Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, July 29, 2011

Bhagavad Geeta Kannada Chapter-09 shloka 13-15


ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ
ಜಂತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್      ೧೩

ಮಹಾತ್ಮಾನಃ ತು ಮಾಮ್  ಪಾರ್ಥ ದೈವೀಮ್  ಪ್ರಕೃತಿಮ್ ಆಶ್ರಿತಾಃ
ಜಂತಿ ಅನನ್ಯ ಮನಸಃ  ಜ್ಞಾತ್ವಾ ಭೂತದಿಮ್ ಅವ್ಯಯಮ್ –ಓ ಪಾರ್ಥ, ಸಾತ್ವಿಕ ಸ್ವಭಾವದ ಹಿರಿಯ ಮಂದಿ, ಅಳಿವ ವಿಶ್ವಕ್ಕೆಲ್ಲ ಅಳಿವಿರದ ನಾನೆ  ಕಾರಣ ಎಂದು ತಿಳಿದು, ಒಂದೆ ಬಗೆಯಿಂದ ನನ್ನನ್ನು ಪೂಜಿಸುತ್ತಾರೆ.

ಹಿಂದಿನ ಶ್ಲೋಕದಲ್ಲಿ ಆಸುರೀ ಮತ್ತು ರಾಕ್ಷಸ ಸ್ವಭಾವದವರನ್ನು  ವಿವರಿಸಿದ ಕೃಷ್ಣ ಇಲ್ಲಿ ದೈವೀ ಸ್ವಭಾವದವರನ್ನು ವಿವರಿಸುತ್ತಾನೆ. ದೈವೀ ಸ್ವಭಾವದವರು ಸದಾ ಜ್ಞಾನದ, ಬೆಳಕಿನ, ಸತ್ಯದ ದಾರಿಯಲ್ಲಿ ಸಾಗುವವರು. ಅವರು ಭಗವಂತನನ್ನು ತಿಳಿಯುವ  ಭಾಗ್ಯ ಪಡೆದವರು. ಇವರನ್ನು ಭಗವಂತ “ಮಹಾತ್ಮರು” ಎನ್ನುತ್ತಾನೆ. ಭಗವಂತನಿಗೆ ಇವರ ಮೇಲೆ ಅಪಾರ ಪ್ರೀತಿ. ಕೃಷ್ಣ ಹೇಳುತ್ತಾನೆ “ಅವರು ನನ್ನನ್ನು ಅನನ್ಯ ಮನಸ್ಸಿನಿಂದ ಭಜನೆ ಮಾಡುತ್ತಾರೆ” ಎಂದು. ನಾವು ದೇವರನ್ನು ಪ್ರೀತಿಸುವುದು ಮತ್ತು ದೇವರು ನಮ್ಮನ್ನು ಪ್ರೀತಿಸುವುದು ನಿಜವಾದ ಭಜನೆ. ದೈವೀ ಸ್ವಭಾವದವರು ಭಗವಂತನನ್ನು ಬಿಟ್ಟು ಉಳಿದುದೆಲ್ಲವೂ ನಶ್ವರ, ಶಾಶ್ವತ ಸತ್ಯ ಭಗವಂತ ಮಾತ್ರ  ಎನ್ನುವ ಸತ್ಯವನ್ನು ಅರಿತಿರುತ್ತಾರೆ. ಪ್ರಪಂಚದಲ್ಲಿ ಭಗವಂತ ಮತ್ತು ಆತನ  ಜ್ಞಾನ ಮಾತ್ರ ಅವ್ಯಯ. ಉಳಿದ (ದುಡ್ಡು, ಆಸ್ತಿ, ಚಿನ್ನ, ಅಧಿಕಾರ, ಇತ್ಯಾದಿ) ಎಲ್ಲವೂ ವ್ಯಯ. ನಶ್ವರವಲ್ಲದ ಸಂಪತ್ತು ಭಗವಂತ ಮತ್ತು ಆತನ ಜ್ಞಾನ. ಈ ರೀತಿ ಭಗವಂತನ ಚಿಂತನೆ ಮಾಡುವವರು ಮಹಾತ್ಮರು.
ಈ ಶ್ಲೋಕದಲ್ಲಿ ಬಂದಿರುವ ವಿಶೇಷಣ ‘ಪಾರ್ಥ’. “ಪ್ರಥೆಯ ಮಗನೆ” ಎಂದು ಕೃಷ್ಣ ಅರ್ಜುನನನ್ನು ಸಂಬೋಧಿಸುತ್ತಿದ್ದಾನೆ ಎನ್ನುವುದು ಮೇಲ್ನೋಟದ ಅರ್ಥ. ವ್ಯುತ್ಪತ್ತಿ ಶಾಸ್ತ್ರೀಯ ದೃಷ್ಟಿಯಿಂದ(Etymologically) ನೋಡಿದರೆ ಈ ವಿಶೇಷಣದ ಹಿಂದೆ ಅಧ್ಯಾತ್ಮಿಕವಾಗಿ ಬೇರೆಯೇ ಅರ್ಥವಿದೆ. ‘ಪ್ರಥ- ವಿಸ್ತಾರೆ’ ಧಾತು. ಯಾವುದು ಹಬ್ಬಿಕೊಂಡಿದೆಯೋ, ಯಾವುದು ಎಲ್ಲಾ ಕಡೆ ತುಂಬಿದೆಯೋ ಅದು ‘ಪ್ರಥ’. ಇದು ಭಗವಂತನ ಸರ್ವಗತತ್ವವನ್ನು ಸೂಚಿಸುತ್ತದೆ. ಭಗವಂತ ಸರ್ವಗತ ಎನ್ನುವ ಸತ್ಯವನ್ನು ಅರಿತು ಅವನನ್ನು ಎಲ್ಲ ಕಡೆ ಕಾಣುವವರು ‘ಪಾರ್ಥರು’. ಇನ್ನೊಂದು ಅರ್ಥದಲ್ಲಿ ವೇದಾರ್ಥಭೂತನಾದ ಭಗವಂತನನ್ನು, ಅವನ ಗುಣಗಳನ್ನು, ಸದಾ ಪಾನ ಮಾಡುವವರು ‘ಪಾರ್ಥರು’. ನಾವೆಲ್ಲರೂ ವೇದಾರ್ಥವನ್ನು ಪಾನ ಮಾಡುತ್ತಾ ಪಾರ್ಥರಾಗಬೇಕು. ಎಲ್ಲೆಡೆ ಹಬ್ಬಿರುವ ಸರ್ವಗತವಾದ ಶಕ್ತಿಯನ್ನು ನಮ್ಮೊಳಗೂ ಕಾಣಬೇಕು ಎನ್ನುವುದು ಈ ಸಂಬೋಧನೆಯ ಹಿಂದಿರುವ  ಸಂದೇಶ.
ದೈವೀ ಸ್ವಭಾವದವರು ಭಗವಂತನನ್ನು ಯಾವಯಾವ ಬಗೆಯಲ್ಲಿ  ಉಪಾಸನೆ ಮಾಡುತ್ತಾರೆ  ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.               

ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ   
ಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ         ೧೪

ಸತತಮ್  ಕೀರ್ತಯಂತ ಮಾಮ್  ಯತಂತಃ ಚ  ದೃಢ ವ್ರತಾಃ       
ಮಸ್ಯಂತ ಚ  ಮಾಮ್  ಭಕ್ತ್ಯಾ ನಿತ್ಯ ಯುಕ್ತಾಃ  ಉಪಾಸತೇ –ಅನುದಿನವು ನನ್ನಲ್ಲಿ ಬಗೆಯಿಟ್ಟು ನನ್ನನ್ನೆ ಸೇವಿಸುತ್ತಾರೆ. ನಿರಂತರ ನನ್ನನ್ನು ಕೊಂಡಾಡುತ್ತಾ ನೇಮಗಳನ್ನುನೆಮ್ಮಿಕೊಂಡು ಹೆಣಗುತ್ತಾ ನನಗಾಗಿ ತಲೆಬಾಗುತ್ತ.

“ದೈವೀ ಸ್ವಭಾವದವರು ನಿರಂತರ  ನನ್ನನ್ನು ಕೀರ್ತನ ಮಾಡುತ್ತಾರೆ” ಎನ್ನುತ್ತಾನೆ ಕೃಷ್ಣ.  ಅವರ ಪ್ರತಿಯೊಂದು ಚಟುವಟಿಕೆಯಲ್ಲೂ ಭಗವದ್ ಪ್ರಜ್ಞೆ ಗಾಢವಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ  ತತವಾದ್ಯವನ್ನು ಹಿಡಿದು, ತಂತಿಯನ್ನು ಮೀಟುತ್ತಾ  ಭಗವಂತನ ಗುಣಗಾನ ಮಾಡುತ್ತಾ, ಹಾಡುತ್ತಾ(ನಾರದ ಮಹರ್ಷಿಗಳಂತೆ) ಸದಾ ಸಂತೋಷವಾಗಿರುವವರು ದೈವೀ ಸ್ವಭಾವದವರು.  ಇವರು ನಿರಂತರ, ತಮ್ಮ ಗುರಿ ತಲುಪುವತನಕವೂ ದೃಡ ಧೀಕ್ಷೆಯಿಂದ, ಅನನ್ಯ ಪ್ರೀತಿಯಿಂದ ಗೌರವಿಸುತ್ತಾ ಉಪಾಸನೆ ಮಾಡುತ್ತಾರೆ. ಇವರಲ್ಲಿ ಇನ್ನೊಂದು ವಿಧದ ಭಕ್ತರನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ    
ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತೋಮುಖಮ್        ೧೫

