Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Tuesday, November 22, 2011

Bhagavad GitA in Kannada Chapter-14 Shloka-18-20


ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ                           ೧೮

ಊರ್ಧ್ವಮ್ ಗಚ್ಛಂತಿ ಸತ್ತ್ವಸ್ಥಾಃ  ಮಧ್ಯೇ ತಿಷ್ಠಂತಿ ರಾಜಸಾಃ
ಜಘನ್ಯಗುಣ ವೃತ್ತಿಸ್ಥಾಃ  ಅಧಃ  ಗಚ್ಛಂತಿ ತಾಮಸಾಃ—ಸತ್ವದಲ್ಲಿ ನೆಲೆಗೊಂಡವರು ಎತ್ತರಕ್ಕೆರುತ್ತಾರೆ. ರಾಜಸರು ನಡುವಿನಲ್ಲಿ ನಿಲ್ಲುತ್ತಾರೆ. ‘ಕೊನೆಯ ಗುಣದ’ ಪ್ರಭಾವಕ್ಕೊಳಗಾದ ತಾಮಸರು ಕೆಳಕ್ಕೆ ಕುಸಿಯುತ್ತಾರೆ.

ತ್ರಿಗುಣದ ಸ್ವಭಾವವನ್ನು ಹೇಳಿದ ಕೃಷ್ಣ, ಅದರ ಪರಿಣಾಮದ ಮೂರು ಮಜಲನ್ನು ಈ ಶ್ಲೋಕದಲ್ಲಿ ವಿವರಿಸಿದ್ದಾನೆ. ಸತ್ವದಲ್ಲಿರುವವರು ಮಾನಸಿಕವಾಗಿ ಮೇಲಕ್ಕೇರುತ್ತಾರೆ. ರಜೋಗುಣದವನಿಗೆ ಯಾವ ಏಳಿಗೆಯೂ ಇಲ್ಲ. ತಮಸ್ಸಿನಲ್ಲಿರುವವ  ಮಾನಸಿಕವಾಗಿ ಅಧಃಪಾತ ಹೊಂದುತ್ತಾನೆ. ಇಲ್ಲಿ ‘ಊರ್ಧ್ವ’ ಎನ್ನುವ ಪದಕ್ಕೆ ವಿಶೇಷವಾದ ಅರ್ಥವಿದೆ.  ಕಠೋಪನಿಷತ್ತಿನಲ್ಲಿ ಹೇಳುವಂತೆ :
ಊರ್ಧ್ವಮೂಲೋ ಅವಾಕ್ಶಾಖಃ ಏಷೋ ಅಶ್ವತ್ಥಃ ಸನಾತನಃ  ||೨-೩-೧||
ಊರ್ಧ್ವ ಎಂದರೆ ಎಲ್ಲಕ್ಕಿಂತ ಮೇಲಿರುವ ಭಗವಂತ. ಸತ್ವದಲ್ಲಿರುವವ ಮೇಲಕ್ಕೆ ಹೋಗುವುದು ಅಂದರೆ- ಭಗವಂತನ ಕಡೆ ಮುಖಮಾಡಿ ಚಲಿಸುವುದು. ಆತ ಮುಂದೆ ಹೋದಂತೆ ಭಗವಂತನಿಗೆ ಹತ್ತಿರವಾಗುತ್ತಾ ಹೋಗುತ್ತಾನೆ. ಆದರೆ ತಮಸ್ಸಿನಲ್ಲಿರುವವ ಭಗವಂತನಿಗೆ ಬೆನ್ನು ಹಾಕಿ ಚಲಿಸುತ್ತಿರುತ್ತಾನೆ. ರಾಜಸ ಇದ್ದಲ್ಲೇ ಅತಂತ್ರ ಸ್ಥಿತಿಯಲ್ಲಿ ಮುಂದುವರಿಯುತ್ತಾನೆ. 
ದೇವತೆಗಳನ್ನು ಬಂಧನದಲ್ಲಿಡುವ ಶಕ್ತಿ ‘ಶ್ರೀದೇವಿ’; ಮಾನವರನ್ನು ಬಂಧನದಲ್ಲಿಡುವ ಶಕ್ತಿ ‘ಭೂದೇವಿ’ ಮತ್ತು ರಾಕ್ಷಸರನ್ನು ಬಂಧನದಲ್ಲಿಡುವ ಶಕ್ತಿ ‘ದುರ್ಗಾದೇವಿ’. ಸಾತ್ವಿಕರು ಸತ್ವಮಾನಿನಿಯಾದ ‘ಶ್ರೀದೇವಿಯ’ ಕೃಪೆಗೆ ಪಾತ್ರರಾಗಿ ಮೇಲಿನ ಲೋಕವನ್ನು ಪಡೆಯುತ್ತಾರೆ[ಭೂಮಿಯಿಂದ ಮೇಲೆ ಇರುವ ಆರು ಸೂಕ್ಷ್ಮ ಲೋಕಗಳು ಮತ್ತು ಕೊನೆಗೆ ಮೋಕ್ಷ]; ರಾಜಸರು ಭೂದೇವಿಯ ಬಂಧನದಲ್ಲೇ ಮುಂದುವರಿಯುತ್ತಾರೆ[ಭೂಮಿ ಮತ್ತು ಅಂತರಿಕ್ಷ] ಮತ್ತು ತಾಮಸರು ದುರ್ಗಾದೇವಿಯ ನಿಯಂತ್ರಣದಲ್ಲಿರುವ ತಾಮಸಲೋಕ [ಭೂಮಿಯಿಂದ ಕೆಳಗಿರುವ ಏಳು ಸೂಕ್ಷ್ಮಲೋಕಗಳು]ವನ್ನು ಸೇರುತ್ತಾರೆ.

