Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, December 4, 2011

Bhagavad GitA Kannada Chapter-15 Shloka 7-11


ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ    
ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ                           

ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ ಕ್ರಾಮತೀಶ್ವರಃ
ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾSಶಯಾತ್           

ಮ ಏವ ಅಂಶಃ ಜೀವಲೋಕೇ ಜೀವಭೂತಃ ಸನಾತನಃ   
ಮನಃ ಷಷ್ಠಾನಿ ಇಂದ್ರಿಯಾಣಿ ಪ್ರಕೃತಿ ಸ್ಥಾನಿ ಕರ್ಷತಿ ||
ಶರೀರಮ್  ಯತ್ ಅವಾಪ್ನೋತಿ ಯತ್ ಚ ಅಪಿ ಉತ್ಕ್ರಾಮತಿ ಈಶ್ವರಃ
ಗೃಹೀತ್ವಾ ಏತಾನಿ ಸಂಯಾತಿ ವಾಯುಃ ಗಂಧಾನ್ ಇವ ಆಶಯಾತ್ –-ಈ ದೇಹದಲ್ಲಿರುವ ಅಳಿವಿರದ ಜೀವನು ನನ್ನದೇ  ಒಂದು ತುಣುಕಿನಂತೆ; [ನನ್ನ ಭಿನ್ನಾಂಶ; ನನ್ನ ಪ್ರತಿಬಿಂಬ]. ಅವನು ಶರೀರದಲ್ಲಿರುವ ಐದು ಜ್ಞಾನೇಂದ್ರಿಯಗಳನ್ನು  ಆರನೆಯ ಮನಸ್ಸಿನ ಜತೆಗೆ ವಿಷಯಗಳತ್ತ ಹರಿಯಗೊಡುತ್ತಾನೆ. ವಾಸ್ತವವಾಗಿ ಜೀವ  ಈ ಶರೀರವನ್ನು ಹೊಕ್ಕಾಗ ಮತ್ತು ಬಿಟ್ಟು ಹೊರಟಾಗ ಸರ್ವಶಕ್ತನಾದ ಭಗವಂತನೆ ಈ ಇಂದ್ರಿಯಗಳನ್ನು ನಿಯಂತ್ರಿಸುತ್ತ ಜತೆಗೆ ಬರುತ್ತಾನೆ; ಗಾಳಿ ಹೂವಿನ ಕಂಪನ್ನು ಹೊತ್ತು ಬಂದಂತೆ. [ಭಗವಂತ ಈ ಜೀವದ ಶರೀರವನ್ನು ಹೊಕ್ಕಾಗ ಮತ್ತು ಹೊರಬಂದಾಗ ಐದು ಜ್ಞಾನೇಂದ್ರಿಯಗಳನ್ನು ಆರನೆಯ ಮನಸ್ಸಿನ ಜತೆಗೆ ತನ್ನಂಕೆಯಲ್ಲಿರಿಸಿಕೊಳ್ಳುತ್ತಾನೆ. ಜೀವನಿಗೆ ವಿಷಯಾನುಭವ ನೀಡುವಾಗ ಇವುಗಳನ್ನು ಜತೆಗೊಯ್ಯುತ್ತಾನೆ.-ಗಾಳಿ ಹೂವಿಂದ ಕಂಪನ್ನು ಜತೆಗೊಯ್ಯುವಂತೆ.]

