Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, January 2, 2012

Bhagavad Gita Kannada Chapter-18 Shloka 40-44


ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ ತ್ರಿಭಿರ್ಗುಣೈಃ              ॥೪೦॥

ನ ತತ್ ಅಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈಃ ಮುಕ್ತಂ ಯತ್ ಏಭಿಃ ಸ್ಯಾತ್ ತ್ರಿಭಿಃ ಗುಣೈಃ  ಭೂಮಿಯಲ್ಲಾಗಲಿ, ಸ್ವರ್ಗದಲ್ಲಿನ ದೇವತೆಗಳಲ್ಲಾಗಲಿ, ಪ್ರಕೃತಿಯಿಂದುಟಾದ ಈ ಮೂರು ಗುಣಗಳಿಂದ ಬಿಡುಗಡೆಗೊಂಡ ಜೀವಜಾತವೆಂಬುದಿಲ್ಲ.

ತ್ರೈಗುಣ್ಯದ ಬಗ್ಗೆ ವಿವರವಾದ ಚಿತ್ರಣವನ್ನು ಕೊಟ್ಟ ನಂತರ ಕೃಷ್ಣ ಜೀವ ಸ್ವಭಾವದ ವಿವರಣೆಯನ್ನು ಕೊಡುತ್ತಾನೆ. ಈ ಭೂಮಿಯಲ್ಲಾಗಲಿ, ಅಥವಾ ಸತ್ಯಲೋಕದ ತನಕ ಯಾವುದೇ ದೇವತಾ ಲೋಕವಿರಲಿ, ಸಮಸ್ತ ಜೀವಜಾತಗಳು  ಈ ಪ್ರಕೃತಿಯಿಂದ ನಿರ್ಮಿತವಾದ  ತ್ರಿಗುಣಗಳ ಅಧೀನ. ಪ್ರತಿಯೊಂದು ಜೀವವೂ ಕೂಡ ಈ ಮೂರು ಸ್ವಭಾವಕ್ಕೆ ಒಳಪಟ್ಟಿದೆ ಮತ್ತು ಪ್ರತಿಯೊಂದು ಜೀವ ಈ ಮೂರು ಗುಣಗಳ ಕಲಬೆರಕೆ. ನೂರಕ್ಕೆ ನೂರು ಸಾತ್ವಿಕ/ರಾಜಸ/ತಾಮಸ ಯಾರೂ ಇಲ್ಲ. ಇಡೀ ಜಗತ್ತು ಮೂರರ ಮಿಶ್ರಣ.
ಜೀವ ಸ್ವಭಾವವನ್ನು ನೇರವಾಗಿ ಸಾತ್ವಿಕ-ರಾಜಸ-ತಾಮಸ ಎಂದು ಮೂರು ವಿಭಾಗ ಮಾಡಲು ಬರುವುದಿಲ್ಲ. ಇದಕ್ಕಾಗಿ ಇದನ್ನು ಚಾತುರ್ವರ್ಣ್ಯವಾಗಿ ಕೃಷ್ಣ ವಿಗಡಿಸಿ ಹೇಳಿದ. ಹಿಂದೆ ವಿವರಿಸಿದಂತೆ ಚಾತುರ್ವರ್ಣ್ಯ ‘ಜಾತಿವಿಭಾಗ’ ಅಲ್ಲ. ಇದು ವರ್ಣ ವಿಭಾಗ. ಭಗವದ್ಗೀತೆಯಾಗಲಿ , ವೇದವಾಗಲಿ ಜಾತಿ ವಿಭಾಗವನ್ನು ಒತ್ತುಕೊಟ್ಟು ಹೇಳುವುದಿಲ್ಲ. ಜಾತಿವಿಭಾಗ ಕೆಲವು ಧರ್ಮ ಶಾಸ್ತ್ರಗಳಲ್ಲಿ ಬಂದಿದೆ ಹೊರತು ವೇದ ಮತ್ತು ಭಗವದ್ಗೀತೆಯಲ್ಲಿ ಬಂದಿಲ್ಲ.  ಜಾತಿ ಅನ್ನುವುದು ಸಮಾಜ ವ್ಯವಸ್ಥೆಗಾಗಿ ಮಾಡಿಕೊಂಡ ವಿಭಾಗ. ಆದರೆ ವರ್ಣ ಮನಃಶಾಸ್ತ್ರೀಯವಾಗಿ ಜೀವಸ್ವಭಾವವನ್ನು ಅರಿತು ಹೇಳುವಂತಾದ್ದು.

