Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, October 2, 2011

Bhagavad Gita Kannada Chapter-11 Shloka 15-22


ಅರ್ಜುನ ಉವಾಚ ।
ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್ ।
ಬ್ರಹ್ಮಾಣಮೀಶಂ ಕಮಲಾಸನಸ್ಥಂ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ॥೧೫॥

ಅರ್ಜುನ ಉವಾಚ-ಅರ್ಜುನ ನುಡಿದನು:
ಪಶ್ಯಾಮಿ ದೇವಾಂನ್ ತವ  ದೇವ ದೇಹೇ ಸರ್ವಾನ್ ತಥಾ  ಭೂತ ವಿಶೇಷ ಸಂಘಾನ್ ।
ಬ್ರಹ್ಮಾಣಮ್ ಈಶಮ್  ಕಮಲಾಸನಸ್ಥಂ ಋಷೀನ್ ಚ ಸರ್ವಾನ್ ಉರಗಾನ್ ಚ ದಿವ್ಯಾನ್ --ಓ ದೇವ, ನಿನ್ನ ಮೈಯಲ್ಲಿ ಕಾಣುತ್ತಿದ್ದೇನೆ ದೇವತೆಗಳನ್ನೆಲ್ಲ. ಅಂತೆಯೆ ಬಗೆಬಗೆಯ ಜೀವಿಗಳ ಗಡಣಗಳನ್ನು. ಬ್ರಹ್ಮನನ್ನು, ಅವನ ತೊಡೆಯಲ್ಲಿ ಕುಳಿತ ಶಿವನನ್ನು, ಎಲ್ಲ ಋಷಿಗಳನ್ನು ಮತ್ತು ದಿವ್ಯ ಶಕ್ತಿಯ ಉರಗಗಳನ್ನು.

ಅರ್ಜುನ ಕೃಷ್ಣನ ಅತ್ಯದ್ಭುತ ರೂಪವನ್ನು ನೋಡುತ್ತಿದ್ದಾನೆ. ಆತನಿಗೆ ಸಮಸ್ತ ದೇವತೆಗಳೂ ಆ ಭಗವಂತನೊಳಗೆ ಕಾಣುತ್ತಿದ್ದಾರೆ. ದೇವತೆಗಳು, ರಾಕ್ಷಸರು, ಅಸುರರು, ಗಂಧರ್ವರು, ಅಪ್ಸರರು, ಯಕ್ಷರು , ಮನುಷ್ಯರು, ಪ್ರಾಣಿಗಳು ಹೀಗೆ ಎಲ್ಲರು. ಮುಖ್ಯವಾಗಿ ಅರ್ಜುನ ಭಗವಂತನೊಳಗೆ ಚತುರ್ಮುಖ ಬ್ರಹ್ಮ, ಶಿವ, ಮಹಾನ್ ಋಷಿಗಳು  ಮತ್ತು ದೇವಾಂಶ ಸಂಭೂತ ದಿವ್ಯ ಉರಗಗಳನ್ನು ಆ ಶೇಷಶಾಯಿ ಭಗವಂತನಲ್ಲಿ ಕಾಣುತ್ತಿದ್ದಾನೆ.   

ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋSನಂತರೂಪಮ್ ।
ನಾಂತಂ ನ ಮಧ್ಯಂ ನ ಪುನಸ್ತವಾSದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ॥೧೬॥

ಅನೇಕ ಬಾಹು ಉದರ ವಕ್ತ್ರ ನೇತ್ರಮ್  ಪಶ್ಯಾಮಿ  ಸರ್ವತಃ ಅನಂತ ರೂಪಮ್ ।
ನ ಅಂತಮ್ ನ ಮಧ್ಯಮ್ ನ ಪುನಃ ತವ ಆದಿಮ್  ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ – ಎಣಿಕೆಯಿರದ ತೋಳುಗಳು, ಒಡಲು, ಬಾಯಿ, ಕಣ್ಣುಗಳು. ಎಲ್ಲೆಡೆಯು ಎಣಿಕೆಯಿರದ ರೂಪಗಳ ನಿನ್ನನ್ನು ಕಾಣುತ್ತಿದ್ದೇನೆ. ಓ ಪೊಡವಿಗೊಡೆಯನೆ, ಓ ವಿಶ್ವರೂಪನೆ, ನಿನ್ನ ತುದಿ ಕಾಣುತ್ತಿಲ್ಲ; ಇಲ್ಲ ನಡು; ಇಲ್ಲ ಬುಡ ಕೂಡ.