ಜ್ಞಾನಯಜ್ಞೇನ ಚ ಅಪಿ ಅನ್ಯೇ ಯಜಂತಃ  ಮಾಮ್  ಉಪಾಸತೇ      
ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತಃ ಮುಖಮ್-ಕೆಲವರು ಅರಿವಿನ ಮಾನಸ ಯಜ್ಞದಿಂದ ಎಲ್ಲೆಡೆ ತುಂಬಿರುವ ನನ್ನನ್ನು ಪೂಜಿಸುತ್ತ ಸೇವಿಸುತ್ತಾರೆ- ಎಲ್ಲೆಡೆಯಿರುವ ಭಗವಂತನೊಬ್ಬನೆ ಎಂದು[ಏಕಮೂರ್ತಿಯೆಂದು], ಎಲ್ಲಕ್ಕಿಂತ ಬೇರೆಯೆಂದು[ಚತುರ್ಮೂರ್ತಿಯೆಂದು], ಬಗೆಬಗೆಯ ಬಣ್ಣದವನೆಂದು [ಅನೇಕಮೂರ್ತಿ ಯೆಂದು], ಹೀಗೆ ಹಲವಾರು ಬಗೆಯಿಂದ.

ಇನ್ನು ಕೆಲವರು ಭಗವಂತನ ಅರಿವಿನ ಪ್ರಪಂಚದಲ್ಲಿ ಮುಳುಗಿಬಿಟ್ಟಿರುತ್ತಾರೆ. ಧ್ಯಾನದಲ್ಲಿ ಅವರಿಗೆ ಹೊರಗಿನ ಪ್ರಪಂಚದ ಅರಿವೇ ಇರುವುದಿಲ್ಲ. ಧ್ಯಾನದಲ್ಲಿ ಭಗವಂತನನ್ನು ಅನೇಕ ಆಯಾಮದಲ್ಲಿ ಕಾಣುವುದೇ ಅವರ ಉಪಾಸನೆ. ಇವರ ಉಪಾಸನೆ ಧ್ಯಾನ ಪೂರ್ವಕವಾದ ಯಜ್ಞ. ಬಾಹ್ಯವಾಗಿ ಇವರನ್ನು ಮಹಾತ್ಮರು ಎಂದು ಗುರುತಿಸುವುದು ಬಹಳ ಕಷ್ಟ.   ಕೃಷ್ಣ ಹೇಳುತ್ತಾನೆ “ಇಂತವರು ನನ್ನನ್ನು ಒಂದಾಗಿ,  ಬೇರೆಯಾಗಿ, ಬಹುವಾಗಿ ಕಾಣುತ್ತಾರೆ” ಎಂದು. ಇಲ್ಲಿ ಏಕತ್ವೇನ ಅಂದರೆ ಭಗವಂತ ಒಬ್ಬನೆ ಎಂದು ಉಪಾಸನೆ ಮಾಡುವುದು. ಒಂದೊಂದು ದೇಶಕ್ಕೆ, ಒಂದೊಂದು ಜಾತಿಗೆ, ಒಂದೊಂದು ಮತಕ್ಕೆ ಒಬ್ಬ ದೇವರಲ್ಲ. ಎಲ್ಲರಿಗೂ ದೇವರು ಒಬ್ಬನೇ ಎಂದು ಉಪಾಸನೆ ಮಾಡುವುದು ಏಕತ್ವೇನ. ಪೃಥಕ್ತ್ವೇನ ಎಂದರೆ ಎಲ್ಲರಿಂದ ವಿಲಕ್ಷಣನಾದ ಭಗವಂತನನ್ನು ಅನೇಕ ಬಗೆಯಿಂದ ಕಾಣುವುದು. ಇವರು ಭಗವಂತನನ್ನು ಧ್ಯಾನದಲ್ಲಿ ಅನೇಕ ವರ್ಣದಿಂದ ಕಾಣುತ್ತಾರೆ. ಹೀಗೆ ವಿಶ್ವತೋಮುಖ ಭಗವಂತನನ್ನು ಏಕ ಎಂತಲೂ, ಚತುರ್ಮೂರ್ತಿ ಎಂತಲೂ, ಅನೇಕ ಮೂರ್ತಿ ಎಂತಲೂ, ಅನೇಕ ವರ್ಣದಿಂದ ಉಪಾಸನೆ ಮಾಡುತ್ತಾರೆ. 

No comments:

Post a Comment