Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, September 16, 2011

Bhagavad Geeta Kannada Chapter-10 Shloka 26


ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ               ।
ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ       ॥೨೬॥

ಅಶ್ವತ್ಥಃ ಸರ್ವ ವೃಕ್ಷಾಣಾಮ್ ದೇವರ್ಷೀಣಾಮ್ ಚ ನಾರದಃ ।
ಗಂಧರ್ವಾಣಾಮ್ ಚಿತ್ರರಥಃ ಸಿದ್ಧಾನಾಮ್ ಕಪಿಲಃ ಮುನಿಃ –ಎಲ್ಲ ಮರಗಳಲ್ಲಿ ಅರಳಿಮರ ನಾನು.[ಅಶ್ವ=ಕುದುರೆಯ ರೂಪದಲ್ಲಿ ಸ್ಥ=ಇದ್ದುದರಿಂದ, ‘ಅಶ್ವತ್ಥ’ ಎನಿಸಿ ಅರಳಿಮರದಲ್ಲಿದ್ದೇನೆ.] ದೇವಲೋಕದ ಋಶಿಗಳಲ್ಲಿ ನಾರದ ನಾನು. [ನಾರ=ನರರ ಬಯಕೆಯೆಲ್ಲವನ್ನು ದ=ಕೊಡುವವನಾಗಿ ‘ನಾರದ’ ಎನ್ನಿಸಿ ನಾರದನಲ್ಲಿದ್ದೇನೆ.] ಗಂಧರ್ವರ ದೊರೆ ಚಿತ್ರರಥ ನಾನು. [ಚಿತ್ರ=ಅಚ್ಚರಿಯ, ರಥ=ತೇರಿನಲ್ಲಿ ಚರಿಸುವುದರಿಂದ ‘ಚಿತ್ರರಥ’ ಎನ್ನಿಸಿ ಗಂದರ್ವ ರಾಜ ಚಿತ್ರರಥನಲ್ಲಿದ್ದೇನೆ.] ಯೋಗಸಿದ್ಧರಲ್ಲಿ[ಕ=ಸುಖರೂಪನಾಗಿ, ಪಿ=ಪಾಲಿಸುವುದರಿಂದ, ಮತ್ತು ಲ=ಲಯಗೊಳಿಸುವುದರಿಂದ] ಕಪಿಲ ಮುನಿ ನಾನು.

