Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, July 31, 2011

Bhagavad Geeta Kannada Chapter-09 Shloka 16


ಭಗವಂತನನ್ನು ಹೇಗೆ ಅನುಸಂಧಾನ ಮಾಡಬೇಕು, ಹೇಗೆ ಮಾಡಬಾರದು ಎನ್ನುವ ಅರಿವನ್ನು ಕೊಟ್ಟ ಕೃಷ್ಣ, ಮುಂದೆ ಭಗವಂತನ ವಿಭೂತಿಯನ್ನು ಬೇರೆ ಬೇರೆ ಪ್ರತೀಕಗಳಲ್ಲಿ ಹೇಗೆ ಅನುಸಂಧಾನ ಮಾಡಬೇಕು ಎನ್ನುವುದನ್ನು ವಿವರಿಸುತ್ತಾನೆ. ಇಡೀ ವಿಶ್ವದ ಅಣು ಕಣಗಳಲ್ಲಿ ತುಂಬಿರುವ ಭಗವಂತನ ಅನುಸಂಧಾನ ಹಾಗು ಅದರ ವಿಶಿಷ್ಟ ಉಪಾಸನೆಯ ವಿವರವನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ವಿವರಿಸಿದ್ದಾನೆ. ಬನ್ನಿ ಈ ಅಪೂರ್ವ ವಿಶಿಷ್ಟ ಜ್ಞಾನವನ್ನು ಭಗವಂತನಿಂದಲೇ ಕೇಳಿ ತಿಳಿದು ಕೃತಾರ್ಥರಾಗೋಣ.  

ಅಹಂ ಕ್ರತುರಹಂ ಯಜ್ಞಃ ಸ್ವಧಾSಹಮಹಮೌಷಧಮ್
ಮಂತ್ರೋSಹಮಹಮೇವಾSಜ್ಯಮಹಮಗ್ನಿರಹಂ ಹುತಮ್ ೧೬

ಅಹಮ್  ಕ್ರತುಃ ಅಮ್  ಯಜ್ಞಃ ಸ್ವಧಾಮ್ ಔಷಧಮ್
ಮಂತ್ರಃ ಅಮ್ ಅಹಮ್ ಏವ ಆಜ್ಯಮ್ ಅಹಮ್ ಅಗ್ನಿಃ ಅಹಮ್  ಹುತಮ್- ನನ್ನಿಂದ ಯಾಗ. [ನನ್ನ ಕ್ರಿಯೆ ನನ್ನ ಸ್ವರೂಪವಾದ್ದರಿಂದ ನಾನು ‘ಕ್ರತು’]. ನನ್ನಿಂದ ಹವನ ಕ್ರಿಯೆ.[ಎಲ್ಲ ಬಲ್ಲವನಾದ್ದರಿಂದ ‘ಯಜ್ಞ’]. ಪಿತೃಗಳ ಅನ್ನ ನನ್ನಿಂದ [ನನಗೆ ನಾನೆ ಆಸರೆಯಾದ್ದರಿಂದ ‘ಸ್ವಧಾ’]. ನನ್ನಿಂದ ಮನುಷ್ಯರ ಆಹಾರ[ಬೆಂದವರಿಗೆ ಆಸರೆಯಾದ್ದರಿಂದ ‘ಔಷಧ’]. ಮಂತ್ರ ನನ್ನಿಂದ[ತಿಳಿವಿತ್ತು ಸಲಹುದರಿಂದ ‘ಮಂತ್ರ’]. ನನ್ನಿಂದಲೆ ತುಪ್ಪ [ಎಲ್ಲಕ್ಕಿಂತ ಹಿರಿಯನಾದ್ದರಿಂದ ‘ಆಜ್ಯ’]. ನನ್ನಿಂದ ಬೆಂಕಿ.[ನಾನೆ ಚಲಿಸದ ವಿಶ್ವಕ್ಕೆ ಚಲನೆ ನೀಡುವುದರಿಂದ ‘ಅಗ್ನಿ’]. ನನ್ನಿಂದ ಹೋಮದ ಹವಿ[ಭಕ್ತರು ಕರೆವುದರಿಂದ ನಾನೆ ‘ಹುತ’].

