Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, September 28, 2014

Bhagavad Gita Kannada Ch-01-Shl-01


ಧೃತರಾಷ್ಟ್ರ ಉವಾಚ
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ  
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ                      


ಈ ಹಿಂದೆ ಹೇಳಿದಂತೆ ಕುರುಡ ಧೃತರಾಷ್ಟ್ರನ ಪ್ರಶ್ನೆ 'ಜೀವದ' ಕುರುಡು ಪ್ರಶ್ನೆ ಕೂಡಾ ಹೌದು. ನಾವು ಎಷ್ಟು ಕುರುಡರು ಎಂದರೆ ನಮಗೇನೂ ಗೊತ್ತಿಲ್ಲಾ ಎನ್ನುವ ವಿಷಯ ಕೂಡಾ ನಮಗೆ ಗೊತ್ತಿಲ್ಲ!   ಆದ್ದರಿಂದ ಗೀತೆ ಧೃತರಾಷ್ಟ್ರನ ಪ್ರಶ್ನೆಯಿಂದಲೇ ಪ್ರಾರಂಭವಾಗುತ್ತದೆ. ಕಣ್ಣು ಕಾಣದ ಧೃತರಾಷ್ಟ್ರ  ದೂರದರ್ಶನ ಹಾಗೂ ದೂರಶ್ರವಣ ಶಕ್ತಿಯನ್ನು ವ್ಯಾಸರಿಂದ ಪಡೆದ ಸಂಜಯನಲ್ಲಿ ಹಾಕಿದ ಪ್ರಶ್ನೆಯೇ ಗೀತೆಯ ಮೊದಲ ಶ್ಲೋಕ. ಒಂದು ಕಡೆ ಇದ್ದದ್ದನ್ನೂ ಕಾಣಲಾರದ ಕುರುಡ ಧೃತರಾಷ್ಟ, ಮತ್ತೊಂದೆಡೆ ಅರಮನೆಯಲ್ಲೇ ಕುಳಿತು ಯುದ್ಧರಂಗದಲ್ಲಿ ಏನು ನಡೆಯಿತು ಎಂದು ಹೇಳಬಲ್ಲ ಸಂಜಯ. ಇವರಿಬ್ಬರ ಮಾತುಗಳ ಮುಖೇನ ವೇದವ್ಯಾಸರು ನಮಗೆ ಗೀತೆಯನ್ನು ಉಣ ಬಡಿಸಿದ್ದಾರೆ. ಮಹಾಭಾರತ ಯುದ್ಧ ಪ್ರಾರಂಭವಾಗುವುದಕ್ಕೂ ಮುನ್ನ ವ್ಯಾಸರು ಧೃತರಾಷ್ಟನಿಗೆ: “ನಿನಗೆ ದೃಷ್ಟಿ ಕೊಡುತ್ತೇನೆ, ಒಬ್ಬ ರಾಜನಾಗಿ ನೀನು ಮಾಡಿದ ಕೆಲಸದ ದುರಂತ ಏನು ಎನ್ನುವುದನ್ನು ನಿನಗೆ ತೋರಿಸುತ್ತೇನೆ” ಎಂದಿದ್ದರು. ಆದರೆ ಧೃತರಾಷ್ಟ ಅದನ್ನು ನಿರಾಕರಿಸಿ, “ಕೇವಲ ಕೇಳಿಸಿಕೊಂಡರೆ ಸಾಕು”  ಎಂದಿದ್ದ. ಹೀಗಾಗಿ ವ್ಯಾಸರು ತನ್ನ ಶಿಷ್ಯನಾದ ಸಂಜಯನಿಗೆ ದೂರದರ್ಶನ ಹಾಗೂ ದೂರಶ್ರವಣ ಶಕ್ತಿಯನ್ನು ಕರುಣಿಸಿ, ಯುದ್ಧಭೂಮಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಧೃತರಾಷ್ಟ್ರನಿಗೆ ವಿವರಿಸಿ ಹೇಳುವ ವ್ಯವಸ್ಥೆ ಮಾಡಿಸಿದ್ದರು. ಈ ಕಾರಣದಿಂದ ಸಂಜಯ ಅರಮನೆಯಲ್ಲೇ ಕುಳಿತು ಯುದ್ಧರಂಗದ ಸಮಸ್ತ ಚಿತ್ರಣವನ್ನು ಧೃತರಾಷ್ಟ್ರನಿಗೆ ವಿವರಿಸುವಂತಾಯಿತು ಮತ್ತು ವ್ಯಾಸರ ಈ ಕೃಪೆಯಿಂದಾಗಿ ಶ್ರೀಕೃಷ್ಣ ಅರ್ಜುನನಿಗೆ ಯುದ್ಧರಂಗದಲ್ಲಿ ನೀಡಿದ ವಿಶ್ವರೂಪದ ದರ್ಶನವನ್ನು ಆತನೂ ನೋಡುವಂತಾಯಿತು.
ಕುರುಕ್ಷೇತ್ರ ಸ್ಥಳದ ಹಿನ್ನೆಲೆಯನ್ನು ನೋಡಿದರೆ ಅದು ಪರಶುರಾಮನಿಂದ ಸಮಂತಪಂಚಕ ಎನ್ನುವ ಪಂಚ ಸರೋವರ ನಿರ್ಮಿಸಲ್ಪಟ್ಟು ಧರ್ಮಕ್ಷೇತ್ರ ಎನಿಸಿದ್ದ ಕ್ಷೇತ್ರ.  ಆನಂತರ 'ಕುರು' ಎನ್ನುವ ರಾಜನ ಕಾಲದಲ್ಲಿ  ಅದು ಪರಮ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ಕುರುಕ್ಷೇತ್ರವೆನಿಸಿತು. ‘ಕುರು’ ತಪತಿ-ಸಂಹರಣ ಎನ್ನುವವರ ದಾಂಪತ್ಯದ ಫಲದಲ್ಲಿ  ಹುಟ್ಟಿದವನು. ತಂದೆ ಸಂಹರಣ ಒಬ್ಬ ದೊಡ್ಡ ರಾಜರ್ಷಿ. ತಾಯಿ ತಪತಿ ಸೂರ್ಯಪುತ್ರಿ. ಈಕೆಯನ್ನು ವೈವಸ್ವತ ಮನ್ವಂತರದ ಮನು ಮತ್ತು ಸಾವರಣಿ ಮನ್ವಂತರದ  ಮನುವಿನ ಸಹೋದರಿ ಎನ್ನುತ್ತಾರೆ. ಆದ್ದರಿಂದ ಈಕೆ ಒಬ್ಬಳು ದೇವತಾ ಸ್ತ್ರೀ ಕೂಡಾ ಹೌದು.  ಇವರಿಬ್ಬರ ದಾಂಪತ್ಯದಿಂದ ಹುಟ್ಟಿದ ಸಂತಾನದ ಹೆಸರೇ  ಮುಂದೆ ಆ ವಂಶದ ಹೆಸರಾಯಿತು.
