Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, August 21, 2011

Bhagavad Geeta Kannada Chapter-10 Shloka 2-3


ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ           
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ      

ನ ಮೇ ವಿದುಃ ಸುರ ಗಣಾಃ ಪ್ರಭವಮ್  ನ ಮಹಾ ಋಷಯಃ
ಅಹಮ್ ಆದಿಃ ಹಿ ದೇವಾನಾಮ್  ಹಾ ಋಷೀಣಾಮ್  ಚ ಸರ್ವಶಃ –ನನ್ನ ಆಳವನ್ನು, [ನಾನು ಜಗವನ್ನು ನಿರ್ಮಿಸುವ ಬಗೆಯನ್ನು] ದೇವತೆಗಳಾಗಲಿ, ಮಹರ್ಷಿಗಳಾಗಲಿ, ಅಥವಾ ಇನ್ಯಾರೂ ತಿಳಿದಿಲ್ಲ. ದೇವತೆಗಳಿಗೆ, ಹಿರಿಯ ಋಷಿಗಳಿಗೆ , ಎಲ್ಲರಿಗೂ ಮೂಲ ನಾನೆ ಅಲ್ಲವೆ?

ಕೃಷ್ಣ ಇಲ್ಲಿ ಒಂದು ಮೂಲಭೂತವಾದ ಸಂಗತಿಯನ್ನು ತಿಳಿಸುತ್ತಿದ್ದಾನೆ. ಕೃಷ್ಣ ಹೇಳುತ್ತಾನೆ: “ನನ್ನ ಪ್ರಭವವನ್ನು ಮಹರ್ಷಿಗಳಿಂದ ಹಿಡಿದು ಬ್ರಹ್ಮಾದಿ ದೇವತೆಗಳೂ ತಿಳಿದಿಲ್ಲ” ಎಂದು. ಇಲ್ಲಿ ‘ಪ್ರಭವ’ ಎನ್ನುವ ಪದವನ್ನು ಮೂರು ಅರ್ಥದಲ್ಲಿ ಬಳಸಲಾಗಿದೆ. ಪ್ರಭವ ಎಂದರೆ ಮೂಲ ಅಥವಾ ಹುಟ್ಟು; ಪ್ರಭವ ಎಂದರೆ ಸಾಮರ್ಥ್ಯ ಅಥವಾ ಹಿರಿಮೆ; ಪ್ರಭವ ಎಂದರೆ ಜಗತ್ತಿನ ಉತ್ಪತ್ತಿ. “ನನ್ನ ಮೂಲ, ನನ್ನ ಮಹಿಮೆ ಮತ್ತು ನನ್ನಿಂದಾದ ಈ ಜಗತ್ತಿನ ಹುಟ್ಟು-ನನ್ನನ್ನು ಸಾಕ್ಷಾತ್ಕರಿಸಿಕೊಂಡ  ಮಹಾಜ್ಞಾನಿಗಳಿಂದ ಹಿಡಿದು, ನನ್ನ ಅಪರೋಕ್ಷ ಜ್ಞಾನ ಪಡೆದ ಬ್ರಹ್ಮಾದಿ ದೇವತೆಗಳಿಗೂ ತಿಳಿದಿಲ್ಲ” ಎನ್ನುತ್ತಾನೆ ಕೃಷ್ಣ.

ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್
ಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ     

ಯಃ ಮಾಮ್ ಅಜಮ್ ಅನಾದಿಮ್  ಚ ವೇತ್ತಿ ಲೋಕ ಹಾ ಈಶ್ವರಮ್
ಸಮ್ಮೂಢಃ  ಸಃ  ಮರ್ತ್ಯೇಷು ಸರ್ವ ಪಾಪೈಃ ಪ್ರಮುಚ್ಯತೇ –ನಾನು ಹುಟ್ಟಿರದವನು. ಎಲ್ಲವನ್ನು ನಡೆಸುತ್ತ ಎಲ್ಲದರ ಮೊದಲಿದ್ದವನು [ಪ್ರಾಣತತ್ವಕ್ಕೂ ಮೂಲಕಾರಣ]. ಎಲ್ಲ ಲೋಕಗಳ ಒಡೆಯರಿಗು ಹಿರಿಯೊಡೆಯ. ಮನುಜರಲ್ಲಿ ಹೀಗೆ ನನ್ನನ್ನು ತಿಳಿದವನು ಮೋಹವಳಿದವನು. ಅವನು ಪಾಪಗಳಿಂದ ಪಾರಾಗುತ್ತಾನೆ.

