Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, January 4, 2012

Bhagavad Gita Kannada Chapter-18 Shloka 45-48


ವರ್ಣದ ಬಗ್ಗೆ ಕೃಷ್ಣ ಬಹಳ ರೋಚಕವಾದ ವಿವರಣೆಯನ್ನು ಕೊಟ್ಟ. ಸಮಾಜದಲ್ಲಿ ಮತ್ತು ಕೆಲವು ಪ್ರಾಚೀನ ಗ್ರಂಥಗಳಲ್ಲಿ  ವರ್ಣವನ್ನು ಜಾತಿ ಎನ್ನುವ ಶಬ್ದದಿಂದ ಮತ್ತು ಜಾತಿಯನ್ನು ವರ್ಣ ಎನ್ನುವ ಶಬ್ದದಿಂದ ಬಳಸಿರುವುದನ್ನು ಕಾಣುತ್ತೇವೆ. ಇಂಥಹ ಸಂದರ್ಭದಲ್ಲಿ ನಾವು ಗೊಂದಲ ಮಾಡಿಕೊಳ್ಳದೆ, ಅಲ್ಲಲ್ಲಿ ಯಾವ ಅರ್ಥದಲ್ಲಿ ಹೇಳಲಾಗಿದೆ ಎನ್ನುವುದನ್ನು ತಿಳಿದು, ಅದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ “ವರ್ಣ ಪದ್ಧತಿಯನ್ನು ನನ್ನ ಆಡಳಿತದಲ್ಲಿ ನಾನು ಹೇಗೆ ಪಾಲಿಸಬೇಕು” ಎಂದು ಪ್ರಶ್ನೆ ಮಾಡಿದ  ಧರ್ಮರಾಯನಿಗೆ  ಭೀಷ್ಮಾಚಾರ್ಯರು ಹೇಳುತ್ತಾರೆ: “ವರ್ಣ ವಿಭಾಗವೇ ಇಲ್ಲ, ಎಲ್ಲರೂ ದೇವರ ಮಕ್ಕಳು, ರಾಜನಾದವನಿಗೆ  ವರ್ಣಭೇದ ಮಾಡುವ ಅಧಿಕಾರವಿಲ್ಲ” ಎಂದು.  ಇಲ್ಲಿ ವರ್ಣ ಎನ್ನುವುದು ಜಾತಿ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ.
