Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, August 23, 2011

Bhagavad Geeta Kannada Chapter-10 Shloka 4-5


ಬುದ್ಧಿರ್ಜ್ಞಾನಮಸಂಮೋಹಃ ಕ್ಷಮಾ ಸತ್ಯಂ ದಮಃ ಶಮಃ      
ಸುಖಂ ದುಃಖಂ ಭವೋSಭಾವೋ ಭಯಂ ಚಾಭಯಮೇವ ಚ

ಬುದ್ಧಿಃ ಜ್ಞಾನಮ್ ಅಸಮ್ಮೋಹಃ ಕ್ಷಮಾ ಸತ್ಯಮ್  ದಮಃ ಶಮಃ          
ಸುಖಮ್  ದುಃಖಮ್  ಭವಃ ಅಭಾವಃ  ಭಯಮ್ ಚ ಅಭಯಮ್ ಏವ ಚ --ವಿವೇಕಃ[ಅಂತಃಕರಣ], ಅರಿವು, ಕೆಟ್ಟದ್ದನ್ನು ಮಾಡಬಯಸದಿರುವುದು, ತಪ್ಪಿಗನ ಮೇಲೂ ರೇಗದಿರುವುದು, ದಿಟದ ನಡೆ, ಇಂದ್ರಿಯಗಳ ಹಿಡಿತ, ಭಗವಂತನಲ್ಲಿ ನಿಷ್ಠೆ, ಸುಖ-ದುಃಖ, ಹುಟ್ಟು-ಸಾವು, ಪುಕ್ಕು-ಕೆಚ್ಚು ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ.

ಭಗವಂತನ ಉಪಾಸನೆಯಲ್ಲಿ ನಾವು ತಿಳಿದಿರಬೇಕಾದ ಮುಖ್ಯವಾದ ವಿಚಾರವನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ನಮಗೆ ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮಾ, ಸತ್ಯಂ, ದಮಃ-ಶಮಃ -ಎಲ್ಲವನ್ನು ಕೊಡುವವನು ಆ ಭಗವಂತ. ಕೆಲವರಿಗೆ ತಾವು ತುಂಬಾ ಬುದ್ಧಿವಂತರು ಎನ್ನುವ ಭ್ರಮೆ ಇರುತ್ತದೆ. ಆದರೆ ಆ ಬುದ್ಧಿಶಕ್ತಿಯನ್ನು ಕರುಣಿಸುವವ ಭಗವಂತ ಎನ್ನುವ ಸತ್ಯವನ್ನು ಅವರು ತಿಳಿದಿರುವುದಿಲ್ಲ. ಕೃಷ್ಣ ಹೇಳುತ್ತಾನೆ: “ನಿನಗೆ ಬುದ್ಧಿ ಕೊಡುವವನೂ ನಾನು,  ಜ್ಞಾನ ಕೊಡುವವನೂ ನಾನು” ಎಂದು. ಇಲ್ಲಿ ‘ಜ್ಞಾನ’ ಎಂದರೆ ಒಂದು ವಸ್ತುವಿನ ಅರಿವು. ‘ಬುದ್ಧಿ’ ಎಂದರೆ ಏನು ಮಾಡಬೇಕು, ಏನು ಮಾಡಬಾರದು ಎನ್ನುವ ವಿವೇಕ. ನಮ್ಮಲ್ಲಿ ಬುದ್ಧಿ ಮತ್ತು ಜ್ಞಾನ ಎರಡೂ ಇದ್ದಾಗ ಮಾತ್ರ ಅದು ಪೂರ್ಣ. ಜ್ಞಾನವಿದ್ದು ಬುದ್ಧಿ ಇಲ್ಲದಿದ್ದರೆ ವೇದ ನಮ್ಮಿಂದ ದೂರವಾಗುತ್ತದೆ. “ಆಚಾರ ಹೀನಂ ನ ಪುನಂತಿ ವೇದಾಃ”-ಒಬ್ಬ ಮನುಷ್ಯ ಆಚಾರ ಹೀನನಾಗಿದ್ದರೆ ಅವನನ್ನು ಎಲ್ಲ ವೇದಗಳೂ  ಕೈಬಿಡುತ್ತವೆ. ರೆಕ್ಕೆ ಬಲಿತ ಹಕ್ಕಿಮರಿಗಳು ತಮ್ಮ ಗೂಡನ್ನು ಬಿಟ್ಟು ಹಾರಿ ಹೋದಂತೆ ವೇದವಿದ್ಯೆ ಅವನನ್ನು ಬಿಟ್ಟು ಹಾರಿ ಹೋಗುತ್ತದೆ. ಆಚಾರವಂತನಾಗಿರಬೇಕು ಎಂದು ತಿಳಿದಿರುವುದು ಜ್ಞಾನ. ಆದರೆ ಯಾವುದು ಆಚಾರ-ಯಾವುದು ಅನಾಚಾರ ಎನ್ನುವ ವಿವೇಕ ಪ್ರಜ್ಞೆ-ಬುದ್ಧಿ. ಬುದ್ಧಿ-ಜ್ಞಾನದ ಜೊತೆಗೆ  ಯಾವುದೇ ಸಂಶಯವಿಲ್ಲದೆ ಸತ್ಯವನ್ನು ತಿಳಿಯುವ  ಗ್ರಹಣಶಕ್ತಿ ‘ಅಸಮ್ಮೋಹ’. ಇವು ಬದುಕಿನಲ್ಲಿ ನಮಗೆ ಆಸರೆಯಾಗಿರುವ  ಮೂರು ಮುಖ್ಯ ಆಧಾರಸ್ಥಂಭಗಳು. ನಾವು ಇದನ್ನು ತಿಳಿದು ಆ ಭಗವಂತನನ್ನು ಉಪಾಸನೆ ಮಾಡಬೇಕು.
ನಾಲ್ಕನೇ ಗುಣ ‘ಕ್ಷಮಾ’. ಇದು ಅತ್ಯಂತ ದೊಡ್ಡ ಗುಣ. ಯಾರಾದರು ನಮ್ಮನ್ನು ಟೀಕೆ ಮಾಡಿದರೆ- ಆ ಟೀಕೆಯಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಅಂಶ ಇದ್ದರೆ ತಿದ್ದಿಕೊಳ್ಳುವುದು, ಇಲ್ಲದೆ ಅದು ಕೇವಲ ಅಸೂಯೆಯ ಟೀಕೆಯಾಗಿದ್ದರೆ ಯಾವುದೇ ಪ್ರತಿಕಾರವಿಲ್ಲದೆ ವಿಷಯವನ್ನು ಅಲ್ಲೇ ಬಿಟ್ಟುಬಿಡುವುದು ‘ಕ್ಷಮಾ’.
ಐದನೇ ಗುಣ ‘ಸತ್ಯಂ’. ಸತ್ಯಮ್  ಎಂದರೆ ಪ್ರಾಮಾಣಿಕತೆ. ಇಂದು ನಾವು ಸಜ್ಜನಿಕೆಯನ್ನು ಮರೆತು ಸಜ್ಜೆನಿಕೆಯ ಮುಖವಾಡದಲ್ಲಿ ಬದುಕುತ್ತಿದ್ದೇವೆ. ಅಪ್ರಮಾಣಿಕತೆ ಎನ್ನುವುದು ನಮ್ಮ ಜೀವನವನ್ನು ಆವರಿಸಿಕೊಂಡುಬಿಟ್ಟಿದೆ. ಪ್ರಾಮಾಣಿಕತೆ ಇಲ್ಲದೆ ಯಾವ ಆಚಾರ ಸಂಪತ್ತಿದ್ದರೂ ಉಪಯೋಗವಿಲ್ಲ. ಒಬ್ಬ ವ್ಯಕ್ತಿಯ ಎದುರೊಂದು ಮತ್ತು ಹಿಂದೊಂದು ಮಾತನಾಡುವುದು ಅಪ್ರಮಾಣಿಕತೆ. ನಮಗೆ ಇನ್ನೊಬ್ಬ ವ್ಯಕ್ತಿಯ ವಿಚಾರ ಇಷ್ಟವಾಗದೆ ಇದ್ದಲ್ಲಿ ಅವರಿಗೆ ಅದನ್ನು ನೇರವಾಗಿ ಹೇಳಬಹುದು ಅಥವಾ ಅವರಿಂದ ದೂರವಿರಬೇಕು. ನಮ್ಮಲ್ಲಿ ಪ್ರಾಮಾಣಿಕತೆ ಎಲ್ಲಿಯ ತನಕ ಬೆಳೆಯುವುದಿಲ್ಲವೋ ಅಲ್ಲಿಯ ತನಕ ಯಾವ ಶಾಸ್ತ್ರವೂ ನಮ್ಮನ್ನು ಉದ್ಧಾರ ಮಾಡುವುದಿಲ್ಲ. ನಾವು ನಮಗೆ ಇಂತಹ ಪ್ರಾಮಾಣಿಕತೆ ಕೊಡು ಎಂದು ಭಗವಂತನನ್ನು ಉಪಾಸನೆ ಮಾಡಬೇಕು.
