Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Sunday, August 7, 2011

Bhagavad Gita Kannada Chapter-09 Shloka 32-34


ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇSಪಿ ಸ್ಯುಃ ಪಾಪಯೋನಯಃ
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇSಪಿ ಯಾಂತಿ ಪರಾಂ ಗತಿಮ್ ೩೨

ಮಾಮ್  ಹಿ ಪಾರ್ಥ ವ್ಯಪಾಶ್ರಿತ್ಯ ಯೇಪಿ ಸ್ಯುಃ ಪಾಪಯೋನಯಃ
ಸ್ತ್ರಿಯಃ  ವೈಶ್ಯಾಃ ತಥಾ ಶೂದ್ರಾಃ ತೇ ಅಪಿ ಯಾಂತಿ ಪರಾಮ್  ಗತಿಮ್ –ಪಾರ್ಥ, ನನಗೆ ಶರಣು ಬಂದವರು ಯಾವುದೋ ಪಾಪದಿಂದ ಹೆಣ್ಣಾಗಿ, ವೈಶ್ಯರಾಗಿ, ಶೂದ್ರರಾಗಿ ಸಾಧನೆಯಿಂದ ವಂಚಿತರಾದರೂ ಹಿರಿಯ ನೆಲೆಯಾದ ನನ್ನನ್ನೆ ಪಡೆಯುತ್ತಾರೆ.