ನಾ[S]ನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾSನುಪಶ್ಯತಿ
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋSಧಿಗಚ್ಛತಿ                      ೧೯

ನ್ಯಮ್ ಗುಣೇಭ್ಯಃ ಕರ್ತಾರಮ್ ಯದಾ ದ್ರಷ್ಟಾನುಪಶ್ಯತಿ       
ಗುಣೇಭ್ಯಃ ಚ  ಪರಮ್ ವೇತ್ತಿ ಮತ್ ಭಾಮ್ ಸಃ ಅಧಿಗಚ್ಛತಿ – ಈ ಎಲ್ಲಾ ಪರಿಣಾಮಗಳಿಗೆ ತ್ರಿಗುಣಗಳಲ್ಲದೆ ಬೇರೆ ಕಾರಣವಿಲ್ಲ ಎಂದು ಕಂಡುಕೊಂಡವನು[ತ್ರಿಗುಣಗಳಿಂದ ಭಿನ್ನನಾದ ಭಗವಂತನೆ ಎಲ್ಲದರ ಮೂಲ ಕಾರಣ ಎಂದು ತಿಳಿದವನು] ಮತ್ತು ಗುಣಗಳಿಂದ ಅತೀತನೆಂದು ಭಗವಂತನನ್ನು ತಿಳಿದವನು[ನಿಜವಾದ ಮನುಷ್ಯ] ನನ್ನಲ್ಲೆ ನೆಲೆಸುತ್ತಾನೆ. 