ಆರನೆಯದಾಗಿ ದಮಾಃ. ಇದು ಇಂದ್ರಿಯಗಳಿಗೆ ಸಂಬಂಧಪಟ್ಟಿದ್ದು. ನಮ್ಮ ಇಂದ್ರಿಯಗಳು ನಾವು ಹೇಳಿದಂತೆ ಕೇಳುವುದಿಲ್ಲ. ಅವು ನಮ್ಮನ್ನು ಬೇಡದ ಕಡೆ ಸೆಳೆಯುತ್ತವೆ. ಇದರಿಂದ ನೋಡಬಾರದ್ದನ್ನು ನೋಡುವುದು, ಆಡಬಾರದ್ದನ್ನು ಆಡುವುದನ್ನು ನಾವು ಮಾಡುತ್ತೇವೆ. ಇಂತಹ ಇಂದ್ರಿಯನಿಗ್ರಹ ದಮಾಃ. ಇಂದ್ರಿಯ ನಿಗ್ರಹಕ್ಕೆ ಇರುವ ಏಕಮಾತ್ರ ಮಾರ್ಗ ಭಗವಂತನಲ್ಲಿ ಶರಣಾಗತಿ.
ಏಳನೆಯ ಗುಣ ಶಮಾಃ. ನಮ್ಮ ಮನಸ್ಸು ಶಾಂತವಾಗಿರುವುದು(to be in blissfull state) ಶಮಾಃ. ಇಂದು ನಾವೆಲ್ಲರೂ ಬದುಕುತ್ತಿರುವುದು ಅಶಾಂತಿ(Tension)ಯಿಂದಲೇ! ಇದಕ್ಕೆ ಮೂಲ ಕಾರಣ ನಾವು ನಮ್ಮ ಮನಸ್ಸನ್ನು ಲೌಕಿಕ ವಿಚಾರದಲ್ಲಿ ಕೇಂದ್ರೀಕರಿಸಿ ಸಾಗುತ್ತಿರುವುದು. ಲೌಕಿಕ ವಿಚಾರವನ್ನು ಬಿಟ್ಟು, ಮನಸ್ಸನ್ನು ಭಗವಂತನ ಕಡೆಗೆ ಹರಿಸಿದಾಗ ಮನಸ್ಸು ಹಾಯಾಗುತ್ತದೆ. ಜೀವನದಲ್ಲಿ ಸಮಸ್ಯೆ ಬಂದರೆ “ದೇವರಿದ್ದಾನೆ, ಆತ ಬಿಟ್ಟು ಹಾಕುವುದಿಲ್ಲ” ಎನ್ನುವ ದೃಢನಂಬಿಕೆ ಉಳ್ಳವ ಈ ಸ್ಥಿತಿಯನ್ನು ಗಳಿಸಬಲ್ಲ. ಒಟ್ಟಿನಲ್ಲಿ 'ನಮ್ಮ ಒಳಪ್ರಪಂಚದ ಸರ್ವಸ್ವವೂ ಭಗವಂತ ಎನ್ನುವ ಪರಿಜ್ಞಾನದಿಂದ ನಾವು ಉಪಾಸನೆ ಮಾಡಬೇಕು'-ಎನ್ನುವುದು ಇಲ್ಲಿರುವ ಮೂಲ ಸಂದೇಶ.
