Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, November 1, 2011

Bhagavad Gita Kannada Chapter-13 Shloka 12-18


ಜ್ಞಾನ ಸಾಧನಗಳನ್ನು ವಿವರಿಸಿದ ಕೃಷ್ಣ ಮುಂದಿನ ಆರು ಶ್ಲೋಕಗಳಲ್ಲಿ ಶಬ್ದದ ಮಿತಿಯಿಂದ ಆಚೆಗಿರುವ  ಭಗವಂತನ ವರ್ಣನೆಯನ್ನು ನಮ್ಮ ಮುಂದಿಡುತ್ತಾನೆ. ದೇವರು ಹೇಗಿದ್ದಾನೆ,  ಆತನ ರೂಪವನ್ನು ಹೇಗೆ ಅನುಸಂಧಾನ ಮಾಡಬೇಕು ಎನ್ನುವ ವಿಚಾರವನ್ನು ಕೃಷ್ಣ ಇಲ್ಲಿ ಸುಂದರವಾಗಿ ವರ್ಣಿಸಿದ್ದಾನೆ. ಈ ಶ್ಲೋಕಗಳಲ್ಲಿ ಒಂದೊಕ್ಕೊಂದು ವ್ಯತಿರಿಕ್ತ(Contradicting)ವಾಗಿ ಕಾಣುವ ಅನೇಕ ವಿಷಯಗಳನ್ನು ನಾವು ಕಾಣಬಹುದು. ಉದಾಹರಣೆಗೆ: ಭಗವಂತ ನಿರ್ಗುಣ ಆದರೆ ಆತ ಸರ್ವಗುಣಪೂರ್ಣ; ಭಗವಂತ ಅಚಲ ಆದರೆ ಆತ ಚಲಿಸುತ್ತಾನೆ; ಭಗವಂತ ನಿರಾಕಾರ  ಆದರೆ ಆತ ಸಾಕಾರ; ಭಗವಂತನನ್ನು ತಿಳಿಯಲು ಅಸಾಧ್ಯ ಆದರೆ ಆತನನ್ನು ತಿಳಿಯಬಹುದು; ಭಗವಂತನಿಗೆ ಇಂದ್ರಿಯಗಳಿಲ್ಲ ಆದರೆ ಆತನಿಗೆ ಇಂದ್ರಿಯಗಳಿವೆ; ಆತ ದೂರದಲ್ಲಿದ್ದಾನೆ ಆದರೆ ಹತ್ತಿರದಲ್ಲಿದ್ದಾನೆ; ಇತ್ಯಾದಿ. ಈ ರೀತಿಯ ವರ್ಣನೆಯನ್ನು ಭಗವಂತನಿಗಲ್ಲದೆ ಇನ್ಯಾರಿಗೂ ಕೊಡಲು ಬರುವುದಿಲ್ಲ. ಇವೆಲ್ಲವುದರ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.    

ಜ್ಞೇಯಂ ಯತ್ ತತ್ ಪ್ರವಕ್ಷ್ಯಾಮಿ ಯಜ್ ಜ್ಞಾತ್ವಾSಮೃತಮಶ್ನುತೇ    
ಅನಾದಿಮತ್ ಪರಂ ಬ್ರಹ್ಮ ನ ಸತ್ ತನ್ನಾಸದುಚ್ಯತೇ                      ೧೨

ಜ್ಞೇಯಮ್  ಯತ್  ತತ್ ಪ್ರವಕ್ಷ್ಯಾಮಿ ಯತ್  ಜ್ಞಾತ್ವಾಮೃತಮ್ ಅಶ್ನುತೇ   
ಅನಾದಿಮತ್ ಪಮ್  ಬ್ರಹ್ಮ  ನ ಸತ್  ತತ್ ನ ಅಸತ್ ಉಚ್ಯತೇ – ಯಾವುದನ್ನು ತಿಳಿದು ಸಾವನ್ನು ಗೆಲ್ಲುವನೋ  ಅಂಥ ‘ಜ್ಞೇಯ’ವನ್ನು ಹೇಳುತ್ತೇನೆ: ಹುಟ್ಟಿರದ,[ದೇಹದಿಂದಲೂ ಹುಟ್ಟದ] ಪರಬ್ರಹ್ಮವೆ ಜ್ಞೇಯ. ಅದು ಕಣ್ಣಿಗೆ ಕಾಣುವ ಮಣ್ಣು-ನೀರು-ಬೆಂಕಿಗಿಂತಲು ಬೇರೆ; ಕಾಣದ ಗಾಳಿ –ಆಗಸಗಳಿಗಿಂತಲೂ ಬೇರೆ ಎನ್ನಿಸಿದೆ.