ಮೂರು ಮಂದಿಯಿಂದಾಗಿ ಈ ವಂಶಕ್ಕೆ ಹೆಸರು ಬಂದಿರುವುದನ್ನು ನಾವು ಕಾಣುತ್ತೇವೆ. ಯಯಾತಿಯ ಮಗನಾದ ಪೂರುವಿನಿಂದ ಪೌರವ ವಂಶವೆನ್ನುವ ಹೆಸರು, ನಂತರ ದುಷ್ಯಂತನ ಮಗ ಭರತನಿಂದ ಭರತವಂಶ ಎನ್ನುವ ಹೆಸರು, ಆನಂತರ ಕುರುವಿನಿಂದ ಕೌರವ ಎನ್ನುವ ಹೆಸರು. ಈ ರೀತಿ ವಂಶಕ್ಕೆ ಹೆಸರು ಕೊಟ್ಟವರ ಸರಮಾಲೆಯಲ್ಲಿ ಕುರು ಮೂರನೆಯವನಾಗುತ್ತಾನೆ. ಇಂಥಹ ಕುರು ಸಮಂತ ಪಂಚಕದಲ್ಲಿ ನಿರ್ಮಿಸಿದ ಧರ್ಮಕ್ಷೇತ್ರವೇ ಈ ಕುರುಕ್ಷೇತ್ರ. ಈ ಕ್ಷೇತ್ರ ಕುರು ರಾಜನಿಗಿಂತಲೂ ಮೊದಲೇ ಧರ್ಮಕ್ಷೇತ್ರವಾಗಿತ್ತು. ಅಲ್ಲಿ ನಿರಂತರ ಯಜ್ಞ-ಯಾಗಾದಿಗಳು ನಡೆಯುತ್ತಿದ್ದವು. ಗ್ರಹಣ ಕಾಲದಲ್ಲಿ ಜನರು ಅಲ್ಲಿಗೆ ಸ್ನಾನಕ್ಕಾಗಿ ಹೋಗುತ್ತಿದ್ದರು(ಇಂದಿಗೂ ಹೋಗುತ್ತಾರೆ). ಹೀಗೆ ಪರಶುರಾಮನಿಂದಾಗಿ ಧರ್ಮಕ್ಷೇತ್ರ ಎಂದು ಹೆಸರು ಪಡೆದಿದ್ದ ಈ ಕ್ಷೇತ್ರಕ್ಕೆ ಕುರು ರಾಜನ ಕಾಲದಲ್ಲಿ ಕುರು ವಂಶದ ಅರಸರ ಹೆಸರಿನ ಸಂಬಂಧ ಬೆಳೆದು ಬಂತು.
ಧರ್ಮಕ್ಷೇತ್ರದಲ್ಲಿ ಯುದ್ಧ ನಡೆಯುತ್ತದೆ ಎಂದರೆ ಆ ಜಾಗದಲ್ಲಿ ಮಾನಸಿಕವಾಗಿ ಧರ್ಮದ ಸ್ಪೂರ್ತಿ ಬರಬೇಕು. ಆ ಸ್ಥಳದ ಸಾತ್ತ್ವಿಕ ಕಂಪನ ಅಲ್ಲಿ ಸೇರಿರುವವರ ಮೇಲಾಗಬೇಕು. ಧರ್ಮಕ್ಷೇತ್ರ ಎಂದರೆ  ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವ ಸ್ಥಾನ. ಧರ್ಮದ ಇರವು(ಕ್ಷ) ಮತ್ತು ರಕ್ಷಣೆ(ತ್ರ) ಎಲ್ಲಿ ನಡೆಯುತ್ತದೋ ಅದೇ ಧರ್ಮಕ್ಷೇತ್ರ. ಮೇಲಿನ ಶ್ಲೋಕದಲ್ಲಿ  "ಧರ್ಮಕ್ಷೇತ್ರೇ ಕುರುಕ್ಷೇತ್ರೇ" ಎನ್ನುವ ಸಂಬೋಧನೆಯಿದೆ. ನಮ್ಮ ಹೃದಯವೇ ಧರ್ಮಕ್ಷೇತ್ರ. ಯಾವುದು ಧರ್ಮ, ಯಾವುದು ಅಧರ್ಮ  ಎಂದು ತೀರ್ಮಾನ ಮಾಡುವ ಮನಸ್ಸೇ(Mind)-ಕುರುಕ್ಷೇತ್ರ(ಕರ್ಮಕ್ಷೇತ್ರ). ಮನಸ್ಸಿನ ಸಂಘರ್ಷಣೆಯೇ ಮಹಾಭಾರತ ಯುದ್ಧ. ಇದು ಸದ್ಗುಣ ಮತ್ತು ದುರ್ಗುಣಗಳ ನಡುವಿನ ಮಹಾಸಂಗ್ರಾಮ.
ಇಲ್ಲಿ ಕುರುಡ ಧೃತರಾಷ್ಟ್ರ ಸಂಜಯನಲ್ಲಿ  ಕೇಳುತ್ತಾನೆ: "ಹೋರಾಟ ಬಯಸಿ ಎದುರುಬದುರಾದ 'ನನ್ನವರು' ಮತ್ತು 'ಪಾಂಡವರು' ಏನು ಮಾಡಿದರು?" ಎಂದು. ಇಲ್ಲಿ 'ನನ್ನವರು ಮತ್ತು  ಪಾಂಡವರು' ಎಂದು ಸಂಬೋಧಿಸುವುದರ ಮೂಲಕ ಆಳುವ ದೊರೆಯಾಗಿದ್ದ ಧೃತರಾಷ್ಟ್ರ ತನ್ನಲ್ಲಿರುವ ದೌರ್ಬಲ್ಯವನ್ನು ವ್ಯಕ್ತಪಡಿಸುತ್ತಿರುವುದು  ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಇದು ಧೃತರಾಷ್ಟ್ರನ ಒಂದು ಅಸಂಗತವಾದ ಪ್ರಯೋಗ. “ಆತನಲ್ಲಿ ಇಷ್ಟೊಂದು ಸ್ವಾರ್ಥ ತುಂಬಿತ್ತೇ” ಎಂದು ಒಬ್ಬ ಸಾಮಾನ್ಯನೂ ಆಶ್ಚರ್ಯಪಡುವ ಸಂಬೋಧನೆಯಿದು. ಆತ “ನನ್ನ ಮಕ್ಕಳು” ಮತ್ತು ಪಾಂಡುವಿನ ಮಕ್ಕಳು ಎಂದಿದ್ದರೆ ತೊಂದರೆ ಇರಲಿಲ್ಲ. ಬದಲಿಗೆ “ನನ್ನವರು ಮತ್ತು ಪಾಂಡವರು” ಎನ್ನುತ್ತಾನೆ ಆತ.  ಇದರಿಂದ “ಪಾಂಡವರು ನನ್ನವರಲ್ಲಾ, ಅವರು ಪರಕೀಯರು” ಎನ್ನುವ ಕಲ್ಪನೆ ಆತನ  ಸುಪ್ತಪ್ರಜ್ಞೆಯಲ್ಲಿ ಗಾಢವಾಗಿ ನೆಲೆನಿಂತಿತ್ತು ಎನ್ನುವ ವಿಚಾರ ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.
