Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, November 20, 2011

Bhagavad Gita Kannada Chapter-14 Shloka-17


ನಮ್ಮಲ್ಲಿ ಯಾವ ಗುಣ ಪೂರ್ಣವಾಗಿ ಜಾಗೃತವಾಗಿದೆ ಎಂದು ಹೇಗೆ ತಿಳಿಯುತ್ತದೆ ಎನ್ನುವುದರೆ ವಿವರಣೆಯನ್ನು, ಮುಂದಿನ ಶ್ಲೋಕದಲ್ಲಿ ಉಪಸಂಹಾರ ರೂಪದಲ್ಲಿ ಕೃಷ್ಣ ವಿವರಿಸಿದ್ದಾನೆ .

ಸತ್ತ್ವಾತ್ ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ  
ಪ್ರಮಾದಮೋಹೌ ತಮಸೋ ಭವತೋSಜ್ಞಾನಮೇವ ಚ                  ೧೭

ಸತ್ತ್ವಾತ್ ಸಂಜಾಯತೇ ಜ್ಞಾನಮ್ ರಜಸಃ  ಲೋಭಃ  ಏವ ಚ           
ಪ್ರಮಾದ ಮೋಹೌ ತಮಸಃ  ಭವತಃ ಅಜ್ಞಾನಮ್ ಏವ ಚ—ಸತ್ವದಿಂದ ತಿಳಿವು ತಿಳಿಯಾಗುತ್ತದೆ. ರಜಸ್ಸಿನಿಂದ ಜಿಪುಣತನ ಬೆಳೆಯುತ್ತದೆ. ತಮಸ್ಸಿನಿಂದ ಮೈಮರೆವು, ಭ್ರಾಂತಿ ಮತ್ತು ತಿಳಿಗೇಡಿತನ ಉಂಟಾಗುತ್ತದೆ.

ಸತ್ತ್ವಾತ್ ಸಂಜಾಯತೇ ಜ್ಞಾನಮ್”- ಗೀತೆಯ ಈ ಸಾಲು ಬಹಳ ಮುಖ್ಯವಾದ ಸಂದೇಶವನ್ನು ಕೊಡುತ್ತದೆ. ಯಾವಾಗ ಮನುಷ್ಯನಿಗೆ ಉಳಿದ ಎಲ್ಲಾ ಸಂಗತಿಗಳಿಗಿಂತ ಜ್ಞಾನ ಮುಖ್ಯ, ಅದಕ್ಕಾಗಿ ನಾನು ಏನನ್ನಾದರೂ ಕಳೆದುಕೊಳ್ಳಲು ಸಿದ್ಧ ಎನ್ನುವ ದೃಢ ನಿರ್ಧಾರ ಬರುತ್ತದೋ- ಆಗ ನಾವು ನಿಸ್ಸಂದೇಹವಾಗಿ ಇದು ಸತ್ವಗುಣದ ಪೂರ್ಣ ಜಾಗೃತಾವಸ್ಥೆ ಎಂದು ತಿಳಿಯಬಹುದು. ಇದಕ್ಕೆ ಉತ್ತಮ ಉದಾಹರಣೆ ಕಠೋಪನಿಷತ್ತಿನಲ್ಲಿ ಬರುವ ಯಮ ಮತ್ತು ನಚಿಕೇತನ ಈ ಸಂಭಾಷಣೆ:

ಏತತ್ತುಲ್ಯಂ ಯದಿ ಮನ್ಯಸೇ ವರಂ  ವೃಣೀಷ್ವ ವಿತ್ತಂ ಚಿರಜೀವಿಕಾಂ ಚ |
ಮಹಾಭೂಮೌ ನಚಿಕೇತಸ್ತ್ವಮೇಧಿ  ಕಾಮಾನಾಂ ತ್ವಾ ಕಾಮಭಾಜಂ ಕರೋಮಿ.                     ||೧-೨೪ ||
ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ   ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ |
ಇಮಾ ರಾಮಾಃ ಸರಥಾಃ ಸತೂರ್ಯಾ   ನ ಹೀದೃಶಾ ಲಂಭನೀಯಾ ಮನುಷ್ಯೈಃ |
ಆಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ  ನಚಿಕೇತೋ ಮರಣಂ ಮಾಽನುಪ್ರಾಕ್ಷೀಃ                          ||೧-೨೫||

ಇಲ್ಲಿ “ನನಗೆ ಆತ್ಮ ಜ್ಞಾನವನ್ನು ಬೋಧಿಸು" ಎಂದು ನಚಿಕೇತ ಯಮನನ್ನು ಕೇಳಿದಾಗ: “ನೀನಿನ್ನೂ ಚಿಕ್ಕವನು, ಆ ವಿದ್ಯೆ ಬೇಡ. ಅದಕ್ಕೆ ಬದಲಾಗಿ ನಿನ್ನನ್ನು ಭೂಮಂಡಲದ ಚಕ್ರವರ್ತಿಯನ್ನಾಗಿ ಮಾಡುತ್ತೇನೆ; ನೀನು ಬಯಸಿದ್ದು ಸಿಗುವಂತೆ ಮಾಡುತ್ತೇನೆ; ಆಯುಷ್ಯ ಐಶ್ವರ್ಯವನ್ನು ಕೊಡುತ್ತೇನೆ" ಎಂದು ಜವರಾಯ ನುಡಿಯುತ್ತಾನೆ. ಆಗ ನಚಿಕೇತ ಹೀಗೆ ಹೇಳುತ್ತಾನೆ:

ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್   ಸರ್ವೇಂದ್ರಿಯಾಣಾಂ ಜರಯಂತಿ ತೇಜಃ |
ಅಪಿ ಸರ್ವಂ ಜೀವಿತಮಲ್ಪಮೇವ   ತವೈವ ವಾಹಾಸ್ತವ ನೃತ್ಯಗೀತೇ                                      ||೧-೨೬||
ನ ವಿತ್ತೇನ ತರ್ಪಣೀಯೋ ಮನುಷ್ಯೋ   ಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ |
ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ   ವರಸ್ತು ಮೇ ವರಣೀಯಃ ಸ ಏವ                               ||೧-೨೭||
ಅಜೀರ್ಯತಾಮಮೃತಾನಾಮುಪೇತ್ಯ   ಜೀರ್ಯನ್ಮರ್ತ್ಯಃ ಕ್ವಧಃಸ್ಥಃ ಪ್ರಜಾನನ್ |
ಅಭಿಧ್ಯಾಯನ್ ವರ್ಣರತಿಪ್ರಮೋದಾನ್   ಅತಿದೀರ್ಘೇ ಜೀವಿತೇ ಕೋ ರಮೇತ                       ||೧-೨೮||
ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ   ಯತ್ಸಾಂಪರಾಯೇ ಮಹತಿ ಬ್ರೂಹಿ ನಸ್ತತ್ |
ಯೋಽಯಂ ವರೋ ಗೂಢಮನುಪ್ರವಿಷ್ಟೋ  ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ                  ||೧-೨೯||

“ನೀನು ಎಷ್ಟೇ ಕೊಟ್ಟರೂ ಅದು ಅಲ್ಪ. ಎಷ್ಟೇ ಆಯಸ್ಸು ಪಡೆದರೂ ನಾವೊಂದು ದಿನ ಸಾಯಬೇಕು. ಆದ್ದರಿಂದ ಇದ್ಯಾವುದೂ ನನಗೆ ಬೇಡ. ನೀನು ಇಡೀ ಜಗತ್ತನ್ನು ನನಗೆ ಧಾರೆಯೆರೆದರೂ ಅದು ನನಗೆ ಬೇಡ. ನನಗೆ ಜ್ಞಾನ ಬೇಕು. ಆ ಆತ್ಮಜ್ಞಾನವಿದ್ಯೆಯನ್ನೇ ತಿಳಿಸಿಕೊಡು" ಎಂದು. ಇದು ಯಾವ ಪ್ರಲೋಭನೆಗೂ ಒಳಗಾಗದ ನಿಜವಾದ ಸತ್ವ. ಜ್ಞಾನ ಸಾಧನೆಯ ನಿಜವಾದ ಹಸಿವುಳ್ಳವರು ಎಲ್ಲವನ್ನು ಕಳೆದುಕೊಳ್ಳಲು ಸಿದ್ಧರಾಗಿ ಹೇಗೆ ಜ್ಞಾನಮಾರ್ಗದಲ್ಲಿ ಸಾಗುತ್ತಾರೆ ಎನ್ನುವುದಕ್ಕೆ ಇತ್ತೀಚೆಗಿನ ಉತ್ತಮ ಉದಾಹರಣೆ- ಸ್ವಾಮಿರಾಮ್ (19251996). ಅವರ ಜೀವನ ಚರಿತ್ರೆಯನ್ನು ನಾವು ‘Lliving with the Himalayan Masters’ ಎನ್ನುವ ಪುಸ್ತಕದಲ್ಲಿ ಓದಿ ತಿಳಿಯಬಹುದು. ಶಾಸ್ತ್ರ ಓದಿದರೂ ಶಾಸ್ತ್ರದ ಯಥಾರ್ಥ ಜ್ಞಾನ ಬರಬೇಕಿದ್ದರೆ ನಮ್ಮೊಳಗೆ ಸಾತ್ವಿಕತೆ ಇರಬೇಕು. ಅಕಾರ ವಾಚ್ಯನಾದ ಭಗವಂತನ ಜ್ಞಾನ ಬರುವುದು ಸತ್ವಗುಣವಿದ್ದಾಗ ಮಾತ್ರ. ಸತ್ವಗುಣ ಪೂರ್ಣ ಜಾಗೃತವಾದಾಗ ನಮಗೆ ಯಥಾರ್ಥಜ್ಞಾನ ತಿಳಿಯುತ್ತದೆ ಮತ್ತು  ಉಳಿದ ಎಲ್ಲಾ ಪ್ರಾಪಂಚಿಕ ಸಂಗತಿ ಜ್ಞಾನದ ಮುಂದೆ ಶೂನ್ಯ ಎನ್ನುವ ಸತ್ಯ ತಿಳಿಯುತ್ತದೆ.
