Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, December 25, 2011

Bhagavad GitA Kannada Chapter-17 Shloka 11-22


 ಅಫಲಾಕಾಂಕ್ಷಿ ಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ
ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ವಿಕಃ                     ೧೧

ಅಫಲ ಆಕಾಂಕ್ಷಿಭಿಃ ಯಜ್ಞಃ ವಿಧಿದೃಷ್ಟೋ ಯಃ  ಇಜ್ಯತೇ
ಯಷ್ಟವ್ಯಮ್ ಏವ ಇತಿ ಮನಃ ಸಮಾಧಾಯ ಸಃ ಸಾತ್ವಿಕಃ –ಶಾಸ್ತ್ರದ ಕಟ್ಟಳೆಗೆ ಸರಿಯಾಗಿ, ಫಲದ ನಂಟಿಲ್ಲದೆ, ಕರ್ತವ್ಯ ಎನ್ನುವ ಭಾವದಿಂದ ಮನ ಮೆಚ್ಚಿ ಮಾಡುವ ಯಜ್ಞ ಸಾತ್ವಿಕ ಯಜ್ಞ.

ಯಜ್ಞ ಮಾಡುವವರೆಲ್ಲ ಸಾತ್ವಿಕರಲ್ಲ. ಯಜ್ಞದಲ್ಲೂ ಸಾತ್ವಿಕ, ರಾಜಸ ಮತ್ತು ತಾಮಸವೆಂಬ ಮೂರು ಪ್ರಭೇದವಿದೆ. ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಯಜ್ಞ ಹೇಗಿರುತ್ತದೆ ಎನ್ನುವುದನ್ನು ವಿವರಿಸಿದ್ದಾನೆ. ಯಜ್ಞ ಎಂದರೆ ಕೇವಲ ಅಗ್ನಿಕುಂಡದಲ್ಲಿ ಮಾಡುವ ಪೂಜೆ ಮಾತ್ರ  ಅಲ್ಲ. ಪೀಠದಲ್ಲಿ ಭಗವಂತನನ್ನು ಪೂಜಿಸುವುದೂ ಯಜ್ಞ, ಮಾನಸಿಕವಾಗಿ ಭಗವಂತನ ಧ್ಯಾನ ಮಾಡುವುದೂ ಯಜ್ಞ. ಯಾವುದೇ ಫಲ ಕಾಮನೆ ಇಲ್ಲದೆ, ದೇವರು ಪ್ರಸನ್ನನಾಗಲಿ-ಆತನ ದಯಾ ದೃಷ್ಟಿ  ನನ್ನ ಮೇಲಿರಲಿ ಎಂದು, ವಿಧಿಪೂರ್ವಕವಾಗಿ ಮಾಡುವ ಪೂಜೆ ಸಾತ್ವಿಕ ಯಜ್ಞವೆನಿಸುತ್ತದೆ.  ಯಾಂತ್ರಿಕವಾಗಿ, ಮಂತ್ರದ ಅರ್ಥ ಗೊತ್ತಿಲ್ಲದೆ, ಯಾವುದೋ ಸಂಕುಚಿತ ಫಲಾಪೇಕ್ಷೆಯಿಂದ ಪೂಜೆ ಮಾಡಿದರೆ ಅದು ಸಾತ್ವಿಕ ಯಜ್ಞವಾಗುವುದಿಲ್ಲ.
ಇಲ್ಲಿ ‘ವಿಧಿಪೂರ್ವಕವಾಗಿ’ ಎಂದು ಹೇಳಲಾಗಿದೆ. ಇದು ಬಹಳ ಮುಖ್ಯವಾದ ವಿಚಾರ. ಉದಾಹರಣೆಗೆ ನಾವು ಪೂಜೆ ಮಾಡುವಾಗ ಘಂಟಾನಾದ ಮಾಡುತ್ತೇವೆ; ಶಂಖನಾದ ಮಾಡುತ್ತೇವೆ. ಈ ರೀತಿ ಯಾವುದೇ ಪೂಜಾ ವಿಧಾನವಿದ್ದರೂ ಕೂಡ, ಅದನ್ನು ಮಾಡುವ ಮೊದಲು ಏಕೆ ಮಾಡುತ್ತಿದ್ದೇವೆ ಎನ್ನುವ ತಿಳುವಳಿಕೆ ನಮಗೆ ಅಗತ್ಯ. ಘಂಟೆಯನ್ನು ಗಣಗಣ ಎಂದು ಕರ್ಕಶವಾಗಿ ಒಂದೇ ಸಮನೆ ಬಾರಿಸಬಾರದು. ಘಂಟಾನಾದ ಮಾಡುವಾಗ ಅದರಿಂದ ಓಂಕಾರನಾದ ಹೊರ ಹೊಮ್ಮಬೇಕು. ಈ ರೀತಿ ಓಂಕಾರ ನಾದ ಹೊರಹೊಮ್ಮಿದಾಗ- ಆ ನಾದ ಕೇಳಿಸುವ ಪ್ರದೇಶದಲ್ಲಿರುವ ಎಲ್ಲ ದುಷ್ಟ ಶಕ್ತಿಗಳೂ ಅಲ್ಲಿಂದ ಓಡಿ ಹೋಗುತ್ತವೆ ಮತ್ತು ಈ ನಾದ ದೇವತಾ ಶಕ್ತಿಗಳನ್ನು ಆಕರ್ಷಿಸುತ್ತದೆ. ಇದರಿಂದ ಪೂಜೆಗೆ ಬೇಕಾದ ಶುಭ್ರ ವಾತಾವರಣ ನಿರ್ಮಾಣವಾಗುತ್ತದೆ. ಇಲ್ಲಿ ಮನಃಪೂರ್ವಕವಾಗಿ ದುಷ್ಟಶಕ್ತಿಗಳು ಹೋಗಲಿ, ದೇವತಾಶಕ್ತಿಗಳು ಬರಲಿ ಎಂದು ಪ್ರಾರ್ಥಿಸಿ, ಘಂಟೆಯಿಂದ ಓಂಕಾರನಾದ ತೆಗೆಯುವುದು ಬಹಳ ಮುಖ್ಯ. ಘಂಟೆಯಿಂದ ಎಂದೂ ಅಪಸ್ವರ ಬರಬಾರದು. ಘಂಟಾನಾದಕ್ಕೆ ಒಂದು ಶ್ರುತಿ ಇದೆ. ಸಪ್ತ ಸ್ವರಗಳಿಗೆ ಸಪ್ತ ಸ್ವರದ ಘಂಟೆಗಳಿವೆ. ಅದನ್ನು ಶ್ರುತಿಬದ್ಧವಾಗಿ ಬಾರಿಸಬೇಕು. ಇದು ಓಂಕಾರದಿಂದ ವಾತಾವರಣ ಶುದ್ಧಿ ಮಾಡುವ ಅದ್ಭುತ ಪ್ರಕ್ರಿಯೆ. ಇದು ಕೇವಲ ಒಂದು ಉದಾಹರೆಣೆಯಷ್ಟೆ. ಹೀಗೆ ನಾವು ನಮ್ಮ ಪ್ರತಿಯೊಂದು ಕ್ರಿಯೆಯನ್ನು ತಿಳಿದು  ಮನಃಪೂರ್ವಕವಾಗಿ ಮಾಡಬೇಕು; ಮಾಡುವ ಕ್ರಿಯೆಯಲ್ಲಿ ನಮಗೆ ಖುಷಿ ಇರಬೇಕು. ಹೀಗೆ ಮಾಡಿದಾಗ ಮಾತ್ರ ಅದು ಸಾತ್ವಿಕ ಯಜ್ಞ ಎನಿಸುತ್ತದೆ.