ಸಾಮಾನ್ಯವಾಗಿ ಸಮಾಜದಲ್ಲಿ ತಂದೆ/ತಾಯಿಯ ಸ್ವಭಾವ ಯಾವುದಿರುತ್ತದೋ ಅದೇ ಸ್ವಭಾವವನ್ನು ಮಕ್ಕಳು ಅನುಸರಿಸುತ್ತಾರೆ. ಉದಾಹರಣೆಗೆ: ಒಬ್ಬ ಬ್ರಾಹ್ಮಣನ ಮಗ, ಅವನಿಗೆ ಬ್ರಾಹ್ಮಣ ಸ್ವಭಾವವನ್ನು ಅನುಸರಿಸುವುದು ಸುಲಭವಾಗುತ್ತದೆ. ಆತ ಅದನ್ನೇ ಅನುಸರಿಸಿಕೊಂಡು ಬೆಳೆಯುತ್ತಾನೆ. ಹೀಗಾದಾಗ ನಿಜವಾದ ವರ್ಣವನ್ನು ಗುರುತಿಸುವುದು ಕಷ್ಟವಾಗುತ್ತದೆ. ಹೀಗೆ ವರ್ಣವನ್ನು ಗುರುತಿಸಲು ಕಷ್ಟವಾದಾಗ ಬಂದ ಪದ್ಧತಿ ಜಾತಿಪದ್ಧತಿ. ಜಾತಿ ಬೇರೆ ವರ್ಣ ಬೇರೆ ಎನ್ನುವುದಕ್ಕೆ ಉತ್ತಮ ಉದಾಹರಣೆ- ಒಬ್ಬ ಬೆಸ್ತರ ಹುಡುಗಿಯಲ್ಲಿ ಹುಟ್ಟಿದ ವೇದವ್ಯಾಸರು. ಅವರು  ಮಹಾಬ್ರಾಹ್ಮಣ ಎನ್ನುವುದನ್ನು ಪ್ರಪಂಚವೇ ಒಪ್ಪಿದೆ.
ಇಂದು ಸಮಾಜದಲ್ಲಿ ಜೀವ ಸ್ವಭಾವವನ್ನು ಗುರುತಿಸಿ ಅದಕ್ಕನುಗುಣವಾದ ಕರ್ಮವನ್ನು ಮಾಡುವ ಪದ್ಧತಿ ಇಲ್ಲವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ತಂದೆ-ತಾಯಿ ತಮ್ಮ ಇಷ್ಟವನ್ನು ತಮ್ಮ ಮಕ್ಕಳ ಮೇಲೆ ಹೇರುತ್ತಿದ್ದಾರೆ. ಇದು ತೀರಾ ಅವೈಜ್ಞಾನಿಕ ಪದ್ಧತಿ. ಮಕ್ಕಳಲ್ಲಿ ಹುದುಗಿರುವ ನಿಜವಾದ ಪ್ರತಿಭೆಯನ್ನು ಗುರುತಿಸದೆ, ತಾವು ಹೇಳಿದ ವಿಷಯವನ್ನು ಮಕ್ಕಳು ಕಲಿಯಬೇಕು ಎನ್ನುವುದು ವರ್ಣಪದ್ಧತಿಗೆ ವಿರುದ್ಧವಾದ ಸಂಪ್ರದಾಯ. ಅವರವರ ಜೀವ ಸ್ವಭಾವ ಏನೋ ಅದಕ್ಕನುಗುಣವಾಗಿ ಅವರು ಕಲಿಯಬೇಕು. ಆಗ ಅವರು ಆ ವಿಷಯದಲ್ಲಿ ಪರಿಣತರಾಗುತ್ತಾರೆ ಮತ್ತು ಸಮಾಜಕ್ಕೆ ಅವರಿಂದ ಉಪಯೋಗವಾಗುತ್ತದೆ.
       
ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ ।
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತಚ್ಛೃಣು                            ॥೪೫॥

ಸ್ವೇ ಸ್ವೇ ಕರ್ಮಣಿ ಅಭಿರತಃ ಸಂಸಿದ್ಧಿಂ ಲಭತೇ ನರಃ ।
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತತ್ ಶೃಣು –- ತನ್ನತನ್ನ ಸಹಜ ಕರ್ಮದಲ್ಲಿ ನಿರತನಾದ ಮನುಷ್ಯ ಸಿದ್ಧಿಯನ್ನು ಪಡೆಯುತ್ತಾನೆ. ತನ್ನದಾದ ಕರ್ಮದಲ್ಲಿ ತೊಡಗಿದವನು ಹೇಗೆ ಸಿದ್ಧಿ ಪಡೆಯುತ್ತಾನೆ ಆ ಬಗೆಯನ್ನು ಕೇಳು.

ಅವರವರ ಸ್ವಭಾವಕ್ಕೆ ಅನುಗುಣವಾದ ಕರ್ಮವನ್ನು ಕೃಷ್ಣ ‘ಸ್ವಕರ್ಮ’ ಎಂದು ಕರೆದಿದ್ದಾನೆ.  ‘ನಿನ್ನ ಕರ್ಮ ನೀನು ಮಾಡು’ ಎಂದರೆ ನಿನ್ನ ಸ್ವಭಾವಕ್ಕೆ ಒಗ್ಗುವ ಕರ್ಮವನ್ನು ನೀನು ಮಾಡು ಎಂದರ್ಥ. ಪ್ರಾಮಾಣಿಕತೆ ಮತ್ತು ಸ್ವಕರ್ಮನಿಷ್ಠೆಗಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ತನ್ನ ಸ್ವಭಾವಕ್ಕೆ ಸಹಜವಾದ ಕರ್ಮವನ್ನು ಭಗವದರ್ಪಣಾ ಬುದ್ಧಿಯಿಂದ ಮಾಡುತ್ತ ಪ್ರಾಮಾಣಿಕವಾಗಿ ಬದುಕುವುದೇ ಎಲ್ಲಕ್ಕಿಂತ ಶ್ರೇಷ್ಠ ಧರ್ಮ.
ನಮ್ಮಲ್ಲಿ ಕೆಲವರು ಕೇಳಬಹುದು: “ಯಾವ ಕೆಲಸವಾದರೇನು, ಯಾವುದರಿಂದ ಹೆಚ್ಚು ಹಣ ಸಂಪಾದನೆ ಸಾಧ್ಯವೋ ಆ ಕೆಲಸವನ್ನು ಮಾಡುವುದರಲ್ಲಿ ತಪ್ಪೇನು” ಎಂದು. ಇಲ್ಲಿ ಕೃಷ್ಣ ಅದು ತಪ್ಪು ಎಂದಿದ್ದಾನೆ. ಯಾವುದೋ ಒಂದು ಕೆಲಸ ಮಾಡುವುದು ಬದುಕಲ್ಲ, ಅದು ಯಾತನೆ. ನಿನ್ನನಿನ್ನ ಸ್ವಭಾವಸಹಜವಾದ ಕರ್ಮದಲ್ಲಿ ನೀನು ಬದುಕಿದರೆ ಅದು ಬದುಕು. ಅದೇ ಮೋಕ್ಷ ಮಾರ್ಗ. ನಿನ್ನ ಸ್ವಭಾವಕ್ಕೆ ತಕ್ಕಂತೆ ನಿನ್ನ ಶಿಕ್ಷಣ; ನಿನ್ನ ಶಿಕ್ಷಣಕ್ಕೆ ತಕ್ಕಂತೆ ನಿನ್ನ ಕರ್ಮ. ಹೀಗೆ ಮಾಡಿದಾಗ ಕರ್ಮದಲ್ಲಿ ಅಭಿರತಿ(ಸಂಪೂರ್ಣ ತೃಪ್ತಿ ಮತ್ತು ಸಂತೋಷ) ಇರುತ್ತದೆ. ಈ ರೀತಿ ಖುಷಿಯಿಂದ ಭಗವದರ್ಪಣೆಯಾಗಿ ಕರ್ಮ ಮಾಡಿದಾಗ,  ಬದುಕಿನ ಕೊನೆಯ ಸಿದ್ಧಿಯಾದ ಮೋಕ್ಷವನ್ನು ಪಡೆಯಬಹುದು. ಸ್ವಭಾವ ಸಹಜವಾದ ಕರ್ಮದಿಂದ ಹೇಗೆ ಸಿದ್ಧಿಯಾಗುತ್ತದೆ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ.           

ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ ।
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ                                    ॥೪೬॥

ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮ್ ಇದಂ ತತಮ್ ।
ಸ್ವಕರ್ಮಣಾ ತಮ್ ಅಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ            -- ಯಾರಿಂದ ಜೀವಿಗಳ ಚಟುವಟಿಕೆಯೋ, ಯಾರು ಈ ಎಲ್ಲವನ್ನು ತುಂಬಿನಿಂತಿರುವನೋ ಅಂಥ ಭಗವಂತನನ್ನು ಮನುಷ್ಯ ಸ್ವಭಾವಸಹಜವಾದ ಕರ್ಮದಿಂದ ಆರಾಧಿಸಿ ಸಿದ್ಧಿ ಪಡೆಯುತ್ತಾನೆ.