ಇಲ್ಲಿ ಧೃತರಾಷ್ಟ್ರ ಸಂಜಯನಲ್ಲಿ: “ಇಂಥಹ ಧರ್ಮಕ್ಷೇತ್ರದಲ್ಲಿ ಯುದ್ಧಕ್ಕಾಗಿ ಸೇರಿದವರು ಏನು ಮಾಡಿದರು?” ಎಂದು ಕೇಳುತ್ತಿದ್ದಾನೆ. ಆತನಿಗೆ “ಪಾಂಡವರು ಗೆದ್ದರು” ಎನ್ನುವ ಸುದ್ದಿಯನ್ನು ಕೇಳುವ ಆಸೆಯಂತೂ ಇಲ್ಲಾ. ಆತನಿಗಿರುವುದು ಕೇವಲ ತನ್ನವರು ಗೆಲ್ಲಬೇಕು ಎನ್ನುವ ಆಸೆಯಷ್ಟೇ. “ಯುದ್ಧವೇ ನಡೆಯದೇ ಪಾಂಡವರು ದುರ್ಯೋಧನನಿಗೆ ರಾಜ್ಯ ಬಿಟ್ಟು ಕೊಟ್ಟರೂ ಸರಿ, ಅಥವಾ ಯುದ್ಧವಾಗಿ ಅದರಲ್ಲಿ ತನ್ನ ಮಗ ಜಯಶಾಲಿಯಾದರೂ ಸರಿ” ಎನ್ನುವುದು ಆತನ ಅಂತರಂಗದ ಬಯಕೆಯಾಗಿತ್ತು.   
ಮಹಾಭಾರತವನ್ನು ನೋಡಿದಾಗ “ನನ್ನ ಮಗ ನ್ಯಾಯ ಮಾರ್ಗದಲ್ಲೇ ಇದ್ದಾನೆ” ಎನ್ನುವ ತಪ್ಪು ಕಲ್ಪನೆ ಧೃತರಾಷ್ಟ್ರನನ್ನು ಅನೇಕ ಬಾರಿ ದಾರಿ ತಪ್ಪಿಸಿರುವುದನ್ನು ನಾವು ಕಾಣುತ್ತೇವೆ. ಇದರರ್ಥ ಮಗನ ತಪ್ಪು ಆತನಿಗೆ ತಿಳಿದಿರಲಿಲ್ಲಾ ಎಂದರ್ಥವಲ್ಲಾ. ಆತನಿಗೆ ತನ್ನ ಮಗ ತಪ್ಪು ಮಾಡುತ್ತಿದ್ದಾನೆ ಎಂದೂ ತಿಳಿದಿತ್ತು. “ನನ್ನ ಮಗ ತಪ್ಪು ಮಾಡುತ್ತಿದ್ದಾನೆ ಎನ್ನುವುದು ನನಗೆ ತಿಳಿದಿದೆ, ಆದರೆ ಆತನ ವಿರುದ್ಧವಾಗಿ ನಿಲ್ಲುವುದಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲಾ. ನಾನು ಆತನ ಪರವಶನಾಗಿ ಹೋಗಿದ್ದೇನೆ” ಎಂದು ಆತ ಅನೇಕ ಬಾರಿ ಹೇಳಿಕೊಂಡಿರುವುದನ್ನೂ ನಾವು ಮಹಾಭಾರತದಲ್ಲಿ ಕಾಣುತ್ತೇವೆ.
ಧೃತರಾಷ್ಟನ ವ್ಯಕ್ತಿತ್ತ್ವ ಎಂತಹದ್ದು ಎನ್ನುವುದನ್ನು ನಾವು ಮಹಾಭಾರತದ ಕೆಲವು ಘಟನೆಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಉದಾಹರಣೆಗೆ: ಶ್ರೀಕೃಷ್ಣ ಪಾಂಡವರ ಕಡೆಯಿಂದ ಸಂಧಾನದ ಪ್ರಸ್ತಾಪ ಹಿಡಿದು ಬರುವ ಮೊದಲು, ಧೃತರಾಷ್ಟ್ರ ವಿರಾಟನಗರದಲ್ಲಿದ್ದ ಪಾಂಡವರಿಗೊಂದು ಸಂದೇಶ ಕಳುಹಿಸಿದ್ದ.  ಆ ಸಂದೇಶದಲ್ಲಿ ಆತ ಹೇಳುತ್ತಾನೆ: “ದುರ್ಯೋಧನನಂತೂ ನನ್ನ ಮಾತನ್ನು   ಕೇಳುವುದಿಲ್ಲಾ. ಈ ವಿಷಯ ನಿಮಗೂ ಗೊತ್ತು. ಆದರೆ ನೀವು ಅವನಂಥಲ್ಲಾ. ನೀವು ಸಜ್ಜನರು. ಹಾಗಾಗಿ ರಾಜ್ಯವನ್ನು ದುರ್ಯೋಧನನಿಗೆ ಬಿಟ್ಟುಬಿಡಿ” ಎಂದು! ಈ ಘಟನೆ ಧೃತರಾಷ್ಟ್ರನ ಅಂತರಂಗದ ದೌರ್ಬಲ್ಯವನ್ನು ಬಿಂಬಿಸುತ್ತದೆ. ಮಗನ ಕುರಿತು ಮಾತನಾಡುವಾಗ ಆತನ ಧರ್ಮದ ಪರಿಭಾಷೆಯೇ ಬದಲಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಆತ “ಧರ್ಮಕ್ಷೇತ್ರದಲ್ಲಿ ನಿಂತಿದ್ದ ತನ್ನ ಮಗ ಸರಿಯಾದುದ್ದನ್ನೇ ಮಾಡುತ್ತಿದ್ದಾನೆ ಮತ್ತು ಆತನೇ ಗೆಲ್ಲಬೇಕು” ಎಂದು ಅಂತರಂಗದಲ್ಲಿ ಬಯಸುತ್ತಿದ್ದ. ಆದರೆ ಇಲ್ಲಿ ಆತನನ್ನು ಇನ್ನೊಂದು ಸಮಸ್ಯೆ ಕಾಡುತ್ತಿತ್ತು. ಅದೇನೆಂದರೆ: ಶ್ರೀಕೃಷ್ಣನಿರುವುದು ಧರ್ಮದ ಪರ ಮತ್ತು ಆತ ಪಾಂಡವರ ಕಡೆಯಲ್ಲಿದ್ದಾನೆ ಎನ್ನುವ ಸತ್ಯದ ಭಯ. ಈ ಎರಡು ವಿಚಾರದ ಸಂಘರ್ಷ ಆತನ ಮನಸ್ಸಿನಲ್ಲಿತ್ತು. ಇದು ಆತನ ಮಾತಿನಲ್ಲಿ ಕೂಡಾ ಸ್ಪಷ್ಟವಾಗಿ ಕಾಣುತ್ತದೆ. ಆತ ಇಲ್ಲಿ ಬಳಸಿರುವ ಶಬ್ದಗಳನ್ನು ಗಮನಿಸಿದರೆ:  ‘ಒಟ್ಟುಸೇರಿದ್ದಾರೆ’ ಎನ್ನುವ ಆತ್ಮೀಯತೆಯ ಪದ ಬಳಸಿ, ತಕ್ಷಣ   ‘ಒಟ್ಟು ಸೇರಿರುವುದು ಹೋರಾಟಕ್ಕಾಗಿ’ ಎಂದು ಹೇಳಿ ಆ ಅತ್ಮೀಯತೆಯನ್ನು ಹೊಡೆದು ಹಾಕಿದ್ದಾನೆ. ಜೊತೆಗೆ ಈ ಹಿಂದೆ ಹೇಳಿದಂತೆ:  ‘ನನ್ನವರು-ಪಾಂಡವರು’ ಎಂದು ಹೇಳಿ ಪಾಂಡವರನ್ನು ಪರಕೀಯರಂತೆ ಸಂಬೋಧಿಸಿದ್ದಾನೆ.  ಈ ರೀತಿ ತನ್ನ ಮಗನ ಮೇಲಿನ ಮಮತೆಯಿಂದಾಗಿ ಆತ ಪಕ್ಷಪಾತದ ಧೋರಣೆ ತಳೆದಿದ್ದಾನೆ. ಆತನ ಈ ಧೋರಣೆಯೇ ಮಹಾಭಾರತ ಯುದ್ಧಕ್ಕೆ ಕಾರಣವಾಗುತ್ತದೆ. [ಆದರೆ ಆತನ ಈ ಕುರುಡುತನದಿಂದಾಗಿಯೇ ಶ್ರೀಕೃಷ್ಣನಿಂದ ಭಗವದ್ಗೀತೆ ಆವಿಷ್ಕಾರವಾಗಿ ನಮಗೆ ದೊರೆಯಿತು ಎನ್ನುವುದನ್ನು ನಾವಿಲ್ಲಿ ಮರೆಯಬಾರದು].
ಯುದ್ಧ ನಿರ್ಣಯವಾಗುವ ಮುಂಚೆ ಅನೇಕ ಮಂದಿ ದುರ್ಯೋಧನನಿಗೆ ಎಚ್ಚರ ಕೊಟ್ಟಿದ್ದರು. ಗಾಂಧಾರಿ, ವಿಧುರ, ಸಂಜಯ, ದ್ರೋಣಾಚಾರ್ಯರು ಹೀಗೆ ಎಲ್ಲರೂ ಎಚ್ಚರಿಸಿದ್ದರು. ಭೀಷ್ಮಾಚಾರ್ಯರು ಹೇಳುತ್ತಾರೆ:   “ಧ್ರುವಂ ಯುದ್ಧೀ ಹತಾಸ್  ತೇನ ಭಕ್ಷಯಿಶ್ಯಾಮ ಪಾಂಸುಕಾನ್ ಮಹಾಭಾರತ ೫-೨೧-೧೭ : ಪಾಂಡವರನ್ನು ಎದುರು ಹಾಕಿಕೊಂಡರೆ ನಾವು ಮಣ್ಣು ತಿಂದು ಸಾಯಬೇಕಾಗುತ್ತದೆ” ಎಂದು. ಆದರೆ ದುರ್ಯೋಧನ ಈ ಎಲ್ಲಾ ತಿಳುವಳಿಕೆಯ ಮಾತುಗಳನ್ನು ತಿರಸ್ಕರಿಸಿ ಯುದ್ಧಕ್ಕೆ ಸಿದ್ದನಾಗಿದ್ದ. ಇಂದು ಆತ ರಣರಂಗದಲ್ಲಿ ಪಾಂಡವರ ಏಳು ಅಕ್ಷೋಹಿಣಿ ಸೇನೆಯ ಮುಂದೆ ತನ್ನ ಹನ್ನೊಂದು ಅಕ್ಷೋಹಿಣಿ ಸೇನೆಯೊಂದಿಗೆ ನಿಂತಿದ್ದಾನೆ. ಈಗ ಆತನಿಗೆ ಅಂತರಂಗದಲ್ಲಿ ಕಳವಳ ಪ್ರಾರಂಭವಾಗುತ್ತದೆ! ಇಲ್ಲಿಯತನಕ ಆತ್ಮವಿಶ್ವಾಸದಿಂದಿದ್ದ ದುರ್ಯೋಧನ, ಈ ಹಂತದಲ್ಲಿ ತತ್ತರಿಸುತ್ತಿರುವುದನ್ನು ನಾವು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.