ಅಭಿಸಂಧಾಯ ತು ಫಲಂ ಡಂಭಾರ್ಥಮಪಿ ಚೈವ ಯತ್      
ಇಜ್ಯತೇ ಭರತಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್                     ೧೨

ಅಭಿಸಂಧಾಯ ತು ಫಲಮ್  ಡಂಭ ಅರ್ಥಮ್ ಅಪಿ ಚ ಏವ ಯತ್     
ಇಜ್ಯತೇ ಭರತಶ್ರೇಷ್ಠ ತಮ್  ಯಜ್ಞಂ ವಿದ್ಧಿ ರಾಜಸಮ್ –ಓ ಭರತಶ್ರೇಷ್ಠ, ಫಲದ ಬಯಕೆಯಿಂದ ಅಥವಾ ಬೂಟಾಟಿಕೆಗಾಗಿ ಮಾಡುವ ಯಜ್ಞ ರಾಜಸವೆಂದು ತಿಳಿ.

ಸ್ವಾರ್ಥದಿಂದ ಒಂದು ವಿಶೇಷ ಫಲವನ್ನು ಬಯಸಿ, ಡಂಭಾಚಾರದಿಂದ ಮಾಡುವ ಯಜ್ಞ ರಾಜಸ ಯಜ್ಞ ಎನಿಸುತ್ತದೆ. ಯಾವುದೇ ಯಜ್ಞ ಭಗವಂತನನ್ನು ಸೇರಬೇಕಾದರೆ ಅದನ್ನು ನಾವು ಭಕ್ತಿಯಿಂದ ಮಾಡಬೇಕು. ಭಗವಂತನಲ್ಲಿ ರತರಾದವರಲ್ಲಿ ನಾವು ಶ್ರೇಷ್ಠರಾಗಿ(ಭರತಶ್ರೇಷ್ಠ) ಕ್ರಿಯೆ ಮಾಡಬೇಕು. ಇದಿಲ್ಲದೆ ಪ್ರಚಾರಕ್ಕಾಗಿ ಮಾಡುವ ಯಜ್ಞ ರಾಜಸ ಯಜ್ಞವಾಗುತ್ತದೆ.    

ವಿಧಿಹೀನಮಸೃಷ್ಟಾನ್ನಂ ಮಂತ್ರ ಹೀನಮದಕ್ಷಿಣಮ್
ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ                              ೧೩

ವಿಧಿಹೀನಮ್ ಅಸೃಷ್ಟನ್ನಮ್  ಮಂತ್ರ ಹೀನಮ್ ಅದಕ್ಷಿಣಮ್
ಶ್ರದ್ಧಾ ವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ –ಶಾಸ್ತ್ರಕ್ಕೆ ಅನುಗುಣವಾಗಿಲ್ಲ; ಅನ್ನದಾನವಿಲ್ಲ; ಮಂತ್ರವಿಲ್ಲ; ದಕ್ಷಿಣೆಯಿಲ್ಲ; ಮಾಡುವ ಕ್ರಿಯೆಯಲ್ಲಿ ನಂಬಿಕೆಯೂ ಇಲ್ಲ. ಇಂಥಹ ಯಜ್ಞವನ್ನು ತಾಮಸ ಎನ್ನುತ್ತಾರೆ.

