Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, November 27, 2011

Bhagavad GitA in Kannada Chapter-15 Shloka-01-02


ಅಧ್ಯಾಯ ಹದಿನೈದು

ಈ ಅಧ್ಯಾಯ ಗೀತೆಯಲ್ಲೇ ಅತ್ಯಂತ ಚಿಕ್ಕ ಅಧ್ಯಾಯ. ಇಲ್ಲಿ ಫಲಶ್ರುತಿಯ ಎರಡು ಶ್ಲೋಕಗಳನ್ನು ಬಿಟ್ಟರೆ, ಪ್ರಮೇಯ ಭಾಗವನ್ನು ಹೇಳುವ ಹದಿನೆಂಟು ಶ್ಲೋಕಗಳಿವೆ. ಈ ಹದಿನೆಂಟು ಶ್ಲೋಕದಲ್ಲಿ ಕೃಷ್ಣ ಇಡೀ ವಿಶ್ವದ ರಹಸ್ಯವನ್ನು ತೆರೆದಿಟ್ಟಿದ್ದಾನೆ. ಮಹಾಭಾರತ ಭಾರತೀಯ ತತ್ವಶಾಸ್ತ್ರದ ಸಾರವಾದರೆ, ಭಗವದ್ಗೀತೆ ಮಹಾಭಾರತದ ಸಾರ. ಇಂಥಹ ಭಗವದ್ಗೀತೆಯ ಸಾರ ಈ ಹದಿನೈದನೇ ಅಧ್ಯಾಯ. ಈ ಅಧ್ಯಾಯವನ್ನು ಅರ್ಥ ಮಾಡಿಕೊಂಡರೆ ಇಡೀ ಗೀತೆಯನ್ನಷ್ಟೇ ಅಲ್ಲ, ಇಡೀ ಭಾರತೀಯ ತತ್ವಶಾಸ್ತ್ರವನ್ನು ಅರ್ಥ ಮಾಡಿಕೊಂಡಂತೆ. ಶಂಕರಾಚಾರ್ಯರು ಈ  ಅಧ್ಯಾಯಕ್ಕೆ ವ್ಯಾಖ್ಯಾನ ಬರೆಯುತ್ತಾ ಹೇಳುತ್ತಾರೆ: “ನ ಕೇವಲ೦ ಗೀತಾರ್ಥಃ , ಕಿಂತು ಸರ್ವೋಪಿ ಶಾಸ್ತ್ರಾರ್ಥಃ ಅತ್ರ ಪರ್ಯವಸಿತಃ" ಎಂದು.  “ಇದು ಕೇವಲ ಗೀತೆಯ ಸಾರ ಅಲ್ಲ. ಎಲ್ಲ ಶಾಸ್ತ್ರಗಳು ಏನನ್ನು ಹೇಳುತ್ತವೆಯೋ ಅದೆಲ್ಲವೂ ಈ ಅಧ್ಯಾಯದಲ್ಲಡಗಿದೆ”.  The quintessence of entaire  Indian Philosophy is 15th Chapter of Bhagavad Gita. ಮಧ್ವಾಚಾರ್ಯರು ತಮ್ಮ ಹೆಚ್ಚಿನ ಗ್ರಂಥಗಳಲ್ಲಿ ಈ ಅಧ್ಯಾಯದ ಮೂರು ಶ್ಲೋಕಗಳನ್ನು(೧೬,೧೭,೧೮) ಉಲ್ಲೇಖ ಮಾಡುತ್ತಾರೆ. ಏಕೆಂದರೆ ಈ ಶ್ಲೋಕಗಳಲ್ಲೇ ಆಚಾರ್ಯರ ಎಲ್ಲ ಸಿದ್ಧಾಂತದ ಸಾರ ಅಡಗಿದೆ.
ಹಿಂದಿನ ಕಾಲದಲ್ಲಿ ಒಂದು ಸಂಪ್ರದಾಯವಿತ್ತು. ಊಟಕ್ಕೆ ಕುಳಿತಾಗ, ಊಟ ಪ್ರಾರಂಭಿಸುವ ಪೂರ್ವದಲ್ಲಿ ಈ ಅಧ್ಯಾಯದ ಶ್ಲೋಕವನ್ನು ಹೇಳಿ ಆಮೇಲೆ ಊಟ ಮಾಡುವುದು.  ‘ಊಟದ ಎಲೆಯ ಮುಂದೆ ಇಡೀ ಶಾಸ್ತ್ರದ ಸಾರವನ್ನು ನಾವು ಅನುಸಂಧಾನ ಮಾಡಿದಂತಾಯಿತು’ ಅನ್ನುವುದು ಈ ಸಂಪ್ರದಾಯದ ಹಿಂದಿನ ಕಾರಣ.
ಹದಿಮೂರನೇ ಅಧ್ಯಾಯದಲ್ಲಿ ಕ್ಷೇತ್ರ ಮತ್ತು ಕ್ಷೇತ್ರಜ್ಞರ ಬಗ್ಗೆ ಕೃಷ್ಣ ವಿವರಿಸಿದ್ದ. ವಿಶ್ವ ಮತ್ತು ವಿಶ್ವದ ನಿಯಾಮಕ ಭಗವಂತನ ವಿಷಯವನ್ನೇ ಇನ್ನೂ ಸ್ಪಷ್ಟವಾಗಿ, ಇನ್ನೊಂದು ಮುಖದೊಂದಿಗೆ ಈ ಅಧ್ಯಾಯದಲ್ಲಿ ಕೃಷ್ಣ ವಿವರಿಸುತ್ತಾನೆ. ಪ್ರಕೃತಿ ಮತ್ತು ಪ್ರಾಕೃತ ವಿಶ್ವ, ಆ ವಿಶ್ವವನ್ನು ದಾಟುವ ಬಗೆ ಮತ್ತು ಕೊನೆಯದಾಗಿ ಇಡೀ ತತ್ವಜ್ಞಾನದ ಸಂಗ್ರಹ ಈ ಅಧ್ಯಾಯದಲ್ಲಿದೆ. ನಾವು ತಿಳಿದುಕೊಳ್ಳಬೇಕಾದ ವಿಶಿಷ್ಟವಾದ ಅರಿವಿನ ಸಂದೇಶವನ್ನು ಕೃಷ್ಣ ಈ ಅಧ್ಯಾಯದ ಮೂಲಕ ಕೊಟ್ಟಿದ್ದಾನೆ.
ಚೇತನಾಚೇತನ ವಿಶ್ವ ‘ಕ್ಷರ’. ಅದರಿಂದಾಚೆಗೆ ಇರುವ ಚಿತ್ಪ್ರಕೃತಿ-ಅಕ್ಷರಳು. ಅದರಿಂದಾಚೆಗಿರುವ ಸರ್ವ ನಿಯಾಮಕ ಭಗವಂತ-ಪುರುಷೋತ್ತಮ. ಹನ್ನೆರಡನೆ ಅಧ್ಯಾಯದ ಪ್ರಾರಂಭದಲ್ಲಿ ವಿವರಿಸಿದಂತೆ- ಹದಿನೈದು ಬೇಲಿಗಳಿಂದ ಆವೃತವಾಗಿರುವ ಹದಿನಾರನೆಯವ ಜೀವ.  ಈ ಹದಿನೈದನ್ನು ಹದಿನಾರರ  ಸುತ್ತ ಬಿಗಿದವಳು ಹದಿನೇಳನೆಯವಳಾದ ಶ್ರೀಲಕ್ಷ್ಮಿ. ಈ ಬೇಲಿಯಿಂದ  ಬಿಡಿಸಿ ನಮಗೆ ಮೋಕ್ಷ ಕೊಡತಕ್ಕವನು ಹದಿನೆಂಟನೆಯವನಾದ ಪುರುಷೋತ್ತಮ. [ಈ ಹದಿನೈದು ಬೇಲಿಗಳ ಬಗ್ಗೆ ವಿವರವಾಗಿ ತಿಳಿಯಲು ಪ್ರಶ್ನೋಪನಿಷತ್ತಿನ ಆರನೇ ಪ್ರಶ್ನೆಯನ್ನು ನೋಡಿ. ಶ್ರದ್ಧಾಂ ಖಂ ವಾಯುಃ ಜ್ಯೋತಿಃ ಆಪಃ ಪೃಥಿವಿ ಇಂದ್ರಿಯಂ ಮನಃ  | ಅನ್ನಮನ್ನಾದಿ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾಃ  ಲೋಕೇಷು ಚ ನಾಮ ಚ || ೬-೪|| ಇವೇ ಆ ಹದಿನೈದು ಬೇಲಿಗಳು].

‘ಹದಿನೆಂಟು’ ತತ್ವಶಾಸ್ತ್ರದ ಸಮಷ್ಠಿಯನ್ನು ನಮ್ಮ ಮುಂದಿಡತಕ್ಕಂತಹ ಒಂದು ಸಂಖ್ಯೆ. ಈ ಅಧ್ಯಾಯದಲ್ಲಿ ಹದಿನೆಂಟು ಶ್ಲೋಕಗಳ ಮೂಲಕ ಕೃಷ್ಣ ಸಮಸ್ತ ಶಾಸ್ತ್ರದ ಸಾರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ಬನ್ನಿ ಈ ಅಪೂರ್ವ ಅಧ್ಯಾಯವನ್ನು ಕೃಷ್ಣನಿಂದ ಕೇಳಿ ತಿಳಿಯೋಣ.

ಭಗವಾನುವಾಚ
ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್     
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್                 

ಭಗವಾನ್ ಉವಾಚ-ಭಗವಂತ ಹೇಳಿದನು:
ಊರ್ಧ್ವಮೂಲಮ್ ಅಧಃ ಶಾಖಮ್ ಅಶ್ವತ್ಥಮ್ ಪ್ರಾಹುಃ ಅವ್ಯಯಮ್ 
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ –ಮೇಲಿರುವ ಭಗವಂತ ಮತ್ತು ಪ್ರಕೃತಿ ವಿಶ್ವದ ಬುಡಕಟ್ಟು. ಕೆಳಗಿನ ಜೀವ-ಜಡಗಳು ಇದರ ಟೊಂಗೆ-ಟಿಸಿಲು. ಇದು ಎಂದೆಂದೂ ಇರುವ,[ಅ+ಶ್ವಃ+ತ್ಥ= ಇಂದು ಇದ್ದಂತೆ ನಾಳೆ ಇರದ],[ಅಶ್ವ+ತ್ಥ=ಕುದುರೆಯಂತೆ ನಿರಂತರ ಚಲನಶೀಲವಾದ] ಅರಳಿಯ ಮರ. ವೇದಗಳು ಇದರ ಎಲೆಗಳು. ಇದನ್ನು ಬಲ್ಲವನು ವೇದಗಳನ್ನು ಬಲ್ಲವನು.