ಮುಂದಿನ ಶ್ಲೋಕದ ವಿವರಣೆಯನ್ನು ನೋಡುವ ಮೊದಲು ನಾವಿಲ್ಲಿ ದುರ್ಯೋಧನನ ಒಂದು ವೈಯಕ್ತಿಕ ಸ್ವಭಾವದ ಕುರಿತು ತಿಳಿದುಕೊಳ್ಳಬೇಕು. ದುರ್ಯೋಧನ ಯಾರನ್ನೂ ನಂಬುತ್ತಿರಲಿಲ್ಲಾ. ಭೀಷ್ಮ-ದ್ರೋಣರು ಆತನ ಕಡೆಯಲ್ಲಿ ಯುದ್ಧಕ್ಕೆ ನಿಂತಿದ್ದರೂ ಕೂಡಾ ಆತನಿಗೆ ಅವರ ಮೇಲೆ ನಂಬಿಕೆ ಇರಲಿಲ್ಲಾ. ಇದಕ್ಕೆ ಒಂದು ಕಾರಣವೂ ಇದೆ.  ದುರ್ಯೋಧನನಿಗೆ ರಾಜನೀತಿಯ ಪಾಠವನ್ನು ಹೇಳಿಕೊಟ್ಟವನು ‘ಕನಿಕ’. ಈತನನ್ನು ಶಕುನಿ ಗಾಂಧಾರ ದೇಶದಿಂದ ಕರೆಸಿದ್ದ. ಕನಿಕ ದುರ್ಯೋಧನನಿಗೆ ಹೇಳಿಕೊಟ್ಟಿರುವ ಪಾಠ ಆತನ ಸ್ವಭಾವದ ಮೇಲೆ ತನ್ನ ಪ್ರಭಾವವನ್ನು ಬೀರಿತ್ತು. ನವಿಶ್ವಸೇ   ನವಿಶ್ವಸ್ಥೇ ವಿಶ್ವಸ್ಥೇ ನಾತಿ ವಿಶ್ವಸೇತ್. ಅಂದರೆ: “ನಿನ್ನನ್ನು ನಂಬುವವರನ್ನಾಗಲೀ ಅಥವಾ ನಂಬದವರನ್ನಾಗಲೀ ನೀನೆಂದೂ ನಂಬಬೇಡ” ಎಂದರ್ಥ. ಇದು ಕನಿಕನ ಪಾಠ. ಇಷ್ಟೇ ಅಲ್ಲಾ, ನಂಬಿದಂತೆ ನಟಿಸಿ ಮೊಸಮಾಡಬೇಕು ಎನ್ನುವುದೂ ಆತನ ಪಾಠ! ವಹೇದ್ ಅಮಿತ್ರಂ ಸ್ಕಂಧೇನ ಯಾವತ್  ಕಾಲಸ್ಯ  ಪರ್ಯಯಃ ತತಃ ಪ್ರತ್ಯಾಗತೇ ಕಾಲೇ ಭಿನ್ದ್ಯಾತ್ ಘತಂ ಇವಾಸ್ಮನಿ ಅಂದರೆ: “ನಿನ್ನ ಶತ್ರು ಬಲಿಷ್ಠನಾಗಿದ್ದರೆ ಅವನನ್ನು ನಿನ್ನ ಹೇಗೆಲ ಮೇಲೆ ಹೊತ್ತು ತಿರುಗಾಡು. ಆಗ ಅವನು ಮೆತ್ತಗಾಗುತ್ತಾನೆ. ಯಾವಾಗ ಅವನು ಮೆತ್ತಗಾದನೋ ಆಗ ಅವನನ್ನು ಚಚ್ಚಿ ಕೊಂದುಬಿಡು!”. ಹೀಗೆ ವಿಶ್ವಾಸದ್ರೋಹ ಎನ್ನುವುದನ್ನು ರಾಜಕೀಯ ಬೀಜಮಂತ್ರವನ್ನಾಗಿ ಕನಿಕ ದುರ್ಯೋಧನನಿಗೆ ಹೇಳಿಕೊಟ್ಟಿದ್ದ.
ದುರ್ಯೋಧನ ಎನ್ನುವುದು ನಮ್ಮೊಳಗಿರುವ ದುಷ್ಟತನದ ಪರಾಕಾಷ್ಠೆಯ ಪ್ರತೀಕ. ಭೀಷ್ಮ-ದ್ರೋಣ-ಕೃಪಾ-ಶಲ್ಯ-ಕರ್ಣ-ಇವರೆಲ್ಲರೂ ನಮ್ಮ ಇಂದ್ರಿಯಗಳಿದ್ದಂತೆ. ನಮ್ಮ ಮನಸ್ಸಿನಲ್ಲಿರುವ ಕೆಟ್ಟತನದಿಂದ ನಾವು ನಮ್ಮಲ್ಲಿರುವ ಅತ್ಯಮೂಲ್ಯವಾದ ಇಂದ್ರಿಯಗಳನ್ನು ಕೆಟ್ಟ ಕಾರ್ಯಕ್ಕೆ ಬಳಸುತ್ತೇವೆ. ವಸ್ತುತಃ ಇಂದ್ರಿಯಗಳು ಕೆಟ್ಟವಲ್ಲ. ಆದರೆ ಅವು ಕೆಟ್ಟದ್ದರ ಜೊತೆ ಸೇರಿ ಕೆಟ್ಟದ್ದನ್ನು ಮಾಡುತ್ತವೆ. ದುರ್ಗುಣಗಳು ಬಹಳ ಬಲಶಾಲಿಯಾಗಿರುತ್ತವೆ. ಅವು ನಮ್ಮೊಳಗಿದ್ದು ನಮ್ಮನ್ನೇ  ಆಳುತ್ತವೆ. ನಾವು ಅವುಗಳ ಮೇಲೆ ಸವಾರಿ ಮಾಡಲಾಗುವುದಿಲ್ಲಾ. ಇಲ್ಲಿ ದುರ್ಗುಣದ ಪ್ರತೀಕವಾಗಿರುವ ದುರ್ಯೋಧನನ ಕೈಕೆಳಗೆ  ಇಂದ್ರಿಯದ ಪ್ರತೀಕವಾಗಿರುವ ಭೀಷ್ಮ-ದ್ರೋಣಾದಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ. ಭೀಷ್ಮಾಚಾರ್ಯರನ್ನು ಸೇನಾಧಿಪತಿಯನ್ನಾಗಿ ಮಾಡಿರುವ ದುರ್ಯೋಧನನಿಗೆ ಅವರ ಮೇಲೆ ನಂಬಿಕೆ ಕೂಡಾ ಇಲ್ಲಾ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೇನೆ ಇದ್ದೂ ಕೂಡಾ ಆತನಿಗೆ ಗೆಲ್ಲುವ ಭರವಸೆ ಇಲ್ಲಾ. ಈ ಎಲ್ಲಾ ಮಾನಸಿಕ ತುಮುಲದೊಂದಿಗೆ ಸೇನೆಯ ಮುಂಚೂಣಿಯಲ್ಲಿ ನಿಂತಿರುವ ದುರ್ಯೋಧನ ಏನು ಮಾಡಿದ ಎನ್ನುವುದನ್ನು ಗೀತೆಯ ಮುಂದಿನ ಶ್ಲೋಕದಲ್ಲಿ ನೋಡೋಣ. 