ಮುಂದುವರಿದು ಕೃಷ್ಣ ಹೇಳುತ್ತಾನೆ: “ಸುಖ-ದುಃಖ, ಹುಟ್ಟು-ಸಾವು, ಪುಕ್ಕು-ಕೆಚ್ಚು- ಬಗೆ ಬಗೆಯ ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ” ಎಂದು. ಸುಖ-ದುಃಖ ಎನ್ನುವುದು ದ್ವಂದ್ವ. ಜೀವನದಲ್ಲಿ ಇವೆರಡೂ ಒಟ್ಟಿಗೇ ಇರುತ್ತವೆ ಮತ್ತು  ಒಂದರ ನಂತರ ಒಂದು ಬರುತ್ತಿರುತ್ತವೆ. ಯಾರಿಗೂ ಸುಖವಿಲ್ಲದ ದುಃಖವಾಗಲಿ, ದುಃಖವಿಲ್ಲದ ಸುಖವಾಗಲಿ ಇಲ್ಲ. ಇದು ನಮ್ಮ ಜೀವನದಲ್ಲಿ ಹಗಲು-ರಾತ್ರಿ ಇದ್ದಂತೆ. ಈ ಸತ್ಯವನ್ನು ತಿಳಿದಾಗ ದುಃಖವೆನ್ನುವುದು ದುರ್ಬರವಾಗದು. ನಮ್ಮ ಜೀವನದಲ್ಲಿ ಏರಿಳಿತ ಎನ್ನುವುದು ಸಾಮಾನ್ಯ. ಹುಟ್ಟು-ಸಾವು ನೈಸರ್ಗಿಕ. ನಮ್ಮಲ್ಲಿ ಜ್ಞಾನವಿದ್ದರೆ ಅದೇ ಅಭಯ, ಇಲ್ಲದಿದ್ದರೆ ಭಯ. ಇವೆಲ್ಲವೂ ಭಗವಂತನ ಅಧೀನ.

ಹೀಗೆ ಈ ಶ್ಲೋಕದಲ್ಲಿ ಮನುಷ್ಯನ ಮನಸ್ಸಿನಲ್ಲಿ ಮೂಡುವ ಎಲ್ಲಾ ಭಾವನೆಗಳು-ಆ ಭಾವನೆಗಳಿಂದ ಆಗತಕ್ಕ ಎಲ್ಲಾ ಪರಿವರ್ತನೆ ಮತ್ತು ಪರಿಣಾಮಗಳು-ಎಲ್ಲದರ ಹಿಂದಿರುವ ಭಗವತ್ ಶಕ್ತಿ ಬಗ್ಗೆ ಕೃಷ್ಣ ವಿವರಿಸಿದ. ಮುಂದಿನ ಶ್ಲೋಕದಲ್ಲಿ ಕೃಷ್ಣ ನಾವು ಗಳಿಸಿಕೊಳ್ಳಬೇಕಾದ ಏಳು ಮಾನಸಿಕ ಗುಣವನ್ನು ವಿವರಿಸುತ್ತಾನೆ.

ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋSಯಶಃ   
ವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ ವಿಧಾಃ

ಅಹಿಂಸಾ ಸಮತಾ ತುಷ್ಟಿಃ ತಪಃ (ಅ)ದಾನಮ್  ಯಶಃ ಅಯಶಃ       
ವಂತಿ ಭಾವಾಃ  ಭೂತಾನಾಮ್  ಮತ್ತಃ ಏವ ಪೃಥಕ್  ವಿಧಾಃ -- ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್ಸು, ದಾನ, ಹೆಸರು, ಕೆಟ್ಟ ಹೆಸರು- ಬಗೆ ಬಗೆಯ ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ.

ಕೃಷ್ಣ ಹೇಳುತ್ತಾನೆ “ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್ಸು, (ಅ)ದಾನ, ಹೆಸರು, ಕೆಟ್ಟ ಹೆಸರು” ಇವು ನನ್ನಿಂದ ಎಂದು. ಇಲ್ಲಿ ಅಹಿಂಸೆ ಮತ್ತು ಸಮದೃಷ್ಟಿ ತುಂಬಾ ವಿಶೇಷವಾದುದ್ದು. ಏಕೆಂದರೆ ಹಿಂಸೆಯೂ ಕೆಲವೊಮ್ಮೆ ಅಹಿಂಸೆಯಾಗುತ್ತದೆ  ಮತ್ತು ಅಸಮಾನತೆಯೂ ಸಮಾನತೆಯಾಗುತ್ತದೆ. ಅದಕ್ಕಾಗಿ ಇದನ್ನು ಇಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ್ದಾನೆ ಕೃಷ್ಣ.
