Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, August 7, 2011

Bhagavad Gita Kannada Chapter-09 Shloka 28-31


ಭಾಗವತ ಧರ್ಮ ಅನುಷ್ಠಾನದಿಂದ ಎನು ಫಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
        
ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈಃ
ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ೨೮

ಶುಭಶುಭ ಭಲೈಃ ಏವಮ್  ಮೋಕ್ಷ್ಯಸೇ ಕರ್ಮ ಬಂಧನೈಃ
ಸಂನ್ಯಾಸ ಯೋಗ ಯುಕ್ತತ್ಮಾ ವಿಮುಕ್ತಃ  ಮಾಮ್ ಉಪೈಷ್ಯಸಿ-ಹೀಗೆ ಬದುಕಿದಾಗ, ಒಳಿತು-ಕೆಡುಕುಗಳ ಕಡೆಗೆಳೆವ ಕರ್ಮದ ಸೆರೆಯಿಂದ ಪಾರಾಗುವೆ. ಫಲದ ಹಂಗು ತೊರೆದು ಕರ್ತವ್ಯದಲ್ಲಿ ಬಗೆ ತೊಡಗಿಸುತ್ತ ಸೆರೆ ಕಳಚಿಕೊಂಡು ನನ್ನ ಬಳಿ ಸೇರುವೆ.

