Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, October 4, 2011

Bhagavad Gita Kannada Chapter-11 Shloka 36-46


ಅರ್ಜುನ ಭಗವಂತನ ಅಪರಂಪಾರವಾದ ರೂಪ ಮತ್ತು ಆತನ ಶಕ್ತಿಯ ವಿವರಣೆಯನ್ನು ಕೃಷ್ಣನಿಂದ ಕೇಳಿ-ಭಗವಂತನನ್ನು ಭಕ್ತಿಯಿಂದ ಸ್ತುತಿಸಲು ಪ್ರಾರಂಭಿಸುತ್ತಾನೆ. ಮುಂದಿನ ಶ್ಲೋಕಗಳಲ್ಲಿ ಭಗವಂತನ ಅನಂತ ಗುಣವನ್ನು ಅರ್ಜುನ ಸ್ತುತಿಸುವುದನ್ನು ನಾವು ಕಾಣಬಹುದು. [ಇಲ್ಲಿ ಭಗವಂತನ ಗುಣವಿಶೇಷವನ್ನು ಹೇಳುವ ಅನೇಕ ವಿಶೇಷಣಗಳನ್ನು ಶ್ಲೋಕದಲ್ಲಿ ಬಳಸಲಾಗಿದೆ. ಉದಾಹರಣೆಗೆ: ಹೃಷೀಕೇಶಃ, ಅಕ್ಷರಃ, ಪುರುಷಃ, ಅನಂತವೀರ್ಯಃ, ಅಮಿತವಿಕ್ರಮಃ, ದೇವೇಶಃ, ಇತ್ಯಾದಿ. ಈ ಎಲ್ಲಾ ವಿಶೇಷಣಗಳ ಅರ್ಥವಿವರಣೆಯನ್ನು ನಾವು ಈ ಹಿಂದಿನ ಅಧ್ಯಾಯಗಳಲ್ಲಿ ಸಾಂದರ್ಭಿಕವಾಗಿ ಚರ್ಚಿಸಿರುವುದರಿಂದ ಇಲ್ಲಿ ಆ ಅರ್ಥ ವಿವರಣೆಯನ್ನು ಮರಳಿ ವಿವರಿಸಿಲ್ಲ. ನಾವು ವಿಷ್ಣುಸಹಸ್ರನಾಮದಲ್ಲಿ ಕೂಡ ಭಗವಂತನ ನಾಮವಾಗಿ ಈ ಪದಗಳು ಬಳಕೆಯಾಗಿರುವುದನ್ನು ಕಾಣುತ್ತೇವೆ. ಭಗವಂತನ ಒಂದೊಂದು ನಾಮದ ಹಿಂದೆ ಆತನ ಅನಂತ ಗುಣದ ಅನುಸಂಧಾನವಿದೆ.  ಈ ವಿಚಾರವನ್ನು ತಿಳಿದು, ಪ್ರತೀ ಪದದ ಹಿಂದಿರುವ ಅರ್ಥಾನುಸಂಧಾನದೊಂದಿಗೆ ಈ ಶ್ಲೋಕವನ್ನು ನೋಡಿದಾಗ ಮಾತ್ರ ಅದರ ಹಿಂದಿರುವ ಸಂದೇಶದ ಅರಿವಾಗುತ್ತದೆ.ಮುಂದಿನ ಶ್ಲೋಕಗಳನ್ನು ನೋಡುವಾಗ ಓದುಗರು  ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಓದಬೇಕಾಗಿ ಪ್ರಾರ್ಥನೆ.]   

ಅರ್ಜುನ ಉವಾಚ
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತ್ಯನುರಜ್ಯತೇ ಚ           
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ೩೬

ಅರ್ಜುನ ಉವಾಚ-ಅರ್ಜುನ ಹೇಳಿದನು:
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತಿ ಅನುರಜ್ಯತೇ ಚ        
ರಕ್ಷಾಂಸಿ ಭೀತಾನಿ ದಿಶಾಃ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ –ಇಂದ್ರಿಯಗಳ ದೊರೆಯೆ, ಎಲ್ಲ ಸರಿಯೆ: ಜಗತ್ತು ನಿನ್ನ ಕೊಂಡಾಟದಿಂದ ಹಿಗ್ಗುತ್ತಿದೆ; ಒಲಿಯುತ್ತಿದೆ. ರಕ್ಕಸರು ದಿಕ್ಕೆಟ್ಟು ಓಡುತ್ತಿದ್ದಾರೆ. ಸಿದ್ಧರೆಲ್ಲ ಗುಂಪುಗೂಡಿ ಪೊಡಮಡುತ್ತಿದ್ದಾರೆ.

