Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, September 28, 2011

Bhagavad Geeta Kannada Chapter-11 Shloka 5-8


ಭಗವಾನುವಾಚ ।
ಪಶ್ಯ ಮೇ ಪಾರ್ಥ ರೂಪಾಣಿ ಶತಶೋSಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ॥೫॥

ಭಗವಾನ್ ಉವಾಚ-ಭಗವಂತ ಹೇಳಿದನು:
ಪಶ್ಯ ಮೇ ಪಾರ್ಥ ರೂಪಾಣಿ ಶತಶಃ ಅಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾ ವರ್ಣ ಆಕೃತೀನಿ ಚ –ನೋಡು ಪಾರ್ಥ, ನನ್ನ ರೂಪಗಳನ್ನು- ನೂರಾರು, ಸಾವಿರಾರು; ಬಗೆಬಗೆಯವು; ಹೊಳೆಯುವಂಥವು; ಹಲವು ಬಣ್ಣ-ಆಕಾರದವು.

ನಿನ್ನ ರೂಪವನ್ನು ತೋರು ಎಂದು ಅರ್ಜುನ ಏಕವಚನದಲ್ಲಿ ಕೇಳಿದರೆ ಕೃಷ್ಣ ಬಹುವಚನದಲ್ಲಿ ಹೇಳುತ್ತಾನೆ “ನೋಡು ನನ್ನ ರೂಪಗಳನ್ನು” ಎಂದು. ಭಗವಂತನ ಎಲ್ಲಾ ರೂಪಗಳೂ ಒಂದೆ. ಮೂಲ ರೂಪಕ್ಕೂ ಅವತಾರ ರೂಪಕ್ಕೂ ಭೇದವಿಲ್ಲ. “ನೀನು ಹಿಂದೆಂದೂ ಕಾಣದ ಅತ್ಯದ್ಭುತವಾದ ನನ್ನ ನೂರಾರು, ಸಾವಿರಾರು, ಬಗೆಬಗೆಯ, ಹೊಳೆಯುವಂಥಹ, ಹಲವು ಬಣ್ಣ ಮತ್ತು ಆಕಾರದ ರೂಪಗಳನ್ನು ನೋಡು” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ‘ಪಾರ್ಥ’ ಎಂದು ಸಂಬೋಧಿಸಿದ್ದಾನೆ. ನಿಜವಾದ ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ ಹೊರಟವರು ‘ಪಾರ್ಥರು’.

ಪಶ್ಯಾSದಿತ್ಯಾನ್ ವಸೂನ್ ರುದ್ರಾನಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾSಶ್ಚರ್ಯಾಣಿ ಭಾರತ ॥೬॥

ಪಶ್ಯ ಆದಿತ್ಯಾನ್ ವಸೂನ್ ರುದ್ರಾನ್ ಅಶ್ವಿನೌ ಮರುತಃ ತಥಾ ।
ಬಹೂನಿ ಅದೃಷ್ಟ ಪೂರ್ವಾಣಿ ಪಶ್ಯ ಆಶ್ಚರ್ಯಾಣಿ ಭಾರತ -- ನೋಡು-ಆದಿತ್ಯರನ್ನು, ವಸುಗಳನ್ನು, ರುದ್ರರನ್ನು, ಅಶ್ವಿಗಳನ್ನು ಮತ್ತು ಮರುತ್ತುಗಳನ್ನು. ಓ ಭಾರತ, ನೋಡು ಹಿಂದೆಂದೂ ಕಂಡಿರದ ಹಲವು ಅಚ್ಚರಿಗಳನ್ನು.

“ಜಗತ್ತಿನಲ್ಲಿರುವ ಎಲ್ಲ ಆದಿತ್ಯರು(ದ್ವಾದಶಾದಿತ್ಯರು),  ವಸುಗಳು (ಅಷ್ಟ ವಸುಗಳು), ರುದ್ರರು (ಏಕಾದಶ ರುದ್ರರು), ಅಶ್ವಿಗಳು(ಇಬ್ಬರು), ಮರುತ್ತುಗಳು(ನಲವತ್ತೊಂಬತ್ತು)-ಎಲ್ಲರನ್ನು ನೋಡು. ನೀನು ಹಿಂದೆಂದೂ ಕಂಡು ಕೇಳರಿಯದ ಅತ್ಯದ್ಭುತ ಅಚ್ಚರಿಯನ್ನು ನೋಡು” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನು ‘ಭಾರತ’ ಎಂದು ಸಂಬೋಧಿಸಿದ್ದಾನೆ. ಐತರೇಯ ಬ್ರಾಹ್ಮಣದಲ್ಲಿ ‘ವಾಯರ್ವಾವ ಭರತಃ’ ಎನ್ನುವ ಒಂದು ಮಾತಿದೆ. ಸದಾ ಭಗವಂತನಲ್ಲಿ ನಿರತನಾದ ವಾಯು ದೇವರಿಗೆ ಭರತ ಎಂದು ಹೆಸರು. ಆದ್ದರಿಂದ ಇಲ್ಲಿ ‘ಭಾರತ’ ಎಂದರೆ ‘ಭೀಮ(ಪ್ರಾಣತತ್ವ)ನ ತಮ್ಮ’ ಎನ್ನುವ ಅರ್ಥವನ್ನು ಕೊಡುತ್ತದೆ. [ಸದಾ ಭಗವಂತನಿಗೆ ಅತಿ ಹತ್ತಿರವಿರುವ ಹನುಮಂತ ಅಥವಾ ಪ್ರಾಣತತ್ವದ ಉಪಾಸನೆ ಭಗವಂತನನ್ನು ತಿಳಿಯುವ ಸುಲಭ ಸಾಧನ.]

ಇಹೈಕಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ ।
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥೭॥

ಇಹ ಏಕ ಸ್ಥಮ್ ಜಗತ್ ಕೃತ್ಸ್ನಮ್  ಪಶ್ಯ ಅದ್ಯ ಸ ಚರ ಅಚರಮ್ ।
ಮಮ ದೇಹೇ ಗುಡಾಕೇಶ ಯತ್ ಚ ಅನ್ಯತ್  ದ್ರಷ್ಟುಮ್ ಇಚ್ಛಸಿ—ಇಲ್ಲಿ ನೋಡೀಗ, ನನ್ನ ಮೈಯಲ್ಲಿ ಚರಾಚರಗಳಿಂದ ಕೂಡಿದ ಇಡಿಯ ಜಗತ್ತು ಒಂದುಗೂಡಿದ್ದನ್ನು. ಓ ಗುಡಾಕೇಶ, ಇನ್ನೇನು ನೋಡ ಬಯಸುವೆ ಅದನ್ನೆಲ್ಲಾ ನೋಡು.

“ನನ್ನ ದೇಹವನ್ನು ಆಶ್ರಯಿಸಿಕೊಂಡಿರುವ ಸಮಸ್ತ ವಿಶ್ವವನ್ನು ನೋಡು. ಬ್ರಹ್ಮಾಂಡದೊಳಗೆ ಏನೇನಿದೆಯೋ ಅದೆಲ್ಲವೂ ಇಲ್ಲಿದೆ. ಚೇತನ, ಅಚೇತನ, ಚಲಿಸುವ, ಚಲಿಸದ, ಎಲ್ಲವೂ. ನಿನಗೆ ಏನು ನೋಡಬೇಕು ಎಂದು ನಿನ್ನ ಮನಸ್ಸು ಬಯಸುತ್ತದೆ ಅದನ್ನು ನೋಡು” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನು ಗುಡಾಕೇಶ ಎಂದು ಸಂಬೋಧಿಸುತ್ತಾನೆ. ಅಜ್ಞಾನ, ಆಲಸ್ಯ ಮತ್ತು ನಿದ್ದೆಯನ್ನು ಗೆದ್ದವ ಗುಡಾಕೇಶ.

ಇಲ್ಲಿ ಒಂದೊಂದು ಶ್ಲೋಕದಲ್ಲಿ ಒಂದೊಂದು ವಿಶೇಷಣ ಬಳಸಿದ್ದಾರೆ. ಈ ವಿಶೇಷಣದ ಹಿಂದೆ ಇರುವ ಅರ್ಥವನ್ನು ನೋಡಿದಾಗ ತಿಳಿಯುವುದೇನೆಂದರೆ -ನಮಗೆ ಭಗವಂತ ತಿಳಿಯಬೇಕಾದರೆ ನಾವೂ ಕೂಡ ಪಾರ್ಥ, ಭಾರತ, ಗುಡಾಕೇಶರಾಗಬೇಕು ಎನ್ನುವುದು. ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ(ಪಾರ್ಥ), ಪ್ರಾಣತತ್ವದ ಉಪಾಸನೆ(ಭಾರತ), ಅಜ್ಞಾನ, ಆಲಸ್ಯ ಗೆದ್ದು ಭಗವಂತನ ಚಿಂತನೆ(ಗುಡಾಕೇಶ) ಮಾಡಿದಾಗ- ಆ ಭಗವಂತನ ರೂಪ ನಮಗೆ ತಿಳಿದೀತು.    

ನತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ ।
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್    ॥೮॥

ನ ತು ಮಾಮ್  ಶಕ್ಯಸೇ ದ್ರಷ್ಟುಮ್ ಅನೇನ ಏವ ಸ್ವ ಚಕ್ಷುಷಾ ।
ದಿವ್ಯಮ್  ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮ್ ಐಶ್ವರಮ್—ಆದರೆ ನಿನ್ನ ಈ ಹೊರಗಣ್ಣಿಂದಲೆ ನೋಡಲಾರೆ ನನ್ನನ್ನು. ನೀಡುತ್ತೇನೆ ನಿನಗೆ ದಿವ್ಯದ ಒಳಗಣ್ಣು. ನೋಡು ಜಗವನಾಳುವ ನನ್ನಳವನ್ನು.

ಭಗವಂತನ ರೂಪವನ್ನು ಈ ನಮ್ಮ ಹೊರಗಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಸ್ವರೂಪಭೂತನಾದ ಆ ಭಗವಂತನನ್ನು ನಾವು ನಮ್ಮ ಸ್ವರೂಪಭೂತವಾದ ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ. ಇಲ್ಲಿ ಕೃಷ್ಣ ಅರ್ಜುನನಿಗೆ ಆತನ ಸ್ವರೂಪಭೂತವಾದ ಕಣ್ಣಿನಿಂದ ಸರ್ವಸಮರ್ಥ ಭಗವಂತನನ್ನು ನೋಡುವ ಸೌಭಾಗ್ಯವನ್ನು ಕರುಣಿಸುತ್ತಾನೆ.  

Monday, September 26, 2011

Bhagavad Geeta in Kannada Chapter-11 Shloka 1-4


ಅಧ್ಯಾಯ ಹನ್ನೊಂದು

ಈ ಅಧ್ಯಾಯ ಭಗವಂತನ ಉಪಾಸನೆ ಮಾಡುವಾಗ ಆತನನ್ನು ಹೇಗೆ ಚಿಂತನೆ ಮಾಡಬೇಕು ಎಂದು ಹೇಳುವ ಅಧ್ಯಾಯ. ಇದು  ಭಗವಂತನ ವಿಶ್ವರೂಪ ದರ್ಶನ ಅಧ್ಯಾಯ. ಕೃಷ್ಣ ಅರ್ಜುನನಿಗೆ ದಿವ್ಯನೇತ್ರವನ್ನು ಕರುಣಿಸಿ ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಆ ವಿಶ್ವರೂಪದ ವರ್ಣನೆ ಇಲ್ಲಿದೆ. ಇಲ್ಲಿ ಸರ್ವವ್ಯಾಪ್ತ, ಸರ್ವಾಂತರ್ಯಾಮಿ, ಸರ್ವಸಮರ್ಥ ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಮಾರ್ಗದರ್ಶನವಿದೆ. ಭಗವಂತನ ರೂಪವನ್ನು ಯಾವುದೋ ಒಂದು ಲೌಕಿಕ ಅನುಭವದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಅದು ಲೋಕಾತೀತ ಅನುಭವ. ಆ ಅದ್ಭುತ ಅನುಭವದ ಚಿತ್ರಣ ಈ ಅಧ್ಯಾಯ.
ಭಗವಂತನ ಸರ್ವಗತವಾದ ವಿಶ್ವರೂಪವನ್ನು ಎಲ್ಲರೂ ಧ್ಯಾನ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲ ಕಡೆ ತುಂಬಿರುವ ಭಗವಂತನ ಕಿಂಚಿತ್ ದರ್ಶನ ಪ್ರತಿಯೊಬ್ಬರೂ ಧ್ಯಾನ ಯೋಗದಲ್ಲಿ ಪಡೆಯಲು ಸಾಧ್ಯವಿದೆ. ಹೇಗೆ ಅರ್ಜುನನಿಗೆ ಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದನೋ ಹಾಗೆ ನಮಗೆ ಧ್ಯಾನದಲ್ಲಿ ಕೂಡ ತನ್ನ ರೂಪವನ್ನು ಆತನೇ ತೋರಿಸಬೇಕು. ಇದು ಹೊರಪ್ರಪಂಚದಲ್ಲಿ ಕಾಣುವ ರೂಪವಲ್ಲ. ನಾವು ನಮ್ಮ ಒಳಗಣ್ಣನ್ನು ತೆರೆದು ಕುಳಿತು ಧ್ಯಾನ ಮಾಡಬೇಕು, ಭಗವಂತನಲ್ಲಿ ಶರಣಾಗಬೇಕು. ಕಾತರತೆಯಿಂದ ಕರೆದಾಗ ಒಳಗಿನಿಂದ ಏನು ಅನುಭೂತಿ ಬರುತ್ತದೆ ಅದು ಲೌಕಿಕ ಅನುಭೂತಿಯನ್ನು ಮೀರಿದ ವಿಚಾರ.
ಈ ಅಧ್ಯಾಯದಲ್ಲಿ ಭಗವಂತನ ಮಾತು ಕಡಿಮೆ. ಇಲ್ಲಿ ಕೃಷ್ಣನ ವಿಶ್ವರೂಪವನ್ನು ಕಂಡವರ ಮಾತಿದೆ. ಅವರು ಕಂಡ ರೀತಿಯನ್ನು ಕೇಳಿ ನಾವು ಭಗವಂತನನ್ನು ಕಾಣಲು ಪ್ರಯತ್ನ ಮಾಡಬೇಕು. ಇದು ನಮ್ಮ ಅಂತರಂಗದ ಅಧ್ಯಾತ್ಮದ ಸಾಕ್ಷಾತ್ಕಾರಕ್ಕೆ ಪೂರಕವಾದ, ಧ್ಯಾನದ ದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಬಹಳ ಮಹತ್ವದ ಅಧ್ಯಾಯ. ಬನ್ನಿ, ವ್ಯಾಸರು ದಾಖಲಿಸಿದ ಭಗವಂತನ ಅಪೂರ್ವ ವಿಶ್ವರೂಪ ವರ್ಣನೆಯನ್ನು ಕೇಳಿ ಧನ್ಯರಾಗೋಣ.
ಅಧ್ಯಾಯಕ್ಕೆ ಪ್ರವೇಶಿಸುವ ಮುನ್ನ ನಾವು  ಒಂದು  ವಿಚಾರವನ್ನು ತಿಳಿದುಕೊಳ್ಳಬೇಕು. ನಮ್ಮಲ್ಲಿ ಕೆಲವರಿಗೆ ಒಂದು ತಪ್ಪು ತಿಳುವಳಿಕೆ ಇದೆ. ಅರ್ಜುನನಿಗೆ  ಭಗವಂತನ ಸಂದೇಶವನ್ನು ಮನವರಿಕೆ ಮಾಡಿಸಲು ಕೃಷ್ಣ ತನ್ನ  ವಿಶ್ವರೂಪ ದರ್ಶನ ಮಾಡಿಸಬೇಕಾಯಿತುಎಂದು. ಸ್ವತಃ ಶ್ರೀಕೃಷ್ಣನಿಂದಲೇ ಉಪದೇಶ ಪಡೆದರೂ ಸಹ ಅರ್ಜುನನಿಗೆ ಮನವರಿಕೆ ಆಗಲಿಲ್ಲ, ಇನ್ನು ನಮ್ಮ ಪಾಡೇನು? ನಮಗೆ ಯಾರು ವಿಶ್ವರೂಪ ದರ್ಶನ ಮಾಡಿಸುತ್ತಾರೆ”-ಎಂದು ಯೋಚಿಸುವವರಿದ್ದಾರೆ. ಆದರೆ ಇದು ನಮ್ಮ ತಪ್ಪು ತಿಳುವಳಿಕೆ. ಅರ್ಜುನನಿಗೆ ಭಗವಂತನ ಸಂದೇಶ ಪೂರ್ಣ ಮನವರಿಕೆ ಆಗಿತ್ತು. ಈ ವಿಚಾರ ಈ ಅಧ್ಯಾಯದ ಮೊದಲ ಶ್ಲೋಕದಲ್ಲೇ ತಿಳಿಯುತ್ತದೆ. ಅರ್ಜುನ ಹೇಳುತ್ತಾನೆ ಮೋಹೋಯಂ ವಿಗತೋ ಮಮ”- ‘ನಿನ್ನ ಮಹಿಮೆ ತಿಳಿದು ನನ್ನ ಎಲ್ಲ ಸಂಶಯವೂ ಕಳೆಯಿತುಎಂದು. ಇದರಿಂದ ತಿಳಿಯುವುದೇನೆದರೆ ಅರ್ಜುನ ಭಗವಂತನ ವಿಶ್ವರೂಪ ದರ್ಶನ ಬಯಸಿದ್ದು ಕೇವಲ ನೋಡಿ ಧನ್ಯನಾಗುವುದಕ್ಕೋಸ್ಕರ ಹೊರತು, ಪುರಾವೆಗಾಗಿ ಅಲ್ಲ. ಸಾಮಾನ್ಯವಾಗಿ ಮನುಷ್ಯ ಸ್ವಭಾವವೇನೆಂದರೆ ಒಂದು ವಿಷಯವನ್ನು ಕೇಳಿದ ಮೇಲೆ ಅದನ್ನೊಮ್ಮೆ ನೋಡಬೇಕು ಎನ್ನುವ ಸಹಜ ಅಭಿಲಾಷೆ. ಅರ್ಜುನ ಕೃಷ್ಣನ ಮುಂದಿಟ್ಟಿರುವುದು ಕೂಡಾ ಇಂಥಹದ್ದೇ ಬಯಕೆಯನ್ನು. ಮುಂದಿನ ನಾಲ್ಕು ಶ್ಲೋಕಗಳಲ್ಲಿ ಈ ವಿಚಾರ ಸ್ಪಷ್ಟವಾಗಿ ತಿಳಿಯುತ್ತದೆ.