ಈ ಶ್ಲೋಕ ಭಗವಂತ ಮತ್ತು ಜೀವ ಎರಡನ್ನೂ ವಿವರಿಸುವ ಶ್ಲೋಕ. ಇಲ್ಲಿ ನಮಗೆ ಸ್ವಲ್ಪ ಗೊಂದಲವೆನಿಸುವ ಮಾತನ್ನು ಕೃಷ್ಣ  ಹೇಳುತ್ತಾನೆ. ಈ ಮಾತನ್ನು ಬೇರೆ ಬೇರೆ ಮುಖದಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳದೇ ಇದ್ದರೆ ಎಲ್ಲವೂ ಅಸ್ಪಷ್ಟವೆನಿಸುತ್ತದೆ. ಮೇಲ್ನೋಟದಲ್ಲಿ ನೋಡಿದರೆ ಕೃಷ್ಣ ಹೇಳುತ್ತಾನೆ: “ಎಲ್ಲ ಜೀವರೂ ನನ್ನದೇ ಅಂಶ” ಎಂದು. ಇಲ್ಲಿ ಅಂಶ ಎನ್ನುವಲ್ಲಿ ಎರಡು ಮುಖವಿದೆ. ಒಂದು ಸ್ವರೂಪಭೂತ ಅಂಶ ಮತ್ತು ಇನ್ನೊಂದು ಭಿನ್ನಾಂಶ. ಭಗವಂತ ಜ್ಞಾನ ಸ್ವರೂಪ, ಈ ಜೀವನೂ ಕೂಡ ಜ್ಞಾನ ಸ್ವರೂಪ. ಭಗವಂತ ಮಹಾ ಬೆಳಕಾದರೆ ಜೀವ ಬೆಳಕಿನ ಕಿಡಿ. ಭಗವಂತ ಬಿಂಬವಾದರೆ ಜೀವ ಪ್ರತಿಬಿಂಬ. ಇದು ಸನಾತನ- ಅನಾದಿ ಅನಂತವಾಗಿರುವಂಥದ್ದು.  ಜೀವ ಭಗವಂತನ ಪ್ರತಿಬಿಂಬ ಅಂದರೆ ಅದು ಭಗವಂತನ  ಭಿನ್ನಾಂಶ. ಈ ಜೀವನೊಳಗೆ ‘ಜೀವನಾಗಿ’ ಧಾರಣೆ ಮಾಡಿಕೊಂಡು ಉಸಿರಾಡಿಸುವವ  ಬಿಂಬರೂಪಿ ಭಗವಂತ. ಅದು ಭಗವಂತನ ಸ್ವರೂಪಾಂಶ. ಈ ರೀತಿ ಜೀವ ಹೊರಗಿನ ಪಂಚಭೂತವನ್ನು ಅನುಭವಿಸುವ ಐದು ಇಂದ್ರಿಯ, ಮತ್ತು ಈ ಅನುಭವವನ್ನು  ಒಳಗಿನ ಜೀವಕ್ಕೆ ಮುಟ್ಟಿಸುವ ಆರನೇ ಮನಸ್ಸಿನೊಂದಿಗೆ, ಬಿಂಬರೂಪಿ ಭಗವಂತನ ಧಾರಣೆಯಲ್ಲಿ, ತಾಯಿಯ ಗರ್ಭದಲ್ಲಿ ರೂಪುಗೊಳ್ಳುತ್ತಿರುವ ಸ್ಥೂಲ ಶರೀರವನ್ನು ಪ್ರವೇಶ ಮಾಡುತ್ತಾನೆ(ಭಗವಂತ ಪ್ರವೇಶ ಮಾಡಿಸುತ್ತಾನೆ). ಹೀಗೆ ಪ್ರವೇಶ ಮಾಡಿದ ಜೀವಕ್ಕೆ ಬಿಂಬರೂಪಿ ಭಗವಂತ ಸರ್ವೆಂದ್ರಿಯದಲ್ಲಿದ್ದು, ಇಂದ್ರಿಯಾಭಿಮಾನಿ ದೇವತೆಗಳ ಮುಖೇನ ಅನುಭವ ಕೊಡುತ್ತಾನೆ. ಜೀವ ಭಗವಂತನ ಅನುಗ್ರಹದಿಂದ ವಿಷಯಗಳನ್ನು ಅನುಭವಿಸಲು ಆರಂಭಿಸುತ್ತಾನೆ.