ಇಲ್ಲಿ ಕೃಷ್ಣ  ಜ್ಞಾನ ಸಾಧನಗಳ ಮೂಲಕ ತಿಳಿದುಕೊಳ್ಳಬೇಕಾದ ಜ್ಞೇಯನ ಬಗ್ಗೆ ವಿವರಿಸುತ್ತ ಹೇಳುತ್ತಾನೆ: “ಯಾವುದನ್ನು ಪ್ರತ್ಯಕ್ಷವಾಗಿ ಶಬ್ದಗಳು ಹೇಳಲಾರವೋ, ಯಾವ ಜ್ಞಾನವನ್ನು ತಿಳಿದುಕೊಂಡು ನೀನು ಅಮೃತತ್ವವನ್ನು ಸವಿಯುವೆಯೋ-ಅದನ್ನು ನಾನು ನಿನಗೆ ಹೇಳುತ್ತೇನೆ” ಎಂದು. ಭಗವಂತ ಅನಾದಿಮತ್. ಆತನಿಗೆ ನಶ್ವರವಾದ ಪಂಚಭೂತಗಳಿಂದಾದ ಯಾವ ಆಕಾರವೂ ಇಲ್ಲ. ಆತ ಜ್ಞಾನಾನಂದ ಸ್ವರೂಪ. ಭಗವಂತನ ಗುಣಕ್ರಿಯೆ ಎಲ್ಲವೂ ಅನಾದಿಮತ್. ಸದ್ಗುಣಗಳಿಂದ ತುಂಬಿರುವ ಭಗವಂತ ನಮಗೆ ಪೂರ್ಣತೆಯನ್ನು ಕೊಡುವವ. ಆತ ಸರ್ವರಕ್ಷಕ, ಆತನಿಂದ ಹಿರಿದಾದ ತತ್ವ ಇನ್ನೊಂದಿಲ್ಲ. ಇಂಥಹ ಭಗವಂತನನ್ನು ನಾವು ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ಅದು ನಮ್ಮ ಅರಿವಿಗೆ ಎಟುಕದ್ದು. ಹೀಗಿದ್ದರೂ ಕೂಡಾ ಆತನನ್ನು ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನಾವು ಯಥಾರ್ಥ ತಿಳಿಯಲು ಸಾಧ್ಯ.   

ಸರ್ವತಃಪಾಣಿಪಾದಂ ತತ್ ಸರ್ವತೋSಕ್ಷಿಶಿರೋಮುಖಮ್
ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ                           ೧೩

ಸರ್ವತಃಪಾಣಿಪಾದಮ್  ತತ್ ಸರ್ವತಃ ಅಕ್ಷಿ ಶಿರಃ ಮುಖಮ್
ಸರ್ವತಃ ಶ್ರುತಿಮತ್ ಲೋಕೇ ಸರ್ವಮ್ ಆವೃತ್ಯ ತಿಷ್ಠತಿ—ಎಲ್ಲೆಡೆಯು ಅದಕ್ಕೆ ಕೈಕಾಲುಗಳು; ಎಲ್ಲೆಡೆಯು ಕಣ್ಣು-ತಲೆ-ಬಾಯಿಗಳು; ಎಲ್ಲೆಡೆಯು ಅದಕ್ಕೆ ಕಿವಿ; ಅದು ಲೋಕದೊಳಗೆಲ್ಲವನು ಆವರಿಸಿ ನಿಂತಿದೆ.