ಮಂತ್ರ ಸರಿಯಾಗಿ ಹೇಳದೇ ಇರುವುದು, ಮಂತ್ರವನ್ನು ಕ್ರಮ ತಪ್ಪಿ ಹೇಳುವುದು, ಪದ ಉಚ್ಛಾರ ಸರಿಯಾಗಿಲ್ಲದೇ ಇರುವುದು-ಇವೆಲ್ಲವೂ ವಿಧಿಹೀನ. ಈ ರೀತಿ ಮಾಡುವ ಯಜ್ಞ ತಾಮಸ ಯಜ್ಞ. ಯಾವುದೇ ಯಜ್ಞದಲ್ಲಿ ಹೇಗೆ ಪ್ರತಿಮೆಯ ಮೂಲಕ ಮತ್ತು ಅಗ್ನಿಯ ಮೂಲಕ ಆರಾಧನೆ ನಡೆಯುತ್ತದೆಯೋ, ಅದೇ ರೀತಿ ಚರಮೂರ್ತಿಗಳ ಆರಾಧನೆ ಬಹಳ ಮುಖ್ಯ.  ಅನ್ನದಾನ ಮಾಡುವ ಮೂಲಕ ಪ್ರತಿಯೊಬ್ಬರೊಳಗೂ ಇರುವ ಭಗವಂತನ ಆರಾಧನೆ ಈ ಚರಮೂರ್ತಿ ಆರಾಧನೆ. ಹೀಗೆ ಅನ್ನದಾನವಿಲ್ಲದೆ, ದಕ್ಷಿಣೆ(ವೈದಿಕರಿಗೆ ಅವರ ಜೀವನ ನಿರ್ವಾಹಣೆಗಾಗಿ ನಾವು ಸಲ್ಲಿಸುವ ಸೇವೆ)  ಇಲ್ಲದೆ ಮಾಡುವ ಯಜ್ಞ ತಾಮಸ ಯಜ್ಞ. ಇವೆಲ್ಲವುದಕ್ಕಿಂತ ಮುಖ್ಯವಾದುದು ಶ್ರದ್ಧೆ. ಭಗವಂತನ ಮೇಲೆ ಅಚಲವಾದ ಶ್ರೇಷ್ಠ ಶ್ರೆದ್ಧೆ ಇಲ್ಲದೆ ಮಾಡುವ ಯಾವುದೇ ಯಜ್ಞವಿರಲಿ-ಅದು ಸರ್ವತ್ರ ತಾಮಸ ಯಜ್ಞವಾಗುತ್ತದೆ.

ಆಹಾರ ಮತ್ತು ಯಜ್ಞದ ನಂತರ ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಮೂರು ವಿಧದ ತಪಸ್ಸಿನ ಬಗ್ಗೆ ವಿವರಿಸುತ್ತಾನೆ. ಮೂಲಭೂತವಾಗಿ ತಪಸ್ಸಿನಲ್ಲಿ ಮೂರು ವಿಧ. ನಮ್ಮ ನಡೆಯಲ್ಲಿ ಶಿಸ್ತುಬದ್ಧತೆಯನ್ನು ತರುವುದು-ತಪಸ್ಸು, ಆಳವಾದ ಚಿಂತನೆ-ತಪಸ್ಸು, ಮನಃಶುದ್ಧಿಗಾಗಿ ಮಾಡುವ ದೇಹದಂಡನೆಯೂ-ತಪಸ್ಸು. ತಪಸ್ಸು ಮಾಡಲು ಕಾಡಿಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಇದ್ದು ತಪಸ್ಸು ಮಾಡಬಹುದು. ಸಾತ್ವಿಕ, ರಾಜಸ ಮತ್ತು ತಾಮಸ ತಪಸ್ಸನ್ನು ವಿವರಿಸುವ ಮೊದಲು ಇಲ್ಲಿ ಕೃಷ್ಣ ಶರೀರ, ಮಾತು ಮತ್ತು ಮನ ಎನ್ನುವ ಮೂಲಭೂತವಾದ ಮೂರು ತಪಸ್ಸಿನ ವಿವರಣೆಯನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಕೊಡುತ್ತಾನೆ.

ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್
ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ                     ೧೪

ದೇವ ದ್ವಿಜ ಗುರು ಪ್ರಾಜ್ಞ ಪೂಜನಂ ಶೌಚಮ್ ಆರ್ಜವಮ್
ಬ್ರಹ್ಮಚರ್ಯಮ್ ಅಹಿಂಸಾ ಚ ಶಾರೀರಂ ತಪಃ  ಉಚ್ಯತೇ –ದೇವತೆಗಳನ್ನು, ಅರಿವಿನಿಂದ ಮರುಹುಟ್ಟು ಪಡೆದವರನ್ನು, ಗುರುಗಳನ್ನು ಮತ್ತು ತುಂಬ ತಿಳಿದವರನ್ನು ಗೌರವಿಸುವುದು, ನೈರ್ಮಲ್ಯ, ನೇರ ನಡೆ, ಬ್ರಹ್ಮಚರ್ಯ ಮತ್ತು ಇನ್ನೊಬ್ಬರಿಗೆ ಕಾಟ ನೀಡದಿರುವುದು ಶರೀರದ ತಪಸ್ಸು ಎನಿಸುತ್ತದೆ.