ಉಪನಿಷತ್ತಿನ ಸಾರವೇ ಭಗವದ್ಗೀತೆ ಎನ್ನುವುದಕ್ಕೆ ಈ ಶ್ಲೋಕವೇ ಸಾಕ್ಷಿ.   ಕಠೋಪನಿಷತ್ತಿನಲ್ಲಿ ಹೀಗೆ ಹೇಳಿದ್ದಾರೆ: “ಊರ್ಧ್ವಮೂಲೋ ಅವಾಕ್ ಶಾಖಃ ಏಷೋ ಅಶ್ವತ್ಥಃ ಸನಾತನಃ” ಎಂದು. ಇಲ್ಲಿ ಅದನ್ನು “ಊರ್ಧ್ವಮೂಲಮ್ ಅಧಃ ಶಾಖಮ್ ಅಶ್ವತ್ಥಮ್ ಪ್ರಾಹುಃ ಅವ್ಯಯಮ್” ಎಂದು ಹೇಳಿದ್ದಾರೆ. ಇದು ವಿಷಯ ಗರ್ಭಿತವಾದ ಸಾಲು. ಇಲ್ಲಿರುವ ಒಂದೊಂದು ಪದದಲ್ಲೂ ತತ್ವಶಾಸ್ತ್ರದ ಅನೇಕ ವಿಷಯಗಳು ಅಡಗಿವೆ.
ನೇರವಾಗಿ ಈ ಸಾಲನ್ನು ಕನ್ನಡಕ್ಕೆ ಭಾಷಾಂತರಿಸಿದರೆ “ಈ ವಿಶ್ವವೇ ಒಂದು ಅರಳಿ ಮರ. ಇದರ ಬುಡ ಇರುವುದು ಮೇಲೆ, ಟೊಂಗೆ-ಟಿಸಿಲುಗಳಿರುವುದು ಕೆಳಗೆ” ಎಂದಾಗುತ್ತದೆ. ಮೇಲ್ನೋಟಕ್ಕೆ  ಈ ಸಾಲನ್ನು ನೋಡಿದರೆ ನಮಗೆ ಏನೂ ಅರ್ಥವಾಗುವುದಿಲ್ಲ. ಶೀರ್ಷಾಸನ ಮಾಡುತ್ತಿರುವ ಅರಳಿ ಮರ- ಏನಿದು? ಅದರಲ್ಲೂ ಅಶ್ವತ್ಥ ಮರವನ್ನೇ ಕೃಷ್ಣ ಏಕೆ ಹೇಳಿದ? ಹಣ್ಣನ್ನೂ ಕೊಡದ, ಹೂವನ್ನೂ ಬಿಡದ, ಮನೆಕಟ್ಟಲೂ ಸಹಾಯಕವಲ್ಲದ ಈ ಮರದ ಪ್ರಸ್ತಾಪ ಏಕೆ? ಇದು ಅರ್ಥವಾಗಬೇಕಾದರೆ ನಾವು ‘ಅಶ್ವತ್ಥ’ ಪದದ ಹಿಂದಿರುವ ಅರ್ಥವನ್ನು ಹುಡುಕಬೇಕು. ಮೇಲ್ನೋಟದ ಅರ್ಥದಿಂದ ಒಂದೊಂದಾಗಿ ಎಳೆ-ಎಳೆಯಾಗಿ ಒಳಹೊಗಬೇಕು.
(೧) ಅಶ್ವತ್ಥ ಅನ್ನುವುದಕ್ಕೆ ಸ್ಥೂಲ ಅರ್ಥ ಅರಳಿ ಮರ. ಪ್ರಪಂಚದಲ್ಲಿರುವ ಎಲ್ಲ ಮರಗಳಿಗಿಂತ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದೆ ಎಲ್ಲ ಮರಗಳೂ ಸ್ಥಬ್ಧವಾಗಿರುವಾಗ , ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. ಆದರೆ ಅಶ್ವತ್ಥಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ‘ಚಲಧರಃ’ ಎಂದೂ ಕರೆಯುತ್ತಾರೆ. ಅಂದರೆ ಯಾವಾಗಲೂ ಚಲನಶೀಲವಾದ ಎಲೆಗಳುಳ್ಳ ಮರ ಅಶ್ವತ್ಥ. ಇದೇ ಪ್ರಪಂಚಕ್ಕೂ ಮತ್ತು ಅಶ್ವತ್ಥಮರಕ್ಕೂ ಇರುವ ಸಾಮ್ಯ. ಪ್ರಪಂಚ ಕೂಡ ಯಾವಾಗಲೂ ಚಲನಶೀಲ. ಅದು ಸದಾ ಚಲಿಸುತ್ತಾ ಬದಲಾಗುತ್ತಾ ಇರುತ್ತದೆ.
(೨) ಅಶ್ವ+ತ್ಥ: ಇಲ್ಲಿ ಅಶ್ವ ಎಂದರೆ ಕುದುರೆ. ಪ್ರಪಂಚ ಅಶ್ವದ ಹಾಗೆ ಇರುವಂಥದ್ದು. ಕುದುರೆಯನ್ನು ಗಮನಿಸಿದರೆ ನಮಗೆ ಈ ಅರ್ಥ ತಿಳಿಯುತ್ತದೆ. ಇತರ ಪ್ರಾಣಿಗಳಿಗೂ ಕುದುರೆಗೂ ಒಂದು ವೆತ್ಯಾಸವಿದೆ. ಎಲ್ಲಾ ಪ್ರಾಣಿಗಳೂ ವಿಶ್ರಾಮದ ಕಾಲದಲ್ಲಿ ನಿಶ್ಚಲವಾಗಿ ನಿಲ್ಲಬಲ್ಲವು. ಆದರೆ ಕುದುರೆ ಒಂದು ಕ್ಷಣವೂ ನಿಶ್ಚಲವಾಗಿ ನಿಲ್ಲದು. ಈ ಜಗತ್ತೂ ಕೂಡ ಅಶ್ವದಂತೆ. ಇದು ಎಂದೂ  ಸ್ಥಿರವಾಗಿ ನಿಲ್ಲುವುದಿಲ್ಲ.
(೩) ಅ+ಶ್ವ+ತ್ಥ –ಇಲ್ಲಿ ‘ಶ್ವ’ ಅಂದರೆ ನಾಳೆ, ‘ತ್ಥ’ ಅಂದರೆ ಇರುವಂಥದ್ದು. ಅಶ್ವತ್ಥ ಅಂದರೆ  “ನ ಶ್ವ ತಿಷ್ಠತಿ”. ಇಂದು ಇದೆ ಆದರೆ ನಾಳೆ ಇರುತ್ತದೆ ಎನ್ನುವ ಖಾತರಿ ಇಲ್ಲ. ಅಂದರೆ ಈ ಪ್ರಪಂಚ ಕ್ಷಣಿಕ. ಕಠೋಪನಿಷತ್ತಿನಲ್ಲಿ ಯಮ- ನಚಿಕೇತನಲ್ಲಿ “ನಿನಗೆ ಯಾವ ಸುಖಭೋಗ ಬೇಕಿದ್ದರೂ ಕೊಡುತ್ತೇನೆ” ಎಂದಾಗ, ನಚಿಕೇತ ಹೇಳುತ್ತಾನೆ: “ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್   ಸರ್ವೇಂದ್ರಿಯಾಣಾಂ ಜರಯಂತಿ ತೇಜಃ” ಎಂದು(೧-೨೬). “ಸದಾ ಬದಲಾಗುತ್ತಿರುವ,  ಕ್ಷಣಿಕವಾದ ಈ ಪ್ರಪಂಚದಲ್ಲಿ ನಮ್ಮನ್ನು ಕಿತ್ತು ತಿನ್ನುವ ಭೋಗ ನನಗೆ ಬೇಡ, ಬದಲಿಗೆ ಜ್ಞಾನವನ್ನು ಕೊಡು” ಎಂದು ನಚಿಕೇತ ಕೇಳುತ್ತಾನೆ.  ಬದಲಾವಣೆಯೇ ಜಗದ ನಿಯಮ.
(೪) ಅಶ್ವತ್ಥದ ಶಾಸ್ತ್ರೀಯ ನಿರ್ವಚನ ಅರ್ಥವನ್ನು ನೋಡಿದರೆ(etymologicaly)- ಅಶು+ವಾ+ತ+ಥ. ಇಲ್ಲಿ ಅಶು+ವಾ ಎಂದರೆ ಎಲ್ಲಕ್ಕಿಂತ ವೇಗವಾಗಿ ಹೋಗುವಂಥದ್ದು-ಅದು ಭಗವಂತ. ಅದಕ್ಕಾಗಿ ಭಗವಂತನನ್ನು ‘ಅಶ್ವ’ ಎಂದೂ ಕರೆಯುತ್ತಾರೆ. ಕುದುರೆ ಮುಖದ ಹಯಗ್ರೀವ ರೂಪದಲ್ಲಿ ಭಗವಂತ ಸಮಸ್ತ ವೇದ ವಿದ್ಯೆಯನ್ನು ಪ್ರಪಂಚಕ್ಕೆ ಕೊಟ್ಟ. ಎಲ್ಲವನ್ನು ಎಲ್ಲಕ್ಕಿಂತ ಮೊದಲು ತಿಳಿದ ಭಗವಂತ ಈ ಜಗತ್ತಿನಲ್ಲಿ, ಇದರ ಒಳಗೂ ಹೊರಗೂ ನಿಯಮನ ಮಾಡುವುದಕ್ಕೋಸ್ಕರ ‘ಅಶ್ವ’ ನಾಮಕನಾಗಿ ಕೂತಿದ್ದಾನೆ(ತ್ಥ). ಈತ ಇಡೀ ಪ್ರಪಂಚದಲ್ಲಿ ‘ತತ’(ತುಂಬಿದ್ದಾನೆ) ಮತ್ತು ಕೊನೆಗೆ ಇಡೀ ಜಗತ್ತು ಆತನಿಗೆ ಥಂ.(ಥಂ =ಆಹಾರ -ಇಡೀ ಜಗತ್ತನ್ನು ಕಬಳಿಸುವ ಶಕ್ತಿ-ಪ್ರಳಯದ ವಿವರಣೆ).
ಇವು ನಾವು ‘ಅಶ್ವತ್ಥ’ ಎನ್ನುವ ಪದದಲ್ಲಿ ಕಾಣಬಹುದಾದ ಅರ್ಥ. ಈ ರೀತಿ ಒಂದು ಪದದಲ್ಲಿ ಅನೇಕ ವಿಷಯಗಳನ್ನು ತುಂಬಿಸಲು ಬೇರೆ ಯಾವ ಭಾಷೆಯಲ್ಲೂ ಸಾಧ್ಯವಿಲ್ಲ. ಅದಕ್ಕಾಗಿ ಸಂಸ್ಕೃತವನ್ನು ಗರ್ಭಿಣಿ (ಅರ್ಥಗರ್ಭಿತ) ಭಾಷೆ ಎನ್ನುತ್ತಾರೆ. ಇಲ್ಲಿ ಹೇಳಿದ ಮರದ ಕಲ್ಪನೆ ಮತ್ತು ವಿವರಣೆ ಬೈಬಲ್ ನಲ್ಲಿ ಕೂಡಾ ಕಾಣಬಹುದು. ಅಲ್ಲಿ ಅವರು ಮರಕ್ಕೆ “The Garden of Eden” ಎಂದಿದ್ದಾರೆ. ಅಲ್ಲಿ ಹೇಳುತ್ತಾರೆ: but of the tree of the knowledge of good and evil, you shall not eat of it; for in the day that you eat of it you will surely die." ಅಂದರೆ: “ಈ ಮರ ಹಣ್ಣು ಬಿಡುತ್ತದೆ; ಈ ಹಣ್ಣನ್ನು ತಿಂದರೆ ನೀನು ಸಾಯುತ್ತೀಯ” ಎಂದು. ಇಲ್ಲಿ ಹಣ್ಣು ಅಂದರೆ ಅದು ಕರ್ಮಫಲ. ಕರ್ಮಫಲ ಅಪೇಕ್ಷೆ(demand) ಮಾಡುವವ ಸಾವಿಲ್ಲದ ಮೋಕ್ಷವನ್ನು ಪಡೆಯಲಾರ. ಆತ ನಿರಂತರ ಹುಟ್ಟು ಸಾವಿನ ಚಕ್ರದಲ್ಲಿ ಸುತ್ತುತ್ತಾನೆ ಎನ್ನುವುದು ಈ ಸಾಲಿನ ಅರ್ಥ.
ಪ್ರಾಹುಃ ಅವ್ಯಯಮ್” ಎನ್ನುವಲ್ಲಿ ‘ಪ್ರಾಹುಃ’ ಎಂದರೆ ತಿಳಿದು ಹೇಳುವುದು. “ವೇದಕಾಲದ ಋಷಿಗಳು ಈ ಪ್ರಪಂಚ ಒಂದು  ಅಶ್ವತ್ಥ ಎಂದು ತಿಳಿದು ಹೇಳಿದ್ದಾರೆ” ಎನ್ನುತ್ತಾನೆ ಕೃಷ್ಣ. 'ಈ ಪ್ರಪಂಚ ನಶ್ವರ, ಒಂದು ದಿನ ನಾಶವಾಗುವಥದ್ದು' ಎಂದು ಹೇಳಿ ತಕ್ಷಣ ಕೃಷ್ಣ ಹೇಳುತ್ತಾನೆ-“ಇದು ಅವ್ಯಯ” ಎಂದು! ಅಂದರೆ ನಾಶವಿಲ್ಲದ್ದು! ಇದು ಅರ್ಥವಾಗಬೇಕಾದರೆ ನಾವು ಸಮುದ್ರ ತಡಿಯಲ್ಲಿ ಹೋಗಿ ಕುಳಿತು ಅಲ್ಲಿ ಬರುವ ತೆರೆಗಳನ್ನು ಗಮನಿಸಬೇಕು. ಪ್ರತಿಯೊಂದು ತೆರೆಯೂ ಕೂಡ ಅಬ್ಬರದಿಂದ ಬರುತ್ತದೆ. ಅಲ್ಲಿ ಯಾವ ತೆರೆಯೂ ಶಾಶ್ವತವಲ್ಲ. ಎಲ್ಲ ತೆರೆಯೂ ಕ್ಷಣಿಕ. ಆದರೆ ಸಮುದ್ರದಲ್ಲಿ ತೆರೆ ಇಲ್ಲದ ಕ್ಷಣವಿಲ್ಲ. ಅದು ಅವ್ಯಯ. ಅದೇ ರೀತಿ ಒಂದು ಪ್ರಪಂಚ ನಾಶವಾಗುತ್ತದೆ, ಇನ್ನೊಂದು ಪ್ರಪಂಚ ಹುಟ್ಟುತ್ತದೆ. ಪ್ರಪಂಚ ನಾಶವಾಗಬಹುದು ಆದರೆ ಪ್ರಪಂಚದ ಪ್ರವಾಹ ನಿರಂತರ. ಒಂದು ಪ್ರಳಯದ ನಂತರ ಇನ್ನೊಂದು ಸೃಷ್ಟಿ; ಸೃಷ್ಟಿಯ ನಂತರ ಪ್ರಳಯ-ಇದು ನಿರಂತರ. ಆದ್ದರಿಂದ ಪ್ರಪಂಚ ಅವ್ಯಯ. ಜೀವ ಅನಾದಿ ಅನಂತ. ಹುಟ್ಟು ಸಾವು ನಿರಂತರ. ಜೀವ-ಜಡಗಳ ಸಮಾಗಮ ಜನನ, ಅದರ ಬೇರ್ಪಡುವಿಕೆ ಮರಣ. ಇಲ್ಲಿ ಎಲ್ಲವೂ ನಿರಂತರ ಬದಲಾವಣೆಯನ್ನು ಕಾಣುತ್ತದೆ. ಒಟ್ಟಿನಲ್ಲಿ ಈ ಜಗತ್ತು ಅಳಿವಿರದ ಅಶ್ವತ್ಥ.
ಇಲ್ಲಿ “ಈ ಮರದ ಮೂಲ ಮೇಲಿದೆ(ಊರ್ಧ್ವಮೂಲ)” ಎಂದಿದ್ದಾರೆ. ಮೇಲೆ ಅಂದರೆ ಎಲ್ಲಕ್ಕಿಂತ ಹಿರಿದಾದ ಭಗವಂತ. ಈ ಪ್ರಪಂಚ ಅನ್ನುವ ಮರಕ್ಕೆ ಮೂಲ ಆ  ಭಗವಂತ. ಪ್ರಪಂಚದ ಮೂಲದಲ್ಲಿ ಎಲ್ಲಕ್ಕಿಂತ ಎತ್ತರದಲ್ಲಿ ತಂದೆ-ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಜಡಪ್ರಕೃತಿಯಿಂದ ಈ ಮರ ವಿಕಸನವಾಗುತ್ತದೆ. ಭಗವಂತನಿಂದ ಚತುರ್ಮುಖಬ್ರಹ್ಮ(ಮಹತತ್ವ), ವಾಯು, ಗರುಡ-ಶೇಷ-ರುದ್ರರು(ಆಹಂಕಾರ ತತ್ವ), ಇಂದ್ರಾದಿ ದೇವತೆಗಳು, ಅವಾಂತರ ದೇವತೆಗಳು, ಗಂಧರ್ವರು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಹೀಗೆ ಒಂದರ ನಂತರ ಒಂದು ಶಾಖೆಗಳು ಸೃಷ್ಟಿಯಾದವು. ಇವೆಲ್ಲವೂ ಸೇರಿ ಒಂದು ಮರವಾಯಿತು. ಇಲ್ಲಿ ‘ಅಧಃ ಶಾಖಮ್’ ಅಂದರೆ  ಮೇಲಿನಿಂದ ಕೆಳಕ್ಕೆ ಬೆಳೆಯುವುದು. ಇದು ದೇವತಾ ತಾರತಮ್ಯವನ್ನು ಸೂಚಿಸುತ್ತದೆ.
ಮರದ ಟೊಂಗೆ-ಟಿಸಿಲಿನ ನಂತರ ಅದರ ಎಲೆಗಳು. “ಈ ಮರದ ಎಲೆಗಳೇ ವೇದಗಳು” ಎನ್ನುತ್ತಾನೆ ಕೃಷ್ಣ. ನಮಗೆ ತಿಳಿದಂತೆ ಪ್ರಪಂಚಕ್ಕೆ ಎರಡು ಮುಖ. ಒಂದು ನಾಮಾತ್ಮಕ ಪ್ರಪಂಚ, ಇನ್ನೊಂದು ರೂಪಾತ್ಮಕ ಪ್ರಪಂಚ. ಇಲ್ಲಿ ರೂಪಾತ್ಮಕ ಪ್ರಪಂಚ ಟೊಂಗೆ-ಟಿಸಿಲುಗಳಾದರೆ, ನಾಮಾತ್ಮಕ ಪ್ರಪಂಚ ಮರದ ಎಲೆ. ಮೊತ್ತ ಮೊದಲು ನಾಮಾತ್ಮಕ ಪ್ರಪಂಚದಲ್ಲಿ ಸೃಷ್ಟಿಯಾದದ್ದು ವೇದಗಳು. ವಸ್ತುವಿಗೆ ಒಂದು ಹೆಸರು ಕೊಟ್ಟಿರುವುದು ಈ ವೇದದಲ್ಲಿರುವ ವೈದಿಕ ಶಬ್ದಗಳು.
ಸರ್ವೇಷಾಂ ತ ಸ ನಾಮಾನಿ ಕರ್ಮಾಣಿ ಚ ಪೃಥಕ್ ಪೃಥಕ್
ವೇದಶಬ್ದೇಭ್ಯ ಏವಾದೌ ಪೃಥಕ್ ಸಂಸ್ಥಾಶ್ಚ ನಿರ್ಮಮೇ ॥ಮನುಸ್ಮೃತಿ ೧-೨೧||
ವೇದದಲ್ಲಿ ಏನು ಶಬ್ದಗಳಿವೆ ಅವು ಮೂಲತಃ ಭಗವಂತನ ನಾಮಗಳು. ಅದನ್ನೇ ಲೋಕಕ್ಕೆ ಬಳಸಿದರು. ಈ ರೀತಿ ಶಬ್ದಗಳ ಸೃಷ್ಟಿಯಾಯಿತು. ಅದೇ ಛಂದಸ್ಸು. ವೇದ ಮಂತ್ರಗಳು-ವೇದವಾಙ್ಮಯಗಳೇ ಈ ಮರದ ಎಲೆಗಳು.

