Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Saturday, December 17, 2011

BhagavadgeetA Kannada Chapter-16 Shloka 4-10


ಡಂಭೋ ದರ್ಪೋ ಅತಿಮಾನಶ್ಚ ಕ್ರೋಧಃ ಪಾರುಷ್ಯಮೇವ ಚ            ।
ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್             ॥೪॥

ಡಂಭಃ ದರ್ಪಃ ಅಭಿಮಾನಃ ಚ ಕ್ರೋಧಃ ಪಾರುಷ್ಯಮ್ ಏವ ಚ            ।
ಅಜ್ಞಾನಮ್ ಚ ಅಭಿಜಾತಸ್ಯ ಪಾರ್ಥ ಸಂಪದಮ್ ಆಸುರೀಮ್—ಪಾರ್ಥ, ಆಸುರೀ ಸಂಪತ್ತು [ಕೆಟ್ಟ ನಡತೆ] ಹೊತ್ತು ಬಂದವನ ಗುಣಗಳು ಇವು: ಬೂಟಾಟಿಕೆ, ಸೊಕ್ಕು, ಬಿಂಕ, ಸಿಡುಕು, ಒರಟುತನ ಮತ್ತು ತಿಳಿಗೇಡಿತನ.

ಮೇಲೆ ಹೇಳಿದ ಇಪ್ಪಾತ್ತಾರು ದೈವೀಗುಣಕ್ಕೆ ವಿರುದ್ಧವಾಗಿ ಆರು ಆಸುರೀ ಗುಣಗಳನ್ನು ಕೃಷ್ಣ ಈ ಶ್ಲೋಕದಲ್ಲಿ ಹೇಳಿದ್ದಾನೆ:
(೧) ಡಂಭ(ಇಲ್ಲದ್ದನ್ನು ಇದೆ ಎಂದು ತೋರಿಸಿಕೊಳ್ಳುವುದು): ಒಳಗಡೆ ಏನಿಲ್ಲವೋ ಅದು ಇದೆ ಎನ್ನುವಂತೆ ಸುಭಗತನದ ಪ್ರದರ್ಶನ; ಒಳಗಿರುವ ಕೆಟ್ಟತನವನ್ನು ಮುಚ್ಚಿಟ್ಟು ತುಂಬ ಒಳ್ಳೆಯವರ ಹಾಗೆ ಪ್ರದರ್ಶನ ಮಾಡುವುದು, ಇತ್ಯಾದಿ ಡಂಭ ಎನಿಸುತ್ತದೆ. ಇದು ಮೇಲೆ ಹೇಳಿದ ಆರ್ಜವಂ ಎನ್ನುವ ಸದ್ಗುಣದ ವಿರುದ್ಧ ಗುಣ. 
(೨) ದರ್ಪ: ಏನು ತಪ್ಪು ಮಾಡಲೂ ಹೇಸದ ಮನೋವೃತ್ತಿ. ಇದು ಹ್ರೀ ಎನ್ನುವ ಸದ್ಗುಣದ ವಿರುದ್ಧ ಗುಣ.
(೩) ಅತಿಮಾನ(Over Estimation of Self): ತನ್ನ ಬಗ್ಗೆ ಅತಿರೇಕದ ಕಲ್ಪನೆ; ನಾನೇ ದೊಡ್ಡ ಮನುಷ್ಯ ಎಂದು ಭ್ರಮಿಸಿಕೊಂಡು ಇನ್ನೊಬ್ಬರಿಗೆ ಅಗೌರವ ತೋರುವುದು; ಎಲ್ಲರೂ ತನ್ನ ಕಾಲನ್ನು ಹಿಡಿಯಬೇಕು ಎಂದು ಅಪೇಕ್ಷಿಸುವುದು-ಇವು ಅತಿಮಾನವೆನಿಸುತ್ತವೆ.