ದೇವರ ಪ್ರತೀಕ ಎಲ್ಲಿ ಕಂಡಿತೋ ಅಲ್ಲಿ ತಲೆಬಾಗುವುದು; ಜ್ಞಾನಿಗಳಿಗೆ ಗೌರವ ಕೊಡುವುದು; ಗುರುವಿಗೆ ತಲೆಬಾಗುವುದು; ಭಗವದ್ಭೂತಿಯಿಂದ ಭಗವಂತನನ್ನು ಅನುಭವಿಸಿದ ಅನುಭಾವಿಗಳಾದ ಪ್ರಾಜ್ಞರನ್ನು ಗೌರವಿಸುವುದು- ಇವೆಲ್ಲವೂ ಶರೀರ ತಪಸ್ಸು ಎನಿಸುತ್ತದೆ. ಇದರ ಜೊತೆಗೆ  ಶುಚಿತ್ವವನ್ನು ಕಾಪಾಡಿಕೊಂಡು ಬದುಕುವುದು, ನೇರ ನಡೆ-ನುಡಿ, ಬ್ರಹ್ಮಚರ್ಯ ಪಾಲನೆ ಹಾಗು ಇನ್ನೊಬ್ಬರಿಗೆ ನಮ್ಮಿಂದ ತೊಂದರೆಯಾಗದಂತೆ  ಬದುಕುವುದು ಶರೀರದ ತಪಸ್ಸು. [ಈ ಶ್ಲೋಕದಲ್ಲಿ ಹೇಳಿರುವ ಶೌಚಮ್, ಆರ್ಜವಮ್ ಮತ್ತು ಅಹಿಂಸಾ-ಈ ಗುಣಗಳ ಪೂರ್ಣ ವಿವರಣೆಯನ್ನು  ಹದಿನಾರನೇ ಅಧ್ಯಾಯದ ಪ್ರಾರಂಭಿಕ ಶ್ಲೋಕದಲ್ಲಿ ವಿವರಿಸಲಾಗಿದೆ]. ಇಲ್ಲಿ ‘ಬ್ರಹ್ಮಚರ್ಯ ಪಾಲನೆ’ ಅಂದರೆ  ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವುದು; ಅದಕ್ಕೆ ಪೂರಕವಾಗಿ ವೇದಾಧ್ಯಯನ ಮಾಡುವುದು  ಹಾಗು ಅಧ್ಯಯನಕ್ಕೆ ಪೂರಕವಾಗಿ ದೈಹಿಕ ಬ್ರಹ್ಮಚರ್ಯ ಪಾಲನೆ. ದೈಹಿಕವಾಗಿ ಪೂರ್ಣ ಬ್ರಹ್ಮಚರ್ಯ ಕೇವಲ ಸನ್ಯಾಸಿಗಳಿಗೆ ಮತ್ತು ಬ್ರಹ್ಮಚಾರಿಗಳಿಗೆ ಅನ್ವಯಿಸುತ್ತದೆ. ಗ್ರಹಸ್ಥರಾದವರು ಈ ರೀತಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಗ್ರಹಸ್ಥರಲ್ಲಿ ಬ್ರಹ್ಮಚರ್ಯ ಪಾಲನೆ ಎಂದರೆ- ಅವರು ಸ್ವಚ್ಛಂದ ಕಾಮಿಗಳಾಗದೆ, ಗ್ರಹಸ್ಥಧರ್ಮ ಪಾಲನೆಯ ಆವರಣದಲ್ಲಿ ಬದುಕುವುದು ಎಂದರ್ಥ.  ಹೀಗೆ ಭಗವಂತನಲ್ಲಿ ಶರಣಾಗತಿ; ಜ್ಞಾನಿಗಳಿಗೆ, ಗುರುಗಳಿಗೆ, ಪ್ರಾಜ್ಞರಿಗೆ ಗೌರವ ಕೊಡುವುದು, ಶುಚಿತ್ವವನ್ನು ಕಾಪಾಡಿಕೊಳ್ಳುವುದು, ನೇರ ನಡೆ ನುಡಿ, ಬ್ರಹ್ಮಚರ್ಯ ಪಾಲನೆ ಮತ್ತು ಅಹಿಂಸೆಯಿಂದ ಬದುಕುವುದು-ಶಾರೀರಿಕ ತಪಸ್ಸು . ನಾವು ಸಾಮಾಜಿಕವಾಗಿ ಸಭ್ಯರಾಗಿ ಬದುಕಲು ಈ ತಪಸ್ಸು ಬೇಕೇಬೇಕು. ಮನುಷ್ಯನಾದವನು ಅನುಸರಿಸಬೇಕಾದ ದೈಹಿಕ ನೀತಿಗಳಿವು.                 

ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ                  ೧೫

ಅನುದ್ವೇಗ ಕರಂ ವಾಕ್ಯಂ ಸತ್ಯಂ ಪ್ರಿಯ ಹಿತಂ ಚ ಯತ್
ಸ್ವಾಧ್ಯಾಯಭ್ಯಸನಂ ಚ ಏವ ವಾಙ್ಮಯಂ ತಪಃ  ಉಚ್ಯತೇ—ಕೆರಳಿಸದ, ದಿಟವಾದ, ಕೇಳುವುದಕ್ಕೆ ಮೆಚ್ಚಾದ ಹಾಗು ಬಾಳಿಗೆ ಒಳಿತಾದ ಮಾತು ಮತ್ತು ಶಾಸ್ತ್ರಗಳ ಓದು ಮಾತಿನ ತಪಸ್ಸು ಎನಿಸುತ್ತದೆ.