ನಮ್ಮ ಜೀವನದಲ್ಲಿ ಏನೇನು ನಡೆಯುತ್ತದೆ ಅದು ಈ ಮೂರು ಗುಣಗಳ ಪ್ರಕ್ರಿಯೆ. ನಾವು ನಾವಾಗಿ ಏನೂ ಮಾಡುವುದಿಲ್ಲ. ಬದಲಿಗೆ ಎಲ್ಲವೂ ತ್ರಿಗುಣಗಳ ಪ್ರಭಾವದಿಂದ ನಡೆಯುತ್ತಿರುತ್ತದೆ. ಪ್ರಕೃತಿಯಿಂದ ಬಂದು, ನಮ್ಮ ಸ್ವರೂಪವನ್ನು ಮುಚ್ಚಿ ಅವು ಕೆಲಸ ಮಾಡುತ್ತಿರುತ್ತವೆ. ಹಾಗಾಗಿ  ಒಬ್ಬ ವ್ಯಕ್ತಿಯ ಮೇಲ್ನೋಟದ ವರ್ತನೆಯಿಂದ ಆತನ ನಿಜ  ಸ್ವಭಾವವನ್ನು ಅರಿಯುವುದು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ನಾವು ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ನಿರ್ವೀಕಾರರಾಗಿ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು.
ಸತ್ವಕ್ಕೆ ಶ್ರುತಿಗೂಡಿದ ಮನಸ್ಸು ಸತ್ವಕ್ಕೆ ಅನುಗುಣವಾದ ವಿಷಯವನ್ನೇ ಗ್ರಹಿಸುತ್ತದೆ. ಅಂಥಹ ವ್ಯಕ್ತಿ  ಎಂದೂ ‘ನಾನು ಮಾಡಿದೆ’ ಎಂದು ಭ್ರಮೆ ಪಡುವುದಿಲ್ಲ. ಇಲ್ಲಿ ಗುಣಗಳಿಗಿಂತ ಬೇರೆಯಾದ ಕರ್ತಾ ಇಲ್ಲ ಎಂದಿದ್ದಾರೆ.  ಜಡಕ್ಕೆ ಎಂದೂ ಕರ್ತಾ ಎನ್ನುವುದಿಲ್ಲ. ಆದ್ದರಿಂದ ಗುಣ ಅಂದರೆ ಕೇವಲ ಜಡವಾದ ಗುಣವಲ್ಲ. ಅದಕ್ಕೆ ಅಭಿಮಾನಿಯಾದ ಚೈತನ್ಯವನ್ನು ಗುರುತಿಸು ಎನ್ನುವ ಸಂದೇಶ ಈ ಶ್ಲೋಕದಲ್ಲಿದೆ.[ಶ್ಲೋಕ ೧೭ರಲ್ಲಿ ನಾವು ಈ ಬಗ್ಗೆ ಚರ್ಚಿಸಿದ್ದೇವೆ]. ಕರ್ತೃತ್ವದಲ್ಲಿ ಅನೇಕ ವಿಧ. ಇಚ್ಛಾಪೂರ್ವಕ ಕೃತಿ ಎಲ್ಲಿದೆಯೋ ಅದು ಕರ್ತಾ. ಇದು ಇರುವುದು ಚೇತನಕ್ಕೆ ಮಾತ್ರ. ಆದರೆ ನಿಜವಾದ ಕರ್ತೃತ್ವ ‘ಸ್ವತಂತ್ರ ಇಚ್ಛಾಪೂರ್ವಕ ಕೃತಿ’. ಇದು ಇರುವುದು ಕೇವಲ ಭಗವಂತನಲ್ಲಿ. ‘ನಾಹಂ ಕರ್ತಾ ಹರಿಃ ಕರ್ತಾ’  ಎನ್ನುವ ಪ್ರಸಿದ್ಧವಾದ ಮಾತು ನಮಗೆ ತಿಳಿದೇ ಇದೆ. ಇದನ್ನು  ಮೊಕ್ಷಧರ್ಮಪರ್ವದಲ್ಲಿ ಈ ರೀತಿ ಹೇಳಿದ್ದಾರೆ:   
ನಾಹಂ ಕರ್ತಾ ನ ಕರ್ತಾ ತ್ವಂ ಕರ್ತಾಯಸ್ತು ಸದಾ ಪ್ರಭುಃ ||
ಸೋSಯಂ ಪಚತಿ ಕಾಲೋ ಮಾಮ್ ವೃಕ್ಷೇ ಫಲಂ ಇವಾಗತಂ || ೧೨-೨೨೦-೮೪ ||