ಭಗವಂತ ಎಲ್ಲೆಡೆ ತುಂಬಿದ್ದಾನೆ. ಆತನಿಗೆ ಎಲ್ಲಕಡೆ ಕೈ ಕಾಲುಗಳು; ಎಲ್ಲ ಕಡೆ ಕಿವಿ, ಮುಖ, ಬಾಯಿ, ಕಣ್ಣು.(ಸಂಸ್ಕೃತದಲ್ಲಿ ಮುಖ ಎಂದರೆ ಮುಖವೂ ಹೌದು-ಬಾಯಿಯೂ ಹೌದು. ಸಮೃದ್ಧವಾದ ಈ ಭಾಷೆಯಲ್ಲಿ ‘ಬಾಯಿ’ಯನ್ನು ಸೂಚಿಸುವ ಪ್ರತ್ಯೇಕ ಪದ ಇಲ್ಲ!).  ಈ ಕಾರಣದಿಂದ ಭಗವಂತನಿಗೆ ತಿಳಿಯದಂತೆ ನಾವು ಯಾವ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಆತ ಸರ್ವಜ್ಞ, ಸರ್ವಗತ, ಸರ್ವಸಮರ್ಥ. ಇದೆಲ್ಲವನ್ನು ಶ್ರುತಿ ಪ್ರಮಾಣಿಕರಿಸುತ್ತದೆ. ಆದಿಯಲ್ಲಿ ವೇದವನ್ನು ಉಚ್ಛಾರ ಮಾಡಿದವನು ಭಗವಂತ. ಆತ ಎಲ್ಲವುದರ ಒಳಗೂ ಹೊರಗೂ ಆವರಿಸಿ ನಿಂತಿದ್ದಾನೆ. ಅಖಂಡವಾದ ಭಗವಂತನೊಳಗೆ ಆತನ ಅನಂತ ರೂಪಗಳಿವೆ. ಪ್ರತಿಯೊಂದು ರೂಪಕ್ಕೂ ಜ್ಞಾನಾನಂದಮಯವಾದ, ಸ್ವರೂಪಭೂತವಾದ  ಇಂದ್ರಿಯಗಳಿವೆ. ನಮ್ಮ ಸರ್ವ ಇಂದ್ರಿಯದಲ್ಲೂ ಆತ ತುಂಬಿ ನಿಂತು ನಡೆಸುತ್ತಿದ್ದಾನೆ.
           
ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಮ್
ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ                           ೧೪

ಸರ್ವೇಂದ್ರಿಯ ಗುಣಭಾಸಂ ಸರ್ವೇಂದ್ರಿಯ ವಿವರ್ಜಿತಮ್
ಅಸಕ್ತಮ್  ಸರ್ವಭೃತ್ ಚ ಏವ ನಿರ್ಗುಣಮ್ ಗುಣಭೋಕ್ತೃ ಚ –ಎಲ್ಲ ಇಂದ್ರಿಯಗಳನ್ನು, ಎಲ್ಲ ವಿಷಯಗಳನ್ನು ಬೆಳಗಿಸುತ್ತಿರುವುದು; ಅದಕೆ ಭೌತಿಕವಾದ ಯಾವ ಇಂದ್ರಿಯಗಳೂ ಇಲ್ಲ. ಯಾವುದಕು ಅಂಟದೆ ಎಲ್ಲವನು ಹೊತ್ತಿದೆ. ತ್ರಿಗುಣಗಳ ನಂಟಿಲ್ಲ; ಎಲ್ಲ ಸದ್ಗುಣಗಳ ನೆಲೆ.