ಸ್ಥೂಲವಾಗಿ ಹೇಳಬೇಕೆಂದರೆ ದೇವತೆಗಳು-ಸಾತ್ವಿಕರು, ಮಾನವರು-ರಾಜಸರು ಮತ್ತು ದೈತ್ಯರು-ತಾಮಸರು. ಆದರೆ ಈ ವಿಭಾಗ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಈ ಪ್ರತಿಯೊಂದು ವರ್ಗದಲ್ಲಿ ಮತ್ತೆ ಮೂರು ವಿಭಾಗವಿದೆ. ಉದಾಹರಣೆಗೆ ತಾಮಸ-ಸಾತ್ವಿಕರು. ಮನುಷ್ಯರಲ್ಲಿ ನರಾಧಮರು ತಾಮಸ-ಸಾತ್ವಿಕರು. ದೈತ್ಯ ಪರಿವಾರದವರು ತಾಮಸ-ರಾಜಸರು; ಅವರನ್ನು ನಿಯಂತ್ರಿಸುವ ಕಾಲನೇಮಿಯಂತಹ ದೈತ್ಯರು ತಾಮಸ-ತಾಮಸರು.
ಮಾನವರಲ್ಲಿ ರಾಜಸ-ತಾಮಸರು ನರಾಧಮರು. ರಾಜಸ-ರಾಜಸರು ಎಂದರೆ ನಿತ್ಯ ಸಂಸಾರಿಗಳು. ಅವರು ಎಂದೂ ತಮಸ್ಸಿಗಾಗಲಿ, ಮೋಕ್ಷಕ್ಕಾಗಲಿ ಹೋಗುವುದಿಲ್ಲ. ಸದಾ ಈ ಸಂಸಾರ ಚಕ್ರದಲ್ಲಿ ಸುತ್ತುತ್ತಿರುತ್ತಾರೆ. ಇನ್ನು ಮೂರನೆಯವರಾದ ರಾಜಸ-ಸಾತ್ವಿಕರು ಮೋಕ್ಷ ಯೋಗ್ಯರು. ಚಾತುರ್ವರ್ಣ್ಯ ಎನ್ನುವುದು ಈ ಮೂರನೆ  ಗುಂಪಿಗೆ ಮಾತ್ರ ಸೀಮಿತವಾದದ್ದು. ಆದ್ದರಿಂದ ಮೋಕ್ಷ ಯೋಗ್ಯರಾದ ರಾಜಸ-ಸಾತ್ವಿಕರಲ್ಲಿ ನಾಲ್ಕು ವಿಧ. ಮೋಕ್ಷಯೋಗ್ಯ-ಬ್ರಾಹ್ಮಣ, ಮೋಕ್ಷಯೋಗ್ಯ- ಕ್ಷತ್ರಿಯ, ಮೋಕ್ಷಯೋಗ್ಯ-ವೈಶ್ಯ, ಮತ್ತು ಮೋಕ್ಷಯೋಗ್ಯ-ಶೂದ್ರ. ಇದು ಜೀವ ಸ್ವಭಾವದ ಮೇಲೆ ಇರುವ ನಾಲ್ಕು ವಿಭಾಗ. ಇಲ್ಲಿ ಮೇಲು-ಕೀಳು ಎನ್ನುವ ಭೇದವಿಲ್ಲ. ಎಲ್ಲರೂ ಮೋಕ್ಷ ಯೋಗ್ಯರು. ಸತ್ವ ರಜಸ್ಸು ಮತ್ತು ತಮಸ್ಸಿನ ಅನುಪಾತದಂತೆ ಮತ್ತೆ ಅನೇಕ ವಿಧವನ್ನು ಚಾತುರ್ವರ್ಣ್ಯದೊಳಗೆ ಕಾಣಬಹುದು.
(೧)ಪರಮಹಂಸರು(೯೦-ಅಂಶ ಸಾತ್ವಿಕ):ಇವರು ತಮ್ಮನ್ನು ತಾವು ಪೂರ್ಣವಾಗಿ ಭಗವಂತನಲ್ಲಿ ನೆಲೆಗೊಳಿಸಿಕೊಂಡವರು. ಇವರಲ್ಲಿ ರಾಜಸ ಮತ್ತು ತಾಮಸದ ಅಂಶ ಕೇವಲ ೧೦.  
(೨)ಹಂಸರು(೮೫-ಅಂಶ ಸಾತ್ವಿಕ): ಹಂಸರು ಪರಮಹಂಸರ ನಂತರದವರು. ಇವರಲ್ಲಿ ರಾಜಸ ಮತ್ತು ತಾಮಸದ ಪ್ರಮಾಣ ೧೫-ಅಂಶ.
