿ ಮಾತನ್ನಾಡುತ್ತಾನೆ.
ಅರ್ಜುನನ ಧ್ವಜದಲ್ಲಿ ಪ್ರಾಣದೇವರ ವಿಶೇಷ ಸನ್ನಿಧಾನವಿದ್ದುದರಿಂದ ಆತನನ್ನು ಕಪಿಧ್ವಜಃ ಎಂದು ಸಂಬೋಧಿಸುತ್ತಾರೆ. ಪೌರಾಣಿಕವಾಗಿ ನೋಡಿದರೆ ಅರ್ಜುನನ ಧ್ವಜದಲ್ಲಿ ಆಂಜನೇಯನ ವಿಶೇಷ ಸನ್ನಿಧಾನವಿರಲು ಕಾರಣಕರ್ತ ವಾಯುದೇವರ ಇನ್ನೊಂದು ರೂಪವಾದ ಭೀಮಸೇನ. ವನವಾಸ ಕಾಲದಲ್ಲಿ ಸೌಗಂಧಿಕವನ್ನು ತರಲು ಹೊರಟ ಭೀಮಸೇನನನ್ನು ಸಾಮಾನ್ಯ ಕಪಿ ರೂಪದಲ್ಲಿದ್ದ ಹನುಮಂತ ತನ್ನ ಬಾಲದಿಂದ ತಡೆಯುತ್ತಾನೆ. ದಾರಿಗಡ್ದವಾಗಿದ್ದ ಬಾಲವನ್ನು ಸರಿಸುವಂತೆ ಭೀಮ ಕಪಿಯಲ್ಲಿ ಕೇಳುತ್ತಾನೆ. “ನೀನೇ ಸರಿಸಿ ಮುಂದೆ ಹೋಗು” ಎನ್ನುತ್ತದೆ ಕಪಿ. ಭೀಮ ಕಪಿಯ ಬಾಲವನ್ನು ಸರಿಸುವ ಪ್ರಯತ್ನದಲ್ಲಿ ಸೋತು ವಿಸ್ಮಿತನಾಗುತ್ತಾನೆ. ಈ ಸಂದರ್ಭದಲ್ಲಿ ಪ್ರಸನ್ನನಾದ ಹನುಮಂತ ತನ್ನ ಮೂಲರೂಪವನ್ನು ಭೀಮಸೇನನಿಗೆ ತಿಳಿಸಿ, ಆತನಿಗೆ ವರವೊಂದನ್ನು ನೀಡುತ್ತಾ ಹೇಳುತ್ತಾನೆ: “ಯುದ್ಧ ಕಾಲದಲ್ಲಿ ವಿಶೇಷವಾಗಿ ನಾನು ಅರ್ಜುನನ ರಥದಲ್ಲಿ ಸದಾ ಸನ್ನಿಹಿತನಾಗಿದ್ದು ಆಗಾಗ ಸಿಂಹನಾದ ಮಾಡುತ್ತಾ ಶತ್ರು ಸಂಹಾರಕ್ಕೆ ಶಕ್ತಿ ಕೊಡುತ್ತೇನೆ;  ನನ್ನ ಸಿಂಹನಾದ ಕೇಳಿಯೇ ಶತ್ರುಗಳ ಎದೆ ನಡುಗಿ ಹೋಗುತ್ತದೆ” ಎಂದು. [ಇಲ್ಲಿ ಭೀಮಸೇನ ಹಾಗೂ ಆಂಜನೇಯ ಎನ್ನುವುದು ಪ್ರಾಣದೇವರ/ವಾಯುದೇವರ ಎರಡು ರೂಪ (ಏಕಕಾಲದಲ್ಲಿ ಭಗವಂತನ ರಾಮ ಮತ್ತು ಪರಶುರಾಮ ರೂಪಗಳು ಭೂಮಿಯಲಿದ್ದಂತೆ). ಇವೆಲ್ಲವೂ  ಲೋಕಕಲ್ಯಾಣಕ್ಕಾಗಿ ದೇವತೆಗಳು ತಮ್ಮ ಬೇರೆ ಬೇರೆ ರೂಪದಲ್ಲಿ ಆಡುವ ಲೀಲೆ].
ಧ್ವಜದಲ್ಲಿ ಹನುಮಂತನ ಸನ್ನಿಧಾನ, ಕೈಯಲ್ಲಿ ಗಾಂಡೀವ, ರಥದ ಸಾರಥಿ ಶ್ರೀಕೃಷ್ಣ, ಜೊತೆಯಲ್ಲಿ ಮಹಾ ಪರಾಕ್ರಮಿ ಭೀಮಸೇನ. ಈ ರೀತಿ ಯುದ್ಧಕ್ಕೆ ಸಜ್ಜಾಗಿ ನಿಂತಿದ್ದ  ಅರ್ಜುನನನ್ನು ಅಹಂಕಾರ(Ego) ಕಾಡುತ್ತದೆ. ಅರ್ಜುನ ಹೇಳುತ್ತಾನೆ: “ಅಳಿವಿರದ ಕೃಷ್ಣನೇ,  ಎರಡೂ ಪಡೆಗಳ ನಡುವೆ ನನ್ನ ರಥವನ್ನು ನಿಲ್ಲಿಸು” ಎಂದು. ಅರ್ಜುನನ ಈ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಇಲ್ಲಿರುವ ಅಹಂಕಾರದ ಧ್ವನಿ ತಿಳಿಯುತ್ತದೆ. ಅರ್ಜುನನ ರಥದ ಸಾರಥ್ಯವನ್ನು ಸ್ವಯಂ ಶ್ರೀಕೃಷ್ಣ ವಹಿಸಿದ್ದರೂ ಕೂಡಾ, ಇಲ್ಲಿ ಅಹಂಕಾರದಲ್ಲಿ ಆತ ಶ್ರೀಕೃಷ್ಣನನ್ನು ಸಾಮಾನ್ಯ ಸಾರಥಿಯಂತೆ ಮಾತನಾಡಿಸಿ, “ನನ್ನ(ಮೇ) ರಥವನ್ನು ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು” ಎಂದು ಆಜ್ಞೆ ಮಾಡುವ ಧ್ವನಿಯಲ್ಲಿ ಮಾತನಾಡಿದ್ದಾನೆ.
ಈ ಹಿಂದೆ ಹೇಳಿದಂತೆ ಮಾನವ ಶರೀರ ಜೀವ ಪಯಣಿಸುವ ರಥ. ಆ ರಥದಲ್ಲಿ ಕೂಡಾ ಜೀವನನ್ನು ಪ್ರಾಣ-ನಾರಾಯಣರು ರಕ್ಷಿಸಿ ಮುನ್ನೆಡೆಸುತ್ತಿರುತ್ತಾರೆ. ಭಗವಂತ ಆ ರಥದ ಸಾರಥಿಯಷ್ಟೇ ಅಲ್ಲ, ಮಾಲೀಕ ಕೂಡಾ ಹೌದು. ಆದರೆ ಇದರ ಪರಿವೆಯೇ ಇಲ್ಲದೇ ನಾವು “ಇದು ನನ್ನ ದೇಹ” ಎಂದು ತಿಳಿದುಕೊಂಡು ಬದುಕುತ್ತಿರುತ್ತೇವೆ. ಶಾಸ್ತ್ರವನ್ನು ನೋಡಿದಾಗ ನಮಗೆ ತಿಳಿಯುವುದೇನೆಂದರೆ: ನಾವು ನೋವು-ದುಃಖಕ್ಕೊಳಪಡುವುದಕ್ಕೆ ಕಾರಣ ನಮ್ಮಲ್ಲಿರುವ ನಾನು-ನನ್ನದು ಎನ್ನುವ ಭಾವನೆ. ನಿದ್ದೆಯಲ್ಲಿ ನಮಗೆ ಈ ಭಾವನೆ ಇರುವುದಿಲ್ಲವಾದ್ದರಿಂದ ಅಲ್ಲಿ ದುಃಖವಿರುವುದಿಲ್ಲ. ನಾವಿರುವ ಶರೀರಕ್ಕೆ ನಮ್ಮನ್ನು ತಂದವನು ಆ ಭಗವಂತ ಹಾಗೂ ಒಂದು ದಿನ ಈ ಶರೀರದಿಂದ ಆಚೆ ಕರೆದುಕೊಂಡು ಹೋಗುವವನೂ ಅವನೇ. ಈ ಎಚ್ಚರ ಇಲ್ಲದೇ ನಾನು-ನನ್ನದು ಎಂದು ಅಹಂಕಾರ-ಮಮಕಾರದಿಂದ ಬದುಕಿ ನೋವನ್ನನುಭವಿಸುವವರಿಗೆ  ಎಚ್ಚರದ ಜ್ಞಾನಸಂದೇಶವನ್ನು ನರಸಮುದಾಯದ ಪ್ರತಿನಿಧಿಯಾಗಿ ನಿಂತಿರುವ ಅರ್ಜುನನ ಮುಖೇನ ಶ್ರೀಕೃಷ್ಣ ಗೀತೆಯಲ್ಲಿ ನೀಡಿದ್ದಾನೆ.
ಇಲ್ಲಿ ಶ್ರೀಕೃಷ್ಣನನ್ನು ಹೃಷೀಕೇಶ ಎಂದು ಸಂಬೋಧಿಸಿದ್ದಾರೆ. ಈ ಹಿಂದೆ ಹೇಳಿದಂತೆ ಹೃಷೀಕೇಶ ಎಂದರೆ ಇಂದ್ರಿಯಗಳ ಸ್ವಾಮಿ. ಅರ್ಜುನನ ಮನದಾಳದ ಸಂಘರ್ಷವನ್ನು ಹೋಗಲಾಡಿಸುವುದಕ್ಕಾಗಿ ಅರ್ಜುನನ ಒಳಗಿದ್ದು ಆತನಿಂದ ಈ ರೀತಿ ಮಾತನ್ನಾಡಿಸಿದವನೂ ಅವನೇ ಎನ್ನುವುದು ಇಲ್ಲಿರುವ ಹೃಷೀಕೇಶ ಎನ್ನುವ ವಿಶೇಷಣದ ಹಿಂದಿನ ಧ್ವನಿ.  ಸರ್ವೇದ್ರಿಯ ಪ್ರೇರಕನಾಗಿರುವ ಭಗವಂತ ಅರ್ಜುನನ ಇಂದ್ರಿಯ ಪ್ರೇರಕನಾಗಿ, ಆತನಿಂದ ಈ ರೀತಿ ಮಾತನ್ನಾಡಿಸಿ ಗೀತೆಯ ಆವಿಷ್ಕಾರಕ್ಕೆ ಪೀಠಿಕೆ ಹಾಕಿದ.   
ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು ಅಚ್ಯುತ ಎಂದು ಸಂಬೋಧಿಸಿದ್ದಾನೆ. ಅಚ್ಯುತ ಎಂದರೆ ಸ್ವಯಂ ಚ್ಯುತಿ ಇಲ್ಲದವ ಮತ್ತು  ಭಕ್ತರ  ಚ್ಯುತಿಯನ್ನು ಹರಣ ಮಾಡುವವ ಎಂದರ್ಥ. ಬಾಹ್ಯವಾಗಿ ಅಹಂಕಾರ ತೋರಿದರೂ ಕೂಡಾ, ಅರ್ಜುನನ ಅಂತರಾತ್ಮ ಮಾತ್ರ ಎಚ್ಚರದಿಂದಿದ್ದು ಆತನ ಬಾಯಲ್ಲಿ ಈ ನಾಮವನ್ನು ನುಡಿಸಿದೆ. ಅಹಂಕಾರ ಎಂತಹ ಮಹಾತ್ಮರನ್ನೂ ಬಿಟ್ಟಿಲ್ಲ. ಒಮ್ಮೆ ನಮ್ಮ ಕೈಯಲ್ಲಿ ಬಲವಿದೆ ಎಂದು ತಿಳಿದಾಗ ನಾವು ಎಲ್ಲವನ್ನೂ ಮರೆತು ಅಹಂಕಾರದ ದಾಸರಾಗುತ್ತೇವೆ. ಈ ಅಹಂಕಾರ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ. ಅರ್ಜುನ ಮಹಾಜ್ಞಾನಿ ಮತ್ತು  ಶ್ರೀಕೃಷ್ಣನ ಭಕ್ತ. ತನ್ನ ಭಕ್ತ ಅಹಂಕಾರಕ್ಕೊಳಪಟ್ಟಾಗ ಶ್ರೀಕೃಷ್ಣ ಯಾವ ರೀತಿ ಪ್ರತಿಕ್ರಿಯೆ ತೋರುತ್ತಾನೆ ಎನ್ನುವುದನ್ನು ನಾವು ಈ ಅಧ್ಯಾಯದಲ್ಲಿ ಮುಂದೆ ಕಾಣಬಹುದು.