ನಮ್ಮ ಸ್ವಭಾವ ಸಹಜ ಕರ್ಮವನ್ನು ಭಗವಂತನ ಅಭ್ಯರ್ಚನೆಯಾಗಿ ಮಾಡಿದಾಗ ಅದು ಅಧ್ಯಾತ್ಮವಾಗುತ್ತದೆ. ಇದಕ್ಕಿಂತ ಮಹತ್ತಾದ ಪೂಜೆ ಇನ್ನೊಂದಿಲ್ಲ. ಇಲ್ಲಿ ಅರ್ಚನೆ ಎಂದರೆ ಪುರೋಹಿತರ ಮುಖೇನ ದೇವಸ್ಥಾನದಲ್ಲಿ ಮಾಡುವ ಅರ್ಚನೆ ಅಲ್ಲ. ಇದು ಇಂದ್ರಿಯ ನಿಗ್ರಹ, ಶಮಃ, ದಮಃ ಎಲ್ಲವೂ ಸೇರಿ ಸ್ವಯಂ ಮಾಡತಕ್ಕ ಅರ್ಚನೆ. ಆದ್ದರಿಂದ ನಾವು ಮಾಡುವ ಸ್ವಭಾವ ಸಹಜ ಕರ್ಮದಲ್ಲಿ ನಮ್ಮ ಇಂದ್ರಿಯ ನಿಗ್ರಹ ಸೇರಿದೆ, ಭಗವನ್ನಿಷ್ಠೆ ಸೇರಿದೆ, ಭಗವದರ್ಪಣಾ ಬುದ್ಧಿ ಸೇರಿದೆ. ಇವೆಲ್ಲವೂ ಸೇರಿ ನಾವು ಮಾಡತಕ್ಕ ಪ್ರತಿಯೊಂದು ಸ್ವಕರ್ಮ/ಸಹಜಕರ್ಮ  ಭಗವಂತನ ಪೂಜೆಯಾಗುತ್ತದೆ. ಈ ರೀತಿ ಬದುಕಿದಾಗ ನಮ್ಮ ಇಡೀ ಬದುಕು ದೇವರ ಪೂಜೆಯಾಗುತ್ತದೆ. ನಮಗೆ ಇಚ್ಛೆ ಮತ್ತು  ಪ್ರವೃತ್ತಿಯನ್ನು ಕೊಟ್ಟ ಭಗವಂತನಿಗೆ ನಮ್ಮ ಕರ್ಮವನ್ನು ಅರ್ಪಿಸಿದಾಗ ನಮ್ಮ ಕರ್ಮವೇ ಒಂದು ಅರ್ಚನೆಯಾಗುತ್ತದೆ.   

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
ಸ್ವಭಾವನಿಯತಂ ಕರ್ಮ ಕುರ್ವನ್ ನಾSಪ್ನೋತಿ ಕಿಲ್ಬಿಷಮ್              ॥೪೭॥

ಶ್ರೇಯಾನ್ ಸ್ವಧರ್ಮಃ  ವಿಗುಣಃ ಪರಧರ್ಮಾತ್  ಸು ಅನುಷ್ಠಿತಾತ್ ।
ಸ್ವಭಾವ ನಿಯತಂ ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ –- ಚನ್ನಾಗಿ ಆಚರಿಸಿದ ಪರಧರ್ಮಕ್ಕಿಂತ ಆಚರಣೆಯಲ್ಲಿ ಕೊರತೆಯಿದ್ದರೂ ತನ್ನ ಸಹಜಧರ್ಮ ಮಿಗಿಲು. ತನ್ನ ಸ್ವಭಾವಕ್ಕೆ ತಕ್ಕುದಾದ ಕರ್ಮ ಮಾಡಿದರೆ ಪಾಪ ತಟ್ಟುವುದಿಲ್ಲ.

ನಮ್ಮ ಸ್ವಭಾವಕ್ಕೆ ಸಹಜವಾದ ಸ್ವಧರ್ಮ ಮಾಡುವುದರಿಂದ, ಆ ಕರ್ಮದಲ್ಲಿ ದೋಷವಿದ್ದರೂ ಕೂಡ ಅದರಿಂದ ಪಾಪ ತಟ್ಟುವುದಿಲ್ಲ. ಇದನ್ನು ಬಿಟ್ಟು ಪರಧರ್ಮ ಮಾಡುವುದು ಯುಕ್ತವಲ್ಲ. ವೇದವ್ಯಾಸರು ಯುದ್ಧಾನಂತರ ತಾನು ಸಿಂಹಾಸನವೇರಲಾರೆ, ನನಗೇನೂ ಬೇಡ, ನಾನು ಕಾಡಿಗೆ ಹೋಗುತ್ತೇನೆ ಎಂದು ಕುಳಿತ ಧರ್ಮರಾಯನಿಗೆ- “ನೀನು ನಿನ್ನ ಸಹಜ ಧರ್ಮವನ್ನು ಬಿಟ್ಟು ಕಾಡಿಗೆ ಹೋಗುವುದು ಎಷ್ಟು ಅಸಂಗತವೋ, ಅಷ್ಟೇ ಅಸಂಗತ ನಾನು ತಪಸ್ಸನ್ನು ಬಿಟ್ಟು ಬಂದು ರಾಜ್ಯಭಾರ ಮಾಡುವುದು” ಎಂದು ಬುದ್ಧಿವಾದ ಹೇಳುತ್ತಾರೆ. ಇದರಿಂದ ನಾವು ತಿಳಿಯಬೇಕಾದದ್ದು ಏನೆಂದರೆ -ನಾವು ಪರಧರ್ಮ ಮಾಡುವುದಕ್ಕಿಂತ-ದೋಷವಿದ್ದರೂ ಸರಿ,  ನಮ್ಮ ಸಹಜ ಕರ್ಮ ಮಾಡುವುದೇ ಅತ್ಯಂತ ಶ್ರೇಷ್ಠ ಧರ್ಮ  

ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ ।
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ                ॥೪೮॥

ಸಹಜಂ ಕರ್ಮ ಕೌಂತೇಯ ಸದೋಷಮ್ ಅಪಿ ನ ತ್ಯಜೇತ್ ।
ಸರ್ವಾರಂಭಾಃ  ಹಿ ದೋಷೇಣ ಧೂಮೇನ ಅಗ್ನಿಃ ಇವ ಆವೃತಾಃ –- ಕೌಂತೇಯ, ಸಹಜವಾದ ಕರ್ಮವನ್ನು ದೋಷವಿದ್ದರೂ ಬಿಡಬಾರದು. ಎಲ್ಲ ಕರ್ಮಗಳಲ್ಲು ದೋಷವಿದ್ದೇ ಇದೆ. ಬೆಂಕಿಯಿದ್ದಲ್ಲಿ ಹೊಗೆ ಇರುವಂತೆ.    

ನಾವು ನಮ್ಮ ಸ್ವಭಾವಕ್ಕೆ ಮತ್ತು ಪರಿಸ್ಥಿತಿಗೆ ಸಹಜವಾದ ಕರ್ಮದಲ್ಲಿ ಎಷ್ಟೇ ದೋಷವಿದ್ದರೂ  ಸಹ ಆ ಕರ್ಮವನ್ನು ಬಿಡಬಾರದು. ಇಲ್ಲಿ ಪಾಂಡವರ ಸಹಜ ಧರ್ಮ ಅನ್ಯಾಯದ ವಿರುದ್ಧ ಹೋರಾಡುವುದು. ಹೀಗೆ ಹೋರಾಡುವಾಗ ಸಾವು ನೋವು ಉಂಟಾಗಬಹುದು. ಆದರೆ ಅದು ಪಾಪವಲ್ಲ. ಈ ಪ್ರಪಂಚದಲ್ಲಿ ದೋಷವಿಲ್ಲದ ಒಂದು ಕರ್ಮವಿಲ್ಲ. ಬೆಂಕಿ ಇದ್ದಲ್ಲಿ ಹೊಗೆ ಇದ್ದೇ ಇರುತ್ತದೆ. ಕರ್ಮದಲ್ಲಿ ಹಿಂಸೆ ಇರಬಹುದು, ಆದರೆ ಅದು ಸಹಜ ಧರ್ಮವಾದಾಗ ಅದನ್ನು ಕೈಬಿಡಲಾಗದು. ಸಹಜ ಧರ್ಮದಲ್ಲಿ ಹಿಂಸೆ ಅನಿವಾರ್ಯವಾದಾಗ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನಮ್ಮ ಪಾಲಿಗೆ ಒದಗಿ ಬರುವ ಕರ್ಮವನ್ನು ಭಗವದರ್ಪಣಾ ಬುದ್ಧಿಯಿಂದ ನಿಷ್ಕಾಮನಾಗಿ ಮಾಡುವುದು ಧರ್ಮ. ಇದರಿಂದ ಪಾಪ ಅಂಟದು.

ಕೇವಲ ಸ್ವಭಾವದಂತೆ ನಡೆದುಕೊಂಡಮಾತ್ರಕ್ಕೆ ಮುಕ್ತಿ ಸಿಗುವುದಿಲ್ಲ. ಅದರ ಹಿಂದೆ ಕೆಲವು ಸಾಧನೆಗಳು ಬೇಕಾಗುತ್ತದೆ. ಕೆಲವು ಅನುಸಂಧಾನಗಳು ಬೇಕಾಗುತ್ತವೆ. ಅದರ ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ. 

No comments:

Post a Comment