ಭಗವಂತನ ಉಪಾಸನೆಗೆ ಮೂರು ಪ್ರತೀಕವನ್ನು ಶಾಸ್ತ್ರಕಾರರು ಹೇಳಿದ್ದಾರೆ. ವೇದದಲ್ಲಿ ಆ ಮೂರು ಪ್ರತೀಕಗಳಿಂದ ಉಪಾಸನೆಯೇ ನಮಗೆ ಎಲ್ಲಾ ಕಡೆ ಸಿಗುವುದು. ಅವುಗಳೆಂದರೆ ಅಗ್ನಿಪ್ರತೀಕ, ವಾಯುಪ್ರತೀಕ ಮತ್ತು ಆದಿತ್ಯಪ್ರತೀಕ. ಭೂಸ್ತರದಲ್ಲಿ ಭಗವಂತನ ಉಪಾಸನೆ ಅಗ್ನಿಪ್ರತೀಕದಲ್ಲಿ. ಅಂತರಿಕ್ಷ  ಸ್ತರದಲ್ಲಿ ಆದಿತ್ಯ ಮುಖದಲ್ಲಿ ಮತ್ತು ಅಂತರಂಗದಲ್ಲಿ ಭಗವಂತನ ಉಪಾಸನೆ ವಾಯುವಿನ ಪ್ರತೀಕದಲ್ಲಿ. ಭೂಮಿಯಲ್ಲಿ ಸಾಮಾನ್ಯವಾಗಿ ಮನುಷ್ಯರು ಜ್ಞಾನಮಾರ್ಗಕ್ಕಿಂತ ಹೆಚ್ಚು ಕರ್ಮ ಮಾರ್ಗಕ್ಕೆ ಅಂಟಿಕೊಂಡವರು. ಇಂಥವರಲ್ಲಿ ಜ್ಞಾನಕ್ಕಿಂತ ಕರ್ಮಕ್ಕೆ ಒತ್ತು ಹೆಚ್ಚು. ಕೆಲವರು ಬೆಳಿಗ್ಗೆಯಿಂದ ಸಂಜೆ ತನಕ ಪೂಜೆ ಮಾಡುತ್ತಾರೆ, ಆದರೆ ತಾವು ಮಾಡುವ ಅನುಷ್ಠಾನದ ಜ್ಞಾನವೇ ಅವರಿಗಿರುವುದಿಲ್ಲ. ಇವರಿಗೆ ಜ್ಞಾನ ಸಂಪಾದನೆ  ದ್ವಿತೀಯಕ(Secondary). ಇದು ಮನುಷ್ಯನ ದೌರ್ಬಲ್ಯ. ನಮಗೆ ನಮ್ಮ ಮಡಿವಂತಿಕೆಯಲ್ಲಿರುವಷ್ಟು ಒತ್ತು ಜ್ಞಾನದಲ್ಲಿರುವುದಿಲ್ಲ! ತಿಳಿಯದ ಬಾಹ್ಯಾನುಷ್ಠಾನದಲ್ಲಿ ಕಾಲಹರಣ ಮಾಡುವುದಕ್ಕಿಂತ ಪಾಠ ಪ್ರವಚನದಿಂದ ಸ್ವಲ್ಪಮಟ್ಟಿನ ಜ್ಞಾನ ಗಳಿಸಿಕೊಳ್ಳುವುದು ದೇವರು ಮೆಚ್ಚುವ ಮಹಾ ಪೂಜೆ ಎನಿಸುತ್ತದೆ.