ಮೊದಲಿಗೆ ಅಹಿಂಸೆ: ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಅಹಿಂಸೆ. ಇಲ್ಲಿ ಅಹಿಂಸೆ ಎಂದರೆ ಕೇವಲ ಶಾರೀರಿಕವಾಗಿ ಮಾತ್ರವಲ್ಲ, ಮನಸ್ಸು ಮತ್ತು ಮಾತಿನಲ್ಲೂ ನಾವು ಅಹಿಂಸೆಯನ್ನು ಸಾಧಿಸಬೇಕು. ಉದಾಹರಣೆಗೆ: ಒಬ್ಬರನ್ನು ಚುಚ್ಚು ಮಾತಿನಿಂದ ಹಂಗಿಸುವುದು, ಮಾನಸಿಕವಾಗಿ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಶಾಪ ಹಾಕುವುದು ಕೂಡಾ ಹಿಂಸೆ. ಕೆಲವೊಮ್ಮೆ ಹಿಂಸೆಯೇ ಅಹಿಂಸೆಯಾಗುತ್ತದೆ. ಉದಾಹರಣೆಗೆ: ಒಂದು ನರಭಕ್ಷಕ ಹುಲಿಯನ್ನು ಕೊಲ್ಲುವುದರಿಂದ ಊರಿನ ಅನೇಕ ಜನರ ಪ್ರಾಣ ಉಳಿಯುವುದಾದರೆ ಅದನ್ನು ಕೊಲ್ಲುವುದು ಅಹಿಂಸೆ.[ನಾವು ಈ ರೀತಿಯ ಅಹಿಂಸೆಯನ್ನು ಕೃಷ್ಣನ ಅನೇಕ ಕೃತಿಗಳಲ್ಲಿ ಕಾಣುತ್ತೇವೆ]. ದೊಡ್ಡ ಹಿಂಸೆಯನ್ನು ತಡೆಯುವುದಕ್ಕೊಸ್ಕರ ಮಾಡುವ ಚಿಕ್ಕ ಹಿಂಸೆ-ಅಹಿಂಸೆ. ನಾವು ನಮ್ಮ ಮಾತಿನಿಂದ, ಕೃತಿಯಿಂದ ಮತ್ತು ಮನಸ್ಸಿನಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ನಡೆದುಕೊಳ್ಳಬೇಕು.
ಎರಡನೆಯ ಗುಣ ಸಮದೃಷ್ಟಿ (ಸಮತಾಃ) : ಇಲ್ಲಿ ಸಮದೃಷ್ಟಿ ಎಂದರೆ ಎಲ್ಲರನ್ನೂ ಏಕ ರೂಪದಲ್ಲಿ ನೋಡುವುದು ಎಂದರ್ಥವಲ್ಲ. ಇದು ಯೋಗ್ಯತೆಗನುಗುಣವಾದ ಸಮದೃಷ್ಟಿ. ಉದಾಹರಣೆಗೆ: ಒಂದು ಶಾಲೆಯಲ್ಲಿ ಚನ್ನಾಗಿ ಓದಿ ಬರೆದ ವಿದ್ಯಾರ್ಥಿ ಹಾಗು ಓದದೆ ಪೋಲಿಯಾಗಿರುವ ಇನ್ನೊಬ್ಬ ವಿದ್ಯಾರ್ಥಿಗೆ ಸಮನಾದ ಅಂಕವನ್ನು ಕೊಡುವುದು ಸಮಾನತೆ ಅಲ್ಲ. ಯಾವುದೇ ದ್ವೇಷವಿಲ್ಲದೆ, ಶತ್ರು, ಮಿತ್ರ, ಸ್ಥಳೀಯ, ಪರಕೀಯ ಎನ್ನುವ ಭೇದವಿಲ್ಲದೆ, ಅವರವರ ಯೋಗ್ಯತೆಗೆ ತಕ್ಕಂತೆ ಅಂಕ ವಿತರಣೆ ಮಾಡುವುದು ಸಮಾನತೆ. ಯಾರನ್ನು ಹೇಗೆ ನೋಡಬೇಕೋ ಅವರನ್ನು ಹಾಗೆ ನೋಡುವುದು. ತಂದೆಯನ್ನು ತಂದೆಯಂತೆ, ತಾಯಿಯನ್ನು ತಾಯಿಯಂತೆ, ಗುರುವನ್ನು ಗುರುವಂತೆ ಹೀಗೆ ಯಾರು ಸಮಾನರೋ ಅವರನ್ನು ಸಮಾನವಾಗಿ ಗೌರವಿಸುವುದು ಸಮದೃಷ್ಟಿ.