Sunday, October 12, 2014

Bhagavad Gita Kannada Chapter-01 Shloka 15-19

ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ 
ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ ೧೫

ಪಾಂಡವರ ಕಡೆಯಿಂದ ಮೊತ್ತಮೊದಲಿಗೆ ಶ್ರೀಕೃಷ್ಣ ಅಸುರ ಸಂಹಾರದ ಸಂಕೇತವಾಗಿರುವ ಪಾಂಚಜನ್ಯವನ್ನು ಮೊಳಗಿಸುತ್ತಾನೆ. ಇಂದು ಎಲ್ಲಾ ಶಂಖಗಳನ್ನೂ ಪಾಂಚಜನ್ಯ ಎಂದು ಕರೆಯುತ್ತಾರೆ. ಆದರೆ ವಿಶೇಷವಾಗಿ ವಿಷ್ಣುವಿನ ಶಂಖದ ಹೆಸರು ಪಾಂಚಜನ್ಯ. ಈ ‘ಪಾಂಚಜನ್ಯ’ ಶಂಖದ ಹಿಂದೆ ಒಂದು ಕಥೆಯಿದೆ.  ಶ್ರೀಕೃಷ್ಣ ಸಾಂದೀಪನಿ ಮುನಿಯ ಆಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿ ಹಿಂತಿರುಗುವ ಸಮಯದಲ್ಲಿ “ಗುರುದಕ್ಷಿಣೆಯಾಗಿ ಏನು ಕೊಡಲಿ” ಎಂದು ಕೇಳಿದಾಗ, ಅವರು ತನ್ನ  ಪತ್ನಿಯ ಅಭಿಲಾಷೆಯಂತೆ “ನಮ್ಮ ಮಗನನ್ನು ತಂದುಕೊಡು” ಎಂದು ಕೇಳುತ್ತಾರೆ. ಅವರ ಮಗನನ್ನು ಹಿಂದೆ  'ಪಂಚಜನ' ಎನ್ನುವ ಅಸುರ ಕೊಂದಿರುತ್ತಾನೆ. ತನ್ನ ಗುರುವಿನ ಅಭಿಲಾಷೆಯಂತೆ  ಶ್ರೀಕೃಷ್ಣ ಸಮುದ್ರದಲ್ಲಿ ಅಡಗಿ ಕುಳಿತಿದ್ದ ಅಸುರನನ್ನು ಹುಡುಕಿ, ಆತನನ್ನು  ಕೊಂದು, ಆತ ಅಡಗಿ ಕುಳಿತಿದ್ದ ಶಂಖವನ್ನು ತರುತ್ತಾನೆ ಮತ್ತು  ಯಮಲೋಕದಿಂದ  ಋಷಿಪುತ್ರನನ್ನು ತಂದು, ಆತನಿಗೆ ಹಿಂದಿನ ಆಕಾರವನ್ನೇ ಕೊಟ್ಟು,    ಅವನನ್ನು ಗುರುದಂಪತಿಗಳಿಗೆ ಗುರುದಕ್ಷಿಣೆಯಾಗಿ ನೀಡುತ್ತಾನೆ. ಈ ರೀತಿ ಅಸುರ ಸಂಹಾರದಿಂದ ಲಭ್ಯವಾದ ಶಂಖವೇ ಪಾಂಚಜನ್ಯ.
[ಸತ್ತವ್ಯಕ್ತಿಯನ್ನು ಅದೇ ರೂಪದಿಂದ ಮತ್ತೆ ಬದುಕಿಸಿ ಕೊಡುವಂತಹದ್ದು ಅತ್ಯಂತ ಅಸಾಧ್ಯವಾದ ಕೆಲಸ. ಇದನ್ನು ವೇದವ್ಯಾಸರು ಮತ್ತು ಶ್ರೀಕೃಷ್ಣ  ಮಾಡಿ ತೋರಿಸಿರುವ ಕೆಲವು ಘಟನೆಗಳನ್ನು ನಾವು ಇತಿಹಾಸದಲ್ಲಿ  ಕಾಣುತ್ತೇವೆ.  ತನ್ನ ಗರ್ಭದಲ್ಲಿ ಜನಿಸಿ ಕಂಸನಿಂದ ಹತರಾಗಿದ್ದ ಆರು ಮಂದಿ ಮಕ್ಕಳನ್ನು ದೇವಕಿ ಕಾಣಬೇಕು ಎಂದು ಬಯಸಿದಾಗ, ಯಥಾರೂಪದಲ್ಲಿ ಶ್ರೀಕೃಷ್ಣ ಆಕೆಗೆ ತೋರಿಸುತ್ತಾನೆ ಮತ್ತು ಆಕೆ ಆ ಮಕ್ಕಳನ್ನು ಮುದ್ದಿಸಿ ಸಂತೋಷಪಡುತ್ತಾಳೆ. ಇದೇ ರೀತಿ ಮಹಾಭಾರತ ಯುದ್ಧದ ನಂತರ “ಕರ್ಣನನ್ನು ಕಾಣಬೇಕು” ಎಂದು ಆಸೆಪಟ್ಟ ಕುಂತಿಗೆ ವೇದವ್ಯಾಸರು ಯಥಾಪ್ರಕಾರ ಕರ್ಣನ ದರ್ಶನ ಮಾಡಿಸುತ್ತಾರೆ. ಇವೆಲ್ಲವೂ ಸತ್ತ ವ್ಯಕ್ತಿಯನ್ನು ಆ ನಂತರ ಅದೇ ರೂಪದಲ್ಲಿ ಹಿಂತಿರುಗಿಸಿ ತೋರಿಸಿದ ಅತೀ ವಿರಳ ಘಟನೆಗಳು].
ಶ್ರೀಕೃಷ್ಣನ ಶಂಖನಾದದ ನಂತರ ಅರ್ಜುನ ತನ್ನ 'ದೇವದತ್ತ' ಎನ್ನುವ ಶಂಖವನ್ನೂದುತ್ತಾನೆ. ಅರ್ಜುನನ ಈ ದಿವ್ಯ ಶಂಖಕ್ಕೆ ಒಂದು ಹಿನ್ನೆಲೆ ಇದೆ. ವಾನಪ್ರಸ್ಥ ಕಾಲದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಶಿವನಿಂದ ಪಾಶುಪತಾಸ್ತ್ರವನ್ನು ಹಾಗೂ  ದೇವತೆಗಳಿಂದ  ಅನೇಕ ಅಸ್ತ್ರಗಳನ್ನು ವರವಾಗಿ  ಪಡೆದ ಅರ್ಜುನನನ್ನು ದೇವತೆಗಳು ಇಂದ್ರಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಆಗ ಇಂದ್ರ ಅಸುರರ ವಿರುದ್ಧ ಹೋರಾಡಿದ ಅರ್ಜುನನನ್ನು ಹರಿಸಿ,  ಒಂದು ವಿಶಿಷ್ಟವಾದ ಕಿರೀಟವನ್ನು ತೊಡಿಸಿ, ಶಂಖವನ್ನು ಉಡುಗೊರೆಯಾಗಿ ಕೊಡುತ್ತಾನೆ. ಹೀಗೆ ಇಂದ್ರ ಕೊಟ್ಟ  ದುಷ್ಟನಿಗ್ರಹದ ಸಂಕೇತವಾಗಿರುವ ದಿವ್ಯಶಂಖದ ಹೆಸರು ದೇವದತ್ತ. ಇಂದ್ರ ಕೊಟ್ಟ ಕಿರೀಟವನ್ನು ಧರಿಸಿದ್ದರಿಂದ ಅರ್ಜುನನಿಗೆ ‘ಕಿರೀಟೀ’ ಎನ್ನುವ ಹೆಸರೂ ಬಂತು.
ಅರ್ಜುನನ ಶಂಖನಾದದ ನಂತರ ಉಗ್ರರೂಪದಲ್ಲಿ ನಿಂತಿರುವ, ಶತ್ರು ಭಯಂಕರನಾದ ಭೀಮನು(ಭೀಮಕರ್ಮ) ಪೌಂಡ್ರ ಎನ್ನುವ ಮಹಾಶಂಖವನ್ನೂದುತ್ತಾನೆ. [ಪೌಂಡ್ರ ಶಂಖ  ಎಂದರೆ ಪುಂಡ್ರ ದೇಶದ ಶಂಖ ಎಂದರ್ಥ]. ಇಲ್ಲಿ ಭೀಮನನ್ನು ವೃಕೋದರ ಎಂದು ಸಂಬೋಧಿಸಿದ್ದಾರೆ. ಬಾಹ್ಯವಾಗಿ ನೋಡಿದರೆ ವೃಕೋದರ ಎಂದರೆ ತೋಳದಂತೆ ಸಮಪ್ರಮಾಣದ(proportionate) ಹೊಟ್ಟೆ ಉಳ್ಳವನು ಎಂದರ್ಥ. ಆದರೆ ಯುದ್ಧಕ್ಕೆ ಸಂಬಂಧಿಸಿದಂತೆ ಈ ಪದಕ್ಕೆ ಅದ್ಭುತವಾದ ಅರ್ಥವಿದೆ. ಚತುರ್ಮುಖನ ಉದರದಲ್ಲಿನ ಅಗ್ನಿಗೆ ‘ವೃಕ’ ಎನ್ನುತ್ತಾರೆ. ಇದು ಇಡೀ ವಿಶ್ವವನ್ನೇ ಸುಡಬಲ್ಲ ಅಗ್ನಿ. ಇದನ್ನೇ ಇಲ್ಲಿ ಭೀಮಸೇನನನ ಪರ ಬಳಸಿ ಸಂಬೋಧಿಸಿದ್ದಾರೆ. “ಕೇವಲ ಕೌರವ ಸೇನೆಯನ್ನಷ್ಟೇ ಅಲ್ಲಾ, ಇಡೀ ವಿಶ್ವವನ್ನೇ ಸುಡಬಲ್ಲ ಅಗ್ನಿಯನ್ನು ತನ್ನ ಉದರದಲ್ಲಿ ಧರಿಸಿ ನಿಂತಿರುವ ಭೀಮಸೇನ  ತನ್ನ ಶಂಖನಾದ ಮಾಡಿದ” ಎನ್ನುತ್ತಾನೆ ಸಂಜಯ.

ಈ ಶ್ಲೋಕದಲ್ಲಿ  ಶ್ರೀಕೃಷ್ಣನನ್ನು ಹೃಷೀಕೇಶ ಎಂದು ಸಂಬೋಧಿಸಿದ್ದಾರೆ. ಹೃಷೀಕೇಶ ಎಂದರೆ ಹೃಷೀಕಗಳಿಗೆ(ಇಂದ್ರಿಯಗಳಿಗೆ) ಈಶ(ಒಡೆಯ). ಭಗವಂತ ಇಂದ್ರಿಯಗಳ ಸ್ವಾಮಿ. ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ, ಅದರಲ್ಲಿ ನಿಂತು ನೆಡೆಸುವವನು ಆ ಭಗವಂತ. ಮುಂದೇನಾಗಬೇಕು ಎಂದು ನಿರ್ಧರಿಸುವವನ್ನೂ ಆತನೇ ಆಗಿರುವುದರಿಂದ ಧರ್ಮಸಂಸ್ಥಾಪನೆಗಾಗಿ ಪಾಂಡವರ ಕಡೆಯಿಂದ ಮೊಟ್ಟಮೊದಲಿಗೆ  ಶ್ರೀಕೃಷ್ಣ ಶಂಖನಾದ ಮಾಡುತ್ತಾನೆ. ಇನ್ನು ಕೇಶ ಎನ್ನುವ  ಶಬ್ದಕ್ಕೆ ಸೂರ್ಯಕಿರಣ ಎನ್ನುವ ಅರ್ಥವಿದೆ. ಸೂರ್ಯನ  ಕಿರಣಗಳಲ್ಲಿ ಏಳು ಬಣ್ಣಗಳಿವೆ. ಈ ಸಪ್ತವರ್ಣಗಳಲ್ಲಿ  ಸಪ್ತರೂಪಿಯಾಗಿ ನಿಂತು ಬದುಕಿಗೆ ಹರ್ಷವನ್ನು ಕೊಡತಕ್ಕಂತಹ ಭಗವಂತ ಹೃಷೀಕೇಶಃ 

ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ
ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ                     ೧೬