“ನೀನೂ ಮಾಡಿಲ್ಲ, ನಾನೂ ಮಾಡಿಲ್ಲ- ‘ಅವನು’ ನಮ್ಮಿಂದ ಮಾಡಿಸಿದ”. ಈ ಎಚ್ಚರ ಇದ್ದಾಗ ನಮಗೆ ಕರ್ತೃತ್ವದ ಅಹಂಕಾರ ಬರಲು ಸಾಧ್ಯವಿಲ್ಲ. ಇದರಿಂದ ದ್ವೇಷವಿಲ್ಲ, ಮಮಕಾರವಿಲ್ಲ. ‘ನಾನು ಮಾಡಿದೆ , ನನ್ನಿಂದಾಯ್ತು’ ಎನ್ನುವುದು  ಕೇವಲ ಭ್ರಮೆ. ಈ ಜಗತ್ತಿನಲ್ಲಿ ಏನೇ ನಡೆದರೂ ಅದು ಈ ಮೂರು ಗುಣಗಳ ಪ್ರಭಾವದಿಂದ ನಡೆದಿದೆ. ಅದನ್ನು ಮೀರಿ ನನ್ನಷ್ಟಕ್ಕೆ ನಾನು ಏನೂ ಮಾಡಿಲ್ಲ. ಈ ಅರಿವು ನಮಗೆ ಬರಬೇಕು.
ತ್ರಿಗುಣಗಳ ಪ್ರಭಾವ ಜಡದಲ್ಲೂ ಇದೆ, ಚೇತನದಲ್ಲೂ ಇದೆ. ಅದರ ಪ್ರಭಾವದಿಂದ ಕ್ರಿಯೆ ನಡೆಯುತ್ತದೆ. ಯಾರೋ ಒಬ್ಬರು ನಿಮಗೆ ಬೈದರು ಎಂದರೆ-ಆತನಲ್ಲಿ ಆ ಕ್ಷಣದಲ್ಲಿ ರಜೋಗುಣ ಜಾಗೃತವಾಗಿ ಕೆಲಸ ಮಾಡುತ್ತಿದೆ ಎಂದರ್ಥ. ನಾವು ಈ ಅರಿವಿನಿಂದ ಆ ಕ್ಷಣದಲ್ಲಿ ವರ್ತಿಸಬೇಕು. ಇದನ್ನು ಶ್ರೀರಾಮಚಂದ್ರ ತನ್ನ ಜೀವನದಲ್ಲಿ ನಡೆದು ತೋರಿಸಿದ್ದಾನೆ. ರಾಮಾಯಣದಲ್ಲಿ ವಾಲ್ಮೀಕಿ ಹೇಳುತ್ತಾರೆ:
ಸ ಹಿ ನಿತ್ಯಂ ಪ್ರಶಾಂತಂ ಮೃದುಪೂರ್ವಃ ಚ ಭಾಷತೆ |
ಉಚ್ಚಮಾನೋSಪಿ ಪರುಷಮ್ ನೋತ್ತರಂ ಪ್ರತಿಪದ್ಯತೆ ||ಅಯೋಧ್ಯಾ-೧.೧೫||
ರಾಮನಲ್ಲಿ ಯಾರಾದರೂ ಜಗಳಕ್ಕೆ ನಿಂತರೆ ಆತ ಎಂದೂ ಸಿಟ್ಟಿಗೇಳುತ್ತಿರಲಿಲ್ಲ. “ಮತ್ತೆ ಮಾತನಾಡೋಣ” ಎಂದು ಹೊರಟು ಹೋಗುತ್ತಿದ್ದನಂತೆ.  ಏಕೆಂದರೆ ಒಬ್ಬ ವ್ಯಕ್ತಿಯಲ್ಲಿ ರಜೋಗುಣ ಕೆಲಸ ಮಾಡುತ್ತಿರುವಾಗ, ಅವರೊಂದಿಗೆ ನಾವು ರಜೋಗುಣದಿಂದ ವರ್ತಿಸಬೇಕಾದ ಪ್ರಸಂಗ ಬಂದುಬಿಡುತ್ತದೆ. ಇದು ಬಹಳ ಅಪಾಯಕಾರಿ. ಆದ್ದರಿಂದ ರಜೋಗುಣಕ್ಕೊಳಗಾದವರೊಂದಿಗೆ ನೀನು   ರಾಜಸನಾಗಬೇಡ. ತಟಸ್ಥನಾಗಿ ದೂರ ನಿಲ್ಲು(Act but never React). ಆಗ ಅವರ ರಜೋಗುಣ ತನ್ನಷ್ಟಕ್ಕೆ ಕುಸಿಯುತ್ತದೆ. ಸಿಟ್ಟು ಮಾಡುವವರ ಮುಂದೆ ಮೌನಿಯಾದರೆ ಅವರ ಸಿಟ್ಟು ಬಹುಬೇಗ ಕರಗುತ್ತದೆ. ಹೀಗೆ ನಾವು ಈ ಗುಣಗಳ ಪ್ರಭಾವವನ್ನು ಗುರುತಿಸಿದಾಗ ನಮ್ಮ ಬದುಕಿನ ನಡೆಯೂ ಬೇರೆಯಾಗುತ್ತದೆ.