ಎಲ್ಲಿ ನೋಡಿದರಲ್ಲಿ ಮುಖ, ಎಲ್ಲಿ ನೋಡಿದರಲ್ಲಿ ಕಣ್ಣು, ಎಲ್ಲಿ ನೋಡಿದರಲ್ಲಿ ತೋಳು, ಎಲ್ಲಿ ನೋಡಿದರಲ್ಲಿ ಉದರ. ಈ ಶ್ಲೋಕ ಪುರುಷಸೂಕ್ತಕ್ಕೆ ವ್ಯಾಖ್ಯಾನ ರೂಪದಲ್ಲಿದೆ. ಪುರುಷ ಸೂಕ್ತದಲ್ಲಿ ಹೇಳುವಂತೆ: “ಓಂ ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ | -ಭಗವಂತನಿಗೆ ಸಹಸ್ರಾರು ಶಿರಗಳು, ಸಹಸ್ರಾರು ಕಣ್ಣುಗಳು, ಸಹಸ್ರಾರು ಪಾದಗಳು. ಎಲ್ಲಿ ಏನನ್ನು ಕಾಣಬೇಕೆಂದು ಅಪೇಕ್ಷೆ ಪಟ್ಟು ಅರ್ಜುನ ಕಂಡನೋ ಅಲ್ಲಿ ಆತ ಬಯಸಿದ್ದು ಕಾಣಿಸಿತು. ಇದು ಒಂದು ವಿಚಿತ್ರ ಅನುಭವ. ಇದನ್ನು ವಿವರಿಸುವುದು ಅಸಾಧ್ಯ. ಕೇವಲ ಅನುಭವಿಸಬೇಕು. ಅನಂತ ರೂಪಿ ಭಗವಂತನ ರೂಪಕ್ಕೆ ತುದಿ ಬುಡವಿಲ್ಲ. ಸಮಸ್ತ ಜಗದ ಸ್ವಾಮಿ ಭಗವಂತ ಅಣುವಿಗಿಂತ ಅಣು ಕೂಡಾ ಹೌದು, ಮಹತೋಮಯ ಕೂಡ ಹೌದು. ಭಗವಂತನ ಈ ರೂಪವನ್ನು ಧ್ಯಾನದಲ್ಲಿ ಕಾಣುವುದು ಬಹಳ ಕಷ್ಟ. ಶಾಸ್ತ್ರಕಾರರು ಹೇಳುವಂತೆ ಧ್ಯಾನದಲ್ಲಿ ಭಗವಂತನ ಪೂರ್ಣ ಶರೀರ ಕಾಣಬೇಕು ಎಂದುಕೊಂಡು ಕುಳಿತರೆ ಏನೂ ಕಾಣದೆ ಇರಬಹುದು. ಅದಕ್ಕಾಗಿ ಕೊಳಲನೂದುವ ಆತನ ಒಂದು ಕಿರಿ ಬೆರಳಿನ ಮೇಲೋ, ಆತನ ಕರುಣಾಪೂರ್ಣ ಕಣ್ಣಿನ ನೋಟವನ್ನೋ ಕೇಂದ್ರೀಕರಿಸಿ ಧ್ಯಾನ ಅಭ್ಯಾಸ  ಮಾಡುವುದು ಒಳ್ಳೆಯದು.     

ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾತ್ ದೀಪ್ತನಲಾರ್ಕದ್ಯುತಿಮಪ್ರಮೇಯಮ್       ॥೧೭॥

ಕಿರೀಟಿನಮ್ ಗದಿನಮ್  ಚಕ್ರಿಣಮ್  ಚ ತೇಜೋರಾಶಿಮ್ ಸರ್ವತಃ  ದೀಪ್ತಿಮಂತಮ್ ।
ಪಶ್ಯಾಮಿ ತ್ವಾಮ್  ದುರ್ನಿರೀಕ್ಷ್ಯಮ್ ಸಮಂತಾತ್ ದೀಪ್ತ ಅನಳ ಅರ್ಕ ದ್ಯುತಿಮ್ ಅಪ್ರಮೇಯಮ್—ತಲೆಯಲ್ಲಿ ಮುಕುಟ. ಕೈಯಲ್ಲಿ ಗದೆ ಮತ್ತು ಚಕ್ರ. ಬೆಳಕಿನ ಮುದ್ದೆಯಾಗಿ ಎಲ್ಲೆಡೆಯು ಕೋರಯಿಸುವ ರೂಪ. ಸುಡುವ ಬೆಂಕಿಯಂತೆ, ಸೂರ್ಯನಂತೆ ಪ್ರಕಾಶವುಳ್ಳ , ಅಳೆಯಲಾಗದ ರೂಪ. ಕಣ್ಕುಕ್ಕುವ ನಿನ್ನ ಆ ರೂಪವನ್ನೇ ಸುತ್ತಲು ಕಾಣುತ್ತಿದ್ದೇನೆ.

ಸರ್ವಾಭರಣಭೂಶಿತನಾದ ಮನಮೋಹಕ ರೂಪ ಒಂದು ಕಡೆಯಾದರೆ, ಚಕ್ರ-ಗದೆಯನ್ನು ಹಿಡಿದ ಶತ್ರು ಭಯಂಕರ ರೂಪ ಇನ್ನೊಂದೆಡೆಗೆ. ಎಲ್ಲವೂ ಒಂದು ಬೆಳಕಿನ ಪುಂಜದಂತೆ ಕಾಣುತ್ತಿದೆ. ನೋಡಲಾಗದ್ದನ್ನು ಸ್ಪಷ್ಟವಾಗಿ ನೋಡುತ್ತಿರುವ ಅನುಭವ. ಅದು ಸುಡುವ ಬೆಂಕಿಯೋ ಅಥವಾ ಹೊಳೆವ ಸೂರ್ಯನೋ ತಿಳಿಯುತ್ತಿಲ್ಲ. ಅದೊಂದು ಅಳೆಯಲಾಗದ, ಅರಿಯಲಾಗದ  ಅತ್ಯದ್ಭುತ ಅಪೂರ್ವ ರೂಪ.     

ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ            ॥೧೮॥

ತ್ವಮ್ ಅಕ್ಷರಮ್  ಪರಮಮ್  ವೇದಿತವ್ಯಮ್  ತ್ವಮಸ್ಯ ವಿಶ್ವಸ್ಯ ಪರಮ್  ನಿಧಾನಮ್ ।
ತ್ವಮ್ ಅವ್ಯಯಃ ಶಾಶ್ವತ ಧರ್ಮಗೋಪ್ತಾ ಸನಾತನಃ ತ್ವಮ್ ಪುರುಷಃ ಮತಃ ಮೇ – ನೀನು ಅಳಿವಿರದವನು. ಅರಿಯಬೇಕಾದ ಹಿರಿಯ ತತ್ವ. ನೀನು ಈ ಜಗಕೆಲ್ಲ ಹಿರಿಯಾಸರೆ. ನೀನು ಬದಲಾಗದವನು. ಸನಾತನಧರ್ಮವನ್ನು ಸಲಹುವವನು. ನೀನು ಪುರಾಣ ಪುರುಷೋತ್ತಮ ಎಂದು ಗೊತ್ತು ನನಗೆ.