(೪) ಕ್ರೋಧ : ಮನುಷ್ಯ ಬಿಡಬೇಕು ಎಂದರೂ ಬಿಡಲಾಗದ ಕೆಟ್ಟಗುಣ ಕ್ರೋಧ. ಇದು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ದಾರಿತಪ್ಪಿಸುವ ದುರ್ಗುಣ.
(೫) ಪಾರುಷ್ಯ : ಉಗ್ರವಾದ, ಅಸಹ್ಯವಾದ ಮಾತು; ಇನ್ನೊಬ್ಬರನ್ನು ತಾತ್ಸಾರದಿಂದ ಮಾತನಾಡಿಸುವುದು, ಇತ್ಯಾದಿ ಪಾರುಷ್ಯಕ್ಕೆ ಉದಾಹರಣೆ.
(೬) ಅಜ್ಞಾನ :  ಮೇಲಿನ  ಎಲ್ಲಾ ದುರ್ಗುಣಗಳ  ಚಕ್ರವರ್ತಿ ಈ ಅಜ್ಞಾನ. ನಿಜವಾದ ಜ್ಞಾನಿ ಎಂದೂ ಈ ಕೆಟ್ಟ ಗುಣಗಳ ದಾಸನಾಗುವುದಿಲ್ಲ.
ಈ ಎಲ್ಲಾ ಆಸುರೀ ಗುಣಗಳು ನಮ್ಮಲ್ಲಿ ಮನೆ ಮಾಡಿ ನಮ್ಮನ್ನೇ ಹೊರ ಹಾಕುತ್ತವೆ. ಆದ್ದರಿಂದ ಈ ದುರ್ಗುಣಗಳನ್ನು ನಾವು ಮೊದಲು ಹೊರ ಹಾಕಬೇಕು. ಕುರಾನಿನಲ್ಲಿ ಇದನ್ನು- “Drive them out from where you have been driven out” ಎಂದು ಸುಂದರವಾಗಿ ಹೇಳಿದ್ದಾರೆ. ನಿನ್ನನ್ನು ಹೊರಹಾಕಿ, ನಿನ್ನೊಳಗೆ ಕೂತು ನಿನ್ನನ್ನು ಹಾಳು ಮಾಡುತ್ತಿರುವ ಈ ದುರ್ಗುಣಗಳನ್ನು  ಮೊದಲು ಹೊರಹಾಕು ಎನ್ನುತ್ತಾರೆ. ಇದನ್ನೇ ವೇದದಲ್ಲಿ ಹೀಗೆ ಹೇಳಿದ್ದಾರೆ: “ಯೊ ಅಸ್ಮಾನ್  ದ್ವೇಷ್ಟಿ ಯಾಮ್ ವಯಮ್  ದ್ವಿಷ್ಟಿಃ” ..||ಅಥರ್ವ ೩-೨೭-೨||- ಅಂದರೆ-“ಯಾರು ನಮ್ಮನ್ನು ದ್ವೇಶಿಸುತ್ತಾರೋ, ಯಾರನ್ನು ನಾವು ದ್ವೇಷ ಮಾಡುತ್ತೇವೋ ಅಂತಹ ಶತ್ರುವನ್ನು ಓದ್ದೊಡಿಸು” ಎಂದರ್ಥ. ಇಲ್ಲಿ ಶತ್ರು ಎಂದರೆ ನಮ್ಮ ಅಂತಃಶತ್ರುಗಳಾದ ಈ ದುರ್ಗುಣಗಳು.
ಈ ಶ್ಲೋಕದಲ್ಲಿ ‘ಪಾರ್ಥ’ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ‘ನಾವು ಈ ದುರ್ಗುಣಗಳಿಂದ ದೂರ ಸರಿದು, ಜ್ಞಾನ ಮಾರ್ಗದಲ್ಲಿ ಸಾಗಿ, ಯಥಾರ್ಥ ಬದುಕನ್ನು ಬದುಕುವ ಪಾರ್ಥರಾಗಬೇಕು’ ಎನ್ನುವ ಸಂದೇಶ ಈ  ವಿಶೇಷಣದ ಹಿಂದಿದೆ.