ಮೇಲೆ ಹೇಳಿರುವ ವಿಷಯವನ್ನಷ್ಟೇ ತಿಳಿದರೆ ಸಾಲದು. ಈ ತ್ರಿಗುಣಗಳನ್ನು ಮೀರಿ ನಿಂತವ ಭಗವಂತ. ಅವನನ್ನು ತಿಳಿದಾಗ ನೀನು ತ್ರಿಗುಣಗಳನ್ನು ಮೀರಿ ನಿಲ್ಲಲು ಸಹಾಯವಾಗುತ್ತದೆ. ಆ ಭಗವಂತನನ್ನು ಸೇರಲು ನಾನು ಈ ತ್ರಿಗುಣಗಳ ಪ್ರಭಾವದಿಂದ ಹೊರ ಬರಬೇಕು ಎನ್ನುವ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. “ಇಂಥವರ ಮನಸ್ಸು ನನ್ನಲ್ಲಿ ನೆಲೆಗೊಳ್ಳುತ್ತದೆ ಮತ್ತು ಅದರಿಂದಾಗಿ ಮುಂದೆ ಅವರು ನನ್ನನ್ನು ಬಂದು ಸೇರಿ ನನ್ನಲ್ಲೇ ನೆಲೆಸುತ್ತಾರೆ” ಎನ್ನುತ್ತಾನೆ ಕೃಷ್ಣ.
ಈ ಶ್ಲೋಕಕ್ಕೆ ಇನ್ನೊಂದು ಮುಖವಿದೆ.    “ಗುಣೇಭ್ಯಃ ಅನ್ಯಂ ಕರ್ತಾರಂ ಯದಾ ದ್ರಷ್ಟಾ ನುಪಶ್ಯತಿ ತದಾ ಸಃ ‘ನಾ’ ಭವತಿ”. ಇಲ್ಲಿ  “ಗುಣೇಭ್ಯಃ ಅನ್ಯಂ” ಅಂದರೆ ತ್ರಿಗುಣಮಾನಿನಿಯಾಗಿರತಕ್ಕಂತಹ, ಗುಣಶಬ್ದವಾಚ್ಯಳಾದ, ಶ್ರೀ-ಭೂ-ದುರ್ಗ ನಾಮಕಳಾದ, ಮಹಾಲಕ್ಷ್ಮಿಗಿಂತಲೂ ಅತೀತವಾದ ಒಂದು ಶಕ್ತಿ. ಅವನೇ ನಿಜವಾದ ಕರ್ತಾ. ಯಾರಾತ? ಮುಂಡಕೋಪನಿಷತ್ತಿನಲ್ಲಿ ಹೇಳುವಂತೆ:
ಯದಾ ಪಶ್ಯಃ ಪಶ್ಯತೇ ರುಕ್ಮವರ್ಣಂ ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಂ || ೩-೧-೩||
ಯಾರು ಚತುರ್ಮುಖನಿಗೂ ತಂದೆಯೋ, ಯಾರು ಚಿತ್ಪ್ರಕೃತಿಗೂ ನಿಯಾಮಕನೋ, ಯಾರು ಸಮಸ್ತ ವೇದಗಳಿಂದ ವಾಚ್ಯನೋ –ಅವನೊಬ್ಬನೆ ಕರ್ತಾ. ಇದನ್ನು ತಿಳಿದವನು ನಿಜವಾದ ಮಾನವ. 
ಎಲ್ಲಾ ಅಧ್ಯಾತ್ಮ ಸಾಧನೆ ಮಾಡುವ ಸೌಕರ್ಯವಿರುವ ಶರೀರ-ಮನುಷ್ಯ ಶರೀರ ಮಾತ್ರ. ಅಂಥಹ ಶರೀರವನ್ನು  ಉಪಯೋಗಿಸಿಕೊಳ್ಳುವವ ನರ. ಧರ್ಮ-ಅರ್ಥ-ಕಾಮಗಳಿಂದ ಬಿಡಿಸಿಕೊಳ್ಳುವುದು ಎಂದರೆ ಸತ್ವ-ರಜಸ್ಸು-ತಮೋಗುಣಗಳಿಂದ ಬಿಡಿಸಿಕೊಂಡು ಭಗವಂತನನ್ನು ಸೇರುವುದು. ಇದು ಮನುಷ್ಯನ ಜೀವನದ ಗುರಿ. “ಈ ಮೂರು ಗುಣಗಳು ನನ್ನಲ್ಲಿ ಕೆಲಸ ನಡೆಸಿವೆ, ನಾನು ಈ ಪ್ರಭಾವದಿಂದ ಕಳಚಿಕೊಂಡು ಮೇಲೇರಬೇಕು” ಎನ್ನುವ ಎಚ್ಚರವಿರುವುದು ಮನುಷ್ಯನಿಗೆ ಮಾತ್ರ. ಈ ಎಚ್ಚರದಿಂದಾಗಿ “ಮದ್ಭಾವಂ ಸೋSಧಿಗಚ್ಛತಿ”-ಅವನಲ್ಲಿ ಭಕ್ತಿಜ್ಞಾನಗಳು ಮನಸ್ಸಿನಲ್ಲಿ ತುಂಬಿ ಆತ ಮೋಕ್ಷವನ್ನು ಸೇರುತ್ತಾನೆ.
  
ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹಸಮುದ್ಭವಾನ್
ಜನ್ಮಮೃತ್ಯುಜರಾದುಃಖೈರ್ವಿಮುಕ್ತೋSಮೃತಮಶ್ನುತೇ                   ೨೦

ಗುಣಾನ್ ಏತಾನ್ ಅತೀತ್ಯ ತ್ರೀನ್ ದೇಹೀ ದೇಹ ಸಮುದ್ಭವಾನ್
ಜನ್ಮ ಮೃತ್ಯು ಜರಾ ದುಃಖೈಃ ವಿಮುಕ್ತಃ ಅಮೃತಮ್ ಅಶ್ನುತೇ—ದೇಹದಲ್ಲಿ ಮೂಡಿಬರುವ ಈ ಮೂರು ಗುಣಗಳನ್ನು ದಾಟಿದಾಗ ಜೀವ ಹುಟ್ಟು ಸಾವು ಮುಪ್ಪಿನ ದುಃಖದಿಂದಲು ಪಾರಾಗಿ ಅಮರನಾಗುತ್ತಾನೆ.

ನಮ್ಮ ಸ್ವರೂಪವನ್ನು ಮುಚ್ಚಿ ಗಾಢವಾಗಿ ಪರಿಣಾಮಬೀರುವ ಈ ಮೂರು ಗುಣಗಳನ್ನು ನಾವು ದಾಟಬೇಕು. [ಇಲ್ಲಿ ಮೂರು ಗುಣದಲ್ಲಿ ಸತ್ವವನ್ನು ದಾಟುವುದು ಎಂದರೆ ಸ್ಥೂಲ ಸತ್ವವನ್ನು ದಾಟಿ, ಸೂಕ್ಷ್ಮ ಸತ್ವವನ್ನು ಸೇರುವುದು ಎಂದರ್ಥ]. ಹೀಗೆ ಮೂರು ಗುಣಗಳನ್ನು ದಾಟಿ ತ್ರಿಗುಣಾತೀತನಾದರೆ, ಆಗ ನಾವು ಈ ಸಂಸಾರದ ಹುಟ್ಟು-ಸಾವು-ರೋಗ-ಮುಪ್ಪು-ದುಃಖ ಎಲ್ಲವನ್ನು ದಾಟಿ ಭಗವಂತನನ್ನು ಸೇರಿ ಅಮರರಾಗಬಹುದು. ಇದರಿಂದ ಎಂದೂ ಹುಟ್ಟು ಸಾವಿಲ್ಲದ ಆನಂದದ ಸ್ಥಿತಿಯಾದ ಮೋಕ್ಷವನ್ನು ಪಡೆಯಲು ಸಾಧ್ಯ.

No comments:

Post a Comment