 “ರಜಸೋ ಲೋಭ ಏವ ಚ”- ಲೋಭ ಎನ್ನುವುದು ರಜಸ್ಸಿನ ಮೀಸಲಾದ ಗುಣ(Exclusive Quality).  ಇದನ್ನು ಸಾತ್ವಿಕರಲ್ಲಿ ಕಾಣಲು ಸಾಧ್ಯವಿಲ್ಲ.  ಯಾವುದೋ ಒಂದು ವಸ್ತುವಿನ ಬಗ್ಗೆ ಕಾಮ, ಆ ವಸ್ತು ಸಿಗದಿದ್ದಾಗ ಕ್ರೋಧ, ಸಿಕ್ಕಿದಾಕ್ಷಣ –ಲೋಭ. ಅದನ್ನು ಉಪಯೋಗಿಸುವುದೂ ಇಲ್ಲ, ಇನ್ನೊಬ್ಬರಿಗೆ ಕೊಡುವುದೂ ಇಲ್ಲ. ದಾನ ಎನ್ನುವುದು ಇವರಿಗೆ ಬಲು ದೂರ! ನಾವು ನಮ್ಮ ಹತ್ತಿರ ಏನಿದೆ ಅದನ್ನು ಹಂಚಿ ಬದುಕಬೇಕು ಎನ್ನುವುದು ಸತ್ವ. ಇದನ್ನು ಈಶೋಪನಿಷತ್ತಿನಲ್ಲಿ ಬಹಳ ಸುಂದರವಾಗಿ ಹೇಳಿದ್ದಾರೆ:
ಓಂ ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್  |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಂ                         || ೧ ||
ಭಗವಂತ ಎಲ್ಲವುದಕ್ಕೂ ಸ್ವಾಮಿ. ಅವನು ಕೊಟ್ಟಿದ್ದನ್ನು ನಾವು ಅನುಭವಿಸಬೇಕು. ಇಲ್ಲದ ಸಂಪತ್ತಿಗಾಗಿ ಆಸೆಪಡಬಾರದು. ಜಗತ್ತಿನ ಸರ್ವ ಸಂಪತ್ತಿನ ಒಡೆಯ ಆ ಭಗವಂತ. ಆದ್ದರಿಂದ ಆತ ಕೊಟ್ಟಿರುವ ಸಂಪತ್ತನ್ನು ‘ನನ್ನದು’ ಎಂದುಕೊಂಡು ಲೋಭದಿಂದ ಬದುಕುವುದು ಸರಿಯಲ್ಲ. ಆದರೆ ರಜೋಗುಣದ ಬಹಳ ಮುಖ್ಯ ದೋಷ ಈ ಲೋಭ. ಇದು ಇನ್ನೊಬ್ಬರ ಬಗ್ಗೆ ಸಹಾನುಭೂತಿ ಇಲ್ಲದೆ, ತಾನು ಗಳಿಸಿದ್ದನ್ನು ಇನ್ನೊಬ್ಬರಿಗೆ ಕೊಡದೆ, ಕೆಲವೊಮ್ಮೆ ತಾನೂ ತಿನ್ನದೆ ಮುಚ್ಚಿಡುವಂತೆ ಮಾಡುತ್ತದೆ. ಸಾಮಾನ್ಯವಾಗಿ ಪ್ರಾಣಿಗಳಲ್ಲೂ ಇಲ್ಲದ ಕೆಟ್ಟ ಗುಣ ಈ  ಲೋಭ.  ನಮ್ಮಲ್ಲಿ ಲೋಭದ ಲಕ್ಷಣವಿದ್ದರೆ ಅದು ರಜೋಗುಣದ ಜಾಗೃತಾವಸ್ಥೆ ಎನ್ನುವುದನ್ನು ನಾವು ಅರಿಯಬೇಕು.
ಪ್ರಮಾದಮೋಹೌ ತಮಸೋ ಭವತೋSಜ್ಞಾನಮೇವ ಚ”. ಹೇಗೆ ರಜೋಗುಣದಿಂದ ಲೋಭವೋ, ಹಾಗೆ ತಮೊಗುಣದಿಂದ ಪ್ರಮಾದ ಮತ್ತು ಮೋಹ-ಅದರಿಂದ ತಿಳಿಗೇಡಿತನ. ಒಬ್ಬರನ್ನು ಅತಿಯಾಗಿ ಹಚ್ಚಿಕೊಳ್ಳುವುದು, ಅದರಿಂದ ಅವರು ಮಾಡುವ ತಪ್ಪುಗಳನ್ನು ಕ್ಷಮಿಸುವುದು, ಅವರು ಹೇಳಿದಂತೆ ಕುಣಿಯುವುದು,  ಇತ್ಯಾದಿ. ಇದು ಎಷ್ಟು ಪ್ರಭಾವಶಾಲಿ ಎಂದರೆ- ಇದು ನಮ್ಮ ಜ್ಞಾನವನ್ನೂ ಕೂಡ ಮುಚ್ಚಿಸಿ, ನಮ್ಮನ್ನು ತಪ್ಪು ದಾರಿಯಲ್ಲಿ ಕರೆದೊಯ್ಯುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಭಾಗವತದ ಆರನೇ ಸ್ಕಂದದ ಮೊದಲ ಅಧ್ಯಾಯದಲ್ಲಿ ಬರುವ ಅಜಾಮಿಳನ ಕಥೆ. ಈತ ಒಬ್ಬ ಸಾತ್ವಿಕ ಬ್ರಾಹ್ಮಣ. ಆತನಿಗೆ ಮದುವೆಯಾಗಿತ್ತು. ಒಮ್ಮೆ ಪೂಜೆಗೆ ಹೂ-ತುಳಸಿ ತರಲು ಕಾಡಿಗೆ ಹೋದಾಗ ಕಂಡ ಒಂದು ದೃಶ್ಯ ಆತನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ತಾನು ಕಾಡಿನಲ್ಲಿ ಕಂಡ ಯುವತಿಯನ್ನು ಆತ ಮೊಹಿಸಲಾರಂಭಿಸಿದ. ಆಕೆಗಾಗಿ ಮದ್ಯ-ಮಾಂಸಾಹಾರದಲ್ಲಿ ತೊಡಗಿದ. ಆಕೆಯ ಬಯಕೆಗಳನ್ನು ತೀರಿಸಲು ಕಳ್ಳತನ ಮಾಡಿದ. ಸಾತ್ವಿಕನಾಗಿದ್ದ ಒಬ್ಬ ವಿಪ್ರ-ಪೂರ್ಣ ತಾಮಸನಾದ. ಈ ಕಥೆಯನ್ನು ಮನಃಶಾಸ್ತ್ರೀಯವಾಗಿ ನೋಡಿದರೆ- ಈ ರೀತಿ ಘಟನೆ ಏಕೆ ನಡೆಯಿತು ಎನ್ನುವುದು ತಿಳಿಯುತ್ತದೆ. ಅಜಾಮಿಳ ಮದುವೆಯಾಗಿದ್ದ, ಆದರೆ ಆತನ ಮನೆಯಲ್ಲಿ ಮಡಿ-ಮೈಲಿಗೆ ಎನ್ನುವ ಅನೇಕ ಕರ್ಮಾಚರಣೆಯಿಂದಾಗಿ ಆತ ತನ್ನಲ್ಲಿನ ಅಂತರಂಗದ ಬಯಕೆಯನ್ನು ಬಲವಂತವಾಗಿ ನಿಗ್ರಹಿಸಿದ್ದ. ನಾವು ನಮ್ಮ ಬಯಕೆಯನ್ನು ಬಲವಂತವಾಗಿ ತಡೆಹಿಡಿದರೆ ಅದು ಒಂದಲ್ಲ ಒಂದು ದಿನ ಸ್ಪೋಟವಾಗಿ ಹೊರಬರುತ್ತದೆ. ಈ ಕಾರಣದಿಂದಾಗಿ ಶಾಸ್ತ್ರಕಾರರು ಹೇಳುವಂತೆ “ಅಧ್ಯಾತ್ಮ ಸಾಧನೆ ಮಾಡುವ ಮೊದಲು ನಿನಗೆ ಸಾಂಸಾರಿಕ ಸುಖದ ಮೋಹವಿದ್ದರೆ ಅದನ್ನು ಅನುಭವಿಸು, ಅದರ ನಿಸ್ಸಾರವನ್ನು ಅರಿ, ಆಗ ಸಾಧನೆ ಸುಲಭ” ಎಂದು. ಅಜಾಮಿಳ ಶಾಸ್ತ್ರ ಓದಿದ್ದ, ಆದರೂ ಆತ ಮೋಹಕ್ಕೆ ಬಲಿಯಾದ. ಅದರಿಂದ ಆತನ ಎಲ್ಲಾ ಜ್ಞಾನವೂ ಮರೆಯಾಯಿತು. ತಮೋಗುಣ ಆತನಲ್ಲಿ ಮಾಡಬಾರದ ತಪ್ಪನ್ನು ಮಾಡಿಸಿತು. ಇದು ತಮೋಗುಣ ನಮ್ಮಲ್ಲಿ ಪ್ರಬಲವಾದಾಗ ನಮ್ಮ ಮೇಲೆ ಆಗುವ ಪರಿಣಾಮ.
ಈ ಶ್ಲೋಕದಲ್ಲಿ ಕೃಷ್ಣ ನಮ್ಮಲ್ಲಿ ಯಾವ ಗುಣ ಕೆಲಸ ಮಾಡುತ್ತಿದೆ ಅನ್ನುವುದನ್ನು ಸ್ಪಷ್ಟ ರೂಪುರೇಷೆಯಿಂದ ವಿವರಿಸಿದ. ಈ ಶ್ಲೋಕದ ಸಂಗ್ರಹ ಸಾರಾಂಶ ಇಷ್ಟು: ಜ್ಞಾನದ ತೃಷೆ ಇದ್ದರೆ ಅದು ಸಾತ್ವಿಕ ಗುಣ; ನನಗೇ ಬೇಕು ಉಳಿದವರಿಗೆ ಸಿಗಬಾರದು ಎನ್ನುವ ಲೋಭವಿದ್ದರೆ ಅದು ರಜಸ್ಸು; ಯಾವುದೋ ಒಂದು ಭೌತಿಕ ವಸ್ತುವಿನ ಮೇಲೆ ಅತಿಯಾದ ಮಮತೆ, ಮೋಹ ಬೆಳೆದರೆ ಅದು ತಮಸ್ಸಿನ ಕೆಲಸ.