ದೈವೀ ಸಂಪದ್ ವಿಮೋಕ್ಷಾಯ ನಿಬಂಧಾಯಾSಸುರೀ ಮತಾ ।
ಮಾ ಶುಚಃ ಸಂಪದಂ ದೈವೀಮಭಿಜಾತೋSಸಿ ಪಾಂಡವ                 ॥೫॥

ದೈವೀ ಸಂಪತ್ ವಿಮೋಕ್ಷಾಯ ನಿಬಂಧಾಯ ಆಸುರೀ ಮತಾ ।
ಮಾ ಶುಚಃ ಸಂಪದಮ್ ದೈವೀಮ್ ಅಭಿಜಾತಃ ಅಸಿ ಪಾಂಡವ –ಒಳ್ಳೆಯ ನಡತೆ ಬಿಡುಗಡೆಯ ದಾರಿ. ಕೆಡುನಡೆ ತಮಸ್ಸಿನ ಸೆರೆಯ ದಾರಿ. ಪಾಂಡವ, ಕೊರಗಬೇಡ. ನೀನು ಒಳಿತಿನ ದಾರಿಯನ್ನು ಮೈಗೂಡಿಸಿಕೊಂಡವನು.

ಏಕೆ ದೈವೀ ಸಂಪತ್ತನ್ನು ನಾವು ಬೆಳಸಿಕೊಳ್ಳಬೇಕು ಎನ್ನುವುದನ್ನು ಕೃಷ್ಣ ವಿವರಿಸುತ್ತ ಹೇಳುತ್ತಾನೆ: “ದೈವೀ ಸಂಪತ್ತು ವಿಮೋಕ್ಷಕ್ಕೆ ಕಾರಣವಾಗುತ್ತದೆ, ಆಸುರೀ ಸ್ವಭಾವ ನಿಬಂಧಕ್ಕೆ ಕಾರಣವಾಗುತ್ತದೆ” ಎಂದು. ಇಲ್ಲಿ ಕೃಷ್ಣ ‘ವಿ-ಮೋಕ್ಷ’ ಮತ್ತು ‘ನಿ-ಬಂಧ’ ಎಂದು ವಿಶೇಷವಾಗಿ ಹೇಳಿದ್ದಾನೆ. ವಿ-ಮೋಕ್ಷ ಎಂದರೆ ಅವರವರ ಸಾಧನೆಗೆ ತಕ್ಕಂತೆ ವಿವಿಧ ಸ್ಥರದಲ್ಲಿ ವ್ಯಕ್ತಿತ್ವ ವಿಕಾಸ ಮತ್ತು ಮೋಕ್ಷ. ‘ನಿ-ಬಂಧ’ ಎಂದರೆ ಸಂಸಾರ ಬಂಧವಲ್ಲ. ಇದು ನೀಚ ಬಂಧ. ನಮ್ಮನ್ನು ಕತ್ತಲೆಯ ತಮಸ್ಸಿಗೆ ತಳ್ಳುವ ಬಂಧ.
ಕೃಷ್ಣ ಅರ್ಜುನನನ್ನು ಕುರಿತು ಹೇಳುತ್ತಾನೆ: “ನೀನು ದೈವೀ ಸಂಪತ್ತಿನ ಪೂರ್ಣಪ್ರಮಾಣದ ಆವಿಷ್ಕಾರ. ಅದಕ್ಕಾಗಿ ದೈವೀ ಸಂಪತ್ತಿನ ಮನೆಯನ್ನು ಹುಡುಕಿ ಹುಟ್ಟಿದ್ದೀಯ, ನಿನ್ನ ಸ್ವಭಾವ ಮತ್ತು ನೀನು ಹುಟ್ಟಿದ ಮನೆತನದ ಪ್ರಭಾವ ಒಂದಕ್ಕೊಂದು ಪೂರಕ, ಇದಕ್ಕಾಗಿ ಚಿಂತಿಸಬೇಡ” ಎಂದು.  