ಕರ್ಮ ಪ್ರಧಾನವಾಗಿರುವವರಿಗೆ ಭಗವಂತನ ಅನುಷ್ಠಾನ ಹೇಗಿರಬೇಕು ಎನ್ನುವುದನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ.  ಕೃಷ್ಣ ಹೇಳುತ್ತಾನೆ: “ಅಹಮ್  ಕ್ರತುಃ ಅಮ್  ಯಜ್ಞಃ” ಎಂದು.  ಭಗವಂತನ ಆರಾದನೆಗೊಸ್ಕರ ಮಾಡತಕ್ಕಂತಹ ಅಗ್ನಿ ಆರಾದನೆಯ ಪ್ರಕ್ರಿಯೆ ‘ಕ್ರತು’. ಇಲ್ಲಿ ಯಜ್ಞದ ಮೂಲಕ ಭಗವಂತನಿಗೆ ಆಹುತಿ ಕೊಡುವಾಗ ಈ ರೀತಿ ಹೇಳಿ ಆಹುತಿ ಕೊಡುತ್ತೇವೆ: ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ; ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ; ಇಂದ್ರಾಯ ಸ್ವಾಹಾ-ಇಂದ್ರಾಯ ಇದಂ ನ ಮಮ; ಸೂರ್ಯಾಯ ಸ್ವಾಹಾ-ಸೂರ್ಯಾಯ ಇದಂ ನ ಮಮ; ವಾಯವೇ ಸ್ವಾಹಾ-ವಾಯವ ಇದಂ ನ ಮಮ; ವರುಣಾಯ ಸ್ವಾಹಾ-ವರುಣಾಯ ಇದಂ ನ ಮಮ;..ಇತ್ಯಾದಿ.  ಹೀಗೆ ಬೇರೆ ಬೇರೆ ಪ್ರತೀಕದಲ್ಲಿ ಭಗವಂತನಿಗೆ ಆಹುತಿ ಕೊಡುವುದು ಯಜ್ಞ. ಇಲ್ಲಿ ಕೃಷ್ಣ ಹೇಳುತ್ತಾನೆ “ನೀವು ಮಾಡುವ ಕ್ರತುವಿನ ನಿಯಾಮಕ ನಾನು" ಎಂದು. ನಾವು ಯಾವ ಪ್ರತೀಕದಲ್ಲಿ ಪೂಜೆ ಮಾಡಿದರೂ ಅದು ಸಲ್ಲುವುದು ಆ ದೇವತೆಯ ಅಂತರ್ಯಾಮಿ ಭಗವಂತನಿಗೆ. ಉದಾಹರಣೆಗೆ ಗಣಹೋಮ, ಚಂಡಿಕಾಹೋಮ, ನವಗ್ರಹಹೋಮ ಇತ್ಯಾದಿ.  ಇಲ್ಲಿ ನಾವು ಯಾವ ದೇವತೆಯ ಪ್ರತೀಕದಲ್ಲಿ ಯಜ್ಞ ಮಾಡಿದರೂ ಕೂಡಾ ಆ ಯಜ್ಞ ಭಗವಂತನಿಗೆ ಸಲ್ಲುತ್ತದೆ ಎನ್ನುವ ಅನುಸಂಧಾನ ನಮ್ಮಲ್ಲಿರಬೇಕು. ಭಗವಂತ ಅನೇಕ ಶಕ್ತಿ ರೂಪದಲ್ಲಿ ಅಭಿವ್ಯಕ್ತನಾದರೂ ಕೂಡ, ಸರ್ವ ನಿಯಾಮಕ ಭಗವಂತ ಒಬ್ಬನೆ. [ನಮಗೆ ಬಂದಿರುವ ಆಪತ್ತಿನ ನಿವಾರಣೆಗಾಗಿ ಜೋತಿಷಿಗಳು ಭಗವಂತನ ಆಯಾ ಶಕ್ತಿ ಪ್ರತೀಕವನ್ನು ಪೂಜಿಸುವಂತೆ ಹೇಳುತ್ತಾರೆ ಹೊರತು, ಭಗವಂತ ಅನೇಕ ಅಲ್ಲ]. ದೇವತೆಯ ಒಳಗಿರುವ ಭಗವಂತ ಪ್ರೀತನಾದಾಗ ಮಾತ್ರ ಅದು ಆ ದೇವತೆಗೂ ಮತ್ತು ಭಗವಂತನಿಗೂ ಸಂದಂತೆ. ಆದ್ದರಿಂದ ಒಂದೊಂದು ದಿನ ಒಂದೊಂದು ದೇವತೆಗೆ ಪ್ರೀತಿಯಾಗುವುದಕ್ಕೊಸ್ಕರ ಕರ್ಮ ಮಾಡುವುದಲ್ಲ. ಸರ್ವಾಂತರ್ಯಾಮಿ ಭಗವಂತನಿಗೆ ನಮ್ಮ ಪೂಜೆ ಮೀಸಲಾಗಿರಬೇಕು.