ಜಗತ್ತಿನಲ್ಲಿರುವ ಎಲ್ಲ ಜೀವಜಾತಗಳು ತಮ್ಮ ಇಂದ್ರಿಯಗಳಿಂದ ಇಂದ್ರಿಯ ವಿಷಯವನ್ನು ಗ್ರಹಿಸುವುದು ಭಗವಂತನಿಂದ. ಇಂಥಹ ಭಗವಂತನಿಗೆ ಪಾಂಚಭೌತಿಕವಾದ, ನಶ್ವರವಾದ, ನಮ್ಮಂತೆ ಒಂದು ದಿನ ನಾಶವಾಗುವ, ತನ್ನ ಸ್ವರೂಪಕ್ಕಿಂತ ಭಿನ್ನವಾದ ಯಾವ ಇಂದ್ರಿಯಗಳೂ ಇಲ್ಲ. ಈ ಜಗತ್ತನ್ನು ಹೊತ್ತಿರುವ ತಂದೆ ಆ ಭಗವಂತ ಗಂಡು. ಜಗತ್ತನ್ನು ಹೆತ್ತ ಆತ ತಾಯಿಯೂ ಹೌದು. ಭೌತಿಕವಾಗಿ ಆತ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಆತ ಸ್ವರೂಪಭೂತವಾಗಿ ಗಂಡೂ ಹೌದು-ಹೆಣ್ಣೂ  ಹೌದು.  ಭಗವಂತ ಎಲ್ಲರೊಳಗೆ ತುಂಬಿದ್ದಾನೆ ಆದರೆ ಆತ ಯಾವುದನ್ನೂ ಅಂಟಿಸಿಕೊಂಡಿಲ್ಲ. ಆತ ಎಲ್ಲವನ್ನು ಹೊತ್ತಿದ್ದಾನೆ ಆದರೆ ಅದರ ಬಾಂಧವ್ಯದ ಬೆಸುಗೆ(Attachment) ಆತನಿಗಿಲ್ಲ. ಭಗವಂತ ತ್ರಿಗುಣಾತೀತ. ಆತನಿಗೆ ತ್ರಿಗುಣಗಳ ನಂಟಿಲ್ಲ. ಆದರೆ ಆತ ಸದ್ಗುಣಗಳ ನೆಲೆ. ಅವನು ನಿರಾಕಾರನೂ ಹೌದು, ಸಾಕಾರನೂ ಹೌದು.

ಬಹಿರಂತಶ್ಚ ಭೂತಾನಾಮಚರಂ ಚರಮೇವ ಚ     
ಸೂಕ್ಷ್ಮತ್ವಾತ್ ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್              ೧೫

ಹಿಃ ಅಂತಃ ಚ ಭೂತಾನಾಮ್ ಆಚರಮ್  ಚರಮ್ ಏವ
ಸೂಕ್ಷ್ಮತ್ವಾತ್ ತತ್ ಅವಿಜ್ಞೇಯಮ್  ದೂರಸ್ಥಮ್ ಚ ಅಂತಿಕೇ ಚ ತತ್ –ಅದು ಜೀವಿಗಳ ಹೊರಗಿದೆ; ಒಳಗೂ ಇದೆ; ಆದರೂ ಎಲ್ಲೆಡೆ ಚಲಿಸುತ್ತಿದೆ. ಅದು ಅಣುವಿಗಿಂತ ಅಣು; ಅದಕೆಂದೆ ತಿಳಿವಿಗೆಟುಕದ್ದು. ಅದು ದೂರದಲ್ಲಿದ್ದರೂ ಎಲ್ಲರ ಹತ್ತಿರದಲ್ಲಿದೆ.