ಒಬ್ಬ ಜೀವನಿಗೆ ಒಟ್ಟು ಮೂರು ಶರೀರಗಳಿರುತ್ತವೆ. ಒಂದು ಕಾಣುವ ಸ್ಥೂಲ ಶರೀರ, ಅದರೊಳಗೆ ಸೂಕ್ಷ್ಮ ಶರೀರ(ಅನಿರುದ್ಧ ಶರೀರ) ಮತ್ತು ಅದರೊಳಗೆ ಲಿಂಗ ಶರೀರ. ಈ ಸ್ಥೂಲ ಶರೀರವನ್ನು ಪ್ರವೇಶಿಸುವ ಸೂಕ್ಷ್ಮಶರೀರಿ ಜೀವಕ್ಕೆ ಎಲ್ಲ ಇಂದ್ರಿಯಗಳೂ ಇರುತ್ತವೆ. ಆದ್ದರಿಂದ ಈ ಜೀವ ತನ್ನ ಪೂರ್ವಜನ್ಮದ ನೆನಪನ್ನು ಅಂತರಂಗದಲ್ಲಿಟ್ಟುಕೊಂಡು ಗರ್ಭವನ್ನು ಪ್ರವೇಶಿಸುತ್ತಾನೆ. ಪೂರ್ವ ಜನ್ಮದ ಅಧ್ಯಾತ್ಮ ಸಾಧನೆ ಈ ಸೂಕ್ಷ್ಮ ಜೀವದ ಮನಸ್ಸಿನಲ್ಲಿ ಪೂರ್ಣವಾಗಿ ಉಳಿದಿರುತ್ತದೆ. ಇದಕ್ಕಾಗಿ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಾಗುವುದಿಲ್ಲ, ಅದು ಸದಾ ನಮ್ಮೊಂದಿಗೆ ಸಾವಿನಲ್ಲೂ ಜೊತೆಯಾಗಿ ಬರುತ್ತದೆ ಎಂದು ಹೇಳುವುದು. ಏಕೆಂದರೆ ಸಾವು ಕೇವಲ ಸ್ಥೂಲ ಶರೀರಕ್ಕೆ ಹೊರತು ಸೂಕ್ಷ್ಮಶರೀರಕ್ಕಲ್ಲ. ಸಂಮೋಹನ ನಿದ್ರೆಯಲ್ಲಿ(hypnotism) ಜೀವದ ಪೂರ್ವಜನ್ಮದ ವಿಷಯವನ್ನು ತಿಳಿಯಲು ಸಾಧ್ಯವಾಗುವುದು ಈ ಕಾರಣದಿಂದ. ನಮಗೆ ಕೆಲವೊಮ್ಮೆ ಒಬ್ಬರನ್ನು ನೋಡಿದಾಗ ಹಿಂದೆ ತುಂಬ ಪರಿಚಿತರಾಗಿ ನಮ್ಮೊಂದಿಗಿದ್ದವರಂತೆ ಕಂಡರೆ-ಅದಕ್ಕೆ ಪೂರ್ವ ಜನ್ಮದ ನೆನಪೂ ಒಂದು  ಕಾರಣವಾಗಿರಬಹುದು. ಈ ನೆನಪು ಒಳಗಿರುವ ಸೂಕ್ಷ ಶರೀರದಲ್ಲಿ ಮಾತ್ರ ಜಾಗೃತವಾಗಿರುತ್ತದೆ-ಆದರೆ ಸ್ಥೂಲ ಇಂದ್ರಿಯದಲ್ಲಿ ಇದು ಜಾಗೃತವಾಗಿರುವುದಿಲ್ಲ. ಹೀಗೆ ಜೀವ ಸ್ಥೂಲ ಶರೀರವನ್ನು ಪ್ರವೇಶ ಮಾಡುವಾಗ ಇಂದ್ರಿಯಗಳನ್ನು ಕರ್ಷಣೆ ಮಾಡಿಕೊಂಡು ಬರುತ್ತಾನೆ ಮತ್ತು ಹೋಗುವಾಗ ಕರ್ಷಣೆ ಮಾಡಿಕೊಂಡು ಹೋಗುತ್ತಾನೆ. ಈ ಕ್ರಿಯೆಯಲ್ಲಿ ಜೀವ ಸ್ವತಂತ್ರನಲ್ಲ. ಇದನ್ನು ಮಾಡಿಸುವವ ‘ಈಶ್ವರ’. ಇಲ್ಲಿ ಈಶ್ವರ ಎಂದರೆ ಸರ್ವ ಸಮರ್ಥ ಭಗವಂತ ಎಂದರ್ಥ. ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ  “ಈಶ್ವರಃ ಈಶನಶೀಲೋ ನಾರಾಯಣಃ” ಎಂದಿದ್ದಾರೆ. ಇಲ್ಲಿ ‘ಈಶನಶೀಲಃ’ ಎಂದರೆ ಸರ್ವಸಮರ್ಥ ಎಂದರ್ಥ.