ಏಕೆ ವೇದವನ್ನು ಇಲ್ಲಿ ಎಲೆಗೆ ಹೋಲಿಸಿದರು ಎಂದರೆ, ಒಂದು ಮರ ಹೂ-ಹಣ್ಣು ಕೊಡಬೇಕಾದರೆ ಅಲ್ಲಿ ಫಲಪ್ರದತ್ವ ಇರುವುದು ಎಲೆಗೆ. ಹಾಗೇ ನಮಗೆ ಅಧ್ಯಾತ್ಮ ಸಾಧನೆಯ ಫಲವನ್ನು ಕೊಡತಕ್ಕವು ವೇದಗಳು. ಈ ಕಾರಣಕ್ಕಾಗಿ ಮರವನ್ನು ವಿಶ್ವಕ್ಕೆ ಹೋಲಿಸಿದರೆ, ವೇದಗಳನ್ನು ಮರದ ಎಲೆಗಳಿಗೆ ಹೋಲಿಸಿದ ಕೃಷ್ಣ. ಪ್ರಳಯಕಾಲದಲ್ಲಿ ಮರ ನಾಶವಾಗುತ್ತದೆ. ಆದರೆ ಮರದ ಎಲೆ ನಾಶವಾಗುವುದಿಲ್ಲ. ಆದ್ದರಿಂದ ‘ಪ್ರಳಯ ಕಾಲದಲ್ಲಿ ಭಗವಂತ ಆಲದ ಎಲೆಯ ಮೇಲೆ ಮಲಗಿರುತ್ತಾನೆ’-ಎನ್ನುತ್ತಾರೆ. ವೇದ ನಿತ್ಯ ಅದಕ್ಕೆ ನಾಶವಿಲ್ಲ.  ಎಲೆಯ ಮೇಲೆ ಭಗವಂತ ಮಲಗಿದ ಎಂದರೆ ವೇದ ವಾಚ್ಯನಾಗಿ ಭಗವಂತ ಮಲಗಿದ ಎಂದರ್ಥ. ಪ್ರಳಯಕಾಲದಲ್ಲಿ ವೇದಗಳಿದ್ದವು ಎನ್ನುವುದು ಇದರಿಂದ ತಿಳಿಯುತ್ತದೆ. ಇಲ್ಲಿ ನಮಗೆ ಒಂದು ಪ್ರಶ್ನೆ ಬರಬಹುದು. ಯಾವ ವಸ್ತುವೂ ಇಲ್ಲದೇ ಇದ್ದಾಗ ವೇದಗಳಿದ್ದವು ಅಂದರೆ ಏನು ಅರ್ಥ? ಅಗ್ನಿಮೀಳೇ ಪುರೋಹಿತಂ... ಎನ್ನುವಲ್ಲಿ ಅಗ್ನಿಯೂ ಇಲ್ಲ, ಪುರೋಹಿತನೂ ಇಲ್ಲ. ಹೀಗಿರುವಾಗ ಯಾರು ವೇದವನ್ನು ಹೇಳುವವರು ಮತ್ತು ವೇದಗಳು ಪ್ರಳಯ ಕಾಲದಲ್ಲಿ ಯಾರನ್ನು ಹೇಳುತ್ತವೆ ?
ಪ್ರಳಯ ಕಾಲದಲ್ಲಿ ವೇದಗಳಿಗೆ ಭಗವಂತನೊಬ್ಬನೇ ಅರ್ಥ. ಇನ್ಯಾವ ಅರ್ಥವೂ ಇಲ್ಲ. ಹಾಗಾಗಿ ವೇದದಲ್ಲಿನ ಸರ್ವ ಶಬ್ದವೂ ಭಗವಂತನನ್ನು ಹೇಳುತ್ತವೆ. “ನಾಮಾನಿ ಸರ್ವಾಣಿ ಯಮಾ ವಿಷಂತಿ ತಮ್ ವೈ ವಿಷ್ಣುಂ ಪರಮ ಉದಾಹರಂತಿ”- ಯಾರಲ್ಲಿ ಎಲ್ಲಾ ಶಬ್ದಗಳು ಪ್ರವೇಶ ಮಾಡುತ್ತವೋ-ಅವನು ವಿಷ್ಣು. ಆತ ಸರ್ವ ಶಬ್ದವಾಚ್ಯ. ವಿಷ್ಣು ಅಂದರೆ “ವಿಷಂತಿ ಸರ್ವಾಣಿ ನಾಮಾನಿ ಅತ್ರ”. ಐತರೇಯ ಅರಣ್ಯಕದಲ್ಲಿ ಹೇಳುವಂತೆ: “ಸರ್ವೇ ಘೋಷಾಃ ಸರ್ವೇ ವೇದಾಃ ಸರ್ವಾಃ ರಚಃ ಎಕೈವ ವ್ಯಾಹೃತಿಃ...” ಪ್ರಕೃತಿಯಲ್ಲಿನ ಸರ್ವಶಬ್ದಗಳು, ಸರ್ವ  ನಾದಗಳು ಭಗವಂತನನ್ನು ಹೇಳುತ್ತವೆ. ಹೀಗಾಗಿ ಪ್ರಳಯ ಕಾಲದಲ್ಲಿ ವೇದಾಭಿಮಾನಿನಿ ಲಕ್ಷ್ಮಿ  ವೇದವನ್ನು ಹಾಡುತ್ತಿರುತ್ತಾಳೆ(ಶ್ರುತಿಗೀತ) ಮತ್ತು ಭಗವಂತ ಕೇಳುತ್ತಿರುತ್ತಾನೆ. ಇದು ನಾಮಾತ್ಮಕ ಪ್ರಪಂಚದ ಪರಿಕಲ್ಪನೆ. ಕೃಷ್ಣ ಹೇಳುತ್ತಾನೆ “ಇಲ್ಲಿ ಹೇಳಿದ ವಿಚಾರವನ್ನು ಯಾರು ತಿಳಿಯುತ್ತಾರೋ ಅವರು ಸಮಸ್ತ ವೇದವನ್ನು ತಿಳಿದಂತೆ” ಎಂದು.


ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ
ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬನ್ಧೀನಿ ಮನುಷ್ಯಲೋಕೇ         

ಅಧಃ ಚ ಊರ್ಧ್ವಂ ಪ್ರಸೃತಾಃ ತಸ್ಯ ಶಾಖಾ ಗುಣ ಪ್ರವೃದ್ಧಾಃ ವಿಷಯ ಪ್ರವಾಲಾಃ ।
ಅಧಃ ಚ  ಮೂಲಾನಿ ಅನುಸಂತತಾನಿ ಕರ್ಮ ಅನುಬನ್ಧೀನಿ ಮನುಷ್ಯಲೋಕೇ --ತ್ರಿಗುಣಗಳಿಂದ ಕೊಬ್ಬಿದ ಇದರ ಟೊಂಗೆಗಳು ಕೆಳಗೂ ಮೇಲೂ ಹಬ್ಬಿ ಹರಡಿವೆ. ಇಂದ್ರಿಯ ವಿಷಯಗಳೆ ಇವುಗಳ ತಳಿರುಗಳು. ಇದರ ಬುಡಕಟ್ಟುಗಳೂ ಜೀವಿಗಳ ಕರ್ಮಕ್ಕೆ ತಕ್ಕಂತೆ ಕೆಳಗೆ ಕೂಡ, ಭೂಮಿಯಲ್ಲು ಹರವಿಕೊಂಡಿವೆ.

ಮರದ ವರ್ಣನೆಯನ್ನು ಇಲ್ಲಿ ಮತ್ತಷ್ಟು ವಿವರಿಸಲಾಗಿದೆ. ಈ ಮರದ ಬೇರುಗಳು ಕೆಳಮುಖವಾಗಿಯೂ, ಮೇಲ್ಮುಖವಾಗಿಯೂ ಹರಡಿಕೊಂಡಿದೆ ಎನ್ನುವಲ್ಲಿ ಆಲದ ಮರದ ವರ್ಣನೆ ಎದ್ದು ಕಾಣುತ್ತದೆ. ಪಂಚಭೂತ ಎನ್ನುವ ಟೊಂಗೆ ಟಿಸಿಲು ಮೇಲಿನಿಂದ ಕೆಳಗಿನ ತನಕ ವ್ಯಾಪಿಸಿಕೊಂಡಿದೆ. ನಮ್ಮ ಶರೀರವನ್ನೇ ನೋಡಿದಾಗ- ನಮ್ಮ ಸಹಸ್ರಾರದಲ್ಲಿ ಭಗವಂತ ಕೂತಿದ್ದಾನೆ. ಮೇಲಿನಿಂದ ಕೆಳಗಿನ ತನಕ ಪಂಚಭೂತಗಳು, ಸತ್ವ-ರಜಸ್ಸು-ತಮಸ್ಸು ಎನ್ನುವ ತ್ರಿಗುಣಗಳು ಟೊಂಗೆಗಳಾಗಿ ನಿಂತಿವೆ. ಇಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಚಿಗುರೆಲೆಗಳಿದ್ದಂತೆ. ಅಂದರೆ ಪಂಚಭೂತಾತ್ಮಕವಾದ ವಿಷಯಗಳೇ ಈ ಮರದ ಚಿಗುರು. ಈ ಚಿಗುರು ನಮಗೆ ಯಾವಾಗಲೂ ಆಕರ್ಷಣೆ. ಭಗವಂತನ ಅನಂತ ರೂಪ ಮೇಲಿನಿಂದ ಕೆಳಗಿನ ತನಕ ನಮ್ಮ ಅಂಗಾಂಗದಲ್ಲಿ ತುಂಬಿದೆ.  ಅಲ್ಲಿ ನಮ್ಮ ಕರ್ಮವನ್ನು ಅವಲಂಬಿಸಿ ಅವನ ಕ್ರಿಯೆ. ಭಗವಂತನ ಮೂಲ ಮೇಲೆ, ಆದರೆ ಆತ ಮೇಲಿನಿಂದ ಕೆಳಗಿನ ತನಕ ಹರವಿಕೊಂಡಿದ್ದಾನೆ.  ಹೀಗೆ ಆತ ಎಲ್ಲ ಕಡೆ ವ್ಯಾಪಿಸಿ ನಿಂತಿದ್ದಾನೆ.      

Friday, November 25, 2011

Bhagavad GitA in Kannada Chapter-14 Shloka 26-27


ಇಲ್ಲಿಯ ತನಕ ತ್ರಿಗುಣಗಳ ಬಗ್ಗೆ ಮತ್ತು ತ್ರಿಗುಣಾತೀತರ ಸ್ವಭಾವದ ಬಗ್ಗೆ ವಿವರಿಸಿದ ಕೃಷ್ಣ, ಕೊನೆಯ ಎರಡು ಶ್ಲೋಕದಲ್ಲಿ ನಾವು ತ್ರಿಗುಣಾತೀತರಾಗುವ ಬಗೆ ಹೇಗೆ ಎನ್ನುವುದನ್ನು ವಿವರಿಸುತ್ತಾನೆ. ನಮ್ಮ ಎಲ್ಲ ಪ್ರವೃತ್ತಿಯೂ ಈ ಮೂರು ಗುಣಗಳ ಪರಿಮಿತಿಯಲ್ಲಿ ಇರುವಾಗ ತ್ರಿಗುಣವನ್ನು ಮೀರಿ ನಿಲ್ಲುವುದು ನಮಗೆ ಕಲ್ಪನಾತೀತ. ಹಾಗಾಗಿ ಇಲ್ಲಿ ಕೃಷ್ಣ ನಮಗೆ ತ್ರಿಗುಣಾತೀತರಾಗಲು ಇರುವ ಏಕಮಾತ್ರ ಮಾರ್ಗವನ್ನು ವಿವರಿಸುತ್ತಾನೆ.

ಮಾಂ ಚ ಯೋSವ್ಯಭಿಚಾರೇಣ ಭಕ್ತಿಯೋಗೇನ ಸೇವತೇ      
ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ              ೨೬

ಮಾಮ್ಯಃ ಅವ್ಯಭಿಚಾರೇಣ ಭಕ್ತಿಯೋಗೇನ ಸೇವತೇ   
ಸಃ ಗುಣಾನ್ ಸಮತೀತ್ಯ ಏತಾನ್ ಬ್ರಹ್ಮಭೂಯಾಯ ಕಲ್ಪತೇ – ನನ್ನನ್ನು ಎಡೆಬಿಡದೆ ಭಕ್ತಿಯಿಂದ ಆರಾಧಿಸುವವನು ಈ ಗುಣಗಳ ಕಟ್ಟನ್ನು ಹರಿದು, ಚೇತನ ಪ್ರಕೃತಿಯಂತೆ ಭಗವಂತನ ಭಕ್ತಿಗೆ ಪಾತ್ರನಾಗುತ್ತಾನೆ.[ಚೇತನ ಪ್ರಕೃತಿಯನ್ನು ಸೇರುತ್ತಾನೆ].

ನಾವು ನಾವಾಗಿ ತ್ರಿಗುಣಾತೀತರಾಗಬೇಕು ಎಂದು ಪ್ರಯತ್ನಿಸಿದರೆ ಆ ಪ್ರಯತ್ನದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಎಲ್ಲ ಯೋಚನೆ ತ್ರಿಗುಣದಲ್ಲೇ ಸುತ್ತುತ್ತಿರುತ್ತದೆ. ಇದೊಂದು ಚಕ್ರಭ್ರಮಣ. ಈ ಚಕ್ರ ಭ್ರಮಣದಿಂದ ಪಾರು ಮಾಡಲು ಆ ಚಕ್ರಧಾರಿಯೇ ಬರಬೇಕು. ದ್ವಾದಶಸ್ತೋತ್ರದಲ್ಲಿ ಹೇಳುವಂತೆ: “ತ್ರಿಗುಣಾತೀತ ವಿಧಾರಕ ಪರಿತೋ ದೇಹಿ ಸುಭಕ್ತಿಮ್”. ತ್ರಿಗುಣಾತೀತರನ್ನು ಧಾರಣೆ ಮಾಡುವವ ಆ ಭಗವಂತ. ಆದ್ದರಿಂದ ತ್ರಿಗುಣಾತೀತರಾಗಲು ಇರುವ ಮಾರ್ಗ ಒಂದೆ-ಆ ಭಗವಂತನಲ್ಲಿ ಶರಣಾಗುವುದು. ಲಕ್ಷ್ಮೀಸಮೇತನಾದ ಆ ಭಗವಂತನಲ್ಲಿ ಏಕನಿಷ್ಠೆಯಿಂದ ಅನನ್ಯ ಭಕ್ತಿ ಮಾಡುವುದರಿಂದ – ಲಕ್ಷ್ಮಿಯಿಂದ ಹದಿನೈದು ಬಂಧನದ ಬೇಲಿಯನ್ನು ಧರಿಸಿ ಪ್ರಪಂಚಕ್ಕೆ ಬಂದ ನಾವು, ಈ ಎಲ್ಲಾ ಬಂಧವನ್ನು ಕಳಚಿಕೊಂಡು ಮರಳಿ ತಾಯಿಯ ಮಡಿಲನ್ನು ಸೇರಬಹುದು.          

ಬ್ರಹ್ಮಣೋ ಹಿ ಪ್ರತಿಷ್ಠಾSಹಮಮೃತಸ್ಯಾವ್ಯಯಸ್ಯ ಚ
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ ೨೭

ಬ್ರಹ್ಮಣಃ  ಹಿ ಪ್ರತಿಷ್ಠಾಮ್ ಅಮೃತಸ್ಯವ್ಯಯಸ್ಯ ಚ
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯ ಐಕಾಂತಿಕಸ್ಯ ಚ –ಅಳಿವಿರದ ಬದಲಾಗದ ಚಿತ್ ಪ್ರಕೃತಿಗೂ ನಾನೆ ಆಸರೆ-ನೆಲೆ. ಸನಾತನ ಧರ್ಮಕ್ಕೆ ಮತ್ತು ಕೇವಲ ಸುಖಮಯವಾದ ಮೋಕ್ಷಕ್ಕೆ ಕೂಡ.

ಮೂರು ಗುಣಗಳನ್ನು ಮೀರಿ ನಿಂತಾಗ ಜೀವದ ಸಹಜ-ಶಾಶ್ವತ ಧರ್ಮ ಅಭಿವ್ಯಕ್ತವಾಗುತ್ತದೆ. ಈ ಸ್ಥಿತಿಯಲ್ಲಿ  ಬ್ರಹ್ಮತತ್ವವಾದ ಚಿತ್ ಪ್ರಕೃತಿ(ಶ್ರೀಲಕ್ಷ್ಮಿ)ಗೂ ಆಸರೆಯಾದ  ಆ ಭಗವಂತವಂತನನ್ನು ಮೋಕ್ಷದಲ್ಲಿ ಸೇರಬಹುದು.   

Bhagavad GitA in Kannada Chapter-14 Shloka 23-25


ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ      
ಗುಣಾ ವರ್ತಂತ ಇತ್ಯೇವ ಯೋSವತಿಷ್ಠತಿ ನೇಂಗತೇ                       ೨೩

ಉದಾಸೀನವತ್ ಆಸೀನಃ ಗುಣೈಃ ಯಃ  ನ ವಿಚಾಲ್ಯತೇ       
ಗುಣಾಃ ವರ್ತಂತ ಇತಿ  ಏವ ಯಃ ಅವತಿಷ್ಠತಿ ನ ಇಂಗತೇ –ಉದಾಸೀನನಂತೆ ಇದ್ದುಬಿಡುತ್ತಾನೆ. ಗುಣಗಳ ಸೆಳೆತಕ್ಕೆ ಕದಲುವುದಿಲ್ಲ. ಗುಣಗಳು ಇರುವಂಥವೆ ಎಂದು ತೆಪ್ಪಗೆ ಇದ್ದು ಬಿಡುತ್ತಾನೆ. ಅವುಗಳ ತಾಳಕ್ಕೆ ತಾನು ಕುಣಿಯುವುದಿಲ್ಲ.