ಮೂರನೆಯ ಗುಣ ತೃಪ್ತಿ: ಮನುಷ್ಯನ ಎಲ್ಲಾ ದುಃಖಗಳಿಗೆ ಮುಖ್ಯ ಕಾರಣ ಅತೃಪ್ತಿ. ಇಂದಿನ ಸಮಾಜದಲ್ಲಿ ನಮ್ಮ ಮನೆಯಲ್ಲಿ ನಮಗೆ ಅಗತ್ಯಕ್ಕೆ ಬೇಕಾದಷ್ಟು ಇದ್ದರೂ ಕೂಡ ಮಾಧ್ಯಮಗಳಲ್ಲಿ ಬರುವ ಜಾಹಿರಾತಿಗೆ ಮರುಳಾಗಿ, ಅಥವಾ ನೆರಮನೆಯವರಿಗೆ ಪ್ರತಿಸ್ಪರ್ಧಿಯಾಗಿ, ಸದಾ ಅತೃಪ್ತಿಯಲ್ಲಿ ನಾವು ಬದುಕುತ್ತೇವೆ. ಕೆಲಸ ಇಲ್ಲದಾಗ ಕೆಲಸದ ಆಸೆ, ನಂತರ ಎಷ್ಟು ಸಂಬಳ ಬಂದರೂ ಅಲ್ಲಿ ಅತೃಪ್ತಿ. ಇಲ್ಲದ್ದನ್ನು ಯೋಚಿಸಿ ಕೊರಗದೆ, ಇದ್ದದ್ದನ್ನು ಯೋಚಿಸಿ ಖುಷಿ ಪಡುವುದು(Be content with whatever you have) ನಿಜವಾದ ತೃಪ್ತಿ.
ನಾಲ್ಕನೆಯದು ತಪಸ್ಸು: ಇದರಲ್ಲಿ ಮೂರು ಬಗೆ:  ಕಾಯಾ-ವಾಚಾ-ಮನಸಾ ತಪಃ.  ಕಾಯ ಅಂದರೆ ದೇಹ. ದೇಹದ ಮೂಲಕ ತಪಸ್ಸು. ಸಾಮಾನ್ಯವಾಗಿ ದೇಹ ಹೇಳಿದಂತೆ ಕೇಳದೆ ಇರುವುದು ಆಹಾರ ಅತ್ಯಯ ಅಥವಾ ವ್ಯತ್ಯಯದಿಂದ. ಆಹಾರ ನಿಯಂತ್ರಣ ಮಾಡಿದಾಗ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಮನಸ್ಸು ನಿಯಂತ್ರಣದಲ್ಲಿದ್ದರೆ ದೇಹ ಸ್ಥಿರವಾಗಿರಲು ಸಾಧ್ಯ. ಇದಕ್ಕಾಗಿ ನಾನಾ ರೀತಿಯ ನಿಯಂತ್ರಣ ಸಾಧನವಾದ ವೃತಾನುಷ್ಠಾನ ಮಾಡುವುದು. ಒಟ್ಟಿನಲ್ಲಿ ಅಹಂಕಾರ ಅಸೂಯೆ ಪಡದೆ ಬಗ್ಗುವ ಗುಣ ಬರುವುದು  ದೇಹದ ತಪಸ್ಸಿನಿಂದ. ಇನ್ನೊಬ್ಬರಿಗೆ ಹಿತವೆನಿಸುವ, ಸತ್ಯವಾದ-ಸಹಜ ಮಾತನ್ನಾಡುವುದು; ಶಾಸ್ತ್ರಗಳ ಶ್ರವಣ-ಮನನ ಮಾಡಿ ಅದರಿಂದ ಸ್ವಪ್ರವಚನ ಅಭ್ಯಸಿಸಿ ಅದನ್ನು ಅರಗಿಸಿಕೊಂಡು ಇನ್ನೊಬ್ಬರಿಗೆ ಪ್ರವಚನ ಮಾಡಿ, ಮುಂದಿನ ತಲೆಮಾರಿಗೆ ಕೊಡುವುದು ವಾಚ-ತಪಃ. ಮಾನಸಿಕವಾಗಿ ಸದಾ ಆಳವಾದ ಚಿಂತನೆ ಮನಸಾ-ತಪಃ.
