Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, October 9, 2011

Bhagavad Gita Kannanda Chapter-12 Shloka 9-12


ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್      
ಅಭ್ಯಾಸಯೋಗೇನ ತತೋ ಮಾಮಿಚ್ಛಾSಪ್ತುಂ ಧನಂಜಯ   

ಅಥ ಚಿತ್ತಮ್  ಸಮಾಧಾತುಮ್  ನ ಶಕ್ನೋಷಿ ಮಯಿ ಸ್ಥಿರಮ್          
ಅಭ್ಯಾಸಯೋಗೇನ ತತಃ ಮಾಮ್ ಇಚ್ಛಾ ಪ್ತುಂ ಧನಂಜಯ –ಧನಂಜಯ, ಒಂದೊಮ್ಮೆ ನನ್ನಲ್ಲಿ ಒಳಬಗೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗಲಿಲ್ಲ, ಆಗ ಮರಳಿಮರಳಿ ಅಭ್ಯಾಸದ ಬಳಕೆಯಿಂದ ನನ್ನನ್ನು ಸೇರುವ ಬಯಕೆಯನ್ನು ಬೆಳೆಸಿಕೊ.

ಮನಸ್ಸಿನಲ್ಲಿ ಭಗವಂತನ ಬಗ್ಗೆ ಭಕ್ತಿ ಇದೆ, ಬುದ್ಧಿಯಲ್ಲಿ ಜ್ಞಾನಪೂರ್ಣ ಭಕ್ತಿಯ ಅಂಕುರವಿದೆ. ಆದರೂ ಕೂಡ ಸ್ಥಿರವಾದ ಸ್ಮರಣೆ ಬರುತ್ತಿಲ್ಲ, ಮನಸ್ಸು ಗಟ್ಟಿಯಾಗಿ ನೆಲೆಗೊಳ್ಳುತ್ತಿಲ್ಲ ಆಗ ಏನು ಮಾಡುವುದು? ಶಾಸ್ತ್ರದಲ್ಲಿ ಹೇಳುವಂತೆ:
ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಜಾತುಚಿತ್   |
ಸರ್ವೇ ವಿಧಿ ನಿಷೆಧಾಸ್ಸ್ಯುಹುಃ  ಏತಯೋರೇವ ಕಿಂಕರಾಃ  ||
ಅಂದರೆ 'ನಾವು ನಿರಂತರ ಭಗವಂತನನ್ನು ನೆನಪಿನಲ್ಲಿಡಬೇಕು, ಎಂದೂ ಭಗವಂತನನ್ನು ಮರೆಯಬಾರದು'. ಸಮಸ್ತ ವಿಧಿನಿಷೇಧ ಹೇಳುವುದು ಕೂಡಾ ಇದನ್ನೆ. ಮನಸ್ಸು ನಿರಂತರ ಭಗವಂತನಲ್ಲಿ ನಿಲ್ಲದೆ ಈ ಅಖಂಡ ಸ್ಮರಣೆ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ವಿವರಿಸುತ್ತಾನೆ. “ಮನಸ್ಸನ್ನು ಏಕಾಗ್ರತೆಯೆಡೆಗೆ ಕೊಂಡೊಯ್ಯುವ ಶಕ್ತಿ ಕೊಡು ಎಂದು ನನ್ನನ್ನು ಪ್ರಾರ್ಥಿಸು. ಅಧ್ಯಾತ್ಮದ ದಾರಿಯಲ್ಲಿ ಏನು ಇಚ್ಛೆ ಮಾಡಿದರೂ ಅದನ್ನು ಪೂರೈಸುವ ಜವಾಬ್ಧಾರಿ ನನ್ನದು” ಎನ್ನುವ ಭರವಸೆ ಕೃಷ್ಣನದು. ಅಭ್ಯಾಸ ಮತ್ತು ಇಚ್ಛೆ ಇದ್ದರೆ ಖಂಡಿತವಾಗಿ ಏಕಾಗ್ರತೆ ಸಾಧ್ಯ. ನಾವು ಹೇಗೆ ಮಕ್ಕಳಿಗೆ ತರಬೇತಿಕೊಟ್ಟು, ಅಭ್ಯಾಸ ಮಾಡಿಸಿ ಕಲಿಸುತ್ತೇವೆ, ಹಾಗೆ ನಮ್ಮ ಮನಸ್ಸನ್ನು ರಮಿಸಿರಮಿಸಿ ಬುದ್ಧಿವಾದ ಹೇಳಿ ಅಭ್ಯಾಸಮಾಡಿಸಬೇಕು. ಹೀಗೆ ಮಾಡಿದಾಗ ಮನಸ್ಸು ಅದನ್ನು ರೂಢಿ ಮಾಡಿಕೊಳ್ಳುತ್ತದೆ. ಮೊದಲು ನಾವು ಲೌಕಿಕ ಸಂಪತ್ತಿನ ಬೆನ್ನುಹತ್ತುವುದನ್ನು ಬಿಟ್ಟು, ಭಗವಂತನೆಂಬ ಅಮೂಲ್ಯ ಧನವನ್ನು ಗೆಲ್ಲುವ ಧನಂಜಯರಾಗಬೇಕು.