ಹಿಂದಿನ ಅಧ್ಯಾಯದಲ್ಲಿ ವಿಶ್ಲೇಶಿಸಿದಂತೆ ಇದ್ದದ್ದನ್ನು ಇದ್ದಂತೆ ಹೇಳುವುದೇ ಸತ್ಯವಲ್ಲ. ಸತ್ಯ ಅಂದರೆ ಏನು ಎನ್ನುವ ವಿವರಣೆಯನ್ನು ಕೃಷ್ಣ ಈ ಶ್ಲೋಕದ ಮೂಲಕ ನಮಗೆ ಕೊಟ್ಟಿದ್ದಾನೆ. ಎಲ್ಲಿ ನಿಜವಾದ ಸಜ್ಜನಿಕೆ ಇದೆ-ಅದನ್ನು ಮೆಚ್ಚಿಕೊಂಡು, ಅದಕ್ಕೆ ಪೂರಕವಾಗಿ, ಇನ್ನೊಬ್ಬರನ್ನು  ನೋಯಿಸದೆ, ಅವರಿಗೆ ಹಿತವಾಗುವ ರೀತಿ ಮಾತನಾಡುವುದು ಮಾತಿನ ತಪಸ್ಸು. ಇನ್ನೊಬ್ಬರಿಗೆ ಪ್ರೀಯವೂ-ಹಿತವೂ ಆದ ಮಾತನ್ನು ಆಡುವುದು ಬಹಳ ಕಷ್ಟ. ಏಕೆಂದರೆ ಹೆಚ್ಚಿನ ಸಂದರ್ಭದಲ್ಲಿ ಪ್ರಿಯವಾದದ್ದು ಹಿತವಾಗಿರುವುದಿಲ್ಲ. ಇಂಥಹ ಸಂದರ್ಭದಲ್ಲಿ ಮೌನ ಲೇಸು. ಕೃಷ್ಣನ ಕಥೆಯನ್ನು ಓದುವಾಗ ಅನೇಕ ಕಡೆ ನಮಗೆ ಕೃಷ್ಣ ಸುಳ್ಳು ಹೇಳಿದಂತೆ, ಮೋಸ ಮಾಡಿದಂತೆ ಕಾಣಿಸುತ್ತದೆ. ಆದರೆ ಆ ಕ್ರಿಯೆಯ ಹಿಂದೆ ಇರುವ ಕಾರುಣ್ಯ, ಹಿತಚಿಂತನೆಯನ್ನು ಗಮನಿಸಿದಾಗ ನಮಗೆ ಅದು ಸುಳ್ಳಲ್ಲ ಎನ್ನುವುದು ತಿಳಿಯುತ್ತದೆ. ದೈನಂದಿನ ಜೀವನದಲ್ಲಿ ನಾವು ಮಾತನಾಡುವಾಗ ನಮಗೆ ಕೃಷ್ಣ ಈ ಶ್ಲೋಕದಲ್ಲಿ ಹೇಳಿದ ಸಂದೇಶದ ಎಚ್ಚರವಿರಬೇಕು. ಮಾತನಾಡದೆ ಮೌನವಾಗಿದ್ದರೂ ಸರಿ-ಆದರೆ ಏನೋ ಮಾತನಾಡಿ ಆನಂತರ ಪಶ್ಚಾತ್ತಾಪಪಟ್ಟರೆ ಉಪಯೋಗವಿಲ್ಲ. “ಆಡಿದ ಮಾತನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ; ಘಾಸಿಯಾದ ಮನಸ್ಸನ್ನು ವಾಸಿಮಾಡುವ ಮದ್ದು ನಮ್ಮಲ್ಲಿಲ್ಲ”. ಆದ್ದರಿಂದ ಇನ್ನೊಬ್ಬರನ್ನು ನೋಯಿಸುವ ಮಾತನ್ನೆಂದೂ ಆಡಬೇಡ. ಹಾಳು ಹರಟೆಯಲ್ಲಿ ದಿನ ಕಳೆಯದೆ, ವೇದದ ಅರ್ಥಚಿಂತನೆ, ಗೀತಾಚಿಂತನೆ, ವಿಷ್ಣುಸಹಸ್ರನಾಮ ಪಠಣ, ಇತ್ಯಾದಿ ಸ್ವಾಧ್ಯಾಯದಲ್ಲಿ ನಿರತನಾಗುವುದು ಮಾತಿನ ತಪಸ್ಸು.     

ಮನಃ ಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ
ಭಾವಸಂಶುದ್ಧಿರಿತ್ಯೇತತ್ ತಪೋ ಮಾನಸಮುಚ್ಯತೇ                   ೧೬

ಮನಃ ಪ್ರಸಾದಃ ಸೌಮ್ಯತ್ವಂ ಮೌನಮ್ ಆತ್ಮವಿನಿಗ್ರಹಃ
ಭಾವಸಂಶುದ್ಧಿಃ ಇತಿ ಏತ್ ತಪಃ  ಮಾನಸಮ್ ಉಚ್ಯತೇ -- ಬಗೆಯ ತಿಳಿ, ಮಿದುತನ, ಮನನ, ತನ್ನ ಮೇಲೆ ಹಿಡಿತ ಮತ್ತು ಒಳ್ಳೆಯದನ್ನೆ ಬಗೆಯುವುದು-ಇದು ಮನದ ತಪಸ್ಸು ಎನಿಸುತ್ತದೆ.