ಅರ್ಜುನ ಉವಾಚ ।
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್      ।
ಯತ್ ತ್ವಯೋಕ್ತಂ ವಚಸ್ತೇನ ಮೋಹೋSಯಂ ವಿಗತೋ ಮಮ ॥೧॥

ಅರ್ಜುನಃ ಉವಾಚ- ಅರ್ಜುನ ಹೇಳಿದನು:
ಮತ್ ಅನುಗ್ರಹಾಯ ಪರಮಮ್  ಗುಹ್ಯಮ್ ಅಧ್ಯಾತ್ಮಸಂಜ್ಞಿತಮ್    ।
ಯತ್ ತ್ವಯಾ ಉಕ್ತಮ್  ವಚಃ ತೇನ ಮೋಹಃ ಅಯಮ್  ವಿಗತಃ ಮಮ –-ನನ್ನ ಮೇಲೆ ದಯೆದೋರಲೆಂದು, ಅಧ್ಯಾತ್ಮವೆಂಬ ಹಿರಿಯ ಗುಟ್ಟನ್ನು ನೀನು ನುಡಿದೆ. ಆ ನುಡಿಯಿಂದ ನನ್ನೀ ಮಂಕು ಕಳೆಯಿತು.

ಅರ್ಜುನ ಹೇಳುತ್ತಾನೆ: “ನನ್ನ ಮೇಲಿನ ಅನುಗ್ರಹದಿಂದ ಅಧ್ಯಾತ್ಮದ ಪರಮ ಗುಹ್ಯವಾದ ವಿಚಾರವನ್ನು ನನಗೆ ಹೇಳಿದಿ” ಎಂದು. ಇಲ್ಲಿ ‘ಅನುಗ್ರಹ’ ಎಂದರೆ-ತಮ್ಮಿಂದ ಚಿಕ್ಕವರನ್ನು ಸರಿದಾರಿಯಲ್ಲಿ ತಂದು, ಎತ್ತರಕ್ಕೇರಿಸಿ ಉದ್ಧಾರ ಮಾಡಬೇಕು ಎಂಬ ಹಿರಿಯರ ಇಚ್ಛೆ. “ದಾರಿ ತಪ್ಪಿ ನಡೆಯಲಿದ್ದ ನನ್ನನ್ನು ಸರಿದಾರಿಗೆ ತಂದು ಉದ್ಧಾರ ಮಾಡಿದಿ” ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ್ದಾನೆ. ಇಲ್ಲಿ ‘ಮತ್’ ಎನ್ನುವ ಪದ ಬಳಕೆಯಾಗಿದೆ. ‘ಮತ್’ ಎಂದರೆ ಕೇವಲ ‘ನನ್ನ ಅಥವಾ ನನಗೆ’ ಅನ್ನುವ ಅರ್ಥವಷ್ಟೇ ಅಲ್ಲ. ‘ಮತ್’ ಎನ್ನುವುದು ಯತ್ ಇದ್ದಂತೆ. ‘ಮಾತೀತಿ ಮತ್’-ಅಂದರೆ ‘ಸಮಸ್ತ ಜ್ಞಾನಿಗಳು’ ಅನ್ನುವ ಅರ್ಥವನ್ನು ಕೊಡುತ್ತದೆ. ಆದ್ದರಿಂದ ಮದನುಗ್ರಹ ಅಂದರೆ ‘ಸಮಸ್ತ ಜ್ಞಾನಿಗಳ ಉದ್ಧಾರಕ್ಕೋಸ್ಕರ’ ಎಂದರ್ಥ. ಭಗವಂತ ಸಮಸ್ತ ಮನುಕುಲಕ್ಕೆ ಈ ಅಪೂರ್ವ ಸಂದೇಶವನ್ನು ತಲುಪಿಸಲು ಗೀತೆಯನ್ನು ಅರ್ಜುನನಿಗೆ ಉಪದೇಶ ಮಾಡಿ, ಅದನ್ನು ತಾನೇ ವ್ಯಾಸರೂಪನಾಗಿ ದಾಖಲಿಸಿ ನಮಗೆ ಕೊಟ್ಟನೆ ಹೊರತು, ಕೇವಲ ಅರ್ಜುನನಿಗೋಸ್ಕರ ಹೇಳಿದ್ದಲ್ಲ.
ಈ ಪ್ರಪಂಚದಲ್ಲಿ ಅತ್ಯಂತ ಗೋಪ್ಯವಾಗಿರಬೇಕಾದ ವಿದ್ಯೆ-ಅಧ್ಯಾತ್ಮ ವಿದ್ಯೆ. ಯಾವಾಗಲೂ ಅಪೂರ್ವ ವಿಷಯವನ್ನು ಗೋಪ್ಯವಾಗಿಡುತ್ತಾರೆ. ಏಕೆಂದರೆ ಅದು ದುರುಪಯೋಗವಾಗಬಾರದು ಮತ್ತು ಅದರ ಮಹತ್ವ ತಿಳಿಯದವರಿಗೆ ತಲುಪಬಾರದೆಂದು. ಅಧ್ಯಾತ್ಮ-ಮನೋವಿಜ್ಞಾನ, ಜೀವವಿಜ್ಞಾನ ಮತ್ತು ಪರಮಾತ್ಮವಿಜ್ಞಾನ. ಇಂತಹ ಅಪೂರ್ವ ವಿದ್ಯೆಯನ್ನು ಕೃಷ್ಣ ಅರ್ಜುನನ ಮುಂದೆ ತೆರೆದಿಟ್ಟಿರುವುದಕ್ಕೆ ಅರ್ಜುನ ಭಗವಂತನನ್ನು ಕೊಂಡಾಡುತ್ತಾನೆ ಮತ್ತು ಹೇಳುತ್ತಾನೆ “ಇದರಿಂದ ನನ್ನೆಲ್ಲ ಮಾನಸಿಕ ಗೊಂದಲ ಹೊರಟು ಹೋಗಿ ಮೋಹ ಕಳೆಯಿತು” ಎಂದು.

ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ॥೨॥

ಭವ ಅಪ್ಯಯೌ ಹಿ ಭೂತಾನಾಮ್  ಶ್ರುತೌ ವಿಸ್ತರಶಃ  ಮಯಾ ।
ತ್ವತ್ತಃ ಕಮಲಪತ್ರ ಅಕ್ಷ ಮಾಹಾತ್ಮ್ಯಮ್  ಅಪಿ ಚ ಅವ್ಯಯಮ್ –- ಜೀವಿಗಳ ಹುಟ್ಟು ಸಾವುಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆ; ಓ ತಾವರೆ ಎಸಳಂಥ ಕಣ್ಗಳವನೆ, ನಿನ್ನ ಅಳಿವಿರದ ಮಹಿಮೆಯನ್ನು ಕೂಡ.

“ಜೀವಿಗಳ ಭವ ಮತ್ತು ಅಪ್ಯಯಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆ” ಎನ್ನುತ್ತಾನೆ ಅರ್ಜುನ. ಇಲ್ಲಿ ಭವ ಮತ್ತು ಅಪ್ಯಯ ಎನ್ನುವುದಕ್ಕೆ ಹುಟ್ಟು-ಸಾವು, ಸೃಷ್ಟಿ-ಸಂಹಾರ ಎನ್ನುವ ಅರ್ಥವಲ್ಲದೆ ಇನ್ನೊಂದು ಬಹಳ ರೋಚಕವಾದ ಅರ್ಥವಿದೆ. ವೇದಕಾಲದ ಋಷಿಗಳು ಇದನ್ನು ಒಂದು ಹೊಸ ಅರ್ಥದಲ್ಲಿ ಬಳಸುತ್ತಿದ್ದರು. “ಪ್ರಭವಾಪ್ಯಯೌ ಭೂತಾನಾಂ” ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಸುಖಪ್ರಾಪ್ತಿ-ಭವ  ಮತ್ತು ದುಃಖನಿವೃತ್ತಿ-ಅಪ್ಯಯ. ಇದು ಪ್ರಾಚೀನ ಋಷಿಗಳ ಅರ್ಥ. “ಯಾವ ರೀತಿಯ ನಡೆಯಿಂದ ಸುಖ ಪಡೆಯಬಹುದು, ಯಾವ ರೀತಿಯ ನಡೆಯಿಂದ ನಮ್ಮ ಬದುಕಿನ ದುಃಖದಿಂದ ಪಾರಾಗಬಹುದು ಅನ್ನುವ ಮೂಲ ಮಂತ್ರವನ್ನು ನಿನ್ನ ಬಾಯಿಯಿಂದಲೇ ಹೇಳಿದಿ-ಅದನ್ನು ನಾನು ಕಿವಿಯಾರೆ ಕೇಳಿದೆ” ಎನ್ನುತ್ತಾನೆ ಅರ್ಜುನ.
ಇಲ್ಲಿ ‘ಕಮಲಪತ್ರಾಕ್ಷ’ ಎನ್ನುವ ಒಂದು ವಿಶೇಷಣ ಬಳಸಿದ್ದಾರೆ. ಇದನ್ನು ಅರ್ಜುನ ಪ್ರಯೋಗ ಮಾಡುವುದರಲ್ಲಿ ಒಂದು ವಿಶೇಷವಿದೆ. “ನೀನು ನನ್ನ ಮೇಲೆ ಕಾರುಣ್ಯದ ರಸಧಾರೆಯನ್ನು ಹರಿಸಿದೆಯಲ್ಲ ಕೃಷ್ಣ” ಎನ್ನುವ ಭಾವ ಈ ವಿಶೇಷಣದ ಹಿಂದಿದೆ. “ನಿನ್ನ ಮಹಿಮೆ ಅವ್ಯಯ ಅನಂತವಾಗುಳಿಯುವ ಸಂಪತ್ತು. ಆ ಮಹತ್ತಾದ ಜ್ಞಾನವನ್ನು ನನಗೆ ಕೊಟ್ಟೆ. ಅತಿ ದುರ್ಲಭವಾದ ನಿನ್ನ ಮಹಿಮೆಯನ್ನು ನನಗೆ ಹೇಳಿದೆ” ಎನ್ನುತ್ತಾನೆ ಅರ್ಜುನ.

ಏವಮೇತದ್ ಯಥಾSSತ್ಥ ತ್ವಮಾತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ ॥೩॥

ಏವಮ್ ಏತತ್  ಯಥಾ ಆತ್ಥ ತ್ವಮ್ ಆತ್ಮಾನಮ್  ಪರಮೇಶ್ವರ ।
ದ್ರಷ್ಟುಮ್ ಇಚ್ಛಾಮಿ ತೇ ರೂಪಮ್ ಐಶ್ವರಮ್  ಪುರುಷೋತ್ತಮ –ಪರಮೇಶ್ವರ, ನೀನು ನಿನ್ನ ಬಗೆಗೆ ಏನಂದೆಯೋ ಅದೆಲ್ಲ ನಿಜ. ಓ ಪುರುಷೋತ್ತಮ, ಜಗವನಾಳುವ ನಿನ್ನ ರೂಪವನ್ನು ಕಾಣುವ ತವಕ ನನಗೆ.

“ನೀನು ಹೇಳಿದ್ದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎನ್ನುತ್ತಾನೆ ಅರ್ಜುನ. ಇಲ್ಲಿ ಅರ್ಜುನ ಕೃಷ್ಣನನ್ನು ‘ಪರಮೇಶ್ವರಃ’ ಎಂದು ಸಂಬೋಧಿಸಿದ್ದಾನೆ. ಈಶ ಎಂದರೆ ಸಮರ್ಥ. ನಮ್ಮನ್ನು ನಿಯಂತ್ರಿಸುವ ದೇವತೆಗಳು ಈಶರು. ಅವರನ್ನು ನಿಯಂತ್ರಿಸುವ ಅಂತಃಕರಣ ಹಾಗು ಜೀವಕಲಾಭಿಮಾನಿ ದೇವತೆಗಳಾದ ಗರುಡ, ಶೇಷ ರುದ್ರ ಹಾಗು ಬ್ರಹ್ಮ ವಾಯು-ಈಶ್ವರರು. ಈ ತತ್ವಾಭಿಮಾನಿ ದೇವತೆಗಳ ನಿಯಮಕನಾದ, ಎಲ್ಲಕ್ಕಿಂತ ಎತ್ತರದಲ್ಲಿರುವ, ಎಲ್ಲರ ಒಡೆಯ ಭಗವಂತ ಪರಮೇಶ್ವರಃ.  “ನೀನು ಹೇಳಿದ ವಿಚಾರದಲ್ಲಿ ನನಗೆ ಗೊಂದಲವಿಲ್ಲ. ಏಕೆಂದರೆ ನೀನು ಪರಮೇಶ್ವರಃ. ಆದರೆ ನನಗೆ ಆ ನಿನ್ನ ಸರ್ವಸಾಮರ್ಥ್ಯದಿಂದ ತುಂಬಿದ ರೂಪವನ್ನು ಕಾಣುವ ತವಕವಾಗುತ್ತಿದೆ” ಎಂದು ‘ಭಗವಂತನ ಅದ್ಭುತ ರೂಪವನ್ನು ಕಾಣಬೇಕು’ ಎನ್ನುವ ತನ್ನ ಬಯಕೆಯನ್ನು ಅರ್ಜುನ ಕೃಷ್ಣನ ಮುಂದಿಡುತ್ತಾನೆ.
ಇಲ್ಲಿ ಅರ್ಜುನ ಭಗವಂತನನ್ನು ‘ಪುರುಷೋತ್ತಮಃ’ ಎಂದು ಸಂಬೋಧಿಸಿದ್ದಾನೆ. ಈ ಪದಕ್ಕಿರುವ ವಿಶಿಷ್ಠ ಅರ್ಥವನ್ನು ಕೃಷ್ಣ ಅಧ್ಯಾಯ ಹದಿನೈದರಲ್ಲಿ(ಅ-೧೫, ಶ್ಲೋ-೧೬-೧೮) ವಿವರವಾಗಿ ವಿವರಿಸಿದ್ದಾನೆ.  ಲೋಕದಲ್ಲಿ ಎರಡು ಬಗೆಯ ಪುರುಷರಿದ್ದಾರೆ. ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ  ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೇ ಅಕ್ಷರ ಪುರುಷಳೆನಿಸಿದ್ದಾಳೆ-(ಅ-೧೫, ಶ್ಲೋ-೧೭); ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ  ಮೂರು ಲೋಕದೊಳಗಿದ್ದು ಸಲಹುತ್ತಾನೆ (ಅ-೧೫, ಶ್ಲೋ-೧೭). ಕ್ಷರವನ್ನು ಮೀರಿ ನಿಂತವನು, ಅಕ್ಷರಕ್ಕಿಂತಲೂ ಹಿರಿಯನು ಆದ ಆ ನಾರಾಯಣ  'ಪುರುಷೋತ್ತಮ'.(ಅ-೧೫, ಶ್ಲೋ-೧೮). “ನಿನ್ನ ಪುರುಷೋತ್ತಮತ್ವದ ರೂಪವನ್ನು ನಾನು ಕಾಣಬೇಕು” ಎನ್ನುವ ಅಭಿಲಾಷೆಯನ್ನು ಅರ್ಜುನ ಕೃಷ್ಣನ ಮುಂದಿಟ್ಟ.

ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ ।
ಯೋಗೇಶ್ವರ ತತೋ ಮೇ ತ್ವಂ ದರ್ಶಯಾSತ್ಮಾನಮವ್ಯಯಮ್ ॥೪॥

ಮನ್ಯಸೇ ಯದಿ ತತ್ ಶಕ್ಯಮ್  ಮಯಾ ದ್ರಷ್ಟುಮ್ ಇತಿ ಪ್ರಭೋ ।
ಯೋಗೇಶ್ವರ ತತಃ  ಮೇ ತ್ವಮ್  ದರ್ಶಯ ಆತ್ಮಾನಮ್ ಅವ್ಯಯಮ್ –ಜಗದೊಡೆಯನೆ, ಯೋಗಿಗಳೊಡೆಯನೆ, ಅದು ನನ್ನಿಂದ ಕಾಣಲು ಸಾಧ್ಯವೆಂದು ನೀನು ಭಾವಿಸುವುದಾದರೆ, ನಿನ್ನ ಅಳಿವಿರದ ರೂಪವನ್ನು ನನಗೆ ತೋರಿಸು.

ಅರ್ಜುನ ಮುಂದುವರಿದು ಹೇಳುತ್ತಾನೆ” “ನಾನು ಆ ನಿನ್ನ ರೂಪವನ್ನು ನೋಡಲು ಸಾಧ್ಯ ಎಂದು ನೀನು ಭಾವಿಸುವುದಾದರೆ, ನಿನ್ನ ರೂಪವನ್ನು ನನಗೆ ತೋರಿಸು” ಎಂದು. ಇಲ್ಲಿ ಅರ್ಜುನ ಕೃಷ್ಣನನ್ನು ‘ಪ್ರಭೋ’ ಎಂದು ಸಂಬೋಧಿಸಿದ್ದಾನೆ.  “ಪ್ರಭು’ ಅಂದರೆ ಸಾಮರ್ಥ್ಯ. “ನೋಡುವ ಸಾಮರ್ಥ್ಯ ನನಗಿಲ್ಲದಿದ್ದರೂ, ಆ ಸಾಮರ್ಥ್ಯವನ್ನು ಕರುಣಿಸಿ ತೋರಿಸುವ ಸಾಮರ್ಥ್ಯ ನಿನಗಿದೆ” ಎನ್ನುವುದು ಈ ಸಂಬೋಧನೆಯ ಹಿಂದಿರುವ ಭಾವ. “ಏಕೆಂದರೆ ನೀನು ಯೋಗೇಶ್ವರಃ” ಎನ್ನುತ್ತಾನೆ ಅರ್ಜುನ. ಯೋಗ ಅಂದರೆ ಉಪಾಯ. “ನನಗೆ ಹೇಗೆ ನಿನ್ನ ರೂಪವನ್ನು ತೋರಿಸಬೇಕು ಎನ್ನುವ ಉಪಾಯ ಕೂಡ ನಿನಗೆ ತಿಳಿದಿದೆ. ನೀನು ಎಲ್ಲ ಉಪಾಯ(ಯೋಗ)ಗಳ ಸ್ವಾಮಿ.  ಆದ್ದರಿಂದ ಅಳಿವಿರದ, ನಿತ್ಯವಾಗಿರುವ ಆ ನಿನ್ನ ರೂಪವನ್ನು ನನಗೆ ತೋರಿಸು” ಎಂದು ಅರ್ಜುನ ಕೃಷ್ಣನನ್ನು ಕೇಳಿಕೊಳ್ಳುತ್ತಾನೆ.        