ಕೃಷ್ಣ ಹೇಳುತ್ತಾನೆ: “ಸರ್ವ ವೃಕ್ಷಗಳಲ್ಲಿ  ಅಶ್ವತ್ಥ ನಾನು” ಎಂದು. ಅಶ್ವತ್ಥಮರ ಇಂದು ಮೇಲ್ನೋಟದಲ್ಲಿ ನೋಡುವವರಿಗೆ ಯಾವುದಕ್ಕೂ ಉಪಯೋಗವಿಲ್ಲದ ಮರ. ಭಗವಂತ ಈ ಮರಕ್ಕೆ ಮಹತ್ವ ಕೊಟ್ಟು ಹೇಳದಿದ್ದರೆ ಈ ಮರದ ಬಗ್ಗೆ ನಮಗೆ ಏನೂ ತಿಳಿದಿರುತ್ತಿರಲಿಲ್ಲ. ಏಕೆಂದರೆ ಈ ಮರ ನಮಗೆ ತಿನ್ನುವ ಹಣ್ಣನ್ನಾಗಲಿ, ಸುಗಂಧವಾದ ಹೂವನ್ನಾಗಲಿ ಕೊಡುವುದಿಲ್ಲ. ಈ ಮರದಿಂದ ಪೀಠೊಪಕರಣ ಮಾಡಲು ಸಾಧ್ಯವಿಲ್ಲ. ವಿಶಾಲವಾಗಿ ಬೆಳೆದು ತನ್ನ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ನಿಲ್ಲುವ ಈ ಮರ, ಮೇಲ್ನೋಟಕ್ಕೆ ಜನರಿಗೆ ಕಾಟ ಕೊಡುವ ಮರ! ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷ ಅಶ್ವತ್ಥ” ಎಂದು. ಏಕೆ  ಈ ಮರಕ್ಕೆ ಇಷ್ಟು ಪ್ರಾಧಾನ್ಯ ಎನ್ನುವುದು ತಿಳಿಯದೆ ಇಂದು ನಾವು ಅದನ್ನು ಪೂಜಿಸುತ್ತೇವೆ ಅಥವಾ ಇನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಈ ಮರವನ್ನು ನೆಟ್ಟರೆ ಪುಣ್ಯಬರುತ್ತದೆ ಎನ್ನುವ ಕಾರಣಕ್ಕೆ ಮನೆಯಿಂದ ದೂರದಲ್ಲಿ ಎಲ್ಲೋ ದೇವಸ್ಥಾನದಲ್ಲಿ ಅರಳಿ ಮರ ನೆಡುವುವವರಿದ್ದಾರೆ. ಇಂದು ಈ ಮರದ ಮಹತ್ವ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನವರು ಆಲ, ಅರಳಿ ಮತ್ತು ಅತ್ತಿ ಈ ಮೂರು ಮರಗಳಿಗೆ ಬಹಳ ಮಹತ್ವ ಕೊಟ್ಟರು. [ಬೇಂದ್ರೆಯವರು ತಮ್ಮ ತೋಟದಲ್ಲಿ ಮೂಡಿಬಂದ ಈ ಮೂರು ಗಿಡಗಳನ್ನು ನೋಡಿ- “ನಮ್ಮ ತೋಟದಲ್ಲಿ ಭಗವಂತ ಮೂರು ರೂಪದಲ್ಲಿ ಬಂದಿದ್ದಾನೆ” ಎಂದು ಹೃದಯತುಂಬಿ ಹೇಳಿದ್ದನ್ನು ಇಲ್ಲಿ ಬನ್ನಂಜೆಯವರು ನೆನಪಿಸಿಕೊಂಡಿದ್ದಾರೆ].   ಹಿಂದೆ ಯಜ್ಞ ಮಾಡುವಾಗ ಶಮಿ ಮತ್ತು ಅರಣಿ(ಅರಳಿ) ಸಮಿಧೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಯಜ್ಞದಲ್ಲಿ ಅರಳಿಯ ಸಮಿಧೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಅಶ್ವತ್ಥಮರದ ಸಮಿಧೆಯನ್ನು ಕಾಷ್ಠವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಠ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ. ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣವನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ. ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥಸಮಿಧೆ ಒಂದು ಪ್ರಮುಖ ಸಾಧನ. 