ದ್ವೌ ಭೂತಸರ್ಗೌ ಲೋಕೇSಸ್ಮಿನ್ ದೈವ ಆಸುರ ಏವ ಚ ।
ದೈವೋ ವಿಸ್ತರಶಃ ಪ್ರೋಕ್ತ ಆಸುರಂ ಪಾರ್ಥ ಮೇ ಶೃಣು                    ॥೬॥

ದ್ವೌ ಭೂತಸರ್ಗೌ ಲೋಕೇ ಅಸ್ಮಿನ್ ದೈವಃ  ಆಸುರಃ  ಏವ ಚ ।
ದೈವಃ ವಿಸ್ತರಶಃ ಪ್ರೋಕ್ತಃ ಆಸುರಮ್ ಪಾರ್ಥ ಮೇ ಶೃಣು –ಈ ವಿಶ್ವದಲ್ಲಿ ಎರಡು ಬಗೆಯ ಜೀವಸೃಷ್ಟಿಗಳಿವೆ: ದೈವ[ಒಳ್ನಡೆಯದು] ಮತ್ತು ಆಸುರ [ಕೆಡುನಡೆಯದು]. ಒಳ್ನಡೆಯ ಬಗೆಯನ್ನು ಬಿತ್ತರಿಸಿ ಹೇಳಿದ್ದಾಯಿತು, ಪಾರ್ಥ, ಕೆಡುನಡೆಯ ಬಿತ್ತರವನ್ನು ನನ್ನಿಂದ ಕೇಳು.

ಈ ವಿಶ್ವದಲ್ಲಿ ಮೂಲಭೂತವಾಗಿ ಎರಡು ಬಗೆಯ ಮಾನವರಿದ್ದಾರೆ: ಭಗವಂತನೆಡೆಗೆ ಮುಖ ಮಾಡಿ ಸಾಗುವ ದೈವೀ ನಡೆಯುಳ್ಳವರು ಮತ್ತು ಭಗವಂತನಿಗೆ ಬೆನ್ನು ಹಾಕಿ ಸಾಗುವ ಆಸುರೀ ನಡೆಯವರು. ಈ ಎರಡು ವಿಭಾಗದಲ್ಲಿ ಇಲ್ಲಿಯ ತನಕ ದೈವೀ ಸ್ವಭಾವದ ಬಗ್ಗೆ ವಿಸ್ತಾರವಾಗಿ ನೋಡಿದೆವು. ನಮ್ಮ ಆಂತರಿಕ ಮತ್ತು ಸಾಮಾಜಿಕ ನಡೆಯ ಬಗ್ಗೆ ವಿಸ್ತಾರವಾದ ಚಿತ್ರಣ ಕೊಟ್ಟ ಬಳಿಕ ಕೃಷ್ಣ, ಇಲ್ಲಿ ಆಸುರೀ ಸ್ವಭಾವದವರ ನಡೆ-ನುಡಿಗಳ ಬಗ್ಗೆ ವಿವರಿಸುತ್ತಾನೆ. ಈ ಮೂಲಕ ನಾವು ‘ಯಾವ ರೀತಿ ಇರಬಾರದು’ ಅನ್ನುವುದನ್ನು ಕೃಷ್ಣ ನಮಗೆ ತಿಳಿಸಿ ಹೇಳುತ್ತಾನೆ.

ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ ।
ನ ಶೌಚಂ ನಾಪಿಚಾSಚಾರೋ ನ ಸತ್ಯಂ ತೇಷು ವಿದ್ಯತೇ                 ॥೭॥

ಪ್ರವೃತ್ತಿಮ್ ಚ ನಿವೃತ್ತಿಮ್ ಚ ಜನಾಃ  ನ ವಿದುಃ ಆಸುರಾಃ ।
ನ ಶೌಚಮ್ ನ ಅಪಿ ಚ ಆಚಾರಃ ನ ಸತ್ಯಮ್ ತೇಷು ವಿದ್ಯತೇ –ಕೆಡುನಡೆಯ ಮಂದಿ ಯಾವ ದಾರಿ ಹಿಡಿಯಬೇಕು, ಯಾವುದನ್ನು ಬಿಡಬೇಕು ಎಂಬುದನ್ನರಿಯರು. ಮಡಿಯಿಲ್ಲ; ಒಳ್ಳೆಯ ನಡೆಯಿಲ್ಲ; ಅವರಲ್ಲಿ ದಿಟದ ನುಡಿಯಿಲ್ಲ.