Saturday, September 24, 2011

Bhagavad Geeta Kannada Chapter-10 Shloka 39-42


ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ ।
ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್   ॥೩೯॥

ಯತ್ ಚ ಅಪಿ ಸರ್ವ ಭೂತಾನಾಮ್  ಬೀಜಮ್  ತತ್ ಅಹಮ್ ಅರ್ಜುನ ।
ನ ತತ್ ಅಸ್ತಿ ವಿನಾ ಯತ್ ಸ್ಯಾತ್ ಮಯಾ ಭೂತಮ್ ಚರ ಅಚರಮ್ –ಅರ್ಜುನ, ಸಮಸ್ತ ಜೀವಿಗಳಲ್ಲಿ  ಏನೆಲ್ಲ ವಿಶಿಷ್ಠ ಗುಣವಿದೆಯೊ ಅವುಗಳಲ್ಲಿ ನಾನೆ ಇದ್ದು ಆ ಶಕ್ತಿ ನೀಡಿದ್ದೇನೆ. ನನ್ನನ್ನು ಹೊರತುಪಡಿಸಿ ಈ ಚರಾಚರದಲ್ಲಿ ಯಾವುದೂ ತಾನೆ ತಾನಾಗಿ ಇಲ್ಲ.

“ಈ ಜಗತ್ತಿನಲ್ಲಿರುವ ಸಮಸ್ತ ವಸ್ತು(ಜಡ-ಚೇತನ)ವಿಗೂ ಮೂಲಭೂತವಾಗಿರುವ ಅಭಿವ್ಯಂಜಕ ರೂಪ ಮತ್ತು ಶಕ್ತಿ ಕೊಡುವವನು ನಾನು” ಎನ್ನುತ್ತಾನೆ ಕೃಷ್ಣ. ಹೀಗೆ ಭಗವಂತ ಸಮಸ್ತ ಸೃಷ್ಟಿಗೂ ಬೀಜಪುರುಷನಾಗಿ ನಿಂತಿದ್ದಾನೆ. ಕಣ್ಣಿಗೆ ಕಾಣದ ಜೀವಕ್ಕೆ ಕಣ್ಣಿಗೆ ಕಾಣುವ ಶರೀರ ಕೊಡುವವನು ಆತ. ಗಂಡಿನ ರೇತಸ್ಸಿನಲ್ಲಿದ್ದು, ಜೀವವನ್ನು ರೇತಸ್ಸಿನ ಮುಖೇನ ಹೆಣ್ಣಿನ ದೇಹದೊಳಗೆ ಸೇರಿಸಿ, ಅಲ್ಲಿ ಜೀವಕ್ಕೆ ಒಂದು ರೂಪವನ್ನು ಕೊಟ್ಟು ಬೆಳಗಿಸುವವ ಭಗವಂತ. ಹೀಗೆ ಈ ಪ್ರಪಂಚದಲ್ಲಿರುವ ಚೇತನಾಚೇತನ ಅಥವಾ ಚರಾಚರಾತ್ಮಕ-ಎಲ್ಲವನ್ನೂ ಹುಟ್ಟಿಸುವವನು ಭಗವಂತ. “ಈ ಪ್ರಪಂಚದಲ್ಲಿ ನನ್ನನ್ನು ತೊರೆದು ಸ್ವತಂತ್ರವಾಗಿ ಯಾವ ವಸ್ತುವೂ ಇಲ್ಲ” ಎನ್ನುತ್ತಾನೆ ಕೃಷ್ಣ. ಇದು ವೈದಿಕ ಪರಂಪರೆಯಲ್ಲಿ ಇರುವ ಗೊಂದಲಕ್ಕೆ ಕೃಷ್ಣ ಕೊಟ್ಟ ನೇರ ಉತ್ತರ. ಜೀವ ಮತ್ತು ಭಗವಂತ ಒಂದೇ ಅಲ್ಲ. ಜೀವ ಭಗವಂತನ ಪ್ರತಿಬಿಂಬ. ಎಲ್ಲವೂ ಇದೆ. ಆದರೆ  ಭಗವಂತನನ್ನು ಬಿಟ್ಟು ಸ್ವತಂತ್ರ ಅಸ್ತಿತ್ವ ಯಾರಿಗೂ ಇಲ್ಲ.         

ನಾಂತೋSಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ ।
ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ॥೪೦॥

ನ ಅಂತಃ ಅಸ್ತಿ ಮಮ ದಿವ್ಯಾನಾಮ್ ವಿಭೂತೀನಾಮ್ ಪರಂತಪ      ।
ಏಷಃ ತು ಉದ್ದೇಶತಃ ಪ್ರೋಕ್ತಃ  ವಿಭೂತೇಃ ವಿಸ್ತರಃ  ಮಯಾ—ಓ ಅರಿಗಳ ಉರಿಯೆ, ನನ್ನ ದಿವ್ಯರೂಪಗಳ ಹಿರಿಮೆಗಳಿಗೆ ಕೊನೆಯಿಲ್ಲ. ನನ್ನ ಹಿರಿಮೆಯ ಬಿತ್ತರದ ಕೆಲವನ್ನಷ್ಟೆ ಇಲ್ಲಿ ಹೆಸರಿಸಿ ಹೇಳಿದೆ.

ಕೃಷ್ಣ ಹೇಳುತ್ತಾನೆ “ನನ್ನ ವಿಭೂತಿ ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಇದೆ. ಅದನ್ನು ಹೇಳಿ ಕೊನೆ ಇಲ್ಲ” ಎಂದು. ಲೋಕವಿಲಕ್ಷಣವಾದ ಭಗವಂತನ ವಿಭೂತಿಗೆ ಕೊನೆ ಇಲ್ಲ. ಅದನ್ನು ಹೇಳಿ ಮುಗಿಯುವುದಿಲ್ಲ. ಇಲ್ಲಿ ಕೃಷ್ಣ ಅತ್ಯಂತ ಮುಖ್ಯವಾದ, ನಾವು ನಿರಂತರ ಉಪಾಸನೆ ಮಾಡಬೇಕಾದ, ನಿತ್ಯ ಅನುಸಂಧಾನದಲ್ಲಿರಬೇಕಾದದ್ದನ್ನು ಹೇಳಿದ.    

ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ ।
ತತ್ತದೇವಾವಗಚ್ಛ ತ್ವಂ ಮಮ ತೇಜೋಂSಶಸಂಭವಮ್ ॥೪೧॥

ಯತ್ ಯತ್  ವಿಭೂತಿ ಮತ್ ಸತ್ತ್ವಮ್ ಶ್ರೀಮತ್ ಊರ್ಜಿತಮ್ ಏವ ವಾ ।
ತತ್ ತತ್ ಏವ ಅವಗಚ್ಛ ತ್ವಮ್ ಮಮ ತೇಜಃ ಅಂಶ ಸಂಭವಮ್—ಗುಂಪಿನಲ್ಲಿ ಮಿಗಿಲಾದದ್ದು , ಸಿರಿಯಲ್ಲಿ ಹಿರಿದಾದದ್ದು. ಎತ್ತರದಲ್ಲಿ ಮೆರೆದದ್ದು ಯಾವುದೆಲ್ಲ ಇದೆ ಅದೆಲ್ಲವೂ ನನ್ನ ಹಿರಿಮೆಯ ಬೆಳಕಿನ ಕಿಡಿಯಿಂದ ಮೂಡಿಬಂದದ್ದು ಎಂದು ತಿಳಿ.

ಒಟ್ಟಿನಲ್ಲಿ ಒಬ್ಬ ವ್ಯಕ್ತಿಯಲ್ಲಿ, ಒಂದು ವಸ್ತುವಿನಲ್ಲಿ ಇನ್ನೊಬ್ಬರಲ್ಲಿಲ್ಲದ ಯಾವ ವಿಶಿಷ್ಠ ಗುಣವಿದೆ ಅದು ಭಗವಂತನ ಹಿರಿಮೆಯ ಒಂದು ಬೆಳಕಿನ ಕಿಡಿ. ಇದು ಭಗವಂತನ ಅನಂತ ತೇಜಸ್ಸಿನ ಒಂದು ತುಣುಕು.   

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ । 
                   ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್        ॥೪೨॥

ಅಥವಾ ಬಹುನಾ ಏತೇನ ಕಿಮ್ ಜ್ಞಾತೇನ ತವ ಅರ್ಜುನ ।
ವಿಷ್ಟಭ್ಯ ಅಹಮ್ ಇದಮ್  ಕೃತ್ಸ್ನಮ್ ಏಕ ಅಂಶೇನ ಸ್ಥಿತಃ ಜಗತ್ –ಅಥವಾ, ಓ ಅರ್ಜುನ, ಎಲ್ಲವನ್ನು ತಿಳಿದು ಏನು ಬಂತು ? ಸಾರವಿದು: ನಾನು ನನ್ನ ಅಳವಿನ ಒಂದು ಅಂಶದಿಂದ ಈ ಇಡಿಯ ವಿಶ್ವವನ್ನು ತಬ್ಬಿ ತಡೆಹಿಡಿದು ನಡೆಸುತ್ತಿದ್ದೇನೆ.

ಒಂದೊಂದನ್ನು ಪ್ರತ್ಯೇಕ ತಿಳಿದು ಹೇಳುವುದು ಅಸಾಧ್ಯ. ಈ ರೀತಿ ಮಾಡುವ ಅಗತ್ಯವೂ ಇಲ್ಲ. ಎಲ್ಲವುದರೊಳಗೂ ಒಂದು ವಿಶಿಷ್ಠ ಶಕ್ತಿಯಾಗಿ ಭಗವಂತನಿದ್ದಾನೆ. ಎಲ್ಲದರಲ್ಲೂ ಭಗವಂತನ ವಿಭೂತಿ ಅಡಗಿದೆ. ಕೃಷ್ಣ ಹೇಳುತ್ತಾನೆ “ ಇಡೀ ವಿಶ್ವವನ್ನು ನಾನು ನನ್ನ ಸಾಮರ್ಥ್ಯದ ಒಂದು ತುಣುಕಿನಿಂದ  ವ್ಯಾಪಿಸಿ ನಿಂತಿದ್ದೇನೆ” ಎಂದು. ಪುರುಷ ಸೂಕ್ತದಲ್ಲಿ ಹೇಳುವಂತೆ:
ಪಾದೋಸ್ಯ ವಿಶ್ವಾ ಭೂತಾನಿ| ತ್ರಿಪಾದಸ್ಯಾಮೃತಂ ದಿವಿ|
ತ್ರಿಪಾದೂರ್ಧ್ವ ಉದೈತ್ಪುರುಷಃ| ಪಾದೋಸ್ಯೇಹಾಭವಾತ್ಪುನಃ|
ತತೋ ವಿಷ್ವಂವ್ಯಕ್ರಾಮತ್| ಸಾಶನಾನಶನೇ ಅಭಿ|

ಈ ಪ್ರಪಂಚದಲ್ಲಿ ವ್ಯಾಪಿಸಿರುವುದು  ಭಗವಂತನ ಕೇವಲ ಕಾಲು ಭಾಗವಷ್ಟೇ. ಅಮೃತಮಯವಾದ  ಮುಕ್ಕಾಲು ಭಾಗ ದಿವ್ಯಲೋಕ (ಮುಕ್ತಲೋಕ) ದಲ್ಲಿ ನೆಲೆಸಿದೆ. “ಜಗತ್ತಿನ ಸಮಸ್ತ ವಸ್ತುವಿನ ಒಳಗೂ ಹೊರಗೂ  ತುಂಬಿ ನಾನು ವಿಶ್ವ ರೂಪನಾಗಿದ್ದೇನೆ” ಎನ್ನುತ್ತಾನೆ ಕೃಷ್ಣ.

ಇತಿ  ದಶಮೋSಧ್ಯಾಯಃ
ಹತ್ತನೆಯ ಅಧ್ಯಾಯ ಮುಗಿಯಿತು
*******

Friday, September 23, 2011

Bhagavad Geeta Kannada Chapter-10 Shloka 36-38



ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।
ಜಯೋSಸ್ಮಿ ವ್ಯವಸಾಯೋSಸ್ಮಿ ಸತ್ತ್ವಂ ಸತ್ತ್ವವತಾಮಹಮ್            ॥೩೬॥

ದ್ಯೂತಮ್  ಛಲಯತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್ ।
ಜಯಃ ಅಸ್ಮಿ ವ್ಯವಸಾಯಃ ಅಸ್ಮಿ ಸತ್ತ್ವಮ್  ಸತ್ತ್ವವತಾಮ್ ಅಹಮ್—ಮೋಸಗಾರರ ಜೂಜು ನಾನು. [ಕ್ರೀಡಾರೂಪನಾಗಿ ‘ದ್ಯೂತ’ ಎನ್ನಿಸಿ ಜೂಜಿನಲ್ಲಿದ್ದೇನೆ.] ವೀರರಾದವರ ಬೀರ ನಾನು. [ಪ್ರಕಾಶರೂಪನಾದ್ದರಿಂದ ‘ತೇಜಸ್’ ಎನ್ನಿಸಿ ಬೀರದಲ್ಲಿದ್ದೇನೆ.] ಗೆಲುವು ನಾನು. [ಎಲ್ಲವನ್ನು ಗೆದ್ದವನಾಗಿ ‘ಜಯ’ ಎನ್ನಿಸಿ ಗೆಲುವಿನಲ್ಲಿದ್ದೇನೆ.] ದುಡಿಮೆ ನಾನು. [ನಿಶ್ಚಯ ಜ್ಞಾನರೂಪನಾದ್ದರಿಂದ ‘ವ್ಯವಸಾಯ’ ಎನ್ನಿಸಿ ದುಡಿಮೆಯಲ್ಲಿದ್ದೇನೆ.] ಹಿರಿಯ ವ್ಯಕ್ತಿಗಳ ಘನತೆ ನಾನು.[ಸದ್ಗುಣಗಳ ಗಣಿಯಾಗಿ ‘ಸತ್ವ’ ಎನ್ನಿಸಿ ದೊಡ್ಡವರ ಘನತೆಯಲ್ಲಿದ್ದೇನೆ.]

ಕೌರವ ಪಾಂಡವರ ನಡುವೆ ಯುದ್ಧವಾಗಲು ಕಾರಣವಾಗಿ ಕಾಣುವುದು ದ್ಯೂತ. ಇದು ಮೊಸಗಾರಿಕೆಯಲ್ಲಿ ಅತ್ಯಂತ ಶ್ರೇಷ್ಠ ಕಲೆ! ಭಗವಂತ ‘ದ್ಯೂತ’ ಎನ್ನಿಸಿ ಜೂಜಿನಲ್ಲಿದ್ದಾನೆ. ಇಲ್ಲಿ ಭಗವಂತನ ನಾಮ ‘ದ್ಯೂತ’. ದಿವು ಅಂದರೆ ಕ್ರೀಡೆ. ಸದಾ ಸೃಷ್ಟಿ ಸ್ಥಿತಿ ಸಂಹಾರಗಳ ಕ್ರೀಡೆಯಲ್ಲಿ ನಿರತನಾದ ಭಗವಂತ ‘ದ್ಯೂತ’ ಶಬ್ದ ವಾಚ್ಯ. ಆತ್ಮಬಲವುಳ್ಳವರ ತೇಜಸ್ಸು ಭಗವಂತ. ಜಯಃ ನಾಮಕನಾಗಿ ಗೆಲುವಿನಲ್ಲಿ ಭಗವಂತನಿದ್ದಾನೆ. ಜಗತ್ತಿನ ಎಲ್ಲ ವಿಜಯಗಳ ಪ್ರೇರಕ ಭಗವಂತ.  ಒಂದು ಕಾರ್ಯದಲ್ಲಿ ಉತ್ಸಾಹದಿಂದ ತೊಡಗುವಂತೆ ಮಾಡುವವನು ‘ವ್ಯವಸಾಯ’ ನಾಮಕ  ಭಗವಂತ. ಬಲನಿಯಾಮಕನಾಗಿ ಆತ ಬಲಶಾಲಿಗಳಲ್ಲಿ ‘ಸತ್ವ’ ನಾಮಕನಾಗಿ ಕೂತಿದ್ದಾನೆ.

ವೃಷ್ಣೀನಾಂ ವಾಸುದೇವೋSಸ್ಮಿ ಪಾಂಡವಾನಾಂ ಧನಂಜಯಃ ।
ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ॥೩೭॥

ವೃಷ್ಣೀನಾಮ್  ವಾಸುದೇವಃ ಅಸ್ಮಿ ಪಾಂಡವಾನಾಮ್  ಧನಂಜಯಃ ।
ಮುನೀನಾಮ್ ಅಪಿ ಅಹಮ್  ವ್ಯಾಸಃ ಕವೀನಾಮ್ ಉಶನಾ ಕವಿಃ – ವೃಷ್ಣಿವಂಶದ ರಾಜನ್ಯರಲ್ಲಿ [ವಾಸು=ಎಲ್ಲವನ್ನೂ ಆವರಿಸಿ, ಎಲ್ಲದರೊಳಗೂ ನೆಲೆಸಿರುವ, ದೇವ=ದಿವ್ಯರೂಪನಾದ್ದರಿಂದ] ವಾಸುದೇವನಾಗಿ ಅವತರಿಸಿದ್ದೇನೆ. ಪಾಂಡವರಲ್ಲಿ ಅರ್ಜುನ ನಾನು. [ಸಿರಿಯನ್ನು ಗೆದ್ದವನಾಗಿ ‘ಧನಂಜಯ’ ಎನ್ನಿಸಿ ಅರ್ಜುನನಲ್ಲಿದ್ದೇನೆ.] ಮುನಿಗಳಲ್ಲಿ [ವಿ=ಎಲ್ಲಕ್ಕಿಂತ ವಿಶಿಷ್ಟನಾಗಿ, ಆ=ಎಲ್ಲೆಡೆಯು, ಸಃ =ಅವನೆ ತುಂಬಿರುವುದರಿಂದ]  ವ್ಯಾಸ ನಾನು. ವಿಜ್ಞಾನಿಗಳಲ್ಲಿ ಹಿರಿಯ ವಿದ್ವಾಂಸನಾದ ಶುಕ್ರ ನಾನು. [ಇಚ್ಛಾರೂಪನಾದ್ದರಿಂದ ‘ಉಶನಸ್’ ಎನ್ನಿಸಿ ದೈತ್ಯಗುರು ಶುಕ್ರನಲ್ಲಿದ್ದೇನೆ.]