ಸತ್ವ-ರಜಸ್ಸು-ತಮಸ್ಸುಗಳಿಗೆ ಇನ್ನೊಂದು ಮುಖವಿದೆ. ಪೂಜೆಯಲ್ಲಿ ನವಶಕ್ತಿಗಳನ್ನು ಹೇಳಿದ ಮೇಲೆ ಭಗವಂತನನ್ನು ಅನುಸಂಧಾನ ಮಾಡುವ ಮುಂಚೆ “ಸಂ ಸತ್ವಾಯ ನಮಃ –ರಂ-ರಜಸೇ ನಮಃ-ತಂ ತಮಸೇ ನಮಃ”  ಎನ್ನುವ ಒಂದು ಮಂತ್ರ ಹೇಳುತ್ತಾರೆ. ಈ ಮಂತ್ರವನ್ನು  ಕೆಲವರು ಈ ರೀತಿ ಕೂಡ ಹೇಳುತ್ತಾರೆ:  “ಸಂ ಸತ್ವಾಯ ಶ್ರಿಯೋ ನಮಃ-ರಂ ರಜಸೇ ಭೂವೇ ನಮಃ-ತಂ ತಮಸೇ ದುರ್ಗಾಯ ನಮಃ” ಎಂದು. [ಇದು ಮಂತ್ರವಲ್ಲ, ಮೂಲರೂಪದ ಮಂತ್ರ:   “ಸಂ ಸತ್ವಾಯ ನಮಃ –ರಂ-ರಜಸೇ ನಮಃ-ತಂ ತಮಸೇ ನಮಃ” ] ಇಲ್ಲಿ ಸಂ ಸತ್ವಾಯ ನಮಃ ಎಂದರೆ ಸತ್ವಗುಣಕ್ಕೆ ನಮಸ್ಕಾರ ಮಾಡುವುದಲ್ಲ- ಸತ್ವ ಮಾನಿನಿಯಾದ ಶ್ರೀದೇವಿಗೆ ನಮಸ್ಕಾರ ಮಾಡುವುದು. ರಂ ರಜಸೇ ನಮಃ ಎಂದರೆ ರಜೋ ಮಾನಿನಿಯಾದ ಭೂದೇವಿಗೆ ನಮಸ್ಕಾರ. ತಂ ತಮಸೇ ನಮಃ ಎಂದರೆ ತಮೋ ಮಾನಿನಿಯಾದ ದುರ್ಗಾ ದೇವಿಗೆ ನಮಸ್ಕಾರ. ಇವು ಲಕ್ಷ್ಮಿಯ ಮೂರು ರೂಪಗಳು. ಲಕ್ಷ್ಮಿಯ ಮೂಲ ರೂಪಕ್ಕೆ ‘ಮಹಾಲಕ್ಷ್ಮಿ’ ಎನ್ನುತ್ತಾರೆ. ಈ ಮೂಲರೂಪದಿಂದ ಮೂರು ಆವೇಶ ರೂಪಗಳು.
ಇಲ್ಲಿ ಸತ್ವವನ್ನು ಜಾಗೃತೆಗೊಳಿಸುವವಳು ಶ್ರೀದೇವಿ;ರಜಸ್ಸನ್ನು ಜಾಗೃತೆಗೊಳಿಸುವವಳು ಭೂದೇವಿ; ತಮೋಗುಣವನ್ನೂ ಜಾಗೃತೆಗೊಳಿಸುವವಳು ತಮೋಮಾನಿನಿಯಾದ ದುರ್ಗಾದೇವಿ.  “ಸತ್ತ್ವಾತ್ ಸಂಜಾಯತೇ ಜ್ಞಾನಮ್”- ಅಂದರೆ:  ಸತ್ವಗುಣದ ಅಭಿಮಾನಿನಿಯಾದ ಲಕ್ಷ್ಮಿ ಜ್ಞಾನಪ್ರದಳು ಎಂದರ್ಥ. ನಾರಾಯಣನ ಜ್ಞಾನ ಬರಬೇಕಾದರೆ ಶ್ರೀದೇವಿಯ ಅನುಗ್ರಹಬೇಕು. ‘ಶ್ರೀ’ ಸಂಪತ್ತನ್ನು ಕೊಡುತ್ತಾಳೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಜ್ಞಾನವೆಂಬ ಮಹಾ ಸಂಪತ್ತನ್ನು ಕೊಡುವವಳು ಶ್ರೀದೇವಿ ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ದುಡ್ಡು ಸಂಪತ್ತು ಹೌದು, ಆದರೆ ಜ್ಞಾನ ಮಹಾಸಂಪತ್ತು-ಅದನ್ನು ಕೊಡುವವಳು ‘ಶ್ರೀ’. ನಮ್ಮೊಳಗೆ ಜ್ಞಾನ ಜಾಗೃತವಾಗಬೇಕಾದರೆ ಮೊದಲು ತಾಯಿಯ ‘ಶ್ರೀ’ ರೂಪವನ್ನು ಉಪಾಸನೆ ಮಾಡಬೇಕು. ಭಗವಂತನ ಜ್ಞಾನವನ್ನು ಕರುಣಿಸು ಎಂದು ಆಕೆಯನ್ನು ಬೇಡಬೇಕು.