ಪ್ರಾಪಂಚಿಕ ವ್ಯವಹಾರದಲ್ಲಿ ಈತ ಉದಾಸೀನನಂತೆ ಇದ್ದುಬಿಡುತ್ತಾನೆ. ನಮಗೆ ಬೇಕು ಬೇಡಗಳು ಬರುವುದು ತ್ರಿಗುಣಗಳಿಂದ. ತ್ರಿಗುಣಾತೀತ- “ಹಾಗಾಗಬೇಕು-ಹೀಗೇ ಆಗಬೇಕು” ಎಂದು ಬಯಸುವುದಿಲ್ಲ. “ಹೇಗಾಗಬೇಕೋ ಹಾಗೆ ಭಗವಂತ ಮಾಡುತ್ತಾನೆ” ಎನ್ನುವ ನಂಬಿಕೆ ಅವನಲ್ಲಿರುತ್ತದೆ.[ಇಲ್ಲಿ ಒಂದು ವಿಷಯವನ್ನು ನಾವು ತಿಳಿದುಕೊಳ್ಳಬೇಕು. ಪ್ರಪಂಚದಲ್ಲಿ ನಡೆಯುವ ಘಟನೆಗಳು ನಮ್ಮ ಅಧೀನವಲ್ಲ. ನಾವು ಆಗಬಾರದು ಅಂದುಕೊಳ್ಳುವುದು ಆಗಬಹುದು, ಆಗಬೇಕು ಅಂದುಕೊಳ್ಳುವುದು ಆಗದೇ ಇರಬಹುದು. ಹೀಗಿರುವಾಗ ‘ಹೀಗೇ ಆಗಬೇಕು’ ಎಂದು ವ್ಯರ್ಥವಾಗಿ ಮನಸ್ಸನ್ನು ಉದ್ವೇಗಕ್ಕೊಳಪಡಿಸುವುದರಲ್ಲಿ ಅರ್ಥವಿಲ್ಲ].  ಹೀಗೆ ಬದುಕಿದಾಗ-ಬಯಸಿದ್ದು ಆಗದಿದ್ದಾಗ ಕೋಪವಿಲ್ಲ, ಆದಾಗ ಹಾರಾಟವಿಲ್ಲ. ಮನಸ್ಸು ಪ್ರಸನ್ನವಾಗಿರುತ್ತದೆ.
ಇಂದ್ರಿಯಗಳು ಗುಣಗಳಲ್ಲಿ ಇರುತ್ತವೆ, ಇಂದ್ರಿಯಗಳ ಹಿಂದೆ ಗುಣಗಳಿರುತ್ತವೆ. ಆದರೆ ತ್ರಿಗುಣಾತೀತ ಇವೆಲ್ಲವನ್ನೂ ತಿಳಿದು, ತಲೆಕೆಡಿಸಿಕೊಳ್ಳದೆ, ಯಾವುದೇ ಕ್ರಿಯೆಯಲ್ಲಿ ಕೂಡ[ತಾತ್ಕಾಲಿಕ ಕ್ರಿಯೆಯಲ್ಲಿ ಕೂಡ] ಚಪಲವಿಲ್ಲದೆ ಬದುಕುತ್ತಾನೆ.        

ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ  
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ                     ೨೪

ಸಮ ದುಃಖಸುಖಃ ಸ್ವಸ್ಥಃ ಸಮ ಲೋಷ್ಟಶ್ಮ  ಕಾಂಚನಃ  
ತುಲ್ಯ ಪ್ರಿಯಪ್ರಿಯಃ  ಧೀರಃ ತುಲ್ಯ ನಿಂದಾತ್ಮ ಸಂಸ್ತುತಿಃ – ಸುಖ-ದುಃಖವನ್ನು ಸಮನಾಗಿ ಕಾಣುತ್ತಾನೆ. ತನ್ನಲ್ಲೆ ತಾನು ಇದ್ದುಬಿಡುತ್ತಾನೆ. ಮಣ್ಣು, ಕಲ್ಲು, ಚಿನ್ನ ಅವನಿಗೆ ಒಂದೆ ತರ. ಸಾಧನೆಯಿಂದ ಬಗೆ ಗಟ್ಟಿಗೊಂಡ ಅವನಿಗೆ ಪ್ರಿಯವೂ ಒಂದೆ; ಅಪ್ರೀಯವೂ ಒಂದೆ. ತೆಗಳಿಕೆಯೂ  ಒಂದೆ. ಹೊಗಳಿಕೆಯೂ ಒಂದೆ.

ತ್ರಿಗುಣಾತೀತ ಸರ್ವ ಸುಖ-ದುಃಖವನ್ನೂ ಸಮನಾಗಿ ಕಾಣುತ್ತಾನೆ. ಏಕೆಂದರೆ ನಮಗೆ ಮೇಲ್ನೋಟಕ್ಕೆ ಸುಖವೆಂದು ಕಾಣುವುದು ನಿಜವಾಗಿ ಸುಖವಾಗಿ ಇರಬೇಕಿಂದಿಲ್ಲ. ಅದೇ ರೀತಿ ದುಃಖ ಕೂಡ. ಇದನ್ನು ತಿಳಿದಾಗ ಎಲ್ಲವೂ ಭಗವಂತನ ಲೀಲೆ ಎನ್ನುವ ಭಾವನೆ ಮನಸ್ಸಿನಲ್ಲಿ ಹುಟ್ಟುತ್ತದೆ. ಆಗ ಎಲ್ಲವನ್ನು ಸಮನಾಗಿ ಕಾಣುವ ಕ್ಷಮತೆ ನಮ್ಮಲ್ಲಿ ಬೆಳೆಯುತ್ತದೆ.
ನಾವು ಹೇಗೆ ನಾಟಕದಲ್ಲಿ ನಡೆಯುವ ದೃಶ್ಯವನ್ನು ಪ್ರೇಕ್ಷಕರಂತೆ ಕಾಣುತ್ತೇವೋ, ಹಾಗೆ ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ಪ್ರೇಕ್ಷಕರಂತೆ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು. ಅದು ಸುಖಮಯವಿರಬಹುದು, ದುಃಖಮಯವಿರಬಹುದು-ಆದರೆ ನಾವು ಭಗವಂತನ ಒಂದೊಂದು ಕ್ರಿಯಯನ್ನೂ ಆಸ್ವಾಧಿಸಬೇಕು. ಜೀವನದಲ್ಲಿ ಬರುವ ತಾತ್ಕಾಲಿಕ ದುಃಖ  ನಮ್ಮ ಶಾಶ್ವತ ಸುಖಕ್ಕೆ ಕಾರಣವಾಗಿರುತ್ತದೆ. ಆದರೆ ಅದು ನಮಗೆ ತಿಳಿದಿರುವುದಿಲ್ಲ ಅಷ್ಟೆ. ತ್ರಿಗುಣಾತೀತರು ಈ ವಿಷಯವನ್ನು ಅರಿತು ಸುಖ-ದುಃಖವನ್ನು ಸಮನಾಗಿ ಕಾಣುತ್ತ ಆನಂದದಿಂದ ಬದುಕುತ್ತಿರುತ್ತಾರೆ.
ಹಿಂದೆ ಸ್ಥಿತಪ್ರಜ್ಞ ಮತ್ತು ಭಕ್ತರ ಲಕ್ಷಣ ಹೇಳುವಾಗ ಹೇಳಿದ ಮಾತುಗಳನ್ನು ಕೃಷ್ಣ ಇಲ್ಲಿ ಮತ್ತೆ ಪುನರುಚ್ಛರಿಸುತ್ತಾನೆ. ತ್ರಿಗುಣಾತೀತನಿಗೆ ಮಣ್ಣು, ಅಮೂಲ್ಯ ರತ್ನ, ಚಿನ್ನ-ಎಲ್ಲವೂ ಒಂದೆ. ಆತನಿಗೆ ಚಿನ್ನವಾಗಲಿ, ರತ್ನವಾಗಲಿ ಅಮೂಲ್ಯ ಎಂದು ಕಾಣುವುದಿಲ್ಲ.  ಆತನಿಗೆ ಅಮೂಲ್ಯ-ಜ್ಞಾನವೊಂದೆ. ಈ ಕಾರಣದಿಂದ ಆತ ಹಣದಲ್ಲಾಗಲಿ, ಮುತ್ತು-ರತ್ನದಲ್ಲಾಗಲಿ, ಬಂಗಾರದಲ್ಲಾಗಲಿ ಯಾವುದೇ ರೀತಿಯ ಅಭಿಲಾಷೆ ತೋರುವುದಿಲ್ಲ. ಆದ್ದರಿಂದ ಆತ ಸಂತೋಷದಿಂದ ಬದುಕುತ್ತಾನೆ. ಭಾಗವತದ ಮೂರನೇ ಸ್ಕಂದದಲ್ಲಿ ಬರುವ ಒಂದು ಶ್ಲೋಕ ಈ ರೀತಿ ಹೇಳುತ್ತದೆ:    
ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇಃ ಪರಂ ಗತಃ
ತಾವುಭೌ ಸುಖಮೇಧೇತೇ ಕ್ಲಿಶ್ಯತ್ಯಂತರಿತೋ ಜನಃ             ||೩-೭-೧೭||
ಒಬ್ಬ ಮೂಢ ಮತ್ತು ಇನ್ನೊಬ್ಬ ಜ್ಞಾನಿ- ಇವರಿಬ್ಬರು ಲೋಕದಲ್ಲಿ ಸುಖದಿಂದ ಬದುಕಬಲ್ಲರು ಎಂದು. ಏಕೆಂದರೆ ಇವರಿಗೆ ಹಣದ ಮೋಹವಿರುವುದಿಲ್ಲ. ಆದರೆ ಇವೆರಡರ ಮಧ್ಯದಲ್ಲಿರುವವರು-ಜೀವನದ ಅರ್ಥ ತಿಳಿಯದೆ ಮೋಹಕ್ಕೆ ಬಲಿಯಾಗಿ ದುಃಖ ಅನುಭವಿಸುತ್ತಾರೆ.
ಹೇಗೆ ಜ್ಞಾನಿಗಳು ತಮ್ಮ ಜೀವನದಲ್ಲಿ ಈ ತತ್ವವನ್ನು ಅಳವಡಿಸಿಕೊಂಡು ಬದುಕುತ್ತಾರೆ ಎನ್ನುವುದಕ್ಕೆ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಉತ್ತಮ ನಿದರ್ಶನ. ಮೈಸೂರು ಮಹಾರಾಜರ ಕಾಲದಲ್ಲಿ ಸೋದೆಮಠದ ಸ್ವಾಮಿಗಳಾಗಿದ್ದ ವಿಶ್ವಪ್ರೀಯತೀರ್ಥರು (ವೃಂದಾವನಾಚಾರ್ಯರು) ಬದುಕಿದ ಜೀವನ ಶೈಲಿ ಇದಕ್ಕೆ ಇನ್ನೊಂದು ಉತ್ತಮ ದೃಷ್ಟಾಂತ.
ಈ ಶ್ಲೋಕವನ್ನು ಇನ್ನೊಂದು ಮುಖದಲ್ಲಿ ನೋಡಿದಾಗ ನಮಗೆ ಇನ್ನೂ ಒಂದು ವಿಶೇಷ ಸಂದೇಶ ತಿಳಿಯುತ್ತದೆ. ಒಬ್ಬ ನಿಜವಾದ ಭಕ್ತ(ತ್ರಿಗುಣಾತೀತ)ನ ಭಗವದ್ ಭಕ್ತಿ ಆತನ ಜೀವನದಲ್ಲಿ ಬರುವ ಸುಖ-ದುಃಖಗಳಿಂದ ಏರುಪೇರಾಗುವುದಿಲ್ಲ. ಬಡತನವಿರಲಿ-ಸಿರಿತನವಿರಲಿ ಈತ ನಿರಂತರ ಭಗವಂತನ ಭಕ್ತಿಯಲ್ಲಿ ತೊಡಗಿರುತ್ತಾನೆ. ಈತನ ಭಕ್ತಿಗೆ ಇನ್ನೊಬ್ಬರ ಪ್ರೀತಿ-ದ್ವೇಷ ಎಂದೂ ಮಾನದಂಡವಲ್ಲ. ಈ ರೀತಿ ತ್ರಿಗುಣಾತೀತರು  ಎಲ್ಲ ಸ್ಥಿತಿಯಲ್ಲೂ ಸಮಾನತೆಯಿಂದ ಬದುಕುತ್ತಾರೆ.    

ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ  
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ                          ೨೫

ಮಾನಪಮಾನಯೋಃ ತುಲ್ಯಃ  ತುಲ್ಯಃ ಮಿತ್ರರಿ ಪಕ್ಷಯೋಃ       
ಸರ್ವಾರಂಭ ಪರಿತ್ಯಾಗೀ ಗುಣಾತೀತಃ ಸ ಉಚ್ಯತೇ -- ಸಮ್ಮಾನವೂ ಒಂದೆ; ಅಪಮಾನವೂ ಒಂದೆ. ಗೆಳೆಯರ ಬಳಗವೂ ಒಂದೆ; ಹಗೆಯರ ಬಳಗವೂ ಒಂದೆ. ಅವನು ಇಂಥ ಯಾವ ಲೌಕಿಕದಲ್ಲೂ ತೊಡಗಿಕೊಳ್ಳುವುದಿಲ್ಲ. ಅಂಥವನು ‘ಗುಣಾತೀತ’ ಎನ್ನಿಸುತ್ತಾನೆ.