ಭೂತ ಎಂದರೆ ಸಮಸ್ತ ಬ್ರಹ್ಮಾಂಡ, ಸಮಸ್ತ ಜೀವಜಾತ(ಪಿಂಡಾಂಡ). ಭಗವಂತ ಈ ಬ್ರಹ್ಮಾಂಡದ ಒಳಗೂ ಹೊರಗೂ ತುಂಬಿದ್ದಾನೆ. ನಾರಾಯಣ ಉಪನಿಷತ್ತಿನಲ್ಲಿ ಹೇಳುವಂತೆ “ಅಂತರ್ಬಹಿಶ್ಚ ತತ್-ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ”. ನಮ್ಮ ಒಳಗೆ ಮತ್ತು ಹೊರಗೆ ತುಂಬಿ, ಎಲ್ಲವನ್ನು ವ್ಯಾಪಿಸಿ ನಿಂತಿರುವ ಭಗವಂತ-ನಾರಾಯಣ. ಒಂದು ಅತಿ ಕ್ಷುದ್ರ ಜೀವದಿಂದ ಹಿಡಿದು ಚತುರ್ಮುಖ ಬ್ರಹ್ಮನ ತನಕ ಎಲ್ಲರ ಒಳಗೂ ಹೊರಗೂ ಭಗವಂತ ತುಂಬಿದ್ದಾನೆ.  ನಮ್ಮ ಒಳಗೆ ಅಂತರ್ಯಾಮಿಯಾಗಿ ಬಿಂಬರೂಪದಲ್ಲಿದ್ದು ನಮ್ಮನ್ನು ನಡೆಸುತ್ತಿದ್ದಾನೆ ಮತ್ತು ನಮ್ಮ ಹೊರಗೆ ನಿಂತು ನಮ್ಮನ್ನು ಧಾರಣೆ ಮಾಡಿದ್ದಾನೆ.  ಜ್ಞಾನಿಗಳಿಗೆ ಅವರ ಅಂತರಂಗದಲ್ಲಿ ದರ್ಶನ ಕೊಡುವ ಭಗವಂತ ಅಜ್ಞಾನಿಗಳಿಗೆ ಬಹಿ(ಬಹುದೂರ). ಸರ್ವಗತನಾದ ಭಗವಂತ  ಅಚಲ ಆದರೆ ಆತನ ಅನಂತ ರೂಪಗಳು ಸದಾ ಚಲಿಸುತ್ತಿರುತ್ತವೆ. ಸಮಸ್ತ ಚರಾಚಾರಾತ್ಮಕ ಜೀವದೊಳಗೆ ಭಗವಂತ ತುಂಬಿ ನಿಂತಿದ್ದಾನೆ. ಭಗವಂತ ಅಣುವಿನೊಳಗೆ ಅಣುವಾಗಿ ತುಂಬಿದ್ದಾನೆ. ಭಗವಂತ ಜ್ಞೇಯ ಆದರೆ ವಿಜ್ಞೇಯ ಅಲ್ಲ. ಭಗವಂತನ ವಿವರವನ್ನು ನಾವು ಕಿಂಚಿತ್ ತಿಳಿಯಬಹುದು ಆದರೆ ಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ. ನಾವು ಸಮುದ್ರದಲ್ಲಿರುವ ಒಂದು ಪುಟ್ಟ ಮೀನಿನಂತೆ. ಅದು ಹೇಗೆ ಸಮುದ್ರದ ಅಗಾಧತೆಯನ್ನು ತಿಳಿಯಲಾರದೋ ಹಾಗೆ ಜಗತ್ತಿನ ಯಾವ ಜೀವಜಾತವೂ ಭಗವಂತನನ್ನು ಪೂರ್ಣವಾಗಿ ತಿಳಿಯಲಾರವು. ಏಕೆಂದರೆ ಅದು ನಮ್ಮ ಮನಸ್ಸು ಗ್ರಹಿಸಲಾರದಷ್ಟು ಸೂಕ್ಷ್ಮ ಮತ್ತು ಅಗಾಧ.

ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್
ಭೂತಭರ್ತೃ ಚ ತಜ್ ಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ                                   ೧೬

ಅವಿಭಕ್ತಮ್ ಚ ಭೂತೇಷು ವಿಭಕ್ತಮ್ ಇವ ಚ ಸ್ಥಿತಮ್
ಭೂತಭರ್ತೃ ಚ ತತ್  ಜ್ಞೇಯಮ್  ಗ್ರಸಿಷ್ಣು ಪ್ರಭವಿಷ್ಣು ಚ –ಎಲ್ಲ ಜೀವಿಗಳಲ್ಲು ಏಕರೂಪವಾಗಿದೆ; ಆದರೂ ಬೇರೆಯೋ ಎನುವಂತೆ ಬಹುರೂಪದಿಂದಿದೆ. ಎಲ್ಲ ಜೀವಿಗಳನ್ನು ಪಾಲಿಸುವಂಥದು; ಕಬಳಿಸುವಂಥದು ಮತ್ತು ಹುಟ್ಟಿಸುವಥದು ಅದೇ ಎಂದು ತಿಳಿಯಬೇಕು.