(೩)ಬಹೂದಕರು(೮೦-ಅಂಶ ಸಾತ್ವಿಕ): ಇವರಿಗೆ ಒಂದು ಸ್ಥಿರವಾದ ನೆಲೆ ಇಲ್ಲ. ದಿನಕ್ಕೊಂದು ಕಡೆ ಇವರ ವಾಸ. ಇವರಲ್ಲಿ ಸಾತ್ವಿಕ ಅಂಶ ೮೦ ಮತ್ತು ರಾಜಸ-ತಾಮಸ ಅಂಶ-೨೦
(೪)ಕುಟೀಚಕರು(೭೫-ಅಂಶ ಸಾತ್ವಿಕ): ಇವರು ಬಹೂದಕರಂತೆ. ಆದರೆ ಇವರು ಒಂದು ಕಡೆ ಒಂದು ಮನೆಯಲ್ಲಿ ವಾಸಿಸುವವರು. ಇವರಲ್ಲಿ ರಾಜಸ ಮತ್ತು ತಾಮಸದ ಅಂಶ-೨೫.
(೫)ವಾನಪ್ರಸ್ಥರು(೭೦-ಅಂಶ ಸಾತ್ವಿಕ):ಮನೆಯಲ್ಲಿ ಗೃಹಸ್ಥರಾಗಿದ್ದು, ನಂತರ ತಮ್ಮ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ಕಾಡಿಗೆ ಹೋಗಿ ಸಾಧನೆ ಮಾಡುವವರು. ಇವರಲ್ಲಿ ೩೦ ಅಂಶ ರಾಜಸ-ತಾಮಸವಿದ್ದರೆ ಉಳಿದ ೭೦-ಅಂಶ ಸಾತ್ವಿಕ. ಇವರಿಗೆ ಅಗ್ನಿ ಕರ್ಮವಿದೆ, ಸ್ತ್ರೀ-ಸಂಗವಿಲ್ಲ.  
(೬)ಬ್ರಹ್ಮಚಾರಿಗಳು(೬೫-ಅಂಶ ಸಾತ್ವಿಕ): ಇವರಲ್ಲಿ ಶೇಕಡಾ ೩೫ ಅಂಶ ರಾಜಸ ಮತ್ತು ತಾಮಸ. ಇವರಿಗೆ ಸ್ತ್ರೀ-ಸಂಗ ನಿಷಿದ್ಧ. 
(೭)ಗೃಹಸ್ಥರು: ಇವರಲ್ಲಿ ಸಾತ್ವಿಕ ಅಂಶ ೬೦, ಉಳಿದ ೪೦- ರಾಜಸ ಮತ್ತು-ತಾಮಸ ಅಂಶ. ಇವರು ಸಾಂಸಾರಿಕ ಜೀವನ ನೆಡೆಸಬಹುದು.
ಈ ಮೇಲಿನ ೭ ವಿಧ ಬ್ರಾಹ್ಮಣ ವರ್ಗಕ್ಕೆ ಸಂಬಂಧಪಟ್ಟಿದ್ದು. ಒಟ್ಟಿನಲ್ಲಿ ಹೇಳಬೇಕೆಂದರೆ ಕನಿಷ್ಠ ೬೦-ಪ್ರಮಾಣ ಸಾತ್ವಿಕ-ಅಂಶ ಇರುವ ಮೋಕ್ಷಯೋಗ್ಯ ಮಾನವ ಬ್ರಾಹ್ಮಣ ಎನಿಸುತ್ತಾನೆ. 
(೮)ಕ್ಷತ್ರಿಯರು(೫೫:೩೫:೧೦): ಇವರಲ್ಲಿ ಸಾತ್ವಿಕ ಅಂಶ-೫೫ ಮತ್ತು ರಾಜಸ ಅಂಶ ೩೫. ಇವರಿಗೆ ಆಡಳಿತದಲ್ಲಿ ಆಸಕ್ತಿ. ತಮ್ಮ ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಇವರ ಕರ್ತವ್ಯ.    
(೯)ವೈಶ್ಯರು (೪೦:೪೦:೨೦): ಇವರಲ್ಲಿ ಸಾತ್ವಿಕ ಮತ್ತು ರಾಜಸ ಅಂಶ ಸಮನಾಗಿದೆ(೪೦). ಇವರಿಗೆ ಕೃಷಿ, ಹೈನುಗಾರಿಕೆ, ವ್ಯಾಪಾರದಲ್ಲಿ ಆಸಕ್ತಿ.
(೧೦)ಶೂದ್ರರು(೩೫:೩೫:೩೦): ಇವರು ಇಡೀ ಸಮಾಜದ ಅಡಿಪಾಯ. ಇವರು ಸೇವಾ ಮನೋವೃತ್ತಿ ಇರುವವರು.