ಭೀಮನ ನಂತರ ಕುಂತಿಯ ಹಿರಿಮಗ, ದೊರೆ ಯುಧಿಷ್ಠಿರ- ಧರ್ಮ ಮತ್ತು ವಿಜಯದ ಸಂಕೇತವಾದ 'ಅನಂತವಿಜಯ' ಎನ್ನುವ ಶಂಖವನ್ನೂದುತ್ತಾನೆ. ‘ಯುಧಿಷ್ಠಿರ’ ಎಂದರೆ ಯುದ್ಧದಲ್ಲಿ ಗಟ್ಟಿಯಾಗಿ ನಿಲ್ಲುವವ ಎಂದರ್ಥ. ಆದರೆ ಆತ ಎಂದೂ ಯುದ್ಧಾಸಕ್ತಿ ತೋರಿದವನಲ್ಲಾ. ತನ್ನ ಶತ್ರುಗಳಿಂದ ಹಿಡಿದು ಯಾರಿಗೂ ಸೋಲಾಗಬಾರದು, ಎಲ್ಲರೂ ವಿಜಯಶಾಲಿಗಳಾಗಿರಬೇಕು ಎನ್ನುವುದು ಆತನ ಆಶಯ. ಈ ರೀತಿ ಸ್ಪಂದಿಸುವ ಇನ್ನೊಬ್ಬ ವ್ಯಕ್ತಿ ಇತಿಹಾಸದಲ್ಲಿ ಇನ್ನೆಲ್ಲೂ ಕಾಣಸಿಗುವುದಿಲ್ಲಾ. ಧರ್ಮರಾಯ ಯಮನ ಅವತಾರ. ಯಮ ಸಾವಿನ ದೇವತೆ. ಆದರೆ ಆತನಿಗೆ ಪ್ರತಿಯೊಂದು ಪ್ರಾಣಿಗಳ ಮೇಲೆ ಅನುಕಂಪೆ. ಯಮ ನಮ್ಮನ್ನು ಸಾಯಿಸುವುದೂ ಕೂಡಾ ನಮ್ಮ ಉದ್ಧಾರಕ್ಕಾಗಿ ಹೊರತು ಯಾವುದೇ ದ್ವೇಷದಿಂದಲ್ಲಾ.  
ಯುಧಿಷ್ಠಿರನ ನಂತರ ಆತನ ತಮ್ಮಂದಿರರಾದ ನಕುಲ ಹಾಗೂ ಸಹದೇವರು ಸುಘೋಷ ಮತ್ತು ಮಣಿಪುಷ್ಪ ಎನ್ನುವ ಶಂಖವನ್ನು ಕ್ರಮಬದ್ಧವಾಗಿ ಮೊಳಗಿಸುತ್ತಾರೆ. ಸುಘೋಷ ಎಂದರೆ ಒಳ್ಳೆಯ ಸದ್ದನ್ನು ಮಾಡುವ ಎಂದರ್ಥ. ಅದೇ ರೀತಿ ಮಣಿಪುಷ್ಪ ಎಂದರೆ ಮಣಿಯನ್ನು ಕಡೆದು ಮಾಡಿದ ಹೂವಿನಂತೆ ಸುಂದರವಾಗಿರುವ  ಶಂಖ ಎಂದರ್ಥ.

ಮಹಾಭಾರತದಲ್ಲಿ ಬೇರೆ ಯಾವ ರಾಜರ ಶಂಖದ ಹೆಸರಿನ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಪಾಂಡವರ ಐದು ಶಂಖಗಳ ಹೆಸರನ್ನು ನಾವು ಕೇವಲ ಭಗವದ್ಗೀತೆಯಲ್ಲಷ್ಟೇ ಕಾಣಬಹುದು. ಪ್ರಾಯಃ ಈ ಐದು ಹೆಸರು  ನಮಗೆ ನಿತ್ಯ ಸ್ಮರಣೀಯವಾಗಿರಬೇಕು ಎನ್ನುವ ಉದ್ದೇಶದಿಂದ ಗೀತೆಯಲ್ಲಿ  ವಿಶೇಷವಾಗಿ ಉಲ್ಲೇಖಿಸಿರಬಹುದು.
  ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ
ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ  ೧೭

ಕಾಶ್ಯ ಚ  ಪರಮ ಇಷು ಆಸಃ ಶಿಖಂಡೀ ಚ ಮಹಾರಥಃ
ಧೃಷ್ಟದ್ಯುಮ್ನಃ ವಿರಾಟಃ ಚ ಸಾತ್ಯಕಿಃ ಚ ಅಪರಾಜಿತಃ -ಹಿರಿಯ ಬಿಲ್ಲೋಜ ಕಾಶಿರಾಜ, ಹಿರಿಯ ತೇರಾಳು ಶಿಖಂಡಿ ಸೇರಿದಂತೆ, ಧೃಷ್ಟದ್ಯುಮ್ನ ಮತ್ತು ವಿರಾಟ,  ಸೋಲರಿಯದ ಸಾತ್ಯಕಿಯೊಂದಿಗೆ ಶಂಖನಾದ ಮಾಡಿದರು.

ತದನಂತರ ಹಿರಿಯ ಬಿಲ್ಲೋಜ ಕಾಶಿರಾಜ, ಹಿರಿಯ ತೇರಾಳು ಶಿಖಂಡಿ, ಧೃಷ್ಟದ್ಯುಮ್ನ ಮತ್ತು ವಿರಾಟ, ಸೋಲರಿಯದ ಸಾತ್ಯಕಿ, ಹೀಗೆ ಒಬ್ಬೊಬ್ಬರಾಗಿ ಶಂಖ ನಾದವನ್ನು ಮಾಡಿದರು.
ಇಲ್ಲಿ ಶಿಖಂಡಿಯನ್ನು ಮಹಾರಥ ಎಂದು ಸಂಬೋಧಿಸಿರುವುದನ್ನು ನಾವು ಗಮನಿಸಬೇಕು. ಬಹಳಷ್ಟು ಜನ ಶಿಖಂಡಿ ಎಂದರೆ ನಪುಂಸಕ ಎಂದು ತಿಳಿದಿರುತ್ತಾರೆ. ಆದರೆ ಶಿಖಂಡಿ ಎಂದರೆ ನಪುಂಸಕ ಅಲ್ಲ. ಶಿಖಂಡಿ ಎಂದರೆ ಮೂಲಭೂತವಾಗಿ ಶಿಖಂಡ(ಶಿಖ+ಅಂಡ )ಉಳ್ಳವನು. ಇಲ್ಲಿ ಶಿಖ ಎಂದರೆ ತಲೆಗೂದಲು. ತಲೆ ಕೂದಲನ್ನು ಚನ್ನಾಗಿ ಬಾಚಿ ಹಿಂದೆ ಮೊಟ್ಟೆಯಂತೆ ಕಟ್ಟುವವರು ಶಿಖಂಡಿಗಳು. ಮಹಾಭಾರತದ ಈ ಶಿಖಂಡಿ ಹುಟ್ಟಿದಾಗ ಹೆಣ್ಣಾಗಿದ್ದು , ಆ ಬಳಿಕ ಗಂಡಾದ ಮಹಾರಥ. ಈತ 'ಸ್ತ್ರೀಪೂರ್ವವಾದ್ದರಿಂದ' ಭೀಷ್ಮಾಚಾರ್ಯರು ಆತನ ವಿರುದ್ಧ ಬಾಣ ಪ್ರಯೋಗ ಮಾಡಿರಲಿಲ್ಲ.

ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ
ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದಧ್ಮುಃ ಪೃಥಕ್ ಪೃಥಕ್            ೧೮