ತ್ರಿಗುಣಾತೀತರನ್ನು ಒಬ್ಬರು 'ಮಹಾನ್ ಜ್ಞಾನಿ' ಎಂದು ಸಮ್ಮಾನಿಸಿ ಮಾತನಾಡಬಹುದು, ಇನ್ನೊಬ್ಬರು ಆತ 'ಅರೆಹುಚ್ಚ'  ಎಂದು ನಿಂದಿಸಬಹುದು. ಆದರೆ ಇದ್ಯಾವುದೂ ಅವರ ಮೇಲೆ ಪರಿಣಾಮಬೀರದು.  ಇವರಿಗೆ ಸ್ನೇಹಿತರು ಎನ್ನುವ ಮೋಹವಾಗಲಿ, ಶತ್ರುಗಳು ಎನ್ನುವ ದ್ವೇಷವಾಗಲಿ ಇರುವುದಿಲ್ಲ. ಇವರು ಎಲ್ಲರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಕಾಣುತ್ತ, ಭಗವಂತನ ಭಕ್ತಿಗೆ ವಿರುದ್ಧವಾದ ಯಾವ ಚಟುವಟಿಕೆಯಲ್ಲೂ ತೊಡಗದೆ ಬದುಕುತ್ತಾರೆ. ಇವರು ದೀರ್ಘಕಾಲದ ಯಾವುದೇ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ. 
ಹೀಗೆ ಮೇಲಿನ ನಾಲ್ಕು ಶ್ಲೋಕದಲ್ಲಿ ಹೇಳಿದ ಎಲ್ಲ ಸ್ವಭಾವವುಳ್ಳವರು ಗುಣಾತೀತರೆನಿಸುತ್ತಾರೆ.  

Thursday, November 24, 2011

Bhagavad GitA Kannada Chapter-14 Shloka 21-22


ಇಲ್ಲಿ ಕೃಷ್ಣ ತ್ರಿಗುಣವನ್ನು ದಾಟಿದಾಗ ಅದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ. ಹೀಗೆ ಹೇಳಿದಾಗ  ಸಹಜವಾಗಿ ನಮಗೊಂದು ಪ್ರಶ್ನೆ ಬರುತ್ತದೆ. ಅದೇ ಪ್ರಶ್ನೆಯನ್ನು ಮುಂದಿನ ಶ್ಲೋಕದಲ್ಲಿ ಅರ್ಜುನ ಕೃಷ್ಣನ ಮುಂದಿಡುತ್ತಾನೆ.   

ಅರ್ಜುನ ಉವಾಚ
ಕೈರ್ಲಿಗೈಸ್ತ್ರೀನ್ ಗುಣಾನೇತಾನತೀತೋ ಭವತಿ ಪ್ರಭೋ
ಕಿಮಾಚಾರಃ ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ                   ೨೧

ಅರ್ಜುನ ಉವಾಚ-ಅರ್ಜುನ ಕೇಳಿದನು:
ಕೈಃ ಲಿಂಗೈಃ ತ್ರೀನ್ ಗುಣಾನ್ ಏತಾನ್ ಅತೀತಃ  ಭವತಿ ಪ್ರಭೋ
ಕಿಮ್ ಆಚಾರಃ ಕಥಮ್ ಚ ಏತಾನ್ ತ್ರೀನ್  ಗುಣಾನ್ ಅತಿವರ್ತತೇ—ಒಡೆಯನೆ, ಯಾವ ಕುರುಹುಗಳಿಂದ ಈ ಮೂರು ಗುಣಗಳನ್ನು ದಾಟಿದವನೆನ್ನಿಸುತ್ತಾನೆ ? ಅವನ ನಡೆವಳಿಕೆ ಎಂಥದು ? ಹೇಗೆ ಈ ಮೂರು ಗುಣಗಳನ್ನು ದಾಟುತ್ತಾನೆ?

ನಮ್ಮ ನಿಮ್ಮೆಲ್ಲರ ಪರವಾಗಿ ಅರ್ಜುನ ಕೃಷ್ಣನಲ್ಲಿ ಪ್ರಶ್ನೆ ಹಾಕುತ್ತಾನೆ. ಆತ ಕೇಳುತ್ತಾನೆ: “ಮೂರು ಗುಣಗಳನ್ನು ದಾಟಿದವನೊಬ್ಬನಿದ್ದರೆ ಅವನನ್ನು ಗುರುತಿಸುವುದು ಹೇಗೆ? ಆತನ ಕುರುಹು ಏನು? ಅವನ ನಡತೆ ಹೇಗಿರುತ್ತದೆ? ಈ ಮೂರು ಗುಣಗಳನ್ನು ಆತ ಹೇಗೆ ದಾಟುತ್ತಾನೆ?”
ಇಲ್ಲಿ ಅರ್ಜುನ ಕೃಷ್ಣನನ್ನು “ಪ್ರಭೋ” ಎಂದು ಸಂಬೋಧಿಸುತ್ತಾನೆ. “ನನ್ನ ಪ್ರಶ್ನೆಗಳಿಗೆ ಖಂಡಿತವಾಗಿ ಉತ್ತರ ಕೊಡಬಲ್ಲವ-ನೀನೊಬ್ಬನೆ” ಎನ್ನುವ ಧ್ವನಿ ಮತ್ತು ‘ಪೂರ್ಣ ಶರಣಾಗತಿ’  ಈ ಸಂಬೋಧನೆಯ ಹಿಂದಿದೆ.  ಭಗವಂತ ಅರ್ಜುನನ ಈ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ವಿವರವಾಗಿ ಉತ್ತರಿಸಿದ್ದಾನೆ.

ಭಗವಾನುವಾಚ
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ
ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ                            ೨೨

ಭಗವಾನ್ ಉವಾಚ-ಭಗವಂತ ಹೇಳಿದನು:
ಪ್ರಕಾಶಮ್ ಚ ಪ್ರವೃತ್ತಿಮ್ ಚ ಮೋಹಮ್ ಏವ  ಚ ಪಾಂಡವ
ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ—ಪಾಂಡವ, ಲೌಕಿಕದ ತಿಳಿವಿನ ಬೆಳಕನ್ನಾಗಲಿ, ಕಾಯಕದ ಹುರುಪನ್ನಾಗಲಿ, ಭ್ರಾಂತಿಯನ್ನೆ ಆಗಲಿ- ಇದ್ದಾಗ ದ್ವೇಷಿಸುವುದಿಲ್ಲ; ಇರದಾಗ ಬಯಸುವುದಿಲ್ಲ.

ತ್ರಿಗುಣಗಳನ್ನು ದಾಟಿದವ ಯಾವುದೋ ಅನಪೇಕ್ಷವಾದುದು ಬಂದಾಗ ಅದನ್ನು ದ್ವೇಷಿಸುವುದಿಲ್ಲ; ಅಪೇಕ್ಷಿತವಾದುದು ಬಾರದೇ ಇದ್ದಾಗ ಅದನ್ನು ಅಪೇಕ್ಷಿಸುವುದಿಲ್ಲ. “ಯಾವುದು ಬೇಕು, ಯಾವುದು ಬೇಡ ಎನ್ನುವುದು ನನಗಿಂತ ಚನ್ನಾಗಿ ಭಗವಂತನಿಗೆ ಗೊತ್ತಿದೆ. ಅದಕ್ಕಾಗಿ ನಾನೇಕೆ ತಲೆ ಕೆಡಿಸಿಕೊಳ್ಳಬೇಕು” ಎನ್ನುವ ನಿರ್ಲಿಪ್ತತೆ ಆತನಲ್ಲಿರುತ್ತದೆ. ಜೀವನದಲ್ಲಿ ಏನು ಬಂತೋ ಅದನ್ನು ಆತ ಸ್ವಾಗತಿಸುತ್ತಾನೆ. ವ್ಯಾಸರು ಮಹಾಭಾರತದ ಶಾಂತಿಪರ್ವದಲ್ಲಿ ಒಂದು ಮಾತನ್ನು ಹೇಳಿದ್ದಾರೆ:
ಏವಂ ಅಪ್ಯ ಅಶುಭಂ ಕರ್ಮ ನ ಭೂತಂ ನ ಭವಿಷ್ಯತಿ  ||೧೨-೩೨-೧೮||
“ಆಗಬಾರದ್ದು ಹಿಂದೆ ಆಗಿಲ್ಲ, ಮುಂದೆ ಆಗುವುದೂ ಇಲ್ಲ. ಏನು ಆಗಬೇಕೋ ಅದು ಘಟಿಸಿಯೇ ತೀರುತ್ತದೆ. ಅದನ್ನು ನಾನು ಬೇಡ ಎಂದು ದ್ವೇಷಿಸಿ ಫಲವೇನು?”. ಆದ್ದರಿಂದ ತ್ರಿಗುಣವನ್ನು ದಾಟಿದವನು- ಬಂದಾಗ 'ಬೇಡ' ಎಂದು ದ್ವೇಷಿಸುವುದಿಲ್ಲ; ಇಲ್ಲದ್ದನ್ನು ಬಯಸುವುದೂ ಇಲ್ಲ.  ಎಲ್ಲವನ್ನು ನಿರ್ವೀಕಾರನಾಗಿ ನೋಡುತ್ತಾ, ತುಂಬಿದ ಕೊಡದಂತೆ ತುಳುಕದೆ ಬದುಕುತ್ತಾನೆ.
ಲೋಕದಲ್ಲಿ ಕೆಲವರಿಗೆ ಸತ್ವದಲ್ಲಿ ಆಸಕ್ತಿಯಾದರೆ ಇನ್ನು ಕೆಲವರಿಗೆ ಕೇವಲ ಪ್ರವೃತ್ತಿ. ಮತ್ತೆ ಕೆಲವರಿಗೆ ಯಾವ ಆಸಕ್ತಿಯೂ ಇಲ್ಲ- ಕತ್ತಲನ್ನು ಕತ್ತಲು ಎಂದು ತಿಳಿಯದೆ ಕತ್ತಲಲ್ಲೇ ಬದುಕುವವರಿದ್ದಾರೆ. ಇದು ಸರ್ವೇಸಾಮಾನ್ಯವಾಗಿ ಕಾಣುವ ವಿಚಾರ. ತ್ರಿಗುಣವನ್ನು ಮೀರಿ ನಿಂತವರು ಇದನ್ನು ನೋಡಿ ತಮ್ಮ ಮನಸ್ಸನ್ನು ವಿಕಾರ ಮಾಡಿಕೊಳ್ಳುವುದಿಲ್ಲ.  “ಅವರವರ ಗುಣ ಪ್ರಭಾವಕ್ಕನುಗುಣವಾಗಿ ಎಲ್ಲವೂ ನಡೆಯುತ್ತಿದೆ” ಎಂದು ತಿಳಿದು ತಟಸ್ಥರಾಗಿ ಬದುಕುತ್ತಾರೆ. ಸತ್ಯವೆಂದು ಕಂಡದ್ದನ್ನು ಇವರು ಹೇಳುತ್ತಾರೆ. ಆದರೆ ಎಂದೂ ವಾದ ವಿವಾದವನ್ನು ಬೆಳೆಸುವುದಿಲ್ಲ. “ಎಲ್ಲವೂ ಭಗವಂತನ ಲೀಲೆ, ಆತ ಮಾಡಿದ ವ್ಯವಸ್ಥೆ” ಎಂದು ಎಲ್ಲವನ್ನು ಸ್ವೀಕರಿಸುತ್ತಾರೆ. ಗೀತೆಯ ಹನ್ನೆರಡನೇ ಅಧ್ಯಾಯದಲ್ಲಿ ‘ನಿಜವಾದ ಭಕ್ತ’ ಹೇಗಿರುತ್ತಾನೆ ಎಂದು ವಿವರಿಸುವಾಗ ಕೃಷ್ಣ ಈ ಶ್ಲೋಕದಲ್ಲಿ ಕೊಟ್ಟ ವಿವರಣೆಯನ್ನೇ  ಕೊಟ್ಟಿದ್ದಾನೆ. ಪೂರ್ಣಭಕ್ತಿ ಎಂದರೆ ಹೊರಗಿನ ಗುಣವನ್ನು ಮೀರಿ ನಿಲ್ಲುವುದು. 
ಇಲ್ಲಿ ವ್ಯಾಸರು ‘ಪಾಂಡವ’ ಎನ್ನುವ ವಿಶೇಷಣವನ್ನು ಬಳಸಿದ್ದಾರೆ. ಪಾಂಡಾ ಎಂದರೆ ಜ್ಞಾನಿ. ಪಾಂಡವ ಎಂದರೆ ಜ್ಞಾನವನ್ನು ಗುರುತಿಸಿ ತಲೆಬಾಗುವವನು. “ತ್ರಿಗುಣಾತೀತನಾಗುವ ಮೊದಲು ನೀನು ಪಾಂಡವನಾಗಬೇಕು” ಎನ್ನುವ ಸಂದೇಶ ಈ ವಿಶೇಷಣದ ಹಿಂದಿದೆ. 