ಹೀಗೆ ಸ್ವರೂಪ ಸ್ವಭಾವದಂತೆ ವರ್ಣ ವಿಂಗಡಣೆ. ಇಲ್ಲಿ ಹೇಳಿದ ಎಲ್ಲ ಪ್ರಮುಖ ೪ ವರ್ಣದವರು ಮೋಕ್ಷ ಯೋಗ್ಯರು. ಇವರಲ್ಲಿ ಮೇಲು ಕೀಳು ಎನ್ನುವುದಿಲ್ಲ. ಇದು ಕೇವಲ ಭಾರತಕ್ಕೆ ಮೀಸಲಾದ ವಿಂಗಡಣೆ ಅಲ್ಲ. ಈ ರೀತಿಯ ಸ್ವಭಾವ ವಿಂಗಡಣೆ ಪ್ರಪಂಚದ ಎಲ್ಲ ಮೂಲೆಗೂ ಅನ್ವಯ. ಭಾರತದ ತತ್ವಶಾಸ್ತ್ರ ಇದನ್ನು ಗುರುತಿಸಿ ನಮಗೆ ನೀಡಿದೆ ಅಷ್ಟೆ. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡುವುದಾದರೆ: ಒಂದು ಮನೆಯಲ್ಲಿ ನಾಲ್ಕು ಜನ ಅಣ್ಣ-ತಮ್ಮಂದಿರರಿದ್ದಾರೆ. ಅವರಲ್ಲಿ ಹಿರಿಯ ಮಗ  ಎಲ್ಲ ಮನೆಮಂದಿಗೆ ಪಾಠ-ಪ್ರವಚನ ಮಾಡಿಕೊಂಡು, ವೇದಾಧ್ಯಯನ ಮಾಡಿಕೊಂಡಿದ್ದರೆ-ಆತ ಬ್ರಾಹ್ಮಣ ವರ್ಣ. ಎರಡನೆಯವ ಮನೆಯ ಯಜಮಾನಿಕೆ ನೋಡಿಕೊಂಡರೆ ಆತ-ಕ್ಷತ್ರಿಯ. ಮೂರನೆಯವ ತೋಟ, ಬೇಸಾಯ ಇತ್ಯಾದಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೆ ಆತ-ವೈಶ್ಯ. ನಾಲ್ಕನೆಯವ ತನ್ನ ಅಣ್ಣಂದಿರರಿಗೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಆತ-ಶೂದ್ರ. ಇದು ಮನಃಶಾಸ್ತ್ರೀಯವಾದ ವರ್ಣ ಪದ್ಧತಿ. ಬ್ರಹ್ಮ-ಅಣತಿ ಬ್ರಾಹ್ಮಣಃ. ದೊಡ್ದದ್ದನ್ನು ತಿಳಿಯುವವನು, ಜ್ಞಾನ ಸಾಧಕ-ಬ್ರಾಹ್ಮಣ. ಕ್ಷತ್ರ-ತ್ರಾಣಃ –ಕ್ಷತ್ರಿಯಃ. ಯಾರಿಗಾದರೂ ಅಪಾಯವಾದಾಗ ರಕ್ಷಣೆಗೆ ಮುನ್ನುಗ್ಗುವವ ಕ್ಷತ್ರಿಯ. ವಿಶ್ ಎಂದರೆ ಸಮಾಜ. ಸಮಾಜಕ್ಕೆ ಬೇಕಾದ ಆಹಾರ ಸಲಕರಣೆ ಪೂರೈಸುವವ ವೈಶ್ಯ. ನಾನಾ ಜನಸ್ಯ ಶುಶ್ರೂಷಃ-ಶೂದ್ರಃ. ಮನುಷ್ಯನ ಮೂಲಭೂತ ಧರ್ಮವಾದ ‘ಸೇವೆ’ಯಲ್ಲಿ ನಿರತನಾದವನು ಶೂದ್ರ. ಕೃಷ್ಣ ಈ ಕುರಿತು ಕೊಡುವ ಅಪೂರ್ವ ವಿಶ್ಲೇಷಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.            
  
ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ ।
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ                        ॥೪೧॥

ಬ್ರಾಹ್ಮಣ ಕ್ಷತ್ರಿಯ ವಿಶಾಮ್  ಶೂದ್ರಾಣಾಮ್  ಚ ಪರಂತಪ ।
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವ ಪ್ರಭವೈಃ ಗುಣೈಃ --  ಓ ಅರಿಗಳ ಉರಿಯೆ, ಸ್ವಭಾವದಿಂದುಂಟಾದ ಗುಣಗಳಿಗೆ ಅನುಗುಣವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳೂ ಬೇರೆಬೇರೆಯಾಗಿವೆ.

ಜೀವಸ್ವಭಾವಕ್ಕನುಗುಣವಾಗಿ ಮೋಕ್ಷಯೋಗ್ಯವಾದ ಮಾನವನಲ್ಲಿ ನಾಲ್ಕು ವಿಧದ ವರ್ಣಗಳಿವೆ. ಸ್ವಭಾವಕ್ಕನುಗುಣವಾಗಿ ಪ್ರತಿಯೊಬ್ಬನ ನಡೆ-ನುಡಿ, ಆಚಾರ-ವಿಚಾರ.  ಸ್ವಭಾವ ಭೇದದಿಂದಾಗಿ ಗುಣ-ಕರ್ಮ ಭೇದ. ಇದು ಪೂರ್ಣವಾಗಿ ಜೀವ ಸ್ವಭಾವಕ್ಕೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಇದಕ್ಕೂ ಜಾತಿಗೂ ಯಾವ ಸಂಬಂಧವೂ ಇಲ್ಲ. ಜಾತಿ ದೇಹಕ್ಕೆ ಸಂಬಂಧಪಟ್ಟಿದ್ದು, ವರ್ಣ ಜೀವಸ್ವರೂಪಕ್ಕೆ ಸಂಬಂಧಪಟ್ಟಿದ್ದು. [ಚಾತುರ್ವರ್ಣ್ಯದ ಬಗ್ಗೆ ಹೆಚ್ಚಿನ ವಿವರಣೆಯನ್ನು ಅಧ್ಯಾಯ ೦೪-ಶ್ಲೋಕ-೧೩ ರಲ್ಲಿ ವಿವರಿಸಲಾಗಿದೆ]. ಈ ನಾಲ್ಕು ವರ್ಣದವರ ಸಹಜ ಕರ್ಮದ ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ.

ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ ।
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್               ॥೪೨॥

ಶಮಃ ದಮಃ ತಪಃ ಶೌಚಂ ಕ್ಷಾಂತಿ ಆರ್ಜವಮ್ ಏವ ಚ ।
ಜ್ಞಾನಂ ವಿಜ್ಞಾನಮ್ ಆಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ – ಭಗವತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು, ನೈರ್ಮಲ್ಯ, ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ-ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ  ಮತ್ತು ಆಸ್ತಿಕತೆ- ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು.

ಜೀವ ಸ್ವಭಾವ ‘ಬ್ರಾಹ್ಮಣ’ ವಾಗಿದ್ದರೆ ಅವರ ಸಹಜ ಕರ್ಮಗಳು ಹೇಗಿರುತ್ತವೆ ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸಿದ್ದಾನೆ. ಈ ವರ್ಣದ ಸ್ವಭಾವಗಳು ಹೀಗಿವೆ:
(೧)ಶಮಃ : ಮನಸ್ಸು ಭಗವಂತನಲ್ಲಿ ನೆಲೆಗೊಂಡಿರುವುದು.
(೨)ದಮಃ : ಇಂದ್ರಿಯಗಳ ಹತೋಟಿ.
(೩)ತಪಃ : ಮಾನಸಿಕವಾಗಿ ವಿಷಯವನ್ನು ಆಳವಾಗಿ ಚಿಂತನೆ ಮಾಡುವುದು, ಮನಸ್ಸು ಒಳ್ಳೆಯದನ್ನು ಯೋಚಿಸುವುದಕ್ಕೆ ಪೂರಕವಾಗಿ ವೃತಾನುಷ್ಠಾನ, ನಿರಂತರ ಶಾಸ್ತ್ರ ಚಿಂತನೆ.
(೪)ಶೌಚಮ್ : ಮನಸ್ಸಿನ ಶುದ್ಧತೆ ಮತ್ತು ಅದಕ್ಕೆ ಪೂರಕವಾಗಿ ಬಾಹ್ಯ ಶುದ್ಧಿ.
(೫)ಕ್ಷಾಂತಿ : ತಪ್ಪು ಮಾಡಿದವರನ್ನೂ ಕ್ಷಮಿಸುವ, ಕೋಪಿಸಿಕೊಳ್ಳದ ಮನಸ್ಸು.
(೬)ಆರ್ಜವ : ಸ್ವಚ್ಛ ನಿರಾಳ ಮನಸ್ಸು, ನೇರ ನಡೆ-ನುಡಿ.
(೭)ಜ್ಞಾನ : ಭಗವದ್ ವಿಷಯಕವಾದ ಜ್ಞಾನ.
(೮)ವಿಜ್ಞಾನ : ಭಗವಂತನ ಬಗ್ಗೆ ಆಳವಾದ ಅರಿವು, ಭಗವಂತನ ಗುಣಗಳ ವಿಶಿಷ್ಠ ಜ್ಞಾನ.
(೯)ಆಸ್ತಿಕ್ಯ : ಪೂರ್ಣವಾಗಿ ಭಗವಂತನ ಅಸ್ತಿತ್ವದಲ್ಲಿ ಭರವಸೆ ಪಡೆದು ಮುಂದೆ ಸಾಗುವುದು.
ಈ ಎಲ್ಲ ಗುಣಗಳು ಎಲ್ಲ ವರ್ಣದವರಲ್ಲೂ ಇರಬೇಕು. ಆದರೆ  ಹೆಚ್ಚಿನ ಪ್ರಮಾಣದಲ್ಲಿರುವುದು ಬ್ರಾಹ್ಮಣ ವರ್ಣದವರಲ್ಲಿ. ಇವುಗಳಲ್ಲಿ ಒಂದು ಗುಣದ ಪ್ರಮಾಣ ಕಡಿಮೆ ಇದ್ದರೂ ಆತ ಬ್ರಾಹ್ಮಣನೆನಿಸುವುದಿಲ್ಲ. ಒಂದು ವೇಳೆ ಕ್ಷತ್ರಿಯರಲ್ಲಿ ಈ ಗುಣಗಳ ಪ್ರಮಾಣ ಬ್ರಾಹ್ಮಣರಿಗಿಂತ ಹೆಚ್ಚಾಗಿ ಕಂಡುಬಂದರೆ ಆತ ರಾಜರ್ಷಿ ಎನಿಸುತ್ತಾನೆ. (ಉದಾಹರಣೆಗೆ ಜನಕ ಮಹಾರಾಜ)              

ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ ।
ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್                   ॥೪೩॥

ಶೌರ್ಯಂ ತೇಜಃ  ಧೃತಿಃ ದಾಕ್ಷ್ಯಮ್  ಯುದ್ಧೇ ಚ ಅಪಿ ಅಪಲಾಯನಮ್ ।
ದಾನಮ್ ಈಶ್ವರ ಭಾವಃ ಚ  ಕ್ಷಾತ್ರಮ್  ಕರ್ಮ ಸ್ವಭಾವಜಮ್ – ಕೆಚ್ಚು, ಕಸುವು, ಗಟ್ಟಿತನ, ಕೌಶಲ, ಕಾಳಗದಲ್ಲಿ ಬೆನ್ನು ತೋರಿಸದಿರುವುದು, ಕೊಡುಗೈತನ ಮತ್ತು ಒಡೆತನ ಇವು ಕ್ಷತ್ರಿಯ ಸ್ವಭಾವದ ಸಹಜ ಕರ್ಮಗಳು.

ಕ್ಷತ್ರಿಯನಾದವನ ಸಹಜ ಕರ್ಮಗಳನ್ನು ಇಲ್ಲಿ ಕೃಷ್ಣ ವಿವರಿಸಿದ್ದಾನೆ.
(೧) ಶೌರ್ಯಮ್ : ಎದುರಾಳಿಗಳನ್ನು ಬಗ್ಗುಬಡಿಯುವ ಶಕ್ತಿ.
(೨) ತೇಜಸ್ಸು : ಎದುರಾಳಿಗಳು ನೋಡಿದಾಕ್ಷಣ ತಲೆ ತಗ್ಗಿಸುವ ತೇಜಸ್ಸು.
(೩) ಧೃತಿ : ಪ್ರಾಣಾಪಾಯ ಬಂದಾಗಲೂ ಎದೆಗೆಡದೆ ಮುನ್ನುಗ್ಗುವ ಸಾಹಸ ಪ್ರವೃತ್ತಿ
(೪) ದಕ್ಷತೆ: ಶತ್ರುಗಳನ್ನು ಮಣಿಸುವ ತಂತ್ರಗಾರಿಕೆ-ಚಾತುರ್ಯ.
(೫) ಯುದ್ಧೇ ಚ ಅಪಿ ಅಪಲಾಯನಮ್ : ಯುದ್ಧ ಭೂಮಿಯಲ್ಲಿ ಬೆನ್ನು ಹಾಕದೆ, ಪಲಾಯನ ಮಾಡದೆ ಹೋರಾಡುವ ಧೀರತನ.
(೬) ದಾನಮ್: ದಾನ ಧರ್ಮ ಮಾಡುವುದು.
ಈ ಮೇಲಿನ ಆರು ಗುಣಗಳು ಕ್ಷತ್ರಿಯನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇತರ ವರ್ಣದವರಲ್ಲಿ ಇದು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದಲ್ಲದೆ ಕ್ಷತ್ರಿಯರಿಗೇ ಮೀಸಲಾದ ಒಂದು ವಿಶೇಷ ಗುಣ  (೭) ಈಶ್ವರ ಭಾವಃ : ಅಪರಾಧಿಗೆ ಸೂಕ್ತ ಶಿಕ್ಷೆ ಕೊಡುವ ಅಧಿಕಾರ. ಬೇರೆ ವರ್ಣದವರಿಗೆ ಈ ಅಧಿಕಾರವಿಲ್ಲ. 
    
ಕೃಷಿಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ।