 ಶಾಸ್ತ್ರಕಾರರು ಹೇಳುವಂತೆ ಮನಸ್ಸು ಭಗವಂತನತ್ತ ಹರಿಯುವುದಕ್ಕೆ ಮೊದಲು ನಾವು  ಮನೋSಭಿಮಾನಿಯನ್ನು ಪ್ರಾರ್ಥಿಸಬೇಕು. ಶಿವ-ಮನೋSಭಿಮಾನಿ ದೇವತೆ. [ಗರುಡ-ಸುಪರ್ಣಿ, ಶೇಷ-ವಾರುಣಿ ಮತ್ತು ಶಿವ-ಪಾರ್ವತಿ ಇವರು ಮನೋಭಿಮಾನಿಯಾದರೂ ಸಹ ವಿಶೇಷತಃ ಶಿವ ಮನೋSಭಿಮಾನಿ] ಜ್ಞಾನ ಬೇಕು ಅನ್ನುವವರ ಮನಸ್ಸಿನ ತಮೋಗುಣವನ್ನು, ಕತ್ತಲೆಯನ್ನು ಓಡಿಸಿ ಬೆಳಕು ತುಂಬುವವರು ಶಿವ-ಪಾರ್ವತಿಯರು. ಈ ಕಾರಣಕ್ಕಾಗಿ ಜ್ಞಾನಕ್ಕೋಸ್ಕರ ಮೊದಲು ನಾವು ಪ್ರಾರ್ಥನೆ ಮಾಡಬೇಕಾಗಿರುವುದು ಶಿವತತ್ವವನ್ನು. ಶಿವ ಜ್ಞಾನ ಕೊಟ್ಟ ಮೇಲೆ ಅದು ಚಿತ್ತದಲ್ಲಿ ಸ್ಮರಣಶಕ್ತಿಯಾಗಿ ಉಳಿಯಲು ನಾವು ಪ್ರಾರ್ಥಿಸಬೇಕಾಗಿರುವುದು ಪ್ರಾಣಶಕ್ತಿಯನ್ನು(ಬ್ರಹ್ಮ-ವಾಯು, ಸರಸ್ವತಿ-ಭಾರತಿ). ನಮಗೆ ಬಂದ ಜ್ಞಾನ ಮರೆಯಾಗದಂತೆ(ಸ್ಥಿರವಾಗುವಂತೆ) ಮಾಡುವ ಪ್ರಮುಖ ಶಕ್ತಿ ಪ್ರಾಣಶಕ್ತಿ (ಆಂಜನೇಯ).  ಈ ರೀತಿ ಸ್ಥಿರವಾದದ್ದು ಮತ್ತೆ ಎತ್ತರಕ್ಕೆ ಹೋಗಿ ಭಗವಂತನನ್ನು ಮುಟ್ಟುವಂತೆ ಮಾಡುವವಳು-ಸದಾ ಭಗವಂತನ ಜೊತೆಗಿರುವ ಲಕ್ಷ್ಮೀದೇವಿ. ಇಂಥಹ ಲಕ್ಷ್ಮಿ ತನ್ನ ಎಲ್ಲಾ ರೂಪದಲ್ಲಿ ಅರಿವನ್ನು ಕೊಡುವುದಿಲ್ಲ. ಆಕೆ ತನ್ನ ಶ್ರೀರೂಪದಲ್ಲಿ  ಜ್ಞಾನರೂಪವಾದ ಸಂಪತ್ತನ್ನು ಕರುಣಿಸುತ್ತಾಳೆ. ‘ಶ್ರೀ’  ಮಹಾಲಕ್ಷ್ಮಿಯ ಅವತಾರಗಳಲ್ಲಿ ಒಂದು. ಸತ್ವವನ್ನು ನಿಯಮನ ಮಾಡಿ ಜಗತ್ತಿನ ರಕ್ಷಣೆಗೆ ವಿಷ್ಣುವಿನ ಜೊತೆಗೆ ಪಣತೊಟ್ಟು ನಿಂತ ರೂಪವಿದು. ಆದ್ದರಿಂದ ಜ್ಞಾನ ಮಾರ್ಗದಲ್ಲಿ ಸಾಗುವವರಿಗೆ ಮುಖ್ಯವಾದುದು ಲಕ್ಷ್ಮಿಯ ಶ್ರೀ ನಾಮಕ ಅನುಗ್ರಹ.