“ಓ ನೆಲದೊಡೆಯನೇ; ದ್ರುಪದ, ದ್ರೌಪದಿಯ ಮಕ್ಕಳು ಸೇರಿದಂತೆ, ಮಹಾಪರಾಕ್ರಮಿ ಅಭಿಮನ್ಯು ಹೀಗೆ ಎಲ್ಲರೂ, ಒಬ್ಬೊಬ್ಬರಾಗಿ ಶಂಖವನ್ನೂದಿದರು” ಎನ್ನುತ್ತಾನೆ ಸಂಜಯ. ಇಲ್ಲಿ ಅಭಿಮನ್ಯುವನ್ನು ಮಹಾಬಾಹು(ಮಹಾಪರಾಕ್ರಮಿ)ಎಂದು ಸಂಬೋಧಿಸಿದ್ದಾರೆ. ಸುಮಾರು ಹದಿನಾರು ವರ್ಷ ವಯಸ್ಸಿನವನಾಗಿದ್ದ  ಆತ ಪ್ರಚಂಡ ಬಲಿಷ್ಠನಾಗಿದ್ದ.  ಮಹಾಭಾರತ ಯುದ್ಧದಲಿ  ನಾವು ಅಭಿಮನ್ಯುವಿನ  ಪರಾಕ್ರಮವನ್ನು ಕಾಣುತ್ತೇವೆ.  ಕೌರವ ಸೇನೆಯ ವೀರಾಧಿ ವೀರರು ಎಲ್ಲಾ  ಕಡೆ ಸುತ್ತು ಹಾಕಿ, ಹಿಂದಿನಿಂದ ದಾಳಿ ಮಾಡಿ ಆತನನ್ನು ಕೊಚ್ಚಿ ಕೊಲೆ ಮಾಡುತ್ತಾರೆ. ಇಲ್ಲದೇ ಇದ್ದಿದ್ದರೆ ಆತನನ್ನು ಯಾರಿಂದಲೂ ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲಾ.  
ಇಲ್ಲಿ ಸೂಕ್ಷ್ಮವಾಗಿ ನೋಡಿದಾಗ ಪಾಂಡವರ ಕಡೆ ಇದ್ದ ಶಿಸ್ತು(Discipline) ಎದ್ದು ಕಾಣುತ್ತದೆ. ಕೌರವರ ಪಾಳಯದ ಗದ್ದಲ ರೂಪದ ಶಂಖ ನಗಾರಿಗಳ ಸದ್ದಿಗೆ ಉತ್ತರವಾಗಿ ಪಾಂಡವರು ಶಿಸ್ತುಬದ್ಧವಾಗಿ, ಕ್ರಮಬದ್ಧವಾಗಿ ಶಂಖನಾದ ಮಾಡುತ್ತಾರೆ. ಮನಃಶಾಸ್ತ್ರೀಯವಾಗಿ ನೋಡಿದಾಗ, ಶಿಸ್ತುಬದ್ಧವಾದ ಚಿಕ್ಕ ಸೇನೆ ಅಶಿಸ್ತಿನಿಂದ ಕೂಡಿದ ಬಹುದೊಡ್ಡ ಸೇನೆಯ ಎದೆಯನ್ನು ಹೇಗೆ ನಡುಗಿಸಬಲ್ಲದು ಎನ್ನುವುದನ್ನು ಇಲ್ಲಿ ನಾವು ಕಂಡುಕೊಳ್ಳಬಹುದು. ಭಗವಂತನಿಗೆ ಸರ್ವಸಮರ್ಪಣೆ ಭಾವದಲ್ಲಿ, ಯಾವುದೇ ಅಹಂಕಾರವಿಲ್ಲದೆ, ಭಗವಂತನ ಸಾರಥ್ಯದಲ್ಲಿ,  ಧರ್ಮಯುದ್ಧಕ್ಕೆ ಸಿದ್ಧವಾದ ಪಾಂಡವ ಸೇನೆ-ಮಾನಸಿಕವಾಗಿ ಸಂಪೂರ್ಣ ಸಿದ್ಧವಾಗಿತ್ತು. ಅಹಂಕಾರದ ಅಮಲಿನಲ್ಲಿ,  ಅಧಿಕಾರದ ಆಸೆಯಿಂದ, ಮಾನಸಿಕ ಸ್ಥಿಮಿತ ಕಳೆದುಕೊಂಡು, ಭಗವಂತನ ವಿರುದ್ಧ ನಿಂತ ದುರ್ಯೋಧನನ ಮುಂದಾಳತ್ವದಲ್ಲಿನ ಕೌರವಸೇನೆ- ಈಗಾಗಲೇ ಆತ್ಮವಿಶ್ವಾಸವನ್ನು ಕಳೆದುಕೊಂಡಿತ್ತು.
ಇಲ್ಲಿ ಕಾಣುವ ಇನ್ನೊಂದು ವಿಶೇಷತೆ ಎಂದರೆ- ಪಾಂಡವರ ಕಡೆಯಿಂದ ಕ್ರಮಬದ್ಧವಾಗಿ ಹದಿನೆಂಟು ಮಂದಿ ಶಂಖನಾದ ಮಾಡಿದ್ದಾರೆ. ಈ ಹಿಂದೆ ಹೇಳಿದಂತೆ ಸಂಖ್ಯಾಶಾಸ್ತ್ರವನ್ನು ನೋಡಿದಾಗ, ಅಕ್ಷರಾಂಕದ ಪದ್ಧತಿಯಲ್ಲಿ ಹದಿನೆಂಟು ಎಂದರೆ ಜಯ. ಜ=8 ಯ=1. ಅಕ್ಷರಾಂಕದಲ್ಲಿ ಮೊದಲನೆಯದು ಏಕ ಸ್ಥಾನ, ಎರಡನೇಯದು ದಶಕ ಸ್ಥಾನ. ಆದ್ದರಿಂದ ಜ-ಯ ಎಂದರೆ ಎಂಬತ್ತೊಂದು ಅಲ್ಲ- ಹದಿನೆಂಟು. ಜಯದ ಸಂಕೇತವಾದ 'ಹದಿನೆಂಟು ಶಂಖನಾದ' ಪಾಂಡವರ ಪಾಳಯದಲ್ಲಿ  ಮೊಳಗಿತು ಎನ್ನುವಲ್ಲಿಗೆ  ಭಗವದ್ಗೀತೆಯ ಹದಿನೆಂಟನೇ  ಶ್ಲೋಕ ಮುಗಿಯಿತು!

ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್
ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್        ೧೯


ಸಂಜಯ ಹೇಳುತ್ತಾನೆ: “ಪಾಂಡವರ ಕಡೆಯಿಂದ ಕ್ರಮಬದ್ಧವಾಗಿ ಮೊಳಗಿದ ಶಂಖನಾದ, ನೆಲಮುಗಿಲನ್ನು ತುಂಬಿ, ಪಡಿನುಡಿದು ಅಬ್ಬರಿಸಿ, ಧಾರ್ತರಾಷ್ಟ್ರನೆಂದು ಹೆಸರಾದ ನಿನ್ನ ಮಕ್ಕಳ ಎದೆಯನ್ನು ಸೀಳಿತು” ಎಂದು. ಇಲ್ಲಿ ಸಂಜಯ ಧೃತರಾಷ್ಟ್ರನ ಮಕ್ಕಳನ್ನು 'ಧಾರ್ತರಾಷ್ಟ್ರಾಣಾಂ' ಎಂದು ಸಂಬೋಧಿಸಿದ್ದಾನೆ. ಭಾಷೆಯ ದೃಷ್ಟಿಯಿಂದ ನೋಡಿದರೆ ಇದು ಕೌರವರ ಉಪನಾಮ(Surname). ಆದರೆ ಈ ಸಂಬೋಧನೆಯ ಹಿಂದೆ ಒಂದು ಅಣಕವಿದೆ. ಈ ಹಿಂದೆ "ನನ್ನವರು ಮತ್ತು ಪಾಂಡವರು" ಎಂದು ಸಂಬೋಧಿಸಿದ್ದ ಧೃತರಾಷ್ಟ್ರನಿಗೆ ಸಂಜಯನ ಕುಹಕದ ಉತ್ತರವಿದು. ಈ ಹಿಂದೆ ಹೇಳಿದಂತೆ ಪಾಂಡವರ ಶಿಸ್ತುಬದ್ಧ ನಡೆ ಈಗಾಗಲೇ ಕೌರವರ ಎದೆಯನ್ನು ಭೇದಿಸಿತ್ತು. ಯುದ್ಧ  ಪ್ರಾರಂಭವಾಗುವ ಮೊದಲೇ ಪಾಂಡವರು ಕೌರವರನ್ನು ಮಾನಸಿಕವಾಗಿ ಸೋಲಿಸಿದ್ದರು.