ಇಂದು ಹಲವರು ಅಶ್ವತ್ಥಮರದಲ್ಲಿ ದೇವತಾ ಸನ್ನಿಧಾನವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜೋತಿಷಿಗಳು ಅಶ್ವತ್ಥ ಪ್ರದಕ್ಷಿಣೆ ಬರುವಂತೆ ಹೇಳುತ್ತಾರೆ. ಇದು ಏಕೆ ಎನ್ನುವ ಕಲ್ಪನೆ ಇಲ್ಲದ ಜನ ಇದೆಲ್ಲವೂ ಮೂಢನಂಬಿಕೆ ಎಂದು ಮಾತನಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿರುವ ಎಲ್ಲ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥ. ಇಂತಹ ಶುದ್ಧ ವಾಯುವಿನ ಉಸಿರಾಟದಿಂದ ಗರ್ಭದೋಷ ಸರಿಹೋಗುವ ಸಾಧ್ಯತೆ ಇದೆ ಎಂದು ಇಂದು ವಿಜ್ಞಾನ ಕೂಡ ಒಪ್ಪಿಕೊಂಡಿದೆ. ಹಿಂದಿನ ಕಾಲದಲ್ಲಿ ಋಷಿಗಳು ಅಶ್ವತ್ಥ ಮರದ ಬುಡದಲ್ಲಿ ಕುಳಿತು ವೇದಾಧ್ಯಾಯನ ಮಾಡುತ್ತಿದ್ದರು. ಹೀಗೆ ಅಶ್ವತ್ಥ ಮರದಲ್ಲಿ ಭಗವಂತನ ವಿಶೇಷ ವಿಭೂತಿ ಆ ಮರಕ್ಕೆ ಇಂಥಹ ಅನೇಕ ವಿಶೇಷ ಶಕ್ತಿಯನ್ನು ಕೊಟ್ಟಿದೆ.
ಇಲ್ಲಿ ಬಂದಿರುವ ಭಗವಂತನ ನಾಮ ‘ಅಶ್ವತ್ಥಃ’. ವೇದವನ್ನು ಉಪದೇಶ ಮಾಡಿದ ಭಗವಂತನ ವಿಶೇಷ ಅವತಾರ ಅಶ್ವರೂಪ ಹಯಗ್ರೀವ. ಅಶ್ವದ ಹಾಗೆ ಇದ್ದು ವೇದೋಪದೇಶ ಮಾಡಿದ ಭಗವಂತನನ್ನು ‘ಅಶ್ವತ್ಥಃ’ ಎಂದು ಕರೆಯುತ್ತಾರೆ.
ಮುಂದುವರಿದು ಕೃಷ್ಣ ಹೇಳುತ್ತಾನೆ ದೇವರ್ಷೀಣಾಂ ಚ ನಾರದಃ ಎಂದು. ನಾರದ ಗಂಧರ್ವರಲ್ಲಿ ಒಬ್ಬ. ಆದರೆ ಭಗವಂತನ ವಿಶೇಷ  ಸನ್ನಿಧಾನದಿಂದ ಆತ ತುಂಬಾ ಎತ್ತರಕ್ಕೇರಿ  ದೇವರ್ಷಿಯಾದ. ನಾರದ ಭಗವಂತನನ್ನು ಪಡೆದದ್ದು ಮಹಾ ಸಾಧನೆಯಿಂದ. ಹಿಂದಿನ ಬ್ರಹ್ಮಕಲ್ಪದಲ್ಲಿ ನಾರದ ಒಂದು ಬಡ ಕುಟುಂಬದಲ್ಲಿ ಹುಟ್ಟಿದ್ದ. ಆತನ ತಾಯಿ ಋಷಿ-ಮುನಿಗಳ ಆಶ್ರಮದಲ್ಲಿ ಕೆಲಸ ಮಾಡಿಕೊಂಡು ಬದುಕುತಿದ್ದಳು. ಪುಟ್ಟ ಮಗುವಾಗಿದ್ದ ಈತ ಋಷಿಗಳ ಅಧ್ಯಾತ್ಮ ಸಂಭಾಷಣೆಯನ್ನು ಕೇಳುತ್ತ ಬೆಳೆದ. ಈತ ಐದು ವರ್ಷದವನಿದ್ದಾಗ ಆತನ ತಾಯಿ ಹಾವು ಕಚ್ಚಿ ಸಾಯುತ್ತಾಳೆ. ತಿಳಿದವರು ಹೇಳುವಂತೆ- “ನಮಗೆ ದೇವರೇ ‘ನಾಥ’ ಎಂದು ಗೊತ್ತು ಮಾಡಿಸಲು  ಭಗವಂತ ನಮ್ಮನ್ನು