ಇಲ್ಲಿ ನಾವು ಶಿವ, ಪ್ರಾಣದೇವರು ಮತ್ತು ಶ್ರೀದೇವಿ ಅನುಗ್ರಹದಿಂದ ಜ್ಞಾನಮಾರ್ಗದಲ್ಲಿ ಮುನ್ನೆಡೆದು ಭಗವಂತನನ್ನು ಸೇರಬಹುದು ಎನ್ನುವುದನ್ನು ವಿಶ್ಲೇಶಿಸಿದೆವು. ಮುಂದೆ ಭೂತತ್ವದ ಬಗ್ಗೆ ವಿಶ್ಲೇಷಿಸುವ ಮೊದಲು ಶಾಂತಿಮಂತ್ರ ಮತ್ತು ಗಣಪತಿಯ ಪ್ರಾರ್ಥನೆಯ ಮಹತ್ವವನ್ನು ಸಂಕ್ಷಿಪ್ತವಾಗಿ ಇಲ್ಲಿ ವಿಶ್ಲೇಷಿಸೋಣ. ಯಾವುದೇ ಶಾಸ್ತ್ರವನ್ನು ಓದುವ ಮೊದಲು "ಓಂ ಶಾಂತಿಃ ಶಾಂತಿಃ ಶಾಂತಿಃ" ಎಂದು ಶಾಂತಿ ಮಂತ್ರ ಪಠಿಸುತ್ತೇವೆ. ಜ್ಞಾನಾನಂದಗಳ ಪರಾಕಾಷ್ಠೆಯಾದ ಭಗವಂತನೆ, ನನ್ನನ್ನು ಜ್ಞಾನಾನಂದಗಳ(ಶಾ+ಅಂತಿ) ದಾರಿಯಲ್ಲಿ ನೆಡೆಸು ಎನ್ನುವುದು ಈ ಶಾಂತಿ ಮಂತ್ರದ ಅರ್ಥ. ಇದೇ ರೀತಿ, ಪ್ರತೀ ಪೂಜೆಯಲ್ಲಿ ಮೊದಲು ಗಣಪತಿ ಪ್ರಾರ್ಥನೆ ಮಾಡುತ್ತೇವೆ. ಏಕೆಂದರೆ ಶಿವ-ಪಾರ್ವತಿ ಪುತ್ರ ಗಣಪತಿ ಆಕಾಶದ ದೇವತೆ. ಈ ಆಕಾಶ ಭಗವಂತನ ನಾಭಿಯಿಂದ ಸೃಷ್ಟಿಯಾಗಿದೆ. ಆದ್ದರಿಂದ ಗಣಪತಿ ನಮ್ಮ ನಾಭಿ ದೇವತೆ.
ನಾಭ್ಯ ಆಸೀದಂತರಿಕ್ಷಂ ಶೀರ್ಷ್ನೋಧ್ಯೋ ಸಮವರ್ತತ
ಪದ್ಭ್ಯಾಂ ಭೂಮೀರ್ ದಿಶ ಶ್ರೋತ್ರಾತ್ ತತಾ ಲೋಕಾ ಅಕಲ್ಪಯನ್
ನಮ್ಮ ನಾಭಿಯ ಸಮೀಪ ಇರುವ ಮೂರು ಚಕ್ರಗಳು-ಮೂಲಾಧಾರ, ಸ್ವಾದಿಷ್ಟಾನ ಹಾಗು ಮಣಿಪುರ. ನಾಭಿಯಿಂದ ಮೇಲಕ್ಕೆ ಹೃತ್ಕಮಲದಲ್ಲಿ ನಿಜವಾದ ಸಾಧನೆಯ ಅನಾಹತ ಚಕ್ರವಿದೆ. ಮೂಲಾಧಾರ, ಸ್ವಾದಿಷ್ಟಾನ ಹಾಗು ಮಣಿಪುರ ಚಕ್ರಗಳನ್ನು ಮೀರಿ ಹೃದಯವನ್ನು ಪ್ರವೇಶಿಸಬೇಕಾದರೆ ನಾಭಿಯ ಬಾಗಿಲನ್ನು ಗಣಪತಿ ತೆರೆಯಬೇಕು. ಅದಕ್ಕಾಗಿ ನಾವು ಗಣಪತಿಯಲ್ಲಿ ಮೊತ್ತಮೊದಲಿಗೆ ಪ್ರಾರ್ಥನೆ ಮಾಡುತ್ತೇವೆ. ಪ್ರತೀ ಯಜ್ಞದ ಮೊದಲು ಗಣಪತಿ ಮಂಡಲ ಬರೆದು ಪೂಜಿಸಿ, ಆನಂತರ ಯಜ್ಞ ಪ್ರಾರಂಭಿಸುತ್ತಾರೆ. ಗಣಪತಿ ನಾಭಿಯ ಬಾಗಿಲನ್ನು ತೆರೆದಾಗ ಹೃತ್ಕಮಲ ತಾನೇ-ತಾನಾಗಿ ತೆರೆದುಕೊಳ್ಳುತ್ತದೆ. ಈ ಸ್ಥಿತಿಯನ್ನು 'ವೃಷಾಹ' ಎನ್ನುತ್ತಾರೆ. ಭಗವಂತ ಈ ಸ್ಥಿತಿಯಲ್ಲಿ ನಮ್ಮ ಪೂಜೆಯನ್ನು ವೃಷಾಹೀಯಾಗಿ ಸ್ವೀಕರಿಸುತ್ತಾನೆ. ಇಂಥಹ ಭಗವಂತನನ್ನು ‘ವೃಷಾಹೀ’ ಎಂದೂ ಕರೆಯುತ್ತಾರೆ.