ಅಭ್ಯಾಸೇSಪ್ಯಸಮರ್ಥೋSಸಿ ಮತ್ಕರ್ಮಪರಮೋ ಭವ
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ ೧೦

ಅಭ್ಯಾಸೇ ಅಪಿ ಅಮರ್ಥನು; ಅಸಿ ಮತ್ ಕರ್ಮ ಪರಮಃ ಭವ
ತ್ ಅರ್ಥಮ್ ಅಪಿ ಕರ್ಮಾಣಿ ಕುರ್ವನ್ ಸಿದ್ಧಿಮ್ ಅವಾಪ್ಸ್ಯಸಿ –ಧ್ಯಾನದ ಅಭ್ಯಾಸವೂ ಅಸಾಧ್ಯವಾದರೆ ನನ್ನ ಆರಾಧನರೂಪವಾದ ಕರ್ಮಗಳಲ್ಲೆ ತೊಡಗು. ಕರ್ಮವನ್ನು ನನ್ನ ಪೂಜೆಯೆಂದು  ಮಾಡಿಯೂ ಸಿದ್ಧಿಪಡೆಯಬಲ್ಲೆ.

ಕೆಲವರಿಗೆ ಎಷ್ಟೇ ಅಭ್ಯಾಸ ಮಾಡಿದರೂ ಏಕಭಕ್ತಿ ಸಾಧ್ಯವಾಗುವುದಿಲ್ಲ. ಅಧ್ಯಾತ್ಮ ಮಾರ್ಗದ ಸಾಧನೆಯಲ್ಲಿ ಮನಸ್ಸಿಗೆ ಒಂದು ಜನ್ಮದ ಅಭ್ಯಾಸ ಸಾಕಾಗುವುದಿಲ್ಲ. ಕೆಲವೊಮ್ಮೆ ಇಡೀ ಜನ್ಮ ಅಭ್ಯಾಸ ಮಾಡಿದರೂ ಏಕಾಗ್ರತೆ ಬಾರದೇ ಇರಬಹುದು. ಇಂಥವರಿಗೆ ಕರುಣಾಳು ಕೃಷ್ಣ ಹೇಳುತ್ತಾನೆ: “ನೀನು ಮಾಡುವ ಕರ್ಮವನ್ನು ಸ್ವಾರ್ಥಕ್ಕಾಗಿ ಮಾಡದೆ, ಭಗವಂತನ ಪೂಜೆ ಅನ್ನುವ ಅನುಸಂಧಾನದಿಂದ ಮಾಡು” ಎಂದು. ತನ್ನ ದೈನಂದಿನ ಪ್ರತಿ ಕರ್ಮವನ್ನು ಅರ್ಪಣಾಭಾವದಿಂದ ಭಗವಂತನ ಪೂಜೆ ಎಂದು ಮಾಡಿ, ಅಧ್ಯಾತ್ಮ ಮಾರ್ಗದಲ್ಲಿ  ಸಿದ್ಧಿ ಪಡೆಯಬಹುದು.       