ಈ ಹಿಂದೆ ಹೇಳಿದಂತೆ-ಅರ್ಜುನನಿಗೆ ವಿಶ್ವರೂಪ ದರ್ಶನವಾದಾಗ, ಇಡೀ ವಿಶ್ವದಲ್ಲಿ ಅನೇಕ ಮಂದಿ ಜ್ಞಾನಿಗಳಿಗೆ, ದೇವತೆಗಳಿಗೆ ಕೂಡಾ ಈ ಅಪರೂಪದ ಭಗವಂತನ ರೂಪ ದರ್ಶನವಾಗಿದೆ. ಅರ್ಜುನ ತನ್ನ ಅಂತರಂಗದಲ್ಲಿ ತನಗೆ ಕಾಣುತ್ತಿರುವ ವಿಚಾರವನ್ನು ಹೇಳುತ್ತಿದ್ದಾನೆ. ಇಷ್ಟೇ ಅಲ್ಲದೆ ಬಾಹ್ಯ ವಸ್ತುಸ್ಥಿತಿ ಕೂಡಾ ಆತನಿಗೆ ಭಗವಂತನಲ್ಲಿ ಕಾಣಿಸುತ್ತಿದೆ. ಅದನ್ನು ಅರ್ಜುನ ಇಲ್ಲಿ ವಿವರಿಸುತ್ತಿದ್ದಾನೆ- “ಋಷಿಗಳು, ಜ್ಞಾನಿಗಳು ನಿನ್ನ ಗುಣಗಾನ ಮಾಡುತ್ತಿದ್ದಾರೆ. ನಿನ್ನನ್ನು ಕೊಂಡಾಡಿ ರೋಮಾಂಚನಗೊಳ್ಳುತ್ತಿದ್ದಾರೆ. ದುಷ್ಟಶಕ್ತಿಗಳು ನಿನ್ನನ್ನು ಕಂಡು ಹೆದರಿ ಓಡುತ್ತಿವೆ. ಸಾತ್ವಿಕರು ಸಿದ್ಧರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇದೆಲ್ಲವೂ ಯುಕ್ತವೇ ಸರಿ-ಓ ಹೃಷೀಕೇಶಃ”. 

ಕಸ್ಮಾಚ್ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣೋSಪ್ಯಾದಿಕರ್ತ್ರೇ
ನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ ತತ್ಪರಂ ಯತ್ ೩೭

ಕಸ್ಮಾತ್ ಚ  ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣಃ ಅಪಿ ಆದಿಕರ್ತ್ರೇ
ನಂತ ದೇವೇಶ ಜಗನ್ನಿವಾಸ ತ್ವಮ್ ಅಕ್ಷರಮ್ತ್ ಅತ್ ತತ್ಪಮ್  ಯತ್ –ಓ ಮಹಾತ್ಮನೆ, ಅವರೇಕೆ ಪೊಡಮಡದೆ ಇದ್ದಾರು ನಿನಗೆ; ಬ್ರಹ್ಮನಿಗು ಹಿರಿಯನಿಗೆ; ಮೊಟ್ಟ ಮೊದಲ ತಂದೆಗೆ. ಓ ಕೊನೆಯಿರದವನೆ, ಸಗ್ಗಿಗರೊಡೆಯನೆ, ಜಗದ ಆಸರೆಯೆ, ನೀನು ಅಳಿವಿರದವನು. ಕಾಣುವ, ಕಾಣದ ವಿಶ್ವದೊಳಗಿದ್ದು ಅದರಾಚೆಗಿರುವವನು.

ನಿನ್ನನ್ನು ತಿಳಿದವರು ನಿನಗೆ ನಮಸ್ಕಾರ ಮಾಡದೆ ಇರಲು ಸಾಧ್ಯವೇ ಇಲ್ಲ. ನೀನು ಪರಿಪೂರ್ಣವಾದ ಆತ್ಮ. ಈ ಜಗತ್ತಿನ ತಂದೆಯಾದ ಆ ಚತುರ್ಮುಖನಿಗೂ ನೀನು ತಂದೆ. ಇಂಥಹ ನಿನಗೆ ನಮಸ್ಕರಿಸದೆ ಇರಲು ಸಾಧ್ಯವಿಲ್ಲ. ನೀನು ದೇಶ, ಕಾಲ ಮತ್ತು ಗುಣಗಳಿಂದ ಅನಂತ. ನೀನು ಎಲ್ಲರ ಒಳಗೂ ಹೊರಗೂ ತುಂಬಿ ನಿಂತಿರುವ ಜಗನ್ನಿವಾಸ, ನೀನು ನಿರ್ಧಿಷ್ಟ  ಹಾಗು ದೋಷ ರಹಿತ ಜ್ಞಾನಾನಂದಮೂರ್ತಿ(ಸತ್),  ಅವ್ಯಕ್ತಮೂರ್ತಿಯಾದ ನಿನ್ನನ್ನು (ಅಸತ್) ಹೊರಗಣ್ಣಿನಿಂದ ಕಾಣಲಾರೆವು. ನೀನು ಅಕ್ಷರಃ, ನೀನು ದೇವೇಶಃ, ನೀನು ಕಾರಣಗಳಿಗೂ ಕಾರಣ, ನೀನು ಜಗದ ಆಸರೆ.   