ನಾವು ಯಾವುದೇ ಕರ್ಮವನ್ನು ‘ನನಗೆ  ಇಂತಹ ಫಲ ಬರಬೇಕು’ ಎನ್ನುವ ಫಲದ ನಂಟಿನಿಂದ ಮತ್ತು ‘ನಾನು ಈ ಕರ್ಮವನ್ನು ಮಾಡಿದೆ’ ಎನ್ನುವ ಅಹಮ್ ಇದ್ದು ಮಾಡಿದಾಗ ಆ ಕರ್ಮ ನಮಗೆ ಅಂಟುತ್ತದೆ. ಅದಕ್ಕೋಸ್ಕರ ಹಿಂದಿನ ಕಾಲದಲ್ಲಿ  ‘ಕರ್ಮಕರಿಷ್ಯೇ’ ಎಂದು ಸಂಕಲ್ಪ ಮಾಡುವಾಗ ಈ ರೀತಿ ಹೇಳುತ್ತಿದ್ದರು:
ಭಗವತೋ ಬಲೇನ ಭಗವತೋ ವೀರ್ಯೇನ ಭಗವದಃ ತೇಜಸಾ |
ಭಗವತಾ ಕರ್ಮಣಾ ಕರ್ಮಕರಿಷ್ಯಾಮಿ ಭಗವತೋ ವಾಸುದೇವಸ್ಯಃ ||
“ನಾನು ಮಾಡುವ ಕರ್ಮ ನನ್ನ ಕರ್ಮವಲ್ಲ, ನನ್ನೊಳಗಿರುವ ಭಗವಂತ ಮಾಡುವ ಕರ್ಮ. ಅದರ ಹಿಂದಿರುವ ಶಕ್ತಿ ಸಾಮರ್ಥ್ಯ ಎಲ್ಲವೂ ಭಗವಂತನದ್ದು, ನನ್ನದೇನೂ ಇಲ್ಲ” ಎಂದು. ಇದು ಭಾಗವತಧರ್ಮದ ಸಂಕಲ್ಪ. ಭಗವತ್ ಪ್ರೀತ್ಯರ್ಥ ಮಾಡಿದ ಯಾವ ಕರ್ಮವೂ ನಮಗೆ ಬಂಧನವಾಗುವುದಿಲ್ಲ. ಬ್ರಹ್ಮಸೂತ್ರದಲ್ಲಿ ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ: “ಭಗವಂತನ ಜ್ಞಾನ ನಮ್ಮೊಳಗೆ ದೃಢವಾಗಿ ಅಪರೋಕ್ಷವಾದಾಗ, ಹಿಂದೆ ಫಲಕಾಮನೆಯಿಂದ ಮಾಡಿದ ಎಲ್ಲಾ ಪಾಪಗಳನ್ನು ಆ ಜ್ಞಾನಾಗ್ನಿ ಸುಟ್ಟುಬಿಡುತ್ತದೆ” ಎಂದು.  ಆದ್ದರಿಂದ ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ. ಇದನ್ನು ನಾವು ಕಠೋಪನಿಷತ್ತಿನಲ್ಲಿ ಬರುವ ಯಮ ಮತ್ತು ನಚಿಕೇತನ ಸಂಭಾಷಣೆಯಲ್ಲಿ ಕಾಣುತ್ತೇವೆ.  ಅಲ್ಲಿ ನಚಿಕೇತ ಯಮನಲ್ಲಿ ಜ್ಞಾನವನ್ನು ವರವಾಗಿ ಬೇಡಿದಾಗ ಯಮ ಆತನಿಗೆ “ನಿನಗೆ ಎಷ್ಟು ಸಂಪತ್ತು ಬೇಕು ಅದನ್ನು ಕೇಳು, ನಿನ್ನನ್ನು ಬೇಕಿದ್ದರೆ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡುತ್ತೇನೆ” ಎನ್ನುತ್ತಾನೆ. ಇದಕ್ಕೆ ನಚಿಕೇತ ಹೇಳುತ್ತಾನೆ “ ಇದೆಲ್ಲವೂ ನರಕಕ್ಕೆ ಹೋಗುವ ಸಾಧನಗಳು, ಇದ್ಯಾವುದೂ ನನಗೆ ಬೇಡ. ನನಗೆ ಭಗವಂತನ ಬಗ್ಗೆ ತಿಳಿಯಬೇಕು” ಎಂದು. ಹೀಗೆ ನಮ್ಮ ಪಾಪ ಕರ್ಮವನ್ನು ಸಂಪೂರ್ಣ ತೊಳೆದುಕೊಂಡು ಮೋಕ್ಷಕ್ಕೆ ಹೋಗುವ ಏಕಮಾತ್ರ ಮಾರ್ಗ ಭಗವಂತನ ಬಗೆಗಿನ ಜ್ಞಾನ. ಭಗವದರ್ಪಣ ಬುದ್ಧಿಯಿಂದ ಕರ್ಮ ಅನುಷ್ಠಾನ ಮಾಡಿದಾಗ ಶುಭಾಶುಭ ಕರ್ಮದ ಕಟ್ಟಿನಿಂದ ಬಿಡುಗಡೆ ಸಾಧ್ಯ.  ಕೃಷ್ಣ ಹೇಳುತ್ತಾನೆ “ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ” ಎಂದು. ಇಲ್ಲಿ ಹೇಳುವ ಸಂನ್ಯಾಸ ಒಂದು ಯೋಗ(ಉಪಾಯ). ಎಲ್ಲವನ್ನೂ ಭಗವಂತನಿಗೆ ಅರ್ಪಣೆ ಮಾಡಿ ಫಲಕಾಮನೆ ಇಲ್ಲದೆ ಭಗವತ್ ಪೂಜಾ ದೃಷ್ಟಿಯಿಂದ ಮಾಡುವಂತಹ ಸಾತ್ವಿಕರ ಸಾಧನೆ. ಸಂನ್ಯಾಸ ಎಂದರೆ ಕಾಮ-ಸಂಕಲ್ಪವನ್ನು ಭಗವಂತನಲ್ಲಿ ಅರ್ಪಿಸುವುದು. ಕಾಮ ಅಂದರೆ ಮಾಡಬೇಕುಎಂದು ಬಯಸುವುದು, ಸಂಕಲ್ಪ ಎಂದರೆ  ಮಾಡುತ್ತೇನೆಎಂದು ನಿರ್ಧರಿಸುವುದು. ಕಾಮಸಂಕಲ್ಪ ವರ್ಜಿತ-ಸಂನ್ಯಾಸ. ಹೀಗೆ ಭಾಗವತ ಧರ್ಮ ಪಾಲನೆ ಮಾಡಿದರೆ ಸುಲಭವಾಗಿ ಭಗವಂತನನ್ನು ಸೇರಬಹುದು-“ನಿಶ್ಚಿತವಾಗಿಯೂ ನನ್ನನ್ನು ಸೇರುತ್ತಾರೆ” ಎನ್ನುವುದು ಕೃಷ್ಣನ ಭರವಸೆ.  