ಭಗವಂತ ಈ ಪ್ರಪಂಚದಲ್ಲಿನ ಪ್ರತಿಯೊಂದು ಜೀವದಲ್ಲೂ ಬಿಂಬ ರೂಪನಾಗಿ ನೆಲೆಸಿದ್ದಾನೆ. ಒಂದೊಂದು ಜೀವದಲ್ಲೂ ಅನೇಕ ರೂಪದಲ್ಲಿ ಆತನಿದ್ದಾನೆ. ಇಲ್ಲಿ ಪ್ರತಿಯೊಂದು ಜೀವಗಳೂ ವಿಭಕ್ತಗಳು. ಆದರೆ ಭಗವಂತ ಮಾತ್ರ ಅಖಂಡ(ಅವಿಭಕ್ತ). ಎಲ್ಲಾ ಕಡೆ ಇರುವ ಭಗವಂತ ಒಬ್ಬನೆ ಆದರೆ ಬೇರೆ ಬೇರೆ ಇದ್ದಂತೆ ನಮಗೆ ಕಾಣಿಸುತ್ತಾನೆ ಅಷ್ಟೆ. ಇದಕ್ಕೆ ಉತ್ತಮ ಉದಾಹರಣೆ ಭಗವಂತನ ಅವತಾರವಾದ-ಪರಶುರಾಮ, ವೇದವ್ಯಾಸ ಮತ್ತು ಶ್ರೀಕೃಷ್ಣ. ಇಲ್ಲಿ ಭಗವಂತ ಮೂರು ರೂಪದಲ್ಲಿ ನಮಗೆ ಏಕ ಕಾಲದಲ್ಲಿ ಕಾಣಿಸಿಕೊಂಡ. ಒಂದೇ ಆದರೂ ಕೂಡ ಮೂರಾಗಿ ನಮಗೆ ಆತ ಕಾಣಿಸಿಕೊಂಡ. ಆತ ಸಮಸ್ತ ಜೀವದೊಳಗಿದ್ದಾನೆ ಆದರೆ ಸಮಸ್ತ ಜೀವವನ್ನೂ ಆತನೇ ಹೊತ್ತುಕೊಂಡಿದ್ದಾನೆ. ಎಲ್ಲರ ಸೃಷ್ಟಿಕರ್ತ ಭಗವಂತ ಹಾಗು ತನ್ನ ಸೃಷ್ಟಿಯನ್ನು ಒಂದು ದಿನ ಸಂಹಾರ ಮಾಡುವವನೂ ಆತನೆ. ಸಂಹಾರದ ನಂತರ ಸೃಷ್ಟಿಯ ಪುನರ್ನಿರ್ಮಾಣ ಮಾಡುವವನೂ ಅವನೆ. 

ಜ್ಯೋತಿಷಾಮಪಿ ತಜ್ ಜ್ಯೋತಿಸ್ತಮಸಃ ಪರಮುಚ್ಯತೇ
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್                  ೧೭

ಜ್ಯೋತಿಷಾಮ್ ಅಪಿ ತತ್  ಜ್ಯೋತಿಃ ತಮಸಃ ಪರಮ್ ಉಚ್ಯತೇ
ಜ್ಞಾನಮ್  ಜ್ಞೇಯಮ್  ಜ್ಞಾನಗಮ್ಯಮ್  ಹೃದಿ ಸರ್ವಸ್ಯ ವಿಷ್ಠಿತಮ್ –ಅದು ಬೆಳಕುಗಳಿಗೆಲ್ಲ ಹಿರಿ ಬೆಳಕು. ಕತ್ತಲೆಯ ಆಚೆಗಿರುವಂಥದು. ಅದು ತಿಳಿವಿನ ರೂಪ. ತನ್ನನು ತಾನೇ ತಿಳಿವಂಥದು. ತಿಳಿವಿನಿಂದ ಪಡೆಯಬಹುದಾದಂಥದು. ಎಲ್ಲರ ಹೃದಯದಲ್ಲು ನೆಲೆಸಿರುವಂಥದು.