ಅಥೈತದಪ್ಯಶಕ್ತೋSಸಿ ಕರ್ತುಂ ಮದ್ಯೋಗಮಾಶ್ರಿತಃ
ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್ ೧೧

ಥ ಏತತ್ ಅಪಿ ಆಶಕ್ತಃ ಅಸಿ ಕರ್ತುಮ್  ಮತ್ ಯೋಮ್ ಆಶ್ರಿತಃ
ಸರ್ವಕರ್ಮ ಫಲ ತ್ಯಾಗಮ್  ತತಃ ಕುರು ಯತ  ಆತ್ಮವಾನ್ –ಇದನ್ನೂ ಮಾಡುವುದಾಗದಿದ್ದರೆ ಎಲ್ಲ ಬಗೆಯ ಕರ್ಮಗಳನ್ನೂ ನನಗೆ ಅರ್ಪಿಸುವ ಸಾಧನೆ ಮಾಡು. ಅನಂತರ ಬಗೆಯನ್ನು ಬಿಗಿಗೊಳಿಸಿ  ಎಲ್ಲ ಕರ್ಮಗಳ ಫಲದಾಸೆಯ ನಂಟನ್ನು ತೊರೆದುಬಿಡು.

ಒಂದು ವೇಳೆ ಮೇಲೆ ಹೇಳಿದ ರೀತಿ ಎಲ್ಲ ಕರ್ಮವನ್ನು ಭಗವಂತನಿಗೆ ಅರ್ಪಿಸಲು ಸಾಧ್ಯವಾಗದೇ ಇದ್ದರೆ, ಎಲ್ಲವನ್ನೂ ಭಗವಂತನ ಪೂಜೆಯಾಗಿ ಮಾಡಲು ಸಾಧ್ಯವಾಗದೇ ಇದ್ದರೆ, ಯಾರನ್ನಾದರೂ ಪೂಜಿಸು-ಆದರೆ ಕೊನೆಗೆ ಸರ್ವ ಕರ್ಮವನ್ನು ಕರ್ಮಫಲದ ಬಯಕೆಯಿಲ್ಲದೆ ಭಗವಂತನಿಗೆ ಅರ್ಪಿಸು ಎನ್ನುತ್ತಾನೆ ಕೃಷ್ಣ. ಇಲ್ಲಿ ಕರ್ಮಫಲದ ತ್ಯಾಗಕ್ಕೆ ಮತ್ತು ಅರ್ಪಣೆಗೆ ಕೃಷ್ಣ ಒತ್ತು ಕೊಟ್ಟಿದ್ದಾನೆ.

ಶ್ರೇಯೋ ಹಿ ಜ್ಞಾನಮಭ್ಯಾಸಾಜ್ ಜ್ಞಾನಾದ್ ಧ್ಯಾನಂ ವಿಶಿಷ್ಯತೇ        
ಧ್ಯಾನಾತ್ ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿನಂತರಮ್ ೧೨