ಸಮೋSಹಂ ಸರ್ವಭೂತೇಷು ನ ಮೇ ದ್ವೇಷ್ಯೋSಸ್ತಿ ನ ಪ್ರಿಯಃ
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ೨೯

ಮಃ ಅಮ್  ಸರ್ವಭೂತೇಷು ನ ಮೇ ದ್ವೇಷ್ಯಃ ಅಸ್ತಿ ನ ಪ್ರಿಯಃ
ಯೇ ಭಜಂತಿ ತು ಮಾಮ್  ಭಕ್ತ್ಯಾ ಮಯಿ ತೇ ತೇಷು ಚ ಅಪಿ ಅಹಮ್-ಎಲ್ಲ ಜೀವಿಗಳೂ ನನಗೆ ಒಂದೆ. ನನಗೆ ಹಗೆಯನೂ ಇಲ್ಲ, ಗೆಳೆಯನೂ ಇಲ್ಲ. ಆದರೆ ಯಾರು ನನ್ನನ್ನು ಭಕ್ತಿಯಿಂದ ಒಲಿಸುತ್ತಾರೆ ಅವರು ನನ್ನ ವಶ; ನಾನು ಅವರ ವಶ.

ಭಗವಂತನಿಗೆ ಯಾರ ಮೇಲೂ ಹಗೆಯಾಗಲೀ ಅಥವಾ ಗೆಳೆತನವಾಗಲೀ ಇಲ್ಲ. ಆತ ಪ್ರೀತಿಸುವುದು ವ್ಯಕ್ತಿಯನ್ನಲ್ಲ ಬದಲಿಗೆ ವ್ಯಕ್ತಿಯಲ್ಲಿರುವ ಜ್ಞಾನವನ್ನು ಮತ್ತು ಭಕ್ತಿಯನ್ನು. ಅರ್ಹತೆ ಇದ್ದವರು ಭಗವಂತನನ್ನು ಭಕ್ತಿಯಿಂದ ಒಲಿಸುತ್ತಾರೆ. ನಿಜವಾದ ಭಕ್ತರಿಗೆ ಭಗವಂತ ವಶನಾಗುತ್ತಾನೆ.
ಅಪಿ ಚೇತ್ ಸುದುರಾಚಾರೋ ಭಜತೇ ಮಾಮನನ್ಯಭಾಕ್
ಸಾಧುರೇವ ಸ ಮಂತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ ೩೦

ಅಪಿ ಚೇತ್ ಸು ದುರಾಚಾರಃ  ಭಜತೇ ಮಾಮ್ ಅನನ್ಯ ಭಾಕ್
ಸಾಧುಃ ಏಸಃ  ಮಂತವ್ಯಃ ಸಮ್ಯಗ್ ವ್ಯವಸಿತಃ  ಹಿ ಸಃ –ಬೇರೆಡೆಗೆ ಬಗೆಗೊಡದೆ ನನ್ನಲ್ಲೇ ಭಕ್ತಿಯಿಡುವವನು ಎಂಥ ನಡತೆಗೇಡಿಯಾದರೂ ಮೂಲತಃ ಒಳ್ಳೆಯವನೆಂದೇ ತಿಳಿಯಬೇಕು. ಏಕೆಂದರೆ ಅವನು ಖಚಿತವಾಗಿ ನಿಜವನರಿತವನು.