ತ್ವಮಾದಿದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್
ವೇತ್ತಾSಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ೩೮


ತ್ವಮ್ ಆದಿದೇವಃ ಪುರುಷಃ ಪುರಾಣಃ ತ್ವಮ್ ಅಸ್ಯ ವಿಶ್ವಸ್ಯ ಪರಮ್  ನಿಧಾನಮ್
ವೇತ್ತಾಸಿ ವೇದ್ಯಮ್  ಚ ಪರಮ್  ಚ ಧಾಮ ತ್ವಯಾ ತತಮ್  ವಿಶ್ವಮ್ ಅನಂತರೂಪ –ನೀನು ದೇವತೆಗಳಿಗೂ ಮೊದಲಿಗೆ. ಪುರಾಣಪುರುಷ. ನೀನು ಈ ಜಗದ ಹಿರಿಯಾಸರೆ. ಎಲ್ಲವನ್ನು ತಿಳಿದವನು. ಎಲ್ಲರೂ ತಿಳಿಯಬೇಕಾದವನು. ಹಿರಿಯ ಬೆಳಕು. ಓ ಅನಂತರೂಪನೆ, ಇಡಿಯ ವಿಶ್ವ ನಿನ್ನಿಂದ ತುಂಬಿದೆ.

ನೀನು ಆದಿದೇವಃ, ನೀನು ಪುರಾಣಪುರುಷಃ, ಈ ಜಗತ್ತಿನಲ್ಲಿ ಕೊನೆಯಾಸರೆ ನೀನು. ಎಲ್ಲರೂ ತಿಳಿಯಬೇಕಾದವನು, ಎಲ್ಲವನ್ನೂ ತಿಳಿದ ನೀನು ಎಲ್ಲವನ್ನು ಮೀರಿದ ಪರಂಧಾಮ. ಅನಂತರೂಪನಾದ ನೀನು ಇಡೀ ವಿಶ್ವವನ್ನು ವ್ಯಾಪಿಸಿ ನಿಂತಿದ್ದೀಯ.

ವಾಯುರ್ಯಮೋSಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ
ನಮೋ ನಮಸ್ತೇSಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋSಪಿ ನಮೋ ನಮಸ್ತೇ ೩೯

ವಾಯುಃ ಯಮಃ ಅಗ್ನಿಃ ವರುಣಃ ಶಶಾಂಕಃ ಪ್ರಜಾಪತಿಃ ತ್ವಮ್  ಪ್ರಪಿತಾಮಹಃ ಚ  
ಮಃ  ನಮಃ ತೇ ಅಸ್ತು ಸಹಸ್ರಕೃತ್ವಃ ಪುನಃ ಚ  ಭೂಯಃ ಅಪಿ ನಮಃ ಮಃ ತೇ –ವಾಯು, ಯಮ, ಅಗ್ನಿ, ವರುಣ, ಚಂದ್ರ, ಪ್ರಜಾಪತಿ ಎಲ್ಲ ನೀನೆ. [ವ=ಬಲರೂಪ, ಆಯಾ=ಜ್ಞಾನರೂಪ. ಆದ್ದರಿಂದ ‘ವಾಯು’. ಎಲ್ಲವನ್ನು ನಿಯಮಿಸುವುದರಿಂದ  ‘ಯಮ’. ಅಗ=ಚಲನೆ ಇಲ್ಲದ ವಿಶ್ವಕ್ಕೆ, ನಿ=ಚಲನೆ ನೀಡುವುದರಿಂದ ‘ಅಗ್ನಿ’. ಭಕ್ತರನ್ನು ವರಣ ಮಾಡುವುದರಿಂದ ವರುಣಃ. ಶಶ=ಮಿಗಿಲಾದ ಆನಂದದಿಂದ ಅಂಕ=ಅಂಕಿತನಾದ್ದರಿಂದ ‘ಶಶಾಂಕ’. ಪ್ರಜಾ=ಪ್ರಜೆಗಳ, ಪತಿ=ಪಾಲಕನಾದ್ದರಿಂದ ‘ಪ್ರಜಾಪತಿ’.] ನೀನೆ ಜಗದ ಮುತ್ತಜ್ಜ. ಸಾವಿರಬಾರಿ ನಿನಗೆ ನಮೋನಮೋ ಎಂದು ಮಣಿವೆ. ಮತ್ತೊಮ್ಮೆ ಮಗದೊಮ್ಮೆ ನಿನಗೆ ವಂದನೆ; ವಂದನೆ.

ನೀನು ವಾಯುಃ, ಯಮಃ, ವರುಣಃ, ಶಶಾಂಕಃ, ಪ್ರಜಾಪತಿಃ. ನೀನು ಜಗದ ಮುತ್ತಜ್ಜ. ನಿನಗೆ ಸಹಸ್ರ ಬಾರಿ ವಂದನೆ.   

ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋSಸ್ತು ತೇ ಸರ್ವತ ಏವ ಸರ್ವ
ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋSಸಿ ಸರ್ವಃ ೪೦

ನಮಃ ಪುರಸ್ತಾತ್ ಅಥ ಪೃಷ್ಠತಃ ತೇ ಮಃ ಅಸ್ತು ತೇ ಸರ್ವತಃ ಏವ ಸರ್ವ
ಅನಂತವೀರ್ಯ ಅಮಿತವಿಕ್ರಮಃ ತ್ವಮ್  ಸರ್ವಮ್  ಸಮಾಪ್ರೋಷಿ ತತಃ ಅಸಿ ಸರ್ವಃ –ಮುಂಗಡ ನಿನಗೆ ವಂದನೆ. ಮತ್ತೆ ಬೆಂಗಡೆ ನಿನಗೆ ವಂದನೆ. ಓ, ಎಲ್ಲೆಡೆ ಇರುವವನೆ, ಎಲ್ಲ ಕಡೆ ನಿನಗೆ ವಂದನೆ. ನೀನು ಎಲ್ಲೆಯಿರದ ಬೀರದವನು.ಅಳತೆಯಿರದ ಅಳವಿನವನು. ಎಲ್ಲೆಡೆಯು ತುಂಬಿರುವೆ. ಅದಕೆಂದು ನೀನೆ ಎಲ್ಲ.

ಭಗವಂತನ ವಿಶ್ವರೂಪದಲ್ಲಿ ಆತನ ಮುಂಭಾಗ ಯಾವುದು ಹಿಂಭಾಗ ಯಾವುದು ಎಂದು ಹೇಗೆ ಗುರುತಿಸುವುದು. ಇದು ಅಸಾಧ್ಯ. ಅದಕ್ಕಾಗಿ ಅರ್ಜುನ ಹೇಳುತ್ತಾನೆ: ನಿನಗೆ ಎದುರಿನಿಂದ ನಮಸ್ಕಾರ, ನಿನ್ನ ಬೆಂಭಾಗದಿಂದ ನಮಸ್ಕಾರ, ಎಲ್ಲೆಡೆ ತುಂಬಿರುವ ನಿನಗೆ ಎಲ್ಲೆಡೆಯಿಂದ ನಮಸ್ಕಾರ. ನೀನು ಅನಂತವೀರ್ಯಃ. ನೀನು ಅಮಿತವಿಕ್ರಮಃ. ಓ ಸರ್ವನೇ, ನಿನಗೆ ನಮಸ್ಕಾರ. ಜಗತ್ತಿನ ಸಮಸ್ತ ಜೀವ ಜಾತದ ಸೃಷ್ಟಿಗೆ ಕಾರಣವಾಗಿ ಎಲ್ಲೆಡೆ ತುಂಬಿರುವ ಜಗತ್ತಿನ ನಿಯಾಮಕನಾದ ಈ ಅನಂತ ಶಕ್ತಿಗೆ ನಮಸ್ಕಾರ. ಎಲ್ಲವೂ ನೀನೆ.

ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ
ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ ಪ್ರಣಯೇನ ವಾSಪಿ ೪೧

ಯಚ್ಚಾಹಾಸಾರ್ಥಮಸತ್ ಕೃತೋSಸಿ ವಿಹಾರಶಯ್ಯಾಸನಭೋಜನೇಷು
ಏಕೋSಥವಾSಪ್ಯಚ್ಯುತ ತತ್ ಸಮಕ್ಷಂ ತತ್ ಕ್ಷಾಮಯೇ ತ್ವಾಮಹಮಪ್ರಮೇಯಮ್ ೪೨

