Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, October 17, 2011

Bhagavad Gita Kannada Chapter-13 Shloka 5-6



ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ  
ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾಃ                    

ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ      
ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್                   

ಮಹಾಭೂತಾನಿ[ಮಹಾನ್ ಭೂತಾನಿ]ಅಹಂಕಾರಃ ಬುದ್ಧಿಃ ಅವ್ಯಕ್ತ ಏವ ಚ
ಇಂದ್ರಿಯಾಣಿ ದಷ ಏಕಮ್  ಚ ಪಂಚ ಚ ಇಂದ್ರಿಯ ಗೋಚರಾಃ 
ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಃ ಚೇತನಾ ಧೃತಿಃ      
ಏತತ್ ಕ್ಷೇತ್ರಂ ಸಮಾಸೇನ ಸವಿಕಾರ ಉದಾಹೃತಮ್ -- ಮಣ್ಣು[ಪೃಥಿವಿ], ನೀರು[ವರುಣ], ಬೆಂಕಿ[ಅಗ್ನಿ], ಗಾಳಿ[ವಾಯುಪುತ್ರ ಮರೀಚಿ], ಬಾನು[ಅವಕಾಶ ದೇವತೆ, ವಿಘ್ನನಾಶ-ವಿನಾಯಕ-ಗಣಪತಿ]-ಎಂಬ ಐದು ಮಹಾಭೂತಗಳು. ಅಹಂಕಾರತತ್ವ [ಬ್ರಹ್ಮವಾಯು ಮತ್ತು ಶಿವ], ಬುದ್ಧಿತತ್ವ[ಪಾರ್ವತಿ], ಮೂಲಪ್ರಕೃತಿ[ಶ್ರೀ], ಕಿವಿ[ಚಂದ್ರ], ತೊಗಲು[ವಾಯುಪುತ್ರ ಮರುತ್], ಕಣ್ಣು[ಸೂರ್ಯ], ನಾಲಿಗೆ[ವರುಣ], ಮೂಗು[ಅಶ್ವಿಗಳು], ಬಾಯಿ[ಅಗ್ನಿ], ಕೈಗಳು[ವಾಯುಪುತ್ರರಿಬ್ಬರು], ಕಾಲುಗಳು[ಇಂದ್ರ ಪುತ್ರರಾದ ಯಜ್ಞ(ಜಯತ) ಮತ್ತು ಶಂಭು], ಪಾಯು[ಯಮ], ಉಪಸ್ಥ[ಲಿಂಗ ದೇವತೆ ಶಿವ-ಗಂಡಸರಲ್ಲಿ ; ಸ್ವಾಯಂಭುವಮನು-ಸ್ತ್ರೀಯರಲ್ಲಿ] ಹೀಗೆ ಹತ್ತು ಇಂದ್ರಿಯಗಳು. ಹನ್ನೊಂದನೆಯದು ಮನಸ್ತತ್ವ[ಇಂದ್ರ, ಕಾಮ ಮತ್ತು ಅನಿರುದ್ಧ] ಮತ್ತು ಐದು ಜ್ಞಾನೇಂದ್ರಿಯ ವಿಷಯಗಳು: ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ[ರುದ್ರ ಪುತ್ರರಾದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ]ಇವು ೨೪ ಅಡಕವಾಗಿ ಕ್ಷೇತ್ರಗಳು.
ಬಯಕೆ[ಶ್ರೀ ಮತ್ತು ಭಾರತಿ], ದ್ವೇಷ[ದ್ವಾಪರ-ಶಕುನಿ], ಸುಖ[ಮುಖ್ಯಪ್ರಾಣ-ವಾಯು-ಭೀಮ], ದುಃಖ[ಕಲಿ-ದುರ್ಯೋಧನ], ಸಮಷ್ಟಿಶರೀರ[ಶರೀರದಲ್ಲಿರುವ ಅಭಿಮಾನಿ ಜೀವ; ಸಮಸ್ತ ಅಭಿಮಾನಿ ದೇವತೆಗಳು], ನೆನಪಿನ ಹರಹು[ಶ್ರೀ], ಧೈರ್ಯ[ಸರಸ್ವತಿ ಮತ್ತು ಭಾರತಿ] ಇವು ಏಳು ವಿಶೇಷ ಕ್ರಿಯೆಗಳಾದ ವಿಕಾರಗಳು. ಹೀಗೆ ವಿಕಾರಗಳ ಜತೆ ಕ್ಷೇತ್ರವನ್ನು ಅಡಕವಾಗಿ ಹೇಳಿದ್ದಾಯಿತು.