ನಿಜವಾದ ಭಕ್ತರು ಸಾಮಾನ್ಯವಾಗಿ ಎಂದೂ ದುರಾಚಾರಿಗಳಾಗಿರುವುದಿಲ್ಲ. ಆಕಸ್ಮಾತ್ ಒಬ್ಬ ಸಾತ್ವಿಕ ಯಾವುದೋ ಪ್ರಾರಬ್ಧ ಕರ್ಮದಿಂದ ಒಂದು ಜನ್ಮದಲ್ಲಿ ನಡತೆಗೇಡಿಯಾಗಿದ್ದರೂ ಸಹ ಆತ ಮೂಲತಃ ಉತ್ತಮನೇ ಆಗಿರುತ್ತಾನೆ. ಏಕೆಂದರೆ ಆತ ತನ್ನ ಅನೇಕ ಜನ್ಮದಲ್ಲಿ ಭಗವತ್ ಸಾಧನೆ ಮಾಡಿರುತ್ತಾನೆ. ಇದು ಸಾಮಾನ್ಯರಾದ ನಮಗೆ ಕಾಣದಿದ್ದರೂ ಕೂಡಾ ಭಗವಂತನಿಗೆ ಕಾಣುತ್ತದೆ. ಭಗವಂತನ ದೃಷ್ಟಿಯಲ್ಲಿ ಆತ ಉತ್ತಮನೆನಿಸಿರುತ್ತಾನೆ. ಈ ಕಾರಣಕ್ಕಾಗಿ ನಾವು ಯಾರನ್ನೂ ಹಗುರವಾಗಿ ಕಾಣಬಾರದು. ಒಬ್ಬ ಕೆಟ್ಟ ದಾರಿಯಲ್ಲಿ ನಡೆಯುತ್ತಿದ್ದರೆ ಅದಕ್ಕೆ ಅನೇಕ ಕಾರಣಗಳಿರಬಹುದು. ಆತ ಸಾತ್ವಿಕನೂ ಇರಬಹುದು. ಆದರೆ ಆತನ ಪ್ರರಾಬ್ಧ ಕರ್ಮ ಆತನನ್ನು ಆ ಮಾರ್ಗದಲ್ಲಿ ನಡೆಯುವಂತೆ ಮಾಡಿರಬಹುದು. ಉತ್ತಮನೆನಿಸಿದವನು ಶಾಶ್ವತವಾಗಿ ಆ ದಾರಿಯಲ್ಲಿ ಸಾಗುವುದಿಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.   

ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾನ್ತಿಂ ನಿಗಚ್ಛತಿ
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ೩೧

ಕ್ಷಿಪ್ರಮ್  ಭವತಿ ಧರ್ಮ ಆತ್ಮಾ ಶಶ್ವತ್ ಶಾಂತಿಮ್  ನಿಗಚ್ಛತಿ
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ –ಅವನು ಒಡನೆಯೆ ಸರಿದಾರಿ ಹಿಡಿಯುತ್ತಾನೆ; ಅಳಿವಿರದ ಸುಖದ ಸೆಲೆಯನ್ನು ಪಡೆಯುತ್ತಾನೆ. ಕೌಂತೇಯ, ಇದನ್ನು ಆಣೆಯಿಟ್ಟಾಡು: ‘ನನ್ನ ಭಕ್ತನೆಂದೂ ಕೆಡುವುದಿಲ್ಲ’.