ಖಾ ಇತಿ ಮತ್ವಾ ಪ್ರಸಭಮ್  ತ್ ಉಕ್ತಮ್  ಹೇ ಕೃಷ್ಣ ಹೇ ಯಾದವ ಹೇ ಸಖೇತಿ
ಅಜಾನತಾ ಮಹಿಮಾನಮ್  ತವ ಇಮ್  ಮಯಾ ಪ್ರಮಾದಾತ್ ಪ್ರಣಯೇನ ವಾSಪಿ  ||
ತ್ ಚ ಅವಹಾಸ ಅರ್ಥಮ್ ಅಸತ್ ಕೃತಃ ಅಸಿ ವಿಹಾರ ಶಯ್ಯಾಸನ ಭೋಜನೇಷು
ಕಃ ಅಥವಾ ಅಪಿ ಅಚ್ಯುತ ತತ್ ಸಮಕ್ಷಮ್  ತತ್ ಕ್ಷಾಮಯೇ ತ್ವಾಮ್ ಅಮ್ ಅಪ್ರಮೇಯಮ್ –ನಿನ್ನ ಹಿರಿಮೆಯನ್ನು ಅರಿಯದೆ ಗೆಳೆಯನೆಂದು ತಿಳಿದು ದುಡುಕಿ ನುಡಿದದ್ದುಂಟು. ನನ್ನ ಎಡವಿನಿಂದ ಅಥವಾ ಸಲಿಗೆಯಿಂದ- “ಏ ಕೃಷ್ಣ, ಏ ಗೆಳೆಯ” ಎಂದು ಕರೆದದ್ದುಂಟು. ವಿಹಾರದಲ್ಲಿದ್ದಾಗ, ಮಲಗಿದ್ದಾಗ, ಕೂತಾಗ, ಊಟಮಾಡುವಾಗ- ಎಲ್ಲ ಮಾಡಿಸುವ ನಿನ್ನನ್ನು ಅಣಕಕ್ಕಾಗಿ ಕಡೆಗಣಿಸಿದ್ದುಂಟು. ಆದ್ದರಿಂದ ಓ ಕುಗ್ಗದ  ಎತ್ತರವೇ, ತಿಳಿವಿಗೆಟುಕದ, ಸಾಟಿಯಿರದ ನಿನ್ನೆದುರು ಬೇಡಿಕೊಳ್ಳುತ್ತಿದ್ದೇನೆ-ಅದನೆಲ್ಲ ಮರೆತು ಮನ್ನಿಸುವಂತೆ.

ಅರ್ಜುನನಿಗೆ  ತಾನು ಹಿಂದೆ ಕೃಷ್ಣನೊಂದಿಗೆ ನಡೆದುಕೊಂಡ ರೀತಿ ಬಗ್ಗೆ ಪಶ್ಚಾತ್ತಾಪವಾಗುತ್ತದೆ. ಕೃಷ್ಣ ಜಗತ್ತಿನ ಮೂಲಶಕ್ತಿ ಎನ್ನುವ ಕಲ್ಪನೆ ಇಲ್ಲದೆ ತಾನು ನಡೆದುಕೊಂಡ ರೀತಿ ಬಗ್ಗೆ ಆತ ಕೃಷ್ಣನಲ್ಲಿ ಕ್ಷೆಮೆ ಬೇಡುತ್ತಾನೆ. ತಿಳಿದೋ ತಿಳಿಯದೆಯೋ, ಬೇಜವಾಬ್ಧಾರಿಯಿಂದಲೋ ಅಥವಾ ಪ್ರೀತಿಯಿಂದಲೋ ಮಾಡಿದ ತಪ್ಪುಗಳನ್ನು ಕ್ಷಮಿಸು ಎಂದು ಆತ ಭಗವಂತನಲ್ಲಿ ಬೇಡುತ್ತಾನೆ. ಇಲ್ಲಿ ಬಂದಿರುವ ‘ಏಕ’ ಎನ್ನುವ ಪದಕ್ಕೆ ವಿಶೇಷ ಅರ್ಥವಿದೆ. ಏಕಃ ಎಂದರೆ ಸರ್ವೋತ್ತಮ ಮತ್ತು ಸರ್ವಕರ್ತ(ಏಷ ಏವ ಕರೋತಿ-ಏಕಃ). ಸರ್ವಕರ್ತ-ಸರ್ವೋತ್ತಮನಾದ ನಿನ್ನನ್ನು ಪರಿಹಾಸ್ಯ ಮಾಡಿ ಸಲುಗೆಯಿಂದ ಮಾತನಾಡಿದೆ, ನೀನು ಅಚ್ಯುತಃ. ನಿನ್ನ ಸಾಮರ್ಥ್ಯ, ಗುಣ, ದೇಹದಲ್ಲಿ ಚ್ಯುತಿ ಇಲ್ಲ. ಚ್ಯುತವಾದ ನನ್ನ ಬುದ್ಧಿಯಿಂದ ಇದನ್ನು ನಾನು ಗ್ರಹಿಸಲಿಲ್ಲ. ನಾನು ಈ ರೀತಿ ನೆಡೆದುಕೊಳ್ಳಬಾರದಿತ್ತು. ನಾನು ಮಾಡಿರುವ ಅಪರಾಧಕ್ಕೆ ನಿನ್ನ ಬಳಿ ಕ್ಷಮೆ ಬೇಡುತ್ತಿದ್ದೇನೆ. ನೀನು ಅಪ್ರಮೇಯ- ಕಾಲ-ದೇಶಗಳಿಂದ ವ್ಯಾಪ್ತನಾದ ನೀನು ನಮ್ಮ ಅರಿವಿಗೆ ಎಟುಕದವನು. ಈಗ ನನಗೆ ನನ್ನ ತಪ್ಪಿನ ಅರಿವಾಯಿತು. ಅಜ್ಞಾನದಿಂದ ತಪ್ಪು ಮಾಡುತ್ತಿದ್ದೇನೆ ಎನ್ನುವ ತಿಳುವಳಿಕೆ ಬಂತು.

ಪಿತಾSಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್
ನ ತ್ವತ್ ಸಮೋSಸ್ತ್ಯಭ್ಯಧಿಕಃ ಕುತೋನ್ಯೋ ಲೋಕತ್ರಯೇSಪ್ಯಪ್ರತಿಮಪ್ರಭಾವ ೪೩

ಪಿತಾಸಿ ಲೋಕಸ್ಯ ಚರಚರಸ್ಯ ತ್ವಮ್ ಅಸ್ಯ ಪೂಜ್ಯಃ ಚ  ಗುರುಃ ಗರೀಯಾನ್  
ನ ತ್ವತ್ ಸಮಃ ಅಸ್ತಿ ಅಭ್ಯಧಿಕಃ ಕುತಃ ಅನ್ಯಃ ಲೋಕತ್ರಯೇ ಅಪಿ ಅಪ್ರತಿಮ ಪ್ರಭಾವ –ಈ ಚರಾಚರದ ಜಗದ ತಂದೆ ನೀನು. ಆರಾಧನೆಯ ಕೇಂದ್ರ. ಗುರುವಿಗೂ ಹಿರಿಯ ಗುರು. ಜೋಡಿಯಿರದ ಹಿರಿಮೆಯೆ, ಮೂರು ಲೋಕದಲ್ಲು ನಿನಗೆ ಸಾಟಿ ಇಲ್ಲ. ಬೇರೆ ಮಿಗಿಲು ಮತ್ತೆಲ್ಲಿ?

ಎಲ್ಲರನ್ನು ಸೃಷ್ಟಿಸಿದವ, ಎಲ್ಲರನ್ನು ಪಾಲಿಸುವ ನೀನು ಜಗದ ತಂದೆ. ಜಗದ ಗುರುವಾದ ನಿನ್ನನ್ನು ನಾನು ತೀರ ಸಲುಗೆಯಿಂದ ಕಂಡೆ. ನಿನಗೆ ಸಾಟಿಯಾದವರು ಇನ್ನೊಬ್ಬರಿಲ್ಲ. ನಿನ್ನನ್ನು ಹೋಲಿಸುವ ಇನ್ನೊಂದು ದೃಷ್ಟಾಂತವಿಲ್ಲ.  ಇಡೀ ಜಗತ್ತಿನಲ್ಲಿ ನಿನ್ನನ್ನು ಮೀರಿಸುವ ಇನ್ನೊಂದು ಶಕ್ತಿ ಇಲ್ಲ. [ಇಲ್ಲಿ ಮೂರು ಲೋಕ ಎಂದರೆ ಭೂಮಿಯಿಂದ ಕೆಳಗಿರುವ ಲೋಕಗಳು, ಭೂಲೋಕ ಮತ್ತು ಭೂಮಿಯಿಂದ ಮೇಲಿರುವ ಲೋಕಗಳು] ನೀನು ಎಲ್ಲ ಕಾರಣಗಳ ಕಾರಣ. ನಿನಗಿಂತ ಮಿಗಿಲು ಇನ್ನೆಲ್ಲಿ?  

ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್
ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್           ೪೪

ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಮ್  ಪ್ರಸಾದಯೇ ತ್ವಾಮ್ ಅಮ್ ಈಮ್ ಈಡ್ಯಮ್
ಪಿತಾ ಇವ ಪುತ್ರಸ್ಯ ಸಖಾ ಇವ ಸಖ್ಯುಃ ಪ್ರಿಯಃ ಪ್ರಿಯಾಯಾಃ ಅರ್ಹಸಿ ದೇವ ಸೋಢುಮ್ –ಆದ್ದರಿಂದ, ಎಲ್ಲರು ಹೊಗಳುವ, ಎಲ್ಲರ ದೊರೆಯಾದ ನಿನ್ನೆದುರು ಮೈಚಲ್ಲಿ, ಕಾಲಿಗೆರಗಿ ಒಲೈಸುತ್ತಿದ್ದೇನೆ: ಓ ದೇವ, ನನ್ನ ಮೆಚ್ಚಿನ ನೀನು ನಿನ್ನ ಮೆಚ್ಚಿನ ನನಗಾಗಿ ನನ್ನ ತಪ್ಪುಗಳನ್ನು ಮನ್ನಿಸಬೇಕು-ತಂದೆ-ಮಗನ ತಪ್ಪನ್ನು, ಗೆಳೆಯ-ಗೆಳೆಯನ ತಪ್ಪನ್ನು ಮನ್ನಿಸುವಂತೆ.