ಶ್ರೇಯಃ ಹಿ ಜ್ಞಾನಮ್ ಅಭ್ಯಾಸಾತ್  ಜ್ಞಾನಾತ್  ಧ್ಯಾಮ್  ವಿಶಿಷ್ಯತೇ           
ಧ್ಯಾನಾತ್ ಕರ್ಮ ಫಲ ತ್ಯಾಗಃ ತ್ಯಾಗಾತ್ ಶಾಂತಿಃ ಅನಂತರಮ್ –ಅರಿವಿಲ್ಲದ ಅಭ್ಯಾಸಕ್ಕಿಂತ ಅರಿವು ಮಿಗಿಲು. ಬರಿದೆ ಅರಿವಿಗಿಂತ ಅರಿತು ಧ್ಯಾನಿಸುವುದು ಮಿಗಿಲು. ಬರಿದೆ ಧ್ಯಾನಕ್ಕಿಂತ ಕರ್ಮಫಲದ ನಂಟಿರದ ಧ್ಯಾನ ಮಿಗಿಲು. ಅಂಥ ಧ್ಯಾನದ ಮುಂದಿನ ಮಜಲೇ ಮುಕ್ತಿ.  

ಜ್ಞಾನವಿಲ್ಲದ ಧ್ಯಾನಕ್ಕಿಂತ  ಜ್ಞಾನ ಶ್ರೇಷ್ಠ. ಜ್ಞಾನ ಅಧ್ಯಾತ್ಮ ಸಾಧನೆಯಲ್ಲಿ ಮೂಲಭೂತ ಅವಶ್ಯಕತೆ(Fundamental requirement). ಜ್ಞಾನವಿಲ್ಲದೆ ಧ್ಯಾನ ಅಥವಾ ಕರ್ಮ ಮಾಡಿ ಉಪಯೋಗವಿಲ್ಲ. ತಿಳುವಳಿಕೆ ಇಲ್ಲದ ಶ್ರದ್ಧೆ ಅಂಧಃಶ್ರದ್ಧೆಯಾಗುತ್ತದೆ. ಹಾಗೆ ನಂಬಿಕೆ ಇಲ್ಲದ ತಿಳುವಳಿಕೆ ಅಹಂಕಾರವೆನಿಸುತ್ತದೆ. ಆದ್ದರಿಂದ ತಿಳಿಯಬೇಕು, ತಿಳಿದು ನಂಬಬೇಕು. ಕೇವಲ ತಿಳುವಳಿಕೆ ಇದ್ದರೆ ಸಾಲದು. ಜ್ಞಾನಕ್ಕಿಂತ ಜ್ಞಾನ ಸಹಿತ ಧ್ಯಾನ ಮೇಲು. ಎಲ್ಲಕ್ಕಿಂತ ಹಿರಿದು ಕರ್ಮಫಲ ತ್ಯಾಗ.  ಆದ್ದರಿಂದ ಮೊದಲು ತಿಳಿದುಕೋ, ತಿಳಿದು ಅಭ್ಯಾಸ ಮಾಡು. ಆದರೆ ನಿನ್ನ ಧ್ಯಾನ ಕರ್ಮಫಲವಿಲ್ಲದ ಧ್ಯಾನವಾಗಿರಲಿ. ಈ ರೀತಿಯ ಜೀವನ ಶೈಲಿಯಿಂದ ಮೊಕ್ಷಪ್ರಾಪ್ತಿ ಸಾಧ್ಯ.

ಇಲ್ಲಿಯ ತನಕೆ ಭಗವಂತನ ಉಪಾಸನೆ ಹೇಗಿರಬೇಕು ಎನ್ನುವುದನ್ನು ವಿವರಿಸಿದ ಕೃಷ್ಣ, ಮುಂದೆ ನಾವು ದೇವರು ಮೆಚ್ಚುವ ಬದುಕನ್ನು ಬದುಕಬೇಕಾದರೆ ಯಾವ ರೀತಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು, ನಮ್ಮ ಜೀವನಕ್ರಮ ಮತ್ತು ಅನುಷ್ಠಾನ ಹೇಗಿರಬೇಕು ಎನ್ನುವುದನ್ನು ಮುಂದಿನ ಕೆಲವು ಶ್ಲೋಕಗಳಲ್ಲಿ ವಿವರಿಸುತ್ತಾನೆ.        

No comments:

Post a Comment