ಮೇಲೆ ಹೇಳಿದ ಎರಡು ವಿಧದ ತಪಸ್ಸಿಗೆ ಮಿಗಿಲಾಗಿರುವ ಮಹಾ ತಪಸ್ಸು ಎಂದರೆ ಮನದ ತಪಸ್ಸು. ಶರೀರ ಮತ್ತು ಮಾತಿನ ತಪಸ್ಸು ಮನದ ತಪಸ್ಸಿಗೆ ಪೂರಕ. ನಮ್ಮ ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಅದರಲ್ಲಿ ಕೆಟ್ಟ ವಿಚಾರ ತುಂಬಿ ಕಲುಷಿತವಾಗಿರಬಾರದು. ಅದು ಸೌಮ್ಯವಾಗಿರಬೇಕು, ಅಲ್ಲಿ ಕ್ರೌರ್ಯವಿರಬಾರದು. ಯಾವುದೇ ಒಂದು ವಿಷಯದ ಮೇಲೆ ತೀರ್ಮಾನಕ್ಕೆ ಬರುವ ಮೊದಲು ಆಳವಾದ ಚಿಂತನೆ ಮಾಡಬೇಕು. ಒಂದು ವಿಷಯದ ಮೇಲೆ, ಒಬ್ಬ ವ್ಯಕ್ತಿಯ ಮೇಲೆ ದುಡುಕಿ ಪ್ರತಿಕ್ರಿಯಿಸಬಾರದು. ಮನನ ಮಾಡು, ಮನನ ಮಾಡಿ ಮಾತನಾಡು. ಈ ರೀತಿ ಮನನ ಮಾಡಬೇಕಾದರೆ ನಾವು ಆತ್ಮವಿನಿಗ್ರಹವನ್ನು ಸಾಧಿಸಬೇಕು( ಹೆಚ್ಚಿನ ವಿವರಕ್ಕಾಗಿ ಅ-೧೩, ಶ್ಲೋ-೭-ನೋಡಿ).  ಸ್ವಚ್ಛವಾದ ಕ್ರೌರ್ಯವಿಲ್ಲದ ಮನಸ್ಸಿಗೆ ಇಂದ್ರಿಯಗಳ ಹಿಡಿತವಿರುತ್ತದೆ. ಅಂತಹ ಮನಸ್ಸಿಗೆ  ಕೆಟ್ಟ ಭಾವನೆ ಹೊಳೆಯುವುದಿಲ್ಲ. ಒಬ್ಬರು ನಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರೂ ಕೂಡ ನಮಗೆ ಅವರ ಮೇಲೆ ದ್ವೇಷ, ಕೋಪ ಬರುವುದಿಲ್ಲ. ಈ ರೀತಿ ಮನಸ್ಸಿನ ನಿಯಂತ್ರಣ ಮಾಡುವುದೇ  ಮನಸ್ಸಿನ ತಪಸ್ಸು.

 ಇಲ್ಲಿ ಹೇಳಿದ ಮೂರು ವಿಧದ ತಪಸ್ಸಿನಲ್ಲಿ ಮತ್ತೆ ಪ್ರತಿಯೊಂದರಲ್ಲೂ  ಮೂರು ವಿಧ. ಸಾತ್ವಿಕ, ರಾಜಸ ಮತ್ತು ತಾಮಸ. ಇದರ ವಿವರಣೆ ಮುಂದಿನ ಮೂರು ಶ್ಲೋಕದಲ್ಲಿದೆ.

ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ ತ್ರಿವಿಧಂ ನರೈಃ
ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ವಿಕಂ ಪರಿಚಕ್ಷತೇ                             ೧೭

ಶ್ರದ್ಧಯಾ ಪರಯಾ ತಪ್ತಂ ತಪಃ ತತ್ ತ್ರಿವಿಧಂ ನರೈಃ
ಅಫಲ ಆಕಾಂಕ್ಷಿಭಿಃ ಯುಕ್ತೈಃ ಸಾತ್ವಿಕಂ ಪರಿಚಕ್ಷತೇ –ಈ ಮೂರೂ ಬಗೆಯ ತಪಸ್ಸನ್ನು ತುಂಬು ನಂಬಿಕೆಯಿಂದ, ಫಲದ ಬಯಕೆಯಿಲ್ಲದೆ, ಭಗವದರ್ಪಣಭಾವದಿಂದ ಆಚರಿಸಿದಾಗ ಅದನ್ನು ಸಾತ್ವಿಕ ತಪಸ್ಸು ಎನ್ನುತ್ತಾರೆ.

ತಪಸ್ಸಿನ ಹಿಂದೆ ಶ್ರೇಷ್ಠವಾದ ಶ್ರದ್ಧೆ-ಪ್ರಾಮಾಣಿಕತೆ ಇದ್ದರೆ ಅದು ಸಾತ್ವಿಕ ತಪಸ್ಸಾಗುತ್ತದೆ. ಭಗವಂತನ ಪಾರಮ್ಯದ ಎಚ್ಚರದಿಂದ, ಭಗವಂತ ಪ್ರೀತನಾಗಲಿ ಎನ್ನುವ ಅನುಸಂಧಾನದಿಂದ ಮಾಡುವ ಪ್ರತಿಯೊಂದು ಕ್ರಿಯೆ-ಸಾತ್ವಿಕ ಕ್ರಿಯೆ ಎನಿಸುತ್ತದೆ. ಉದಾಹರಣೆಗೆ ಗುರುವಿಗೆ ನಮಸ್ಕರಿಸುವಾಗ ಆ ಗುರುವಿನ ಅಂತರ್ಗತನಾಗಿರುವ ಭಗವಂತನಿಗೆ ನಮಸ್ಕರಿಸುತ್ತಿದ್ದೇನೆ ಎನ್ನುವ ಅನುಸಂಧಾನ. ಹೀಗೆ ನಮ್ಮ ಪ್ರತಿಯೊಂದು ಕ್ರಿಯೆಯ ಹಿಂದೆ ಭಗವದರ್ಪಣ ಬುದ್ಧಿ ಇರಬೇಕು. ಮಂತ್ರಗಳು ಹೇಳುವುದೂ ಇದನ್ನೆ . “ಅನೇನ ಭಗವಾನ್ ಗೋಪಾಲಕೃಷ್ಣ ಪ್ರಿಯತಃ-ಶ್ರೀ ಕೃಷ್ಣಾರ್ಪಣ ಮಸ್ತು” ಎಂದು ಹೇಳುವಾಗ ನಮ್ಮಲ್ಲಿ ಕೂಡ ಪೂರ್ಣ ಅರ್ಪಣಾ ಭಾವ ತುಂಬಿರಬೇಕು. ಇಂತಹ ತಪಸ್ಸು ಸಾತ್ವಿಕ ತಪಸ್ಸೆನಿಸುತ್ತದೆ.    