Bhagavad Gita Kannada Ch-01-ಮುನ್ನುಡಿ

ಅಧ್ಯಾಯ ಒಂದು

ಸಾಮಾನ್ಯವಾಗಿ ಭಗವದ್ಗೀತೆಗೆ ಭಾಷ್ಯ ಬರೆಯುವವರು ಮೊದಲ ಅಧ್ಯಾಯಕ್ಕೆ ಹೆಚ್ಚು ಒತ್ತು ಕೊಡದೇ ನೇರವಾಗಿ ಎರಡನೇ ಅಧ್ಯಾಯದಲ್ಲಿ- 'ಯುದ್ಧರಂಗದಲ್ಲಿ  ಗೊಂದಲಕ್ಕೊಳಗಾದ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ' ಎಂದು ಪ್ರಾರಂಭಿಸುತ್ತಾರೆ. ಆದರೆ ಮೊದಲ ಅಧ್ಯಾಯದಲ್ಲಿ ಮನಃಶಾಸ್ತ್ರಕ್ಕೆ(psychology) ಸಂಬಂಧಪಟ್ಟ ಅನೇಕ ವಿಷಯಗಳಿವೆ. ಈ ಹಿನ್ನೆಲೆಯಲ್ಲಿ ಭಗವದ್ಗೀತೆಯ ಈ ಅಧ್ಯಾಯವನ್ನು 'ಅರ್ಜುನ ವಿಷಾದ ಯೋಗ' ಎಂದು ಕರೆಯುವುದು ಪ್ರಸ್ತುತವಲ್ಲ. ಈ ಅಧ್ಯಾಯದಲ್ಲಿ ಯುದ್ಧ ನಡೆಯುವ ಪೂರ್ವ ಕ್ಷಣದಲ್ಲಿ ಯುದ್ಧ ಭೂಮಿಯಲ್ಲಿ ಎದುರುಬದುರಾಗಿ ನಿಂತಿದ್ದ  ಅರ್ಜುನ ಹಾಗೂ ದುರ್ಯೋಧನರ ಮನಃಸ್ಥಿತಿ ಹೇಗಿತ್ತು ಎನ್ನುವುದರ ಕುರಿತಾದ ಅಪೂರ್ವ ಮನಃಶಾಸ್ತ್ರೀಯ ವಿಶ್ಲೇಷಣೆ ಅಡಗಿದೆ. ಧರ್ಮದ ಪರ ನಿಂತ ಅರ್ಜುನನ ಮನಸ್ಸಿನ ಗೊಂದಲಕ್ಕೆ ಶ್ರೀಕೃಷ್ಣನ  ಉಪದೇಶವೆಂಬ ಪರಿಹಾರ ಸಿಕ್ಕರೆ, ಅಧರ್ಮಿಯಾಗಿದ್ದ ದುಷ್ಟ ದುರ್ಯೋಧನ ಗೊಂದಲದಿಂದಲೇ ಸಾಯುವುದನ್ನು ನಾವಿಲ್ಲಿ ಕಾಣುತ್ತೇವೆ. ಈ ಎಲ್ಲಾ ಕಾರಣದಿಂದ ಮೊದಲ ಅಧ್ಯಾಯವನ್ನು ನಾವು ಐತಿಹಾಸಿಕ ದೃಷ್ಟಿಯಿಂದ ಕಾಣದೇ, ಇಲ್ಲಿರುವ ಮನಃಶಾಸ್ತ್ರವನ್ನು ಅರಿಯಲು ಪ್ರಯತ್ನಿಸಬೇಕು. ಇಲ್ಲಿ ಹೇಳಿರುವ ಮನಃಶಾಸ್ತ್ರ ಕೇವಲ ಯುದ್ಧಭೂಮಿಯಲ್ಲಿ ನಿಂತವರಿಗೆ ಮಾತ್ರ ಸಂಬಂಧಪಟ್ಟದ್ದಲ್ಲ. ಇದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಪಟ್ಟದ್ದು. ಈ ಎಚ್ಚರದಿಂದ ಇಲ್ಲಿ ಬರುವ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನಮಗೆ ಈ ಅಧ್ಯಾಯ ಅರ್ಥವಾಗುತ್ತದೆ.
ಮಹಾಭಾರತ ಯುದ್ಧ ಪ್ರಾರಂಭವಾಗುವ ಮೊದಲು ಎರಡೂ ಕಡೆಯವವರ ಮನಃಸ್ಥಿತಿ ಹೇಗಿತ್ತು ಎನ್ನುವುದು ತುಂಬಾ ರೋಚಕ. ಯುದ್ಧದ ತೀರ್ಮಾನವಾಗುವ ಮೊದಲು ಧೃತರಾಷ್ಟ್ರ ಮಗನನನ್ನು ಕರೆದು ಹೇಳುತ್ತಾನೆ: “ಶ್ರೀಕೃಷ್ಣ ಪಾಂಡವರ ಕಡೆಗಿರುವಾಗ ಅವರನ್ನು ಎದುರು ಹಾಕಿಕೊಂಡು ನಾವು ಗೆಲುವು ಸಾಧಿಸಲು ಸಾಧ್ಯವಿಲ್ಲಾ” ಎಂದು. ‘ತದಾ ನಾಶಂಸೇ ವಿಜಯಾಯ ಸಂಜಯಾ”  “ಭೀಮಾರ್ಜುನರು ಆ ಕಡೆಗಿದ್ದಾರೆ.  ಹೀಗಿರುವಾಗ ಜಗತ್ತಿನ ಯಾವ ಶಕ್ತಿಯೂ ಅವರನ್ನು ಗೆಲ್ಲುವುದು ಸಾಧ್ಯವಿಲ್ಲಾ. ಇದೆಲ್ಲವನ್ನೂ ತಿಳಿದೂ ನಾವೇಕೆ ಯುದ್ಧದಲ್ಲಿ ಸೋಲುವ ಪ್ರಸಂಗವನ್ನು ತಂದುಕೊಳ್ಳಬೇಕು ? ನಾವು ಗೆಲ್ಲುವ ಸಾಧ್ಯತೆ ನನಗೆ ಕಾಣುವುದಿಲ್ಲಾ, ಹೀಗಾಗಿ ನಮಗೆ ಯುದ್ಧ ಬೇಡ”  ಎನ್ನುತ್ತಾನೆ ಧೃತರಾಷ್ಟ್ರ. ಮಹಾಭಾರತದ ಉದ್ಯೋಗ ಪರ್ವದಲ್ಲಿ ಹೇಳಿರುವಂತೆ: ನೃತ್ಯನ್  ಇವ ಗದಾಪಾಣಿರ್ಯುಗಾಂತಂ ದರ್ಶಯೀಷ್ಯತಿ ೫-೫೦-೩೨  ಭೀಮಸೇನ ಗಧೆ ಹಿಡಿದು ರಣರಂಗಕ್ಕೆ ಬಂದನೆಂದರೆ ಪ್ರಾಯಃ ಪ್ರಳಯಕಾಲದ ಶಿವತಾಂಡವದ  ಅನುಭವವಾಗಬಹುದು” ಎಂದಿದ್ದಾನೆ ಕುರುಡ ದೃತರಾಷ್ಟ. ಈ ಸಂದರ್ಭದಲ್ಲಿ  ದುರ್ಯೋಧನ ತಂದೆಗೆ ನೀಡುವ ಉತ್ತರವನ್ನು ನಾವಿಲ್ಲಿ ಗಮನಿಸಬೇಕು. ಯಾವುದೇ ಒಂದು ಸಂಗತಿಯ ಬಗ್ಗೆ ದೂರದಲ್ಲಿ ನಿಂತು ಯೋಚಿಸುವುದೇ ಬೇರೆ, ಅಂಥಹ ದೃಶ್ಯ ಕಣ್ಮುಂದೆ ಇದ್ದಾಗ ಅದರ ಬಗ್ಗೆ ಯೋಚಿಸುವುದೇ ಬೇರೆ.  ದುರ್ಯೋಧನ ಹೇಳುತ್ತಾನೆ: ಸಮಗ್ರಾ ಪಾರ್ಥಿವೀ ಸೇನಾ ಪಾರ್ಥಂ ಏಕಂ ಧನಂಜಯಮ್ ಕಸ್ಮಾದ್ ಅಶಕ್ತಾ ನಿರ್ಜೇತುಂ ಇತಿ ಹೇತುರ್  ನ ವಿದ್ಯತೇ೫-೫೪-೪೪ “ಯಾರಿದ್ದಾರೆ ಪಾಂಡವರ ಕಡೆಯಲ್ಲಿ? ಕೇವಲ ಅವರ ಹತ್ತಿರದ ಸಂಬಂಧಿಗಳಷ್ಟೇ” ಎನ್ನುತ್ತಾನೆ ದುರ್ಯೋಧನ. ಇಲ್ಲಿ ದುರ್ಯೋಧನನ ತರ್ಕ ಸರಿಯಾಗಿಯೇ ಇದೆ. ಇಡೀ ಭೂಮಂಡಲದ ವೀರಾಧಿವೀರರು ಮತ್ತು ಅವರ ಸೇನೆ ಕೌರವರ ಕಡೆಯಲ್ಲಿತ್ತು. ಪಾಂಡವರ ಕಡೆಯಲ್ಲಿ ಇದ್ದವರು ಮುಖ್ಯವಾಗಿ  ಭೀಮ ಮತ್ತು ಅರ್ಜುನ. ಭೀಮನನ್ನು ಗಧಾಯುದ್ಧದಲ್ಲಿ ಸೋಲಿಸುವುದಕ್ಕಾಗಿ ದುರ್ಯೋಧನ ಭೀಮನ ಗುರು ಬಲರಾಮನಿಂದಲೇ ಗಧಾಯುದ್ಧವನ್ನು ಕಲಿತು ಬಂದಿದ್ದ. ಇನ್ನು ಅರ್ಜುನನ್ನು ಸೋಲಿಸಲು ಪ್ರಪಂಚದ ಸಮಸ್ತ ವೀರರೂ ಆತನ ಪರವಹಿಸಿದ್ದರು. ಹೀಗಿರುವಾಗ ಖಂಡಿತಾ ತಾನೇ ಗೆಲ್ಲುವುದು ಎನ್ನುವುದು ಆತನ ಯೋಚನೆಯಾಗಿತ್ತು. ಇದು ದೂರದಲ್ಲಿ ಕುಳಿತು ಒಂದು ವಸ್ತುವನ್ನು ಯೋಚಿಸುವಾಗ ಬರುವ ಚಿಂತನೆ. ಈ ರೀತಿ ಮಾತನಾಡಿದ್ದ  ದುರ್ಯೋಧನ ರಣರಂಗದಲ್ಲಿ ಎರಡೂ ಕಡೆಯವರ ಸೇನೆ   ಎದುರುಬದುರಾಗಿರುವಾಗ ಹೇಗೆ ವರ್ತಿಸಿದ ಎನ್ನುವುದನ್ನು ನಾವು ಗೀತೆಯ ಒಂದನೇ ಅಧ್ಯಾಯದಲ್ಲಿ ಗಮನಿಸಬೇಕು. ಇದೊಂದು ಅದ್ಭುತ ಮನಃಶಾಸ್ತ್ರ.
ಭಗವದ್ಗೀತೆ ಪ್ರಾರಂಭವಾಗುವುದು ಧೃತರಾಷ್ಟ್ರನ ಪ್ರಶ್ನೆಯಿಂದ. ಧೃತರಾಷ್ಟ್ರ ಎಂದರೆ ರಾಷ್ಟ್ರವನ್ನು(ಪುರವನ್ನು) ಧಾರಣೆ ಮಾಡಿದವ ಎಂದರ್ಥ. ರಾಷ್ಟ್ರ ಎಂದರೆ ಪುರ. ಕಠೋಪನಿಷತ್ತಿನಲ್ಲಿ ಹೇಳುವಂತೆ: ಪುರಮೇಕಾದಶದ್ವಾರಮಜಸ್ಯಾವಕ್ರಚೇತಸಃ ।೨-೨-೧। ಜೀವ ವಾಸ ಮಾಡುವ ಮನೆಯಾಗಿರುವ ಮಾನವ ಶರೀರವನ್ನು ಪುರಎಂದು ಕರೆಯುತ್ತಾರೆ. ಇತರ ಎಲ್ಲಾ ಪ್ರಾಣಿಗಳ ಶರೀರಕ್ಕಿಂತ ಮನುಷ್ಯ ಶರೀರ ಪೂರ್ಣ ವಿಕಸನ ಹೊಂದಿರುವ ಶರೀರವಾಗಿರುವುದರಿಂದ ಇದನ್ನು ಪುರಎನ್ನುತ್ತಾರೆ. ಇಲ್ಲಿ ದೃತರಾಷ್ಟ ಸತ್ಯದ ಬಗ್ಗೆ ಕುರುಡಾಗಿ ಕಣ್ಮುಚ್ಚಿ ಮಲಗಿರುವ ಜೀವದ ಸಂಕೇತ. ಈ ರೀತಿ ಗೀತೆಯ ಪ್ರತಿಯೊಂದು ಶ್ಲೋಕದಲ್ಲಿ, ಮಹಾಭಾರತದ ಪ್ರತಿಯೊಂದು ಪಾತ್ರದಲ್ಲಿ, ಅತ್ಯಮೂಲ್ಯವಾದ ಹಾಗೂ ಗುಹ್ಯವಾದ ಅರ್ಥ ಅಡಗಿದೆ.

