Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, August 1, 2011

Bhagavad Geeta Kannada Chapter-09 Shloka 18


ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್       
ಪ್ರಭವಃ ಪ್ರಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್       ೧೮

ತಿಃ ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಮ್  ಸುಹೃತ್   
ಪ್ರಭವಃ ಪ್ರಯಃ ಸ್ಥಾನಮ್  ನಿಧಾನಮ್  ಬೀಜಮ್ ಅವ್ಯಯಮ್-ಮುಕ್ತಿಗಾಗಿ ತಿಳಿಯಬೇಕಾದವನು. ಎಲ್ಲ ಹೊಣೆಯನ್ನು ಹೊತ್ತವನು. ಎಲ್ಲದರ ಒಡೆಯ. ಎಲ್ಲವನ್ನು ನೇರ ಕಾಣಬಲ್ಲವನು. ಎಲ್ಲರ ನೆಲೆ. ಮುಕ್ತರಿಗು ಆಸರೆ. ಅನಿಮಿತ್ತ ಬಂಧು. ಸೃಷ್ಟಿ-ಸ್ಥಿತಿ-ಪ್ರಳಯಗಳಿಗೆ ಕಾರಣ. ಪ್ರಳಯದಲ್ಲಿ ಜಗವನ್ನು ಬಸಿರಲ್ಲಿ ಹೊತ್ತವನು. ಮತ್ತೆ ಜಗದ ಅಭಿವ್ಯಕ್ತಿಗೆ ಕಾರಣನಾದವನು. ಅಳಿವಿರದವನು.

