Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, August 4, 2011

Bhagavad Gita Kannada Chapter-09 Shloka 19-22


ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ        
ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ೧೯

ತಪಾಮಿ ಅಮ್ ಅಮ್  ವರ್ಷಮ್  ನಿಗೃಹ್ಣಾಮಿ ಉತ್ಸೃಜಾಮಿ ಚ 
ಅಮೃತಮ್  ಚ ಏವ  ಮೃತ್ಯುಃ ಚ ತ್ ಅತ್ ಚ ಅಹಮ್ ಅರ್ಜುನ-ನಾನು ಸುಡುತ್ತೇನೆ. ನಾನು ಮಳೆ ಬರದಂತೆ ತಡೆಯುತ್ತೇನೆ; ಮಳೆಗರೆಸುತ್ತೇನೆ. ಸಾವು ಬರದಂತೆ ಮಾಡುತ್ತೇನೆ; ಸಾಯಿಸುತ್ತೇನೆ. ಓ ಅರ್ಜುನ, ಕಾಣುವ ಕಾರ್ಯ, ಕಾಣದ ಕಾರಣ ಎಲ್ಲವೂ ನನ್ನಿಂದ.[ಸದ್ಗುಣಗಳ ಸೆಲೆಯಾದ್ದರಿಂದ ನಾನು ‘ಸತ್’. ನನ್ನಂಥವ ಇನ್ನೊಬ್ಬ ಇರದ್ದರಿಂದ ನಾನು ‘ಅಸತ್’]

ಸೂರ್ಯನಲ್ಲಿ ಸನ್ನಿಹಿತನಾಗಿ,  ಭೂಮಿಗೆ ಸೌರಶಕ್ತಿಯನ್ನು ಹರಿಸಿ, ಬದುಕು ಕೊಟ್ಟವ ಭಗವಂತ. ಕಾಲ ಕಾಲಕ್ಕೆ ಮಳೆ ಬರುವಂತೆ ಮಾಡುವವನೂ ಅವನೆ, ಅಕಾಲದಲ್ಲಿ ಮಳೆ ಬಾರದಂತೆ ತಡೆಯುವವನೂ ಅವನೆ. ಮಳೆ ಬರಬೇಕಾದಾಗ ಬಾರದೇ ಇರುವುದು, ಮಳೆ ಬರಬಾರದಾಗ ಬರುವುದೂ ಭಗವಂತನನಿಂದಲೆ.  ಕಾಣುವ ಕ್ರಿಯೆಯ ಹಿಂದಿನ ಕಾರಣಶಕ್ತಿ ಭಗವಂತ.
ಭಗವಂತ ನಮ್ಮ ಬದುಕಿನಲ್ಲಿ ಉಸಿರು ಕೊಟ್ಟು ಬದುಕಿಸುವ ಅಮೃತ. ಆಯಸ್ಸು ಮುಗಿದಾಗ ಉಸಿರು ನಿಲ್ಲಿಸಿ ಕರೆಸಿ ಕೊಳ್ಳುವವನೂ ಅವನೆ. ಒಟ್ಟಿನಲ್ಲಿ ಕೃಷ್ಣ ಹೇಳುತ್ತಾನೆ “ಕಣ್ಣಿಗೆ ಕಾಣುವ (ಸತ್), ಕಣ್ಣಿಗೆ ಕಾಣದ (ಅಸತ್) ಸಮಸ್ತ ಪ್ರಪಂಚವನ್ನು ನಿರ್ವಹಿಸುವ ಶಕ್ತಿ ನಾನು” ಎಂದು. ಇದು ಕೃಷ್ಣ ಸೂಕ್ಷ್ಮವಾಗಿ ಭಗವಂತನ ಅನುಸಂಧಾನಕ್ಕೆ ಕೊಟ್ಟಿರುವ ಸಮಗ್ರ ಚಿತ್ರಣ. ಇಲ್ಲಿ ಪೂರ್ಣ ಪ್ರಮಾಣದಲ್ಲಿ ಭಗವಂತನ ಅನುಸಂಧಾನಕ್ಕೆ ಬೇಕಾದ ಸಮಗ್ರ ಸಂಗತಿ ಅಡಗಿದೆ.