ಮೊದಲು ‘ಅನಾಥ’ ಮಾಡುತ್ತಾನೆ”. ಹಾಗೆ ಅನಾಥನಾದ ಈತ  ತನ್ನ ಐದನೇ ವರ್ಷದಿಂದಲೇ, ಋಷಿಗಳಿಂದ ತಿಳಿದ ಜ್ಞಾನದಿಂದ ಸಾಧನೆ ಆರಂಭಿಸುತ್ತಾನೆ. ಆದರೆ ಆತನಿಗೆ ಆ ಜನ್ಮದಲ್ಲಿ ಭಗವಂತನ ದರ್ಶನವಾಗುವುದಿಲ್ಲ. ಆದರೆ ಆತ ಭಗವಂತನ ವಾಣಿಯನ್ನು ‘ಕೇಳಿದ’. “ಈ ಜನ್ಮದಲ್ಲಿ ನನ್ನನ್ನು ಕಾಣುವ ಪ್ರಯತ್ನ ಮಾಡಬೇಡ. ನೀನು ಮುಂದಿನ ಕಲ್ಪದಲ್ಲಿ ಸದಾ ನನ್ನನ್ನು ಕಾಣುವೆ” ಎಂದು. ನಂತರ ಈತ ಈ ಬ್ರಹ್ಮಕಲ್ಪದಲ್ಲಿ ನಾರದನಾಗಿ ಹುಟ್ಟಿ ಭಗವಂತನ ಮಹಾ ಅನುಗ್ರಹಕ್ಕೆ ಪಾತ್ರನಾದ.
ನಾರದರು ನಮ್ಮ ಅಂತಃಪ್ರಜ್ಞೆಯ ಅಭಿಮಾನಿ ದೇವತೆ. ಹಿಂದಿನ ಕಾಲದ ಕಥೆಗಳಲ್ಲಿ ಕಾಣುವಂತೆ ಯಾವುದಾದರು ಒಳ್ಳೆಯ ಕೆಲಸವಾಗಬೇಕಾದರೆ ಅಲ್ಲಿ ನಾರದರು ಬಂದು ಹೇಳಿ ಹೋಗುತ್ತಿದ್ದರು. ಉದಾಹರಣೆಗೆ ವಾಲ್ಮೀಕಿ ರಾಮಾಯಣ ಬರೆಯುವಂತೆ ಹೇಳಿ ಹೋದವರು ನಾರದರು. ಇಲ್ಲಿ ನಮಗೆ ಒಂದು ಪ್ರಶ್ನೆ ಬರುತ್ತದೆ. ಈಗ ಏಕೆ ನಾರದರು ಬರುವುದಿಲ್ಲ, ಏಕೆ ನಮಗೆ ಮಾರ್ಗದರ್ಶನ ಸಿಗುವುದಿಲ್ಲ ಎಂದು. ನಾರದರನ್ನು ನಾವು ಕರೆದರೆ ಖಂಡಿತ ಇವತ್ತಿಗೂ ಬರುತ್ತಾರೆ!  ‘ನಾರದ’ ಅಂದರೆ ನಮ್ಮ ಅಂತರಂಗದ ಧ್ವನಿ(intuitional flash). ನಾವು ನಮ್ಮ ಆತ್ಮದ ಕರೆಗೆ ಕಿವಿ ಕೊಟ್ಟರೆ ಅಲ್ಲಿ ನಾರದರು ಮಾತನಾಡುತ್ತಾರೆ. ನಾವು ನಮ್ಮ ಒಳಗಿನ ಸಂದೇಶವನ್ನು ಆಲಿಸಲು ಅಭ್ಯಾಸ ಮಾಡಿದರೆ ಆಗ ನಮ್ಮ ಆಜ್ಞಾಚಕ್ರ ತೆರೆದುಕೊಳ್ಳುತ್ತದೆ. ಇದರಿಂದ 'ಈ ರೀತಿ ಮಾಡು' ಎನ್ನುವ ಸಂದೇಶ(Divine Message) ಬರುತ್ತದೆ. ಇದೇ ಅಶರೀರವಾಣಿ ಅಥವಾ ಅಂತಃರ್ವಾಣಿ. ಇದೇ ನಾರದ. ಪ್ರತ್ಯಕ್ಷ ಕಾಣಲಾಗದಿದ್ದರೂ ಕೂಡ ಅವರನ್ನು ಕೇಳಬಹುದು. ನಾರದರಿಗೆ ಈ ಎಲ್ಲಾ ವಿಶಿಷ್ಠ ಶಕ್ತಿ ಭಗವಂತನ ವಿಶೇಷ ಸನ್ನಿಧಾನದಿಂದ  ಬಂತು.
ಇಲ್ಲಿ ಬಂದಿರುವ ಭಗವಂತನ ನಾಮ ‘ನಾರದಃ’. ನರರ ಅಜ್ಞಾನವನ್ನು ಕಳೆದು(ನಾರ-ಧ್ಯತಿ), ಅವರು ಬಯಸಿದ್ದನ್ನು ದಾರೆ ಎರೆಯುವ(ನಾರ-ದದಾತಿ) ಭಗವಂತ ನಾರದಃ.