ಐದನೆಯದು (ಅ)ದಾನ: ದಾನ ಶಬ್ದಕ್ಕೆ ಸಂಸ್ಕೃತದಲ್ಲಿ ಎರಡು ಅರ್ಥವಿದೆ. ಒಂದು ‘ಕೊಡುವುದು’ ಇನ್ನೊಂದು ‘ತುಂಡರಿಸುವುದು’. ಕೊಡುವುದರಿಂದ ಅದು ನಮ್ಮ ಪಾಪವನ್ನು ತುಂಡರಿಸಿದರೆ ಅದು ದಾನ. ಬದಲಿಗೆ ನಮ್ಮ ಪುಣ್ಯವನ್ನು ತುಂಡರಿಸಿದರೆ ಅದು ಅದಾನ.
ನಮಗೆ ಅನುಪಯುಕ್ತವಾದ ವಸ್ತುವನ್ನು ಸಾಗಹಾಕುವುದಕ್ಕೋಸ್ಕರ ಕೊಡುವ ದಾನ ದಾನವಲ್ಲ. ಅತೀ ಅಗತ್ಯವಾದ ವಸ್ತು ಇನ್ನೊಬ್ಬರಲ್ಲಿ ಇಲ್ಲದೆ ಅದು  ನಮ್ಮಲ್ಲಿ ಇದ್ದರೆ, ನಮ್ಮಲ್ಲಿರುವುದನ್ನು ಅವರಿಗೆ ಹಂಚಿ ಅವರ  ಕೊರತೆ ನೀಗಿಸುವುದು ನಿಜವಾದ ದಾನ. ಒಬ್ಬ ವ್ಯಕ್ತಿ ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲದೆ ಪರದಾಡುತ್ತಿರುವಾಗ ನಮ್ಮಲ್ಲಿ ಎರಡು ಹೊತ್ತಿನ ಊಟಕ್ಕಾಗುವಷ್ಟು ಧಾನ್ಯವಿದ್ದರೆ, ನಮ್ಮ ನಾಳೆಯ ಬಗ್ಗೆ ಯೋಚಿಸದೆ, ಆ ವ್ಯಕ್ತಿಗೆ ಒಂದು ಹೊತ್ತಿನ ಧಾನ್ಯವನ್ನು ದಾನ ಮಾಡುವುದು ನಿಜವಾದ ದಾನ.
ದಾನದಲ್ಲಿ ಅಶನ-ವಸನ-ಅನ್ನ ಇದನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದು. ಇರುವುದಕ್ಕೆ ತಾಣ, ಉಡುವುದಕ್ಕೆ ಬಟ್ಟೆ, ಹಸಿದವನಿಗೆ ಅನ್ನ. ಇದನ್ನು ಕೊಡುವುದಕ್ಕೆ ಯೋಗ್ಯ-ಅಯೋಗ್ಯ ಎನ್ನುವ ನಿರ್ಬಂಧವಿಲ್ಲ. ಆದರೆ ಇತರೆ ವಸ್ತುವನ್ನು ದಾನ ಮಾಡುವಾಗ ಯಾವುದು ಯಾರಿಗೆ ಅಗತ್ಯ ಮತ್ತು ಯೋಗ್ಯ ಎಂದು ನೋಡಿ ದಾನ ಮಾಡಬೇಕು. ಪ್ರಚಾರಕ್ಕಾಗಿ ದಾನ ಮಾಡುವುದು-ಅದಾನ. ಯಾವುದೇ ಬಯಕೆ ಇಲ್ಲದೆ ನಿಷ್ಪೃಹತೆಯಿಂದ ಕರ್ತವ್ಯ ದೃಷ್ಟಿಯಿಂದ ಯೋಗ್ಯವಾದ ದೇಶದಲ್ಲಿ, ಯೋಗ್ಯವಾದ ಕಾಲದಲ್ಲಿ, ಯೋಗ್ಯವಾದ ವ್ಯಕ್ತಿಗೆ ಮಾಡುವ ದಾನ ನಿಜವಾದ ದಾನ.