ಸಾಕ್ಷಾತ್ ವಿಭೂತಿಯನ್ನು ಹೇಳುತ್ತ ಕೃಷ್ಣ ಹೇಳುತ್ತಾನೆ “ವೃಷ್ಣೀನಾಮ್  ವಾಸುದೇವಃ ಅಸ್ಮಿ” ಎಂದು.  ಇಲ್ಲಿ ಭಗವಂತನ ವಿಭೂತಿ ನಾಮ ‘ವಾಸುದೇವಃ’. ಎಲ್ಲೆಡೆ ಇದ್ದರೂ ಕಾಣಿಸದೆ, ಅಪರೋಕ್ಷ ಜ್ಞಾನವನ್ನು ಕರುಣಿಸಿ ಪ್ರತ್ಯಕ್ಷನಾಗುವ ಭಗವಂತ ವಾಸುದೇವಃ. ಪಾಂಡವರಲ್ಲಿ ‘ಧನಂಜಯಃ’ ನಾನು ಎನ್ನುತ್ತಾನೆ ಕೃಷ್ಣ. ಇದು ಏಕದೇಶ ವಿಭೂತಿ. ಅರ್ಜುನನಲ್ಲಿ ಭಗವಂತನ ವಿಶೇಷ ಆವೇಶ ಇತ್ತು. ಆತನಲ್ಲಿ ಭಗವಂತ  ‘ಧನಂಜಯಃ’ ನಾಮಕನಾಗಿ ನಿಂತಿದ್ದ. ಧನಂಜಯಃ ಎನ್ನುವಲ್ಲಿ  ಧನ ಎಂದರೆ ಜ್ಞಾನ.  ಭಗವಂತನ ಅರಿವು, ಅದರಿಂದ ಪಡೆಯುವ ಮೋಕ್ಷ ಶಾಶ್ವತ ಧನ. ಅದನ್ನು ಕೊಡುವ ಭಗವಂತ ಧನಂಜಯಃ. ಮುನಿಗಳಲ್ಲಿ ವ್ಯಾಸ. ಇದು ಭಗವಂತನ ಸಾಕ್ಷಾತ್ ವಿಭೂತಿ. ವ್ಯಾಸರು ವೇದವನ್ನು 1137 ಸಂಹಿತೆಯಾಗಿ ವಿಭಾಗಮಾಡಿ ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾರೆ. ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯ ಸಂಕಲನ ಋಗ್ವೇದ, ಗದ್ಯ ಸಂಕಲನ ಯಜುರ್ವೇದ, ಗಾನಕ್ಕೋಸ್ಕರ ಸಾಮವೇದ, ಅಥರ್ವ ಮುನಿ ಬ್ರಹ್ಮನಿಂದ ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ ವೇದಗಳು ಮೂರು ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಬೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿಗೆ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ) ವಿಂಗಡಿಸಿದರು. ಋಗ್ವೇದದಲ್ಲಿ 24 ಸಂಹಿತೆಗಳಿವೆ; ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. ಒಂದು ಶುಕ್ಲ ಯಜುರ್ವೇದ ಹಾಗು ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ 15 ಸಂಹಿತೆ, ಹಾಗು ಕೃಷ್ಣ ಯಜುರ್ವೇದದಲ್ಲಿ 86 ಸಂಹಿತೆ, ಒಟ್ಟು 101 ಸಂಹಿತೆ. ಸಾಮವೇದದಲ್ಲಿ 1000 ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ  ಹಾಗು ಕೌತುಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ  ಒಟ್ಟು 12  ಶಾಖೆಗಳು. ಹೀಗೆ ವೇದವನ್ನು  1137 (24+101+12+1000) ಸಂಹಿತೆಗಳಾಗಿ ವಿಂಗಡಿಸಿ ವಿಸ್ತಾರ ಮಾಡಿದ ಮುನಿ ವ್ಯಾಸ. ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟ, ಎಲ್ಲೆಡೆ ತುಂಬಿರುವ ಭಗವಂತ ವ್ಯಾಸಃ. ದೈತ್ಯ ಗುರು ಶುಕ್ರಾಚಾರ್ಯರಲ್ಲಿ ‘ಉಶನ’ ನಾಮಕನಾಗಿ ಭಗವಂತ ನಿಂತ. ಈ ಕಾರಣದಿಂದ ಗ್ರಹಗಳಲ್ಲಿ ಶುಕ್ರ ಒಬ್ಬನಾಗಿ ಸ್ಥಾನ ಪಡೆದ. ತನ್ನ ಇಚ್ಛಾಮಾತ್ರದಿಂದಲೇ ಎಲ್ಲ ಕಾರ್ಯವನ್ನು ಮಾಡುವ ಭಗವಂತ ‘ಉಶನ’.                      

ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ ।
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್ ॥೩೮॥

ದಂಡಃ ದಮಯತಾಮ್ ಅಸ್ಮಿ ನೀತಿಃ ಅಸ್ಮಿ ಜಿಗೀಷತಾಮ್ ।
ಮೌನಮ್  ಚ ಏವ ಅಸ್ಮಿ ಗುಹ್ಯಾನಾಮ್ ಜ್ಞಾನಮ್ ಜ್ಞಾನವತಾಮ್ ಅಹಮ್  --ಬಗ್ಗುಬಡಿಯುವವರ ದಂಡನೀತಿ ನಾನು. [ದಂಡಿಸುವವನಾದ್ದರಿಂದ ‘ದಂಡ’ ಎನ್ನಿಸಿ ದಂಡನೀತಿಯಲ್ಲಿದ್ದೇನೆ.] ಗೆಲ್ಲಬಯಸುವವರ ನಯಗಾರಿಕೆ ನಾನು. [ಗೆಲುವಿನತ್ತ ಕರೆದೊಯ್ಯುವುದರಿಂದ ‘ನೀತಿ’ ಎನ್ನಿಸಿ ನಯಗಾರಿಕೆಯಲ್ಲಿದ್ದೇನೆ.] ಗುಟ್ಟುಗಳಲ್ಲಿ ಮೌನ ನಾನು. [ಮುನಿಗಳಿಂದ ಸ್ತುತನಾಗಿ ‘ಮೌನ’ ಎನ್ನಿಸಿ ಮೌನದಲ್ಲಿದ್ದೇನೆ.] ಬಲ್ಲವರ ತಿಳಿವು ನಾನು. [ಅರಿವಿನ ಮೂರ್ತಿಯಾದ್ದರಿಂದ ‘ಜ್ಞಾನ’ ಎನ್ನಿಸಿ ತಿಳಿವಿನಲ್ಲಿದ್ದೇನೆ.]

“ದುಷ್ಟರನ್ನು  ದಮನ ಮಾಡುವ ದಮನಶಕ್ತಿ ನಾನು” ಎನ್ನುತ್ತಾನೆ ಕೃಷ್ಣ. ಈ ದಮನಶಕ್ತಿಯಾಗಿ ವೀರರಲ್ಲಿ ಭಗವಂತ ಕೂತಿದ್ದಾನೆ. ದಂಡ ಎಂದರೆ ಶಿಕ್ಷೆ. ಸಂಸ್ಕೃತದಲ್ಲಿ ಶಿಕ್ಷೆ ಎನ್ನುವುದಕ್ಕೆ ಶಿಕ್ಷಣ ಎನ್ನುವ ಅರ್ಥವಿದೆ. ಆದರೆ ಇಲ್ಲಿ ದಂಡ ಎಂದರೆ ದಂಡಿಸುವುದು(Punishment). ತಪ್ಪು ಮಾಡಿದವರಿಗೆ ದೇವರ ರಾಜ್ಯದಲ್ಲಿ ಕ್ಷಮೆ ಇಲ್ಲ. ನಾವು ಮಾಡಿದ ಕರ್ಮವನ್ನು ನಾವು ಅನುಭವಿಸಲೇಬೇಕು. ತಪ್ಪು ಮಾಡಿದವರಿಗೆ ನಿರ್ದಾಕ್ಷಿಣ್ಯ ಹಾಗು ನಿಷ್ಠುರವಾದ ದಂಡನೆಯನ್ನು ಕೊಡುವ ಭಗವಂತ ‘ದಂಡಃ’. ಗೆಲ್ಲುವ ಶಕ್ತಿಯಾಗಿ ಎಲ್ಲರನ್ನು ನಿಯಂತ್ರಣ ಮಾಡುವ ಭಗವಂತ ‘ನೀತಿಃ’. ಮನನಶಕ್ತಿಯಾಗಿ ನಿಂತ ಭಗವಂತ ‘ಮೌನಃ’. ಬಲ್ಲವರ ತಿಳಿವಾಗಿರುವ ಭಗವಂತ ‘ಜ್ಞಾನಃ’.

ಮೂಲಭೂತವಾಗಿ ವಿಭೂತಿಗಳ ವಿಸ್ತಾರ ಇಲ್ಲಿಗೆ ಮುಗಿಯಿತು. ಮುಂದೆ ವಿಭೂತಿಯ ಉಪಸಂಹಾರವನ್ನು ಈ ಅಧ್ಯಾಯದ ಉಳಿದ ಭಾಗದಲ್ಲಿ ನೋಡೋಣ.     

Thursday, September 22, 2011

Bhagavad Geeta Kannada Chapter-10 Shloka 34-35


ಮೃತ್ಯುಃ ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್ ।
ಕೀರ್ತಿಃ ಶ್ರೀರ್ವಾಕ್ ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ॥೩೪॥

ಮೃತ್ಯುಃ ಸರ್ವ ಹರಃ ಚ ಅಹಮ್ ಉದ್ಭವಃ ಚ  ಭವಿಷ್ಯತಾಮ್ ।
ಕೀರ್ತಿಃ ಶ್ರೀಃ ವಾಕ್ ಚ ನಾರೀಣಾಂ ಸ್ಮೃತಿಃ ಮೇಧಾ ಧೃತಿಃ ಕ್ಷಮಾ –ಎಲ್ಲವನ್ನೂ ಕಬಳಿಸುವ ಮೃತ್ಯುದೇವತೆ [ಸಾಯಿಸುವವನಾದ್ದರಿಂದ ‘ಮೃತ್ಯು’ನಾಮಕನಾಗಿ, ಯಮನ ಪರಿವಾರ ದೇವತೆಯಾದ ಮೃತ್ಯುವಿನಲ್ಲಿದ್ದು ಅವನಿಗೆ ಎಲ್ಲವನ್ನು ಕಬಳಿಸುವ ಶಕ್ತಿಯಿತ್ತವನು] ನಾನು. ಮುಂದೆ ಆಗುವವರನ್ನು ಹುಟ್ಟಿಸುವವನೂ ನಾನು. ಹೆಂಗಸರಲ್ಲಿ ಕೀರ್ತಿಯ ದೇವತೆ ನಾನು;  ಶ್ರೀದೇವಿ ನಾನು; ವಾಗ್ದೇವಿ ನಾನು. ಸ್ಮರಣಶಕ್ತಿಯ ದೇವತೆ ನಾನು; ಧಾರಣಶಕ್ತಿಯ ದೇವತೆ ನಾನು; ಸಹನೆಯ ದೇವತೆ ನಾನು; ಕ್ಷಮಾ ದೇವಿ ನಾನು.[ಕೀರ್ತನೀಯವಾಗಿ ‘ಕೀರ್ತಿ’ ಎನ್ನಿಸಿ ಕೀರ್ತಿದೇವಿಯಲ್ಲಿದ್ದೇನೆ; ಆಶ್ರಯನಾಗಿ ‘ಶ್ರೀ’ ಎನ್ನಿಸಿ ಶ್ರೀದೇವಿಯಲ್ಲಿದ್ದೇನೆ; ವಕ್ತಾರನಾಗಿ ‘ವಾಕ್’ ಎನ್ನಿಸಿ ವಾಗ್ದೇವಿಯಲ್ಲಿದ್ದೇನೆ; ಸ್ಮರಣೀಯನಾಗಿ ‘ಸ್ಮೃತಿ’ ಎನ್ನಿಸಿ ಸ್ಮೃತಿದೇವಿಯಲ್ಲಿದ್ದೇನೆ; ಅರಿವಿನ ಮೂರ್ತಿಯಾಗಿ ‘ಧೃತಿ’ ಎನ್ನಿಸಿ ಧೃತಿದೇವಿಯಲ್ಲಿದ್ದೇನೆ; ತಪ್ಪುಗಳನ್ನು ಮನ್ನಿಸುವವನಾಗಿ ‘ಕ್ಷಮಾ’ ಎನ್ನಿಸಿ ಕ್ಷಮಾದೇವಿಯಲ್ಲಿದ್ದೇನೆ.]

ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನು ಕಬಳಿಸುವ ಮೃತ್ಯುದೇವತೆ ಕೂಡಾ ಹೌದು. ಪ್ರಳಯಕಾಲ ನಂತರ ಸೃಷ್ಟಿಯನ್ನು ಪುನಃ ನಿರ್ಮಾಣ ಮಾಡುವವನೂ ಅವನೆ. ಸ್ತ್ರೀ ರೂಪದಲ್ಲಿನ  ತನ್ನ ವಿಭೂತಿಯನ್ನು ಹೇಳುತ್ತ ಕೃಷ್ಣ ಇಲ್ಲಿ ಮುಖ್ಯವಾಗಿ ಲಕ್ಷ್ಮಿ, ಸರಸ್ವತಿ ಮತ್ತು ಭಾರತಿಯರಲ್ಲಿ ತನ್ನ ವಿಭೂತಿಯನ್ನು ವಿವರಿಸಿದ್ದಾನೆ. ಕೀರ್ತಿ, ಅದೃಷ್ಟ, ಸುಂದರ ಮಾತು, ಸ್ಮರಣಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ -ಇವುಗಳ ಅಭಿಮಾನಿ ದೇವತೆಯರು ಮುಖ್ಯವಾಗಿ ಲಕ್ಷ್ಮಿ, ಸರಸ್ವತಿ  ಮತ್ತು ಭಾರತಿಯರು. ಇವರಲ್ಲಿ ಸ್ತ್ರೀ ರೂಪ ವಿಭೂತಿಯಾಗಿ  ಭಗವಂತ ನಿಂತಿದ್ದಾನೆ.            

ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರಿ ಛಂದಸಾಮಹಮ್ ।
ಮಾಸಾನಾಂ ಮಾರ್ಗಶೀರ್ಷೋSಹಮೃತೂನಾಂ ಕುಸುಮಾಕರಃ ॥೩೫॥

ಬೃಹತ್ಸಾಮ ತಥಾ ಸಾಮ್ನಾಮ್  ಗಾಯತ್ರಿ ಛಂದಸಾಮ್ ಅಹಮ್ ।
ಮಾಸಾನಾಮ್  ಮಾರ್ಗಶೀರ್ಷಃ ಅಹಮ್ ಋತೂನಾಮ್  ಕುಸುಮ ಆಕರಃ –ಸಾಮದ ಗಾನಗಳಲ್ಲಿ ಬೃಹತ್ ಸಾಮವೆಂಬ ಗಾನ ನಾನು. [ಬೃಹತ್ =ಹಿರಿದಾದ, ಸ=ಸಾರವಸ್ತು ಮತ್ತು, ಅಮ=ಅರಿವಿಗೆಟುಕದವನಾದ್ದರಿಂದ ‘ಬೃಹತ್ಸಾಮ’ ಎನ್ನಿಸಿ ಬೃಹತ್ಸಾಮವೆಂಬ ಗಾನದಲ್ಲಿದ್ದೇನೆ.] ಛಂದಸ್ಸುಗಳಲ್ಲಿ ಗಾಯತ್ರಿ ನಾನು. [ಗಾಯ =ಗಾಯಕರನ್ನು ತ್ರಿ=ಸಲಹುವುದರಿಂದ ‘ಗಾಯತ್ರಿ’ ಎನ್ನಿಸಿ ಗಾಯತ್ರಿ ಛಂದಸ್ಸಿನಲ್ಲಿದ್ದೇನೆ.] ತಿಂಗಳಲ್ಲಿ ಮಾರ್ಗಶಿರ ನಾನು. [ದಾರಿಯ ಕೊನೆಯಲ್ಲಿರುವುದರಿಂದ ‘ಮಾರ್ಗಶೀರ್ಷ’ ಎನ್ನಿಸಿ ಮಾರ್ಗಶಿರಮಾಸದಲ್ಲಿದ್ದೇನೆ.] ಋತುಗಳಲ್ಲಿ ವಸಂತ ನಾನು. [ಕು=ಕೆಟ್ಟ, ಸು= ಒಳ್ಳೆಯ, ಮಾ=ಅರಿವನ್ನು, ಕರ=ನೀಡುವುದರಿಂದ ‘ಕುಸುಮಾಕರ’ ಎನ್ನಿಸಿ ವಸಂತ ಋತುವಿನಲ್ಲಿದ್ದೇನೆ.]