Wednesday, October 8, 2014

Bhagavad Gita Kannada Chapter-01 Shloka-14


ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸೈಂದನೇ ಸ್ಥಿತೌ  
ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ           ೧೪

ಕೌರವ  ಸೇನೆಯ ಶಂಖ-ನಗಾರಿ ಗದ್ದಲದ ನಂತರ ನಾಲ್ಕು ಬಿಳಿ ಕುದುರೆಗಳಿಂದ ಸಜ್ಜುಗೊಂಡ, ಅಲ್ಲಿರುವ ರಥಗಳಲ್ಲೇ ಅತಿ ದೊಡ್ಡ ರಥದಲ್ಲಿ ಕುಳಿತ ಕೃಷ್ಣಾರ್ಜುನರು ತಮ್ಮ ದಿವ್ಯ ಶಂಖನಾದವನ್ನು ಮಾಡುತ್ತಾರೆ. ಈ ರೀತಿ ಪಾಂಡವರ ಶಂಖನಾದ ಶ್ರೀಕೃಷ್ಣನಿಂದ ಪ್ರಾರಂಭವಾಗುತ್ತದೆ. ಇಲ್ಲಿ ಕೃಷ್ಣಾರ್ಜುನರು ಬಳಸಿರುವ ಶಂಖ ದೇವಲೋಕದ ವಿಶೇಷ ಶಂಖವಾಗಿರುವುದರಿಂದ ಅದನ್ನು ದಿವ್ಯ ಶಂಖ ಎಂದಿದ್ದಾರೆ.
ಇಲ್ಲಿ ರಥ ಅಥವಾ ಸೈಂದನ ಎಂದರೆ ಕುಳಿತುಕೊಂಡು ಪ್ರಯಾಣಮಾಡುವ ಸಾಧನ(Vehicle). ಅಂದಿನ ಕಾಲದ ರಥದ ವಿನ್ಯಾಸ ಹೇಗಿರುತ್ತಿತ್ತು ಎಂದರೆ: ನಾಲ್ಕು ಚಕ್ರಗಳುಳ್ಳ ರಥದ ಹಿಂದಿನ ಎರಡು ಗಾಲಿಗಳ ರಕ್ಷಣೆಗಾಗಿ ಇಬ್ಬರು ರಕ್ಷಕರು ರಥದ  ಹಿಂಭಾಗದಲ್ಲಿರುತ್ತಿದ್ದರು. ಅವರ ನಂತರ ಶಸ್ತ್ರಾಸ್ತ್ರಗಳ  ದಾಸ್ತಾನಿರುತ್ತಿತ್ತು. ಅದಕ್ಕೂ ಮುಂಭಾಗದಲ್ಲಿ ಯುದ್ಧ ಮಾಡುವ ರಥಿ ಕುಳಿತುಕೊಳ್ಳುತ್ತಿದ್ದ. ಆತನ ಎರಡೂ ಕಡೆ ಶಸ್ತ್ರಾಸ್ತ್ರವಿರುತ್ತಿತ್ತು. ಎದುರುಭಾಗದಲ್ಲಿ ಸಾರಥಿ ಕುಳಿತುಕೊಳ್ಳುತ್ತಿದ್ದ.  ನಾಲ್ಕು ಕುದುರೆಗಳಲ್ಲಿ ನಡುವಿನ ಎರಡು ಕುದುರೆಗಳನ್ನು ಸ್ವಲ್ಪ ಮುಂದೆ ಕಟ್ಟಿರುತ್ತಿದ್ದರು ಮತ್ತು ಪಕ್ಕದ ಎರಡು ಕುದುರೆಗಳನ್ನು ಸ್ವಲ್ಪ ಹಿಂದೆ ಕಟ್ಟಿರುತ್ತಿದ್ದರು. [ನಮ್ಮ ಮುಖದಲ್ಲಿನ ಕಣ್ಣಿನಂತೆ ನಡುವಿನ ಕುದುರೆಗಳು ಮತ್ತು ಕಿವಿಯಂತೆ ಪಾರ್ಶ್ವದಲ್ಲಿನ ಕುದುರೆಗಳು].
ಇಲ್ಲಿ ನಾಲ್ಕು ಬಿಳಿ ಕುದುರೆಗಳನ್ನು ಕಟ್ಟಿರುವ ರಥ ಎನ್ನುವಲ್ಲಿ ಒಂದು ಅಪೂರ್ವವಾದ  ಸಂದೇಶವಿದೆ. ನಮ್ಮೆಲ್ಲರ ಸ್ವಭಾವಕ್ಕೆ ಮೂರು ಬಣ್ಣಗಳಿವೆ. ಅವುಗಳೆಂದರೆ: ಕೆಂಪು, ಕಪ್ಪು ಮತ್ತು ಬಿಳಿ. ಕೆಂಪು ರಜೋಗುಣದ ಸಂಕೇತ, ಕಪ್ಪು ತಮೋಗುಣದ ಸಂಕೇತ ಮತ್ತು ಬಿಳಿ ಸತ್ತ್ವಗುಣದ ಸಂಕೇತ. ನಮ್ಮಲ್ಲಿ  ಸತ್ತ್ವಗುಣ ಪಕ್ವವಾಗಲು ನಾವು ನಮ್ಮ ಇಂದ್ರಿಯಗಳಿಂದ ಹೆಚ್ಚುಹೆಚ್ಚು ಸ್ತತ್ತ್ವಗ್ರಹಣ ಮಾಡಬೇಕು. ನಮ್ಮ ದೇಹವೇ ಒಂದು ರಥ.  ನಾಲ್ಕು ವೇದಗಳೇ ರಥದ ನಾಲ್ಕು ಕುದುರೆಗಳು, ಬಿಳಿ ಬಣ್ಣ ಸತ್ತ್ವಗುಣದ ಸಂಕೇತ. ಈ ದೇಹವೆಂಬ ರಥ ಸತ್ತ್ವದತ್ತ ಸಾಗಲು ಆ ರಥದಲ್ಲಿ ಜೀವನೊಂದಿಗೆ ಭಗವಂತ ಅಧಿಷ್ಠಾನವಾಗಿ ಕುಳಿತಿರಬೇಕಾಗುತ್ತದೆ. ಇದನ್ನೇ ಉಪನಿಷತ್ತಿನಲ್ಲಿ ದ್ವಾ ಸುಪರ್ಣಾ ಸಯುಜಾ ಸಖಾಯಾ, ಸಮಾನಂ ವೃಕ್ಷಂ ಪರಿಷಸ್ವಜಾತೇ” ಎಂದು ವಿವರಿಸಿದ್ದಾರೆ.