ಈ ಶ್ಲೋಕದಲ್ಲಿ ಶಬ್ದಗಳ ಚಮತ್ಕಾರವಿದೆ. ‘ಅವಾಪ್ನೋತಿ’ ಎನ್ನುವಲ್ಲಿ ‘ಅವ’ ಅನ್ನುವುದು ಉಪಸರ್ಗ. ಹದಿನೈದು ಬೇಲಿಗಳೊಂದಿಗೆ ಜೀವ ದೇಹವನ್ನು ಪ್ರವೇಶಿಸುವುದು ಜೀವದ ಬಂಧನ. ಇದು ಒಂದು ರೀತಿಯ ‘ಅಧಃಪಾತ’. ಆದರೆ ಇದು ಊರ್ಧ್ವಗಮನಕ್ಕೆ ಪೂರ್ವ ಜೀವದ ಅಧಃಪಾತ. ಏಕೆಂದರೆ ಜೀವ ಮೋಕ್ಷ ಸೇರಲು ಈ ಸಾಧನಾ ಶರೀರ ಬೇಕೇಬೇಕು. ಇದೇ ರೀತಿ ಜೀವ ದೇಹವನ್ನು ಬಿಟ್ಟು ಹೊರ ಹೋಗುವುದನ್ನು ‘ಉತ್ಕ್ರಾಮತಿ’ ಎಂದಿದ್ದಾರೆ. ಸಾವು ಎಂದರೆ ಜೀವನನ್ನು ಭಗವಂತ ಸ್ಥೂಲ ಶರೀರದಿಂದ ಆಚೆ ಕರೆದುಕೊಂಡು ಹೋಗುವುದು. ಇದು ಅಮಂಗಳವಲ್ಲ. ಅದಕ್ಕಾಗಿ ಇಲ್ಲಿ ‘ಉತ್’ ಎನ್ನುವ ಉಪಸರ್ಗವನ್ನು ಬಳಸಲಾಗಿದೆ. ಇನ್ನು ಭಗವಂತ ಜೀವನನ್ನು ಕರೆತರುವುದನ್ನು ಇಲ್ಲಿ ‘ಸಂಯಾತಿ’ ಎಂದಿದ್ದಾರೆ. ಸಂ-ಎಂದರೆ ಸ್ವಯಂ, ಸ್ವೇಚ್ಛಾಯ, ಸ್ವಾತಂತ್ರೇಣ. ಎಲ್ಲವೂ ಭಗವಂತನ ಅಧೀನ, ಜೀವ ಸ್ವತಂತ್ರ ಅಲ್ಲ, ಕೇವಲ ಭಗವಂತ ಸ್ವತಂತ್ರ ಅನ್ನುವುದನ್ನು ಇದು ಸೂಚಿಸುತ್ತದೆ. ಜೀವನಿಗೆ ಹುಟ್ಟುವುದಕ್ಕಾಗಲಿ, ಸಾಯುವುದಕ್ಕಾಗಲಿ ಸ್ವಾತಂತ್ರ್ಯವಿಲ್ಲ. ಎಲ್ಲವೂ ಭಗವಂತನ ನಿಯಮನದಂತೇ ನಡೆಯುತ್ತದೆ.
ಹೇಗೆ ಜೀವ ತನ್ನ ಇಂದ್ರಿಯಗಳೊಂದಿಗೆ ಭಗವಂತನ ಜೊತೆಗೆ ಒಳ ಬರುತ್ತದೆ ಮತ್ತು ಹೊರ ಹೋಗುತ್ತದೆ ಎನ್ನುವುದನ್ನು ಹೂವಿನ ಸುಗಂಧದ ದೃಷ್ಟಾಂತದೊಂದಿಗೆ ಕೃಷ್ಣ ವಿವರಿಸಿದ್ದಾನೆ. ಅರಳಿ ನಿಂತಿರುವ ಹೂವಿನ ಸುಗಂಧ ಹೇಗೆ ನಮ್ಮ ಮೂಗನ್ನು ಬಂದು ಪ್ರವೇಶಿಸುತ್ತದೆಯೋ ಹಾಗೆ ಈ ಜೀವದ ಗತಿ. ಅದು ಕಾಣುವುದಿಲ್ಲ. ಹೂವಿನ ಸುಗಂಧದ ಸೂಕ್ಷ್ಮಾಣುಗಳು ನಮ್ಮ ಮೂಗನ್ನು ಪ್ರವೇಶಿಸುವುದು ನಮಗೆ ತಿಳಿಯುವುದು ಕೇವಲ ಸುವಾಸನೆಯಿಂದ, ಹೊರತು ಭೌತಿಕವಾಗಿ ಅಲ್ಲ. ಜೀವದ ಈ ಎಲ್ಲಾ ಗತಿ ಕೂಡ ಇದೇ ರೀತಿ. ಅದು ಕಾಣುವುದಿಲ್ಲ. ಇದನ್ನೇ ಇನ್ನೂ ಸ್ಪಷ್ಟವಾಗಿ ಕೃಷ್ಣ ಮುಂದಿನ ಮೂರು ಶ್ಲೋಕದಲ್ಲಿ ವಿವರಿಸುತ್ತಾನೆ. 