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್               ॥೪೪॥

ಕೃಷಿ ಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ।
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ – ಬೇಸಾಯ, ಆಕಳು ಸಾಕಣೆ ಮತ್ತು ವ್ಯಾಪಾರ ವೈಶ್ಯರ ಸ್ವಭಾವಸಹಜವಾದ ಕರ್ಮ. ಸೇವಾರೂಪವಾದ ಕಾಯಕ ಶೂದ್ರ ಸ್ವಭಾವಕ್ಕೆ ಸಹಜವಾದದ್ದು.

ವೈಶ್ಯರ ಸ್ವಭಾವಸಹಜ ಕಾಯಕ ಕೃಷಿ, ಗೋರಕ್ಷಣೆ(ಹೈನುಗಾರಿಕೆ) ಮತ್ತು ವಾಣಿಜ್ಯ. ಭೀಷ್ಮಾಚಾರ್ಯರು ಧರ್ಮರಾಯನಿಗೆ ರಾಜಧರ್ಮ ಉಪದೇಶ ಮಾಡುತ್ತಾ “ಯಾವ ದೇಶದಲ್ಲಿ ಕೃಷಿಕರು ಮತ್ತು ವಾಣಿಜ್ಯೋದ್ಯಮಿಗಳು ಕರಭಾರ ತಡೆಯಲಾಗದೆ ಬೇರೆ ದೇಶಕ್ಕೆ ಹೊರಟು ಹೋಗುತ್ತಾರೆ- ಆ ದೇಶ ಉದ್ಧಾರವಾಗದು" ಎಂದಿದ್ದಾರೆ. ಕೃಷಿ, ವಾಣಿಜ್ಯ ಮತ್ತು ಹೈನುಗಾರಿಕೆ ದೇಶದ ಬೆನ್ನೆಲುಬು.  ಈ ಕಾಯಕ ವೈಶ್ಯರ ಸ್ವಭಾವಸಹಜವಾದ ಕರ್ಮ.
ಶೂದ್ರರಲ್ಲಿ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ ಮಹತ್ವವಾಗಿರುತ್ತದೆ. ಈ ಗುಣ ಇಲ್ಲದವ ಮನುಷ್ಯನೇ ಅಲ್ಲ. ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ(Majority) ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆ ಇಲ್ಲ. ಯಾವಾಗಲೂ ನಾವು ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಉದಾಹರಣೆಗೆ: ಬ್ರಾಹ್ಮಣನಾದವನು ಸಮಾಜ ಸೇವೆಯ ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ.

No comments:

Post a Comment