Tuesday, November 22, 2011

Bhagavad GitA in Kannada Chapter-14 Shloka-18-20


ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ                           ೧೮

ಊರ್ಧ್ವಮ್ ಗಚ್ಛಂತಿ ಸತ್ತ್ವಸ್ಥಾಃ  ಮಧ್ಯೇ ತಿಷ್ಠಂತಿ ರಾಜಸಾಃ
ಜಘನ್ಯಗುಣ ವೃತ್ತಿಸ್ಥಾಃ  ಅಧಃ  ಗಚ್ಛಂತಿ ತಾಮಸಾಃ—ಸತ್ವದಲ್ಲಿ ನೆಲೆಗೊಂಡವರು ಎತ್ತರಕ್ಕೆರುತ್ತಾರೆ. ರಾಜಸರು ನಡುವಿನಲ್ಲಿ ನಿಲ್ಲುತ್ತಾರೆ. ‘ಕೊನೆಯ ಗುಣದ’ ಪ್ರಭಾವಕ್ಕೊಳಗಾದ ತಾಮಸರು ಕೆಳಕ್ಕೆ ಕುಸಿಯುತ್ತಾರೆ.

ತ್ರಿಗುಣದ ಸ್ವಭಾವವನ್ನು ಹೇಳಿದ ಕೃಷ್ಣ, ಅದರ ಪರಿಣಾಮದ ಮೂರು ಮಜಲನ್ನು ಈ ಶ್ಲೋಕದಲ್ಲಿ ವಿವರಿಸಿದ್ದಾನೆ. ಸತ್ವದಲ್ಲಿರುವವರು ಮಾನಸಿಕವಾಗಿ ಮೇಲಕ್ಕೇರುತ್ತಾರೆ. ರಜೋಗುಣದವನಿಗೆ ಯಾವ ಏಳಿಗೆಯೂ ಇಲ್ಲ. ತಮಸ್ಸಿನಲ್ಲಿರುವವ  ಮಾನಸಿಕವಾಗಿ ಅಧಃಪಾತ ಹೊಂದುತ್ತಾನೆ. ಇಲ್ಲಿ ‘ಊರ್ಧ್ವ’ ಎನ್ನುವ ಪದಕ್ಕೆ ವಿಶೇಷವಾದ ಅರ್ಥವಿದೆ.  ಕಠೋಪನಿಷತ್ತಿನಲ್ಲಿ ಹೇಳುವಂತೆ :
ಊರ್ಧ್ವಮೂಲೋ ಅವಾಕ್ಶಾಖಃ ಏಷೋ ಅಶ್ವತ್ಥಃ ಸನಾತನಃ  ||೨-೩-೧||
ಊರ್ಧ್ವ ಎಂದರೆ ಎಲ್ಲಕ್ಕಿಂತ ಮೇಲಿರುವ ಭಗವಂತ. ಸತ್ವದಲ್ಲಿರುವವ ಮೇಲಕ್ಕೆ ಹೋಗುವುದು ಅಂದರೆ- ಭಗವಂತನ ಕಡೆ ಮುಖಮಾಡಿ ಚಲಿಸುವುದು. ಆತ ಮುಂದೆ ಹೋದಂತೆ ಭಗವಂತನಿಗೆ ಹತ್ತಿರವಾಗುತ್ತಾ ಹೋಗುತ್ತಾನೆ. ಆದರೆ ತಮಸ್ಸಿನಲ್ಲಿರುವವ ಭಗವಂತನಿಗೆ ಬೆನ್ನು ಹಾಕಿ ಚಲಿಸುತ್ತಿರುತ್ತಾನೆ. ರಾಜಸ ಇದ್ದಲ್ಲೇ ಅತಂತ್ರ ಸ್ಥಿತಿಯಲ್ಲಿ ಮುಂದುವರಿಯುತ್ತಾನೆ. 
ದೇವತೆಗಳನ್ನು ಬಂಧನದಲ್ಲಿಡುವ ಶಕ್ತಿ ‘ಶ್ರೀದೇವಿ’; ಮಾನವರನ್ನು ಬಂಧನದಲ್ಲಿಡುವ ಶಕ್ತಿ ‘ಭೂದೇವಿ’ ಮತ್ತು ರಾಕ್ಷಸರನ್ನು ಬಂಧನದಲ್ಲಿಡುವ ಶಕ್ತಿ ‘ದುರ್ಗಾದೇವಿ’. ಸಾತ್ವಿಕರು ಸತ್ವಮಾನಿನಿಯಾದ ‘ಶ್ರೀದೇವಿಯ’ ಕೃಪೆಗೆ ಪಾತ್ರರಾಗಿ ಮೇಲಿನ ಲೋಕವನ್ನು ಪಡೆಯುತ್ತಾರೆ[ಭೂಮಿಯಿಂದ ಮೇಲೆ ಇರುವ ಆರು ಸೂಕ್ಷ್ಮ ಲೋಕಗಳು ಮತ್ತು ಕೊನೆಗೆ ಮೋಕ್ಷ]; ರಾಜಸರು ಭೂದೇವಿಯ ಬಂಧನದಲ್ಲೇ ಮುಂದುವರಿಯುತ್ತಾರೆ[ಭೂಮಿ ಮತ್ತು ಅಂತರಿಕ್ಷ] ಮತ್ತು ತಾಮಸರು ದುರ್ಗಾದೇವಿಯ ನಿಯಂತ್ರಣದಲ್ಲಿರುವ ತಾಮಸಲೋಕ [ಭೂಮಿಯಿಂದ ಕೆಳಗಿರುವ ಏಳು ಸೂಕ್ಷ್ಮಲೋಕಗಳು]ವನ್ನು ಸೇರುತ್ತಾರೆ.

ನಾ[S]ನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾSನುಪಶ್ಯತಿ
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋSಧಿಗಚ್ಛತಿ                      ೧೯

ನ್ಯಮ್ ಗುಣೇಭ್ಯಃ ಕರ್ತಾರಮ್ ಯದಾ ದ್ರಷ್ಟಾನುಪಶ್ಯತಿ       
ಗುಣೇಭ್ಯಃ ಚ  ಪರಮ್ ವೇತ್ತಿ ಮತ್ ಭಾಮ್ ಸಃ ಅಧಿಗಚ್ಛತಿ – ಈ ಎಲ್ಲಾ ಪರಿಣಾಮಗಳಿಗೆ ತ್ರಿಗುಣಗಳಲ್ಲದೆ ಬೇರೆ ಕಾರಣವಿಲ್ಲ ಎಂದು ಕಂಡುಕೊಂಡವನು[ತ್ರಿಗುಣಗಳಿಂದ ಭಿನ್ನನಾದ ಭಗವಂತನೆ ಎಲ್ಲದರ ಮೂಲ ಕಾರಣ ಎಂದು ತಿಳಿದವನು] ಮತ್ತು ಗುಣಗಳಿಂದ ಅತೀತನೆಂದು ಭಗವಂತನನ್ನು ತಿಳಿದವನು[ನಿಜವಾದ ಮನುಷ್ಯ] ನನ್ನಲ್ಲೆ ನೆಲೆಸುತ್ತಾನೆ. 

