Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, October 14, 2011

Bhagavad Gita in Kannada Chapter-12 Shloka 18-20


ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ
ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ ೧೮

ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್
ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ ಮೇ ಪ್ರಿಯೋ ನರಃ ೧೯

ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಪಮಾನಯೋಃ
ಶೀತ ಉಷ್ಣ ಸುಖ ದುಃಖೇಷು ಸಮಃ ಸಂಗವಿವರ್ಜಿತಃ          
ತುಲ್ಯನಿಂದಾಸ್ತುತಿಃ ಮೌನೀ ಸಂತುಷ್ಟಃ  ಯೇನ ಕೇನಚಿತ್ 
ಅನಿಕೇತಃ ಸ್ಥಿರ ತಿಃ ಭಕ್ತಿಮಾನ್ ಮೇ ಪ್ರಿಯಃ ನರಃ –ಹಗೆಯ-ಗೆಳೆಯರಲ್ಲಿ ಭೇದ ಬಗೆಯದವನು; ಗೌರವಗಳನ್ನು, ಶೀತ-ಉಷ್ಣಗಳನ್ನು, ಸುಖ-ದುಃಖಗಳನ್ನು ಸಮನಾಗಿ ಕಾಣುವವನು; ಯಾವುದಕ್ಕು ಅಂಟಿಕೊಳ್ಳದವನು; ಹೊಗಳಿಕೆಯನ್ನು ತೆಗಳಕೆಯಂತೆ ಕಾಣುವವನು; ಚಿಂತನಶೀಲನು; ಏನು ಇದೆಯೊ ಅಷ್ಟರಲ್ಲಿ ತೃಪ್ತನಾದವನು; ಒಂದೆಡೆ ನೆಲೆನಿಲ್ಲದವನು [ಭಗವಂತನಲ್ಲಿ ನೆಲೆ ನಿಂತವನು;] ಭಗವಂತನ ಅರಿವು ಗಟ್ಟಿಗೊಂಡವನು-ಭಕ್ತನಾದ ಇಂಥ ಮನುಜ ನನಗೆ ಅಚ್ಚುಮೆಚ್ಚು.

ಸಾಮಾನ್ಯವಾಗಿ ನಾವು ಶತ್ರು ಅಥವಾ  ಮಿತ್ರ ಅನ್ನುವ ಭಾವನೆಯನ್ನು ವ್ಯಾವಹಾರಿಕವಾಗಿ ರೂಢಿಸಿಕೊಳ್ಳುತ್ತೇವೆ. ನಮ್ಮನ್ನು ಹೊಗಳುವವರು ನಮಗೆ ಮಿತ್ರರು, ನಮ್ಮ ತಪ್ಪನ್ನು ತೆಗಳುವವರು ಶತ್ರುಗಳು. ಇದು ನಮ್ಮ ಅಪ್ರಭುದ್ದ ನಡೆ. ಸ್ನೇಹದ ಹಿಂದೆ ದ್ವೇಷವಿರಬಹುದು, ದ್ವೇಷದ ಹಿಂದೆ ಸ್ನೇಹವಿರಬಹುದು. ಪುರಂದರದಾಸರು ‘ನಿಂದಕರಿರಬೇಕು’ ಎಂದು ಹಾಡಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ನಿಂದಕರು ನಮ್ಮ ನಿಂದೆ ಮಾಡುವ ಮೂಲಕ ನಮ್ಮಲ್ಲಿರುವ ನಿಂದ್ಯವಾದ ದೋಷಗಳ ಫಲವನ್ನು ತೆಗೆದುಕೊಳ್ಳುತ್ತಾರೆ. ಹೊಗಳುವವರು ಹೊಗಳುವ ಮೂಲಕ ನಮ್ಮಲ್ಲಿರುವ ಒಳ್ಳೆಯತನದ ಪುಣ್ಯದ ಫಲದ ಪಾಲನ್ನು ಪಡೆಯುತ್ತಾರೆ. ಆದ್ದರಿಂದ ಸಾಧನೆಯ ಮಾರ್ಗದಲ್ಲಿ ಹೊಗಳುವವರಿಗಿಂತ ನಿಂದಕರು ಸಹಾಯಕರು. ಈ ಕಾರಣದಿಂದ ಶತ್ರು ಮಿತ್ರ ಎನ್ನುವ ಪರಿಭೇದ ಮಾಡಿಕೊಂಡು ಯಾರನ್ನೋ ಟೀಕೆ ಮಾಡುವುದಾಗಲಿ, ದ್ವೇಷ ಕಟ್ಟಿಕೊಳ್ಳುವುದಾಗಲಿ ಮಾಡಿಕೊಳ್ಳಬೇಡ. ದುರ್ಗುಣದಿಂದ ದೂರವಿರು. ಒಳ್ಳೆಯ ಗುಣವನ್ನು ಪ್ರೀತಿಸು. ಎಲ್ಲಿ ಒಳ್ಳೆಯತನವಿದೆ ಅವರ ಒಡನಾಟಮಾಡು(ಮೈತ್ರಿ); ದುಃಖವನ್ನು ಕಂಡು ಕರಗು(ಕರುಣ); ಇನ್ನೊಬ್ಬರ ಸಂತೋಷವನ್ನು ಕಂಡು ಸಂತೋಷಪಡು(ಮುದಿತತ); ಕೆಟ್ಟತನದಿಂದ ದೂರವಿರು(ಉಪೇಕ್ಷ). ಮೂಲಭೂತವಾಗಿ ಶತ್ರು ಮಿತ್ರ ಎನ್ನುವ ವಿಭಾಗ ಬೇಡ. ಎಲ್ಲರಲ್ಲಿಯೂ ಭಗವಂತನನ್ನು ಕಾಣು. ಲೌಕಿಕ ಶತ್ರು-ಮಿತ್ರ ಭಾವನೆಯನ್ನು ಬಿಟ್ಟುಬಿಡು.
ಸನ್ಮಾನ ಮಾಡಿದಾಗ ಉಬ್ಬಬೇಡ. ಅವಮಾನ ಮಾಡಿದಾಗ ಕುಗ್ಗಬೇಡ. ಮಾನ-ಅವಮಾನವನ್ನು ಗೆಲ್ಲು.  ಇನ್ನೊಬ್ಬರು ಏನು ಹೇಳಿದರು ಎನ್ನುವುದು ಮುಖ್ಯವಲ್ಲ. ನಮ್ಮ ಅಂತರಾತ್ಮ ಏನು ಎನ್ನುವುದು ಮುಖ್ಯ. ಇನ್ನೊಬ್ಬರು ಹೊಗಳಿದಾಗ ನಮ್ಮಲ್ಲಿ ಇಲ್ಲದ ಗುಣ ನಮ್ಮನ್ನು ಬಂದು ಸೇರುವುದಿಲ್ಲ. ಅದೇ ರೀತಿ ಇನ್ನೊಬ್ಬರು ತೆಗಳಿದಾಗ ನಾವು ಕೆಳಗೆ ಹೋಗುವುದಿಲ್ಲ. ಹೊಗಳಿಕೆ ಬಗ್ಗೆ ನಾವು ಎಚ್ಚರದಿಂದಿರಬೇಕು. ಏಕೆಂದರೆ ಅದರಿಂದ ನಾವು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಅವಮಾನದಿಂದ ನಾವು ತಪ್ಪು ದಾರಿಯನ್ನು ಬಿಟ್ಟು ಸರಿ ದಾರಿಯಲ್ಲಿ ಸಾಗಿ ಎತ್ತರಕ್ಕೇರುವ ಸಾಧ್ಯತೆ ಇದೆ.
ಸುಖ ದುಃಖವನ್ನು ಸಮನಾಗಿ ಕಾಣು. ಯಾವುದೇ ವಸ್ತು ನಮಗೆ ಸುಖ-ದುಃಖವನ್ನು ಕೊಡುವುದಿಲ್ಲ. ಆ ವಸ್ತುವನ್ನು ನಾವು ನೋಡುವ ಭಾವನೆ ನಮಗೆ ಸುಖ-ದುಃಖವನ್ನು ಕೊಡುತ್ತದೆ. ಆದ್ದರಿಂದ ಶೀತ-ಉಷ್ಣದಂತೆ ಸುಖ-ದುಃಖವನ್ನು ಸಮನಾಗಿ ಕಾಣುವುದನ್ನು ರೂಢಿಸಿಕೊ.
ನಮಗನಿಸುತ್ತದೆ ಇವೆಲ್ಲವೂ ಮಾನವ ಸಹಜಪ್ರವೃತ್ತಿ(Instinct) ಎಂದು. ಆದರೆ ಇದು ಸಹಜ ಧರ್ಮವಲ್ಲ. ನಾವು ಅಂಟಿಸಿಕೊಳ್ಳುವುದರಿಂದ  ನಮ್ಮಲ್ಲಿ ನಮಗೆ ಬೇಡವಾದ ಈ ಗುಣಗಳು ತುಂಬಿಕೊಳ್ಳುತ್ತವೆ. ಆದ್ದರಿಂದ ಹೊಗಳಿಕೆ ಮತ್ತು ತೆಗಳಿಕೆಗೆ ತಕ್ಷಣ ಪ್ರತಿಕ್ರಿಯಿಸಬೇಡ. ಮೌನಿಯಾಗು. ವಿಷಯದ ಬಗ್ಗೆ ಮನನ ಮಾಡು. ದುಡುಕಬೇಡ. ಎಷ್ಟು ಕಡಿಮೆ ಮಾತನಾಡಲು ಸಾಧ್ಯವೋ ಅಷ್ಟು ಕಡಿಮೆ ಮಾತನಾಡು. ಯೋಚಿಸಿ ಮಾತನಾಡು. ಏನಿದೆಯೋ ಅದನ್ನು ತೃಪ್ತಿಯಿಂದ ಅನುಭವಿಸು. ಸ್ಥಿರ-ಚರ ವಸ್ತುಗಳ(Making own property) ಹಿಂದೆ ಹೋಗಬೇಡ. ಭಗವಂತ ಕೊಟ್ಟಿರುವುದರಲ್ಲಿ ಸಂತೋಷದಿಂದ ನಿಶ್ಚಿಂತೆಯಿಂದ ಬದುಕು. ಭಕ್ತಿಯಿಂದ ಭಗವಂತನಲ್ಲಿ ಶರಣಾದಾಗ ನಾವು ನಮ್ಮ ಸಾಧನೆಯ ಹಾದಿಯಲ್ಲಿ ಈ ಎತ್ತರಕ್ಕೇರಬಹುದು. ‘ಇಂಥಹ ಗುಣವನ್ನು ಹೊಂದಿರುವ ಭಕ್ತ ನನಗೆ ಅಚ್ಚುಮೆಚ್ಚು’ ಎನ್ನುತ್ತಾನೆ ಕೃಷ್ಣ.

ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ
ಶ್ರದ್ದಧಾನಾ ಮತ್ ಪರಮಾ ಭಕ್ತಾಸ್ತೇSತೀವ ಮೇ ಪ್ರಿಯಾಃ ೨೦

ಯೇ ತು ಧರ್ಮ ಅಮೃತಮ್ ಇಮ್  ಯಥಾಉಕ್ತಮ್  ಪರ್ಯುಪಾಸತೇ
ಶ್ರದ್ದಧಾಣಾಃ ತ್ ಪಮಾಃ  ಭಕ್ತಾಃ ತೇ ಅತೀವ ಮೇ ಪ್ರಿಯಾಃ –ಧರ್ಮ ಮೋಕ್ಷಗಳಿಗೆ ಸಾಧನವಾದ ಈ ಭಕ್ತಿ ಯೋಗವನ್ನು ಇಲ್ಲಿ ಹೇಳಿದ ತರ ಆಚರಿಸುವವರು, ನನ್ನ ಹಿರಿಮೆಯನ್ನು ನಂಬಿ ನಡೆದು ನನ್ನಲ್ಲಿ ಭಕ್ತಿಯಿಟ್ಟವರು –ಅಂಥವರು ನನಗೆ ತುಂಬ ಅಚ್ಚುಮೆಚ್ಚು.

ನಮ್ಮ ಭಕ್ತಿ ಹೇಗಿರಬೇಕು, ಭಕ್ತನಲ್ಲಿರಬೇಕಾದ ಗುಣಗಳೇನು ಎನ್ನುವ ಈ ಅಮೃತ(ಮೋಕ್ಷ)ಸಾಧನಾ ಧರ್ಮವನ್ನು ವಿವರಿಸಿದ ಕೃಷ್ಣ, ಇಲ್ಲಿ ಫಲಶ್ರುತಿಯಾಗಿ ಹೇಳುತ್ತಾನೆ: “ಇಲ್ಲಿ ಹೇಳಿದಂತೆ ಉಪಾಸನೆ ಮಾಡುವವರು, ಗುಣಧರ್ಮವನ್ನು ಬೆಳೆಸಿಕೊಂಡವರು, ಭಕ್ತಿಯಿಂದ ಆಚರಣೆಗೆ ತಂದುಕೊಳ್ಳುವ ಭಕ್ತರು ನನಗೆ ಪರಮ ಪ್ರಿಯರು” ಎಂದು.

ಇತಿ ದ್ವಾದಶೋSಧ್ಯಾಯಃ
ಹನ್ನೆರಡನೆಯ ಅಧ್ಯಾಯ ಮುಗಿಯಿತು
*******

No comments:

Post a Comment