ನಮ್ಮಲ್ಲಿ ಕೆಲವರಿಗೆ ಒಂದು ಪ್ರಶ್ನೆ ಬರುವುದಿದೆ. “ಸಕಲ ಜೀವಜಾತವನ್ನು ಭಗವಂತ ಸೃಷ್ಟಿ ಮಾಡಿದರೆ ಆತನನ್ನು ಯಾರು ಸೃಷ್ಟಿ ಮಾಡಿದರು” ಎಂದು. ಒಂದು ವೇಳೆ ಭಗವಂತನನ್ನು ಇನ್ನೊಬ್ಬ ಸೃಷ್ಟಿ ಮಾಡುತ್ತಿದ್ದರೆ ನಾವು ಈತನನ್ನು ದೇವರು ಎಂದು ಹೇಳಲಾಗುತ್ತಿರಲಿಲ್ಲ ಎನ್ನುವ ವಿಚಾರ ಕೂಡ ನಮಗೆ ಹೊಳೆಯುವುದಿಲ್ಲ. ಕೃಷ್ಣನಿಗೆ ನಮ್ಮ ಸಂದೇಹ ಏನು ಎನ್ನುವುದು ಗೊತ್ತು. ಅದಕ್ಕಾಗಿ ಆತ ಈ ಶ್ಲೋಕದಲ್ಲಿ ನಮ್ಮ ಪ್ರಶ್ನೆಗೆ ಉತ್ತರ ನೀಡಿದ್ದಾನೆ. ಕೃಷ್ಣ ಹೇಳುತ್ತಾನೆ “ಯಃ ಮಾಮ್ ಅಜಮ್ ಅನಾದಿಮ್ ” ಎಂದು. ಇಲ್ಲಿ ‘ಅಜ’ ಎಂದರೆ ಹುಟ್ಟಿರದವನು. ಭಗವಂತ ಹುಟ್ಟು ಸಾವಿನಿಂದಾಚೆ ನಿಂತವನು. ಅದಕ್ಕಾಗಿ ನಾವು ಹುಟ್ಟು-ಸಾವಿನಿಂದ ಪಾರಾಗಬೇಕಾದರೆ ಆತನನ್ನು ಉಪಾಸನೆ ಮಾಡಿ ಆತನನ್ನು ಸೇರಬೇಕು.  ಭಗವಂತ ಅನಾದಿ. ಇಲ್ಲಿ ಅನಾದಿ(ಅನ+ಆದಿ) ಎಂದರೆ: ‘ಸೃಷ್ಟಿಗೆ ಮೊದಲು ಪ್ರೇರಣೆ ಮಾಡುತ್ತಿದ್ದವ ಮತ್ತು ಸೃಷ್ಟಿ ಮಾಡಿ ಈ ಸೃಷ್ಟಿಯಲ್ಲಿ ಸಮಸ್ತ ವ್ಯಾಪಾರವನ್ನು ನಿಯಂತ್ರಣ ಮಾಡತಕ್ಕ ಸರ್ವೋತ್ಕೃಷ್ಟ ಶಕ್ತಿ’. 
ಭಗವಂತ ‘ಲೋಕಮಹೇಶ್ವರಃ’. ಬ್ರಹ್ಮಾದಿ ಸಮಸ್ತ ದೇವತೆಗಳು-'ಲೋಕೇಶರು'. ಅವರನ್ನು ಹೆತ್ತ ಮಾತೆ ಲಕ್ಷ್ಮಿ-'ಲೋಕೇಶ್ವರಿ'. ಅವಳಿಗೂ ಮಹಾನ್-'ಲೋಕಮಹೇಶ್ವರ'  ಆ ಭಗವಂತ. ಆತನಿಂದ ಮಹತ್ತಾದ ಇನ್ನೊಂದು ತತ್ವವಿಲ್ಲ.
ಮಹರ್ಷಿಗಳು, ದೇವತೆಗಳು, ಎಲ್ಲರನ್ನು  ಸೃಷ್ಟಿ ಮಾಡಿದವ ಆ ಭಗವಂತ. ಆದ್ದರಿಂದ ಇವರ್ಯಾರೂ ಆತನ ಮಹಿಮೆಯ ತುದಿಯನ್ನು ಕಂಡಿಲ್ಲ. ಋಗ್ವೇದದಲ್ಲಿ ಒಂದು ಕಡೆ ಹೀಗೆ ಹೇಳುತ್ತಾರೆ: ನ ತೇ ವಿಷ್ಣೋ ಜಾಯಮಾನೋ ನಾ ಜಾತೋ ದೇವ ಮಹಿಮ್ನಃ ಪರಮಂತಮಾಪ ಎಂದು. ಹಿಂದೆ ಹುಟ್ಟಿದವರಾಗಲಿ, ಮುಂದೆ ಹುಟ್ಟುವವನಾಗಲಿ, ಭಗವಂತನ ಮಹಿಮೆಯ ತುತ್ತ ತುದಿಯನ್ನು ತಿಳಿದಿಲ್ಲ,  ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಅದು ಅನಂತ.