ಈ ಎರಡು ಶ್ಲೋಕಗಳಲ್ಲಿ ಕೃಷ್ಣ  ಕ್ಷೇತ್ರ ಮತ್ತು ಕ್ಷೇತ್ರದ ವಿಕಾರವನ್ನು ವಿವರಿಸಿದ್ದಾನೆ. ಕ್ಷೇತ್ರ ಎನ್ನುವ ಅಖಂಡ ಘಟಕದೊಳಗೆ ಇರುವ ಜಗತ್ತಿನ ಘಟಕಾಂಶಗಳನ್ನು ಕೃಷ್ಣ ಇಲ್ಲಿ ಸೂತ್ರ ರೂಪದಲ್ಲಿ ಅಡಕವಾಗಿ ವಿವರಿಸಿದ್ದಾನೆ. ಮೊದಲನೆಯದಾಗಿ ಪಂಚಮಹಾಭೂತಗಳು. ಈ ಐದರಿಂದ ಈ ಪಿಂಡಾಂಡ ಮತ್ತು ಬ್ರಹ್ಮಾಂಡ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ಬ್ರಹ್ಮಾಂಡವನ್ನು ‘ಪ್ರ-ಪಂಚ’ ಎಂದು ಕರೆಯುತ್ತಾರೆ. ಈ ಪಂಚ ಮಹಾಭೂತಗಳೇ ಪ್ರಪಂಚದ ಮೂಲದ್ರವ್ಯ. ಪಿಂಡಾಂಡದಲ್ಲಿ  ಈ ಪಂಚ ಮಹಾಭೂತಗಳನ್ನು ಅನ್ನಮಯ ಮತ್ತು ಪ್ರಾಣಮಯ ಎಂದು ಕರೆಯತ್ತಾರೆ. ಕಾಣುವ ಸ್ಥೂಲ ಶರೀರ ಪ್ರಥಿವಿ ಮತ್ತು ನೀರಿನ ಭಾಗದಿಂದಾಗಿದೆ. ಇಂಥಹ ಸ್ಥೂಲ ಶರೀರದೊಳಗೆ ಕಾಣದ ಪ್ರಾಣಮಯಕೊಶವಿದೆ. ದೇಹದ ಶಾಖ(ಬೆಂಕಿ), ಉಸಿರಾಟ(ಗಾಳಿ) ಮತ್ತು ಒಳಗೆ ರಕ್ತ-ಗಾಳಿ ಸಂಚಾರದ ಅವಕಾಶ(ಆಕಾಶ). ಇದರಿಂದಾಚೆಗೆ ಮನಸ್ಸು ಮತ್ತು ಬುದ್ಧಿಯನ್ನೂಳಗೊಂಡ ಮನೋಮಯಕೋಶ, ಅದರಿಂದಾಚೆಗೆ ವಿಜ್ಞಾನಮಯಕೋಶ-ಸ್ಮರಣಶಕ್ತಿ. ಆದ್ದರಿಂದ ಬುದ್ದಿಗೆ ಮೊದಲು ಅಹಂಕಾರ ಮತ್ತು ಚಿತ್ತ. ಇಲ್ಲಿ ಅಹಂಕಾರ ಅಂದರೆ ‘ನನ್ನ ಅಸ್ತಿತ್ವದ ಅರಿವು(awareness of self)’. ಈ ಅಹಂಕಾರ ತತ್ವ ಪಿಂಡಾಂಡದಲ್ಲಿ ಚಿತ್ತ, ಬ್ರಹ್ಮಾಂಡದಲ್ಲಿ ಮಹತತ್ವ.
ವ್ಯಕ್ತವಾಗುವ ಈ ಪ್ರಪಂಚದ ಮೂಲ ಅವ್ಯಕ್ತ. ಸೃಷ್ಟಿಯ ಮೂಲಸ್ಥಿತಿ-ಪ್ರಳಯಸಾಗರ. ಅಂದರೆ ಪರಮಾಣುರೂಪದಲ್ಲಿ ಚದುರಿಕೊಂಡಿರುವ ಅವ್ಯಕ್ತ ಪ್ರಪಂಚ. ಇಂಥಹ ಪ್ರಪಂಚದಲ್ಲಿ ಚತುರ್ಮುಖ ಮಹಾತತ್ವವನ್ನು ಸೃಷ್ಟಿ ಮಾಡಿದ. ಪ್ರಳಯ ಸಾಗರದಲ್ಲಿ ತನ್ನ ಅಸ್ತಿತ್ವದ ಅರಿವಿಲ್ಲದೆ ಇದ್ದ ಜೀವಗಳಿಗೆ ‘ನಾನು’ ಎನ್ನುವ ಅರಿವು ಬರುವುದೇ ಮಹತತ್ವದ ಸೃಷ್ಟಿ. ಚಿತ್ತದ ವ್ಯಾಪ್ತಿ ಚೇತನ. ಇದು ನಮ್ಮ ನೆನಪಿನ ವಿಸ್ತಾರ.