ಆಸುರೀ ಸ್ವಭಾವದವರ ಸಾಮಾಜಿಕ  ನಡೆ-ನುಡಿಯುನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ಆಸುರೀ ಸ್ವಭಾವದವರಿಗೆ ಯಾವುದು ಮಾಡಬೇಕು, ಯಾವುದು ಮಾಡಬಾರದು ಎನ್ನುವ ಎಚ್ಚರವಿರುವುದಿಲ್ಲ. ಇದರಿಂದ ಅವರು ಮಾಡಬಾರದ್ದನ್ನೇ ಮಾಡುತ್ತಿರುತ್ತಾರೆ. ಇವರಿಗೆ ನ್ಯಾಯ ಅನ್ಯಾಯ ಯಾವುದೂ ಮುಖ್ಯವಲ್ಲ. ಹಣ ಸಂಪಾದನೆ ಮತ್ತು ಗಣ್ಯವ್ಯಕ್ತಿ ಸ್ಥಾನ ಗಳಿಸಬೇಕು ಎನ್ನುವುದು ಇವರ ಮೂಲಭೂತ ಬಯಕೆ. ಇದರಿಂದಾಗಿ ಹಣ ಸಂಪಾದನೆಯಲ್ಲಿ ನ್ಯಾಯದ ಮುಖವಿರಬೇಕು ಎನ್ನುವ ಎಚ್ಚರ ಇವರಿಗಿರುವುದಿಲ್ಲ.
ಮೂಲಭೂತವಾಗಿ ಆಸುರೀ ಸ್ವಭಾವದವರಲ್ಲಿ ನೈರ್ಮಲ್ಯವಿರುವುದಿಲ್ಲ. ಒಳ್ಳಯಮಾತು, ಒಳ್ಳೆಯ ಯೋಚನೆ, ಸ್ವಚ್ಛ ಶರೀರ ಇವರಲ್ಲಿರುವುದಿಲ್ಲ. ಇವರು ಬಾಹ್ಯವಾಗಿ ಬಹಳ ಶುದ್ಧರಂತೆ ನಾಟಕವಾಡಿಕೊಂಡು ಬದುಕುತ್ತಿರುತ್ತಾರೆ. ಇವರು ಎಂದೂ ಪ್ರಾಮಾಣಿಕರಾಗಿರುವುದಿಲ್ಲ. ಏನು ಮಾಡಿದರೂ ಅದು ತೋರಿಕೆಗಾಗಿ.
ನಮಗೆ ಕೃಷ್ಣ ಗೀತೆಯಲ್ಲಿ ಹೇಳುವ ಒಂದೊಂದು ಗುಣ ನಡತೆಗೆ ಉದಾಹರಣೆ ಮಹಾಭಾರತದಲ್ಲೇ ಸಿಗುತ್ತದೆ. ಅದಕ್ಕಾಗಿ ಗೀತೆಯನ್ನು ಮಹಾಭಾರತದ ಸಾರ ಎನ್ನುವುದು.  ಆಸುರೀ ಸ್ವಭಾವಕ್ಕೆ ಅತ್ಯುತ್ತಮ ಉದಾಹರಣೆ ‘ದುರ್ಯೋಧನ’.

ಈ ಆಸುರೀ ಸ್ವಭಾವದವರು ಹೇಗೆ ಸಮಾಜ ಕಂಟಕರಾಗುತ್ತಾರೆ, ಅವರ ತಿಳುವಳಿಕೆ ಏನು? ಎನ್ನುವುದನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ವಿಸ್ತಾರವಾಗಿ ವಿವರಿಸುತ್ತಾನೆ.

ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ ।
ಅಪರಸ್ಪರಸಂಭೂತಂ ಕಿಮನ್ಯತ್ ಕಾಮಹೈತುಕಮ್                    ॥೮॥