ನಾರದರ ನಂತರ ಗಂಧರ್ವರಲ್ಲಿ ತನ್ನ ವಿಶೇಷ ವಿಭೂತಿಯನ್ನು ಕೃಷ್ಣ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ “ಗಂಧರ್ವರಲ್ಲಿ ಚಿತ್ರರಥ ನಾನು” ಎಂದು. ದೇವಲೋಕದ ಪರಿಚಾರಿಕೆ ಮಾಡುವ ಉಪದೇವತಾ ಗಣ ಗಂಧರ್ವರು. ಇವರು ಅವಾಂತರ ದೇವತೆಗಳು. ಈ ಗಣದ ರಾಜ ಚಿತ್ರರಥ. ‘ರಾಜಾ ಪ್ರತ್ಯಕ್ಷ ದೇವತಾ’ ಎನ್ನುವಂತೆ ಭಗವಂತ ಚಿತ್ರರಥನಲ್ಲಿ ವಿಶೇಷ ವಿಭೂತಿಯಾಗಿ ಸನ್ನಿಹಿತನಾಗಿದ್ದಾನೆ.  ಇಲ್ಲಿ ಬಂದಿರುವ ಭಗವಂತನ ನಾಮ ‘ಚಿತ್ರರಥಃ’.  ವಿಚಿತ್ರವಾದ ರಥ ಉಳ್ಳ ಭಗವಂತ ಚಿತ್ರರಥಃ. ಭಗವಂತನ ವಾಹನ-ಗರುಡ. ಇದು ಇತರ ಎಲ್ಲ ವಾಹನಗಳಿಗಿಂತ ವಿಶಿಷ್ಠ. ಇಂಥಹ ರಥದಲ್ಲಿ ಸಂಚರಿಸುವ ಭಗವಂತ ಚಿತ್ರರಥಃ.  
ಕೃಷ್ಣ ಹೇಳುತ್ತಾನೆ “ಸಿದ್ಧಾನಾಂ ಕಪಿಲೋ ಮುನಿಃ” ಎಂದು. ಇತಿಹಾಸದಲ್ಲಿ ಇಬ್ಬರು ಕಪಿಲಮುನಿಗಳು ಬರುತ್ತಾರೆ. ಇವರಿಬ್ಬರೂ ಸಾಂಖ್ಯವನ್ನು ಹೇಳಿದವರು. ಆದರೆ ಒಬ್ಬ ಭಗವಂತನನ್ನು ನಂಬದವ. ಆದ್ದರಿಂದ ಇಲ್ಲಿ ಬಂದಿರುವ ಕಪಿಲಮುನಿ-ಕಪಿಲ ವಾಸುದೇವ. ಸಾಂಖ್ಯವನ್ನು ಮೂಲತಃ ಜಗತ್ತಿಗೆ ಕೊಟ್ಟ ಸಾಕ್ಷಾತ್ ಭಗವಂತನ ಅವತಾರ. ಸ್ವಾಯಂಭುವ ಮನುವಿನ ಮಗಳು ದೇವಭೂತಿ ಹಾಗು ಕರ್ಧಮ ಪ್ರಜಾಪತಿಯ ದಾಂಪತ್ಯ ಫಲದಲ್ಲಿ ಮೂಡಿಬಂದ ಭಗವಂತನ ಅವತಾರ. ವೇದವ್ಯಾಸರು ಕೂಡಾ ಕಪಿಲ ಹೇಳಿರುವುದನ್ನೇ ನಮ್ಮ ಮುಂದೆ ಪ್ರಸ್ತುತಿ ಮಾಡಿರುವುದು. ಹೊಸತನ್ನು ಜಗತ್ತಿಗೆ ಕೊಟ್ಟ ಭಗವಂತನ ಅವತಾರ ‘ಕಪಿಲಾವತಾರ’.
ಇಲ್ಲಿ ಬಂದಿರುವ ಭಗವಂತನ ನಾಮ ‘ಕಪಿಲಃ’. ಕ-ಪಿ-ಲ; ಇಡೀ ಜಗತ್ತನ್ನು ಪಾಲಿಸುವ(ಪಿ), ಮತ್ತು ಲಯಗೊಳಿಸುವ(ಲ), ಆನಂದಮೂರ್ತಿ(ಕ) ಭಗವಂತ ಕಪಿಲಃ. ಸದಾ ಆನಂದವನ್ನು ಪಾನಮಾಡುವ, ಅದ್ಭುತವಾದ ಸಾಂಖ್ಯದ ಮೂಲಕ ವಿಶ್ವದ ರಹಸ್ಯವನ್ನು ತೆರೆದಿಟ್ಟ ಭಗವಂತ ‘ಕಪಿಲಃ’.                

1 comment:

  1. Bhagavad Gita In Kannada: Bhagavad Geeta Kannada Chapter-10 Shloka 26 >>>>> Download Now

    >>>>> Download Full

    Bhagavad Gita In Kannada: Bhagavad Geeta Kannada Chapter-10 Shloka 26 >>>>> Download LINK

    >>>>> Download Now

    Bhagavad Gita In Kannada: Bhagavad Geeta Kannada Chapter-10 Shloka 26 >>>>> Download Full

    >>>>> Download LINK wQ

    ReplyDelete