“ನೀನು ಅಕ್ಷರಂ ಪರಮಂ” ಎನ್ನುತ್ತಾನೆ ಅರ್ಜುನ. ಇಲ್ಲಿ ಅಕ್ಷರ ಎಂದರೆ ಸರ್ವ ವ್ಯಾಪ್ತ, ನಾಶವಿಲ್ಲದ ತತ್ವ, ಸರ್ವಾಭೀಷ್ಟಪ್ರದ, ಸರ್ವಶಬ್ದವಾಚ್ಯ ಇತ್ಯಾದಿ. ನಾವು ತಿಳಿದುಕೊಳ್ಳಬೇಕಾಗಿರುವುದರಲ್ಲೇ ಸರ್ವಶ್ರೇಷ್ಠವಾದದ್ದು- ಭಗವಂತ. ಅರ್ಜುನ ಹೇಳುತ್ತಾನೆ “ನೀನು ಇಡೀ ಜಗತ್ತಿನ ಸೃಷ್ಟಾರ, ಆಶ್ರಯದಾತ. ಸಮಸ್ತ ಜಗತ್ತಿನ ಮೂಲಾಶ್ರಯ. ಅನಾಧಿ ಅನಂತ ಕಾಲದಲ್ಲಿ  ಶಾಶ್ವತ ಧರ್ಮವನ್ನು ರಕ್ಷಣೆ ಮಾಡುವವನು ನೀನು. ಸಮಸ್ತ ವೇದ ಪ್ರತಿಪಾದ್ಯ ನೀನು ಎನ್ನುವುದು ನನಗೆ ಮನವರಿಕೆಯಾಯಿತು” ಎಂದು. [ಈ ಶ್ಲೋಕದಲ್ಲಿ ಬಂದಿರುವ ಹಲವು ವಿಶೇಷ ಪದಗಳ(ಅಕ್ಷರಃ, ಪುರುಷಃ, ಅವ್ಯಯಃ, ಶಾಶ್ವತಧರ್ಮ, ಇತ್ಯಾದಿ)ವಿಶೇಷ ಅರ್ಥವನ್ನು ನಾವು ಈ ಹಿಂದಿನ ಅಧ್ಯಾಯಗಳಲ್ಲಿ ವಿಶ್ಲೇಷಿಸಿರುವುದರಿಂದ ಇಲ್ಲಿ ಆ ವಿವರಣೆಯನ್ನು ಕೊಟ್ಟಿಲ್ಲ].            

ಅನಾದಿಮಧ್ಯಾಂತಮನಂತವೀರ್ಯಂ ಅನಂತಬಾಹುಂ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ ಸ್ವತೇಜಸಾ ವಿಶ್ವಮಿದಂ ತಪಂತಮ್ ॥೧೯॥

ಅನಾದಿ ಮಧ್ಯಾಂತಮ್ ಅನಂತವೀರ್ಯಮ್  ಅನಂತಬಾಹುಮ್  ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಮ್  ದೀಪ್ತ ಹುತಾಶ ವಕ್ತ್ರಂ ಸ್ವತೇಜಸಾ ವಿಶ್ವಮ್ ಇದಮ್ ತಪಂತಮ್ –ಗುಣಗಳಿಗೆ ಬುಡವಿಲ್ಲ; ನಡುವಿಲ್ಲ; ತುದಿಯಿಲ್ಲ. ಆಳವನ್ನು ಅಳೆದವರಿಲ್ಲ. ಎಣಿಕೆಯಿರದ ತೋಳುಗಳು. ಸೂರ್ಯಚಂದ್ರರನು ಹುಟ್ಟಿಸಿದ ಕಣ್ಣುಗಳು. ಉರಿವ  ಬೆಂಕಿಯನುಗುಳುವ ಬಾಯಿ. ಕಾಣುತ್ತಿದ್ದೇನೆ ತನ್ನ ಥಟ್ಟುರಿಯಿಂದ ಈ ಜಗವ ಸುಟ್ಟುರಿವ ನಿನ್ನನ್ನು.