                                           ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ       
                                           ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ              

ಶ್ರೋತ್ರಮ್  ಚಕ್ಷುಃ ಸ್ಪರ್ಶನಮ್  ಚ ರಸನಮ್  ಘ್ರಾಣಮ್ ಏವ  ಚ   
ಅಧಿಷ್ಠಾಯ ಮನಃ ಚ ಅಮ್  ವಿಷಯಾನ್ ಉಪಸೇವತೇ—ಕಿವಿ, ಕಣ್ಣು, ತೊಗಲು, ನಾಲಿಗೆ, ಮೂಗು ಮತ್ತು ಮನಸ್ಸಿನಲ್ಲಿ ನೆಲೆನಿಂತು 'ಇವನು' ವಿಷಯಗಳನ್ನು ಸವಿಯುತ್ತಾನೆ.

ಭಗವಂತ ನಮ್ಮ ಪ್ರತಿಯೊಂದು ಇಂದ್ರಿಯದಲ್ಲಿ ನಿಯಾಮಕನಾಗಿ ಆಯಾ ರೂಪದಲ್ಲಿ ನಿಂತು, ವಿಷಯಗಳನ್ನು ದುಃಖದ ಲೇಪವಿಲ್ಲದೆ  ಗ್ರಹಿಸುತ್ತಾನೆ ಮತ್ತು ನಮಗೆ ವಿಷಯದ ಅನುಭವವನ್ನು ಕೊಡುತ್ತಾನೆ. ಈ ಶ್ಲೋಕ ಭಗವಂತನನ್ನು ಹೇಳುವುದರಿಂದ ಇಲ್ಲಿ ‘ಉಪ-ಸೇವತೆ’  ಮತ್ತು ‘ಅಧಿಷ್ಠಾಯ’ ಎನ್ನುವ ಎರಡು ವಿಶೇಷ ಪದಗಳನ್ನು ಬಳಸಿದ್ದಾರೆ. ಉಪ ಅಂದರೆ –ಉಪರಿ=ಎತ್ತರ. ನಾವು ಸುಖ-ದುಃಖದಲ್ಲಿ ಮುಳುಗಿ ವಿಷಯ ಭೋಗಿಸಿದರೆ, ಭಗವಂತ ಎಲ್ಲವನ್ನು ಮೀರಿನಿಂತು ದುಃಖದ ಲೇಪವಿಲ್ಲದೆ ಎಲ್ಲವನ್ನು ಅನುಭವಿಸುತ್ತಾನೆ. ಭಗವಂತ ಆಯಾ ಇಂದ್ರಿಯದಲ್ಲಿ ವಿಶೇಷ ರೂಪದಲ್ಲಿ ಸನ್ನಿಹಿತನಾಗಿ ನಿಯಮಿಸುವುದರಿಂದ ಇಲ್ಲಿ ‘ಅಧಿಷ್ಠಾಯ’ ಎನ್ನುವ ಪದವನ್ನು ಬಳಸಲಾಗಿದೆ.  ಏವ ಮತ್ತು ಚ ಇವೆರಡನ್ನು ಈ ಶ್ಲೋಕದಲ್ಲಿ ಒಟ್ಟಾಗಿ ಬಳಸಲಾಗಿದೆ. ಇದು ಭಗವಂತನ ವಿಶೇಷ ಗುಣವನ್ನು ಬಿಂಬಿಸುತ್ತದೆ. ಆ+ಈ+ವ+ಚ=ಏವಚ( set of abbreviations-ಸಂಕ್ಷೇಪ-ಪದ)-ಅಂದರೆ ಯಾವುದೇ ದೋಷವಿಲ್ಲದ, ಸರ್ವಗುಣಗಳಿಂದ ಸಮುಚ್ಚಿತವಾದ ಜ್ಞಾನಾನಂದಮಯ ಭಗವಂತ.  