ನಮ್ಮ ದೇಹದೊಳಗೆ ತತ್ವಾಭಿಮಾನಿ ದೇವತೆಗಳಿದ್ದಾರೆ. ಅವರನ್ನು ನಿಯಮನ ಮಾಡಿಕೊಂಡು ಆ ಭಗವಂತನಿದ್ದಾನೆ. ಈ ತತ್ವಾಭಿಮಾನಿ ದೇವತೆಗಳು ಭಗವಂತನ ಅನುಗ್ರಹದಿಂದ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಲಿ ಎಂದು ಅವರ ಅಂತರ್ಯಾಮಿಯಾದ ಭಗವಂತನನ್ನು ಆರಾದಿಸುವುದು ಯಜ್ಞ.
ನಾವು ನಿತ್ಯ ಪೀಠದಲ್ಲಿ ಮಾಡುವ ಪೂಜೆ ತತ್ವಾಭಿಮಾನಿ ದೇವತೆಗಳನ್ನು ಕುರಿತು ಮಾಡುವ ಯಜ್ಞವಾದರೆ, ಶ್ರಾದ್ಧ- ಪಿತೃದೇವತೆಗಳನ್ನು ಕುರಿತು ಮಾಡುವ ಯಜ್ಞ. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಕಲ್ಪನೆ ಇದೆ. ಶ್ರಾದ್ಧ ‘ದೇಹ ತ್ಯಾಗ ಮಾಡಿದ ಜೀವಕ್ಕೆ’ ಎಂದು. ಆದರೆ ಇದು ಸರಿಯಲ್ಲ. ಶ್ರಾದ್ಧ ಸ್ಥೂಲ ದೇಹವನ್ನು ತ್ಯಜಿಸಿ ಸೂಕ್ಷ್ಮ ಶರೀರದಲ್ಲಿರುವ ಜೀವವನ್ನು ನಿಯಂತ್ರಿಸುವ ‘ಪಿತೃದೇವತೆಗಳಿಗೆ’ ಮಾಡುವಂತದ್ದು. ವಿಶೇಷವಾಗಿ ಹತ್ತು ಮಂದಿ ವಿಶ್ವೇದೇವತೆಗಳು(ಕ್ರತು,ದಕ್ಷ, ವಾಸು, ಸತ್ಯ, ಕಾಮ, ಕಾಲ,ಧುರಿ, ಲೋಚನ,ಪುರೂರವ ಆರ್ದ್ರವ); ಇವರಲ್ಲಿ ಪುರೂರವ ಮತ್ತು ಆರ್ದ್ರವರದ್ದು ಪಿತೃಗಣದ ನಿಯಮನ ಮಾಡತಕ್ಕಂತಹ ಖಾತೆ(Portfolio). ಪಿತೃದೇವತೆಗಳ ಗಣ ಹತ್ತು(ನೂರು ಮಂದಿ ಪಿತೃಗಳಲ್ಲಿ ಇವರು ಪ್ರಧಾನರು): ಯಮ, ಸೋಮ, ಕವ್ಯವಾಹ(ಇವರು ಮೂವರು ಪಿತೃಪತಿಗಳು), ಸೋಮಸದರು, ಅಗ್ನಿಷ್ವಾತ್ತರು, ಬಹಿರ್ಷದರು, ಸೋಮಪರು, ಹವಿರ್ಭುಜರು, ಅಜ್ಯಪರು, ಸುಕಾಲಿಗಳು. ನಾವು ಪಿಂಡ ಹಾಕುವುದು ಜೀವದ ಹಸಿವು ನೀಗಲಿಕ್ಕೆ ಅಲ್ಲ. ನಮ್ಮ ಹಿರಿಯರು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವುದು ಅವರು ಮಾಡಿದ ಕರ್ಮಫಲದಿಂದ ಹೊರತು ನಾವು ಹಾಕಿದ ಶ್ರಾದ್ಧದಿಂದಲ್ಲ. ಶ್ರಾದ್ಧಾ ಏಕೆಂದರೆ ಪಿತೃದೇವತೆಗಳ ಸ್ವಾದೀನದಲ್ಲಿರುವ ಜೀವ ಯಾವುದೋ ದುರಿತದ ಪ್ರಭಾವದಿಂದ ದಾರಿಯಲ್ಲಿ ತಡೆಯನ್ನು  (Road blockers) ಎದುರಿಸಬೇಕಾಬಹುದು. ಆ ಸಮಯದಲ್ಲಿ ಅದನ್ನು ನಿವಾರಣೆ ಮಾಡುವ ಕರ್ಮಾನುಷ್ಠಾನ ಆ ಸೂಕ್ಷ್ಮ ಶರೀರದಲ್ಲಿ ಇರುವುದಿಲ್ಲ. ಅದಕ್ಕೋಸ್ಕರ ಅಂತಹ ಪ್ರತಿಬಂಧಕಗಳಿಂದ ಅವರನ್ನು ಪಾರು ಮಾಡಿ ಮುಂದೆ ಸಾಗಲು ನೆರವು ಕೋರಿ ಮಾಡುವ  ಪಿತೃದೇವತೆಗಳ ಪೂಜೆಯೇ ಶ್ರಾದ್ಧ. ಒಟ್ಟಾರೆ ಇದು ಹಿರಿಯರು ಸತ್ತ ದಿನದ ನೆನಪು, ಅವರಿಗೆ ಕೃತಜ್ಞತೆ ಮತ್ತು ಪಿತೃದೇವತೆಗಳ ಪೂಜೆ.
ಕೃಷ್ಣ ಹೇಳುತ್ತಾನೆ “ಸ್ವಧಾಮ್” ಎಂದು. ಮಂತ್ರಗಳು ವಿಳಾಸದಂತೆ, ‘ಸ್ವಾಹ’ ತತ್ವಾಭಿಮಾನಿ ದೇವತೆಗಳಿಗಾದರೆ ‘ಸ್ವಧಾ’ ಪಿತೃದೇವತೆಗಳಿಗೆ. ನನ್ನ ಮುಖೇನವೇ ಶ್ರಾದ್ಧ ಪಿತೃದೇವತೆಗಳಿಗೆ ಸಲ್ಲುವುದು ಎನ್ನುತ್ತಾನೆ ಕೃಷ್ಣ.
ತತ್ವಾಭಿಮಾನಿದೇವತೆಗಳು ಮತ್ತು  ಪಿತೃದೇವತೆಗಳ ನಂತರ ಮನುಷ್ಯರು. ಮನುಷ್ಯರ ಮುಖ್ಯವಾದ ಆಹಾರ ‘ಓಷಧಿ’. ಫಲ ಕೊಟ್ಟು ಸಾಯುವ ಗಿಡವನ್ನು ಸಂಸ್ಕೃತದಲ್ಲಿ ‘ಓಷಧಿ’ ಎನ್ನುತ್ತಾರೆ. ಆ ಗಿಡದ ಪ್ರಸವವೇ ಅದರ ಸಾವು. ಮನುಷ್ಯ ತಿನ್ನುವ ದವಸದಾನ್ಯ ಎಲ್ಲವೂ ಓಷಧಿಗಳು. ಇಂತಹ ಓಷಧಿಗಳ ಸಮುದಾಯವೇ ಔಷಧಿ. ಕೃಷ್ಣ ಹೇಳುತ್ತಾನೆ “ಅಮ್  ಔಷಧಮ್” ಎಂದು. ನಾವು ತಿನ್ನುವ ದವಸ ಧಾನ್ಯ ಸಲ್ಲುವುದು ಕೂಡಾ ವೈಶ್ವಾನರನಾಗಿ ಒಳಗೆ ಕುಳಿತಿರುವ ಭಗವಂತನಿಗೆ. ಔಷಧ ಕೊಡತಕ್ಕವ, ಅದರಿಂದ ರೋಗ ನಿವಾರಿಸುವವ, ಹಸಿವು ನಿವಾರಿಸಿ ರಕ್ಷಣೆ ಮಾಡುವವ ಭಗವಂತ.