ನಮ್ಮ ಜೀವನದಲ್ಲಿ ಏನೇನು ನಡೆಯುತ್ತದೆ ಅದು ಈ ಮೂರು ಗುಣಗಳ ಪ್ರಕ್ರಿಯೆ. ನಾವು ನಾವಾಗಿ ಏನೂ ಮಾಡುವುದಿಲ್ಲ. ಬದಲಿಗೆ ಎಲ್ಲವೂ ತ್ರಿಗುಣಗಳ ಪ್ರಭಾವದಿಂದ ನಡೆಯುತ್ತಿರುತ್ತದೆ. ಪ್ರಕೃತಿಯಿಂದ ಬಂದು, ನಮ್ಮ ಸ್ವರೂಪವನ್ನು ಮುಚ್ಚಿ ಅವು ಕೆಲಸ ಮಾಡುತ್ತಿರುತ್ತವೆ. ಹಾಗಾಗಿ  ಒಬ್ಬ ವ್ಯಕ್ತಿಯ ಮೇಲ್ನೋಟದ ವರ್ತನೆಯಿಂದ ಆತನ ನಿಜ  ಸ್ವಭಾವವನ್ನು ಅರಿಯುವುದು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ನಾವು ಪ್ರಪಂಚದಲ್ಲಿ ನಡೆಯುವ ಘಟನೆಗಳನ್ನು ನಿರ್ವೀಕಾರರಾಗಿ ಕಾಣಲು ಅಭ್ಯಾಸ ಮಾಡಿಕೊಳ್ಳಬೇಕು.
ಸತ್ವಕ್ಕೆ ಶ್ರುತಿಗೂಡಿದ ಮನಸ್ಸು ಸತ್ವಕ್ಕೆ ಅನುಗುಣವಾದ ವಿಷಯವನ್ನೇ ಗ್ರಹಿಸುತ್ತದೆ. ಅಂಥಹ ವ್ಯಕ್ತಿ  ಎಂದೂ ‘ನಾನು ಮಾಡಿದೆ’ ಎಂದು ಭ್ರಮೆ ಪಡುವುದಿಲ್ಲ. ಇಲ್ಲಿ ಗುಣಗಳಿಗಿಂತ ಬೇರೆಯಾದ ಕರ್ತಾ ಇಲ್ಲ ಎಂದಿದ್ದಾರೆ.  ಜಡಕ್ಕೆ ಎಂದೂ ಕರ್ತಾ ಎನ್ನುವುದಿಲ್ಲ. ಆದ್ದರಿಂದ ಗುಣ ಅಂದರೆ ಕೇವಲ ಜಡವಾದ ಗುಣವಲ್ಲ. ಅದಕ್ಕೆ ಅಭಿಮಾನಿಯಾದ ಚೈತನ್ಯವನ್ನು ಗುರುತಿಸು ಎನ್ನುವ ಸಂದೇಶ ಈ ಶ್ಲೋಕದಲ್ಲಿದೆ.[ಶ್ಲೋಕ ೧೭ರಲ್ಲಿ ನಾವು ಈ ಬಗ್ಗೆ ಚರ್ಚಿಸಿದ್ದೇವೆ]. ಕರ್ತೃತ್ವದಲ್ಲಿ ಅನೇಕ ವಿಧ. ಇಚ್ಛಾಪೂರ್ವಕ ಕೃತಿ ಎಲ್ಲಿದೆಯೋ ಅದು ಕರ್ತಾ. ಇದು ಇರುವುದು ಚೇತನಕ್ಕೆ ಮಾತ್ರ. ಆದರೆ ನಿಜವಾದ ಕರ್ತೃತ್ವ ‘ಸ್ವತಂತ್ರ ಇಚ್ಛಾಪೂರ್ವಕ ಕೃತಿ’. ಇದು ಇರುವುದು ಕೇವಲ ಭಗವಂತನಲ್ಲಿ. ‘ನಾಹಂ ಕರ್ತಾ ಹರಿಃ ಕರ್ತಾ’  ಎನ್ನುವ ಪ್ರಸಿದ್ಧವಾದ ಮಾತು ನಮಗೆ ತಿಳಿದೇ ಇದೆ. ಇದನ್ನು  ಮೊಕ್ಷಧರ್ಮಪರ್ವದಲ್ಲಿ ಈ ರೀತಿ ಹೇಳಿದ್ದಾರೆ:   
ನಾಹಂ ಕರ್ತಾ ನ ಕರ್ತಾ ತ್ವಂ ಕರ್ತಾಯಸ್ತು ಸದಾ ಪ್ರಭುಃ ||
ಸೋSಯಂ ಪಚತಿ ಕಾಲೋ ಮಾಮ್ ವೃಕ್ಷೇ ಫಲಂ ಇವಾಗತಂ || ೧೨-೨೨೦-೮೪ ||
“ನೀನೂ ಮಾಡಿಲ್ಲ, ನಾನೂ ಮಾಡಿಲ್ಲ- ‘ಅವನು’ ನಮ್ಮಿಂದ ಮಾಡಿಸಿದ”. ಈ ಎಚ್ಚರ ಇದ್ದಾಗ ನಮಗೆ ಕರ್ತೃತ್ವದ ಅಹಂಕಾರ ಬರಲು ಸಾಧ್ಯವಿಲ್ಲ. ಇದರಿಂದ ದ್ವೇಷವಿಲ್ಲ, ಮಮಕಾರವಿಲ್ಲ. ‘ನಾನು ಮಾಡಿದೆ , ನನ್ನಿಂದಾಯ್ತು’ ಎನ್ನುವುದು  ಕೇವಲ ಭ್ರಮೆ. ಈ ಜಗತ್ತಿನಲ್ಲಿ ಏನೇ ನಡೆದರೂ ಅದು ಈ ಮೂರು ಗುಣಗಳ ಪ್ರಭಾವದಿಂದ ನಡೆದಿದೆ. ಅದನ್ನು ಮೀರಿ ನನ್ನಷ್ಟಕ್ಕೆ ನಾನು ಏನೂ ಮಾಡಿಲ್ಲ. ಈ ಅರಿವು ನಮಗೆ ಬರಬೇಕು.
ತ್ರಿಗುಣಗಳ ಪ್ರಭಾವ ಜಡದಲ್ಲೂ ಇದೆ, ಚೇತನದಲ್ಲೂ ಇದೆ. ಅದರ ಪ್ರಭಾವದಿಂದ ಕ್ರಿಯೆ ನಡೆಯುತ್ತದೆ. ಯಾರೋ ಒಬ್ಬರು ನಿಮಗೆ ಬೈದರು ಎಂದರೆ-ಆತನಲ್ಲಿ ಆ ಕ್ಷಣದಲ್ಲಿ ರಜೋಗುಣ ಜಾಗೃತವಾಗಿ ಕೆಲಸ ಮಾಡುತ್ತಿದೆ ಎಂದರ್ಥ. ನಾವು ಈ ಅರಿವಿನಿಂದ ಆ ಕ್ಷಣದಲ್ಲಿ ವರ್ತಿಸಬೇಕು. ಇದನ್ನು ಶ್ರೀರಾಮಚಂದ್ರ ತನ್ನ ಜೀವನದಲ್ಲಿ ನಡೆದು ತೋರಿಸಿದ್ದಾನೆ. ರಾಮಾಯಣದಲ್ಲಿ ವಾಲ್ಮೀಕಿ ಹೇಳುತ್ತಾರೆ:
ಸ ಹಿ ನಿತ್ಯಂ ಪ್ರಶಾಂತಂ ಮೃದುಪೂರ್ವಃ ಚ ಭಾಷತೆ |
ಉಚ್ಚಮಾನೋSಪಿ ಪರುಷಮ್ ನೋತ್ತರಂ ಪ್ರತಿಪದ್ಯತೆ ||ಅಯೋಧ್ಯಾ-೧.೧೫||
ರಾಮನಲ್ಲಿ ಯಾರಾದರೂ ಜಗಳಕ್ಕೆ ನಿಂತರೆ ಆತ ಎಂದೂ ಸಿಟ್ಟಿಗೇಳುತ್ತಿರಲಿಲ್ಲ. “ಮತ್ತೆ ಮಾತನಾಡೋಣ” ಎಂದು ಹೊರಟು ಹೋಗುತ್ತಿದ್ದನಂತೆ.  ಏಕೆಂದರೆ ಒಬ್ಬ ವ್ಯಕ್ತಿಯಲ್ಲಿ ರಜೋಗುಣ ಕೆಲಸ ಮಾಡುತ್ತಿರುವಾಗ, ಅವರೊಂದಿಗೆ ನಾವು ರಜೋಗುಣದಿಂದ ವರ್ತಿಸಬೇಕಾದ ಪ್ರಸಂಗ ಬಂದುಬಿಡುತ್ತದೆ. ಇದು ಬಹಳ ಅಪಾಯಕಾರಿ. ಆದ್ದರಿಂದ ರಜೋಗುಣಕ್ಕೊಳಗಾದವರೊಂದಿಗೆ ನೀನು   ರಾಜಸನಾಗಬೇಡ. ತಟಸ್ಥನಾಗಿ ದೂರ ನಿಲ್ಲು(Act but never React). ಆಗ ಅವರ ರಜೋಗುಣ ತನ್ನಷ್ಟಕ್ಕೆ ಕುಸಿಯುತ್ತದೆ. ಸಿಟ್ಟು ಮಾಡುವವರ ಮುಂದೆ ಮೌನಿಯಾದರೆ ಅವರ ಸಿಟ್ಟು ಬಹುಬೇಗ ಕರಗುತ್ತದೆ. ಹೀಗೆ ನಾವು ಈ ಗುಣಗಳ ಪ್ರಭಾವವನ್ನು ಗುರುತಿಸಿದಾಗ ನಮ್ಮ ಬದುಕಿನ ನಡೆಯೂ ಬೇರೆಯಾಗುತ್ತದೆ.
ಮೇಲೆ ಹೇಳಿರುವ ವಿಷಯವನ್ನಷ್ಟೇ ತಿಳಿದರೆ ಸಾಲದು. ಈ ತ್ರಿಗುಣಗಳನ್ನು ಮೀರಿ ನಿಂತವ ಭಗವಂತ. ಅವನನ್ನು ತಿಳಿದಾಗ ನೀನು ತ್ರಿಗುಣಗಳನ್ನು ಮೀರಿ ನಿಲ್ಲಲು ಸಹಾಯವಾಗುತ್ತದೆ. ಆ ಭಗವಂತನನ್ನು ಸೇರಲು ನಾನು ಈ ತ್ರಿಗುಣಗಳ ಪ್ರಭಾವದಿಂದ ಹೊರ ಬರಬೇಕು ಎನ್ನುವ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. “ಇಂಥವರ ಮನಸ್ಸು ನನ್ನಲ್ಲಿ ನೆಲೆಗೊಳ್ಳುತ್ತದೆ ಮತ್ತು ಅದರಿಂದಾಗಿ ಮುಂದೆ ಅವರು ನನ್ನನ್ನು ಬಂದು ಸೇರಿ ನನ್ನಲ್ಲೇ ನೆಲೆಸುತ್ತಾರೆ” ಎನ್ನುತ್ತಾನೆ ಕೃಷ್ಣ.
ಈ ಶ್ಲೋಕಕ್ಕೆ ಇನ್ನೊಂದು ಮುಖವಿದೆ.    “ಗುಣೇಭ್ಯಃ ಅನ್ಯಂ ಕರ್ತಾರಂ ಯದಾ ದ್ರಷ್ಟಾ ನುಪಶ್ಯತಿ ತದಾ ಸಃ ‘ನಾ’ ಭವತಿ”. ಇಲ್ಲಿ  “ಗುಣೇಭ್ಯಃ ಅನ್ಯಂ” ಅಂದರೆ ತ್ರಿಗುಣಮಾನಿನಿಯಾಗಿರತಕ್ಕಂತಹ, ಗುಣಶಬ್ದವಾಚ್ಯಳಾದ, ಶ್ರೀ-ಭೂ-ದುರ್ಗ ನಾಮಕಳಾದ, ಮಹಾಲಕ್ಷ್ಮಿಗಿಂತಲೂ ಅತೀತವಾದ ಒಂದು ಶಕ್ತಿ. ಅವನೇ ನಿಜವಾದ ಕರ್ತಾ. ಯಾರಾತ? ಮುಂಡಕೋಪನಿಷತ್ತಿನಲ್ಲಿ ಹೇಳುವಂತೆ:
ಯದಾ ಪಶ್ಯಃ ಪಶ್ಯತೇ ರುಕ್ಮವರ್ಣಂ ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಂ || ೩-೧-೩||
ಯಾರು ಚತುರ್ಮುಖನಿಗೂ ತಂದೆಯೋ, ಯಾರು ಚಿತ್ಪ್ರಕೃತಿಗೂ ನಿಯಾಮಕನೋ, ಯಾರು ಸಮಸ್ತ ವೇದಗಳಿಂದ ವಾಚ್ಯನೋ –ಅವನೊಬ್ಬನೆ ಕರ್ತಾ. ಇದನ್ನು ತಿಳಿದವನು ನಿಜವಾದ ಮಾನವ. 
ಎಲ್ಲಾ ಅಧ್ಯಾತ್ಮ ಸಾಧನೆ ಮಾಡುವ ಸೌಕರ್ಯವಿರುವ ಶರೀರ-ಮನುಷ್ಯ ಶರೀರ ಮಾತ್ರ. ಅಂಥಹ ಶರೀರವನ್ನು  ಉಪಯೋಗಿಸಿಕೊಳ್ಳುವವ ನರ. ಧರ್ಮ-ಅರ್ಥ-ಕಾಮಗಳಿಂದ ಬಿಡಿಸಿಕೊಳ್ಳುವುದು ಎಂದರೆ ಸತ್ವ-ರಜಸ್ಸು-ತಮೋಗುಣಗಳಿಂದ ಬಿಡಿಸಿಕೊಂಡು ಭಗವಂತನನ್ನು ಸೇರುವುದು. ಇದು ಮನುಷ್ಯನ ಜೀವನದ ಗುರಿ. “ಈ ಮೂರು ಗುಣಗಳು ನನ್ನಲ್ಲಿ ಕೆಲಸ ನಡೆಸಿವೆ, ನಾನು ಈ ಪ್ರಭಾವದಿಂದ ಕಳಚಿಕೊಂಡು ಮೇಲೇರಬೇಕು” ಎನ್ನುವ ಎಚ್ಚರವಿರುವುದು ಮನುಷ್ಯನಿಗೆ ಮಾತ್ರ. ಈ ಎಚ್ಚರದಿಂದಾಗಿ “ಮದ್ಭಾವಂ ಸೋSಧಿಗಚ್ಛತಿ”-ಅವನಲ್ಲಿ ಭಕ್ತಿಜ್ಞಾನಗಳು ಮನಸ್ಸಿನಲ್ಲಿ ತುಂಬಿ ಆತ ಮೋಕ್ಷವನ್ನು ಸೇರುತ್ತಾನೆ.
  
ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹಸಮುದ್ಭವಾನ್
ಜನ್ಮಮೃತ್ಯುಜರಾದುಃಖೈರ್ವಿಮುಕ್ತೋSಮೃತಮಶ್ನುತೇ                   ೨೦

ಗುಣಾನ್ ಏತಾನ್ ಅತೀತ್ಯ ತ್ರೀನ್ ದೇಹೀ ದೇಹ ಸಮುದ್ಭವಾನ್
ಜನ್ಮ ಮೃತ್ಯು ಜರಾ ದುಃಖೈಃ ವಿಮುಕ್ತಃ ಅಮೃತಮ್ ಅಶ್ನುತೇ—ದೇಹದಲ್ಲಿ ಮೂಡಿಬರುವ ಈ ಮೂರು ಗುಣಗಳನ್ನು ದಾಟಿದಾಗ ಜೀವ ಹುಟ್ಟು ಸಾವು ಮುಪ್ಪಿನ ದುಃಖದಿಂದಲು ಪಾರಾಗಿ ಅಮರನಾಗುತ್ತಾನೆ.

ನಮ್ಮ ಸ್ವರೂಪವನ್ನು ಮುಚ್ಚಿ ಗಾಢವಾಗಿ ಪರಿಣಾಮಬೀರುವ ಈ ಮೂರು ಗುಣಗಳನ್ನು ನಾವು ದಾಟಬೇಕು. [ಇಲ್ಲಿ ಮೂರು ಗುಣದಲ್ಲಿ ಸತ್ವವನ್ನು ದಾಟುವುದು ಎಂದರೆ ಸ್ಥೂಲ ಸತ್ವವನ್ನು ದಾಟಿ, ಸೂಕ್ಷ್ಮ ಸತ್ವವನ್ನು ಸೇರುವುದು ಎಂದರ್ಥ]. ಹೀಗೆ ಮೂರು ಗುಣಗಳನ್ನು ದಾಟಿ ತ್ರಿಗುಣಾತೀತನಾದರೆ, ಆಗ ನಾವು ಈ ಸಂಸಾರದ ಹುಟ್ಟು-ಸಾವು-ರೋಗ-ಮುಪ್ಪು-ದುಃಖ ಎಲ್ಲವನ್ನು ದಾಟಿ ಭಗವಂತನನ್ನು ಸೇರಿ ಅಮರರಾಗಬಹುದು. ಇದರಿಂದ ಎಂದೂ ಹುಟ್ಟು ಸಾವಿಲ್ಲದ ಆನಂದದ ಸ್ಥಿತಿಯಾದ ಮೋಕ್ಷವನ್ನು ಪಡೆಯಲು ಸಾಧ್ಯ.