                                  ಉತ್ ಕ್ರಾಮಂತಂ ಸ್ಥಿತಂ ವಾSಪಿ ಭುಂಜಾನಂ ವಾ ಗುಣಾನ್ವಿತಮ್
                                  ವಿಮೂಢಾ ನಾನುಪಶ್ಯಂತಿಶ್ಯಂತಿ ಜ್ಞಾನಚಕ್ಷುಷಃ                       ೧೦

ತ್ ಕ್ರಾಮಂತಮ್  ಸ್ಥಿತಮ್  ವಾಪಿ ಭುಂಜಾನಮ್  ವಾ ಗುಣನ್ವಿತಮ್
ವಿಮೂಢಾಃ ನ ಅನುಪಶ್ಯಂತಿಶ್ಯಂತಿ ಜ್ಞಾನ ಚಕ್ಷುಷಃ –ದೇಹ ತೊರೆದು ತೆರಳುವ, ದೇಹದಲ್ಲಿರುವ, ಅಥವಾ ಒಳಿತಿನ ಸಾರವನ್ನು ಸವಿಯುವ ಇವನನ್ನು ತಿಳಿಗೇಡಿಗಳು ತಿಳಿಯಲಾರರು. ತಿಳಿಗಣ್ಣು ತೆರೆದವರು ತಿಳಿಯಬಲ್ಲರು.

ಈ ಶ್ಲೋಕದಲ್ಲಿ ಬಳಸಿರುವ  ‘ಗುಣಾನ್ವಿತಮ್’ ಎನ್ನುವ ಪದ ಸ್ಪಷ್ಟವಾಗಿ ನಮಗೆ ತಿಳಿಸುತ್ತದೆ-ಇದು ಭಗವಂತನನ್ನು ಹೇಳುವ ಶ್ಲೋಕ ಎಂದು. ಜೀವನನ್ನು ದೇಹಕ್ಕೆ ತರುವ, ಎಚ್ಚರ ಕನಸು ನಿದ್ದೆ ಎನ್ನುವ ಮೂರು ಅವಸ್ಥೆಗಳಲ್ಲಿ ಜೀವನಿಗೆ ವಿಷಯ ಭೋಗವನ್ನು ಕೊಡುವ ಭಗವಂತ-ತಾನು ಸದಾ ಶುಭ ಭೋಗವನ್ನುಣ್ಣುವವ. ದೇಹದಿಂದ ಹೊರ ಹೋಗುವಾಗ, ದೇಹದಲ್ಲಿರುವಾಗ-ಎಲ್ಲವನ್ನು ಮಾಡಿಸುವವ ಆ ಭಗವಂತ. ಆತ ನಮ್ಮೊಳಗೇ ಇದ್ದರು ಕೂಡ ವಿಮೂಢರಿಗೆ ಇದು ತಿಳಿಯುವುದಿಲ್ಲ. ಜ್ಞಾನದ ಕಣ್ಣುತೆರೆದವರು ಮಾತ್ರ ಇದನ್ನು ತಿಳಿಯಬಲ್ಲರು. ಇಲ್ಲಿ ಕೃಷ್ಣ ‘ವಿಮೂಢ’ ಮತ್ತು  ‘ಜ್ಞಾನಚಕ್ಷುಷಃ’ ಎನ್ನುವ ಎರಡು ವಿಶೇಷ ಪದಗಳನ್ನು ಬಳಸಿದ್ದಾನೆ. ‘ಮೂಢರು’ ಎಂದರೆ ಸತ್ಯವನ್ನು ತಪ್ಪಾಗಿ ತಿಳಿದವರು. ಇವರು ಯಥಾರ್ಥಜ್ಞಾನ ಮರೆಯಾಗಿ ವಿಪರೀತಜ್ಞಾನದಲ್ಲೇ ಬದುಕುತ್ತಿರುತ್ತಾರೆ. ‘ವಿ-ಮೂಢ’ ಎಂದರೆ ಎಂದೂ ತಮ್ಮ ತಪ್ಪನ್ನು ತಿಳಿಯದೆ, ತಪ್ಪನ್ನೇ ಸರಿಯೆಂದು ಸದಾ ವಿಪರೀತ ಜ್ಞಾನದಲ್ಲೇ ಬದುಕುವವರು. ಇವರಿಗೆ ಭಗವಂತನನ್ನು ಎಂದೆಂದಿಗೂ ತಿಳಿಯಲು ಸಾಧ್ಯವಿಲ್ಲ. ಭಗವಂತನನ್ನು ಕಾಣುವ ಕ್ಷಮತೆ ಉಳ್ಳವರು ಜ್ಞಾನಚಕ್ಷುಷರು. ಅಂದರೆ ಶಾಸ್ತ್ರವನ್ನು ಓದಿ ಅದರಿಂದ ಅರಿವಿನ ಒಳಗಣ್ಣು ತೆರೆದವರು. ಇವರು ಭಗವಂತನನ್ನು ತಿಳಿಯಬಲ್ಲರು ಮತ್ತು ತಮ್ಮ ಸ್ವರೂಪಭೂತವಾದ ಕಣ್ಣಿನಿಂದ ಭಗವಂತನನ್ನು ಕಾಣಬಲ್ಲರು.