ಈ ಶ್ಲೋಕದಲ್ಲಿ ಶ್ರೀಕೃಷ್ಣನನ್ನು ‘ಮಾಧವ’ ಎಂದೂ, ಅರ್ಜುನನನ್ನು ‘ಪಾಂಡವ’ ಎಂದೂ ಸಂಬೋಧಿಸಿದ್ದಾರೆ. ಭಗವಂತ ತನ್ನ ಕೃಷ್ಣಾವತಾರದಲ್ಲಿ ಮಧು ಎನ್ನುವ ರಾಜವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾಧವ ಎಂದು ಕರೆಯುತ್ತಾರೆ. ಆದರೆ ಇದು ಪ್ರಾಕೃತನಾಮ. ಭಗವಂತನಿಗೆ ಕೇವಲ ಪ್ರಾಕೃತ ನಾಮಗಳಿಲ್ಲ, ಅವನಿಗಿರುವುದು    ಅಪ್ರಾಕೃತ ನಾಮರೂಪಗಳು ಎನ್ನುತ್ತಾರೆ. ಪ್ರಕೃತಿಯ ಕಾಲಘಟ್ಟದಲ್ಲಿ  ನಡೆದಂತಹ ಚಾರಿತ್ರಿಕವಾದ ಘಟನೆಯಿಂದ ಬಂದ ಹೆಸರು ಪ್ರಾಕೃತನಾಮ. ಯಾವುದು ಅನಾಧಿನಿತ್ಯವಾಗಿರುವ ಅರ್ಥವನ್ನು ಕೊಡುತ್ತದೋ ಅದು ಅಪ್ರಾಕೃತನಾಮ. ಹೀಗಾಗಿ ಭಗವಂತನ ಪ್ರತಿಯೊಂದು ನಾಮಕ್ಕೂ ಅಪ್ರಾಕೃತವಾದ ಅರ್ಥವಿರಲೇಬೇಕು. ಮಾಧವ ಎನ್ನುವಲ್ಲಿ ‘ಮಧು’ ಎಂದರೆ ಆನಂದ.  ‘ಮಾ’ ಅಂದರೆ ಜ್ಞಾನ. ಹೀಗಾಗಿ ಮಾಧವ ಎಂದರೆ ಜ್ಞಾನಾನಂದಸ್ವರೂಪ ಎಂದರ್ಥ.   'ಮಾ' ಎಂದರೆ ಮಾತೆ ಲಕ್ಷ್ಮಿ. ಆದ್ದರಿಂದ ಮಾಧವ ಅಂದರೆ ಲಕ್ಷ್ಮೀಪತಿ ಶ್ರೀಮನ್ನಾರಾಯಣ. “ಯಾರು ಲಕ್ಷ್ಮೀಪತಿಯೋ ಅವನೇ ಕೃಷ್ಣನಾಗಿ ಅವತರಿಸಿ ಬಂದ” ಎನ್ನುವ ಧ್ವನಿಯನ್ನು ಮಾಧವ ಎನ್ನುವ ನಾಮ ನೀಡುತ್ತದೆ.  ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಙ್ಮಯ ಎನ್ನುವ ಅರ್ಥದಲ್ಲಿ ಉಪಯೋಗಿಸುತ್ತಾರೆ. ಏಳು ಮಹಾನ್ ಗ್ರಂಥಗಳಾದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ರಾಮಾಯಣ, ಮಹಾಭಾರತ ಹಾಗೂ ಪುರಾಣಗಳನ್ನು ಮಾತೃ ಎನ್ನುತ್ತಾರೆ. ಆದ್ದರಿಂದ ಸಮಸ್ತ ವೈದಿಕ ವಾಙ್ಮಯ ಪ್ರತಿಪಾದನಾದ ಭಗವಂತ ಮಾಧವ.
ಯುಧಿಷ್ಠಿರ, ಭೀಮ ಮತ್ತು ಅರ್ಜುನ ಈ ಮೂವರೂ ಕುಂತಿ/ಪ್ರಥೆಯ ಮಕ್ಕಳು(ಕೌಂತೇಯ/ಪಾರ್ಥ);  ಪಂಚಪಾಂಡವರೂ ಪಾಂಡುವಿನ ಮಕ್ಕಳು(ಪಾಂಡವ). ಹೀಗಿರುವಾಗ ವಿಶೇಷವಾಗಿ ಅರ್ಜುನನ್ನೇ ಪಾಂಡವ, ಕೌಂತೇಯ ಅಥವಾ ಪಾರ್ಥ ಎಂದು ಕರೆಯಲು ಕಾರಣವೇನು? ಇದಕ್ಕೊಂದು ವಿಶೇಷ ಕಾರಣವಿದೆ. ಅರ್ಜುನ ಕುಂತಿಯ ಮೂರು ಮಂದಿ ಮಕ್ಕಳಲ್ಲಿ  ಕೊನೆಯವನು. ಸಾಮಾನ್ಯವಾಗಿ ಯಾವಾಗಲೂ ಕೊನೇಯ ಮಗನ ಮೇಲೆ ಪ್ರೀತಿ ಹೆಚ್ಚು. ಅದಕ್ಕಾಗಿ ವಿಶೇಷವಾಗಿ ಪಾರ್ಥ/ಕೌಂತೇಯ ಎನ್ನುವ ಹೆಸರು ಅರ್ಜುನನಿಗೆ ಬಂತು. ಇನ್ನೊಂದು ಕಾರಣವೆಂದರೆ: ಪಂಚಪಾಂಡವರಲ್ಲಿ ಎಲ್ಲರಲ್ಲೂ ಭಗವಂತನ ಸನ್ನಿಧಾನವಿದ್ದರೂ ಕೂಡಾ ಅರ್ಜುನನಲ್ಲಿ  ಭಗವಂತನ ನರ ರೂಪದ ವಿಶೇಷ ಸನ್ನಿಧಾನವಿತ್ತು. ಗೀತೆಯಲ್ಲೇ ಹೇಳುವಂತೆ: ಪಾಂಡವಾನಾಂ ಧನಂಜಯಃ೧೦-೩೭. ಅರ್ಜುನನಲ್ಲಿ ಭಗವಂತನ ವಿಶೇಷ ವಿಭೂತಿ ಇದ್ದುದರಿಂದ ಆತನನ್ನು ವಿಶೇಷವಾಗಿ ಪಾಂಡವ ಎಂದು ಸಂಬೋಧಿಸುತ್ತಾರೆ.