ನಿನ್ನೆದುರು  ನಿಲ್ಲಲಾಗುತ್ತಿಲ್ಲ. ಮೈಚೆಲ್ಲಿ ಹೊರಳಾಡಬೇಕು ಎನ್ನಿಸುತ್ತಿದೆ. ಎಲ್ಲರಿಂದ ಸ್ತುತನಾದ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಮಗ ಮಾಡಿದ ತಪ್ಪನ್ನು ತಂದೆ ಕ್ಷಮಿಸುವಂತೆ, ಗೆಳೆಯನ ತಪ್ಪನ್ನು ಗೆಳೆಯ ಕ್ಷಮಿಸುವಂತೆ, ಜಗದ ತಂದೆಯಾದ ನೀನು, ಜಗತ್ತಿನ ಎಲ್ಲರ ಅಂತಃಕರಣದ  ಮಿತ್ರನಾದ ನೀನು,  ನನ್ನನ್ನು ಕ್ಷಮಿಸು.   

ಅದೃಷ್ಟಪೂರ್ವಂ ಹೃಷಿತೋSಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ         
ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ  ೪೫

ಅದೃಷ್ಟ ಪೂರ್ವಮ್  ಹೃಷಿತಃ ಅಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯದಿ ಮ್  ಮನಃ  ಮೇ  
ತ್ ಏವ ಮೇ ದರ್ಶಯ ದೇವ ರೂಪಮ್  ಪ್ರಸೀದ ದೇವೇಶ ಜಗನ್ನಿವಾಸ –ಹಿಂದೆಂದೂ ಕಂಡರಿಯದ ರೂಪವನ್ನು ಕಂಡು ಸಡಗರಪಟ್ಟಿದ್ದೇನೆ; ಕಂಡು ಗಾಬರಿಗೊಂಡು ಬಗೆಗೆಟ್ಟಿದ್ದೇನೆ ಕೂಡ. ಓ ಸಗ್ಗಿಗರ ದೊರೆಯೆ, ಓ ಜಗದ ಆಸರೆಯೆ, ದಯೆದೋರು. ಓ ದೇವ, ನನಗೆ ಅದೇ ರೂಪವನ್ನು ತೋರು.

ಎಂದೂ ಕಾಣದ ಈ ನಿನ್ನ ಅದ್ಭುತ ರೂಪವನ್ನು ಕಂಡು ಖುಷಿ ಪಟ್ಟಿದ್ದೇನೆ. ಆದರೆ ಇಡೀ ಜಗತ್ತನ್ನು ಸಂಹಾರ ಮಾಡುವ ನಿನ್ನ ಉಗ್ರ ರೂಪವನ್ನು ಕಂಡ ಭಯವಾಗುತ್ತಿದೆ. ಒಂದು ಕಡೆ ಆನಂದ ಮತ್ತು ಇನ್ನೊಂದು ಕಡೆ ದಿಗಿಲು. ಇದರಿಂದ ನಾನು ಕಂಗಾಲಾಗಿದ್ದೇನೆ. ಅದಕ್ಕಾಗಿ ಆ ನಿನ್ನ ‘ಕೃಷ್ಣ’ ರೂಪವನ್ನು ತೋರು.

ಕಿರೀಟಿನಂ ಗದಿನಂ ಚಕ್ರಹಸ್ತಂ ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ
ತೇನೈವ ರೂಪೇಣ ಚತುರ್ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೇ ೪೬

ಕಿರೀಟಿನಮ್  ಗದಿನಮ್  ಚಕ್ರಹಸ್ತಮ್  ಇಚ್ಛಾಮಿ ತ್ವಾಮ್  ದ್ರಷ್ಟುಮ್ ಅಮ್  ತದಾ ಏ      
ತೇನ ಏವ ರೂಪೇಣ ಚತುಃ ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೇ—ಮುಕುಟವಿಟ್ಟ, ಕೈಯಲ್ಲಿ ಗದೆ-ಚಕ್ರ ತೊಟ್ಟ ನಿನ್ನನ್ನು ಆ ರೂಪದಲ್ಲೆ ಕಾಣಬಯಸುತ್ತೇನೆ. ಸಾವಿರ ತೋಳಿನ ವಿಶ್ವರೂಪನೆ, ಮತ್ತೊಮ್ಮೆ ನಾಲ್ಕು ತೋಳಿನ ಅದೇ ರೂಪದಿಂದ ಕಾಣಿಸಿಕೊ.