ನಾವು ಬೇರೆ ಬೇರೆ ಮಂತ್ರಗಳಿಂದ ಆಹುತಿಯನ್ನು ಕೊಡುತ್ತೇವೆ. ಈ ಹಿಂದೆ ಹೇಳಿದಂತೆ ಮಂತ್ರ ವಿಳಾಸವಿದ್ದಂತೆ. ಕೊಡುವ ಆಹುತಿ ಎಲ್ಲವೂ ಭಗವಂತನಿಗೆ ಸೇರುವುದಾದರೆ ಬೇರೆಬೇರೆ ವಿಳಾಸವೇಕೆ? ಕೃಷ್ಣ ಹೇಳಿದ “ಬೇರೆ ಬೇರೆ ವಿಳಾಸದಲ್ಲಿರುವ ನನಗೆ” ಎಂದು!   ಭಗವಂತ ಏಕ ಆದರೆ ಆತನ ರೂಪ ಅನೇಕ. ನಾವು ಯಾವ ಮಂತ್ರದಿಂದ ಕಳುಹಿಸಿದರೂ ಕೂಡಾ-ಅದು ಸೇರುವುದು ಎಲ್ಲಾ ಮಂತ್ರದಿಂದ ವಾಚ್ಯನಾದ, ಸರ್ವಶಬ್ದವಾಚ್ಯ ಭಗವಂತನನ್ನು. ಹೀಗೆ ಬೇರೆ ಬೇರೆ ಶಕ್ತಿ ರೂಪವನ್ನು ಬೇರೆ ಬೇರೆ ದೇವತಾ ಪ್ರತೀಕದಲ್ಲಿ ಪೂಜಿಸಿದರೂ ಕೂಡಾ ಪ್ರತಿಯೊಂದು ನಾಮವೂ ಸಹ ಅಂತತಃ ಭಗವಂತನನ್ನೇ ಹೇಳುತ್ತದೆ. ಎಲ್ಲವುದರ ಸಾರವೂ ಭಗವಂತ. ಇದಕ್ಕೆ ಉತ್ತಮ ಉದಾಹರಣೆ ತೆಂಗಿನಕಾಯಿ. ಸಿಪ್ಪೆ ಸಹಿತವಾಗಿರುವ ತೆಂಗಿನಕಾಯಿ ಉರಿಯುವ ಬೆಂಕಿಯಂತೆ; ಸಿಪ್ಪೆಯೊಳಗಿನ ಕಾಯಿ ಬೆಂಕಿಯ ಅಂತರ್ಯಾಮಿ ಅಗ್ನಿ ದೇವತೆಯಂತೆ;  ಚಿಪ್ಪಿನ ಒಳಗಿನ ಕೊಬ್ಬರಿ   ಅಗ್ನಿ ದೇವತೆಯೊಳಗಿನ ಭಗವಂತನಂತೆ. ಇಲ್ಲಿ ನಾವು ಎಲ್ಲವನ್ನೂ ಕರೆಯುವುದು ತೆಂಗಿನಕಾಯಿ ಅಥವಾ ಅಗ್ನಿ ಎಂತಲೆ. ಹೇಗೆ ನಿಜವಾದ ತೆಂಗಿನಕಾಯಿ ಒಳಗಿನ ಸಾರವೋ  ಹಾಗೇ ನಿಜವಾದ ಅಗ್ನಿ ಅಂತತಃ ಅಂತರ್ಯಾಮಿ ಭಗವಂತ. ಈ ಶ್ಲೋಕದಲ್ಲಿ ಕೃಷ್ಣ ಇದನ್ನೇ   “ಅಹಮ್ ಅಗ್ನಿಃ” ಎಂದಿರುವುದು.