ಅಸತ್ಯಮ್ ಅಪ್ರತಿಷ್ಠಮ್  ತೇ ಜಗತ್ ಆಹುಃ ಅನೀಶ್ವರಮ್ ।
ಅಪರಸ್ಪರ ಸಂಭೂತಂ ಕಿಮ್ ಅನ್ಯತ್ ಕಾಮಹೈತುಕಮ್ – ಅವರು ಈ ವಿಶ್ವ ಸತ್ಯ ಸ್ವರೂಪನಾದ ಭಗವಂತನ ಕೊಡುಗೆಯಲ್ಲ [ಇದೊಂದು ಸುಳ್ಳಿನ ಕಂತೆ] ಎನ್ನುತ್ತಾರೆ. ಇದು ಭಗವಂತನಲ್ಲಿ ನೆಲೆಗೊಂಡದ್ದಲ್ಲ [ಇದಕ್ಕೆ ಇರವೇ ಇಲ್ಲ] ಎನ್ನುತ್ತಾರೆ. ಇದನ್ನು ನಿಯಮಿಸುವ ಸರ್ವಶಕ್ತನೊಬ್ಬನಿಲ್ಲ ಎನ್ನುತ್ತಾರೆ. ಒಂದರಿಂದ ಇನ್ನೊಂದು ಕ್ರಮವಾಗಿ ಹುಟ್ಟಿತು ಎನ್ನುವುದನ್ನೂ ಒಪ್ಪುವುದಿಲ್ಲ. ಮತ್ತೇನು? ಅವರ ದೃಷ್ಟಿಯಲ್ಲಿ ಇದೊಂದು ಬೇರೆಯ ತರ. ಇದೊಂದು ಕಾಮದ ಕೂಸು-ಮಾಯಾಸೃಷ್ಟಿ.

ಅಸುರರಲ್ಲಿ ಎರಡು ವಿಧ. ಜಗತ್ತಿಗೆ ಇನ್ನೊಂದು ಸತ್ಯವಿಲ್ಲ, ಜಗತ್ತಿಗೆ ಇನ್ನೊಂದು ಪ್ರತಿಷ್ಠೆ ಇಲ್ಲ, ಜಗತ್ತಿಗೆ ಇನ್ನೊಬ್ಬ ಈಶ್ವರನಿಲ್ಲ ಎನ್ನುವ ನಾಸ್ತಿಕ ತಿಳುವಳಿಕೆ ಇವರಿಗಿರುತ್ತದೆ. ಜಗತ್ತನ್ನು  ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಒಳಪಡಿಸುವ ಶಕ್ತಿ(ಸತ್ಯ) ಇಲ್ಲ ಎಂದು ಇವರು ತಿಳಿದಿರುತ್ತಾರೆ.  ಇವರು ಈ ಜಗತ್ತಿಗೆ ಆಧಾರನಾಗಿ ಒಬ್ಬ ದೇವರಿಲ್ಲ, ಆದ್ದರಿಂದ ಈ ಜಗತ್ತನ್ನು ನಿಯಂತ್ರಿಸುವ ಸ್ವಾಮಿ ಇಲ್ಲ, ಎಲ್ಲವೂ ಭ್ರಮೆ ಎಂದು ವಾದ ಮಾಡುತ್ತಾರೆ. ಸೃಷ್ಟಿಚಕ್ರ ಒಂದು ಮೂರ್ಖತನದ ಸಿದ್ಧಾಂತ ಎನ್ನುವುದು ಇವರ ನಂಬಿಕೆ.
ಇನ್ನೊಂದು ವಿಧದ ಅಸುರರು  ಈ ಜಗತ್ತಿನಲ್ಲಿ ನಮಗೆ ಏನು ಕಾಣುತ್ತದೋ ಅದು ಕೇವಲ ನಮ್ಮ ಭ್ರಮೆ ಎಂದು ಶೂನ್ಯವಾದ ಮಾಡುವವರು. ಇವರು ಈ ಪ್ರಪಂಚ ನಮ್ಮ ಬಯಕೆಗಳಿಂದ ಬೆಳೆಯುತ್ತಿದೆ ಹೊರತು  ಇನ್ನೊಂದು ಶಕ್ತಿಯಿಂದಲ್ಲ ಎಂದು  ನಂಬಿರುತ್ತಾರೆ.

ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋSಲ್ಪಬುದ್ಧಯಃ ।
ಪ್ರಭವಂತ್ಯುಗ್ರಕರ್ಮಾಣಃ ಕ್ಷಯಾಯ ಜಗತೋSಹಿತಾಃ                   ॥೯॥

ಏತಾಮ್  ದೃಷ್ಟಿಮ್ ಅವಷ್ಟಭ್ಯ ನಷ್ಟ ಆತ್ಮಾನಃ ಅಲ್ಪಬುದ್ಧಯಃ ।
ಪ್ರಭವಂತಿ ಉಗ್ರಕರ್ಮಾಣಃ ಕ್ಷಯಾಯ ಜಗತಃ ಅಹಿತಾಃ –ಇಂಥ ನಿಲುವನ್ನು ನೆಚ್ಚಿಕೊಂಡು ವಿವೇಕ ಕಳೆದುಕೊಂಡ ಅರಿವುಗೇಡಿಗಳು-ಜನಾಂಗದ ಕೇಡಿಗಳು. ಒರಟು ನಡೆಯ ಇಂಥವರು ಜಗದ ನಾಶಕ್ಕೆ ಕಾರಣರಾಗುತ್ತಾರೆ.

ಆಸುರ ಮನೋವೃತ್ತಿ ಬೆಳೆಸಿಕೊಳ್ಳುವ ಜನ ತಮ್ಮ ಬದುಕಿಗೆ ಅನರ್ಥವನ್ನು ತಂದುಕೊಂಡು ತಮ್ಮ ನಾಶಕ್ಕೆ ತಾವೇ ಕಾರಣರಾಗುತ್ತಾರೆ. ಇವರು ತಮ್ಮ ನಂಬಿಕೆಯೇ ತಮ್ಮನ್ನು ನಾಶ ಮಾಡುತ್ತಿದೆ, ತಾವು ಕತ್ತಲೆಯ ದಾರಿಯಲ್ಲಿ ನಡೆಯುತ್ತಿದ್ದೇವೆ ಎನ್ನುವ ಎಚ್ಚರವೂ ಇಲ್ಲದೆ  ಉಗ್ರಗಾಮಿ(ಉಗ್ರಕರ್ಮಾಣಃ)ಗಳಾಗುತ್ತಾರೆ. ಇದರ ಪರಿಣಾಮ ಇವರು ಲೋಕಶತ್ರುಗಳಾಗಿ, ಲೋಕ ನಾಶಕ್ಕೆ ಕಾರಣರಾಗುತ್ತಾರೆ. ಈ ರೀತಿಯ ಮನೋವೃತ್ತಿ ಇದ್ದು ನಮ್ಮ ನಿಮ್ಮ ನಡುವೆ ಇರುವ  ಜನರೇ ಅಸುರರು.

ಕಾಮಮಾಶ್ರಿತ್ಯ ದುಷ್ಪೂರಂ ಡಂಭಮಾನಮದಾನ್ವಿತಾಃ।
ಮೋಹಾದ್ ಗೃಹೀತ್ವಾSಸದ್ ಗ್ರಾಹಾನ್ ಪ್ರವರ್ತಂತೇSಶುಚಿವ್ರತಾಃ      ॥೧೦॥

ಕಾಮಮ್ ಆಶ್ರಿತ್ಯ ದುಷ್ಪೂರಂ ಡಂಭ ಮಾನ ಮದ ಅನ್ವಿತಾಃ।
ಮೋಹಾತ್  ಗೃಹೀತ್ವಾ ಅಸತ್ ಗ್ರಾಹಾನ್ ಪ್ರವರ್ತಂತೇ ಅಶುಚಿ ವ್ರತಾಃ –ತಣಿಯದ ಬಯಕೆಯ ಬೆನ್ನುಹತ್ತಿ ಬೂಟಾಟಿಕೆ, ಬಿಂಕ ಮತ್ತು ಸೊಕ್ಕಿಗೆ ತುತ್ತಾದವರು. ಕೊಳಕು ನಡೆಯ ಈ ಮಂದಿ ತಿಳಿಗೇಡಿತನದಿಂದ ತಪ್ಪು ಗ್ರಹಿಕೆಗಳನ್ನೆ ಕಟ್ಟಿಕೊಂಡು ಬಾಳುತ್ತಾರೆ.