ನಿನ್ನ ಗುಣಗಳಿಗೆ ಆದಿ ಅಂತ ನಡುವೆಂಬುದಿಲ್ಲ. ನೀನು ಅನಂತವೀರ್ಯ. ಆದಿ ಅಂತವಿಲ್ಲದ ಪರಾಕ್ರಮ ನಿನ್ನದು. ನಾಶವಿಲ್ಲದ ಅನಂತ ಅವಯವಗಳು. ನಿನ್ನ ಕಣ್ಣುಗಳಿಂದ ಹುಟ್ಟಿದ ಆ ಸೂರ್ಯ ಚಂದ್ರರು;  ಉಗುಳುವ ಬೆಂಕಿಯ ಜ್ವಾಲೆ ನಿನ್ನ ಬಾಯಿಯಲ್ಲಿ. ನಿನ್ನ ತೇಜಸ್ಸಿನಿಂದ ಇಡೀ ವಿಶ್ವ ಸುಟ್ಟುರಿದಂತಿದೆ.  

ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ ।
ದೃಷ್ಟ್ವಾSದ್ಭುತಂ ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ ॥೨೦॥

ದ್ಯಾವಾಪೃಥಿವ್ಯೋಃ ಇದಮ್ ಅಂತರಮ್  ಹಿ ವ್ಯಾಪ್ತಮ್  ತ್ವಯಾ ಏಕೇನ ದಿಶಃ ಚ  ಸರ್ವಾಃ ।
ದೃಷ್ಟ್ವಾ ಅದ್ಭುತಮ್  ರೂಪಮ್ ಉಗ್ರಮ್ ತವ ಇದಮ್ ಲೋಕತ್ರಯಮ್  ಪ್ರವ್ಯಥಿತಮ್  ಮಹಾತ್ಮನ್ –ಈ ನೆಲ ಮುಗಿಲ ನಡುವೆಲ್ಲ ಒಂದೇ ರೂಪದಿಂದ ತುಂಬಿರುವೆ. ನಿನ್ನವೇ ರೂಪಗಳು ಎಲ್ಲ ದಿಕ್ಕುಗಳಲ್ಲು. ಓ ಮಹಾತ್ಮನೆ, ಅಚ್ಚರಿಯ, ಎದೆಗೆಡಿಸುವ ನಿನ್ನ ಈ ರೂಪವನ್ನು ಕಂಡು ಕಂಗೆಟ್ಟಿದೆ ಮೂರು ಲೋಕ.

ನಿನ್ನ ರೂಪ ಭೂಮಿ ಆಕಾಶವನ್ನು ವ್ಯಾಪಿಸಿ ನಿಂತಿದೆ. ಎಲ್ಲ ದಿಕ್ಕುಗಳಲ್ಲಿ  ಅನಂತವಾಗಿ ವ್ಯಾಪಿಸಿರುವ ನಿನ್ನ ರೂಪವನ್ನು ಕಾಣುತ್ತಿದ್ದೇನೆ. ಮೂರು ಲೋಕದಲ್ಲಿ ನಿನ್ನ ರೂಪವನ್ನು ಕಂಡವರು ಈ ನಿನ್ನ ಉಗ್ರ ರೂಪವನ್ನು ನೋಡಿ ಕಂಗೆಡುತ್ತಿದ್ದಾರೆ. ಜಗತ್ತು ತತ್ತರಿಸುತ್ತಿದೆ ಎಂದು ದಿಗ್ಭ್ರಮೆಯಿಂದ ಅರ್ಜುನ ತನ್ನ ಅನುಭವವನ್ನು ಭಗವಂತನಲ್ಲಿ ಹೇಳಿಕೊಳ್ಳುತ್ತಾನೆ.   

ಅಮೀ ಹಿ ತ್ವಾಂ ಸುರಸಂಘಾ ವಿಶಂತಿ ಕೇಚಿದ್ ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಳಾಭಿಃ ॥೨೧॥