ರಜಸೋ ಲೋಭ ಏವ ಚ”- ರಜಸ್ಸು ಎಂದರೆ ರಜೋಗುಣದ ಅಭಿಮಾನಿನಿಯಾದ ‘ಭೂದೇವಿ’. ಇಲ್ಲಿ ಭೂದೇವಿ ಎಂದರೆ ಭೂಮಿಯ ನಿಯಮನ ಮಾಡುವ ಹದಿನೆಂಟನೇ ಕಕ್ಷೆಯಲ್ಲಿರುವ ದೇವತೆ ಅಲ್ಲ. ಅವಳನ್ನೂ ನಿಯಮನ ಮಾಡುವ ಲಕ್ಷ್ಮಿಯ ಆವೇಶರೂಪ ‘ಭೂ’ ಅದು ಸೃಷ್ಟಿಗೆ ಕಾರಣವಾದದ್ದು. ರಂಜನೆ, ಆಕರ್ಷಣೆ, ಸೆಳೆತ, ಮೋಹ –ಇವೆಲ್ಲವೂ ರಜೋಗುಣದ ಮುಖಗಳು. ಹಾಗಾಗಿ ಒಬ್ಬರನ್ನು ಒಬ್ಬರು ಪ್ರೀತಿಸುವುಕ್ಕೆ ಮೂಲಭೂತವಾಗಿ ಬೇಕಾಗಿರುವುದು-ರಂಜನ. ಗಂಡು-ಹೆಣ್ಣಿನ ಸೆಳೆತವೇ ಸೃಷ್ಟಿಗೆ ಕಾರಣವಾದದ್ದು. ಸೃಷ್ಟಿಗೆ ಬೇಕಾದ ಸೆಳೆತ ಕೊಟ್ಟು ಸೃಷ್ಟಿ ಮಾಡುವ, ಅದೇ ಸೆಳೆತದಿಂದ ದಾರಿ ತಪ್ಪಿಸುವ ಅಂಶ ರಜೋಗುಣದಲ್ಲಿದೆ. ಅಂತಹ ರಜೋಗುಣದ ಸ್ವಭಾವವನ್ನು ಕೊಡುವವಳು ಭೂದೇವಿ. ನನ್ನ ಆಸ್ತಿ, ನನ್ನ ಮನೆ, ನನ್ನ ದುಡಿಮೆ, ನನ್ನ ಹಣ, ಇತ್ಯಾದಿ ಮೋಹ ರಜೋಗುಣದಿಂದ ಬರುವಂಥದ್ದು.
ಪ್ರಮಾದ ಮೋಹೌ ತಮಸಃ  ಭವತಃ ಅಜ್ಞಾನಮ್ ಏವ ಚ”- ಭೌತಿಕವಾಗಿ ನಮ್ಮನ್ನು ವಿನಾಶದತ್ತ ಕೊಂಡೊಯ್ಯುವ–ಸಂಹಾರ ಶಕ್ತಿಯಾದ, ತಮೋಗುಣದ ಅಭಿಮಾನಿನಿ  ದುರ್ಗ. ಆಕೆ ಸಂಹಾರದ ಕಡೆಗೆ ಹೋಗುವ ಬುದ್ಧಿ ಕೊಡುತ್ತಾಳೆ. ತಪ್ಪನ್ನೇ ಸರಿ ಎಂದು ತಿಳಿದು ತಪ್ಪು ಮಾಡುವುದು, ಅದರಿಂದ ಜಾರಿ ಬೀಳುವುದು, ವಿಪರೀತ ಜ್ಞಾನ, ಜ್ಞಾನದ ಅಭಾವ, ಇತ್ಯಾದಿ–ತಮೋಗುಣದ ಪ್ರಭಾವದಿಂದ ಬರುವಂತದು.
ಹೀಗೆ ಚಿತ್ಪ್ರಕೃತಿಯ ಮೂರು ಆವೇಶರೂಪಗಳಾದ ಶ್ರೀ-ಭೂ-ದುರ್ಗ, ಸತ್ವ-ರಜಸ್ಸು-ತಮಸ್ಸಿನ ಅಭಿಮಾನಿನಿಯರಾಗಿ, ತ್ರಿಗುಣಗಳ ಮೂಲಕ ನಮ್ಮನ್ನು ಬಂಧಿಸುತ್ತಾರೆ. ಆದ್ದರಿಂದ ಚಿತ್ಪ್ರಕೃತಿಯ ಚೈತನ್ಯದ ಮೂರು ರೂಪಗಳೇ ಸತ್ವ-ರಜಸ್ಸು ಮತ್ತು ತಮಸ್ಸು. ಮಹಾಲಕ್ಷ್ಮಿಯ ಶ್ರೀ-ಭೂ-ದುರ್ಗಾ ರೂಪದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಮಹಾಭಾರತ ತಾತ್ಪರ್ಯ ನಿರ್ಣಯದ “ಸರ್ಗಾನುಸರ್ಗ-ಲಯ-ಪ್ರಾದುರ್ಭಾವ ನಿರ್ಣಯ”ವನ್ನು ಓದಿ. [ಏಕೆ ಇಲ್ಲಿ ಈ ಅರ್ಥವನ್ನು ಮಾಡಬೇಕು ಎನ್ನುವುದಕ್ಕೆ ಗೀತೆಯಲ್ಲೇ ಸುಳಿವಿದೆ. ಅದನ್ನು ಮುಂದೆ ಈ ಅಧ್ಯಾಯದ ೧೯ನೇ ಶ್ಲೋಕದಲ್ಲಿ ಕಾಣಬಹುದು].

No comments:

Post a Comment