Sunday, October 5, 2014

Bhagavad Gita Kannada Chapter-01 Shloka 12-13


ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್  ೧೨

ಯುದ್ಧ ಪೂರ್ವದಲ್ಲಿ ಭರವಸೆಯನ್ನು ಕಳೆದುಕೊಂಡು ವಿಷಾದದಿಂದ ಮಾತನಾಡುತ್ತಿರುವ ದುರ್ಯೋಧನನ ಭರವಸೆ ಹೆಚ್ಚಿಸಲು, ಆತನಿಗೆ ಆತ್ಮ ವಿಶ್ವಾಸವನ್ನು ತುಂಬಲು, ಕುರುವಂಶದ ಅತ್ಯಂತ ಹಿರಿಯ ಪ್ರತಾಪಶಾಲಿ ವಯೋವೃದ್ಧ ಭೀಷ್ಮಾಚಾರ್ಯರು ಸಿಂಹನಾದಗೈದು, ತನ್ನ ಕರ್ತವ್ಯಕ್ಕೆ ತಕ್ಕಂತೆ ಶಂಖನಾದ ಮಾಡಿದರು.
ಭೀಷ್ಮಾಚಾರ್ಯರು ವಯೋವೃದ್ಧರಾಗಿದ್ದರೂ ಕೂಡಾ ಮಹಾ ಪ್ರತಾಪಶಾಲಿ. ಅವರು ಎಂಥಹಾ ಪ್ರತಾಪಶಾಲಿ ಎನ್ನುವುದನ್ನು ನಾವು ಅನೇಕ ಘಟನೆಗಳಲ್ಲಿ ಕಾಣುತ್ತೇವೆ. ಉದಾಹರಣೆಗೆ: ಶ್ರೀಕೃಷ್ಣನಿಗೆ ಅಗ್ರಪೂಜೆ ಮಾಡುವಾಗ ಅಲ್ಲಿ ನೆರೆದ ಅನೇಕರು ಅದನ್ನು ಪ್ರತಿಭಟಿಸುತ್ತಾರೆ. ಆಗ ಶಿಶುಪಾಲ ಒಂದು ಮಾತನ್ನು ಹೇಳುತ್ತಾನೆ: “ನೀವು ವಯೋವೃದ್ಧರು ಎಂದು ಬಿಟ್ಟಿದ್ದಕ್ಕೆ ಅತಿಯಾಗಿ ಆಡುತ್ತಿದ್ದೀರಿ. ನಾವು ಬಿಟ್ಟಿರುವುದರಿಂದ ನೀವು ಬದುಕಿರುವುದು ಎನ್ನುವುದನ್ನು ಮರೆಯಬೇಡಿ” ಎಂದು. ಈ ಸಂದರ್ಭದಲ್ಲಿ ಭೀಷ್ಮಾಚಾರ್ಯರ ಪೌರುಷ ಎಂತಹದ್ದು ಎನ್ನುವುದು ನಮಗೆ ಕಾಣಸಿಗುತ್ತದೆ. ಅವರು ಹೇಳುತ್ತಾರೆ: “ಇಚ್ಛತಾಂ ಕಿಲ ನಾಮಾಹಂ ಜೀವಾಮ್ಯೇಷಾಂ ಮಹೀಕ್ಷಿತಾಂ ೨-೪೧-೨೪ ಹೌದೇನು? ನಿಮ್ಮ ಅನುಕಂಪದಿಂದ ನಾನು ಬದುಕಿರುವುದೇ? ಹಾಗಿದ್ದರೆ ನಿಮ್ಮೆದುರೇ ನಾನು ಶ್ರೀಕೃಷ್ಣನಿಗೆ ಅಗ್ರಪೂಜೆ ಮಾಡುತ್ತೇನೆ. ನಿಮ್ಮನ್ನು ಒಂದು ಹುಲ್ಲುಕಡ್ಡಿಯ ಲೆಕ್ಕಕ್ಕೂ ನಾನು ತೆಗೆದುಕೊಳ್ಳುವುದಿಲ್ಲಾ. ತಾಕತ್ತಿದ್ದವರು ಎದ್ದುನಿಲ್ಲಿ” ಎಂದು. ಆಗ ಅಲ್ಲಿ ಒಂದು ನರಪಿಳ್ಳೆಯೂ ಎದ್ದು ನಿಲ್ಲುವುದಿಲ್ಲಾ. ಹೀಗೆ ಅವರ ಪ್ರತಾಪಕ್ಕೆ ಎಂದೂ ಮುಪ್ಪು ಬಂದಿರಲಿಲ್ಲಾ. ಆದರೆ ಅವರ ಈ ಪ್ರತಾಪವನ್ನು ಸದುಪಯೋಗ ಮಾಡಿಕೊಳ್ಳುವ ಭಾಗ್ಯ ಕುರುವಂಶಕ್ಕೆ ಸಿಗಲಿಲ್ಲಾ, ದುರ್ಯೋಧನನಿಗೆ ಬರಲಿಲ್ಲಾ.
ಭೀಷ್ಮಾಚಾರ್ಯರದ್ದು ಭಾರೀ ದೊಡ್ಡ ವ್ಯಕ್ತಿತ್ತ್ವ. ಆದರೆ ಕೊನೆ ತನಕವೂ ತನ್ನ ಅಂತರಂಗದ ವಿರುದ್ಧವಾಗಿ, ಆತ್ಮಸಾಕ್ಷಿಗೆ ವಿರುದ್ಧವಾಗಿ, ವ್ಯಕ್ತಿತ್ತ್ವದ ಅಭಿವ್ಯಕ್ತಿ ಇಲ್ಲದೇ, ಎಲ್ಲವನ್ನೂ ತೊರೆದು ಬದುಕಿದರು. ಇಂಥಹ ಮಹಾ ವ್ಯಕ್ತಿತ್ತ್ವವನ್ನು ಅರಿಯದ ಅವರ ಮೊಮ್ಮಗ ದುರ್ಯೋಧನ ಇಂದು ಆಡಿದ ಮಾತುಗಳಿಂದ ಅವರಿಗೆ ಸಹಜವಾಗಿ ನೋವಾಗಿದೆ. ಆದರೆ ಅದನ್ನು ತೋರ್ಪಡಿಸದ ಭೀಷ್ಮಾಚಾರ್ಯರು ದುರ್ಯೋಧನನಲ್ಲಿ ಭರವಸೆ ತುಂಬುವುದಕ್ಕಾಗಿ ಸಿಂಹನಾದಗೈದು, ಶಂಖನಾದ ಮಾಡಿ, “ಯುದ್ಧಕ್ಕೆ ಸಿದ್ಧರಾಗಿ” ಎನ್ನುವ ಸಂದೇಶವನ್ನು ಕಳುಹಿಸುತ್ತಾರೆ. ಈ ರೀತಿ ಪ್ರಥಮದಿನ ಏಕಾಏಕಿ, ಮನೋಭೇದದೊಂದಿಗೆ, ಮನೋಖೇದದೊಂದಿಗೆ ಕೌರವರ ಕಡೆಯಿಂದ  ರಣಕಹಳೆ ಮೊಳಗುತ್ತದೆ.