ಈ ಶ್ಲೋಕ ಕೆಲವು ಭಾಷ್ಯಕಾರರಿಗೇ ಗೊಂದಲ ಮಾಡಿದ ಶ್ಲೋಕ. ಮಧ್ವಾಚಾರ್ಯರು ಈ ಶ್ಲೋಕಕ್ಕೆ ಭಾಷ್ಯ ನೀಡುವ ತನಕ ಹೆಚ್ಚಿನವರು ಇದಕ್ಕೆ ತಪ್ಪು ಅರ್ಥವನ್ನು ಕಲ್ಪಿಸಿಕೊಂಡಿದ್ದರು. ಮೇಲ್ನೋಟದಲ್ಲಿ ಈ ಶ್ಲೋಕವನ್ನು ನೋಡಿದಾಗ “ಸ್ತ್ರೀಯರು, ವೈಶ್ಯರು ಮತ್ತು ಶೂದ್ರರು ಪಾಪಿಗಳು” ಎಂದು ತಿಳಿಯುವ ಅಪಾಯ ಹೆಚ್ಚು. ಇಲ್ಲಿ ಕೃಷ್ಣ ಹೇಳುತ್ತಿರುವುದು ಸ್ತ್ರೀ ಜೀವದ ಬಗ್ಗೆ ಅಲ್ಲ. ಸ್ತ್ರೀಯರು ಪಾಪಿಗಳಲ್ಲ. ಯಾವುದೋ ಪಾಪದಿಂದ ಅಥವಾ ಶಾಪದಿಂದ ಸ್ತ್ರೀ ಜನ್ಮ ಪಡೆದ ಗಂಡು ‘ ಸ್ತ್ರೀ ಪಾಪಯೋನಿ’ ಹೊರತು ಹೆಣ್ಣಾಗಿರುವ ಸ್ತ್ರೀಜೀವ ಪಾಪಯೋನಿಯಲ್ಲ.
ಕೃಷ್ಣ ಹೇಳುತ್ತಾನೆ “ಯಾವುದೋ ಪಾಪದಿಂದ ಹೀನಯೋನಿ ಬಂದಿರಬಹುದು, ಆದರೆ ಅಂತವರು ನನ್ನನ್ನು ಆರಾಧಿಸಿ ಎಲ್ಲಾ ದೋಷಗಳಿಂದ ಬಿಡುಗಡೆ ಹೊಂದಬಹುದು” ಎಂದು. ಇದಕ್ಕೆ ಉತ್ತಮ ದೃಷ್ಟಾಂತ ನರಕಾಸುರನ ಸೆರೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ಸ್ತ್ರೀಯರು. ಇವರು ಅಗ್ನಿ ಪುತ್ರರು. ಭಗವಂತನ ಪತ್ನಿಯರಾಗಬೇಕು ಎಂಬ ಆಸೆಯಿಂದ ತಮ್ಮ ಎತ್ತರವನ್ನು ಕಳೆದುಕೊಂಡು ಭೂಮಿಯಲ್ಲಿ ಹೆಣ್ಣಾಗಿ ಹುಟ್ಟಿ ನರಕಾಸುರನ ಸೆರೆಮನೆಯಲ್ಲಿ ಸಿಕ್ಕಿ ಒದ್ದಾಡಿದವರು. ಕೃಷ್ಣ ಅವರನ್ನು ಮದುವೆಯಾಗಿ ಉದ್ಧರಿಸಿದ.
ನಂದಗೋಪ ಮತ್ತು ಯಶೋದೆ ಇವರು ಮೂಲತಃ ದೇವಾಂಶ ಸಂಭೂತರು. ‘ದ್ರೋಣ’ ನಾಮಕ ವಸು ನಂದಗೋಪ ಮತ್ತು ‘ಧರ’ ನಾಮಕ ವಸುಪತ್ನಿ ಯಶೋದೆ. ಅವರು ಭೂಮಿಯಲ್ಲಿ ವೈಶ್ಯರಾಗಿ ಹುಟ್ಟಿದರು. ಭಗವಂತ ತನ್ನ ಅವತಾರದಲ್ಲಿ ಅವರ ಮನೆಯಲ್ಲಿ ಬೆಳೆದು ಅವರನ್ನು ಉದ್ಧರಿಸಿದ.
ಮಹಾ ಚೇತನ ವಿಧುರ. ಈತ ಸ್ವಯಂ ಧರ್ಮರಾಯ. ಶಾಪದ ಫಲವಾಗಿ ಭೂಮಿಯಲ್ಲಿ ಶೂದ್ರನಾಗಿ ಬದುಕಬೇಕಾಗಿ ಬಂತು. ಸಂಧಾನಕ್ಕೆ ಬಂದ ಕೃಷ್ಣ ದುರ್ಯೋಧನ, ಭೀಷ್ಮ, ದ್ರೋಣರ ಮನೆಗೆ ಹೋಗದೆ ನೇರವಾಗಿ ವಿಧುರನ ಮನೆಗೆ ಬಂದು ಅಲ್ಲಿ ವಿಧುರನಿಂದ ಸರಳ ಆಹಾರ ಸೇವಿಸಿ ಆತನನ್ನು ಪ್ರಸನ್ನನಾಗಿ ಮಾಡಿದ. ಇಲ್ಲಿ ಭಗವಂತ ಬಯಸುವುದು ಪ್ರದರ್ಶನವನ್ನಲ್ಲ ಬದಲಿಗೆ ಪ್ರೀತಿಯನ್ನು ಎನ್ನುವುದು ಸ್ಪಷ್ಟವಾಗುತ್ತದೆ. ಆತನಿಗೆ ಅಂತರಾತ್ಮ ಮುಖ್ಯ, ಮುಖವಾಡವಲ್ಲ.
ಹೀಗೆ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ “ಯಾವುದೋ ಪಾಪ ಕರ್ಮದಿಂದ ಅಥವಾ ಶಾಪದಿಂದ ಹೀನಯೋನಿಯಾಗಿ ಹುಟ್ಟಿದವರು ನನ್ನನ್ನು ಆಶ್ರಯಿಸಿದಾಗ ಪಾಪದಿಂದ ಕಳಚಿಕೊಂಡು ನನ್ನನ್ನು ಸೇರುತ್ತಾರೆ” ಎಂದು.                   

ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ
ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಮ್     ೩೩

ಕಿಮ್  ಪುನಃ ಬ್ರಾಹ್ಮಣಾಃ ಪುಣ್ಯಾಃ ಭಕ್ತಾಃ  ರಾಜ ಋಷಯಃ ತಥಾ
ಅನಿತ್ಯಮ್ ಅಸುಖಮ್ ಲೋಕಮ್ ಇಮಮ್  ಪ್ರಾಪ್ಯ ಭಜಸ್ವ ಮಾಮ್-ಪುಣ್ಯದ ಫಲದಿಂದ ಬ್ರಾಹ್ಮಣರಾಗಿ, ಋಷಿಗಳಂಥ ಅರಸರಾಗಿ ಹುಟ್ಟಿ ಬಂದು ಭಕ್ತಿ ಮಾಡುವವರ ಬಗೆಗೆ ಹೇಳುವುದೇನು? ಅದರಿಂದ ಸ್ಥಿರವಲ್ಲದ, ಸುಖವಿಲ್ಲದ ನರಜನ್ಮ ಬಂದಾಗ ನನ್ನನ್ನು ಆರಾಧಿಸು.

“ಪುಣ್ಯದ ಫಲದಿಂದ ರಾಜರ್ಷಿಗಳಾಗಿ, ಬ್ರಹ್ಮಜ್ಞಾನಿಗಳಾಗಿ ಹುಟ್ಟಿ ಭಗವಂತನನ್ನು ಆರಾಧಿಸುವವರ ಬಗೆಗೆ ವಿಶೇಷವಾಗಿ ಹೇಳಬೇಕೆನು?”    ಎಂದು ಪ್ರಶ್ನಿಸುತ್ತಾನೆ ಕೃಷ್ಣ. ಹೀಗೆ ಭಗವಂತನಲ್ಲಿ ಶರಣಾಗಿ ಆಶ್ರಯ ಬೇಡುವ ಪ್ರತಿಯೊಬ್ಬರ ರಕ್ಷಣೆಯ ಭಾರ ಭಗವಂತನದ್ದು. ಅದಕ್ಕಾಗಿ ಕೃಷ್ಣ ಇಲ್ಲಿ ನಮಗೆ ಕಿವಿ ಮಾತನ್ನು ಹೇಳುತ್ತಾನೆ: “ನೀನು ಈ ಪ್ರಪಂಚವೇ ಸರ್ವಸ್ವ ಎಂದು ಪ್ರಪಂಚದಲ್ಲಿ ಬಿದ್ದು ಒದ್ದಾಡಬೇಡ. ಏಕೆಂದರೆ ಇದು  ಅನಿತ್ಯಮ್ ಅಸುಖಮ್ ಲೋಕಮ್’. ಇದರಲ್ಲಿ ಸುಖವಿಲ್ಲ. ಇದು ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಆನಂದವನ್ನು ಪಡೆಯುವುದಕ್ಕೋಸ್ಕರ ನನ್ನನ್ನು ಆಶ್ರಯಿಸು. ನನಗೆ ಶರಣಾಗು. ನಿನ್ನನ್ನು ಉದ್ಧಾರ ಮಾಡುವ ಹೊಣೆ ನನ್ನದು”.  

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು    
ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ    ೩೪

ತ್ ಮನಾಃ  ಭವ ಮತ್ ಭಕ್ತಃ  ತ್ ಯಾಜೀ ಮಾಮ್  ನಮಸ್ಕುರು         
ಮಾಮ್ ಏವ ಎಷ್ಯಸಿ ಯುಕ್ತ್ವಾ ಏವಮ್ ಆತ್ಮಾನಮ್  ತ್ ಪರಾಯಣಃ –ನನ್ನಲ್ಲೆ ಬಗೆಯಿಡು. ನನ್ನನ್ನು ಅತಿಶಯವಾಗಿ ಪ್ರೀತಿಸು. ನನ್ನನ್ನೆ ಆರಾಧಿಸು.ನನಗೇ ತಲೆಬಾಗು. ಬಗೆಯನ್ನು ಹೀಗೆ ಅಣಿಗೊಳಿಸಿ ನನಗೇ ಮೊರೆ ಹೊಕ್ಕಾಗ ನನ್ನನ್ನೆ ಸೇರುವೆ.