ಈವರೆಗೆ ಕೃಷ್ಣ ವಿವರಿಸಿದ ವಿಚಾರವನ್ನು ನಾವು ನಮ್ಮ ಧ್ಯಾನದಲ್ಲಿ ಕಾಣುವುದು ಕಷ್ಟ. ಅದಕ್ಕಾಗಿ ಕೃಷ್ಣ ಈ ಶ್ಲೋಕದಲ್ಲಿ ತನ್ನನ್ನು ಭಾವನಾತ್ಮಕವಾಗಿ ವಿವರಿಸುತ್ತಾನೆ. ಭಗವಂತ ಕತ್ತಲಿಲ್ಲದ ಬೆಳಕು. ಆ ಬೆಳಕಿಗೆ ಒಂದು ಅವಧಿ ಇಲ್ಲ. ಅದು ಅನಂತ. ಎಲ್ಲ ಬೆಳಕುಗಳಿಗೂ ಬೆಳಕು ಕೊಡುವ ಮಹಾಜ್ಯೋತಿ ಭಗವಂತ. ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು ಎಂದು ಕಣ್ಣು ಮುಚ್ಚಿ ಕುಳಿತಾಗ ನಮಗೆ ನಮ್ಮ ಇಷ್ಟವಾದ ವಸ್ತು ಅಥವಾ ವ್ಯಕ್ತಿ ಕಾಣಬಹುದು. ಆಗ ಆ ವ್ಯಕ್ತಿಯೊಳಗೆ/ವಸ್ತುವಿನೊಳಗೆ ನಾವು ಭಗವಂತನನ್ನು ಕಾಣಲು ಪ್ರಯತ್ನಿಸಬೇಕು (ಏಕೆಂದರೆ ಭಗವಂತ ಸರ್ವಾಂತರ್ಯಾಮಿ-ಆತ ಎಲ್ಲವುದರ ಒಳಗೂ ಹೊರಗೂ ತುಂಬಿ ನಿಂತಿದ್ದಾನೆ). ನಂತರ "ಸೂರ್ಯನಲ್ಲಿ ಭಗವಂತನಿದ್ದಾನೆ, ಸೌರಶಕ್ತಿ ಆತನ ಕೊಡುಗೆ" ಎಂದು ಅನುಸಂಧಾನ ಮಾಡಬೇಕು. ನಂತರ ಸೌರಮಂಡಲದ ಮಧ್ಯದಲ್ಲಿ ಭಗವಂತನ ಪಾದವನ್ನು ಕಾಣುವ ಪ್ರಯತ್ನ ಮಾಡಬೇಕು. ಆ ಪಾದದ ಬೆರಳಿನ ತುದಿಯಿಂದ ಚಿಮ್ಮಿದ ಬೆಳಕು ನಮ್ಮ ಹೃದಯವನ್ನು ಪ್ರವೇಶಿಸಿ ಬೆಳಗುತ್ತಿರುವುದನ್ನು ಧ್ಯಾನದಲ್ಲಿ ನಾವು ಅನುಭವಿಸಬೇಕು. ಇದು ಧ್ಯಾನದಲ್ಲಿ ಹಂತ ಹಂತವಾಗಿ ನಾವು ಭಗವಂತನನ್ನು ಕಾಣುವ ಪ್ರಕ್ರಿಯೆ. ಭಗವಂತ ಈ ಜಗತ್ತಿನ ಎಲ್ಲ ಬೆಳಕುಗಳಿಗೂ ಬೆಳಕು ಕೊಟ್ಟವ. ನಮ್ಮ ಅಂತರಂಗವನ್ನು ಬೆಳಗಿಸುವ ಸಾಮರ್ಥ್ಯ ಇರುವುದು ಕೇವಲ ಭಗವಂತನಿಗೆ. ಭಗವಂತನೆಂಬ ಬೆಳಕು ಕತ್ತಲನ್ನು ಮೀರಿದ್ದು. ಅದು ಜ್ಞಾನಾನಂದಸ್ವರೂಪದ ಬೆಳಕು.  ಭಗವಂತನನ್ನು ಪೂರ್ಣ ತಿಳಿದವನು ಭಗವಂತನೊಬ್ಬನೆ. ನಾವು ಯಥಾಶಕ್ತಿ ಆತನನ್ನು ತಿಳಿಯುವ ಪ್ರಯತ್ನವನ್ನು ಮಾಡಬೇಕು. ಭಗವಂತ ನಮ್ಮ ಹೃದಯದಲ್ಲೇ ನೆಲೆಸಿದ್ದಾನೆ. ಆತ ಎಲ್ಲಕ್ಕಿಂತ ವಿಲಕ್ಷಣನಾಗಿ ನಮ್ಮ ಹೃತ್ಕಮಲ ಮಧ್ಯದಲ್ಲಿ ಸೂಕ್ಷಕ್ಕಿಂತ ಸೂಕ್ಷ್ಮನಾಗಿ ನೆಲೆಸಿದ್ದಾನೆ. ಇಂಥಹ ಭಗವಂತನನ್ನು ನಾವು ಭಕ್ತಿಪೂರ್ವಕ  ಜ್ಞಾನದಿಂದ ಮಾತ್ರ ಅರಿಯಲು ಸಾಧ್ಯ.    

ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ
ಮದ್ಭಕ್ತ ಏತದ್ ವಿಜ್ಞಾಯ ಮದ್ ಭಾವಾಯೋಪಪದ್ಯತೇ                  ೧೮

ಇತಿ ಕ್ಷೇತ್ರಮ್  ತಥಾ ಜ್ಞಾನಮ್  ಜ್ಞೇಯಮ್ ಚ ಕ್ತಮ್  ಸಮಾಸತಃ
ತ್ ಭಕ್ತಃ ಏತತ್  ವಿಜ್ಞಾಯ ಮತ್ ಭಾವಾಯ ಉಪದ್ಯತೇ –ಹೀಗೇ ‘ಕ್ಷೇತ್ರ’-‘ಜ್ಞಾನ’ ಮತ್ತು ‘ಜ್ಞೇಯ’ಗಳನ್ನು ಅಡಕವಾಗಿ ಹೇಳಿದಂತಾಯಿತು. ನನ್ನ ಭಕ್ತನಾದವನು ಇದನ್ನರಿತು ನನ್ನಲ್ಲೆ ನೆಲೆಸುತ್ತಾನೆ.

ಈ ಶ್ಲೋಕದಲ್ಲಿ ಕೃಷ್ಣ ಈವರೆಗೆ ಹೇಳಿದ ವಿಚಾರದ ಉಪಸಂಹಾರ ಮಾಡುತ್ತಾ ಹೇಳುತ್ತಾನೆ: “ಈ ತನಕ ಕ್ಷೇತ್ರದ ಬಗ್ಗೆ  ಜ್ಞಾನಸಾಧನಗಳ ಬಗ್ಗೆ,  ಈ ಜ್ಞಾನ ಸಾಧನಗಳಿಂದ ತಿಳಿದುಕೊಳ್ಳಬೇಕಾದ ಭಗವಂತನ ಬಗ್ಗೆ ಅಡಕವಾಗಿ(In a  nutshell) ಹೇಳಿದ್ದಾಯಿತು. ಸೃಷ್ಟಿ, ಸೃಷ್ಟಿಯಾದ ಪ್ರಪಂಚ, ಪ್ರಪಂಚ ಸೃಷ್ಟಿಯ ಬಗೆ, ಸ್ರಷ್ಟಾರನಾದ ಭಗವಂತ- ಇದನ್ನು ತಿಳಿದರೆ ಮತ್ತೆ ತಿಳಿಯಬೇಕಾದದ್ದು ಏನೂ ಉಳಿಯುವುದಿಲ್ಲ. ಪೂರ್ಣ ನಂಬಿಕೆಯಿಂದ, ಭಕ್ತಿಯಿಂದ  ಇದನ್ನು ಅರಿತ ಭಕ್ತ ನನ್ನನ್ನು ಸೇರುತ್ತಾನೆ” ಎಂದು. ಭಗವಂತನ ಬಗೆಗಿನ ಜ್ಞಾನ ಮತ್ತು ಭಕ್ತಿ ನಮ್ಮನ್ನು ಮೊಕ್ಷದತ್ತ ಕೊಂಡೊಯ್ಯಬಲ್ಲದು.       

1 comment:

  1. Bhagavad Gita In Kannada: Bhagavad Gita Kannada Chapter-13 Shloka 12-18 >>>>> Download Now

    >>>>> Download Full

    Bhagavad Gita In Kannada: Bhagavad Gita Kannada Chapter-13 Shloka 12-18 >>>>> Download LINK

    >>>>> Download Now

    Bhagavad Gita In Kannada: Bhagavad Gita Kannada Chapter-13 Shloka 12-18 >>>>> Download Full

    >>>>> Download LINK 9I

    ReplyDelete