ಈ ಶರೀರದಲ್ಲಿ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳಿವೆ ಮತ್ತು ಹನ್ನೊಂದನೇ ಇಂದ್ರಿಯವಾಗಿರುವುದು ಮನಸ್ಸು. ಕಿವಿಯಿಂದ ಶಬ್ದಗ್ರಹಣ, ಕಣ್ಣಿನಿಂದ ರೂಪ ಗ್ರಹಣ, ಮೂಗಿನಿಂದ ಗಂಧ ಗ್ರಹಣ, ನಾಲಿಗೆಯಿಂದ ರಸ ಗ್ರಹಣ, ತೊಗಲಿನಿಂದ ಗಾಳಿಯ ಗ್ರಹಣ. ಅದೇ ರೀತಿ ಬಾಯಿ ಮಾತನಾಡಲು, ಕೈ ಕೆಲಸ ಮಾಡಲು, ಕಾಲು ನಡೆಯಲು. ಈ ಎಂಟನ್ನು ಗ್ರಹ(Receiver)ಗಳೆನ್ನುತ್ತಾರೆ. ನಂತರ ಪಾಯು ಮತ್ತು ಉಪಸ್ಥ(ವಿಸರ್ಜನಾಂಗ ಮತ್ತು ಸಂತಾನವೃದ್ಧಿ)ಗಳು. ಈ ಎಲ್ಲವನ್ನು ಚಿಂತನೆಗೊಳಪಡಿಸುವ ಹನ್ನೊಂದನೆ ಇಂದ್ರಿಯ ಮನಸ್ಸು. ಇವೆಲ್ಲವೂ ಕ್ಷೇತ್ರದ ಘಟಕಾಂಶಗಳು. ಸಮಷ್ಟಿಯಾಗಿ ಇದು ಕ್ಷೇತ್ರ. [ಇಲ್ಲಿ ಹೇಳಿರುವ ಪ್ರತಿಯೊಂದು ಘಟಕದೊಂದಿಗೆ ಅದರ ಅಭಿಮಾನಿ ದೇವತೆಯರೂ ಸೇರಿದ್ದಾರೆ.  ಅದನ್ನು ಮೇಲೆ ಸಂಕ್ಷಿಪ್ತವಾಗಿ ಹೇಳಲಾಗಿದೆ]
ಈ ಜಗತ್ತು ಸದಾ ಬದಲಾಗುತ್ತಿರುತ್ತದೆ. ಅದಕ್ಕಾಗಿ ಜಗತ್ತನ್ನು ಅಶ್ವತ್ಥ ಎಂತಲೂ ಕರೆಯುತ್ತಾರೆ. ಅಶ್ವ ನಿರಂತರ ಚಲನೆಯಲ್ಲಿರುವ ಪ್ರಾಣಿ. ಅದು ನಿಶ್ಚಲವಾಗಿ ಇರುವುದೇ ಇಲ್ಲ. ಈ ಪ್ರಪಂಚ ಕೂಡ ಹಾಗೆ ಸದಾ ಚಲನೆಯಲ್ಲಿರುವುದರಿಂದ-ಅದನ್ನು ಪ್ರಾಚೀನರು ಅಶ್ವತ್ಥ ಎಂದು ಕರೆದರು. ನಮ್ಮ ದೇಹ ಅನ್ನುವುದು ಭೌತಿಕ ವಿಕಾರ. ಅದರಲ್ಲಿ ಆಗತಕ್ಕಂತಹ ಮಾನಸಿಕ ಪ್ರಪಂಚದ ಎಲ್ಲ ತೊಳಲಾಟ ಮಾನಸಿಕ ವಿಕಾರ.   ವಿಶೇಷವಾಗಿ ನಮ್ಮ ಇಚ್ಛೆ(ಬಯಕೆ), (ಅ)ದ್ವೇಷ, ಸುಖ-ದುಃಖ, ನಮ್ಮ ನೆನಪಿನ ಹರವು (ಚೇತನ), (ಅ)ಧೃತಿ. ಇದು ಕೃಷ್ಣನ  ಕ್ಷೇತ್ರ ಮತ್ತು ಅದರ ವಿಕಾರದ ಸೂತ್ರ ರೂಪದ ವಿವರಣೆ. ಈ ವಿಚಾರವನ್ನು ಎಷ್ಟು ವಿಸ್ತಾರವಾಗಿ ಬೇಕಾದರೂ ನಾವು ವಿಶ್ಲೇಷಿಸಬಹುದು. ಕೃಷ್ಣ ಇಲ್ಲಿ ಎಲ್ಲವನ್ನು ಅಡಕವಾಗಿ ವಿವರಿಸಿದ್ದಾನೆ.

No comments:

Post a Comment