ತ್ ಕಾರಮಾನಪೂಜಾರ್ಥಂ ತಪೋ ಡಂಭೇನ ಚೈವ ಯತ್
ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್                      ೧೮

ತ್ ಕಾ ಮಾನ ಪೂಜಾರ್ಥಂ ತಪಃ  ಡಂಭೇಚ ಏವ  ಯತ್
ಕ್ರಿಯತೇ ತತ್ ಇಹ ಪ್ರೋಕ್ತಮ್  ರಾಜಸಂ ಚಲಮ್ ಅಧ್ರುವಮ್ – ಮನ್ನಣೆ, ಹೊಗಳಿಕೆ ಮತ್ತು ಗೌರವಗಳಿಗಾಗಿ ಬೂಟಾಟಿಕೆಯಿಂದ ಆಚರಿಸುವ, ನೆಲೆ ಇಲ್ಲದ, ಬಾಳಿಕೆಯಿಲ್ಲದ ತಪಸ್ಸು ರಾಜಸ ಎನ್ನಿಸುತ್ತದೆ.

ಭಗವಂತನ ಅನುಸಂಧಾನವಿಲ್ಲದೆ, ತನಗೆ ಜನ ಸತ್ಕಾರ ಮಾಡಲಿ ಎಂದು ಸನ್ಮಾನದ ಆಸೆಯಿಂದ ಮಾಡುವ ಎಲ್ಲ ತಪಸ್ಸು ರಾಜಸ ತಪಸ್ಸು. ಈ ರೀತಿ ಡಂಭಾಚಾರದಿಂದ ಮಾಡುವ ತಪಸ್ಸು ಪರಲೋಕಕ್ಕೆ ಸಲ್ಲುವುದಿಲ್ಲ. ಚಪಲದಿಂದ ಮಾಡಿದ ಇಂಥಹ ಕಾರ್ಯದ ಫಲ ಇಹದಲ್ಲೂ ಶಾಶ್ವತವಲ್ಲ.
 ಈ ಶ್ಲೋಕದಲ್ಲಿ ಏವ ಮತ್ತು ಚ-ಕಾರ ಒಟ್ಟಿಗೆ ಬಂದಿದೆ. ಇದು ನಮಗೆ ವಿಶೇಷ ಸಂದೇಶವನ್ನು ಕೊಡುತ್ತದೆ. ಸತ್ಕಾರಕ್ಕಾಗಿಯೂ, ಮಾನಕ್ಕಾಗಿಯೂ, ಡಂಭಕ್ಕಾಗಿಯೂ ಮಾಡುವ ಕ್ರಿಯೆ ರಾಜಸ ಎನಿಸಿದರೆ ; ಭಗವದರ್ಪಣ ಬುದ್ಧಿಯಿಂದ ಮಾಡಿ ಬಯಸದೇ ಸತ್ಕಾರ ಬಂದರೆ, ನಾಲ್ಕು ಜನರಿಗೆ ತಿಳುವಳಿಕೆ ಬರಲಿ ಎಂದು ಜ್ಞಾನ ದಾನದ ಭಾವನೆಯಿಂದ ಪ್ರಚಾರ ಮಾಡಿದರೆ-ಅದು ರಾಜಸವಾಗುವುದಿಲ್ಲ. ಇದನ್ನು ತಿಳಿಸುವುದಕ್ಕೋಸ್ಕರ  ಇಲ್ಲಿ ಚ ಮತ್ತು ಎವಕಾರ ಬಳಸಲಾಗಿದೆ.      

ಮೂಢಗ್ರಾಹೇಣಾSತ್ಮನೋ ಯತ್ ಪೀಡಯಾ ಕ್ರಿಯತೇ ತಪಃ          
ಪರಸ್ಯೋತ್ಸಾದನಾರ್ಥಂ ವಾ ತತ್  ತಾಮಸಮುದಾಹೃತಮ್                 ೧೯

ಮೂಢ ಗ್ರಾಹೇಣತ್ಮನಃ ತ್ ಪೀಡಯಾ ಕ್ರಿಯತೇ ತಪಃ
ಪರಸ್ಯ ಉತ್ಸಾದನರ್ಥಂ ವಾ ತತ್  ತಾಮಸಮ್ ಉದಾಹೃತಮ್ –ದುರಾಗ್ರಹದಿಂದ ತನ್ನ ದೇಹವನ್ನೆ ದಂಡಿಸುವ ಮೂಲಕ, ಅಥವಾ ಆಗದವರನ್ನು ಮುಗಿಸುವುದಕ್ಕಾಗಿ ಮಾಡುವ ತಪಸ್ಸು ತಾಮಸ ತಪಸ್ಸು ಎನ್ನಿಸುತ್ತದೆ.

ತಪ್ಪು ತಿಳುವಳಿಕೆಯಿಂದ, ಭ್ರಮೆಯಿಂದ, ಪರಮಾತ್ಮನ ಅನುಸಂಧಾನವಿಲ್ಲದೆ, ಇನ್ನೊಬ್ಬರು ಹಾಳಾಗಬೇಕು ಎನ್ನುವ ಕೆಟ್ಟ ಭಾವನೆಯಿಂದ, ತನ್ನ ದೇಹದೊಳಗಿರುವ ಭಗವಂತನ ಎಚ್ಚರವಿಲ್ಲದೆ, ದೇಹ ದಂಡನೆ ಮಾಡಿಕೊಂಡು ಮಾಡುವ ತಪಸ್ಸು ತಾಮಸ ತಪಸ್ಸು.