                                       ಯತಂತೋ ಯೋಗಿನಶ್ಚೈನಂ ಪಶ್ಯಂತ್ಯಾತ್ಮನ್ಯವಸ್ಥಿತಮ್
                                       ಯತಂತೋSಪ್ಯಕೃತಾತ್ಮಾನೋ ನೈನಂ ಪಶ್ಯಂತ್ಯಚೇತಸಃ  ೧೧


ತಂತೋ ಯೋಗಿನಃ ಚ ಎನಮ್  ಪಶ್ಯಂತಿ ಆತ್ಮನಿ ಅವಸ್ಥಿತಮ್
ತಂತಃ ಅಪಿ ಅಕೃತ ಆತ್ಮಾನಃ  ನ ಏನಮ್ಶ್ಯಂತಿ ಅಚೇತಸಃ –ಪ್ರಯತ್ನಶೀಲರಾದ ಸಾಧಕರು ತಮ್ಮೊಳಗಿರುವ ‘ಇವನನ್ನು’ ಕಾಣುತ್ತಾರೆ. ತಿಳಿಯಾದ ತಿಳಿವಿರದ ತಿಳಿಗೇಡಿಗಳು ಪ್ರಯತ್ನಿಸಿಯೂ ಇವನನ್ನು ಕಾಣಲಾರರು.