ಸಾಮಗಾನದಲ್ಲಿ ಅನೇಕ ವಿಧ. ಸಪ್ತ ಸ್ವರವನ್ನು ಬಳಸಿ ಹಾಡುವುದು ಸಾಮವೇದದಲ್ಲಿ ಮಾತ್ರ. ಇದು ಋಗ್ವೇದ ಯಜುರ್ವೇದದಲ್ಲಿ ಇಲ್ಲ. ಎಲ್ಲ ಸಾಮಗಳಲ್ಲಿ ಸಪ್ತಸ್ವರದ ಬಳಕೆ ಇಲ್ಲ. ಈ ರೀತಿ ಸಪ್ತಸ್ವರವಿರುವ ಸಾಮದಲ್ಲಿ “ಬೃಹತ್ಸಾಮವೆಂಬ ಗಾನ ನಾನು” ಎನ್ನುತ್ತಾನೆ ಕೃಷ್ಣ. ಇಲ್ಲಿ ಬಂದಿರುವ ಭಗವಂತನ ನಾಮ ‘ಬೃಹತ್ಸಾಮಃ’ – ಹಿರಿದಾದ, ಸಾರಭೂತನಾದ  ಮತ್ತು ನಮ್ಮ ಅರಿವಿಗೆಟುಕದೆ ಅಮಿತವಾಗಿರುವ ಭಗವಂತ ‘ಬೃಹತ್ಸಾಮಃ’
ಪದ್ಯದ ರೂಪದಲ್ಲಿ ಒಂದು ಅಪೂರ್ವವಾದ ಅರ್ಥವನ್ನು, ಅಧ್ಯಾತ್ಮದ ಸಂದೇಶವನ್ನು ತುಂಬಿಡುವಂತಾದ್ದು-ಛಂದಸ್ಸು. ಇದು ನಮ್ಮ ಅಭಿಪ್ರಾಯವನ್ನೂ ಲಯಬದ್ಧವಾಗಿ ವ್ಯಕ್ತಪಡಿಸುವ ವಿಧಾನ. ಛಂದಸ್ಸಿನಲ್ಲಿ ಪ್ರಧಾನವಾಗಿ ಏಳು ಛಂದಸ್ಸುಗಳಿವೆ. 24 ಅಕ್ಷರದ ಗಾಯತ್ರಿ,  28 ಅಕ್ಷರದ ಉಷ್ಣಿಕ್,  32 ಅಕ್ಷರದ ಅನುಷ್ಪುಪ್, 36 ಅಕ್ಷರದ ಬೃಹತೀ, 40 ಅಕ್ಷರದ ಪಂಕ್ತಿ, 44 ಅಕ್ಷರದ ತ್ರಿಷ್ಪುಪ್ ಮತ್ತು  48 ಅಕ್ಷರದ ಜಗತೀ.  ಈ ಛಂದಸ್ಸುಗಳಲ್ಲಿ ಭಗವಂತನ ವಿಶೇಷ ವಿಭೂತಿ ಇರುವ  ಛಂದಸ್ಸು ‘ಗಾಯತ್ರಿ’. ಇದು ಭಗವಂತನ ಹೆಸರು ಕೂಡಾ ಹೌದು. ‘ಗಾಯತಂ ತ್ರಾಯತೆ ಇತಿ ಗಾಯತ್ರಿಃ’. ಯಾರು ಭಗವಂತನನ್ನು ಈ ಮಂತ್ರದಿಂದ ಸ್ತೋತ್ರ ಮಾಡುತ್ತಾರೋ ಅವರನ್ನು ಆತ ರಕ್ಷಣೆ ಮಾಡುತ್ತಾನೆ. ಗಾಯತ್ರಿ ಛಂದಸ್ಸು ಏಳು ಛಂದಸ್ಸುಗಳಲ್ಲಿ ಮೊದಲನೆಯದು. ಎಂಟು ಅಕ್ಷರದ ಮೂರು ಪಾದಗಳುಳ್ಳ ಗಾಯತ್ರಿ ಎಲ್ಲದರ ಪಂಚಾಂಗ(Foundation)ದಂತಿದೆ. ಋಗ್ವೇದದಲ್ಲಿನ ಹೆಚ್ಚಿನ ಮಂತ್ರಗಳು ಗಾಯತ್ರಿ ಛಂದಸ್ಸಿನಲ್ಲಿದೆ. ಸಮಸ್ತ ವೇದಗಳ ‘ವೇದಮಾತ’ ಎನ್ನಿಸಿಕೊಂಡಿರುವ ಗಾಯತ್ರಿ ಮಂತ್ರವಿರುವುದು ‘ಗಾಯತ್ರಿ’ ಛಂದಸ್ಸಿನಲ್ಲಿ. ಹೀಗೆ ಗಾಯತ್ರಿ ಇತರ ಛಂದಸ್ಸಿಗೆ ಮಾತೃಸ್ಥಾನೀಯವಾಗಿದೆ. ಗಾಯತ್ರಿ  ಅಧ್ಯಾತ್ಮದ ಮೂಲಭೂತವಾದ ಮುಖವನ್ನು ಹೊಂದಿರತಕ್ಕಂತಹ  ಮಂತ್ರ. ಸೂರ್ಯನಲ್ಲಿರುವ ಸೌರಶಕ್ತಿಯನ್ನು ನಮಗೆ ಹರಿಸುತ್ತ, ಸೌರಮಂಡಲದಲ್ಲಿರುವ ನಮ್ಮ ಜೀವಪ್ರಧಾನವಾದ ಭಗವಂತನ ಸ್ತೋತ್ರ ಮಾಡುವುದು ಗಾಯತ್ರಿ. ‘ಇಡೀ ಬ್ರಹ್ಮಾಂಡದ ನಿಯಾಮಕನಾಗಿದ್ದು,  ಸೌರ ಶಕ್ತಿಯಿಂದ ಬಂದು, ನಮ್ಮ ಆತ್ಮದ ಒಳಗೆ ನಮ್ಮ ಹೃದಯ ಕಮಲದಲ್ಲಿ ‘ಧೀ’ ಶಕ್ತಿಯನ್ನು ಪ್ರೇರಣೆ ಮಾಡುವಂಥ ಶಕ್ತಿ ಭಗವಂತ’ ಎನ್ನುವ ಸಮಷ್ಟಿ ಚಿಂತನ ಇರುವ ಮಂತ್ರ ಗಾಯತ್ರಿ. ಗಾಯತ್ರಿ ವಿಶಿಷ್ಟವಾಗಿ(Exclusively) ವೈದಿಕ ಛಂದಸ್ಸಾಗಿ ಬಳಕೆಯಾಗಿದೆ. ಲೌಕಿಕವಾಗಿ ಇದರ ಬಳಕೆ ಇಲ್ಲ. ಗಾಯತ್ರಿಗೆ ಈ ವಿಶಿಷ್ಠ ಸ್ಥಾನ ಭಗವಂತನ ವಿಶೇಷ ವಿಭೂತಿಯಿಂದ ಬಂತು.
[ಇಲ್ಲಿ ಒಂದು ವಿಷಯವನ್ನು ನಾವು ತಿಳಿದಿರಬೇಕು: ಐತರೇಯ ಉಪನಿಷತ್ತಿನಲ್ಲಿ ಬೃಹತೀ ಛಂದಸ್ಸನ್ನು ಶ್ರೇಷ್ಠ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನೆಂದರೆ ಅಭಿಮಾನಿ ದೇವತಾ ತಾರತಮ್ಯದಲ್ಲಿ ನೋಡಿದಾಗ ಗಾಯತ್ರಿ ಅಭಿಮಾನಿ ದೇವತೆಯರು ಲಕ್ಷ್ಮಿ, ಸರಸ್ವತಿ, ಭಾರತಿ, ಗರುಡ ಮತ್ತು ಅಗ್ನಿಪತ್ನಿ ಸ್ವಾಹ. ಬೃಹತೀ ಛಂದಸ್ಸನ್ನು ನೋಡಿದಾಗ ಅಲ್ಲಿ ಲಕ್ಷ್ಮಿ, ಸರಸ್ವತಿ, ಭಾರತಿ, ಗರುಡ ಮತ್ತು ಬೃಹಸ್ಪತಿಪತ್ನಿ ತಾರ ಅಭಿಮಾನಿ ದೇವತೆಗಳು. ಅಗ್ನಿಪತ್ನಿ ಸ್ವಾಹಕ್ಕಿಂತ ತಾರ ದೇವತಾ ತಾರತಮ್ಯದಲ್ಲಿ ಎತ್ತರದಲ್ಲಿರುವುದರಿಂದ, ದೇವತಾ ತಾರತಮ್ಯವನ್ನು ಮುಖ್ಯವಾಗಿಟ್ಟುಕೊಂಡು ಅಲ್ಲಿ ಹಾಗೆ ಹೇಳಿದ್ದಾರೆ. ಈ ವಿಚಾರ ತಿಳಿದಾಗ ಇಲ್ಲಿ ಗೊಂದಲವಿಲ್ಲ.]
“ನಾನು ಮಾಸಗಳಲ್ಲಿ ಮಾರ್ಗಶಿರ, ಋತುಗಳಲ್ಲಿ ವಸಂತ” ಎನ್ನುತ್ತಾನೆ ಕೃಷ್ಣ. ಮಾರ್ಗಶಿರಮಾಸ-ಮಾಸಗಳಲ್ಲಿ ಮೊದಲನೇ ಮಾಸ; ಕಾರ್ತಿಕ ಕೊನೆಯ ಮಾಸ. ಈ ಕಾರಣಕ್ಕಾಗಿ ಕಾರ್ತಿಕ ಮಾಸದಲ್ಲಿ (ಮಾರ್ಗಶಿರ ಮಾಸದ   ಮೊದಲು) ದೀಪಾವಳಿಯನ್ನು ಆಚರಿಸುತ್ತಾರೆ. ಒಂದು ವರ್ಷವನ್ನು ಕೃತಜ್ಞತೆಯಿಂದ ಕಳುಹಿಸಿಕೊಡುವುದು ದೀಪಾವಳಿಯ ಮಹತ್ವ. ಮಾರ್ಗಶಿರಕ್ಕೆ ಆಗ್ರ-ಹಾಯಣ ಎನ್ನುತ್ತಾರೆ. ಹಾಯಣ ಎಂದರೆ ಮಾಸ. ಆಗ್ರ ಅಂದರೆ ಮೊದಲನೆಯದು. ನಾವು ಗೀತಾಜಯಂತಿಯನ್ನು ಈ ಮಾಸದಲ್ಲಿ ಆಚರಿಸುತ್ತೇವೆ. ಇದರಿಂದ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಮಾಸ ಕೂಡ ಮಾರ್ಗಶಿರ ಎನ್ನಬಹುದು(ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ). ಈ ಮಾಸದಲ್ಲಿ ವಿಭೂತಿಯಾಗಿ ಕುಳಿತಿರುವ ಭಗವಂತನ ನಾಮ ‘ಮಾರ್ಗಶೀರ್ಷ’. ಸಾಧನಾ ಮಾರ್ಗದಲ್ಲಿ ನಾವು ಸಾಗಬೇಕಾದ ಮಾರ್ಗದ ತುತ್ತತುದಿಯಾದ ಆ ಭಗವಂತ ‘ಮಾರ್ಗಶೀರ್ಷ’. ಹೂ ಅರಳಿ ಗಿಡಮರಗಳು ಚಿಗುರುವ ವಸಂತ ಋತುವಿನಲ್ಲಿ ‘ಕುಸುಮಾಕರನಾಗಿ’ ನಾನಿದ್ದೇನೆ ಎನ್ನುತ್ತಾನೆ ಕೃಷ್ಣ. ಕೆಟ್ಟವರಿಗೆ ಕುಸ್ಸಿತವಾದ ಮತ್ತು ಸಜ್ಜನರಿಗೆ ಉತ್ತಮ ಜ್ಞಾನವನ್ನು ಕೊಡುವ ಭಗವಂತ ‘ಕುಸುಮಾಕರಃ’.         

Tuesday, September 20, 2011

Bhagavad Geeta Kannada Chapter-10 Shloka 32-33


ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ ।
ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್      ॥೩೨॥

ಸರ್ಗಾಣಾಮ್ ಆದಿಃ ಅಂತಃ ಚ ಮಧ್ಯಮ್ ಚ ಏವಅಹಮ್ ಅರ್ಜುನ ।
ಅಧ್ಯಾತ್ಮವಿದ್ಯಾ ವಿದ್ಯಾನಾಮ್ ವಾದಃ ಪ್ರವದತಾಮ್ ಅಹಮ್ಓ ಅರ್ಜುನ, ಜೀವಿಗಳ ಹುಟ್ಟಿಗೆ, ಸಾವಿಗೆ, ಇರವಿಗೆ ಕಾರಣ ನಾನು. ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನು. [ಜೀವರಿಗೆ ಒಡೆಯನಾದ್ದರಿಂದ ‘ಅಧ್ಯಾತ್ಮ’ ಎನ್ನಿಸಿ, ಜ್ಞಾನರೂಪನಾದ್ದರಿಂದ ‘ವಿದ್ಯಾ’ ಎನ್ನಿಸಿ ಅಧ್ಯಾತ್ಮ ವಿದ್ಯೆಯಲ್ಲಿದ್ದೇನೆ.] ಚರ್ಚಿಸುವವರ ಚರ್ಚೆಯಲ್ಲಿ [ತತ್ವದ ತಿಳಿವಿಗಾಗಿ ನಡೆಸುವ] ವಾದ ನಾನು. [ಎಲ್ಲ ನಾಮಗಳಿಂದ ವಾಚ್ಯನಾಗಿ ‘ವಾದ’ ಎನ್ನಿಸಿ ವಾದದಲ್ಲಿದ್ದೇನೆ.]

ಪ್ರಪಂಚದಲ್ಲಿ ಇರುವ ಪ್ರತಿಯೊಂದು ವಸ್ತುವಿನಲ್ಲಿಯೂ ಭಗವಂತನ ವಿಭೂತಿ ಅಡಗಿದೆ. ನಮಗೆ ಮೇಲ್ನೋಟಕ್ಕೆ ವ್ಯರ್ಥವೆಂದು ಕಾಣುವ ವಸ್ತುವಿನಲ್ಲೂ ಕೂಡಾ ಇನ್ನೊಂದು ವಸ್ತುವಿನಲ್ಲಿರದ ಒಂದು ವಿಶಿಷ್ಠಗುಣ(Exclusive Quality) ಅಡಗಿರುತ್ತದೆ. ಆದ್ದರಿಂದ ಒಂದು ಹುಲ್ಲುಕಡ್ಡಿಯಿಂದ ಹಿಡಿದು ಚತುರ್ಮುಖ ಬ್ರಹ್ಮನವರೆಗೆ ಎಲ್ಲವೂ ಭಗವಂತನ ವಿಭೂತಿ. ಇಲ್ಲಿ ಕೃಷ್ಣ ಕೇವಲ ಆ ಗುಂಪಿನಲ್ಲಿ ವಿಶಿಷ್ಠಭೂತಿಯನ್ನು ಹೇಳಿದ್ದಾನೆ ಅಷ್ಟೆ. ಜೀವ ಹುಟ್ಟುವ ಮೊದಲು ಇದ್ದವ, ಜೀವದ ಇರವಿಗೆ ಕಾರಣನಾದವ, ಕೊನೆಗೆ ಸಂಹಾರಶಕ್ತಿಯಾಗಿ ನಿಲ್ಲುವವ ಆ ಭಗವಂತ. ಹೀಗೆ “ಹುಟ್ಟುವಾಗ, ಇರುವಾಗ ಮತ್ತು ಅಂತದಲ್ಲೂ ನಾನಿದ್ದೇನೆ” ಎನ್ನುತ್ತಾನೆ ಕೃಷ್ಣ. “ಈ ವಿಷಯ-ಜ್ಞಾನಾರ್ಜನ ಮಾಡಿದ, ಸಾತ್ವಿಕನಾದ, ನಿನಗೆ ತಿಳಿದೇ ಇದೆ” ಎನ್ನುವ ಅರ್ಥದಲ್ಲಿ ಕೃಷ್ಣ ಇಲ್ಲಿ ಪಾರ್ಥನನ್ನು  ‘ಅರ್ಜುನ’ ಎಂದು ವಿಶೇಷವಾಗಿ ಸಂಬೋಧಿಸಿದ್ದಾನೆ.
“ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನು” ಎನ್ನುತ್ತಾನೆ ಕೃಷ್ಣ. ಭಗವಂತನನ್ನು ಸ್ಪರ್ಶಮಾಡುವ ಅಧ್ಯಾತ್ಮ ವಿದ್ಯೆಯಲ್ಲಿ ಪರಮಾತ್ಮ ತುಂಬಿದ್ದಾನೆ. ಎಲ್ಲ ಆತ್ಮಗಳಿಗೆ ಹಿರಿದಾದ ಭಗವಂತ ಅಧಿಕ-ಆತ್ಮ(ಅಧ್ಯಾತ್ಮ). ಅಧ್ಯಾತ್ಮ ವಿದ್ಯೆಯನ್ನು ಪಡೆಯಬೇಕಾದರೆ ನಾವು ಇನ್ನೊಬ್ಬರೊಂದಿಗೆ ಸಂವಾದ ಮಾಡಬೇಕು. ಇದು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ, ಜ್ಞಾನ ದಾಹವನ್ನು ಇಂಗಿಸಿಕೊಳ್ಳುವುದಕ್ಕಾಗಿ ಮಾಡುವ ಶಾಸ್ತ್ರೀಯ ಚರ್ಚೆ. ಇಂತಹ ಚರ್ಚೆಯಲ್ಲಿ ‘ವಾದಃ' ವಾಚ್ಯನಾಗಿ ಭಗವಂತನಿರುತ್ತಾನೆ. ಎಲ್ಲ ನಾಮಗಳಿಂದ ವಾಚ್ಯನಾದ ಭಗವಂತ ವಾದಃ.  

ಅಕ್ಷರಾಣಾಮಕಾರೋಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।
ಅಹಮೇವಾಕ್ಷಯಃ ಕಾಲೋ ಧಾತಾSಹಂ ವಿಶ್ವತೋಮುಖಃ   ॥೩೩॥

ಅಕ್ಷರಾಣಾಮ್ ಅಕಾರಃ ಅಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।
ಅಹಮ್ ಏವ ಅಕ್ಷಯಃ ಕಾಲಃ ಧಾತಾ ಅಹಮ್  ವಿಶ್ವತೋಮುಖಃ –ಅಕ್ಷರಗಳಲ್ಲಿ ಮೊದಲ ಅಕಾರ ನಾನು. [‘ಅ’ ಎಂದು ಕರೆಸಿಕೊಂಡು, ‘ಅಕಾರ’ ಎನ್ನಿಸಿ  ಅ-ಕಾರದಿಂದ ವಾಚ್ಯನಾಗಿದ್ದೇನೆ.] ಸಮಾಸಗಳ ಗುಂಪಿನಲ್ಲಿ ದ್ವಂದ್ವ ಸಮಾಸ ನಾನು. [ಎರಡು ರೂಪಗಳಿಂದ ಒಳಗೂ ಹೊರಗೂ ಇರುವುದರಿಂದ ‘ದ್ವಂದ್ವ’ ಎನ್ನಿಸಿ ದ್ವಂದ್ವ ಸಮಾಸದಲ್ಲಿದ್ದೇನೆ.] ಅಳಿವಿರದ ನಾನೆ [ಕಾಲದಲ್ಲಿದ್ದು] ಕಬಳಿಸುವವನು. ಎಲ್ಲೆಡೆ ತುಂಬಿದ್ದು ಎಲ್ಲವನ್ನು ಸಲಹುವವನೂ ನಾನೆ.

