Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Download This Blog in PDF Format

Bhagavad Gita Kannada PDF Download (This Blog in PDF Format):

Note: ಮೊದಲ ಬಾರಿ ಬರೆಯುವಾಗ ಅನೇಕ ತಪ್ಪುಗಳಾಗಿದೆ. ಆ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. Latest reviewed Version will be made available soon. Refer PDF version (e-book)
ಚಿತ್ರಕೃಪೆ : ಅಂತರ್ಜಾಲ
Thursday, July 28, 2011

Bhagavad geeta kannada Chapter-09 Shloka 10-12


ಮಯಾSಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್
ಹೇತುನಾSನೇನ ಕೌಂತೇಯ ಜಗದ್ ವಿಪರಿವರ್ತತೇ ೧೦

ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸ ಚರಚರಮ್
ಹೇತುನಾನೇನ ಕೌಂತೇಯ ಜಗತ್  ವಿಪರಿವರ್ತತೇ-ಸಾಕ್ಷಿಯಾಗಿ ನಿಂತ ನನ್ನಿಂದಲೆ ಜೀವ-ಜಡಗಳನ್ನು ಬೆಸೆದು ಪ್ರಕೃತಿ ಹಡೆಯುತ್ತದೆ. ಕೌಂತೇಯ, ಈ ಕಾರಣದಿಂದಲೆ ಜಗತ್ತು ಬದಲುತ್ತ  ಸುತ್ತುತ್ತಿದೆ.

ಜಗತ್ತನ್ನು ಸೃಷ್ಟಿ ಮಾಡಲು ಬೇಕಾದ ಮೂಲದ್ರವ್ಯ ಜಡಪ್ರಕೃತಿ ಮತ್ತು ಅದಕ್ಕೆ ಆಕಾರ ಕೊಡುವುದು ಜಡಪ್ರಕೃತಿಯ ಮಾನಿನಿಯಾದ ಚೇತನ ಪ್ರಕೃತಿ ಲಕ್ಷ್ಮಿ. ಭಗವಂತ ಇಡೀ ಸೃಷ್ಟಿಯ ಅಧ್ಯಕ್ಷನಾಗಿ ನಿಂತು, ಕ್ರಿಯೆಯ ಹಿಂದಿನ ಶಕ್ತಿಯಾಗಿ, ಜಡ ಮತ್ತು ಚೇತನಪ್ರಕೃತಿಯ ಮೂಲಕ ಈ ಸೃಷ್ಟಿ ನಿರ್ಮಾಣ ಮಾಡುತ್ತಾನೆ. ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಕೂಡಾ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ ತುಂಬಿದ್ದಾನೆ.   

ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್      ೧೧

ಅವಜಾನಂತಿ ಮಾಮ್   ಮೂಢಾಃ ಮಾನುಷೀಂ ತನುಮ್ ಆಶ್ರಿತಮ್
ಪರಮ್  ಭಾವಮ್ ಅಜಾನಂತಃ  ಮಮ ಭೂತಮಹೇಶ್ವರಮ್-ಮನುಷ್ಯರಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದೆ ಬಗೆದು ಕಡೆಗಾಣಿಸುತ್ತಾರೆ-ಎಂದೆಂದು ಎಲ್ಲೆಡೆಯು ಇರುವ ಹಿರಿದಕ್ಕು ಹಿರಿದಾದ ನನ್ನ ಹಿರಿಮೆಯನ್ನರಿಯದ ತಿಳಿಗೇಡಿಗಳು.  

ಈ ಶ್ಲೋಕದಲ್ಲಿ ಭಗವಂತ ತನ್ನ ಸ್ವರೂಪದ ಬಗ್ಗೆ ಇನ್ನ್ಯಾರೂ ಹೇಳಲಾಗದ ಒಂದು ಸಂಗತಿಯನ್ನು ಹೇಳುತ್ತಾನೆ. ಭಗವಂತನಿಗೆ ಪಾಂಚಭೌತಿಕ ಶರೀರವಿಲ್ಲ. ಅವತಾರ ರೂಪಿ ಭಗವಂತ ನಮಗೆ ನಮ್ಮಂತೇ ಶರೀರ ಉಳ್ಳವನಂತೆ ಕಾಣಿಸಿಕೊಳ್ಳುತ್ತಾನೆ ಅಷ್ಟೇ. ಅಲ್ಲಿ ಕಾಣುವ ಶರೀರವನ್ನು ಕಂಡು: ಭಗವಂತನ ಶರೀರ ನಮ್ಮಂತೆ ನಶ್ವರವಾದ, ಒಂದು ದಿನ ಬಿದ್ದು ಹೋಗುವ ಶರೀರ ಎಂದು ತಿಳಿಯುವವರು- ಸ್ವಭಾವತಃ ತಾಮಸರು ಅಥವಾ ತಾಮಸದ ಪ್ರಭಾವಕ್ಕೆ ಒಳಗಾದ ಭಗವಂತನ ಹಿರಿಮೆಯನ್ನರಿಯದ ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣ.