ಭಗವಂತನನ್ನು ಕಾಣಬೇಕಾದರೆ ಕೇವಲ ಶಾಸ್ತ್ರಾಭ್ಯಾಸ ಮಾಡಿದರೆ ಸಾಲದು. ಜ್ಞಾನ ಪಡೆದು ಜ್ಞಾನದಿಂದ ನಿರಂತರ ಸಾಧನೆ ಅಗತ್ಯ. ಧ್ಯಾನ ಯೋಗದಿಂದ ನಿರಂತರ ಭಗವಂತನನ್ನು ಕಾಣುವ ಪ್ರಯತ್ನ ಮಾಡಿದಾಗ- ಆತ್ಮಸಾಕ್ಷಾತ್ಕಾರವಾಗುತ್ತದೆ[ಧ್ಯಾನದ ಕುರಿತು ಅಧ್ಯಾಯ ಆರರಲ್ಲಿ ಈಗಾಗಲೇ ನಾವು ಸಾಕಷ್ಟು ಚರ್ಚಿಸಿದ್ದೇವೆ]. ಭಗವಂತನನ್ನು ಕಾಣಲು ನಮ್ಮ ಪ್ರಯತ್ನದೊಂದಿಗೆ ಆತನ ಅನುಗ್ರಹವೂ ಬೇಕು. ಇಲ್ಲದಿದ್ದರೆ ಯಾವ ಮಹಾಪ್ರಯತ್ನದಿಂದಲೂ ಭಗವಂತನನ್ನು ಕಾಣಲು ಸಾಧ್ಯವಿಲ್ಲ. ಉದಾಹರಣೆಗೆ ನಾವು ಹೊಲವನ್ನು ಚನ್ನಾಗಿ ಉತ್ತು, ಹದಗೊಳಿಸಿ, ಗೊಬ್ಬರ ಹಾಕಿ ಉತ್ತಮ ದರ್ಜೆಯ ಬೀಜ ಬಿತ್ತಬಹುದು, ಆದರೆ ಮಳೆ ಸರಿಯಾಗಿ ಬಾರದಿದ್ದರೆ? ಅತಿ ಮಳೆ ಬಂದು ಕೊಚ್ಚಿಕೊಂಡು ಹೋದರೆ? ಇದೆಲ್ಲವೂ ದೈವಾನುಗ್ರಹ. ಅದಕ್ಕಾಗಿ ನಿರಂತರ ಪ್ರಯತ್ನದೊಂದಿಗೆ ಭಗವಂತನಲ್ಲಿ ಶರಣಾಗತಿ ಬಹಳ ಮುಖ್ಯ. “ನನ್ನ ಮನಸ್ಸನ್ನು ಸ್ವಚ್ಛಮಾಡು, ಸ್ವಚ್ಛವಾದ ಮನಸ್ಸಿನಲ್ಲಿ ನೀನು ಬಂದು ನೆಲೆಸು” ಎಂದು ಆ ಭಗವಂತನನ್ನು ಪ್ರಾರ್ಥಿಸಬೇಕು. ಶುದ್ಧವಾದ ಸಾತ್ವಿಕ ಮನಸ್ಸಿಗೆ 'ವಸುದೇವ' ಎನ್ನುತ್ತಾರೆ. ಆ ವಸುದೇವನಿಗೆ ಕಾಣಿಸಿಕೊಳ್ಳುವ ಭಗವಂತ ವಾಸುದೇವ. ಸಮಸ್ತಶಾಸ್ತ್ರ ಓದಿ ಅಶುದ್ಧಮನಸ್ಸಿನವನಾಗಿದ್ದರೆ (ಅಕೃತಾತ್ಮ=ಅಶುದ್ಧ ಬುದ್ಧಯಃ)- ಎಷ್ಟೇ ಪ್ರಯತ್ನ ಮಾಡಿದರೂ ಭಗವಂತ ಒಲಿಯಲಾರ. ಇದನ್ನೇ ‘ಮಡಿ’ ಎನ್ನುವುದು. ಮಾನಸಿಕವಾಗಿ ಮಡಿಯಾಗಿ ನಾವು ಪ್ರಯತ್ನ ಮಾಡಬೇಕು. “ನಿರಂತರ ಜ್ಞಾನಪೂರ್ವಕ ಪ್ರಯತ್ನದಿಂದ ನಿನ್ನ ಅತ್ಯಂತ ಸಮೀಪವಿರುವ, ನಿನ್ನಂತರಂಗದೊಳಗೆ ನಿನ್ನ ಜೀವಸ್ವರೂಪದೊಳಗಿರುವ ಭಗವಂತನನ್ನು ಕಾಣು” ಎನ್ನುತ್ತಾನೆ ಕೃಷ್ಣ. ಹಿಂದಿನ ಶ್ಲೋಕದಲ್ಲಿ ಅಯಮ್(ಎದುರಿಗಿರುವ) ಎಂದ ಕೃಷ್ಣ, ಇಲ್ಲಿ ‘ಏನಮ್’(ನಿನ್ನ ಅತ್ಯಂತ ಸಮೀಪವಿರುವ) ಎಂದ. ನಾವು ಭಗವಂತನನ್ನು ಎಲ್ಲೋ ಹುಡುಕುವುದು ಬೇಡ. ಆತ ನಮ್ಮ ಜೀವ ಸ್ವರೂಪದೊಳಗೇ ಬಿಂಬ ರೂಪನಾಗಿ ನೆಲೆಸಿದ್ದಾನೆ. ಆತನ ನೆಲೆಯಾದ ನಮ್ಮ ಜೀವಸ್ವರೂಪವನ್ನು ತಿಳಿದಾಗ ಆತ ನಮಗೆ ಕಾಣಿಸುತ್ತಾನೆ.      

1 comment:

  1. We are urgently in need of KlDNEY donors for the sum of $500,000.00 USD, Email for more details:
    hospitalcarecenter@gmail.com
    WhatsApp +91 779-583-3215

    ReplyDelete