ದಾತವ್ಯಮಿತಿ ಯದ್ ದಾನಂ ದೀಯತೇSನುಪಕಾರಿಣೇ
ದೇಶೇ ಕಾಲೇ ಚ ಪಾತ್ರೇ ಚ ತದ್ ದಾನಂ ಸಾತ್ವಿಕಂ  ಸ್ಮೃತಮ್            ೨೦

ದಾತವ್ಯಮ್ ಇತಿ ಯತ್ ದಾಮ್  ದೀಯತೇ ನುಪಕಾರಿಣೇ
ದೇಶೇ ಕಾಲೇ ಚ ಪಾತ್ರೇ ಚ ತತ್ ದಾಮ್ ಸಾತ್ವಿಕಂ  ಸ್ಮೃತಮ್ –ಪ್ರತ್ಯುಪಕಾರಕ್ಕಾಗಿ ಅಲ್ಲದೆ ಕರ್ತವ್ಯ ದೃಷ್ಟಿಯಿಂದ ಕೊಡುವ ದಾನ, ತಕ್ಕ ದೇಶ-ಕಾಲಗಳಲ್ಲಿ ತಕ್ಕ ವ್ಯಕ್ತಿಗೆ ಕೊಡುವ ದಾನ ಸಾತ್ವಿಕ ಎನಿಸುತ್ತದೆ.

ಯಾವುದೇ ಪ್ರತ್ಯುಪಕಾರದ ನಿರೀಕ್ಷೆ ಇಲ್ಲದೆ, ಆತ್ಮ ಸಂತೋಷದಿಂದ, ಮನಃಪೂರ್ವಕವಾಗಿ, ಪ್ರೀತಿಯಿಂದ, ಯೋಗ್ಯವಾದ ವ್ಯಕ್ತಿಗೆ, ಯೋಗ್ಯವಾದ ಕಾಲದಲ್ಲಿ, ಯೋಗ್ಯವಾದ ಸ್ಥಳದಲ್ಲಿ ಕೊಡುವುದು ನನ್ನ ಕರ್ತವ್ಯ ಅನ್ನುವ ದೃಷ್ಟಿಯಿಂದ ಕೊಡುವ ದಾನ ಸಾತ್ವಿಕ ದಾನ.[ಹೆಚ್ಚಿನ ವಿವರಣೆ : ಅಧ್ಯಾಯ ಹದಿನಾರು ಆರಂಭಿಕ ಶ್ಲೋಕ].

ತ್ ತು  ಪ್ರತ್ತ್ಯುಪಕಾರಾರ್ಥಂ ಫಲಮುದ್ದಿಶ್ಯ ವಾ ಪುನಃ
ದೀಯತೇ ಚ ಪರಿಕ್ಲಿಷ್ಟಂ ತದ್ ರಾಜಸಮುದಾಹೃತಮ್                      ೨೧

ತ್ ತು  ಪ್ರತ್ತ್ಯುಪಕಾರಾರ್ಥಂ ಫಲಮ್ ಉದ್ದಿಶ್ಯ ವಾ ಪುನಃ
ದೀಯತೇ ಚ ಪರಿಕ್ಲಿಷ್ಟಂ ತತ್ ರಾಜಸಮ್ ಉದಾಹೃತಮ್ –ಪ್ರತ್ಯುಪಕಾರಕ್ಕಾಗಿ ಅಥವಾ ಫಲದ ಆಸೆಯಿಂದ, ಕೊಡಬೇಕಲ್ಲ ಎಂದು ಕೊಡುವ ದಾನ ರಾಜಸ ಎನಿಸುತ್ತದೆ.

ಇನ್ನೊಬ್ಬರು ನಮಗೆ ಮುಂದೆ ಉಪಕಾರ ಮಾಡಲಿ ಎಂದು ಅಥವಾ ಹಿಂದೆ ಮಾಡಿದ ಉಪಕಾರಕ್ಕೆ ಪ್ರತಿಯಾಗಿ, ಕೊಡಬೇಕಲ್ಲಾ ಎಂದು ಕೊಡುವುದು. ಕೊಡುವಾಗ ಫಲದ ಬಯಕೆಯಿಂದ ಕೊಡುವುದು ರಾಜಸ ದಾನ.

ಅದೇಶಕಾಲೇ ಯದ್ ದಾನಮಪಾತ್ರೇಭ್ಯಶ್ಚ ದೀಯತೇ
ಅಸತ್ ಕೃತಮವಜ್ಞಾತಂ ತತ್ ತಾಮಸಮುದಾಹೃತಮ್             ೨೨

ಅದೇಶ ಕಾಲೇ ಯತ್ ದಾಮ್ ಅಪಾತ್ರೇಭ್ಯಃ ಚ  ದೀಯತೇ
ಅಸತ್ ಕೃಮ್ ಅವಜ್ಞಾತಮ್  ತತ್ ತಾಮಸಮ್ ಉದಾಹೃತಮ್ – ತಕ್ಕುದಲ್ಲದ ದೇಶ-ಕಾಲದಲ್ಲಿ, ಅನರ್ಹವ್ಯಕ್ತಿಗಳಿಗೆ  ಆದರಿಸದೆ ಹೀಗಳೆದು ನೀಡುವ ದಾನ ತಾಮಸ ಎನಿಸುತ್ತದೆ.

ನಮಗೆ ಬೇಡವಾದುದ್ದನ್ನು ಇನ್ನೊಬ್ಬರಿಗೆ ಸಾಗಹಾಕುವುದಕ್ಕೊಸ್ಕರ ಕೊಡುವುದು; ಯೋಗ್ಯರಲ್ಲದವರಿಗೆ ಬೈದು, ಹೀಯಾಳಿಸಿ, ಅವಮಾನ ಮಾಡಿ  ಕೊಡುವುದು-ತಾಮಸ ದಾನ.

No comments:

Post a Comment