ಇಲ್ಲಿ ಭೂತಮಹೇಶ್ವರ  ಎನ್ನುವ ವಿಶೇಷಣ ಬಳಕೆಯಾಗಿದೆ. ಇದು ಭಗವಂತನ ಹಿರಿಮೆಯನ್ನು ಹೇಳುವ ವಿಶೇಷ ಪದ.  ಸಮಷ್ಟಿಯಾಗಿ ಈ ಪದವನ್ನು ನೋಡಿದರೆ: ಭೂತಗಳು ಎಂದರೆ ಸಮಸ್ತ ಜೀವಗಳು. ಅವರಿಗೆ ಈಶರು ಬ್ರಹ್ಮಾದಿ ದೇವತೆಗಳು(ಭೂತೇಶರು). ಈ ದೇವತೆಗಳಿಗೆ ಮಹತ್ತಾದವಳು ಶ್ರೀಲಕ್ಷ್ಮಿ(ಭೂತಮಹೇಶಳು). ಇಂತಹ ಲಕ್ಷ್ಮಿಗೆ ವರನಾಗಿರುವ ಭಗವಂತ “ಭೂತಮಹೇಶ್ವರ”. ಇದೇ ಪದವನ್ನು ಬಿಡಿಸಿ ನೋಡಿದರೆ ಭೂತಮಹಾನ್+ಈಶ್ವರ : ಅಂದರೆ  ಬ್ರಹ್ಮಾದಿ ಸಮಸ್ತ ಭೂತಗಳಿಗೂ ಮಹಾನ್ ಆಗಿ ಎಲ್ಲರನ್ನು ನಿಯಂತ್ರಿಸುವ , ಸರ್ವೋನ್ನತನಾದ- ಸರ್ವಸಮರ್ಥ ಭಗವಂತ. ಇನ್ನೊಂದು ರೀತಿಯಲ್ಲಿ ಭೂತ+ಮಹತ್+ಈಶ್ವರ. ಇಲ್ಲಿ ಭೂತ ಎಂದರೆ: ಉನ್ನತಿಯ ತುತ್ತ ತುದಿಯಲ್ಲಿರುವ, ಹುಟ್ಟು ಸಾವಿಲ್ಲದ ಅನಾಧಿನಿತ್ಯ. ಮಹತ್ ಎಂದರೆ: ಕಾಲತಃ , ದೇಶತಃ, ಗುಣತಃ ಪರಿಪೂರ್ಣವಾಗಿರುವ ತತ್ತ್ವ. ಈಶ್ವರ ಎಂದರೆ : ಸರ್ವ ಸಮರ್ಥ ಭಗವಂತ.  ಹೀಗೆ ಈ ವಿಶೇಷಣ ಅನೇಕ ರೂಪದಲ್ಲಿ ಭಗವಂತನ ಗುಣವನ್ನು ಸಾರುತ್ತದೆ.                
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ
ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ     ೧೨

ಮೋಘಶಾ ಮೋಘಕರ್ಮಾಣಃ ಮೋಘಜ್ಞಾನಾಃ  ವಿಚೇತಸಃ
ರಾಕ್ಷಸೀಮ್ ಆಸುರೀಮ್  ಚ ಏವ ಪ್ರಕೃತಿಮ್  ಮೋಹಿನೀಮ್  ಶ್ರಿತಾಃ –ಇವರ ಆಸೆ ಈಡೇರದು. ಕರ್ಮಗಳು ಫಲಿಸವು. ತಿಳಿವು ಮಾಯವಾಗುವುದು.ಅವರು ಬಗೆಗೇಡಿಗಳು; ಮರುಳುಗೊಳಿಸುವ, ರಕ್ಕಸರ –ಅಸುರರ ತಾಮಸ ಸ್ವಭಾವಕ್ಕೆ ಒಳಗಾದವರು.