ಅಮೀ ಹಿ ತ್ವಾಮ್  ಸುರಸಂಘಾ ವಿಶಂತಿ ಕೇಚಿತ್ ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತಿ ಇತಿ ಉಕ್ತ್ವಾ ಮಹರ್ಷಿ ಸಿದ್ಧಸಂಘಾಃ ಸ್ತುವಂತಿ ತ್ವಾಮ್ ಸ್ತುತಿಭಿಃ ಪುಷ್ಕಳಾಭಿಃ –ನಿನ್ನೊಳಹೋಗುತ್ತಿದ್ದಾರೆ ಈ ದೇವತೆಗಳು ಗುಂಪುಗೂಡಿ. ಬೆಚ್ಚಿ ಕೈಮುಗಿದು ಬೇಡುತ್ತಿದ್ದಾರೆ. ಮತ್ತೆ ಕೆಲವರು ‘ಒಳಿತಾಗಲಿ’ ಎಂದು ಹಾರೈಸುತ್ತಾ ಹತ್ತು ಹಲವು ಹಾಡುಗಬ್ಬಗಳಿಂದ ನಿನ್ನನ್ನು ಹೊಗಳುತ್ತಿದ್ದಾರೆ ಹಿರಿಯ ಋಷಿಗಳು, ಗುಂಪು ಗುಂಪಾಗಿ.

ಕೆಲವರು ನಿನ್ನೊಳಗೆ ಹೋಗುತ್ತಿದ್ದಾರೆ, ಇನ್ನು ಕೆಲವರು ಹೊರಬರುತ್ತಿದ್ದಾರೆ. ಕೆಲವರು ಕೈಮುಗಿದು ನಿನ್ನ ಸ್ತೋತ್ರ ಮಾಡುತ್ತಿದ್ದಾರೆ. ಜ್ಞಾನಿಗಳು ನಿನ್ನ ಈ ಅದ್ಭುತ ರೂಪವನ್ನು ಕಂಡು ‘ಜಗತ್ತಿಗೆ ಮಂಗಳವಾಗಲಿ’ ಎಂದು ಹರಸುತ್ತಿದ್ದಾರೆ. ಋಷಿ ಮುನಿಗಳು ನಾನಾ ಸ್ತೋತ್ರಗಳಿಂದ ನಿನ್ನನ್ನು ಸ್ತುತಿಸುತ್ತಿದ್ದಾರೆ. 

ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ ವಿಶ್ವೇSಶ್ವಿನೌ ಮರುತಶ್ಚೋಷ್ಮಪಾಶ್ಚ ।
ಗಂಧರ್ವಯಕ್ಷಾಸುರಸಿದ್ಧಸಂಘಾ ವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ        ॥೨೨॥

ರುದ್ರ ಆದಿತ್ಯಾಃ ವಸವಃ ಯೇ ಚ ಸಾಧ್ಯಾಃ  ವಿಶ್ವೇ ಅಶ್ವಿನೌ ಮರುತಃ ಚ ಉಷ್ಮಪಾಃ ಚ ।
ಗಂಧರ್ವ ಯಕ್ಷ ಅಸುರ ಸಿದ್ಧ ಸಂಘಾಃ ವೀಕ್ಷಂತೇ ತ್ವಾಮ್  ವಿಸ್ಮಿತಾಃ ಚ ಏವ ಸರ್ವೇ –ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಅಶ್ವಿಗಳು, ಮರುತ್ತುಗಳು, ಪಿತೃಗಳು, ಗಂಧರ್ವರು, ಯಕ್ಷರು, ಅಸುರರು, ಸಿದ್ಧರು,-ಇವರೆಲ್ಲ  ಗುಂಪುಗೂಡಿ ನಿಬ್ಬೆರಗಾಗಿ ನೋಡುತ್ತಿದ್ದಾರೆ ನಿನ್ನನ್ನು.

ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಅಶ್ವಿಗಳು, ಮರುತ್ತುಗಳು, ಪಿತೃಗಳು, ಗಂಧರ್ವರು, ದೇವಗಣ ಪ್ರವಿಷ್ಟರಾದ ಯಕ್ಷರು, ಅಸುರರು, ಸಿದ್ಧರು,-ಇವರೆಲ್ಲರೂ   ನಿಬ್ಬೆರಗಾಗಿ ನಿನ್ನನ್ನು ನೋಡುತ್ತಿದ್ದಾರೆ ಎನ್ನುತ್ತಾನೆ ಅರ್ಜುನ.

No comments:

Post a Comment