ಹಿಂದೆ ಶಬ್ದಗಳಲ್ಲಿ ಓಂಕಾರವನ್ನು ಹೇಳಿದ್ದ ಕೃಷ್ಣ, ಇಲ್ಲಿ ಅಕ್ಷರದಲ್ಲಿ ತನ್ನ ವಿಭೂತಿಯನ್ನು ಹೇಳುತ್ತ ಹೇಳುತ್ತಾನೆ: “ಅಕ್ಷರಾಣಾಮಕಾರೋಸ್ಮಿ” ಎಂದು. ‘ಅ’ ಪೂರ್ತಿಯಾಗಿ ಭಗವಂತನ ಎಲ್ಲ ಗುಣಗಳನ್ನೂ ಹೇಳುವ ವಿಶಿಷ್ಠ ಅಕ್ಷರ. ಅ- ಅಂದರೆ ‘ಅಲ್ಲ’. ಭಗವಂತ ‘ಅಲ್ಲ’. ಅಂದರೆ ನಮಗೆ ತಿಳಿದಿರುವ ಯಾವ ವಸ್ತುವೂ ಅವನಲ್ಲ. ಆತ ಪ್ರಪಂಚದಿಂದ ವಿಲಕ್ಷಣ. ಇಂತಹ ಭಗವಂತ ‘ಇಲ್ಲ’. ಅಂದರೆ ಆತನಲ್ಲಿ ಯಾವ ದೋಷವೂ ಇಲ್ಲ. ಆತ ಸರ್ವಗುಣಪೂರ್ಣ. ಹೀಗೆ ಸರ್ವವಿಲಕ್ಷಣ, ಸರ್ವದೋಷದೂರ, ಸರ್ವಗುಣಪೂರ್ಣ ಭಗವಂತ ಅ-ಕಾರವಾಚ್ಯನಾಗಿ ‘ಅ’ಕಾರದಲ್ಲಿ ತುಂಬಿದ್ದಾನೆ.
ಅಕ್ಷರದ ನಂತರ ಸಮಾಸಗಳ ಬಗ್ಗೆ ಹೇಳುತ್ತ ಕೃಷ್ಣ ಹೇಳುತ್ತಾನೆ: “ದ್ವಂದ್ವಃ ಸಾಮಾಸಿಕಸ್ಯ” ಎಂದು.  ನಮಗೆ ತಿಳಿದಂತೆ ಯಾವುದೇ ಸಮಾಸವಾಗಬೇಕಾದರೆ ಅಲ್ಲಿ ಎರಡು ಶಬ್ದವಿರಬೇಕು (ಅಥವಾ ಒಂದು ಶಬ್ದ ಮತ್ತು ಒಂದು ಪ್ರತ್ಯಯವಿರಬೇಕು). ಇತರ ಎಲ್ಲಾ ಸಮಾಸಗಳಲ್ಲಿ ಒಂದು ಪದ, ಅಥವಾ ಎರಡೂ ಪದ(ಬಹುವ್ರೀಹಿ)  ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಳ್ಳಬಹುದು. ಆದರೆ ದ್ವಂದ್ವ ಸಮಾಸದಲ್ಲಿ ಎರಡೂ ಪದಗಳು ಮುಖ್ಯ. ಉಭಯಪದ ಪ್ರಧಾನ ಸಮಾಸವಾದ ದ್ವಂದ್ವ ಸಮಾಸದಲ್ಲಿ ಭಗವಂತ ದ್ವಂದ್ವಃ ನಾಮಕನಾಗಿ ತುಂಬಿದ್ದಾನೆ. ಎರಡು ರೂಪದಿಂದ ನಮ್ಮ ಒಳಗೂ-ಹೊರಗೂ ತುಂಬಿರುವ ಭಗವಂತ ದ್ವಂದ್ವಃ.
ಎಲ್ಲವನ್ನು ಸಂಹಾರ ಮಾಡುವ ಕಾಲಪುರುಷ ಭಗವಂತ, ಎಲ್ಲವನ್ನು ಧಾರಣೆ ಮಾಡಿ, ಪೋಷಣೆ ಮಾಡುವ ‘ಧಾತ’. ಇಂತಹ ಭಗವಂತ ವಿಶ್ವತೋಮುಖಃ. ಆತ ಎಲ್ಲೆಡೆ ತುಂಬಿದ್ದಾನೆ. ಆತನಿಲ್ಲದ ತಾಣವಿಲ್ಲ. ಆತ ಕಾಣದ ಎಡೆಯಿಲ್ಲ.

Monday, September 19, 2011

Bhagavad geeta Kannada Chapter-10 Shloka 30-31


ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್     ।
ಮೃಗಾಣಾಂ ಚ ಮೃಗೇಂದ್ರೋSಹಂ ವೈನತೇಯಶ್ಚ ಪಕ್ಷಿಣಾಮ್ ॥೩೦॥

ಪ್ರಹ್ಲಾದಃ ಚ ಅಸ್ಮಿ ದೈತ್ಯಾನಾಮ್  ಕಾಲಃ ಕಲಯತಾಮ್ ಅಹಮ್     ।
ಮೃಗಾಣಾಮ್  ಚ ಮೃಗೇಂದ್ರಃ ಅಹಮ್  ವೈನತೇಯಃ ಚ  ಪಕ್ಷಿಣಾಮ್ –ದಿತಿಯ ವಂಶದವರಲ್ಲಿ ಹಿರಿಯನಾದ ಪ್ರಹ್ಲಾದ ನಾನು [ಹಿರಿಯ ಆನಂದದಿಂದ ‘ಪ್ರಹ್ಲಾದ’ ಎನ್ನಿಸಿ ಪ್ರಹ್ಲಾದನಲ್ಲಿದ್ದೇನೆ.] ಲೆಕ್ಕಿಗರಲ್ಲಿ ಕಾಲ ನಾನು. [ಕೊಲ್ಲುವವನಾದ್ದರಿಂದ ‘ಕಾಲ’ ಎನ್ನಿಸಿ ಕಾಲದೇವತೆಯಲ್ಲಿದ್ದೇನೆ.] ಮೃಗಗಳಲ್ಲಿ ಸಿಂಹ ನಾನು. [ಮೃಗ=ಭಗವಂತನನ್ನರಸುವ ಭಕ್ತರಿಗೆ, ಇಂದ್ರ =ಒಡೆಯನಾದ್ದರಿಂದ ‘ಮೃಗೇಂದ್ರ’ ಎನ್ನಿಸಿ ಸಿಂಹದಲ್ಲಿದ್ದೇನೆ.] ಹಕ್ಕಿಗಳಲ್ಲಿ ಗರುಡ ನಾನು. [ವಿನತ =ಶರಣಾದವರಿಗೆ  ಆಸರೆಯಾಗಿ ‘ವೈನತೇಯ’ ಎನ್ನಿಸಿ ಗರುಡನಲ್ಲಿದ್ದೇನೆ.]

ಭಗವಂತನ ಸನ್ನಿಧಾನ ಸಜ್ಜನರಲ್ಲೂ ಇದೆ, ದುರ್ಜನರಲ್ಲೂ ಇದೆ.  ದೈತ್ಯರಿಗೆ ಬಲವನ್ನು ಕೊಡುವವನೂ ಭಗವಂತ. ಸಾಮಾನ್ಯವಾಗಿ ದೈತ್ಯರು ಇನ್ನೊಬ್ಬರ ಬದುಕನ್ನು ಹಾಳುಗೆಡುವವರು. ಆದರೆ ಇಂಥಹ ದೈತ್ಯವಂಶದ ಆದಿಯಲ್ಲಿ ಹುಟ್ಟಿದ ಪ್ರಹ್ಲಾದ-ಎಲ್ಲರಿಗಿಂತ ಭಿನ್ನ. ಇದಕ್ಕೆ ಕಾರಣ ಭಗವಂತ ಈತನಲ್ಲಿ ವಿಶೇಷವಾಗಿ ಸನ್ನಿಧಾನವಿತ್ತಿರುವುದು. ದೈತ್ಯ ವಂಶದಲ್ಲಿ ಹುಟ್ಟಿ, ಆ ಸ್ವಭಾವದಿಂದ ಕಳಚಿಕೊಂಡು ಬಹಳ ಎತ್ತರಕ್ಕೇರಿದವ  ಪ್ರಹ್ಲಾದ. ಈ ಕಾರಣದಿಂದ ದೈತ್ಯರಲ್ಲೇ ವಿಶೇಷ ವಿಭೂತಿ ಈತ. ಪ್ರಹ್ಲಾದನ ಮೇಲೆ ಭಗವಂತನ ವಿಶೇಷ ಅನುಗ್ರಹ. ಆತ ಗರ್ಭದಲ್ಲಿದ್ದಾಗಲೇ ಆತನಿಗೆ ದೇವರ್ಷಿ ನಾರದರ ಮೂಲಕ ಅಧ್ಯಾತ್ಮ ಉಪದೇಶ ಪಡೆಯುವ ಭಾಗ್ಯ ದೊರೆಯಿತು. ಈತ ದ್ರುವನಂತೆ ತನ್ನ ಐದನೇ ವಯಸ್ಸಿನಲ್ಲಿ ದೇವರನ್ನು ಕಂಡ ಸಾಧಕ. ಪ್ರಹ್ಲಾದನ ಮುಖೇನ ಪ್ರಪಂಚಕ್ಕೆ ಭಗವಂತ ಬಹಳ ಮುಖ್ಯವಾದ ಸಂದೇಶವನ್ನು ನೀಡಿದ್ದಾನೆ. ‘ಭಗವಂತ ಭಯಾನಕ ಅಲ್ಲ, ಪ್ರೀತಿಯಿಂದ ಭಗವಂತನ ಬಳಿಗೆ ಹೋದರೆ ಆತ ನಮ್ಮನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾನೆ; ಭಗವಂತನ ಪೂಜೆ ಒಂದು ವ್ಯಾಪಾರವಲ್ಲ, ನಮ್ಮ ಯಾವುದೋ ಬಯಕೆಯನ್ನು ಸಾಧಿಸಿಕೊಳ್ಳುವುದಕ್ಕೋಸ್ಕರ ನಾವು ದೇವರ ಪೂಜೆ ಮಾಡಬಾರದು; ನಮ್ಮ ನಿಷ್ಕಾಮ ಭಕ್ತಿ ಭಗವಂತನಿಗೆ ಇಷ್ಟ; ಈ ರೀತಿ ಭಗವಂತನನ್ನು ಪೂಜಿಸುವುದರಿಂದ ನಾವು ಸದಾ ಆನಂದದಿಂದಿರಬಹುದು’ ಎನ್ನುವ ಸತ್ಯವನ್ನು ಪ್ರಹ್ಲಾದ ಪ್ರಪಂಚಕ್ಕೆ ತೋರಿಸಿಕೊಟ್ಟ. ಇಲ್ಲಿ ಬರುವ ಭಗವಂತನ ನಾಮ ಪ್ರಹ್ಲಾದಃ. ಎಂದೂ ದುಃಖವಿಲ್ಲದ ಪೂರ್ಣವಾದ ಆನಂದಮೂರ್ತಿ ಭಗವಂತ ಪ್ರಹ್ಲಾದಃ.
ಕೃಷ್ಣ ಹೇಳುತ್ತಾನೆ: “ಕಾಲಃ ಕಲಯತಾಮ್ ಅಹಮ್” ಎಂದು. ಈ ಜಗತ್ತಿನಲ್ಲಿ ಅನಾಧಿ ಅನಂತ ಕಾಲದಲ್ಲಿ ನಡೆಯತಕ್ಕ ಪ್ರತಿಯೊಂದು ಹುಟ್ಟು-ಸಾವು ಪೂರ್ವನಿಶ್ಚಿತ. ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಕಾಲ ಎನ್ನುವ ಪದ ಲೆಕ್ಕ, ಮೃತ್ಯು, ಶಿವ, ದುರ್ಗೆ, ಕಾಲಾಗ್ನಿ, ಇತ್ಯಾದಿ ಅನೇಕ ಅರ್ಥವನ್ನು ಕೊಡುತ್ತದೆ. ಇವೆಲ್ಲದರಲ್ಲೂ ಭಗವಂತನ ವಿಶೇಷ ವಿಭೂತಿ ಅಡಗಿದೆ. ಭಗವಂತ ಕಾಲಃ ನಾಮಕನಾಗಿ ‘ಕಾಲ’ದಲ್ಲಿ ತುಂಬಿದ್ದಾನೆ. ಕಾಲ ಎನ್ನುವುದು 'ಕಲ' ಎನ್ನುವ ಧಾತುವಿನಿಂದ ಬಂದ ಪದ. ಎಲ್ಲಾ ಗುಣಗಳನ್ನು, ಎಲ್ಲಾ ಸಾಮರ್ಥ್ಯವನ್ನು ತನ್ನೊಳಗೆ 'ಕಲೆ' ಹಾಕಿದವನು ಕಾಲಃ. ಭಗವಂತ ಸಮಸ್ತ ಸದ್ಗುಣಗಳಿಂದ ಪರಿಪೂರ್ಣವಾದ ತತ್ವ. ಈ ತತ್ವವನ್ನು ನಾವು ಅರಿಯದೆ ಅಹಂಕಾರಿಗಳಾದಾಗ, ಅದೇ ತತ್ವ 'ಕಾಲ ಪುರುಷನಾಗಿ' ನಮ್ಮ ಸಂಹಾರಕ್ಕೆ ಕಾರಣವಾಗುತ್ತದೆ. ನಮ್ಮ ಉದ್ಧಾರ ಕೆಲವೊಮ್ಮೆ 'ಬದುಕಿನಲ್ಲಿ'ದ್ದರೆ ಇನ್ನು  ಕೆಲವೊಮ್ಮೆ ನಮ್ಮ 'ಸಾವಿನಲ್ಲಿ'; ಕೆಲವೊಮ್ಮೆ ನಮ್ಮ 'ಮಾನದಲ್ಲಿ', ಇನ್ನು ಕೆಲವೊಮ್ಮೆ ನಮ್ಮ 'ಅವಮಾನದಲ್ಲಿ'.; ಕೆಲವೊಮ್ಮೆ ನಮ್ಮ 'ಜ್ಞಾನದಲ್ಲಿ' ನಮ್ಮ ಉದ್ಧಾರವಿದ್ದರೆ, ಇನ್ನು ಕೆಲವೊಮ್ಮೆ ನಮ್ಮ 'ಅಜ್ಞಾನದಲ್ಲಿ' ನಮ್ಮ ಉದ್ಧಾರವಿರುತ್ತದೆ. ಆದರೆ ನಮ್ಮ 'ಅಹಂಕಾರದಲ್ಲಿ' ಎಂದೆಂದೂ ಉದ್ಧಾರವಿಲ್ಲ. ಜಗತ್ತಿನಲ್ಲಿ ಅಹಂಕಾರ ಭರಿತ ಅಜ್ಞಾನ ತುಂಬಿದಾಗ ಭಗವಂತ 'ಕಾಲ ಪುರುಷನಾಗಿ' ಬೆಳೆದು ನಿಲ್ಲುತ್ತಾನೆ. ಕಾಲ ಎನ್ನುವುದಕ್ಕೆ ಇನ್ನೊಂದು ಅರ್ಥ 'ಸಮಯ'. ಪ್ರತಿಯೊಂದು ಕ್ರಿಯೆಯ ಹಿಂದೆ 'ಕಾಲ' ಸರ್ವ ಕಾರಣವಾಗಿರುತ್ತದೆ. ಕಾಲನಿಯಾಮಕ ಭಗವಂತ ಕಾಲಃ. ಜ್ಞಾನಕಾರಕವಾದ ಅವತಾರಗಳಿಂದ (ವ್ಯಾಸ,ಕಪಿಲ,ದತ್ತಾತ್ರಯ, ನರ-ನಾರಾಯಣ, ಇತ್ಯಾದಿ) ಅಜ್ಞಾನಕ್ಕೆ 'ಕಾಲವಾದ' ಭಗವಂತ, ಬಲಕಾರಕ ಅವತಾರಗಳಿಂದ(ನರಸಿಂಹ, ವರಾಹ, ರಾಮ,ಪರಶುರಾಮ, ಇತ್ಯಾದಿ) ಅಹಂಕಾರಕ್ಕೆ 'ಕಾಲನಾದ'. ಹೀಗೆ ಸರ್ವ ಗುಣಪೂರ್ಣ, ಸರ್ವ ಸಂಹಾರಕ ಹಾಗು ಕಾಲನಿಯಾಮಕ ಭಗವಂತ ಕಾಲಃ.
ಸಂಹಾರ ಶಕ್ತಿಯಾಗಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಮುಂದೆ ಪ್ರಾಣಿಗಳಲ್ಲಿ ಬಹಳ ಉಗ್ರ ಮತ್ತು ಬಲಿಷ್ಠ ಪ್ರಾಣಿಯಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಭೂಮಿಯಲ್ಲಿ ಹೆಚ್ಚು ಬಲಿಷ್ಠ ಮತ್ತು ದೊಡ್ಡ ಪ್ರಾಣಿ ಆನೆ. ಆದರೆ ಇಂಥಹ ಆನೆಯನ್ನೂ ಕೂಡಾ ಸಂಹಾರ ಮಾಡಬಲ್ಲ ಕಾಡಿನ ರಾಜ ಮೃಗೇಂದ್ರ-ಸಿಂಹ. ಮೃಗಗಳಲ್ಲೇ ಶ್ರೇಷ್ಠ ಮೃಗ ಎನ್ನಿಸಿಕೊಳ್ಳುವ ವಿಭೂತಿಯಾಗಿ ಭಗವಂತ ಸಿಂಹದಲ್ಲಿ ಕೂತ. ಇಲ್ಲಿ ಬರುವ ಭಗವಂತನ ನಾಮ ‘ಮೃಗೇಂದ್ರಃ’. ಭಗವಂತನ ಸಾಧನೆಯಲ್ಲಿ ನಿಂತವರಿಗೆ ಮಾರ್ಗದರ್ಶಕನಾಗಿ ನಿಲ್ಲುವ(ಮೃಗ) ಸರ್ವಶ್ರೇಷ್ಠ ಭಗವಂತ ‘ಮೃಗೇಂದ್ರಃ’.
ಪ್ರಾಣಿಯ ನಂತರ ಪಕ್ಷಿಗಳಲ್ಲಿ ಭಗವಂತನ ವಿಭೂತಿ. ಪಕ್ಷಿಗಳಲ್ಲೇ ಅತ್ಯಂತ ಶ್ರೇಷ್ಠ ಪಕ್ಷಿ ‘ಗರುಡ’. ಹೊಟ್ಟೆಯ ಭಾಗ ಬೆಳ್ಳಗಿರುವ ಹದ್ದಿನ ಜಾತಿಯ ಪಕ್ಷಿ ಗರುಡ. ಭಗವಂತನ ವಾಹನ ಗರುಡ ವಿನುತೆಯ ಮಗ ಆದ್ದರಿಂದ ಈತನನ್ನು ವೈನತೇಯ ಎನ್ನುತ್ತಾರೆ. ತನಗೆ ಶರಣಾಗುವ ಭಕ್ತರಿಗೆ(ವಿನತ) ಆಸರೆಯಾಗಿ ‘ವೈನತೇಯ’ ಎನ್ನಿಸಿ ಭಗವಂತ ಗರುಡನಲ್ಲಿ ಸನ್ನಿಹಿತನಾಗಿದ್ದಾನೆ. ಭಗವಂತನನ್ನು ತನ್ನ ಹೆಗಲ ಮೇಲೆ ಹೊತ್ತು ಓಡಾಡುವ ಗರುಡ-ಭಗವಂತನ ವಿಶೇಷ ವಿಭೂತಿ.                   
ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ ।
ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ        ॥೩೧॥

ಪವನಃ ಪವತಾಮ್ ಅಸ್ಮಿ ರಾಮಃ ಶಸ್ತ್ರಭೃತಾಮ್ ಅಹಮ್ ।
ಝಷಾಣಾಮ್ ಮಕರಃ ಚ ಅಸ್ಮಿ ಸ್ರೋತಸಾಮ್ ಅಸ್ಮಿ ಜಾಹ್ನವೀಚಲಿಸುವ ವಸ್ತುಗಳಲ್ಲಿ ಮಿಗಿಲಾದ ಗಾಳಿ ನಾನು.[ಪ=ಜಗತ್ತನ್ನು ಪಾಲಿಸುವ ದೇವತೆಗಳಿಂದಲೂ, ವನ=ಸೇವ್ಯನಾದ್ದರಿಂದ ‘ಪವನ’ ಎನ್ನಿಸಿ ಗಾಳಿಯಲ್ಲಿದ್ದೇನೆ.] ಆಯುಧದಿಂದ ಹೋರಬಲ್ಲ ವೀರರಲ್ಲಿ ನಾನು [ರ=ಆನಂದರೂಪನಾಗಿ, ಅಮ=ಅಪರಿಮಿತನಾದ್ದರಿಂದ ಮತ್ತು ಲೋಕವನ್ನು ರಮಿಸುವುದರಿಂದ] ರಾಮನೆಂದು ಹೆಸರಾಗಿದ್ದೇನೆ. ಮೀನುಗಳಲ್ಲಿ ತಿಮಿಂಗಿಲ ನಾನು. [ಮ=ತಿಳಿವನ್ನು, ಕರ=ಕೊಡುವವನಾದ್ದರಿಂದ ‘ಮಕರ’ ಎನ್ನಿಸಿ ಮಕರದಲ್ಲಿದ್ದೇನೆ.] ನದಿಯಲ್ಲಿ ಗಂಗೆ ನಾನು. [ಜಹತ್ =ಕಾಮನೆಗಳನ್ನು ತೊರೆದವರಿಗೆ, ಅವಿ=ರಕ್ಷಕನಾಗಿ, ‘ಜಾಹ್ನವಿ’ ಎನ್ನಿಸಿ ಗಂಗೆಯಲ್ಲಿದ್ದೇನೆ.]