ಈ ಶ್ಲೋಕದಲ್ಲಿ “ಭೀಷ್ಮಾಚಾರ್ಯರು ಶಂಖಾನಾದ ಮಾಡಿದರು” ಎಂದಿದ್ದಾರೆ. ಓಂಕಾರ ನಾದವನ್ನು ಹೊರಹೊಮ್ಮುವ ಶಂಖ ಪರಮ ಮಾಂಗಲಿಕ. “ಗರ್ಭಾಃ ದೇವಾರಿನಾರೀಣಾಂ ವಿಶೀರ್ಯಂತೇ ಸಹಸ್ರಧಃ ತವ ನಾದೇನ ಪಾತಾಳೇ ಪಾಂಚಜನ್ಯ ನಮೋಸ್ತುತೇ” : ಶಂಖನಾದ ಮಾಡಿದರೆ ಆಸುರೀ ಶಕ್ತಿಯ ಗರ್ಭ ಭೇದ ಆಗುತ್ತದೆ ಎನ್ನುತ್ತಾರೆ. ಹೀಗಾಗಿ ಶಂಖವನ್ನು ಬಹಳ ದೊಡ್ಡ ದುಷ್ಟ ಸಂಹಾರಕ ಶಕ್ತಿಯಾಗಿ ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಬೆಳಿಗ್ಗೆ ಮತ್ತು ಸಂಜೆ ತಪ್ಪದೇ ಮನೆಯ ಮೂಲೆ-ಮೂಲೆಯಿಂದ ಅಷ್ಟದಿಕ್ಕುಗಳಿಗೂ ಕೇಳುವಂತೆ ಶಂಖನಾದ ಮಾಡುತ್ತಿದ್ದರು. ಶಂಖನಾದ ಎಲ್ಲಿಯವರೆಗೆ ಕೇಳಿಸುತ್ತದೋ ಅಲ್ಲಿಯ ತನಕ ಯಾವ ದುಷ್ಟ ಶಕ್ತಿಗಳೂ ಸುಳಿಯಲಾರವು. ಇದು ದುಷ್ಟಶಕ್ತಿ ಸಂಹಾರಕ ಮಂತ್ರದಷ್ಟೇ ಪ್ರಭಾವಶಾಲಿ. ಮೃತ್ಯುವಿನ ತಾಂಡವವಾದ ರಣರಂಗದಲ್ಲಿ ಆಸುರೀ ಶಕ್ತಿಯ ಪ್ರಭಾವ ಇರಬಾರದು ಎನ್ನುವುದಕ್ಕಾಗಿ, ಯುದ್ಧಭೂಮಿಯಲ್ಲಿ ಧರ್ಮಕ್ಕೆ ಜಯವಾಗಲಿ ಎನ್ನುವ ಪ್ರಾರ್ಥನೆಯಿಂದ, ಯುದ್ಧಕ್ಕೆ ತಮ್ಮವರನ್ನು ಸಿದ್ಧಗೊಳಿಸುವುದಕ್ಕಾಗಿ ಮತ್ತು ಶತ್ರುಗಳಿಗೆ ತಾವು  ಸಿದ್ಧ ಎನ್ನುವ ಸಂಕೇತ ಕಳುಹಿಸುವುದಕ್ಕಾಗಿ ಹಿಂದೆ ಯುದ್ಧ ಪೂರ್ವದಲ್ಲಿ ಶಂಖನಾದ ಮಾಡುತ್ತಿದ್ದರು. ಇಲ್ಲಿ ಭೀಷ್ಮಾಚಾರ್ಯರು ಶಂಖನಾದದ ಮುಖೇನ ತಮ್ಮ ಸಿದ್ಧತೆಯ ಸಂಕೇತವನ್ನು ಕೌರವ ಸೈನ್ಯಕ್ಕೂ ಹಾಗೂ ಪಾಂಡವ ಸೈನ್ಯಕ್ಕೂ ರವಾನಿಸುತ್ತಾರೆ.

ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ 
ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋsಭವತ್                         ೧೩


ಕೌರವರ ಪ್ರಧಾನ ಸೇನಾಧಿಪತಿಯಾದ ಭೀಷ್ಮಾಚಾರ್ಯರು ಶಂಖನಾದ ಮಾಡಿದ ಬಳಿಕ, ಕೌರವ ಸೈನ್ಯದಿಂದ ಶಂಖಗಳು, ನಗಾರಿ-ಡೋಲು-ಗೋಮುಖಗಳು-ಒಮ್ಮೆಲೇ ಬಾರಿಸಲ್ಪಟ್ಟವು. ಆ ಸದ್ದು ಕಿವಿಗಡಚಿಕ್ಕುವ ಗದ್ದಲವಾಯಿತು. ಇಲ್ಲಿ ದುರ್ಯೋಧನಾಗಲೀ ಆತನ ತಮ್ಮಂದಿರಾಗಲೀ ಶಂಖನಾದ ಮಾಡಲಿಲ್ಲ. ಬದಲಾಗಿ ಸೇನಾಧಿಪತಿಯಿಂದ ಶಂಖ ನಾದವಾಯಿತು. ಅದರ ಹಿಂದೆ ಸೈನ್ಯದ ಮುಖಂಡರಿಂದ ಮತ್ತು  ಸೈನಿಕರಿಂದ ಶಂಖನಾದವಾಯಿತು. ಈ ರೀತಿ ವ್ಯವಸ್ಥಿತ ರೀತಿಯಲ್ಲಿಲ್ಲದ ಆ ಸದ್ದು ಕೇವಲ ಗದ್ದಲವಾಗಿತ್ತು. ಇಲ್ಲಿ ದುರ್ಯೋಧನ ತನ್ನಲ್ಲಿರುವ ಶಕ್ತಿಯನ್ನು ವ್ಯವಸ್ಥಿತವಾಗಿ ರೂಪಿಸಿರಲಿಲ್ಲ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ನಮ್ಮಲ್ಲಿ  ಎಷ್ಟೇ ಯುಕ್ತಿಸಾಧನವಿರಲಿ(Resource), ಎಲ್ಲಿಯ ತನಕ ನಮಗೆ ಆ ಸಾಧನವನ್ನು ನಿಯಮಬದ್ಧವಾಗಿ ಉಪಯೋಗಿಸಿಕೊಳ್ಳಲು  ಬರುವುದಿಲ್ಲವೋ, ಅಲ್ಲಿಯ ತನಕ ಆ ಸಾಧನ ಇದ್ದೂ ವ್ಯರ್ಥ. ಸಾಧನವನ್ನು ಕೈಯಲ್ಲಿಟ್ಟುಕೊಂಡು ಅಧಿಕಾರದ ಆಸೆಯಿಂದ ಮನಃಸ್ಥಿತಿ ಕಳೆದುಕೊಳ್ಳುವ ಮುಂದಾಳು(Leader) ಎಂದೂ ಯಶಸ್ಸನ್ನು ಕಾಣಲಾರ.