ಮುಂದೆ ಕೃಷ್ಣ ತನ್ನ ಭಕ್ತರಲ್ಲಿ(ಜ್ಞಾನಿಗಳಲ್ಲೇ) ಪ್ರಮುಖವಾಗಿ ಎರಡು ವಿಧದ ಭಕ್ತರ ಬಗ್ಗೆ ವಿವರಿಸುತ್ತಾನೆ. ಅವರೆಂದರೆ ತ್ರೈವಿದ್ಯರು ಮತ್ತು ಭಾಗವತರು.   

ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾಃ ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ
ತೇ ಪುಣ್ಯಮಾಸಾದ್ಯ ಸುರೇಂದ್ರ ಲೋಕಮಶ್ನಂತಿ ದಿವ್ಯಾನ್ ದಿವಿ ದೇವಭೋಗಾನ್ ೨೦

ತ್ರೈ ವಿದ್ಯಾಃ ಮಾಮ್  ಸೋಮಪಾಃ ಪೂತ ಪಾಪಾಃ ಯಜ್ಞೈಃ ಇಷ್ಟ್ವಾ ಸ್ವಃ ಗತಿಮ್ ಪ್ರಾರ್ಥಯಂತೇ
ತೇ ಪುಣ್ಯಮ್ ಆಸಾದ್ಯ ಸುರ ಇಂದ್ರ ಲೋಕಮ್ ಅಶ್ನಂತಿ ದಿವ್ಯಾನ್ ದಿವಿ ದೇವ ಭೋಗಾನ್ – ತ್ರೈವಿದ್ಯರು ಮೂರು ವೇದಗಳ ಮೊರೆಹೊಕ್ಕ ಹಂಬಲಿಗರು. ಹೊಮಿಸುತ್ತ ನನ್ನನಾರಾಧಿಸಿ, ಸೋಮರಸ ಕುಡಿದು, ಪಾಪ ತೊಡೆದು, ಸಗ್ಗದ ದಾರಿಯನ್ನು ಬೇಡುತ್ತಾರೆ. ಅವರು ಪುಣ್ಯದ ಫಲವಾಗಿ ದೇವೇಂದ್ರನ ನಾಡು ಸೇರಿ, ಆ ಸಗ್ಗದಲ್ಲಿ ವೆಗ್ಗಳದ ದೇವಭೂಗಗಳನ್ನು ಉಣ್ಣುತ್ತಾರೆ.

ತ್ರೈವಿದ್ಯರು ಎಂದರೆ ತ್ರಿಪಥಗಾಮಿಗಳು! ಇವರು ಭಗವಂತನ ಜೊತೆಗೆ ಅನೇಕವನ್ನು ಹಂಚಿಕೊಂಡವರು. ಇವರು ಸ್ವರ್ಗದ ಬಯಕೆ, ಲೌಕಿಕ ಬಯಕೆಯನ್ನು ಮುಂದಿಟ್ಟು ಭಗವಂತನಲ್ಲಿ ಭಕ್ತಿ ಮಾಡುತ್ತಾರೆ. ಇವರಿಗೆ ವೇದದಲ್ಲಿ ಹೇಳಿದ ಕರ್ಮಖಂಡವೇ ಮುಖ್ಯವಾಗುತ್ತದೆ. ಜ್ಯೋತಿಷ್ಟೋಮಯ ಯಾಗಗದಂತಹ ಯಾಗವನ್ನು ಕೇವಲ ಸ್ವರ್ಗದ ಬಯಕೆಯಿಂದ ಮಾಡಿ, ಭಗವಂತನನ್ನು ಬಯಸದೆ ಸ್ವರ್ಗವನ್ನು ಬಯಸುತ್ತಾರೆ. ಹೀಗೆ ಭಕ್ತಿ ಮಾಡುವುದರ ಫಲವಾಗಿ ಅವರು ಇಂದ್ರನ ನಾಡಾದ ಸ್ವರ್ಗವನ್ನು ಸೇರಿ ಅಲ್ಲಿ ಭೋಗವನ್ನು ಅನುಭವಿಸುತ್ತಾರೆ.     

ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ       
ಏವಂ ತ್ರಯೀಧರ್ಮಮನುಪ್ರಪನ್ನಾಃ  ಗತಾಗತಂ ಕಾಮಕಾಮಾ ಲಭಂತೇ ೨೧

ತೇ ತಮ್  ಭುಕ್ತ್ವಾ ಸ್ವರ್ಗ ಲೋಕಮ್  ವಿಶಾಲಮ್  ಕ್ಷೀಣೇ ಪುಣ್ಯೇ ಮರ್ತ್ಯ ಲೋಕಮ್  ವಿಶಂತಿ 
ಏವಮ್  ತ್ರಯೀ ಧರ್ಮಮ್ ಅನುಪ್ರಪನ್ನಾಃ  ಗತಗತಮ್  ಕಾಮ ಕಾಮಾಃ  ಲಭಂತೇ – ಅವರು ಹಿರಿದಾದ ಸಗ್ಗಿಗರ ನಾಡನ್ನು ಕಂಡುಂಡು, ಪುಣ್ಯ ಮುಗಿದಾಗ ಭೂಮಿಗೆ ಮರಳುತ್ತಾರೆ. ಹೀಗೆ ವೈದಿಕ ಕರ್ಮಗಳ ಮೊರೆ ಹೊಕ್ಕು, ಬಯಕೆಗಳ ಬೆನ್ನುಹತ್ತಿ ಅತ್ತಿಂದಿತ್ತ ಅಲೆದಾಡುತ್ತಿರುತ್ತಾರೆ.

ಸ್ವರ್ಗದ ಬಯಕೆಯಿಂದ ಪುಣ್ಯಕರ್ಮ ಮಾಡುವ ತ್ರೈವಿದ್ಯರು ಸ್ವರ್ಗವನ್ನು ಸೇರಿ ಅಲ್ಲಿ ಬಗೆ ಬಗೆಯ ಭೋಗವನ್ನು ಅನುಭವಿಸಿ ತಮ್ಮ ಸತ್ಕರ್ಮದ ಫಲ ಮುಗಿದ ತಕ್ಷಣ ಪುನಃ ಭೂಲೋಕದಲ್ಲಿ ಹುಟ್ಟುತ್ತಾರೆ. ಈ ಕಾರಣದಿಂದ ಇವರು ಅತ್ಯಂತ ಹಿರಿದಾದ ಮೋಕ್ಷದಿಂದ, ಭಗವಂತನಿಂದ   ವಂಚಿತರಾಗುತ್ತಾರೆ. ಇವರು ಸದಾ ಬಯಕೆಗಳ ಬೆನ್ನು ಹತ್ತಿ  ಚಕ್ರಭ್ರಮಣದಲ್ಲಿ ಸಿಲುಕಿ ಕೊಳ್ಳುತ್ತಾರೆ.

ಇವರಿಗಿಂತ ತೀರ ಭಿನ್ನ ನಡೆ ಭಾಗವತರದ್ದು:   

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ೨೨

ಅನನ್ಯಾಃ ಚಿಂತಯಂತಃ ಮಾಮ್  ಯೇ ಜನಾಃ ಪರ್ಯುಪಾಸತೇ
ತೇಷಾಮ್  ನಿತ್ಯಭಿಯುಕ್ತಾನಾಮ್  ಯೋಗ ಕ್ಷೇಮಮ್  ವಹಾಮಿ ಅಹಮ್- ಬೇರೆಲ್ಲಾ ತೊರೆದು ನನ್ನನ್ನೆ ನೆನೆಯುತ್ತ ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲು ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು.