ಕೃಷ್ಣ ನಾವು ಆಹುತಿಯಾಗಿ ಕೊಡುವ ಒಂದು ಪ್ರಮುಖ ವಸ್ತುವನ್ನು ಉದಾಹರಣೆಯಾಗಿ ತೆಗೆದುಕೊಂಡು ಹೇಳುತ್ತಾನೆ “ಅಹಮ್ ಏವ ಆಜ್ಯಮ್” ಎಂದು. ಆಜ್ಯ ಎಂದರೆ ತುಪ್ಪ. ಆಜ್ಯದಲ್ಲಿ ದೇವತೆಗಳನ್ನು ತಣಿಸುವ ವಿಶಿಷ್ಟ ಶಕ್ತಿ ಇದೆ. ಆಜ್ಯದಲ್ಲಿ ವಿಶಿಷ್ಟ ಶಕ್ತಿಯಾಗಿ ನಾನಿದ್ದೇನೆ ಎನ್ನುವ ಕೃಷ್ಣ ನಾನೇ ಹೋಮದ ಹವಿ (ಅಹಮ್  ಹುತಮ್) ಎನ್ನುತ್ತಾನೆ.
ಹವಿಸ್ಸು ಎಂದರೆ ಭಗವಂತನಿಗೆ ಅರ್ಪಿಸುವ ಹೋಮ ದ್ರವ್ಯ. ಆ ಹವಿಸ್ಸಿನಲ್ಲಿ ವಿಶೇಷ ಶಕ್ತಿ ಇರುವುದು ಆ ಭಗವಂತನಿಂದ. ನಾವು ಅರ್ಪಿಸುವ ಹವಿಸ್ಸು ಎಂದೂ ವ್ಯರ್ಥವಲ್ಲ. ಅಗ್ನಿಗೆ ಅರ್ಪಿಸಿದ ಹವಿಸ್ಸು ಅಗ್ನಿಯಿಂದ ಹೊರ ಹೊಮ್ಮುವ ಏಳು ಬಣ್ಣಗಳ ಮುಖೇನ ವಾತಾವರಣದಲ್ಲಿನ ಸೂರ್ಯ ಕಿರಣದೊಂದಿಗೆ ಸೇರಿ ಸಮಾಜಕ್ಕೆ ಫಲವನ್ನು ಕೊಡುತ್ತದೆ. ಹವಿರ್ಭಾಗವನ್ನು ಸ್ವೀಕರಿಸುವ ಭಗವಂತ ಹವಿರ್ಹರಿಃ . ನಾವು ಯಾವುದೇ ನಾಮವನ್ನುಚ್ಚರಿಸಿ ಹವಿಸ್ಸನ್ನು ಅರ್ಪಿಸಿದರೂ ಅದು ಸೇರುವುದು ಸರ್ವಶಬ್ದ ವಾಚ್ಯನಾದ ಭಗವಂತನನ್ನು. "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಭಗವಂತ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. ಆದ್ದರಿಂದ ಯಾವ ಶಬ್ದವನ್ನು ಹೇಳಿದರೂ ಅದು ಸೇರುವುದು ಅವನನ್ನೇ. ಹೀಗೆ ಹವಿಸ್ಸನ್ನು ಸ್ವೀಕರಿಸಿ ಭಕ್ತರ ಪಾಪವನ್ನು ಪರಿಹರಿಸುವ ಭಗವಂತ ಹವಿರ್ಹರಿಃ
ಈ ಶ್ಲೋಕವನ್ನು ಇನ್ನೊಂದು ಆಯಾಮದಲ್ಲಿ ನೋಡಿದರೆ, ಇಲ್ಲಿ  ಬರುವ  ಒಂದೊಂದು ಶಬ್ದವನ್ನು ಭಗವಂತನಲ್ಲಿ ಅನುಸಂಧಾನ ಮಾಡು ಎನ್ನುವ ಸಂದೇಶವನ್ನು ಕಾಣುತ್ತೇವೆ.