ನಾವು ನಮ್ಮ ಜೀವನದಲ್ಲಿ ಸಾಧಿಸಬೇಕಾದ ಒಂದೇ ಒಂದು ಸಂಗತಿ ಎಂದರೆ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವುದು. ವ್ಯವಹಾರ ಪ್ರಪಂಚದಲ್ಲಿನ ಸಾವಿರಾರು ವಿಚಾರಗಳು ನಮ್ಮನ್ನು ಉದ್ಧಾರ ಮಾಡಲಾರವು. ಅವು ನಮ್ಮನ್ನು ಮರಳಿ ಅಧಃಪಾತಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಅವೆಲ್ಲವನ್ನೂ ಬಿಟ್ಟು ಮನಸ್ಸಿನಲ್ಲಿ ಭಗವಂತನನ್ನು ತುಂಬಿಸಬೇಕು. ಭಗವಂತನನ್ನು ನಿರಂತರ ಪ್ರೀತಿಸಬೇಕು. ನೀನು ಎಷ್ಟು ಗಾಢವಾಗಿ ಭಗವಂತನನ್ನು ಪ್ರೀತಿಸುತ್ತೀಯೋ ಅಷ್ಟೇ ಗಾಢವಾಗಿ ಭಗವಂತ ನಿನ್ನನ್ನು ಪ್ರೀತಿಸುತ್ತಾನೆ. ಶ್ರೀ ಸೂಕ್ತದಲ್ಲಿ ಹೇಳುವಂತೆ “ತ್ವನ್ಮಾ ಭಜಸ್ವ ಪದ್ಮಾಕ್ಷಿ, ಯೇನ ಸೌಖ್ಯಂ ಲಭಾಮ್ಯಹಮ್”. ನಾನು ನಿನ್ನನ್ನು ಭಜನೆ ಮಾಡುತ್ತೇನೆ, ನೀನು ನನ್ನನ್ನು ಭಜನೆ ಮಾಡು”. ಇಲ್ಲಿ ಭಜನೆ ಎಂದರೆ ಭಕ್ತಿಯಿಂದ ಪ್ರೀತಿಸುವುದು.
ನೀನು ಏನು ಪೂಜೆ ಮಾಡುತ್ತೀಯೋ ಅದು ಭಗವಂತನ  ಪೂಜೆಯಾಗಿರಲಿ, ನಿನ್ನ ಎಲ್ಲಾ ಪ್ರೀತಿಯಲ್ಲಿ ಭಗವಂತನನ್ನು ಕಾಣು. ನೀನು ಮಾಡುವ ಎಲ್ಲಾ ನಮಸ್ಕಾರ ಭಗವಂತನ ನಮಸ್ಕಾರವಾಗಿರಲಿ. ಹೀಗೆ ಮಾಡಿ ನಿನ್ನ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿ ಇಡಿಯ ಬದುಕನ್ನು ಭಗವನ್ಮಯ ಮಾಡಿಕೊ- ನಿನಗೆ ಎಲ್ಲಕ್ಕಿಂತ ದೊಡ್ಡ ವಸ್ತು ಭಗವಂತ, ಬದುಕಿನ ಸಾರ ಸರ್ವಸ್ವ ಭಗವಂತ, ನಿರಂತರ ಚಿಂತನೆಯ ವಸ್ತು ಭಗವಂತನಾಗಲಿ. ನಿನ್ನ ಬದುಕಿನ ಒಂದೊಂದು ಕ್ರಿಯೆಯೂ ಭಗವಂತನ ಆರಾಧನೆಯಾಗಲಿ. ಆಗ “ನೀನು ನನ್ನನ್ನು ಸೇರಲೇ ಬೇಕು” ಎನ್ನುತ್ತಾನೆ ಕೃಷ್ಣ. ಹೀಗೆ ಮೋಕ್ಷ ಸಾಧಕವಾದ ಉಪಾಸನೆಯನ್ನು ಕೃಷ್ಣ ವಿವರಿಸಿದ ಅನ್ನುವಲ್ಲಿಗೆ ಒಂಬತ್ತನೆಯ ಅಧ್ಯಾಯ ಮುಕ್ತಾಯವಾಯಿತು.     

ಇತಿ  ನವಮೋSಧ್ಯಾಯಃ
      
ಒಂಬತ್ತನೆಯ ಅಧ್ಯಾಯ ಮುಗಿಯಿತು   
*******

No comments:

Post a Comment