ಈ ಪ್ರಪಂಚ ಸೃಷ್ಟಿ ಹೇಗಾಯಿತು ಎನ್ನುವುದು ಕೂಡಾ ಯಾರಿಗೂ ತಿಳಿದಿಲ್ಲ. ಏಕೆಂದರೆ ಪ್ರಳಯ ಕಾಲದಲ್ಲಿ ಎಲ್ಲವೂ ಭಗವಂತನ ಉದರದಲ್ಲಿ ನಿದ್ರಾವಸ್ತೆಯಲ್ಲಿದ್ದು, ಆ ನಂತರ ಸೃಷ್ಟಿ ಕಾಲದಲ್ಲಿ ಮೊತ್ತ ಮೊದಲಿಗೆ ಚತುರ್ಮುಖನನ್ನು ಭಗವಂತ ಸೃಷ್ಟಿ ಮಾಡಿದ. ಆದ್ದರಿಂದ ಚತುರ್ಮುಖನ ಹುಟ್ಟಿಗೆ ಮೊದಲು ಆರಂಭವಾದ ಈ ಸೃಷ್ಟಿ ನಿರ್ಮಾಣವನ್ನು ಕಂಡವರ್ಯಾರೂ ಇಲ್ಲ. ಇದಕ್ಕಾಗಿ ಋಗ್ವೇದದಲ್ಲಿ  “ಈ ಸೃಷ್ಟಿಯ ರಹಸ್ಯ ತಿಳಿದಿದ್ದರೆ ಒಬ್ಬ ಜಾಣ ಮಗನಿಗೆ ತಿಳಿದಿರಬೇಕು” ಎನ್ನುತ್ತಾರೆ. ಆತನೇ ಭಗವಂತನ ಸೃಷ್ಟಿಯ ಮೊದಲ ಜೀವ-‘ಚತುರ್ಮುಖ ಬ್ರಹ್ಮ’.  ಈ ಎಲ್ಲಾ ಕಾರಣದಿಂದ ಸಾಮಾನ್ಯ ಮಾನವರಾದ ನಾವು ಭಗವಂತನ ಪೂರ್ಣ ಮಹಿಮೆಯನ್ನು ತಿಳಿಯಲು ಸಾಧ್ಯವೇ ಇಲ್ಲ. ಇದನ್ನು ಆಚಾರ್ಯರು ಹೀಗೆ ಹೇಳಿದ್ದಾರೆ: “ಬಹು ಚಿತ್ರ ಜಗತ್  ಬಹುದಾಕಾರಣಾತ್ ಪರಶಕ್ತಿರನಂತ ಗುಣಃ ಪರಮಃ” ಎಂದು. ಭಗವಂತನ ಸೃಷ್ಟಿಯ ಈ ಪ್ರಪಂಚವೇ ಇಷ್ಟೊಂದು ಅದ್ಭುತವಾಗಿರುವಾಗ ಆ ಸೃಷ್ಟಿಕರ್ತ ಅದೆಷ್ಟು ಅದ್ಭುತವಾಗಿರಬೇಕು. ಆದ್ದರಿಂದ ಭಗವಂತ ಅನಂತ ಎನ್ನುವ ನಿಜವನ್ನರಿತು ಆತನನ್ನು ಉಪಾಸನೆ ಮಾಡುವುದೊಂದೇ ಮೋಕ್ಷ ಮಾರ್ಗ. ಭಗವಂತನ ಬಗ್ಗೆ ಈ ನಿಜವನ್ನು ತಿಳಿದವ ‘ಅಸಮ್ಮೂಢ’. ಆತ ಯಾವ ಭ್ರಮೆಗೂ ಒಳಗಾಗದೆ ಸದಾ ಎಲ್ಲರನ್ನೂ ಪ್ರೀತಿಸುತ್ತ ಎಲ್ಲರಲ್ಲೂ ಭಗವಂತನನ್ನು ಕಾಣುತ್ತಿರುತ್ತಾನೆ. “ಈ ಸತ್ಯವನ್ನರಿತ ಸಾಧಕ  ಸರ್ವ ಪಾಪಗಳಿಂದ ಪಾರಾಗುತ್ತಾನೆ” ಎನ್ನುವುದು ಕೃಷ್ಣನ ಭರವಸೆ.

No comments:

Post a Comment