 “ಕ್ರತುಃ ” –ಭಗವಂತನೇ ಕ್ರತು ಶಬ್ದದ ಮುಖ್ಯಾರ್ಥ. 'ಕ್ರತು' ಕ್ರಿಯೆ, ಜ್ಞಾನ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಕ್ರಿಯಾ ಸ್ವರೂಪ, ಜ್ಞಾನ ಸ್ವರೂಪ ಭಗವಂತ  ‘ಕ್ರತುಃ’. ನಮ್ಮಲ್ಲಿ ನಂಬಿಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗು ಅನುಕೂಲತೆ ಕೊಟ್ಟು,  ನಮ್ಮ ಹಿಂದೆ ನಿಂತು, ಕ್ರಿಯಾ ಕಲಾಪಗಳನ್ನು ನಡೆಸುವ, ಜ್ಞಾನ ಸ್ವರೂಪನೂ, ಕರ್ಮದ ಕಟ್ಟಿನಿಂದ ನಮ್ಮನ್ನು ಪಾರು ಮಾಡುವನೂ ಆದ ಭಗವಂತ ‘ಕ್ರತುಃ’.
“ಯಜ್ಞ” -ಯಜ್ಞ ಅಂದರೆ ಎಲ್ಲವನ್ನೂ ತಿಳಿದವನು. ಜ್ಞಾನರೂಪಿಯಾಗಿ ಎಲ್ಲೆಡೆ ಇರುವ ಭಗವಂತ, ಎಲ್ಲಾ ಕ್ರಿಯೆಗಳಿಂದ ಎಲ್ಲರೂ ಆರಾಧಿಸಬೇಕಾದ ಯಜ್ಞದ ಅಂತರ್ಯಾಮಿ.
ಸ್ವಧಾಃ” ಎಂದರೆ ತನ್ನನ್ನು ತಾನು ಆದರಿಸಿ ನಿಂತ ಸರ್ವ ನಿಯಾಮಕ. 
ಭಗವಂತ   ‘ಔಧಃ’.  ಎಂದರೆ ಸಂಸಾರ ತಾಪದಲ್ಲಿ ಬಿದ್ದು ಒದ್ದಾಡುವವ(ಔಷರು)ರಿಗೆ ಆಸರೆ-ಮೋಕ್ಷ ಪ್ರದ.
“ಮಂತ್ರಃ” –ಜ್ಞಾನ ಪೂರ್ವಕವಾಗಿ ಅನುಸಂಧಾನ ಮಾಡುವವರನ್ನು ರಕ್ಷಣೆ ಮಾಡುವ ಭಗವಂತ ‘ಮಂತ್ರಃ’.  ಮಂತ್ರ ನಮ್ಮನ್ನು ರಕ್ಷಣೆ ಮಾಡುವುದು ನಾವು ತಿಳಿದು ಪಠಿಸಿದಾಗ ಮಾತ್ರ.[ಇಲ್ಲದಿದ್ದರೆ ಕಿಂಚಿತ್ ಫಲ ಮಾತ್ರ. ಮಹಾ ಫಲದಿಂದ ವಂಚಿತರಾಗುತ್ತೇವೆ].
ಭಗವಂತ ಎಲ್ಲಕ್ಕಿಂತ ದೊಡ್ಡ ವಸ್ತು ಆದ್ದರಿಂದ ಆತ “ಆಜ್ಯಃ”.  
ಚಲಿಸದೇ ಇರುವ ವಸ್ತುವಿಗೆ ಚಲನೆ ಕೊಡುವ ಭಗವಂತ “ಅಗ್ನಿಃ”.
ಎಲ್ಲ ಭಕ್ತರಿಂದ ಆಹುತನಾದ್ದರಿಂದ ಭಗವಂತ  “ಹುತಃ”.                                 

No comments:

Post a Comment