ಕೊನೆಯದಾಗಿ ಕೃಷ್ಣ ಶಃ-ಅಯಶಃವನ್ನು ಇಲ್ಲಿ ಹೇಳಿದ್ದಾನೆ. ಇದು ತುಂಬಾ ವಿಚಿತ್ರವಾದದ್ದು. ಒಬ್ಬ ಕೆಟ್ಟದ್ದನ್ನು ಮಾಡಿ ಒಳ್ಳೆಯವನು ಎಂದು ಯಶಸ್ಸನ್ನು ಗಳಿಸಬಹುದು. ಇನ್ನೊಬ್ಬ ಜೀವಮಾನವೆಲ್ಲ ಒಳ್ಳೆಯ ಕೆಲಸ ಮಾಡಿ ಬೇಡವಾದ ಅಪವಾದ ಕೇಳಿ ದುರಂತಕ್ಕೊಳಗಾಗಬಹುದು. ಇದು ತೀರ್ಮಾನವಾಗುವುದು ನಮ್ಮ ಜೀವನದ ನಡೆಯ ಮೇಲೆ. ಇದಕ್ಕಾಗಿ ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಅಪವಾದ ಬಂದಾಗ ಹೇಗಿರಬೇಕು ಎನ್ನುವುದನ್ನು ಕೃಷ್ಣ ತನ್ನ ಜೀವನ ಕ್ರಮದಲ್ಲಿ ನಮಗೆ ತೋರಿಸಿಕೊಟ್ಟಿದ್ದಾನೆ. ಶಮಂತಕ ಮಣಿಯನ್ನು ಕೃಷ್ಣ ಕದ್ದ ಎನ್ನುವ ಅಪವಾದ ಕೃಷ್ಣನಿಗೆ ಬಂದಾಗ ಕೃಷ್ಣನ ನಡೆ ಇದಕ್ಕೆ ಉತ್ತಮ ದೃಷ್ಟಾಂತ.
ಹೀಗೆ “ಈ ಎಲ್ಲಾ ಭಾವಗಳು ಜೀವಜಾತಕ್ಕೆ ಬರುವುದು ನನ್ನಿಂದಲೆ” ಎನ್ನುತ್ತಾನೆ ಕೃಷ್ಣ. ಯಾರಿಗೆ ಯಾವ ಕಾಲದಲ್ಲಿ ಯಾವ ಭಾವ ಬರಬೇಕು ಅನ್ನುವುದು ಭಗವಂತನ ನಿರ್ಧಾರ. ನಮ್ಮ ಮನಸ್ಸಿನ ಸ್ಥಿತಿಯ ಒಂದೊಂದು ಚಲನ-ವಲನ ಭಗವಂತನ ಅಧೀನ. ಇದು ನಾವು ನಮ್ಮ  ಉಪಾಸನೆಯಲ್ಲಿ ತಿಳಿದಿರಬೇಕಾದ ಮೂಲಭೂತ ಸತ್ಯ. ಇದು ಕೃಷ್ಣ ಕೊಟ್ಟ ಮಾನಸಿಕ ಉಪಾಸನೆಯ ಅದ್ಭುತ ಚಿತ್ರಣ.     

2 comments:

  1. after reading this i came to know that the great character of a person, who is having a sustainability towards insult.

    ReplyDelete
  2. ಓದಿದ ನಿಮಗೆ ಧನ್ಯವಾದಗಳು......

    ReplyDelete