‘ಭಗವಂತ ಜ್ಞಾನಾನಂದ ಸ್ವರೂಪ, ಆತನಿಗೆ ಪಾಂಚಭೌತಿಕ ಶರೀರ ಇಲ್ಲ’ ಎನ್ನುವ ವಿಚಾರವನ್ನು ಕೃಷ್ಣ ಇಲ್ಲಿ ಒತ್ತು ಕೊಟ್ಟು ಹೇಳುತ್ತಾನೆ. “ದೇವರಿಗೆ ನಮ್ಮಂತೆ ಪಾಂಚಭೌತಿಕ ಶರೀರ ಇದೆ-ಅನ್ನುವ ಚಿಂತನೆಯೇ ಪಾತಕದ ದಾರಿ” ಎನ್ನುತ್ತಾನೆ ಕೃಷ್ಣ. ಏಕೆಂದರೆ ಹಾಗೆ ಚಿಂತನೆ ಮಾಡುವವರು ಸಾತ್ವಿಕರಾಗಿರುವುದಿಲ್ಲ. ಅವರು ಎಂದೂ ಭಗವದ್ ಭಕ್ತರಾಗಿರುವುದಿಲ್ಲ. ಹೀಗೆ ಚಿಂತನೆ ಮಾಡುವವರ ಅಧ್ಯಾತ್ಮ ಸಾಧನೆಯ ಎಲ್ಲಾ ಆಸೆಗಳೂ ಕಮರಿ ಹೋಗುತ್ತವೆ. ಭಗವಂತನನ್ನು ನಶ್ವರ ಎಂದು ಹೇಳುವವರನ್ನು ದೇವತೆಗಳು ಎಂದೂ ಪ್ರೀತಿಸುವುದಿಲ್ಲ. ಅವರು ಮಾಡುವ ಯಜ್ಞ-ಯಾಗಾದಿಗಳು ವ್ಯರ್ಥ. ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಪಾರತ್ರಿಕವಾಗಿ ಅವರ ಯಾವ ಆಸೆಯೂ ನೆರವೇರುವುದಿಲ್ಲ.
ಸಾತ್ವಿಕ ಚಿಂತನವೇ ಇಲ್ಲದವರು ಅಥವಾ ತಾಮಸ ಪ್ರಭಾವಕ್ಕೊಳಗಾದವರು ಭಗವಂತನನ್ನು ಈ ರೀತಿ ದೋಷ ಚಿಂತನೆ ಮಾಡುತ್ತಾರೆ. ಅವರಿಗೆ ಚಿಂತನಾ ಶಕ್ತಿ ಇರುವುದಿಲ್ಲ. ಇವರು ಯಾವ ಶಾಸ್ತ್ರ ಓದಿಯೂ ಉಪಯೋಗವಿಲ್ಲ. ಅವರ ಮನಸ್ಸು ಅಧ್ಯಾತ್ಮವನ್ನು ಗ್ರಹಿಸುವುದಿಲ್ಲ. “ಇಂತವರು ರಾಕ್ಷಸರು ಅಥವಾ ಅಸುರರಾಗಿರುತ್ತಾರೆ” ಎನ್ನುತ್ತಾನೆ ಕೃಷ್ಣ. ರಾಕ್ಷಸರು ಎಂದರೆ ಸ್ವಭಾವತಃ ತಾಮಸರು; ಅಸುರರು ಎಂದರೆ ರಾಜಸರು-ಇಂದ್ರಿಯ ಭೋಗದಲ್ಲೇ ಪುರುಷಾರ್ಥ ಕಾಣುವವರು. ಇವರ ಜೊತೆಗೆ ಪ್ರಭಾವದಿಂದ ಚಿಂತನಾ ಶೀಲತೆಯನ್ನು ಕಳೆದುಕೊಂಡವರು ಕೂಡಾ ಈ ರೀತಿ ಯೋಚಿಸುತ್ತಾರೆ. ಇವರಿಗೆ ಎಂದೂ ಸಹಜ ಚಿಂತನೆ ಬರುವುದೇ ಇಲ್ಲ. ಇವರು ಯಾವಾಗಲೂ ಸತ್ಯಕ್ಕೆ ವಿರುದ್ಧವಾಗಿ ಚಿಂತಿಸುತ್ತಿರುತ್ತಾರೆ.       

No comments:

Post a Comment