ಹೀಗೆ ಪ್ರರಾಬ್ಧ ಕರ್ಮದಿಂದ ದಾರಿತಪ್ಪಿದವರು ಯಾವುದೋ ಒಂದು ಸಂದರ್ಭದಲ್ಲಿ ಒಡನೆಯೇ ತಾವು ಮಾಡುತ್ತಿರುವ ತಪ್ಪಿನ ಅರಿವಾಗಿ ಸರಿದಾರಿಯನ್ನು ಹಿಡಿಯುತ್ತಾನೆ, ಮತ್ತು ಅಳಿವಿರದ ಮೋಕ್ಷವನ್ನು ಸೇರುತ್ತಾನೆ. ಇದು ನಿಶ್ಚಿತ. ಇದನ್ನು ನೀನು ಆಣೆಮಾಡಿ ಹೇಳು ಎನ್ನುತ್ತಾನೆ ಕೃಷ್ಣ. ಇದಕ್ಕೆ ಉತ್ತಮ ಉದಾಹರಣೆ ಅಜಾಮಿಳನ ಕಥೆ. ತನ್ನ ಜೀವನದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿದ ಅಜಾಮಿಳ ಮೂಲತಃ ಒಬ್ಬ ಶ್ರೇಷ್ಠ ಜೀವ. ಇಂತಹ ಅಜಾಮಿಳನಿಗೆ ಭಗವಂತ ಜೀವನದ ಕೊನೆಗಾಲದಲ್ಲಿ ಸತ್ಯದ ದಾರಿ ತೋರಿಸಿ ಉದ್ಧಾರ ಮಾಡುತ್ತಾನೆ. ಆತ ತನ್ನ ಕೊನೆಗಾಲದಲ್ಲಿ ಸಾಧನೆ ಮಾಡಿ ಮೋಕ್ಷವನ್ನು ಸೇರುತ್ತಾನೆ.
ಇಲ್ಲಿ ಕೃಷ್ಣ ಅರ್ಜುನನಲ್ಲಿ ಏಕೆ “ನೀನು ಪ್ರತಿಜ್ಞೆ ಮಾಡು” ಎಂದು ಹೇಳುತ್ತಾನೆ ಎಂದರೆ-ಭಗವಂತ ಭಕ್ತರಿಗಾಗಿ ತನ್ನ ಪ್ರತಿಜ್ಞೆಯನ್ನು ಮುರಿದಾನು ಆದರೆ ಎಂದೂ ಭಕ್ತರ ಪ್ರತಿಜ್ಞೆಯನ್ನಲ್ಲ. ಇದಕ್ಕೆ ಉದಾಹರಣೆ ಮಹಾಭಾರತ ಯುದ್ಧದಲ್ಲಿ ನಡೆದ ಒಂದು ಘಟನೆ:
ಮಹಾಭಾರತ ಯುದ್ಧದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಯುದ್ಧದ ನಡುವೆ ಅರ್ಜುನ ಭೀಷ್ಮನ ಎದುರು ಯುದ್ಧ ಮಾಡುವುದಕ್ಕೆ ಹಿಂಜರಿದಾಗ, ಕೋಪಾವೇಶದಿಂದ  ಭೀಷ್ಮನನ್ನು ಸಾಯಿಸಲೆಂಬಂತೆ ರಥದಚಕ್ರವೊಂದನ್ನು ಹಿಡಿದು ಮುಂದೊತ್ತಿ ಬರುತ್ತಾನೆ! ಇದನ್ನು ನೋಡಿದ ಬೀಷ್ಮ  ತನ್ನ ಎರಡೂ ಕೈಗಳನ್ನು ಜೋಡಿಸಿ  ಹೀಗೆ ಹೇಳುತ್ತಾನೆ: " ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ.  ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ನೀನು ಮರೆತಿರುವೆ, ಆದರೆ  ನಿನ್ನ ಭಕ್ತನ ಪ್ರತಿಜ್ಞೆಯನ್ನಲ್ಲ; ನೀನಲ್ಲದೆ  ನಮಗೆ  ಗತಿ ಇನ್ಯಾರು?" ಎಂದು.  ಈ ಘಟನೆಯಲ್ಲಿ ಭಗವಂತ ಎಂತಹ ಭಕ್ತವತ್ಸಲ ಎನ್ನುವುದು ತಿಳಿಯುತ್ತದೆ.

No comments:

Post a Comment