ಸಂಬಂಧಗಳ ಬಗ್ಗೆ ಹಿಂದೆ ಹೇಳಿದ್ದ ಕೃಷ್ಣ ಇಲ್ಲಿ ನಾನಾ ವಿಧದ ಅನುಬಂಧಗಳನ್ನು ಹೇಳುತ್ತಾನೆ. ಬೇರೆಬೇರೆ ರೀತಿಯಾಗಿ ಸಮಾಜದಲ್ಲಿ ಒಬ್ಬರಿಂದ ಒಬ್ಬರು ನೆರವು ಪಡೆಯುತ್ತಾರೆ. ರಾಜನಿಂದ ರಕ್ಷಣೆ, ಆಪತ್ಕಾಲದಲ್ಲಿ ಆಶ್ರಯ, ಕಷ್ಟದಲ್ಲಿರುವವನನ್ನು ಸಂತೈಸುವುದು, ಗೆಳೆತನ ಇತ್ಯಾದಿ ಅನುಬಂಧಗಳು. ಇವೆಲ್ಲವೂ ಭಗವಂತನ ಧರ್ಮ ಎನ್ನುತ್ತಾನೆ ಕೃಷ್ಣ.
ಯಾರೂ ನೆಲೆಯೇ ಇಲ್ಲ, ಬದುಕುವುದಕ್ಕೆ ಅವಕಾಶವೇ ಇಲ್ಲ ಅನ್ನುವಾಗ ‘ನಾನಿದ್ದೇನೆ’ ಎಂದು ರಕ್ಷಣೆ ಮಾಡುವವರನ್ನು ‘ಗತಿ’ ಎನ್ನುತ್ತಾರೆ. ವಾಸ್ತವವಾಗಿ ಗತಿ ಎಂದರೆ ಕೊನೆಯ ಗತಿ. ಸಂಸಾರದಲ್ಲಿ ಮಾತ್ರ ಅಲ್ಲ ಮೊಕ್ಷದಲ್ಲೂ ಆಶ್ರಯವಾಗಿರುವ ಭಗವಂತ ಗತಿಃ. ಆತನೇ ಸದ್ಗತಿ, ತಪ್ಪು ಮಾಡಿದಾಗ ಆತನೇ ದುರ್ಗತಿ ಕೂಡಾ. ಎಲ್ಲ ಹೊಣೆಯನ್ನು ಹೊತ್ತು, ಪ್ರಪಂಚದಲ್ಲಿ ಪ್ರತಿಯೊಬ್ಬರು ಏನು ಮಾಡುತ್ತಾರೆ, ಅವರ ಒಳಿತು ಕೆಡುಕುಗಳೇನು ಎಂದು ನೋಡಬಲ್ಲ ಪ್ರಭು ಭಗವಂತ. ಆತ ನಮ್ಮ ಅಂತರಂಗ ಬಹಿರಂಗ ಎಲ್ಲವನ್ನೂ ಬಲ್ಲವ. ಆತ ಎಲ್ಲೆಡೆ ತುಂಬಿ ಎಲ್ಲವನ್ನೂ ಕಾಣಬಲ್ಲ ನಿಜವಾದ ಸಾಕ್ಷಿ.
ಮುಂದುವರಿದು ಕೃಷ್ಣ ಹೇಳುತ್ತಾನೆ “ಅಹಮ್ ನಿವಾಸಃ” ಎಂದು. ಈಶಾವಾಸ್ಯೋಪನಿಷತ್ತಿನಲ್ಲಿ ಹೇಳುವಂತೆ:
ಈಶಾವಾಸ್ಯಂ ಇದಂ ಸರ್ವಂ ಯತ್ ಕಿಂ ಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭೂಂಜಿಥಾಃ ಮಾ ಗೃಧಃ ಕಸ್ಯ ಸ್ವಿದ್ ಧನಮ್|
ನಾವು ವಾಸ ಮಾಡುತ್ತಿರುವುದೇ ಭಗವಂತನ ಮನೆಯಲ್ಲಿ. ಈ ವಿಶ್ವವೆಂಬ ಮನೆಯನ್ನು ನಿರ್ಮಿಸಿ, ಅದರಲ್ಲಿ ನಮಗೆ ಆಶ್ರಯ ಕೊಟ್ಟು, ನಮಗೆ ಬದುಕಲು ಬೇಕಾದ ವ್ಯವಸ್ಥೆ ಮಾಡಿದ ಭಗವಂತ ನಿವಾಸಃ. ಆತ ಎಲ್ಲರಿಗೂ ಆಸರೆ. ಇಂತಹ ಭಗವಂತ ನಮಗೆ ಆಪತ್ಕಾಲದಲ್ಲಿ ರಕ್ಷಣೆ(ಶರಣ) ಕೊಡುವ ಆತ್ಮೀಯ ಗೆಳೆಯ(ಸುಹೃತ್). 
ಗೆಳೆಯರಲ್ಲಿ ಎರಡು ವಿಧ. ಸಖ ಮತ್ತು ಸುಹೃತ್. ‘ಸಖ’ ಎಂದರೆ ಒಡನಾಡಿ. ಯಾವಾಗಲೂ ಜೊತೆಗಿರುವವ. ಸುಹೃತ್ ಎಂದರೆ ದೂರದಲ್ಲಿರಲಿ ಹತ್ತಿರವಿರಲಿ ನಮ್ಮ ಹೃದಯಕ್ಕೆ ಸ್ಪಂದಿಸಿ ನಮ್ಮ ಹಿತಚಿಂತಕನಾಗಿರುವವ. ಭಗವಂತ ನಮ್ಮ ಹೃತ್ಕಮಲ ಮಧ್ಯ ನಿವಾಸಿಯಾಗಿರುವ ಸಖ ಮತ್ತು ನಮ್ಮ  ಹೃದಯದ ಕೂಗಿಗೆ ಸದಾ ಸ್ಪಂದಿಸುವ ಸುಹೃತ್.
ಅನುಬಂಧವನ್ನು ಹೇಳಿದ ಕೃಷ್ಣ ಮುಂದೆ ಮನುಷ್ಯ ಶಕ್ತಿಯನ್ನು ಬಿಟ್ಟು ದೇವತಾ ಶಕ್ತಿಯನ್ನು ವಿವರಿಸುತ್ತಾನೆ. ಹೇಳುತ್ತಾನೆ “ಪ್ರಭವಃ ಪ್ರಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್” ಎಂದು.  ನಮ್ಮಲ್ಲಿ ಕೆಲವರು ತಿಳಿದಿದ್ದಾರೆ ಸೃಷ್ಟಿಕರ್ತ -ಬ್ರಹ್ಮ, ಸ್ತಿತಿ-ವಿಷ್ಣು ಮತ್ತು ಸಂಹಾರ-ಶಿವ ಎಂದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: “ನಾನೇ ಪ್ರಭವಃ- ಪ್ರಯಃ-ಸ್ಥಾನಂ” ಎಂದು. ಜಗತ್ತಿನ ಸೃಷ್ಟಿಗೆ ಮೂಲ ಕಾರಣ, ಸೃಷ್ಟಿಯ ಕೊನೆಯಲ್ಲಿ ಈ ಜಗತ್ತು ನಾಶವಾಗಲು, ಮತ್ತು ಸೃಷ್ಟಿಯಿಂದ ಸಂಹಾರ ತನಕದ ಅವದಿಯಲ್ಲಿ ಸ್ಥಿತಿಗೆ ಮೂಲತಃ ಭಗವಂತನೇ ಕಾರಣ.
ಪ್ರಳಯ ಕಾಲದಲ್ಲಿ ಸಮಸ್ತ ಜೀವಜಾತವನ್ನು  ಸೂಕ್ಷ್ಮ ಸ್ಥಿತಿಯಲ್ಲಿ ತನ್ನ ಹೊಟ್ಟೆಯಲ್ಲಿಟ್ಟು ಸಾಕುವವ ಆ ಭಗವಂತ. ಆ ಸೂಕ್ಷ್ಮ ವಸ್ತು ಮತ್ತೆ ಚಿಗುರಿ ಅರಳಿ ಹೆಮ್ಮರವಾಗಿ ಬೆಳೆಯುವಂತೆ ಬೀಜಕ್ಷೇಪ ಮಾಡುವ, ಎಂದೂ ಅಳಿವಿಲ್ಲದ  ಅವ್ಯಯ-ಭಗವಂತ.

ಹೀಗೆ ಜಗತ್ತಿನ ಸಮಸ್ತ ಕ್ರಿಯೆಯನ್ನು, ಲೌಕಿಕ , ಪ್ರಾಪಂಚಿಕ, ಪಾರಲೌಕಿಕವಾದ ಸಂಬಂಧಗಳು,ಅನುಬಂಧಗಳು ಎಲ್ಲವನ್ನು ವಿವರಿಸಿದ ಕೃಷ್ಣ  ಮುಂದೆ ಕಾಲಕಾಲದಲ್ಲಿ ಆಗತಕ್ಕಂತಹ ಸಂಗತಿಗಳನ್ನು ವಿವರಿಸುತ್ತಾನೆ.            

No comments:

Post a Comment