ಆಸುರೀ ಸ್ವಭಾವದವರ ಬಯಕೆಗೆ ಕೊನೆ ಇರುವುದಿಲ್ಲ. ಎಷ್ಟು ಬಂದರೂ ಇನ್ನಷ್ಟರಾಸೆ. ಉದಾಹರಣೆಗೆ ಕೆಲಸವೇ ಇಲ್ಲದಾಗ ಒಂದು ಕೆಲಸದ ಆಸೆ, ಕೆಲಸ ಸಿಕ್ಕಿದಾಗ ಹೆಚ್ಚು ಸಂಬಳದ ಆಸೆ, ಸಂಬಳ ಬಂದಾಗ ಆ ಸಂಬಳ ತನ್ನ ಪಕ್ಕದ ಮನೆಯವನಿಗಿಂತ ಕಡಿಮೆ-ಅದಕ್ಕಾಗಿ ಇನ್ನೂ ಹೆಚ್ಚಿನ ಸಂಬಳದ ಆಸೆ, ದೊಡ್ಡ ಹುದ್ದೆಯ ಆಸೆ, ಹೀಗೆ ಎಷ್ಟು ಸಿಕ್ಕಿದರೂ ತೃಪ್ತಿ ಇಲ್ಲ. ಈ ದಾಹವನ್ನು ಪೂರೈಸಲು ಸಾಧ್ಯವೇ ಇಲ್ಲ. ಪುರಾಣದಲ್ಲಿ ಹೇಳುವಂತೆ ಹೇಗೆ ಪಾತಾಳವನ್ನು ಮಣ್ಣುಹಾಕಿ ಮುಚ್ಚಲು ಸಾಧ್ಯವಿಲ್ಲವೋ ಹಾಗೆ ಮನುಷ್ಯನ ಬಯಕೆಯನ್ನು ಪೂರೈಸಲು ಸಾಧ್ಯವಿಲ್ಲ. ನಮಗೆ ಎಷ್ಟೇ ಹಣ ಸಿಕ್ಕಿದರೂ ಕೂಡ ನಾವು ಅದರ ಬಲಬದಿಯಲ್ಲಿ ಒಂದು ಸೊನ್ನೆ ಸೇರಿಸಿಕೊಂಡು ಕಡಿಮೆಯಾಯಿತು ಎಂದು ಕೊರಗುತ್ತೇವೆ ಮತ್ತು ಸಂತೋಷವನ್ನು ಮರೆಯುತ್ತೇವೆ. ಕಠೋಪನಿಷತ್ತಿನಲ್ಲಿ- “ನಿನಗೆ ಎಷ್ಟು ಬೇಕೋ ಅಷ್ಟು ಧನವನ್ನು ಕೊಡುತ್ತೇನೆ” ಎಂದು ಯಮ ಹೇಳಿದಾಗ, ನಚಿಕೇತ ಹೇಳುತ್ತಾನೆ: “ನ ವಿತ್ತೇನ ತರ್ಪಣೀಯೋ ಮನುಷ್ಯಃ” ಎಂದು. ಅಂದರೆ “ಮನುಷ್ಯನ ಧನದ ಬಯಕೆಯನ್ನು ಪೂರೈಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು. ಸಾಕು ಎನ್ನುವುದು ದೈವೀ ಸ್ವಭಾವ, ಬೇಕು ಎನ್ನುವುದು ಆಸುರೀ ಸ್ವಭಾವ. ಹೀಗೆ ಆಸುರೀ ಸ್ವಭಾವದವರು ಬಯಕೆಗಳ ಬೆನ್ನುಹತ್ತಿ, ಆ ತೀರದ ಬಯಕೆಯನ್ನು ತೀರಿಸಿಕೊಳ್ಳುವುದಕ್ಕೊಸ್ಕರ ಮಾಡಬಾರದ್ದನ್ನು ಮಾಡುತ್ತಾರೆ. ಇವರ ಜೀವನವೇ ಡಂಭಾಚಾರ. ಬಿಗುಮಾನ, ದುರಹಂಕಾರ, ನಾಟಕೀಯವಾದ ಬದುಕಿನಿಂದ ಇನ್ನೊಬ್ಬರಿಗೆ ಮೋಸ ಮಾಡುವುದು. ಹೀಗೆ ನಡೆ ನುಡಿಯಲ್ಲಿ ಸ್ವಚ್ಚತೆ ಇಲ್ಲದ ಕೊಳಕು ಬದುಕು ಇವರದ್ದಾಗಿರುತ್ತದೆ.

No comments:

Post a Comment