ಮುಂದುವರಿದು ಕೃಷ್ಣ ಹೇಳುತ್ತಾನೆ “ಪವನಃ ಪವತಾಮಸ್ಮಿ” ಎಂದು. ‘ಪವನ' ಎನ್ನುವ ಪದದ ಪ್ರಸಿದ್ಧವಾದ ಅರ್ಥ 'ಗಾಳಿ' ಅಥವಾ ವಾಯುದೇವರು. ಆಕಾಶದಲ್ಲಿ ಸಂಚರಿಸುವ ಶಕ್ತಿಗಳಲ್ಲೇ ದೊಡ್ಡ ವಿಭೂತಿ ‘ವಾಯು’. ನಮ್ಮ ಜೀವವನ್ನು ನಿಯಂತ್ರಿಸುವ ವಾಯುದೇವರಲ್ಲಿ ವಿಶೇಷವಾಗಿ  ಸನ್ನಿಹಿತನಾಗಿರುವ ಭಗವಂತ ಪವನಃ. ಪವತೇ ಇತಿ ಪವನಃ - ಅಂದರೆ ನಿರಂತರ ಚಲಿಸುವಂತಹದ್ದು. ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಭಗವಂತ, ಆಯಾ ವಸ್ತುವಿನಲ್ಲಿ ಆಯಾ ರೂಪದಲ್ಲಿದ್ದು ನಿರಂತರ ಚಲನೆ ಕೊಡುತ್ತಿರುತ್ತಾನೆ. ನಮ್ಮ ದೇಹದಲ್ಲಿ ಆತನ ಚಲನೆ ನಿಂತಾಕ್ಷಣ ನಾವು 'ಶವ' ವಾಗುತ್ತೇವೆ. ಉಪನಿಷತ್ತಿನಲ್ಲಿ ಭಗವಂತನನ್ನು ವನಃ ಎಂದಿದ್ದಾರೆ. ಅವನು ಪ+ವನಃ; ಇಲ್ಲಿ '' ಎಂದರೆ 'ಪಾಲನೆ'. ನಮ್ಮನ್ನು ಹಾಗು ಸಮಸ್ತ ಬ್ರಹ್ಮಾದಿ ದೇವತೆಗಳನ್ನು ಪಾಲಿಸುವ ಶಕ್ತಿ. ವನಃ ಎಂದರೆ ಎಲ್ಲರೂ ಭಜಿಸಬೇಕಾದ, ಪ್ರೀತಿಯಿಂದ ಉಪಾಸನೆ ಮಾಡತಕ್ಕಂತಹ, ಎಲ್ಲರೂ ಆಶ್ರೈಸಬೇಕಾದ ವಸ್ತು. ಸಹಸ್ರ ರೂಪನಾಗಿ ಸಹಸ್ರ ಜೀವರಲ್ಲಿ ನೆಲೆಸಿ, ನಿರಂತರ ಪಾಲಿಸುವ ಭಗವಂತ ಪವನಃ.
“ಆಯುಧವನ್ನು ಹಿಡಿದು ಹೋರಾಡಬಲ್ಲ ವೀರರಲ್ಲಿ ರಾಮ ನಾನು” ಎಂದು ತನ್ನ ಸ್ವರೂಪ ವಿಭೂತಿಯನ್ನು ವಿವರಿಸುತ್ತಾನೆ ಕೃಷ್ಣ. ಭಗವಂತನ ಇತರ ಎಲ್ಲ ಅವತಾರಕ್ಕಿಂತ ರಾಮಾವತಾರದಲ್ಲಿ ಆತ ಕೋದಂಡಪಾಣಿಯಾಗಿ ಶಸ್ತ್ರದ ಪೂರ್ಣ ಬಳಕೆ ಮಾಡಿ ಶತ್ರು ನಿಗ್ರಹ ಮಾಡಿದ.
ರಾಮ ಎನ್ನುವ ನಾಮಕ್ಕೆ ಶಾಸ್ತ್ರದಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. 'ರಾ+ಅಮಃ', ಎಂದರೆ ಅಪರಿಮಿತವಾದ ಆನಂದಸ್ವರೂಪ ಹಾಗು ಎಲ್ಲರಿಗೂ ಆನಂದವನ್ನು ಹಂಚುವವನು. ಭಗವಂತನ ಈ ಗುಣ ರಾಮಾವತಾರದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ರಾಮಾವತಾರದಲ್ಲಿ ಭಗವಂತ ಎಲ್ಲಿಯೂ ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ತನ್ನನ್ನು ಕಾಡಿಗೆ ಕಳುಹಿಸಲು ಕಾರಣಕರ್ತೆಯಾದ ಕೈಕೇಯಿಯ ಮೇಲೆ ಎಲ್ಲರು ಕೂಪಗೊಂಡಾಗಲೂ ಸಹ, ರಾಮಚಂದ್ರ ಒಮ್ಮೆಯೂ ಕೂಡಾ ಕೆಟ್ಟ ಮಾತನ್ನು ಆಡಲಿಲ್ಲ. ಬದಲಿಗೆ "ನನ್ನಿಂದೇನಾದರೂ ಅಪರಾಧವಾಗಿದ್ದರೆ ಕ್ಷಮಿಸು" ಎಂದು ಹೇಳಿ ಸಂತೋಷದಿಂದ ಕಾಡಿಗೆ ಹೊರಟು ಹೋದ. ಹೀಗೆ ಇನ್ನೊಬ್ಬರ ಸಂತೋಷಕ್ಕಾಗಿ ತ್ಯಾಗಮಾಡಿ ತೋರಿಸಿದ ಅಪೂರ್ವ ಅವತಾರ ರಾಮಾವತಾರ. ರಮೆಯ ಅರಸಾದ ಸೀತಾಪತಿ ಭಗವಂತ, ಈ ಅವತಾರದಲ್ಲಿ ಗಂಡು-ಹೆಣ್ಣಿನ ನಡುವೆ ದಾಂಪತ್ಯ ಜೀವನ ಹೇಗಿರಬೇಕು, ಅಣ್ಣ-ತಮ್ಮಂದಿರ ಪ್ರೀತಿ ಹೇಗಿರಬೇಕು, ತಂದೆ-ತಾಯಿ-ಮಕ್ಕಳ ಬಾಂಧವ್ಯ ಹೇಗಿರಬೇಕು ಎನ್ನುವುದನ್ನು ಸ್ವಯಂ ತೋರಿಸಿ ಕೊಟ್ಟಿದ್ದಾನೆ. ಇದು ಜಗತ್ತಿಗೆ ಆನಂದ ಕೊಟ್ಟ ಭಗವಂತನ ಅಮಿತಾನಂದಸ್ವರೂಪ ವಿಭೂತಿ.
ನೀರಿನಲ್ಲಿರುವ ಮೀನುಗಳಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದೊಡ್ಡ ಆಕಾರವುಳ್ಳದ್ದು ತಿಮಿಂಗಿಲ. ಕೃಷ್ಣ ಹೇಳುತ್ತಾನೆ “ಝಷಾಣಾಂ ಮಕರಶ್ಚಾಸ್ಮಿ” ಎಂದು. ಇಲ್ಲಿ ಮಕರ ಎಂದರೆ ತಿಮಿಂಗಿಲ. ಭಗವಂತ ಮಕರಃ ಶಬ್ದವಾಚ್ಯನಾಗಿ ತಿಮಿಂಗಿಲನಲ್ಲಿ ವಿಶೇಷ ವಿಭೂತಿಯಾಗಿ ಅದಕ್ಕೆ ಆ ಶಕ್ತಿಯನ್ನು ಕೊಟ್ಟ. ತಿಳಿವನ್ನು(ಮ) ಕೊಡುವ(ಕರ) ಭಗವಂತ ಮಕರಃ.
“ನದಿಗಳಲ್ಲಿ ಗಂಗೆ ನಾನು” ಎನ್ನುತ್ತಾನೆ ಕೃಷ್ಣ. ನದಿಗಳಲ್ಲೇ ಶ್ರೇಷ್ಠ-ಗಂಗೆ. ಈ ನದಿ ನೀರಿಗೆ ಸಾಟಿಯಾದ ಔಷಧ ಇನ್ನೊಂದಿಲ್ಲ. ಗಂಗೆಯಲ್ಲಿ ಮಿಂದರೆ ನಾವು ನಮ್ಮ ಮನಃ ಶುದ್ಧಿ ಮಾಡಿಕೊಳ್ಳಬಹುದು. ಅಲ್ಲಿರುವ ಯಾವುದೇ ಕೊಳೆ ನಮಗಂಟದು. ಶೇಖರಿಸಿಟ್ಟರೆ ಎಂದೂ ಕೆಡದ ನೀರು ಗಂಗೆ. ಗಂಗೆಗೆ ಈ ಮಹಾನ್ ಶಕ್ತಿಯನ್ನು ಕೊಟ್ಟ ಭಗವಂತನ ವಿಭೂತಿನಾಮ ‘ಜಾಹ್ನವಿ’. ‘ಜಹ್ನು’ ಅಂದರೆ ತೊರೆಯುವುದು. ಕ್ಷುದ್ರ ಭೌತಿಕ ಬಯಕೆಗಳನ್ನು ತೊರೆದು, ಭಗವಂತನ ಮಾರ್ಗದಲ್ಲಿ ಸಾಗುವವರ ರಕ್ಷಣೆ ಮಾಡುವ ಭಗವಂತ ‘ಜಾಹ್ನವಿ’. ಇದು ಭಗವಂತನ ಸ್ತ್ರೀರೂಪ ಪ್ರತೀಕ ನಾಮ. ತಾಯಿಯಂತೆ ಸಲಹುವ ಭಗವಂತನನ್ನು ಸ್ತ್ರೀ ರೂಪದಲ್ಲಿ ಕೂಡ ಉಪಾಸನೆ ಮಾಡುತ್ತಾರೆ. ಜಾಹ್ನವಿ ಭಗವಂತನ ಸ್ತ್ರೀರೂಪದ ನಾಮ.     

Sunday, September 18, 2011

Bhagavad Geeta Kannada Chapter 10 Shloka 27-29


ಋಷಿ, ಬ್ರಹ್ಮರ್ಷಿ, ದೇವರ್ಷಿ, ಮಹರ್ಷಿಗಳು ಹೀಗೆ ಬ್ರಹ್ಮ ತೇಜಸ್ಸು ಮತ್ತು ಅವರು ಮಾಡುವ ವೇದಾಧ್ಯಾಯನ, ತಪಸ್ಸು, ಯಜ್ಞ-ಎಲ್ಲದರ ಬಗ್ಗೆ  ಹೇಳಿದ ಕೃಷ್ಣ, ಮುಂದಿನ ಶ್ಲೋಕದಲ್ಲಿ  ಕ್ಷಾತ್ರತೇಜಸ್ಸಿನ ಬಗ್ಗೆ ಹೇಳುತ್ತಾನೆ.                     
                  
ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್    ।
ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್     ॥೨೭॥

ಉಚ್ಚೈಃಶ್ರವಸಮ್ ಅಶ್ವಾನಾಮ್ ವಿದ್ಧಿ ಮಾಮ್ ಅಮೃತ ಉದ್ಭವಮ್  ।
ಐರಾವತಮ್ ಗಜೇಂದ್ರಾಣಾಮ್ ನರಾಣಾಮ್ ಚ ನರಾಧಿಪಮ್—ಕುದುರೆಗಳಲ್ಲಿ ಕಡಲಲ್ಲಿ ಮೂಡಿಬಂದ ಉಚ್ಚೈಃಶ್ರವಸ್ಸನ್ನು, ಹಿರಿಯಾನೆಗಳಲ್ಲಿ ಐರಾವತವನ್ನು, ಮನುಜರಲ್ಲಿ ಒಡೆಯನಾದ ಅರಸನನ್ನು[ಉನ್ನತಕೀರ್ತಿ ಪಡೆದು ‘ಉಚ್ಚೈಃಶ್ರವಸ್’ ಎನ್ನಿಸಿ ಉಚ್ಚೈಃಶ್ರವದಲ್ಲಿರುವವನು, ಐರಾ=ಲಕ್ಷ್ಮಿಗೆ, ಅವನ=ರಕ್ಷಕನಾಗಿ ‘ಐರಾವತ’ ಎನ್ನಿಸಿ ಐರಾವತದಲ್ಲಿರುವವನು, ನರರಿಗೆಲ್ಲ ಒಡೆಯನಾದ್ದರಿಂದ ‘ನರಾಧಿಪ’ ಎನ್ನಿಸಿ ಅರಸನಲ್ಲಿರುವವನು] ನಾನೆಂದು ತಿಳಿ.

ಹಿಂದೆ ಸೇನೆಯಲ್ಲಿ ಮುಖ್ಯವಾದ ಅಂಗಗಳಾಗಿ ಕುದುರೆ ಮತ್ತು  ಆನೆಗಳನ್ನು ರಾಜರು ಬಳಸುತ್ತಿದ್ದರು. ಕೃಷ್ಣ ಈ ಶ್ಲೋಕದಲ್ಲಿ ಕುದುರೆ, ಆನೆ ಮತ್ತು ರಾಜರಲ್ಲಿ ತನ್ನ ವಿಶೇಷ ವಿಭೂತಿಯನ್ನು ಹೇಳಿದ್ದಾನೆ. ಕೃಷ್ಣ ಹೇಳುತ್ತಾನೆ “ಸಮುದ್ರ ಮಥನದಲ್ಲಿ ಅಮೃತದ ಜೊತೆಗೆ ಹುಟ್ಟಿದ ಅಶ್ವ ‘ಉಚ್ಚೈಃಶ್ರವಸ್ಸು’ ಮತ್ತು ಹಿರಿಯಾನೆ ‘ಐರಾವತ’ ನಾನೆಂದು ತಿಳಿ” ಎಂದು. ಈ ಎರಡೂ ಪ್ರಾಣಿಗಳು ಬಹಳ ವಿಶೇಷ ಪ್ರಾಣಿಗಳು. ಕುದುರೆ ಮತ್ತು ಆನೆ  ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿಗಳು. ಇವು ತನ್ನನ್ನು ಪ್ರೀತಿಯಿಂದ ಸಾಕುವ ಧನಿಗೆ ಎಂದೂ ಮೋಸ ಮಾಡುವುದಿಲ್ಲ. ಇನ್ನು ನರರಲ್ಲಿ ಶ್ರೇಷ್ಠ ‘ನರಾಧಿಪ’. ಮನುಕುಲಕ್ಕೆ ನಾಯಕರಾಗಿ ನಿಂತು ಧರ್ಮನಿಷ್ಠರಾಗಿ ಜನಪಾಲನೆ ಮಾಡುವ ಮುಖಂಡರಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುತ್ತದೆ. ಹಿಂದೆ ರಾಜ್ಯಭಾರ ಮಾಡಿದ ಧರ್ಮರಾಜ, ಪರೀಕ್ಷಿತ ಇತ್ಯಾದಿ ರಾಜರನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.
ಇಲ್ಲಿ ಬಂದಿರುವ ಭಗವಂತನ ಹೆಸರು ಉಚ್ಚೈಃಶ್ರವಸ್ಸು, ಐರಾವತಃ ಮತ್ತು ನರಾಧಿಪಃ. ‘ಶ್ರವಸ್ಸು’ ಎಂದರೆ ಕೀರ್ತಿ, ಜ್ಞಾನ, ಕರ್ಮ. ಹಬ್ಬಿರುವ ಕೀರ್ತಿ ಹೊಂದಿರುವ, ಮಹಾಜ್ಞಾನಿಯಾದ ಭಗವಂತ ಈ ಸೃಷ್ಟಿ-ಸ್ಥಿತಿ-ಸಂಹಾರವೆಂಬ ಮಹಾಕರ್ಮವನ್ನು ಸದಾ ಮಾಡುತ್ತಿರುವ ‘ಉಚ್ಚೈಃಶ್ರವಸ್ಸು’ . ಐರಾ ಎಂದರೆ ಭೂದೇವಿಯಲ್ಲಿ ಸನ್ನಿಹಿತಳಾಗಿರುವ ಲಕ್ಷ್ಮಿ. ಇಂತಹ ಲಕ್ಷ್ಮಿಗೆ ಪತಿಯಾಗಿರುವ ಭಗವಂತ ‘ಐರಾವತಃ’. ನರರಿಗೆ, ಸರ್ವ ಜೀವಜಾತಕ್ಕೆ ಅಧಿಪತಿಯಾಗಿ, ಅರಸರಲ್ಲಿ ಸನ್ನಿಹಿತನಾಗಿರುವ ಭಗವಂತ ‘ನರಾಧಿಪಃ’.          
   
ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ ।
ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ॥೨೮॥

ಆಯುಧಾನಾಮ್ ಅಹಮ್ ವಜ್ರಮ್ ಧೇನೂನಾಮ್ ಅಸ್ಮಿ ಕಾಮಧುಕ್ ।
ಪ್ರಜನಃ ಚ ಅಸ್ಮಿ ಕಂದರ್ಪಃ ಸರ್ಪಾಣಾಮ್ ಅಸ್ಮಿ ವಾಸುಕಿಃ – ಆಯುಧಗಳಲ್ಲಿ ವಜ್ರಾಯುಧ ನಾನು. [ಅರಿವರ್ಜಿತನಾದ್ದರಿಂದ ‘ವಜ್ರ’ ಎನ್ನಿಸಿ ವಜ್ರಾಯುಧದಲ್ಲಿದ್ದೇನೆ.] ಹಸುಗಳಲ್ಲಿ ಕಾಮಧೇನು ನಾನು. [ಕಾಮ=ಬಯಸಿದ್ದನ್ನು, ಧುಕ್=ಕರೆಯುವುದರಿಂದ ‘ಕಾಮಧುಕ್’ ಎನ್ನಿಸಿ ಕಾಮಧೇನುವಿನಲ್ಲಿದ್ದೇನೆ.] ಸಂತಾನವನ್ನೀಯುವ ಕಾಮದೇವ [ಕಂ=ಸುಖದ, ದರ=ಹಲವು ಬಗೆಗಳನ್ನು, ಪ=ಉಣ್ಣಿಸುವುದರಿಂದ ‘ಕಂದರ್ಪ’ ಎನ್ನಿಸಿ ಕಾಮದೇವನಲ್ಲಿದ್ದು ಅವನಿಗೆ ಹುಟ್ಟಿನ ಸೆಳೆತದ ಶಕ್ತಿಯನ್ನಿತ್ತವನು] ನಾನು. ಹಾವುಗಳಲ್ಲಿ ವಾಸುಕಿ ನಾನು. [ವಾಸು=ಎಲ್ಲೆಡೆ ವಾಸಮಾಡಿ, ಕಿ=ಸುಖವನ್ನೀಯುವುದರಿಂದ ‘ವಾಸುಕಿ’ ಎನ್ನಿಸಿ ವಾಸುಕಿಯಲ್ಲಿದ್ದೇನೆ.]

ಆಯುಧಗಳಲ್ಲಿ ಸರ್ವಶ್ರೇಷ್ಠ ಆಯುಧ ಭಗವಂತ ಧರಿಸುವ ಸುದರ್ಶನ. ಭಗವಂತನ ಆಯುಧವನ್ನು ಬಿಟ್ಟರೆ ಶ್ರೇಷ್ಠ ಆಯುಧ ವಜ್ರಾಯುಧ. ಕೃಷ್ಣ ಹೇಳುತ್ತಾನೆ “ಆಯುಧಗಳಲ್ಲಿ ವಜ್ರಾಯುಧ ನಾನು” ಎಂದು. ಈ ವಜ್ರಾಯುಧ ಇಂದ್ರನ ಆಯುಧ. ಇದಕ್ಕೆ ಮೂರು ಲೋಕವನ್ನು ನಿಯಂತ್ರಿಸುವ ಶಕ್ತಿಯನ್ನು ಭಗವಂತ ಕೊಟ್ಟ.  ವ್ರತ್ರನನ್ನು ಸಂಹಾರ ಮಾಡಲು ಭಗವಂತನ ಆದೇಶದಂತೆ ದಧೀಚಿ ಎನ್ನುವ ಮುನಿಯ ಪೂರ್ಣ ತಪಸ್ಸಿನ ಫಲವನ್ನು ಆವಾಹನೆ ಮಾಡಿ ನಿರ್ಮಾಣಗೊಂಡ ಆಯುಧ ವಜ್ರಾಯುಧ. ಮಳೆ ಬಂದಾಗ ಕಾಣುವ ಸಿಡಿಲು-ಮಿಂಚನ್ನು ವಜ್ರಾಯುಧದ ಪ್ರತೀಕವೆನ್ನುತ್ತಾರೆ. ಈ ಆಯುಧದಲ್ಲಿ ಭಗವಂತ ‘ವಜ್ರಃ’ ನಾಮಕನಾಗಿ ಸನ್ನಿಹಿತನಾಗಿದ್ದಾನೆ. ‘ವರ್ಜನಾತ್ ಇತಿ ವಜ್ರಃ’. ಶತ್ರುಗಳನ್ನು, ಸಮಸ್ತ ದೋಷವನ್ನು, ವರ್ಜನೆ ಮಾಡುವ ಭಗವಂತ ವಜ್ರಃ.
ಅಸ್ತ್ರದ ಬಗ್ಗೆ ಹೇಳಿದ ಕೃಷ್ಣ ಮುಂದೆ ವಿಶ್ವಾಮಿತ್ರನ ಸಮಸ್ತ ಅಸ್ತ್ರವನ್ನು ನಾಶಮಾಡಿದ ವಸಿಷ್ಠಮುನಿಯ ಕಾಮಧೇನುವಿನ ಬಗ್ಗೆ ಹೇಳುತ್ತಾನೆ. ಪ್ರಾಣಿಗಳಲ್ಲೇ ಶ್ರೇಷ್ಠ ಪ್ರಾಣಿ-ಧೇನು(ಹಸು). ನಮ್ಮ ಜೀವಮಾನವಿಡೀ ನಮಗೆ ಹಾಲುಣಿಸಿ ಪೋಷಿಸುವ ಭಗವಂತನ ವಿಶಿಷ್ಠ ವಿಭೂತಿ ಹಸು. ಈ ಕಾರಣಕ್ಕಾಗಿ ಕೃಷ್ಣ ಬಾಲಕನಿದ್ದಾಗಿ ಗೋಪೂಜೆಯನ್ನು ಚಾಲ್ತಿಗೆ ತಂದ. ಹಸುವಿನ ಮಲ-ಮೂತ್ರ ಕೂಡ ತ್ಯಾಜ್ಯವಲ್ಲ. ಯಾವುದರಿಂದಲೂ ಗುಣವಾಗದ ಚರ್ಮರೋಗಕ್ಕೆ ಗೋಮಯ ಮತ್ತು  ಮೃತ್ತಿಕೆ(ಕೆಂಪು ಮಣ್ಣು)ಯಿಂದ ಸ್ನಾನ ಮಾಡಿದರೆ ಆ ರೋಗ ಗುಣವಾಗುತ್ತದೆ. ಮನೆ ಮುಂದೆ ಸಗಣಿ ಸಾರಿಸುವುದರಿಂದ  ಅಲ್ಲಿ ಕ್ರಿಮಿ ಕೀಟ ಇಲ್ಲವಾಗುತ್ತದೆ.  ಗೋಮಯದಲ್ಲಿ ಲಕ್ಷ್ಮಿಯ ಸನ್ನಿಧಾನವಿದೆ ಎಂದು ಮಹಾಭಾರತದಲ್ಲಿ ಬರುವ ಒಂದು ಕಥೆಯಲ್ಲಿ ಹೇಳಲಾಗಿದೆ. ಹೀಗೆ ಅನೇಕಾನೇಕ ಉಪಯೋಗ ಹಸುವಿನಿಂದ. ಭಗವಂತ ಬಯಸಿದ್ದನ್ನು ಕೊಡುವ ‘ಕಾಮಧುಕ್’ ನಾಮಕನಾಗಿ ಕಾಮಧೇನುವಿನಲ್ಲಿ ವಿಭೂತಿಯಾಗಿ ನಿಂತ.
ಈ ಪ್ರಪಂಚದಲ್ಲಿರುವ ಜೀವಿಗಳಲ್ಲಿ  ಗಂಡು-ಹೆಣ್ಣಿನ ನಡುವೆ ಹುಟ್ಟಿನ ಸೆಳೆತ(Sexual desire)ವಾಗಿ ನಿಂತಿರುವವ- ಸಂತಾನವನ್ನೀಯುವ ಕಾಮದೇವ. ಈ ಕಾಮದೇವ(ಕಂದರ್ಪ)ನಲ್ಲಿ ಭಗವಂತನ ವಿಶಿಷ್ಠ ಶಕ್ತಿ ಅಡಗಿದೆ. ಸೃಷ್ಟಿಯಲ್ಲಿ ಸಂತಾನ ಕ್ರಿಯೆ ನಡೆಯುವುದಕ್ಕೋಸ್ಕರ ಅಧಮ್ಯ ಬಯಕೆಯನ್ನು ಎಲ್ಲರೊಳಗೆ ತುಂಬಿ, ಅಲ್ಲಿ ಭಗವಂತ ಕೂತ. ಈ ಕಾರಣದಿಂದ ಭಗವಂತನ ಅನುಗ್ರಹವಿಲ್ಲದೆ ಲೀಲಾಜಾಲವಾಗಿ ಯಾರೂ ಕೂಡ ಈ ಶಕ್ತಿಯಿಂದೀಚೆಗೆ ಬರಲಾರರು. ಬಲವಂತವಾಗಿ ಅದನ್ನು ಬಿಡಲಾಗದು. ಭಗವಂತ ಕಂದರ್ಪಃ ನಾಮಕನಾಗಿ ಕಾಮದೇವನಲ್ಲಿ ತುಂಬಿದ್ದಾನೆ. ಮನುಷ್ಯನಿಗೆ ಅನೇಕ ರೀತಿಯ ಬಯಕೆಗಳನ್ನು ಕೊಟ್ಟು, ಆ ಬಯಕೆಯಿಂದ ಅವರನ್ನು ಸಂತೃಪ್ತಿಗೊಳಿಸಿ, ವಿಚಿತ್ರ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿಸುವ ಭಗವಂತ ‘ಕಂದರ್ಪಃ’.
ಕಾಮದೇವ-ಮನ್ಮಥನ  ನಂತರ ಕಾಮದ ಸಂಕೇತವಾದ ಸರ್ಪದ ಬಗ್ಗೆ ಕೃಷ್ಣ ವಿವರಿಸುತ್ತಾನೆ. ಹೊಟ್ಟೆಯನ್ನು ಹೊಸೆದುಕೊಂಡು ಹೋಗುವ ಸರೀಸೃಪವನ್ನು ಸರ್ಪ ಎನ್ನುತ್ತಾರೆ. ಸರೀಸೃಪಗಳಿಗೆಲ್ಲ  ರಾಜ ವಾಸುಕಿ. ಭಗವಂತ ‘ವಾಸುಕಿಃ’ ನಾಮಕನಾಗಿ ನಿಂತು, ವಾಸುಕಿಗೆ ಈ ಸ್ಥಾನವನ್ನು ಕೊಟ್ಟ. ಭಗವಂತ ಇಲ್ಲದ ಸ್ಥಳವಿಲ್ಲ. ಎಲ್ಲೆಡೆ ವಾಸಮಾಡುವ ಭಗವಂತ ‘ವಾಸುಕಿಃ.’.                       

ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್  ।
ಪಿತೄಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ॥೨೯॥

ಅನಂತಃ ಚ ಅಸ್ಮಿ ನಾಗಾನಾಮ್ ವರುಣಃ ಯಾದಸಾಮ್ ಅಹಮ್     ।
ಪಿತೄಣಾಮ್ ಅರ್ಯಮಾ ಚ ಅಸ್ಮಿ ಯಮಃ ಸಂಯಮತಾಮ್ ಅಹಮ್ –ನಾಗರಹಾವುಗಳಲ್ಲಿ ಶೇಷ ನಾನು. [ಅಳಿವಿರದ್ದರಿಂದ ‘ಅನಂತ’ ಎನ್ನಿಸಿ ಶೇಷನಲ್ಲಿದ್ದೇನೆ.] ಜಲಚರಗಳ ಒಡೆಯ ವರುಣ [ವರ=ಹಿರಿದಾದ, ಣ=ಆನಂದಸ್ವರೂಪನಾದ್ದರಿಂದ ‘ವರುಣ’ ಎನ್ನಿಸಿ ವರುಣನಲ್ಲಿದ್ದು ಅವನಿಗೆ ಜಲಚರಗಳ ಒಡೆತನವನ್ನಿತ್ತವನು] ನಾನು. ಪಿತೃದೇವತೆಗಳಲ್ಲಿ ಅರ್ಯಮ ನಾನು. [ಅರ್ಯ=ಅರಿಯಬೇಕಾದವನು ಮತ್ತು ಮಾ=ಅರಿತವನು ಆದ್ದರಿಂದ ‘ಅರ್ಯಮನ್’ ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆ.] ದಂಡಿಸುವವರಲ್ಲಿ ಯಮ[ನಿಯಮಿಸುವುದರಿಂದ ‘ಯಮ’ ಎನ್ನಿಸಿ, ಯಮನಲ್ಲಿದ್ದು ಅವನಿಗೆ ಪಾಪಿಗಳನ್ನು ದಂಡಿಸುವ ಹೊಣೆಯಿತ್ತವನು]ನಾನು.

ಸರ್ಪಗಳ ಜಾತಿಯಲ್ಲಿ ಹೆಡೆ ಉಳ್ಳದ್ದು ‘ನಾಗರ’. ನಾಗರದಲ್ಲಿ ಅತ್ಯಂತ ಶ್ರೇಷ್ಠ ‘ಶೇಷ’. ಬಲರಾಮನಾಗಿ, ಲಕ್ಷ್ಮಣನಾಗಿ, ಸದಾ ಭಗವಂತನ ಹಾಸಿಗೆಯಾಗಿ ಇರುವ ಬಹಳ ದೊಡ್ಡ ದೇವತೆ ಶೇಷ. ಶೇಷ ಭೂಮಿಯ ಆಕರ್ಷಣ ಶಕ್ತಿಯಾದ(Gravity) ಸಂಕರ್ಷಣ. ಹೀಗಾಗಿ ಭೂಮಿಯನ್ನು ಶೇಷ ಹೊತ್ತಿದ್ದಾನೆ ಎನ್ನುತ್ತಾರೆ. ಇಂತಹ ಶೇಷನಲ್ಲಿ ಭಗವಂತ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಹೆಡೆಯಿರುವ ಹಾವುಗಳಿಗೆಲ್ಲ ಮೂಲಶಕ್ತಿಯಾಗಿ ಶೇಷನಲ್ಲಿ ತುಂಬಿದ, ಎಂದೂ ಅಳಿವಿರದ ಶೇಷಶಯನ ಭಗವಂತ ‘ಅನಂತಃ’.
“ಜಲಚರ ಪ್ರಾಣಿಗಳಲ್ಲಿ ಅವುಗಳ ಒಡೆಯ ‘ವರುಣ’ ನಾನು”  ಎನ್ನುತ್ತಾನೆ ಕೃಷ್ಣ. ನೀರಿನ ಆವರಣದಲ್ಲಿ ಅನೇಕ ಜಲಚರ ಪ್ರಾಣಿಗಳಿಗೆ ಬದುಕು ಕೊಡುವ ವರುಣನೊಳಗೆ ವಿಶೇಷ ವಿಭೂತಿಯಾಗಿ ಭಗವಂತ ತುಂಬಿದ. ಇಲ್ಲಿ ಬರುವ ಭಗವಂತನ ನಾಮ ವರುಣಃ. ಹಿರಿದಾದ ಆನಂದ ಸ್ವರೂಪನಾದ್ದರಿಂದ ‘ವರುಣ’ ಎನ್ನಿಸಿ ವರುಣನಲ್ಲಿದ್ದು, ಅವನಿಗೆ ಜಲಚರಗಳ ಒಡೆತನವಿತ್ತ ಭಗವಂತ ‘ವರುಣಃ’.
ಭೂಮಿಯಿಂದ ದೇಹತ್ಯಾಗ ಮಾಡಿ ಹೋದ ಜೀವಗಳನ್ನು ನಿಯಂತ್ರಿಸುವ ದೇವತಾ ಶಕ್ತಿ-ಪಿತೃದೇವತೆಗಳು. ಅವರಲ್ಲಿ ಅವರ ಮುಖಂಡನಾದ, ದ್ವಾದಶಾದಿತ್ಯರಲ್ಲಿ ಒಬ್ಬ ಅರ್ಯಮನಲ್ಲಿ ಭಗವಂತ ವಿಶೇಷ ಶಕ್ತಿಯಾಗಿ ನಿಂತ. “ಅರಿಯಬೇಕಾದವನು(ಅರ್ಯ) ಮತ್ತು ಅರಿತವನು(ಮಾ) ಆದ್ದರಿಂದ ‘ಅರ್ಯಮನ್’ ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆ”  ಎನ್ನುತ್ತಾನೆ ಕೃಷ್ಣ.
ಪಾಪ ಮಾಡಿದ ಜೀವಗಳನ್ನು ನಿಯಂತ್ರಿಸುವವ ಯಮ. ಯಮನೊಳಗೆ ಭಗವಂತನ ವಿಶೇಷ ಸನ್ನಿಧಾನವಿದೆ. ಯಮನಲ್ಲಿದ್ದು ನಿಯಮಿಸುವ ಭಗವಂತ ‘ಯಮಃ’. ಯೋಗಶಾಸ್ತ್ರದಲ್ಲಿ ಯಮ ಎನ್ನುವ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸಿದ್ದಾರೆ. ಅದು ನಾವು ಮಾಡಬಾರದ ಐದು ನಿಯಮಗಳನ್ನು ಹೇಳುತ್ತದೆ. (೧) ಹಿಂಸೆ, (೨) ಸುಳ್ಳು ಹೇಳುವುದು,(೩) ಕದಿಯುವುದು,(೪) ಅತಿಯಾದ ಕಾಮ ಮತ್ತು (೫) ಇನ್ನೊಬ್ಬರ ಮುಂದೆ ಕೈಚಾಚುವುದು. ಭಗವಂತನ ಉಪಾಸನೆಯ ಮಾರ್ಗದಲ್ಲಿ ಬಿಡಬೇಕಾದ ಈ ಐದು ನಿಯಮಗಳನ್ನು ಕೊಟ್ಟ ಭಗವಂತ ಯಮಃ. ಇಡೀ ಜಗತ್ತನ್ನು ನಿಯಂತ್ರಿಸುವ, ಯಮಧರ್ಮನನ್ನೂ ನಿಯಂತ್ರಿಸುವ ಭಗವಂತ ಯಮಃ.