ಭಗವದ್ಗೀತೆ-ಪೀಠಿಕೆ

ಪ್ರಸ್ತಾವನೆ

ಭಗವದ್ಗೀತೆ ನಮ್ಮ ಶಾಸ್ತ್ರ ಪರಂಪರೆಯ ಇತಿಹಾಸದಲ್ಲಿ ಬಹಳ ಮಹತ್ವದ ಗ್ರಂಥ ಎಂದು ಹೆಸರುಪಡೆದಿದೆ. ಪ್ರಾಚೀನರು ಭಗವದ್ಗೀತೆಗೆ ವೇದಕ್ಕಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ. ಇದಕ್ಕೆ ಸರಿಸಾಟಿಯಾದ ಕೃತಿ ಇನ್ನೊಂದಿಲ್ಲ. ಎಲ್ಲಾ ಅಧ್ಯಾತ್ಮ ಸಾರವನ್ನು ಹೊತ್ತ ಮಹಾಭಾರತದ ಸಾರ-ಭಗವದ್ಗೀತೆ. ಅರ್ಥದ ಭಾರದಿಂದ ತುಂಬಿರುವ ಮಹಾಭಾರತವು ಶಾಸ್ತ್ರಗಳಲ್ಲೇ ಶ್ರೇಷ್ಠ ಗ್ರಂಥ. ಇಂತಹ  ಮಹಾಭಾರತದಲ್ಲಿ ಭಗವದ್ಗೀತೆ ಶ್ರೇಷ್ಠ. ಭಗವದ್ಗೀತೆಯನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ ದರ್ಶನ ನಮಗಾಗುತ್ತದೆ ಎನ್ನುವ ಹಿನ್ನೆಲೆ ಭಗವದ್ಗೀತೆಗಿದೆ.
ಮಹಾಭಾರತ ಐತಿಹಾಸಿಕ, ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮೂರು ಬಗೆಯಿಂದ ತೆರೆದುಕೊಳ್ಳುತ್ತದೆ. ಭಾರತ ದೇಶದಲ್ಲಿ ಮನಃಶಾಸ್ತ್ರ ಮತ್ತು ತತ್ತ್ವಶಾಸ್ತ್ರ ಬೇರೆ ಬೇರೆ ವಿಷಯಗಳಲ್ಲಾ. ನಮ್ಮಲ್ಲಿ ಮನಃಶಾಸ್ತ್ರ ಎಂದರೆ ತತ್ತ್ವಶಾಸ್ತ್ರ, ತತ್ತ್ವಶಾಸ್ತ್ರ ಎಂದರೆ ಮನಃಶಾಸ್ತ್ರ. ಭಗವದ್ಗೀತೆ ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮಹಾಭಾರತದ ಸಾರವನ್ನು ಸೆರೆಹಿಡಿದಿದೆ. ಭಗವದ್ಗೀತೆಯಲ್ಲಿ ನಾವು ನೋಡಬೇಕಾದ ಮುಖ ಇತಿಹಾಸವಲ್ಲ, ಬದಲಿಗೆ ಮನಃಶಾಸ್ತ್ರ ಮತ್ತು ಅಧ್ಯಾತ್ಮ.
ಮಹಾಭಾರತವು ಏಳುಪಾತ್ರಗಳ ಮೂಲಕ ಹದಿನೆಂಟು ಜೀವನ್ಮೌಲ್ಯಗಳ ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ. ಅವುಗಳೆಂದರೆ:
(೧) ಧರ್ಮರಾಜ - ಧರ್ಮ(೧)
(೨) ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ(೧೧)
(೩) ಅರ್ಜುನ - ಶ್ರವಣ, ಮನನ ಮತ್ತು ನಿಧಿಧ್ಯಾಸನ(೧೪)
(೪,೫) ನಕುಲ-ಸಹದೇವ - ಶೀಲ ಮತ್ತು ವಿನಯ(೧೬)
(೬) ದ್ರೌಪದಿ - ವೇದವಿದ್ಯೆ(೧೭)
(೭) ಶ್ರೀಕೃಷ್ಣ ವೇದವೇದ್ಯ(೧೮)
ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲವೆಂಬ ಹತ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ ಶ್ರವಣ, ಮನನ ಮತ್ತು ನಿಧಿಧ್ಯಾಸನದೊಂದಿಗೆ  ಶೀಲ ಮತ್ತು ವಿನಯಗಳು ನಮ್ಮ ನಿತ್ಯ ಸಂಗಾತಿಗಳಾಗಿರಬೇಕು.   ಈ ಹದಿನಾರು ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ ಭಗವಂತನನ್ನು ತಲುಪುವುದೇ ಗೀತೆಯ ಒಟ್ಟು ಸಾರಾಂಶ. ಆ ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು ಬಳಸಬೇಕು.

ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ ಹದಿನೆಂಟು . ಇದು ತತ್ವಶಾಸ್ತ್ರದ ಎಲ್ಲಾ ರಹಸ್ಯಗಳನ್ನು ತನ್ನ ಬಸಿರಿನಲ್ಲಿ ಬಚ್ಚಿಟ್ಟುಕೊಂಡಿರುವ ಸಂಖ್ಯೆ. ಮಹಾಭಾರತದಲ್ಲಿ ಕೂಡಾ ಈ ಸಂಖ್ಯಾ ಚಮತ್ಕಾರವನ್ನು ಕಾಣಬಹುದು. ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. ಮಹಾಭಾರತದ ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನ. ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ. ಹೀಗೆ ಹದಿನೆಂಟರ ನಂಟು ಎಲ್ಲೆಡೆ ಕಾಣಸಿಗುತ್ತದೆ.
ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಹೇಳುವುದು  ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ  ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ  ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ  ಪಾಂಡವರು ಸೋತು  ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೇ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ.
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗೂ ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ. ಬನ್ನಿ, ಇಂತಹ ಅಪೂರ್ವ ಅಧ್ಯಾತ್ಮವನ್ನು ಆ ಭಗವಂತನ ಕೃಪೆ ಬೇಡಿ  ನಮ್ಮ ಯೋಗ್ಯತೆ ಇದ್ದಷ್ಟು ಅರಿಯಲು ಪ್ರಯತ್ನಿಸೋಣ.

*********