ಭಾಗವತರು ಯಾವುದನ್ನೂ ಬೇಕು ಎಂದು ಬಯಸುವುದಿಲ್ಲ. ಅವರಿಗೆ ಭಗವಂತನ ಚಿಂತನೆಯೊಂದನ್ನು ಬಿಟ್ಟರೆ ಬೇರೆ ಚಿಂತನೆಯೇ ಇಲ್ಲ. ಇವರು ಅನನ್ಯವಾಗಿ ಭಗವಂತನನ್ನು ಮಾತ್ರ ಬಯಸುತ್ತಾರೆ. ಯಾವುದೋ ಬಯಕೆಗೆ ಕಟ್ಟು ಬಿದ್ದು ಅವರು ಪೂಜೆ ಮಾಡುವುದಿಲ್ಲ. ಇವರು ಭಗವಂತನಲ್ಲದೆ ಇನ್ನ್ಯಾವುದೇ ದೇವತೆಯನ್ನು ಪ್ರಧಾನವಾಗಿಟ್ಟುಕೊಂಡು ಆಹುತಿ ಕೊಟ್ಟು ಆರಾಧನೆ ಮಾಡುವುದಿಲ್ಲ. ಎಲ್ಲ ದೇವತೆಯ ಒಳಗೂ ಇವರು ಕೇವಲ ಭಗವಂತನನ್ನು ಕಾಣುತ್ತಾರೆ. ಇದು ಏಕಭಕ್ತಿ-ಪರಮಾತ್ಮನನ್ನು, ಮೋಕ್ಷವನ್ನು ಸೇರಲು ಅನುಸರಿಸಬೇಕಾದ ಮಾರ್ಗ.
ನಾವು ಪೂಜೆ ಮಾಡಿಸಿದಾಗ ಸಂಕಲ್ಪ ಮಾಡಿಸುತ್ತಾರೆ. ಇಲ್ಲಿ ನಾವು ಎಂದೂ ನಮ್ಮ ಐಹಿಕ ಬಯಕೆಗಳನ್ನು ಭಗವಂತನ ಮುಂದಿಡಬಾರದು. ಕೇವಲ ಜ್ಞಾನ, ಭಕ್ತಿ, ಮೋಕ್ಷ- ಇದು ನಮ್ಮ ಸಂಕಲ್ಪವಾಗಿರಬೇಕು. ನಶ್ವರವಾದ ಬಯಕೆಗಳನ್ನು ಮುಂದಿಟ್ಟು ಪೂಜೆ ಮಾಡಿಸಿದಾಗ ನಾವು ಮಹತ್ತಾದ ಫಲವನ್ನು ಕಳೆದುಕೊಳ್ಳುತ್ತೇವೆ. ನಮಗೆ ಏನು ಬೇಕು ಏನು ಬೇಡ ಎನ್ನುವುದು  ಆ ಭಗವಂತನಿಗೆ ನಮಗಿಂತ ಚನ್ನಾಗಿ ಗೊತ್ತು ಮತ್ತು ಆತ ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ. ಪೂಜೆ ಕೇವಲ ಭಗವಂತನ ಪ್ರೀತ್ಯಾರ್ಥವಾಗಿ ಮಾಡಿ ಆತನಲ್ಲಿ ಅನನ್ಯ ಭಕ್ತಿ ನೆಟ್ಟಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಕೃಷ್ಣ ಹೇಳುತ್ತಾನೆ “ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್” ಇಂತಹ ಭಕ್ತರ ಯೋಗಕ್ಷೇಮದ ಹೊಣೆ ನನ್ನದು ಎಂದು. ಇದಕ್ಕಿಂತ ಹೆಚ್ಚಿನ ಭರವಸೆ ಏನು ಬೇಕು?  
ನಾವು ಗಾಢವಾಗಿ “ಭಗವಂತ ನಮ್ಮನ್ನು ರಕ್ಷಿಸಿಯೇ ರಕ್ಷಿಸುತ್ತಾನೆ” ಎಂದು ಗಟ್ಟಿಯಾಗಿ ನಂಬಿದರೆ ಆತ ರಕ್ಷಿಸಿಯೇ ರಕ್ಷಿಸುತ್ತಾನೆ. ಭಗವಂತನ ಮೇಲಿನ ನಮ್ಮ  ನಂಬಿಕೆಯಲ್ಲಿ ನಾವು ಎಂದೂ ವಿಚಲಿತರಾಗಬಾರದು. ಅದು ದೃಢವಾಗಿರಬೇಕು. ಗುರಿ ಕೇವಲ ಭಗವಂತನನ್ನು ಸೇರುವತ್ತ ಇರಬೇಕು. ಭಗವಂತ ಏನು ಕೊಟ್ಟನೋ ಅದೇ ಮಹಾ ಪ್ರಸಾದವೆಂದು ಸ್ವೀಕರಿಸಿ ಸಂಪೂರ್ಣ ಆತನಲ್ಲಿ ಶರಣಾಗಬೇಕು. ಇಂತಹ ಸ್ಥಿತಿಯಲ್ಲಿ ನಮಗೆ ಎಂದೂ ದುಃಖವಾಗುವುದಿಲ್ಲ. ಬದುಕು ಆನಂದಮಯವಾಗಿರುತ್ತದೆ. ಜೀವನದಲ್ಲಿ ಏನೇ ಘಟನೆ ನಡೆದರೂ “ಭಗವಂತನ ಚಿತ್ತದಂತೆ ಆಯಿತು” ಎಂದು ತಿಳಿದು ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿ ನಮ್ಮದಾಗಬೇಕು. ಇದು ಮೋಕ್ಷದ ಹೆಬ್ಬಾಗಿಲು.  

No comments:

Post a Comment