“ನೀನು ಹಿಂದೆ ಕಾಣಿಸಿಕೊಂಡಂತೆ ಚತುರ್ಭುಜನಾಗಿ, ಕಿರೀಟ ಧರಿಸಿದ ಗದಾ-ಚಕ್ರ ಹಿಡಿದಿರುವ ನಿನ್ನ ರೂಪವನ್ನು ತೋರು” ಎಂದು ಅರ್ಜುನ ಸಹಸ್ರ ತೋಳಿನ ವಿಶ್ವರೂಪಿ ಭಗವಂತನಲ್ಲಿ ಕೈಜೋಡಿಸಿ ಬೇಡಿಕೊಳ್ಳುತ್ತಾನೆ. ಇಲ್ಲಿ ಅರ್ಜುನ ಕೃಷ್ಣನಲ್ಲಿ –“ನಿನ್ನ ಚತುರ್ಭುಜ ರೂಪವನ್ನು ತೋರು” ಎಂದಿದ್ದಾನೆ. ಕೃಷ್ಣ ತನ್ನ ಅಂತರಂಗದ ಭಕ್ತರಿಗೆ ತನ್ನ ಚತುರ್ಭುಜ ರೂಪವನ್ನು ತೋರಿದ್ದ. ಇದನ್ನು ಅರ್ಜುನ ಕೂಡ ನೋಡಿದ್ದಾನೆ. ಭಾಗವತದಲ್ಲಿ- ಬಾಲಕನಾಗಿದ್ದಾಗ ಕೃಷ್ಣ ತನ್ನ ಚತುರ್ಭುಜ ರೂಪವನ್ನು ತೋರಿದ್ದ ಎನ್ನುವುದನ್ನು ಹೀಗೆ ಹೇಳಿದ್ದಾರೆ:
ತಮದ್ಭುತಂ ಬಾಲಕಮಂಬುಜೇಕ್ಷಣಂ ಚತುರ್ಭುಜಂ ಶಂಖಗದಾದ್ಯುದಾಯುಧಂ,
ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ ಪೀತಾಂಬರಂ ಸಾಂದ್ರಪಯೋದಸೌಭಗಂ ||೧೦.೦೩.೯||
ಸಾಮಾನ್ಯರು ಕಾಣದ ಭಗವಂತನ ಚತುರ್ಭುಜ ರೂಪವನ್ನು ಕೃಷ್ಣ ಕೆಲವರಿಗೆ ತೋರಿದ್ದ ಎನ್ನುವುದನ್ನು ಈ ಶ್ಲೋಕ ದೃಡಪಡಿಸುತ್ತದೆ. ಇಲ್ಲಿ ಅರ್ಜುನ ಭಗವಂತನಲ್ಲಿ ಆತನ ವಿಶ್ವರೂಪ ದರ್ಶನವನ್ನು ಕೊನೆಗೊಳಿಸಿ ತನಗೆ  ಚತುರ್ಭುಜ ರೂಪವನ್ನು ತೋರಿಸು ಎಂದು ಬೇಡಿಕೊಳ್ಳುತ್ತಾನೆ.
ಇಲ್ಲಿ ನಾವು ತಿಳಿಯಬೇಕಾದ ಮುಖ್ಯ ವಿಚಾರ ಎಂದರೆ: ಭಗವಂತನ ವಿಶ್ವರೂಪದ ಉಪಾಸನೆ ಸಾಮಾನ್ಯರಾದ ನಮಗೆ ಅಸಾಧ್ಯ. ಆತನ ವಿಶ್ವರೂಪವನ್ನು ಮಹಾ ಜ್ಞಾನಿಯಾದ ಅರ್ಜುನನಿಂದಲೇ ನೋಡಿ ತಡೆದುಕೊಳ್ಳಲು ಆಗಿಲ್ಲ. ಹಾಗಿರುವಾಗ ನಾವು ಅದನ್ನು ನಮ್ಮ ಧ್ಯಾನದಲ್ಲಿ ಜೀರ್ಣಿಸಿಕೊಳ್ಳವುದು ಸಾಧ್ಯವೇ? ಈ ಕಾರಣಕ್ಕಾಗಿ ಧ್ಯಾನದಲ್ಲಿ ಭಗವಂತನ ವಿಶ್ವ ರೂಪವನ್ನು ಉಪಾಸನೆ ಮಾಡುವುದಕ್ಕಿಂತ, ಭಗವಂತನ ವಿಶ್ವ ಶಕ್ತಿಯ ಎಚ್ಚರದಿಂದ  ಆತನ ಅವತಾರ ರೂಪದಲ್ಲಿ ಆತನನ್ನು ಉಪಾಸನೆ ಮಾಡುವುದು ಶ್ರೇಯಸ್ಕರ.
ಅರ್ಜುನನ ಈ ಬೇಡಿಕೆಯನ್ನು ಕೃಷ್ಣ ಹೇಗೆ ಪುರಸ್ಕರಿಸಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.

No comments:

Post a Comment